Quantcast

ಗೋಪಾಲ ವಾಜಪೇಯಿ ಅಂಕಣ ಆರಂಭ..

ಹಿತದ ಹೆಬ್ಬಾಗಿಲು : ಧಾರವಾಡ…
ನಾಲ್ಕನೆಯ ವಯಸ್ಸಿಗೆ ಅಪ್ಪನನ್ನು ಕಳೆದುಕೊಂಡಿದ್ದ ನಾನು ನಮ್ಮ ಊರು ಲಕ್ಷ್ಮೇಶ್ವರದ ‘ಒನ್ನೇ ನಂಬರ್ ಸಾಲಿ’ಯಲ್ಲಿ ಆರನೆಯ ಇಯತ್ತೆಯ ತನಕ ಓದಿದೆ.
ಅವರಿವರ ಬಟ್ಟೆ ಹೊಲಿಯುವ ಕೆಲಸ ಮಾಡುತ್ತ ನನ್ನನ್ನು ಬೆಳೆಸಿದಳು ಅವ್ವ. ಮನೆಯ ಪರಿಸ್ಥಿತಿ ಹೀಗಿದ್ದ ಕಾರಣ, ನಮ್ಮ ಹಿರಿಯರೆಲ್ಲ ಒಂದೆಡೆ ಸೇರಿ, ”ಅಪ್ಪ ಇಲ್ಲದ ಈ ಹುಡಗನ್ನ ಓದಿಸಿ, ಬೆಳಸಿ, ದೊಡ್ದಾವನ್ನಾಗಿ ಮಾಡೂದು ನಮ್ಮೆಲ್ಲಾರ ಕರ್ತವ್ಯ… ಮ್ಯಾಟ್ರಿಕ್ ತನಕಾ ಓದಲಿಕ್ಕೆ ನಾವೆಲ್ಲಾ ಹ್ಯಾಂಗಾರೆ ಮಾಡಿ ಮದತ್  ಮಾಡೂಣು,” ಎಂಬ ನಿರ್ಧಾರಕ್ಕೆ ಬಂದಿದ್ದರು. ವರ್ಷಕ್ಕೆ ಒಬ್ಬರಂತೆ ನನ್ನ ‘ಹೊಣೆ’ಯನ್ನು ಹೊರಲು ಸಿದ್ಧರಾಗಿದ್ದರು ಆ ಕರುಣಾಳುಗಳು… ಹೀಗೆ ಶುರುವಾಯಿತು ನನ್ನ ‘ವಿದ್ಯಾಯಾನ.’

gopala-vajapeyiಎಷ್ಟು ಊರುಗಳು, ಎಷ್ಟು ಮನೆಗಳು…! ಎಷ್ಟು ಊರುಗಳ ಎಷ್ಟು ಬಗೆಯ ನೀರುಗಳು…! ಎಷ್ಟೆಲ್ಲ ಮಾತೆಯರ ಕೈತುತ್ತಿನ ರುಚಿಗಳು…! ಎಷ್ಟೆಲ್ಲ ಹಿರಿಯರ ‘ಕೈಹಿಡಿದು ಮುನ್ನಡೆಸುವಿಕೆ’ಗಳು…! ಎಷ್ಟೆಲ್ಲ ನೋಟಗಳು, ಎಷ್ಟೆಷ್ಟು ಆಟಗಳು…! ಎಷ್ಟೊಂದು ತರಹದ ‘ಪಾಠ’ಗಳು…! ಎಷ್ಟೊಂದು ರೀತಿಯ ‘ಅನುಭವ’ಗಳು…!
ಆದದ್ದೆಲ್ಲಾ ಒಳಿತೇ ಆಯಿತು…
ಈ ನನ್ನ ‘ವಿದ್ಯಾಯಾನ’ದ ಮೊದಲ ನಿಲ್ದಾಣವೇ ಧಾರವಾಡ…
ಧಾರವಾಡ… !

