Quantcast

ಸರಕಾರ ಮತ್ತು ವ್ಯಾಪಾರ

rajaram tallur low res profile

ರಾಜಾರಾಂ ತಲ್ಲೂರು

ಎಲ್ಲ ವರ್ಗಗಳನ್ನು ಸಮನಾಗಿ ಕಾಣಬೇಕಾದ ಸರಕಾರಕ್ಕೂ, ಕಿಸೆ ತುಂಬಿಸಿಕೊಳ್ಳುವ ವ್ಯಾಪಾರಕ್ಕೂ ಒಂದೇ ತಕ್ಕಡಿ ಹಿಡಿಯಲು ಸಾಧ್ಯವಿಲ್ಲ. ಇವೆರಡರ ನಡುವೆ ಅಂತರ ಕಾಯ್ದುಕೊಳ್ಳುವುದು ಒಂದು ಸರ್ಕಾರದ ಕರ್ತವ್ಯ.

ಮೊನ್ನೆ ರಿಲಯನ್ಸ್ ಜಿಯೋ ಜಾಹೀರಾತಿನಲ್ಲಿ ಸರಕಾರದ ಸಾಂವಿಧಾನಿಕ ಮುಖ್ಯಸ್ಥರನ್ನು ಕಂಡು ದೇಶವೇ ದಂಗುಬಡಿದಿತ್ತು. ಸರಕಾರವೇ ನಡೆಸುವ BSNL ಇರುವಾಗ, ಆ ಸರಕಾರದ ಕೊಡಿಯಲ್ಲಿರುವವರು, ತನ್ನದೇ ಪ್ರತಿಸ್ಪರ್ಧಿಯನ್ನು ದೇಶಕ್ಕೆ ಶಿಫಾರಸು ಮಾಡಿದ್ದು, ತನ್ನ ಕಾಲಿಗೆ ತಾನೇ ಕೊಡಲಿಯೇಟು ಹೊಡೆದುಕೊಂಡಂತೆ ಎಂದು ಖಾರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.

avadhi-column-tallur-verti- low res- cropಇದೇನೋ ಒಮ್ಮೆ ಆಗಿಹೋದ ತಪ್ಪು ಎಂದುಕೊಂಡರೆ, ಇತ್ತೀಚೆಗೆ ಬಿಡುಗಡೆ ಆಗಿರುವ CAG ವರದಿಯೊಂದು ಬೇರೆಯೇ ಕಥೆ ಹೇಳುತ್ತಿದೆ.

ಅದೂ, ಕೇಂದ್ರ ಸರ್ಕಾರದ ನೀತಿ ನಿರ್ಧಾರಗಳನ್ನು ರೂಪಿಸುವುದಕ್ಕಾಗಿ ಹಳೆಯ ಯೋಜನಾ ಆಯೋಗವನ್ನು ಕಸದಬುಟ್ಟಿಗೆ ಹಾಕಿ ರಚಿಸಲಾಗಿರುವ “ ನೀತಿ ಆಯೋಗ್” ನ ಮೂಗಿನಡಿಯೇ ಈ “ತಪ್ಪು” ಸಂಭವಿಸಿದೆ.

ಈ ಒಂದೇ ಪ್ರಕರಣದಲ್ಲಿ ಒಂದೂವರೆ ಕೋಟಿ ರೂಪಾಯಿಗಳು ಸರಕಾರಿ ಖಜಾನೆಗೆ ನಷ್ಟ ಆಗಿದೆ ಎಂದಾದರೆ, ಡಜನುಗಟ್ಟಲೆ ಇಲಾಖೆಗಳಿರುವ ಕೇಂದ್ರ ಸರ್ಕಾರದಲ್ಲಿ ಇದು ಅಂತಿಮವಾಗಿ ಎಷ್ಟು ಕೋಟಿಗಳ ನಷ್ಟ ಆಗಿರಬಹುದೆಂಬುದು ಊಹೆಗೆ ಬಿಟ್ಟದ್ದು.

ಆಗಿರುವುದೇನು?

