Quantcast

ನೀರ್ ದೋಸೆ ನೆನಪಲ್ಲಿ..

suchith kotianಸುಚಿತ್ ಕೋಟ್ಯಾನ್ ಕುರ್ಕಾಲು

ಆಗ ನಾನು ಮೂರನೇ ಕ್ಲಾಸ್ ನಲ್ಲಿದ್ದೆ. ಸ್ಕೂಲ್ ವಾರ್ಷಿಕೋತ್ಸವದ ಡ್ಯಾನ್ಸ್ ಪ್ರಾಕ್ಟೀಸು ನಡೀತಿತ್ತು.

ಆ ವರ್ಷ ನಮ್ಮ ಇಡೀ ಕ್ಲಾಸ್ ನಲ್ಲಿ ಡ್ಯಾನ್ಸ್ ಗೆ ಆಯ್ಕೆಯಾದವಳು ಒಬ್ಬಳೇ. ಅದೂ ದೊಡ್ಡ ಹುಡುಗಿಯರ ಜೊತೆ. ನಮಗೆಲ್ಲಾ ಅವಳ ಮೇಲೆ ಅಸೂಯೆ ಮತ್ತು ಒಳಗೊಳಗೇ ಕ್ರಶ್ಶು. ‘ಯಾಯಿರೇ ಯಾಯಿರೇ… ಜ್ಹೋರ್ ಲಗಾಕೆ ನಾಚೇರೇ’ ಅಂತ ಸಾಂಗ್ ಆಗೋವಾಗ ಅವಳು ಮಧ್ಯೆ ಬಂದು ಪ್ರೇಕ್ಷಕರಿಗೆ ಒಂದು ಚಾಕಲೇಟ್ ಎಸಿಯೋದು, ಇದು ಅವಳ ಡ್ಯಾನ್ಸ್. ನಾವೆಲ್ಲಾ ಮುಂದೆ ಕೂತ್ಕೊಂಡು ಅವಳು ನನಗೇನೇ ಎಸೀತಾಳೆ ಅಂತ ಪ್ರತಿಯೊಬ್ಬರೂ ಆಸೆಪಟ್ಟು ಅನ್ಕೊಳ್ತಿದ್ವಿ. ಆದ್ರೆ ಕೊನೆಗೆ ಯಾರಿಗೆ ಸಿಕ್ತು ಅಂತ ಈಗ ನೆನಪಿಲ್ಲ. ನಂಗಂತೂ ಸಿಕ್ಲಿಲ್ಲ.

ಥಿಯೇಟರ್ ನಲ್ಲಿ ಕೂತ್ಕೊಂಡು ‘ನೀರುದೋಸೆ’ ಸಿನಿಮಾ ನೋಡುವಾಗ ಇಷ್ಟೆಲ್ಲಾ ನೆನಪಾಯ್ತು.

she-skirt-butterflyಅದ್ರಲ್ಲಿ ಬರೋ ಸಣ್ ಕುಮುದಾ ಹೈಸ್ಕೂಲಲ್ಲಿ ಇಬ್ಬರು ಹುಡುಗರನ್ನು ಪ್ರೀತಿಸುತ್ತಿರುತ್ತಾಳೆ. ಒಂದು ಹಂತದಲ್ಲಿ ಇಬ್ಬರನ್ನೂ ಕಳ್ಕೊಳ್ಳುತ್ತಾಳೆ. ಸಿನಿಮಾ ಖುಷಿಕೊಟ್ಟದ್ದರ ಜೊತೆಗೆ ಒಂದಷ್ಟು ನೆನಪುಗಳು ಮರುಕಳಿಸುವಂತೆ ಮಾಡಿತು. ಥಿಯೇಟರ್ ನಲ್ಲಿ ಒಬ್ನೇ ಕೂತು ನಗೋವಷ್ಟರ ಮಟ್ಟಿಗೆ ಸ್ಕೂಲಿನ ದಿನಗಳು ಕಣ್ಮುಂದೆ ಬಂದವು.

ಸ್ಕೂಲಿಗೆ ಬರೋದು ಕಲಿಯೋಕೆ ಮಾತ್ರ ಅಂತ ನಮ್ ಮೇಡಮ್ಮು, ಸಾರುಗಳು ಅನ್ನುತ್ತಿದ್ದರೂ ನಾವೆಲ್ಲಾ ಗೊತ್ತಿದ್ದೋ ಗೊತ್ತಿಲ್ದೆನೋ ಲವ್ವು ಗಿವ್ವು, ಮದ್ವೆ ಅಂತ ಏನೇನೋ ಕನಸು ಕಾಣ್ತಿದ್ವಿ. ಹುಡುಗ್ರಿಗೂ ಹುಡ್ಗೀರಿಗೂ ಈ ಪ್ರಾಯದಲ್ಲಿ ಹಾಗೇನೇ ಆಗುತ್ತಂತೆ. ಯಾರಾದ್ರೂ ಲವ್ ಮಾಡಿ ಸಿಕ್ಕಿಬಿದ್ದಾಗ ಗುರುಗಳೆಲ್ಲಾ ಈ ಉಪದೇಶ ಮಾಡ್ತಿದ್ರು. ನಮಗೇನೂ ಹೆಚ್ಚು ಅರ್ಥ ಆಗ್ತಿರಲಿಲ್ಲ ಬಿಡಿ.