ಹೆಸರು ಕೇಳಿದ ಕೂಡಲೇ ಬೇಂದ್ರೆ, ಬೆಟಗೇರಿ, ಶಂ.ಬಾ., ಮನಸೂರ, ಕಣವಿಯವರ ಚಿತ್ರಗಳು ನಿಮ್ಮೆದುರು ಕುಣಿಯುತ್ತವೆ ಎಂಬುದು ನನಗೆ ಗೊತ್ತು. ಹಾಗೆಯೇ ಅಲ್ಲಿಯ ಲೈನ್ ಬಜಾರ್ ಪೇಡಾ ನೆನಪಾಗಿ ನಾಲಿಗೆ ನೀರೂರುತ್ತದೆ…

ಬನ್ನಿ, ನಾನೀಗ ನಿಮ್ಮನ್ನು ಸುಮಾರು ಐವತ್ತು ವರ್ಷಗಳ ಹಿಂದಿನ ಧಾರವಾಡಕ್ಕೆ ಕರೆದೊಯ್ಯುತ್ತೇನೆ. ‘ಮಲೆನಾಡಿನ ಸೆರಗು’ ಎಂದೇ ಪ್ರಸಿದ್ಧವಾದ ಧಾರವಾಡಕ್ಕೆ.

‘ವಿದ್ಯಾನಗರಿ’ ಎಂಬ ಬಿರುದು ಹೊತ್ತ ಧಾರವಾಡಕ್ಕೆ.

‘ಏಳು ಮರಡಿಗಳ ಮೇಲಿರುವ ಊರು’ ಈ ಧಾರವಾಡ. ಮರಡಿ ಅಥವಾ ಮೊರಡಿ ಎಂದರೆ ಬೆಟ್ಟಕ್ಕಿಂತ ಚಿಕ್ಕದು, ದಿಬ್ಬಕ್ಕಿಂತ ದೊಡ್ಡದು. ಅದೇ ಆಡುಮಾತಿನಲ್ಲಿ ‘ಮಡ್ಡಿ’ಯಾಗಿದೆ. ನಿಮ್ಮಲ್ಲಿ ಅನೇಕರಿಗೆ ಧಾರವಾಡದ ಮಾಳಮಡ್ಡಿ ಪ್ರದೇಶ ಗೊತ್ತು ಎಂದು ಭಾವಿಸಿದ್ದೇನೆ. ಹಿರಿಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪಟು ಬಸವರಾಜ ರಾಜಗುರುಗಳು ಇದ್ದದ್ದು… ಹಿರಿಯ ವಿಮರ್ಶಕ ಲೇಖಕ ಶಂಕರ ಮೊಕಾಶಿ ಪುಣೇಕರ್ ವಾಸಿಸಿದ್ದು… ಹಿಂದಿ ಚಿತ್ರ ರಂಗದಲ್ಲಿ ಮನೆಮಾತಾಗಿ ಮೆರೆದ ‘ಲೀನಾ ಚಂದಾವರಕರ್’ ಹುಟ್ಟಿ ಬೆಳೆದದ್ದು ಇಲ್ಲಿಯೇ, ಈ  ಮಾಳಮಡ್ಡಿಯೇ …

ಇಲ್ಲಿಯ ಸುತ್ತಮುತ್ತಲಿನ ಭೂಮಿಯಲ್ಲಿ ‘ಮಮತೆ’ ತುಂಬಿದೆ. ಅದು ಅನುಭವಕ್ಕೆ ಬರಬೇಕೆಂದರೆ ನೀವು ಮಾವಿನ ಹಣ್ಣಿನ ಸೀಜನ್ನಿನಲ್ಲಿ ಇಲ್ಲಿಗೆ ಬರಬೇಕು. ನಿಮ್ಮ ತಲೆಗೆ ತಾಗುವಷ್ಟು ಎತ್ತರದಲ್ಲೇ ಮಾವಿನ ಪಾಡುಗಾಯಿಗಳು ಒಲವಿನಿಂದ ಓಲಾಡುತ್ತಿರುತ್ತವೆ. ಇದು ‘ಕಲ್ಮಿ’ ಮಾವು.  ಉಳಿದ ದಿನಗಳಲ್ಲಾದರೆ ನವಲೂರ ಪೇರಳೆಯಂತೂ ಇದ್ದೇ ಇದೆ. ಬಂಗಾರ ಬಣ್ಣದ ಹಣ್ಣನ್ನು ಕತ್ತರಿಸಿದರೆ ಒಳಗೆಲ್ಲ ಗಾಢ ಗುಲಾಬಿ ಬಣ್ಣದ ತಿರುಳು… ಜೊತೆಗೆ ಅದರದೇ ಆದ ಘಮ… !

