Quantcast

ಯಾಕ ‘ಗದಗ- ಬೆಂಗಳೂರು ಬಸ್’ ಕ್ಯಾನ್ಸಲ್ ಆಗ್ಯಾದೇನು..??

ಜಿ ಎನ್ ಮೋಹನ್ 

ನಾನು ಅವರನ್ನು ಬಹುವಚನದಲ್ಲಿ ಕರೆಯುತ್ತಿದ್ದೆ ಎನ್ನುವುದು ಬಿಟ್ಟರೆ ನನ್ನ ಮತ್ತು ಅವರ ಮಧ್ಯೆ ಇನ್ನಾವ ಗೋಡೆಯೂ ಇರಲಿಲ್ಲ.

ಹುಡುಗರನ್ನು ಇನ್ನಷ್ಟು ಹುಡುಗರನ್ನಾಗಿ, ವಯಸ್ಸಾದವರಿಗೂ ಇನ್ನಷ್ಟು ಹರಯ ನೀಡುವ ‘ಯಯಾತಿ’ತನ ಅವರಲ್ಲಿತ್ತು. ಅವರ ಸುತ್ತ ಸದಾ ಯುವಕರ ದಂಡು. ಅದರ ಜೊತೆಗೆ ಒಂದು ಹತ್ತು ಕೇಜಿಯಾದರೂ ಕುಲು ಕುಲು ನಗೆ.

ಅಲ್ಲಿದ್ದವರ ವಯಸ್ಸೆಷ್ಟು ಎಂದು ಕೇಳುವಂತಿಲ್ಲ. ಯಾಕೆಂದರೆ ಅಲ್ಲಿದ್ದವರಿಗೆಲ್ಲಾ ವಯಸ್ಸೆಷ್ಟೇ ಇದ್ದರೂ ತಮ್ಮ ಮಾಂತ್ರಿಕ ದಂಡದಿಂದ ಅವರದ್ದು ಯುವ ಮನಸ್ಸಾಗಿ ಮಾಡಿಬಿಡುವ, ಅವರಲ್ಲಿ ತುಂಟತನ ಹುಟ್ಟು ಹಾಕಿಬಿಡುವ ತಾಖತ್ತು ಅವರಲ್ಲಿ ಇತ್ತು- ಅವರು ವಾಜಪೇಯಿ, ಗೋಪಾಲ ವಾಜಪೇಯಿ.

14333764_10207987187460885_5853407641966829659_n

ಹಾಗಾಗಿ ಅವರು ತಾವೊಬ್ಬರೇ ಈ ಲೋಕದಿಂದ ಕಾಣೆಯಾಗಲಿಲ್ಲ. ನಮ್ಮ ಹದಿಹರೆಯವನ್ನು, ನಮ್ಮ ತುಂಟ ಮನಸ್ಸನ್ನೂ ಹೊತ್ತೊಯ್ದುಬಿಟ್ಟರು..

ಗೋಪಾಲ ವಾಜಪೇಯಿ ಇಲ್ಲದ ನಾವು ಈಗ ಅಬಾಲ ವೃದ್ಧರು.

ಯಾವುದೇ ಒಂದು ಕಾರ್ಯಕ್ರಮ, ಯಾವುದೇ ಒಂದು ಕೂಟ, ಯಾವುದೇ ಒಂದು ನಾಲ್ಕು ಜನ ಸೇರುವಲ್ಲಿ ವಾಜಪೇಯಿ ಬಂದರು ಎಂದರೆ ಅವರ ವಯಸ್ಸು ಮಾನ್ಯ ಮಾಡದೆ ಚೇಷ್ಟೆ ಮಾಡುವುದನ್ನು ಎಲ್ಲರೂ ಹಕ್ಕಾಗಿಸಿಕೊಂಡುಬಿಟ್ಟಿದ್ದೆವು.

ಅವರೋ ‘ಗಡ್ಡ ಎಳೆದವನಿಗೆ ಮಿಠಾಯಿ’ ಎನ್ನುವ ಸೂತ್ರವನ್ನು ಅಳವಡಿಸಿಕೊಂಡುಬಿಟ್ಟಿದ್ದರು. ನಾವೆಲ್ಲಾ ಅವರನ್ನು ಗೇಲಿ ಮಾಡಿ, ಅವರ ಹೊಟ್ಟೆ ತಟ್ಟಿ, ತೋಳು  ಹಿಂಡಿ, ಹೇಳಬಾರದ ಹಲಾಲುಕೋರ ಜೋಕನ್ನೆಲ್ಲಾ ಹೇಳಿದರೂ ಅವರು ಮಾತ್ರ ತಮ್ಮ ಆ ಒಂದು ಬ್ಯೂಟಿಫುಲ್ ನಗು ಎಸೆದು ಒಂದು ಮಿಠಾಯಿ ಕೊಟ್ಟುಬಿಡುತ್ತಿದ್ದರು.