ಆಧಾರ್ ಕಾರ್ಡುಗಳನ್ನು ವಿತರಿಸುವ  Unique Identification Authority of India (UIDAI)  ನೇರವಾಗಿ ನೀತಿ ಆಯೋಗದ ಅಂಗಸಂಸ್ಥೆ. ಅದೇ ರೀತಿ The Directorate of Advertising and Visual Publicity (DAVP)  ಕೇಂದ್ರ ಸರಕಾರದ ಅಧಿಕೃತ ಜಾಹೀರಾತು ಸಂಸ್ಥೆ. ಸರಕಾರದ್ದೇ ನೀತಿಯ ಪ್ರಕಾರ ಎಲ್ಲ ಸರಕಾರಿ ಜಾಹೀರಾತುಗಳು “ಕಡ್ಡಾಯವಾಗಿ” DAVP ಮೂಲಕವೇ ಮಾಧ್ಯಮಗಳಿಗೆ ಹೋಗಬೇಕು; ಹಾಗೆ ಹೋದಾಗ, ಸರ್ಕಾರಿ ಇಲಾಖೆಗಳಿಗೆ ಜಾಹೀರಾತು ದರದ ಮೇಲೆ 15% ರಿಯಾಯಿತಿ ಕೂಡ ಸಿಗುತ್ತದೆ.

ಆದರೆ, UIDAI ತನ್ನ ಜಾಹೀರಾತುಗಳನ್ನು “ಆರ್. ಕೆ. ಸ್ವಾಮಿ BBDO” ಎಂಬ ಅಮೆರಿಕ ಮೂಲದ ಬಹುರಾಷ್ಟ್ರೀಯ ಜಾಹೀರಾತು ಸಂಸ್ಥೆಗೆ ನೀಡಿದೆ. ಹೀಗೆ ಡಿಸೆಂಬರ್ 2014-ಮಾರ್ಚ್2015 ನಡುವೆ ಗ್ಯಾಸ್ ಸಬ್ಸಿಡಿ ಹಿಂದಿರುಗಿಸುವಂತೆ, ಆಧಾರ್ ಕಾರ್ಡ್ ಕಳೆದುಹೋದರೆ ವಾಪಸ್ ಪಡೆಯುವುದು ಹೇಗೆಂಬ ಬಗ್ಗೆ ದೇಶದಾದ್ಯಂತ ಪತ್ರಿಕಾಮಾಧ್ಯಮಗಳಿಗೆ 9.42 ಕೋಟಿ ರೂಪಾಯಿಗಳ ಜಾಹೀರಾತು ನೀಡಲಾಗಿದೆ. ಅಂದರೆ, UIDAIಗೆ ಇದರಿಂದ 15% ರಿಯಾಯಿತಿ ರೂಪದಲ್ಲಿ 1.41ಕೋಟಿ ರೂಪಾಯಿಗಳ ನಷ್ಟ ಆಗಿದೆ ಎಂದು CAG ತನ್ನ ವರದಿಯಲ್ಲಿ ಬೊಟ್ಟುಮಾಡಿದೆ. ಇದರ ಜೊತೆ, DAVPಗೆ ಮಾಧ್ಯಮ ಸಂಸ್ಥೆಗಳಿಂದ ಬರಬಹುದಾಗಿದ್ದ ಕಮಿಷನ್ ಲೆಕ್ಕ ಹಾಕಿದರೆ, ಸರಕಾರದ ಬೊಕ್ಕಸಕ್ಕೆ ಒಟ್ಟು ಅಂದಾಜು ಮೂರು ಕೋಟಿಗಳಷ್ಟು ನಷ್ಟ ಆಗಿದೆ.

davp-logoಒಂದೆಡೆ ‘ಮೇಕ್ ಇನ್ ಇಂಡಿಯಾ’ ಎನ್ನುತ್ತಾ ಇನ್ನೊಂದೆಡೆ ಬಹುರಾಷ್ಟ್ರೀಯ ಕಂಪನಿಯೊಂದಕ್ಕೆ ಮಣೆ ಹಾಕಿರುವ ಕೇಂದ್ರ ಸರಕಾರವು, ಇದಕ್ಕೆ CAG ಆಡಿಟ್ ತಕರಾರು ತೆಗೆದಾಗ, ಬೇಜವಾಬ್ದಾರಿಯ ಉತ್ತರವನ್ನೂ ನೀಡಿದೆ. ಕೇಂದ್ರ ಸಂವಹನ ಇಲಾಖೆಯು CAGಗೆ ನೀಡಿರುವ ಉತ್ತರದಲ್ಲಿ, DAVP ಈರೀತಿಯ ಪ್ರಚಾರ ಕ್ಯಾಂಪೇನ್ ಗಳನ್ನು ನಡೆಸುವುದಕ್ಕೆ ಬೇಕಾದ ಸಂವಹನ ಪರಿಕರಗಳನ್ನಾಗಲೀ, ವಿನ್ಯಾಸಕಾರರನ್ನಾಗಲೀ, ಮೀಡಿಯಾ ಪ್ಲಾನರ್ ಗಳನ್ನಾಗಲೀ ಹೊಂದಿಲ್ಲ, ಹಾಗಾಗಿ ಖಾಸಗಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ಆದರೆ, CAG ತನ್ನ ವರದಿಯಲ್ಲಿ, ಈ ಕ್ರಮ ಸರ್ಕಾರ ತಾನೇ ತೆಗೆದುಕೊಂಡಿರುವ ನಿರ್ಧಾರಗಳು-ನಿಯಮಗಳಿಗೆ ವ್ಯತಿರಿಕ್ತವಾಗಿದೆ ಎಂದು ತನ್ನ ಅಸಮಾಧಾನವನ್ನು ದಾಖಲಿಸಿದೆ.

ಜನತೆ ತಾವೇ ಮನಸ್ಸುಮಾಡಿ ಗ್ಯಾಸ್ ಸಬ್ಸಿಡಿ ತೊರೆದು ಕೇಂದ್ರ ಸರ್ಕಾರಕ್ಕೆ 4000 ಕೋಟಿಗೂ ಮಿಕ್ಕಿ ಉಳಿಕೆಯಾಗಿದೆ, ಹಾಗಾಗಿ ಈ ಮೂರುಕೋಟಿ ನಷ್ಟ ತೊಂದರೆಇಲ್ಲ ಬಿಡಿ ಎಂದುಕೊಳ್ಳೋಣ ಎಂದರೆ, ಅನಧಿಕ್ರತ ವರದಿಗಳ ಪ್ರಕಾರ NDA ಸರಕಾರ ಬಂದ ಬಳಿಕ ಎರಡೂವರೆ ವರ್ಷಗಳಲ್ಲಿ ಅಂದಾಜು 3000 ಕೋಟಿ ರೂಪಾಯಿಗಳನ್ನು ಕೇಂದ್ರ ಸರಕಾರದ ವಿವಿಧ ಜಾಹೀರಾತುಗಳಿಗೆ ವ್ಯಯಿಸಲಾಗಿದೆಯಂತೆ. ಆ ಗಾತ್ರದಲ್ಲಿ  CAG ಲೆಕ್ಕಾಚಾರದಂತೆ, ಏನಿಲ್ಲ ಎಂದರೂ 450-900 ಕೋಟಿ ರೂಪಾಯಿಗಳ ನಷ್ಟ ಸರಕಾರಿ ಖಜಾನೆಗೆ ಸಂಭವಿಸಿರಬಹುದು!

541e3d5bab9da_i_160x160ಹೆಚ್ಚಿನ ಓದಿಗಾಗಿ:

CAG ವರದಿಯ ಪ್ರತಿ: http://www.cag.gov.in/sites/ default/files/audit_report_ files/Union_Civil_Complaince_ Report_11_2016_Chapter-13.pdf
2014-15ರ ತನಕದ ಸರ್ಕಾರಿ ಜಾಹೀರಾತುಗಳ ಬಗ್ಗೆ ಸಣ್ಣ ಲೆಕ್ಕಾಚಾರ: https://factly.in/the-central- government-spent-more-than- 6000-crore-on-publicity-in- the-last-11-years/

One Response

  1. shama nandibetta
    September 23, 2016

Add Comment

Leave a Reply