 ಹಾಂ, ಐವತ್ತು ವರ್ಷಗಳ ಹಿಂದೆ ಈ ಊರಲ್ಲಿನ್ನೂ ಅನೇಕ  ಕೆರೆಗಳಿದ್ದವು. ಅವುಗಳಿಗೆಲ್ಲ ಒಂದೊಂದು ಹೆಸರೂ ಇದ್ದವು : ‘ಎಮ್ಮೀಕೇರಿ’, ‘ಕೊಪ್ಪದಕೇರಿ’, ‘ಕೆಂಪೀಗೇರಿ’,  ‘ಹಾಲಗೇರಿ’ ಮತ್ತು ನೋಡಿರದಿದ್ದರೂ ನೀವು ಕೇಳಿ ಬಲ್ಲಂಥ ‘ಸಾಧನಕೇರಿ’… ಹೀಗೆ ಇನ್ನೂ ಹಲವು…

ಅರೆ, ‘ಕೆರೆಗಳು’ ಎನ್ನುತ್ತೀರಿ, ಯಾವುದೋ ಕೇರಿಗಳ ಹೆಸರು ಹೇಳುತ್ತಿದ್ದೀರಿ ಎಂದು  ಗೊಣಗಬೇಡಿ. ನಮ್ಮಲ್ಲಿ ಮರಾಠಿಯ ಪ್ರಭಾವದಿಂದಾಗಿ ಎಳೆದೆಳೆದು ಹೇಳುವ ಚಟ ಬೆಳೆದು ಬಿಟ್ಟಿದೆ. ಆ ಜನ ಹಾಗೆಯೇ. ‘ಪೆನ್’ ಅವರ ಬಾಯಲ್ಲಿ ‘ಪೇನ್’ ಆಗುವುದನ್ನು ಕೇಳುವಾಗ ನಮಗೆ ನಿಜವಾಗಿಯೂ ನೋವಾಗುತ್ತದೆ. ನಾವು ‘ಟೆಸ್ಟ್’ ಮಾಡಲು ಕುಳಿತರೆ, ಅವರು ‘ಟೇಸ್ಟ್’ ಮಾಡತೊಡಗುತ್ತಾರೆ. ಇರಲಿ. ಧಾರವಾಡದ ಕೆರೆಗಳ ಬಗ್ಗೆ ಹೇಳುತ್ತಿದ್ದೆ.  ಇಲ್ಲಿದ್ದ ಕೆರೆಗಳ ಪೈಕಿ ಲೈನ್ ಬಜಾರಿನ ಹತ್ತಿರವಿದ್ದ ಕೆಂಪೀಗೇರಿ ಮತ್ತು ಊರ ನಡುವಿದ್ದ ಹಾಲಗೇರಿಗಳು ವಿಸ್ತಾರದಲ್ಲಿ ಬಲು ದೊಡ್ಡವು.