14344776_10207987185380833_46420012029544866_nಗೋಪಾಲ ವಾಜಪೇಯಿ ಅವರನ್ನ ಕಾಕಾ, ದೊಡ್ಡಪ್ಪ, ಮಾಮ, ಅಜ್ಜ.. ಅಂತ ಕರೆಯುವ ಹಕ್ಕು, ಅದರೊಂದಿಗೆ ಇನ್ನೂ ನೂರೆಂಟು ಹೆಸರು ಹಚ್ಚುವ ಹಕ್ಕು ಎಲ್ಲರಿಗೂ ಇತ್ತು.

ಅವರನ್ನು ಥೇಟ್ ದೂರದ ಊರಿನಿಂದ ಯಾವಾಗಲೂ ಬೆಂಡು ಬತ್ತಾಸು ಮಿಠಾಯಿ ತರುವ ಮಾಮ ಯಾವಾಗ ಬರುತ್ತಾರೋ ಎಂದು ಚಿಕ್ಕ ಮಕ್ಕಳು ಕಣ್ಣಲ್ಲಿ ಕನಸು, ಮನದಲ್ಲಿ ಆಸೆ ಹೊತ್ತು ಕಾಯುತ್ತಾರಲ್ಲಾ.. ಹಾಗೆ.. ಹಾಗೇ ನಾವು ಕಾಯುತ್ತಿದ್ದೆವು.

ಅವರೋ ತಮ್ಮ ವಯಸ್ಸು ಎಷ್ಟು ಎನ್ನುವ ಲೆಕ್ಕವನ್ನು ತಮ್ಮ ಮನೆಯ ಕೋಣೆಯಲ್ಲೇ ಎಸೆದು ಬರುತ್ತಿದ್ದರು. ಸಿಕ್ಕವರ ಕೆನ್ನೆ ಹಿಂಡಿ, ಇನ್ನಷ್ಟು ಜನರ ಹೊಟ್ಟೆ ಮುಟ್ಟಿ, ಮತ್ತಷ್ಟು ಜನರಿಗೆ ಅಡ್ಡ ಹೆಸರು ಕಟ್ಟಿ ಕಿಸಿಕ್ ಎಂದು ನಗುತ್ತಿದ್ದರು. ಹೆಣ್ಣು ಮಕ್ಕಳು ಯಾರೇ ಆಗಿರಲಿ ‘ಅಕ್ಕ’ ಎನ್ನುವುದನ್ನು ಸೇರಿಸದೆ ಮಾತಾಡಿದ್ದು ಕಂಡೇ ಇಲ್ಲ

‘ಮಾಯಾದ ಮನದ ಭಾರ.. ತಗದಾಂಗ ಎಲ್ಲ ದ್ವಾರ.. ಏನಾ ಏನಿದೋ ಎಂತಾ ಬೆರಗಾ.. ‘ ಎನ್ನುವುದು ನಿಜಕ್ಕೂ ಅನ್ವಯಿಸುತ್ತಿದ್ದುದು ಅವರಿಗೆ.

ಅವರಿಗೆ ಎಲ್ಲವೂ ಬೆರಗು.. ಪುಟ್ಟ ಮಕ್ಕಳ ಕಣ್ಣಿತ್ತು ಅವರಿಗೆ. ಒಂದು ಬೆರಗಿನಿಂದಲೇ ಎಲ್ಲವನ್ನೂ ನೋಡುತ್ತಿದ್ದರು. ಹಾಗಾಗಿ ಜವರಾಯನಿಗೂ ಕನ್ಫ್ಯೂಷನ್ನು. ಕಂಬದ ಮೇಲಿನ ಗೊಂಬೆಯಂತೆ ಇವರ ಜೀವ ಸಾಕಷ್ಟು ವರ್ಷಗಳಿಂದ ಕುಳಿತಿತ್ತು. ಅವರು ತಮ್ಮ ಸುತ್ತ ನಾಗಮಂಡಲ ಕಟ್ಟಿಕೊಂಡೇ ಇನ್ನಷ್ಟು ವರ್ಷಗಳನ್ನು ಗೆದ್ದುಕೊಂಡು ಬಿಟ್ಟರು.