ಎಂಟನೇ ಕ್ಲಾಸಲ್ಲಿರೋವಾಗ ನನ್ ಫ್ರೆಂಡೊಬ್ಬ ಹುಡುಗಿಯ ನೋಟ್ಸ್ ಪುಸ್ತಕ ತಗೊಂಡು ಚಾಕಲೇಟ್ ಇಟ್ಟು ವಾಪಸ್ ಕೊಟ್ಟು ಎಡವಟ್ಟು ಮಾಡ್ಕೊಂಡಿದ್ದ. ಅವ ಮಾಡಿದ್ದು ತಪ್ಪು ಅಂತ ಗೊತ್ತಿದ್ರೂ ಅವನಿಗೇನೆ ಸಪೋರ್ಟ್ ಮಾಡಿದ್ದೆವು. ಎಷ್ಟಂದ್ರೂ ಫ್ರೆಂಡಲ್ವಾ ? ಬಿಡೋಕಾಗುತ್ತಾ ?

ಆವಾಗೆಲ್ಲಾ ಪ್ರೀತಿಸೋ ಹುಡುಗಿಯ ನೋಟ್ಸು ಇಸ್ಕೊಳ್ಳೋದು, ಮನೇಲಿ ಬೆಚ್ಚಗೆ ಆ ಬುಕ್ಕಿಗೊಂದು ಮುತ್ತು ಕೊಡೋದು ನಮ್ ಕ್ಲಾಸಲ್ಲಿ ನಡೀತಾ ಇತ್ತು. ಪುಸ್ತಕದೊಳಗೆ ಲವ್ ಲೆಟರ್ ಇಡೋವಷ್ಟು ದೊಡ್ಡವರಾಗಿರಲಿಲ್ಲ ನಮ್ಮವರು. ಟೀಚರ್ ಕೊಟ್ಟ ನೋಟ್ಸನ್ನೇ ತಪ್ಪು ತಪ್ಪಾಗಿ ಬರೀತಿದ್ದವರು ಇನ್ನೂ ಲೆಟರ್ ಬರಿಯೋ ರೇಂಜಿಗೆ ಬಂದಿರಲಿಲ್ಲ. ಈಗಂತೂ ಲೆಟರ್ ಬರಿಯೋ ಉಸಾಬರಿನೇ ಬೇಡ ಅಂತ ಮಕ್ಳೆಲ್ಲಾ ಮೊಬೈಲ್ ಹಿಡ್ಕೊಂಡಿದ್ದಾವೆ. ಕಾಲಾಯ ತಸ್ಮೈ ನಮಃ.

ಹೈಸ್ಕೂಲಲ್ಲಿ ಪ್ರೀತಿಸೋ ಧೈರ್ಯ ನಂಗಿರಲಿಲ್ಲ. ಆದ್ರೆ ಪ್ರೀತಿಸೋರಿಗೆ ಸಪೋರ್ಟ್ ಮಾಡಿ ಅವರನ್ನು ಗೆಲ್ಲಿಸಬೇಕು ಅಂತ ಬೆಂಬಲಿಸ್ತಿದ್ದೆವು. ಆಗಿನ ಪ್ರೀತಿನ ಇಲ್ಲಿವರೆಗೆ ಜೋಪಾನವಾಗಿ ಉಳಿಸ್ಕೊಂಡೋರು ಇವತ್ತು ಯಾರೂ ಇಲ್ಲ ಆದ್ರೂ ಆ ಮೊದಲ ಪ್ರೀತಿಯಿಂದ ಪಾಠ ಕಲಿತವರಿದ್ದಾರೆ. True Love is better than First Love ಅಂತ ಮೊನ್ನೆ ಒಂದು ಮೆಸೇಜ್ ಬಂದಿತ್ತು. ಅದಕ್ಕೆ ನನ್ನ ಸಹಮತವೂ ಇದೆ.

ಹೈಸ್ಕೂಲಲ್ಲಿ ಪ್ರೀತ್ಸೋದು ತಪ್ಪೋ ಸರಿಯೋ ಗೊತ್ತಿಲ್ಲ ; ಆದರೆ ಅಂತಹದೊದ್ದು ನಿಮ್ಮ ಲೈಫಲ್ಲಿ ನಡೆದಿಲ್ಲ, ಯಾವ ಹುಡುಗಿಯೂ ನಿಮ್ಮತ್ತ ಓರೆಗಣ್ಣಲ್ಲಿ ನೋಡಿ ನಕ್ಕಿಲ್ಲ ಅಂದ್ರೆ ನೀವು ದೊಡ್ಡೋರಾದಾಗ ನೆನಪಿಸಿಕೊಂಡು ನಗೋದಕ್ಕೆ, ನಕ್ಕು ಹಗುರಾಗೋದಕ್ಕೆ ಅವಕಾಶಗಳೇ ಇರುವುದಿಲ್ಲ. ಏನಂತೀರಿ ?

7 Comments

 1. Anonymous
  September 24, 2016
  • ಸುಚಿತ್ ಕೋಟ್ಯಾನ್
   September 26, 2016
  • ಸುಚಿತ್ ಕೋಟ್ಯಾನ್
   September 26, 2016
 2. Gayatri Badiger, Dharwad
  September 23, 2016
  • ಸುಚಿತ್ ಕೋಟ್ಯಾನ್
   September 23, 2016
 3. shama nandibetta
  September 23, 2016
  • ಸುಚಿತ್ ಕೋಟ್ಯಾನ್
   September 23, 2016

Add Comment

Leave a Reply