dharawad1ನೀವು ಧಾರವಾಡದ ಹಳೆಯ ಬಸ್ ನಿಲ್ದಾಣದಿಂದ ಹೊರಗೆ ಬಂದು ಬಲಕ್ಕೆ ಹೊರಳಿ ಹಾಗೇ ಸಾಗಿದರೆ ಸಿಗುವುದೇ ಸುಭಾಸ ರಸ್ತೆ. ಅದರ ಎಡಕ್ಕೆ ಅಂಗಡಿಸಾಲುಗಳ ಹಿಂದೆ ಬಲು ವಿಸ್ತಾರವಾಗಿ ಹರಡಿಕೊಂಡ ತರಕಾರಿ ಮಾರುಕಟ್ಟೆ ಕಾಣುತ್ತದೆ. ಈ ಪ್ರದೇಶ ಆ ಕಾಲಕ್ಕೆ ಒಂದು ದೊಡ್ಡ ಕೆರೆ. ಹೆಸರು ‘ಹಾಲಗೇರಿ’. ಅದನ್ನು ಎಡಕ್ಕಿಟ್ಟುಕೊಂಡೇ ಮುನ್ನಡೆದರೆ ನೀವು ಗಾಂಧೀ ಚೌಕ ಎಂಬಲ್ಲಿಗೆ ಬರುತ್ತೀರಿ. ಇಲ್ಲಿ ರಸ್ತೆ ಮೂರು ಟಿಸಿಲೊಡೆಯುತ್ತದೆ… ನೇರ ಹೋದರೆ ಮಂಗಳವಾರ ಪೇಟೆ.  ಬಲಕ್ಕೆ ಹೊರಳಿ ಮುಂದುವರಿದರೆ ಹೊಸ ಯಲ್ಲಾಪುರ. ಚೌಕದ ಎಡ ರಸ್ತೆಯತ್ತ ತಿರುಗಿದರೆ ಸಿಗುವುದೇ ‘ಕೆರೀ ತೆಳಗಿನ ಓಣಿ.’ (‘ಕೆಳಗಿನ’ ಎಂಬುದು ನಮ್ಮವರ ಬಾಯಲ್ಲಿ ‘ತೆಳಗಿನ’ ಆಗಿದೆ.) ಕೆರೆಗೆ ಅತಿ ಸಮೀಪವಿದ್ದ ಕಾರಣ ಇಲ್ಲಿಯ ಮನೆಗಳೆಲ್ಲ ಆಗ ಸದಾ ತಂಪಿನ ತಾಣವಾಗಿರುತ್ತಿದ್ದವು. ನೆಲಕ್ಕೆ ಕಲ್ಲು ಹಾಸು ಇದ್ದರಂತೂ ಅಲ್ಲಿ ಕಾಲುಗಳು ಜುಮುಗುಡುವಷ್ಟು ತಂಪು.  ನೆಲಮಟ್ಟದಿಂದ ಸ್ವಲ್ಪ ಮೇಲಿದ್ದ ಮನೆಗಳಲ್ಲಿ ಈ ಸಮಸ್ಯೆ ಇರುತ್ತಿರಲಿಲ್ಲ.

ಈ  ‘ಕೆರೀ ತೆಳಗಿನ ಓಣಿ’ಯ ಮೂಲಕ ಹಾದು ಹೋಗುವ ರಸ್ತೆಗೆ ‘ಶಿವಾಜಿ ಬೀದಿ’ ಅಥವಾ ‘ಶಿವಾಜಿ ರಸ್ತೆ’ ಎಂದು ಹೆಸರು.
ಈ ಬೀದಿಯಲ್ಲೇ ಶುರುವಾಯಿತು ನನ್ನ ‘ವಿದ್ಯಾಯಾನ’…
ಬನ್ನಿ… 1964ರ ಅವಧಿಯ ಶಿವಾಜಿ ಬೀದಿಗೆ ಹೋಗೋಣ.