‘ಜವರಾಯ ಬಂದಾಗ ಬರಿಗೈಲಿ ಬರಲಿಲ್ಲ..’ ಎಂದ ತಕ್ಷಣ ನಾವೆಲ್ಲಾ ಆತ ಕುಡುಗೋಲು ಕತ್ತಿ ಹಿಡಿದು ಬಂದು ಬಿಟ್ಟ, ಒಳ್ಳೊಳ್ಳೆ ಮರವ ಕಡಿ ಬಂದ.. ಎಂದುಕೊಂಡು ಬಿಡುತ್ತೇವೆ. ಇಲ್ಲ ಕಾಕಾ ವಿಚಾರದಲ್ಲಿ ಹಾಗಾಗಲಿಲ್ಲ. ಆ ಜವರಾಯನೂ ಒಂದಿಷ್ಟು ಒಳ್ಳೆಯ ನೆನಪುಗಳನ್ನೇ ಹಿಡಿ ತುಂಬಾ ತಂದ.

ಗೋಪಾಲ ವಾಜಪೇಯಿ ಹಾಗೂ ನಾನು ಸಾಕಷ್ಟು ವರ್ಷಗಳನ್ನು ಗೆಳೆತನದ ಬೆಲ್ಲ ಹಂಚಿಕೊಂಡು ಕಳೆದೆವು. ಎಷ್ಟೋ ಜನರಿಗೆ ಗೊತ್ತಿಲ್ಲದ ಅವರ ಮುಖಗಳು ನನಗೆ ಗೊತ್ತಿದ್ದವು. ಅವರ ತಲ್ಲಣ, ತುಮುಲಗಳೂ..

ಅವರ ನಗುವ ಮುಖ, ಚೇಷ್ಠಿ ಮಾಡುವ ದನಿ ಖಾಸಗಿಯಾಗಿ ನನ್ನ ಬಳಿ ಎಷ್ಟೋ ಬಾರಿ ಬಿಕ್ಕುತ್ತಿತ್ತು, ಕಣ್ಣೀರಾಗುತ್ತಿತ್ತು..

ಗೋಪಾಲ ವಾಜಪೇಯಿ ಹಾಗೂ ‘ಅವಧಿ’ ಜೊತೆಗಿನ ಬಾಂಧವ್ಯವಂತೂ ಎಲ್ಲರಿಗೂ  ಗೊತ್ತು.

ಹೈದರಾಬಾದ್ ಬಿಟ್ಟು ಬೆಂಗಳೂರು ಸೇರಿದಾಗ ವಾಜಪೇಯಿ ತಬ್ಬಲಿಯಂತಾಗಿ ಹೋಗಿದ್ದರು. ‘ಅವಧಿ’ಗೆ ಬರೆಯಲೇಬೇಕು ಎಂದಾಗ ಕಂಪ್ಯೂಟರ್ ಕಷ್ಟ ಅಂದರು. ಗದರಿಕೊಂಡೆ. ನಿಮಗೆ ಸೋಮಾರಿತನ ಅಂತ. ಅಷ್ಟೇ ಅವರು ಮೌಸ್ ನ್ನು ಎಷ್ಟು ಪಳಗಿಸಿಕೊಂಡುಬಿಟ್ಟರೆಂದರೆ ‘ಅವಧಿ’ ಅವರ ಬರಹಗಳ ಸರಮಾಲೆಯೇ ಕಂಡಿತು.

gopala-vajapeyigopal-kakaಒಂಟಿತನ ಅನುಭವಿಸುತ್ತಿದ್ದ ಅವರಿಗೆ ಈಗ ಅಂತರ್ಜಾಲನೆಂಬ ಕೃಷ್ಣನ ಬಾಯಲ್ಲಿ ಜಗತ್ ದರ್ಶನವಾಗಿತ್ತು- ಅವರೇ ಬರೆದುಕೊಂಡರು ‘ಅವಧಿ ನನಗೆ ದೊಡ್ಡ ಬಳಗವನ್ನು ಕೊಟ್ಟುಬಿಟ್ಟಿತು. ನಾನು ಮತ್ತೆ ಹುಟ್ಟಿ ಬಂದೆ’ ಅಂತ. ಆ ಮಾತು ‘ಅವಧಿ’ಗೂ ಅಷ್ಟೇ ನಿಜ. ಅವರು ‘ಅವಧಿ’ಗೆ ಒಂದು ದೊಡ್ಡ ಬಳಗವನ್ನೇ ಕೊಟ್ಟುಬಿಟ್ಟರು

ಏನು ಬರೆದರೂ ‘ಅವಧಿ’ಯಲ್ಲಿ ಮೊದಲು ಬರಬೇಕು ಎನ್ನುವ ಅವರ ಕಾಳಜಿ ನನಗೆ ‘ಏನಾ ಏನಿದೋ..’ ಎನ್ನುವ ಬೆರಗನ್ನೇ ಹುಟ್ಟಿಹಾಕುತ್ತಿತ್ತು.