ಆಗ ಈ ಬೀದಿಯಲ್ಲಿದ್ದ ‘ರಿಸ್ಬೂಡ್ ಚಾಳ್ ‘ನಲ್ಲಿದ್ದರು ವೇದಬ್ರಹ್ಮ ಮಹಾದೇವ ಭಟ್ಟ ಸದರ ಜೋಶಿಯವರು. ನನ್ನ ‘ವಿದ್ಯಾಯಾನ’ದ ಯೋಜನೆಯನ್ನು ರೂಪಿಸಿದವರೇ ಈ ಮಹಾದೇವ ಭಟ್ಟರು. ಅವರ ಧರ್ಮಪತ್ನಿಯೇ ನಮ್ಮ ಸೋದರತ್ತೆ. ಆಕೆ ನನಗೆ ಒಂದರ್ಥದಲ್ಲಿ ಅಜ್ಜಿಯೂ ಹೌದು. ನನ್ನ ಅವ್ವನ ದೊಡ್ಡಮ್ಮ. (‘ಸದ್ದು ಮಾಡುವ ರೊಟ್ಟಿ’ ನೆನಪಿಸಿಕೊಳ್ಳಿ. ನನ್ನ ಅವ್ವನನ್ನು ಕಿಲ್ಲೆಗೆ ಕರೆದೊಯ್ದು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿದ್ದವಳು ಇದೇ ಅಜ್ಜಿ.) ದಂಪತಿ ಇಬ್ಬರೂ ಧಾರಾಳಿಗಳು.

ಮಹಾದೇವ ಭಟ್ಟರ ಹಿರಿಯ ಮಗ ತಮ್ಮಣ್ಣ ಮಾಮಾ… ಪ್ರಾಥಮಿಕ ಶಾಲಾ ಮಾಸ್ತರ್. ಆತ ಕೆಲಸ ಮಾಡುತ್ತಿದ್ದ ಶಾಲೆಯಲ್ಲೇ ನನ್ನನ್ನೂ ಸೇರಿಸಿದ್ದಾಯಿತು.