ಮತ್ತೆ ಅಂತಹದ್ದೇ ಸರಣಿಗೆ ಸಜ್ಜಾಗಿದ್ದೆವು. ವಾಜಪೇಯಿ ಎಂದರೆ ವಾಜಪೇಯಿಯೇ.. ಅವರ ಶಿಸ್ತು ಎಷ್ಟು ಮೈ ಜುಮ್ ಎನಿಸುತ್ತಿತ್ತು ಎಂದರೆ ಅವರು ಸಾಕಷ್ಟು ಮುಂಚೆಯೇ ತಮ್ಮ ಹತ್ತಾರು ಲೇಖನ, ಅದಕ್ಕೆ ಹೊಂದುವ ಚಿತ್ರ ಎಲ್ಲಾ ಕೊಟ್ಟು ‘ಹೆಂಗೆ?’ ಎನ್ನುವಂತೆ ನಮ್ಮ ಕಡೆ ಅದೇ ನಗೆ ಚೆಲ್ಲುತ್ತಿದ್ದರು

ಮೊನ್ನೆ ಎಂದರೆ ಮೊನ್ನೆ ಹೊಸ ಅಂಕಣ ಆರಂಭಿಸಿದೆವು. ಅವರ ಧಾರವಾಡ ಅವರ ಅಕ್ಷರದಲ್ಲಿ ಮೂಡಿದ ಸೊಬಗೇ ಬೇರೆ. ಆದರೆ ಧಾರವಾಡದಿಂದ ‘ಅಲ್ಲೇ ನನ್ನೂರು ಲಕ್ಷ್ಮೇಶ್ವರಕ್ಕೆ ಹೋಗಿ ಬರುತ್ತೇನೆ ‘ಎನ್ನುವಂತೆ ಎದ್ದು ನಡೆದೇಬಿಟ್ಟರು

ನಮಗೂ ಅಷ್ಟೇ ಅವರೇನು ‘ಜವರಾಯ ಎಕ್ಸ್ ಪ್ರೆಸ್’ ಏರಿದ್ದಾರೆ ಅಂತೇನೂ ಅನಿಸುತ್ತಿಲ್ಲ ಕಾಕಾ ಗದಗಿಗೆ ಹೋಗ್ಯಾರ, ಕಟಕ್ ರೊಟ್ಟಿ, ಹುಚ್ಚೆಳ್ಳು ಚಟ್ನಿ, ಶೇಂಗಾ ಹಿಂಡಿ ತಿಂದು ಬರ್ತಾರಾ.. ಬರುವಾಗ ಮತ್ತ ನಾವೆಲ್ಲಾ ಕಾಯ್ತಿರ್ತೀವಿ ಅಂತ ಅಲ್ಲೇ ಜಾತ್ರೇನಾಗ ಅಡ್ಡಾಡಿ ಬೆಂಡು ಬತ್ತಾಸು ತಂದೇ ತರ್ತಾರಾ ಅಂತ ಅನಿಸುತ್ತಿದೆ.

ಖಂಡಿತಾ ಬರ್ರೀ ಸರ, ಯಾಕ  ‘ಗದಗ- ಬೆಂಗಳೂರು ಬಸ್’ ಕ್ಯಾನ್ಸಲ್ ಆಗ್ಯಾದೇನು..??

 

12 Comments

 1. Anonymous
  September 24, 2016
 2. ವಿನತೆ ಶರ್ಮ
  September 23, 2016
 3. Sandhya
  September 23, 2016
 4. mm shaik
  September 22, 2016
 5. Anonymous
  September 22, 2016
 6. Prema Achyut kulkarni
  September 22, 2016
 7. Sarojini Padasalagi
  September 22, 2016
 8. ಪ್ರೇಮಲತ ಬಿ.
  September 22, 2016
 9. ಹ ವೆಂ ಕಾಖಂಡಿಕಿ
  September 22, 2016
 10. lakshmikanth itnal
  September 22, 2016
 11. ಬಾಲಕೃಷ್ಣ
  September 22, 2016
 12. ಬೀರು ದೇವರಮನಿ
  September 22, 2016

Add Comment

Leave a Reply