ಸರಕಾರೀ ಶಾಲೆ ಆದ್ದರಿಂದ ನನಗೆ ಫೀಜು-ಗೀಜುಗಳ ಗೋಜೇ ಇರಲಿಲ್ಲ. ಇನ್ನು ಪುಸ್ತಕ, ನೋಟ್ ಬುಕ್ಕು, ಬಟ್ಟೆಬರೆಗಳು… ದಯಾಳುಗಳು ತಮ್ಮ ಹುಡುಗರು ಓದಿ ಬಿಟ್ಟ ಪುಸ್ತಕಗಳನ್ನು ನನಗೆ ಕೊಡುತ್ತಿದ್ದರು. ಇನ್ನು ನೋಟ್ ಬುಕ್ ವ್ಯವಸ್ಥೆ ತಮ್ಮಣ್ಣ ಮಾಮಾನ ಹೊಣೆ. ನಮ್ಮ ಇತರ ಸಂಬಂಧಿಕರ ಮಕ್ಕಳು ಹಾಕಿಕೊಂಡು ಬಿಟ್ಟ ಅಂಗಿ-ಪ್ಯಾಂಟುಗಳನ್ನೇ ನಮ್ಮ ಅವ್ವ ಆಲ್ಟರ್ ಮಾಡಿ ಕಳಿಸುತ್ತಿದ್ದಳು. ನಮ್ಮ ಊರಲ್ಲಿಯೇ ಇದ್ದ ಆಕೆ ಉಪಜೀವನಕ್ಕೆ ಬಟ್ಟೆ ಹೊಲಿಯುತ್ತಿದ್ದಳು.
ಆಯಿತಲ್ಲ, ಮತ್ತಿನ್ನೇನು ಬೇಕು…?ಆ ವರ್ಷದ ಮೇ  27ರಂದು ಶುರುವಾಯಿತು ಶಾಲೆ…
 ನಾನು ಹೊಸ ಶಾಲೆಯಲ್ಲಿ ಕಾಲಿರಿಸಿದ ಮೊದಲ ದಿನ. ಹೊಸ ಸಹಪಾಠಿಗಳು, ಹೊಸ ಮಾಸ್ತರುಗಳು, ಹೊಸ ವಾತಾವರಣ…
dharawada-pedaಅವತ್ತು ನಮ್ಮೆಲ್ಲರ ‘ಹಾಜರಿ’ ತೊಗೊಂಡ ಮಾಸ್ತರರು ಮೊದಲು ಒಬ್ಬೊಬ್ಬರನ್ನೇ ಪರಿಚಯಿಸಿಕೊಂಡರು. ಕನ್ನಡ ಆಯಿತು, ಇಂಗ್ಲಿಷ್ ಆಯಿತು, ಹಿಂದಿ ಪಾಠ ಮುಗಿದರೆ ಒಂದಷ್ಟು ವಿರಾಮ.
ಅದನ್ನು ಮುಗಿಸಿಕೊಂಡು ಬರುತ್ತಿದ್ದಂತೆಯೇ ಮುಖ್ಯಗುರುಗಳು ಒಳಗೆ ಬಂದರು. ಶುಭ್ರ ಮಲ್ಲಿಗೆಯಂಥ ಬಿಳಿ ಧೋತರ, ಬಿಳಿ ಜುಬ್ಬಾ, ಬಿಳಿ ಗಾಂಧೀ ಟೋಪಿ ಧರಿಸಿದ್ದ ಅವರ ಹೆಸರು ‘ಮಲ್ಲಿಗವಾಡ ಮಾಸ್ತರು’ ಅಂತ.
ಅವರು ಬಂದವರೇ, ಕಪ್ಪು ಹಲಗೆಯ ಮೇಲೆ ಒಂದು ರೇಖಾಚಿತ್ರ ಬಿಡಿಸಿ, ”ಮಕ್ಕಳೇ, ಇವರು ಯಾರು…?” ಅಂತ ಕೇಳಿದರು.
ನಾವೆಲ್ಲ ಒಕ್ಕೊರಲಿನಿಂದ ”ಚಾಚಾ ನೆಹರೂರೀ ಸsರs…” ಎಂದು ಉತ್ತರಿಸಿದೆವು.
ಅವರು ಗದ್ಗದಿತರಾದರು. ದುಃಖಿಸುತ್ತಲೇ, ”ಮಕ್ಕಳೇ… ಇವತ್ತು ನಿಮ್ಮೆಲ್ಲರ ಪ್ರೀತಿಯ ಚಾಚಾ ನೆಹರೂ ನಿಧನರಾಗಿದ್ಡಾರೆ… ಅದಕ್ಕೇ ನಿಮಗೆಲ್ಲ ಸಾಲಿ ಸೂಟಿ…” ಎಂದರು.ಸೂಟಿ, ರಜೆ ಎಂದರೆ ಯಾರಿಗೆ ತಾನೇ ಖುಷಿಯಾಗುವುದಿಲ್ಲ…? ದೊಡ್ದವರೇ ‘ಹೋ’ ಎಂದು ಹಾರಾಡಿ ಬಿಡುತ್ತಾರೆ. ಅಂಥದರಲ್ಲಿ ನಾವು ಮಕ್ಕಳು…
ಅದು ಗೊತ್ತಿದ್ದ ಮಲ್ಲಿಗವಾಡ ಮಾಸ್ತರರು, ”ಗದ್ಲಾ ಮಾಡದ ಮನೀಗೆ ಹೋಗ್ರಿ… ನಾಳೆ, ನಾಡದ, ಅಚ್ಚೀ ನಾಡದ ಪೇಪರಿನ್ಯಾಗ ಬರೋ ಸುದ್ದೀ ಓದ್ರಿ.
ನಿಮ್ಮ ಪ್ರೀತಿಯ ಚಾಚಾ ನೆಹರೂ ಅವರ ಬಗ್ಗೆ ಒಂದೊಂದು ಪುಟದಷ್ಟು ನಿಬಂಧ ಬರಕೊಂಡು ಬರ್ರಿ…”
ಅಂದು ಬುಧವಾರ…
ನಾನು ಶಾಲೆಯಲ್ಲಿ ಕಾಲಿಟ್ಟ ‘ಗಳಿಗೆ’ಯೇ ಸರಿ ಇರಲಿಲ್ಲವೇನೋ…ಉಳಿದದ್ದು ಮುಂದಿನ ಕಂತಿನಲ್ಲಿ…

2 Comments

  1. Anonymous
    September 18, 2016
  2. Gayatri Badiger, Dharwad
    September 18, 2016

Add Comment

Leave a Reply

%d bloggers like this: