Quantcast

ಚೇಳಿ ಮೀನು ಶಿಕಾರಿ ಎಂಬ ಸ್ಖಲನ

nempe devaraj

ನೆಂಪೆ ದೇವರಾಜ್

ನಮ್ಮೂರ ಕೆರೆಯಲ್ಲಿ ಗಾಳ ಹಾಕಲು ಕೂತೆವೆಂದರೆ ಶಿಕಾರಿ ಗ್ಯಾರಂಟಿ.

ಬೇರಾವುದೇ ಜಾತಿಯ ಮೀನುಗಳು ಕೆರೆಯ ತುಂಬಾ ಇದ್ದರೂ ಗಾಳಕ್ಕೆ ಕಚ್ಚಲು ಹಿಂದೆ ಮುಂದೆ ನೋಡುತ್ತವೆ. ಅನುಮಾನಿಸುತ್ತವೆ. ಆದರೆ ಚೇಳಿ ಮೀನುಗಳ ಧೈರ್ಯವೇ ಧೈರ್ಯ. ಗಾಳ ಕೆರೆಗೆ ಬಿದ್ದ ಸ್ವಲ್ಪ ಸಮಯದಲ್ಲೇ ಗಾಳದ ಮುಳ್ಳನ್ನು ಸರಕ್ಕನೆ ಎಳೆಯುತ್ತವೆ.

ಸರಕ್ಕನೆ ಎಳೆವ ಸುಖವನ್ನು ನನ್ನ ಗೆಳೆಯರನೇಕರು ಸ್ಖಲನಕ್ಕೆ ಹೋಲಿಸುವುದೂ ಉಂಟು.

malenadu-dairy-promoಚೇಳಿ ಮೀನುಗಳು ಒಂದರ್ಥದಲ್ಲಿ ದಡ್ಡ ಜಾತಿಯ ಜಲಚರಗಳೆಂದೇ ಹೇಳಬೇಕು. ಆದರೆ ಇವುಗಳ ಮೂತಿಯಲ್ಲಿ ಹುದುಗಿಸಿಕೊಂಡ ಮುಳ್ಳುಗಳಿಂದ ಕೈ ಕಾಲುಗಳಿಗೆ ಬೀಸಿ ಹೊಡೆದರೆ ಚರ್ರನೆ ರಕ್ತ ಹಾರುವುದು ಮಾತ್ರವಲ್ಲ, ಇಡೀ ದಿನ ಬೊಬ್ಬೆ ಹಾಕಿದರೂ ಉರಿ ಮಾತ್ರ ಹೋಗದು. ಇಂತಹ ಆಯುಧ ತನ್ನೊಳಗೆ ಹುದುಗಿಸಿಕೊಂಡ ಕಾರಣಕ್ಕೇ ಇವುಗಳಿಗೆ ಈ ತರಹದ ಧೈರ್ಯವಿದ್ದರೂ ಇರಬಹುದು.

ಕಪ್ಪು ಮೈ ಬಣ್ಣದ ಎರಡು ಬೆರಳು ಗಾತ್ರದ ಚೇಳಿ ಮೀನಿನ ಹೊಡೆತ ಚೇಳಿನ ಕಡಿತಕ್ಕಿಂತ ಒಂದು ಪಟ್ಟು ಹೆಚ್ಚು ಎಂದೇ ಹೇಳಬೇಕು. ನಾನೂ ಸೇರಿದಂತೆ ನಮ್ಮೂರಲ್ಲಿ ಇವುಗಳ ಪೆಟ್ಟನ್ನು ತಿನ್ನದವರು ಕಡಿಮೆ ಎಂದೇ ಹೇಳಬೇಕು. ಗಾಳದಿಂದ ಎಳೆಯುವಾಗ ಮೀನಿನ ಬಗ್ಗೆ ತಿಳಿಯದೆ ಅತಿಯಾಸೆಯಿಂದ ಕೈ ಹಾಕಿದರೆ ಕ್ಷಣ ಮಾತ್ರದಲ್ಲಿ ತನ್ನ ಪ್ರಖರ ಹರಿತದ ಚೂಪನೆ ಮುಳ್ಳಿನಿಂದ ಹೊಡೆಯವ ಬಗೆ ಬರಿಗಣ್ಣಿಗೆ ಗೋಚರಿಸದಂತಹ ಚುರುಕುತನ.

ಚೇಳಿ ಮೀನುಗಳು ಎಲ್ಲ ಕಡೆ ಸಿಗುವಂತಿದ್ದರೂ ನಮ್ಮೂರಿನ ಜೋಡು ಕೆರೆಗಳಲ್ಲಿ ಇವುಗಳ ಸಂತತಿ ಒಂದು ಪಟ್ಟು ಹೆಚ್ಚು ಎಂದೇ ಹೇಳಬೇಕು. ನಮ್ಮ ಊರಿನಿಂದ ಎರಡು ಕಿಲೋ ಮೀಟರ್ ದೂರದಲ್ಲಿ ತೂಬಿನ ಕೆರೆ ಎಂಬ ಹೆಸರಿನ ಅಗಾಧ ಮೀನುಗಳ ಸಮೃದ್ದತನ ಮತ್ತು ಅಪೂರ್ವ ಸಸ್ಯ ವೈವಿದ್ಯತೆಯಿಂದ ನೋಡುಗರನ್ನು ಮಂತ್ರಮುಗ್ಧ ಗೊಳಿಸುತ್ತಲೇ ಬರುತ್ತಿದೆ.

ಮಲೆನಾಡು ಭಾಗದಲ್ಲಿ ಈ ಕೆರೆ ತನ್ನ ವಿಸ್ತೀರ್ಣ ಹಾಗೂ ವೈವಿದ್ಯಮಯವಾದ ಮೀನುಗಳ ರಾಶಿಗೆ ಮನೆ ಮಾತಾಗಿದೆ. ಮೂವತ್ತು ನಲವತ್ತು ಕೆ.ಜಿ ತೂಕದ ಬಾಳೆ, ಅವಲು, ಸುರಿಗಿ, ಗೊಜ್ಜಲೆಯಂತ ಮೀನುಗಳಿವೆ. ಆದರೆ ಈ ಕೆರೆಯಲ್ಲಿ ಚೇಳಿ ಮೀನುಗಳು ಔಷಧಿಗೂ ದೊರೆಯುವುದಿಲ್ಲ ಎಂಬುದು ಅನುಭವಸ್ಥರ ಮಾತು.

ಈ ಮೀನುಗಳಿದ್ದಲ್ಲಿ ಬೇರೆಯ ಮೀನುಗಳ ಸಂತತಿಗೆ ಇದರ ಚೂಪಾದ ಮುಳ್ಳುಗಳೆ ಶತೃಗಳು. ಇದರಿಂದ ತಪ್ಪಿಸಿಕೊಂಡವುಗಳು ಮಾತ್ರ ಬದುಕುಳಿಯಬಹುದು. ಈ ಮೀನುಗಳು ತಮ್ಮ ಚೂಪಾದ ಮುಳ್ಳುಗಳಿಂದ ಸಣ್ಣ ಪುಟ್ಟ ಮೀನು ಮರಿಗಳನ್ನು ದ್ವಂಸ ಮಾಡುವುದರಲ್ಲಿ ನಿಸ್ಸೀಮತೆ ಹೊಂದಿವೆ ಎಂದು ಹೇಳಲಾಗುತ್ತದೆ.

fish2ಆದರೆ ನನ್ನನುಭವದಲ್ಲಿ ನಮ್ಮೂರ ಕೆರೆಯಲ್ಲಿ ಮೀನುಗಳ ಸಂಖ್ಯೆ ಕಡಿಮೆ ಇರಬಹುದು. ಇದಕ್ಕೆ ಕಾರಣವಾಗಿರುವುದು ಮಳೆಗಾಲದಲ್ಲಿ ನೂರಾರು ಜನ ಮೀನು ಮರಿಹಾಕುವ ಕಾಲದಲ್ಲಿ ಕಂಬಳಿ, ಸೊಳ್ಳೆ ಪರದೆ, ಕತ್ತಿ, ಬಲೆಗಳೊಂದಿಗೆ ದಾಳಿ ಇಡುವುದೇ ಅಲ್ಲದೆ ವರ್ಷಪೂರ್ತಿ ಬಲೆ ಮತ್ತು ಗಾಣ ಹಾಕುವುದರಿಂದ ಮೀನು ಸಂತತಿಗಳು ನಾಶವಾಗಿರುವುದನ್ನೂ ಮರೆಯಬಾರದು.

ಬೆದೆಗೆ ಬಂದ ಮೀನುಗಳು ಹೊಸ ನೀರಲ್ಲಿ ತತ್ತಿ ಉಲುಬಲು ಕೆರೆ ಬದಿಗೆ ಬರುವುದನ್ನೇ ಹೊಂಚು ಹಾಕಿಕೊಂಡು ತೀಕ್ಷ್ಣ ಹೊಳಪಿನ ಬ್ಯಾಟರಿ ಬೆಳಕಲ್ಲಿ ಕತ್ತಿ ಹಿಡಿದು ಕಾಯುವ ಮಂದಿಯ ದೆಸೆಯಿಂದ ನಮ್ಮೂರು ಕೆರೆ ಖಾಲಿಯಾಗಿದೆ. ತನ್ನ ಹೊಟ್ಟೆಯಲ್ಲಿ ಮೊಟ್ಟೆ ಹೊತ್ತು ಬರುವ ಮೀನುಗಳನ್ನು ಮೊಟ್ಟೆ ಸಮೇತ ಸವಿಯುವುದರಿಂದ ಲಕ್ಷಾಂತರ ಮೊಟ್ಟೆಗಳು ಮರಿಗಳಾಗದೆ ಇರುವುದನ್ನು ನಾವು ಗಮನಿಸಬೇಕಿದೆ.

ಪ್ರತಿ ಎರಡು ಅಥವಾ ಮೂರು ವರ್ಷಕ್ಕೊಮ್ಮೆ ನಮ್ಮೂರ ಮಾಣಿಕ್ಯಗಳಂತೆ ಹೊಳೆವ  ಜೋಡುಕೆರೆಗಳನ್ನು ನೂರಾರು ವರ್ಷಗಳ ಕಾಲ ಅಲಿಖಿತ ನಿಯಮವೊಂದರ ಮೂಲಕ ಕಾಪಾಡಿಕೊಂಡು ಬಂದ ಹಿರಿಯರನ್ನು ನೆನೆಸಲೇಬೇಕು. ಊರವರು ಬೇಸಿಗೆಯಲ್ಲಿ ಕೆರೆ ಬತ್ತಿಸಿ ಮೀನು ಹಿಡಿಯಲು ಇಳಿಯುವವರಿಗೆ ದಡದಲ್ಲಿ ಕೂತ ಹಿರಿಯರ ಮೊದಲ ಎಚ್ಚರಿಕೆ ಎಂದರೆ ಯಾವುದೇ ಕಾರಣಕ್ಕೂ ಕಾಚಾ ಹಾಕಿಕೊಂಡು ಕೆರೆ ಇಳಿಯಬಾರದು ಎಂಬುದು.

ಏಕೆಂದರೆ ಕೆರೆಯ ತುಂಬಾ ಚೇಳಿ ಮೀನುಗಳೆ ತುಂಬಿಕೊಂಡಿದ್ದರಿಂದ ಯಾವುದೇ ವೃಷಣದ ಬೀಜಗಳಿಗೆ ಚೇಳಿ ಮೀನು ಹೊಡೆದರೆ ಅಲ್ಲಿಯೇ ಪಡ್ಚ ಆದವರ ಕತೆಯನ್ನು ಭೀಕರವಾಗಿ ಹೇಳಿದ್ದರಿಂದ ಮಾಮೂಲಿ ಕಾಚಾ ಹಾಕುವವರು ಕೂಡಾ ಮೇಲೆ ಟವಲುಗಳನ್ನು ಲಂಗೋಟಿ ಮಾಡಿಕೊಂಡು ಕೆರೆಗೆ ಇಳಿವ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. ಇರಗುಣಿಯೊಳಗೆ ಬಿದ್ದ ಮೀನುಗಳು ಔಲೋ, ಕುಂಚೋ ಎಂದು ತಿಳಿದು ಆನಂದದಿಂದ ಕೈ ಹಾಕಿದಾಗ ಸಿಕ್ಕುತ್ತಿದುದೇ ಚೇಳಿ. ಶತೃವಿನ ಕೈ ನೀರೊಳಗೆ ಬಂದ ಕೂಡಲೆ ಚೇಳಿ ಮೀನು ತನ್ನ ಕಡೆಗಾಲದ ಪೌರುಷ ತೋರಿಸದೆ ಬಿಡುತ್ತಿರಲಿಲ್ಲ.

ಹಲವು ಕಡೆ ನಾನು ವಿಚಾರಿಸಿದ್ದೇನೆ. ಮೀನುಗಳ ಬಗ್ಗೆ ತಜ್ಞತೆ ಪಡೆದು ಮಾತಾಡುವ ಮತ್ತು ಮೀನು ಸಾರಿಲ್ಲದೆ ಊಟ ತಿಂಡಿಗಳನ್ನು ಮಾಡದ, ಜಂಬು ಸಾರಿಗಾಗಿ ಹಗಲಿರುಳೂ ಹಳ್ಳ -ಹೊಳೆ- ಕೆರೆ ಕಟ್ಟೆಗಳಲ್ಲಿ ಅಲೆಯುವವರನೇಕರು ಇಂದಿಗೂ ನನ್ನ ಸಂಪರ್ಕದಲ್ಲಿರುತ್ತಾರೆ. ತಮ್ಮ ಸಮೀಪದ ಯಾವೊಂದು ಕೆರೆಗಳೂ ಚೇಳಿ ಮೀನಿಗೆ ಆಸ್ಪದ ಕೊಡದ ಬಗ್ಗೆ ಹಾಗೂ ಮುಳ್ಳುಗಳ ಬುಡದಲ್ಲಿ ರುಚಿಯಾದ ಮೈ ಕಟ್ಟು ಹೊಂದಿರುವ ಇವುಗಳ ಬಗ್ಗೆ ವಿಸ್ಮಿತರಾಗಿ ಹೇಳುವುದೂ ಉಂಟು.

ಚೇಳಿ ಮೀನಿನ ಮುಳ್ಳು ಚುಚ್ಚಿದಾಗ ವಿಪರೀತ ನಂಜೇರುವುದರಿಂದ ಈ ನಂಜಿನ ತಡೆಗಾಗಿ ಚೇಳಿ ಮೀನಿನ ಮಂಡೆಯನ್ನೇ ಸುಟ್ಟು ಗಾಯಕ್ಕೆ ಹಚ್ಚಿದರೆ ಶೀಘ್ರವಾಗಿ ಉರಿ ಹೋಗುತ್ತದೆ ಎನ್ನುತ್ತಾರೆ. ಆದರೆ ಈ ಔಷಧದ ಪರಿಣಾಮ ಚೇಳಿಯ ಹೊಡೆತದೆದುರು ಸಂಪೂರ್ಣ ಸೋತಿರುವುದನ್ನು ಅನಭವಿಸಿದವರ ಮಾತಲ್ಲಿ ಕೇಳುವುದೇ ಒಳಿತು. ಸುಟ್ಟ ಮೀನಿನ ಮಂಡೆಯನ್ನು ಪುಡಿ ಮಾಡಿ ಹಚ್ಚುವುದನ್ನು ಮಾತ್ರ ಯಾರೂ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಏಕೆಂದರೆ ಮಂಡೆಯ ಜೊತೆ ಇಡೀ ಮೀನನ್ನು ಸುಡುತ್ತಿದ್ದರಿಂದ ಉಳಿದ ಮೀನಿನ ಭಾಗವನ್ನು ತಿನ್ನುವ ಖುಷಿ ಹೊಡೆಸಿಕೊಂಡವನಿಗೆ ಖಂಡಿತವಾಗಿಯೂ ಸಲ್ಲುತ್ತಿತ್ತು.

ಬಲೆಗೆ ಬಿದ್ದ ಚೇಳಿಯನ್ನು ಬಿಡಿಸುವುದು ಒಂದು ಕಲೆಯೇ ಸರಿ. ಬೇರೆ ಮೀನುಗಳನ್ನು ನೀರು ಕುಡಿದಷ್ಟು ಸುಲಭವಾಗಿ ಬಿಡಿಸಿದಂತೆ ಇದರ ಸಹವಾಸಕ್ಕೆ ಹೋಗುವಂತಿಲ್ಲ. ಬಲೆಗೆ ಅಥವಾ ಗಾಳಕ್ಕೆ ಬಿದ್ದ ಚೇಳಿಯನ್ನು ಬಡಿಗೆ ತೆಗೆದುಕೊಂಡು ಸಾಯಿಸದ ಹೊರತೂ ಬಲೆಯಿಂದ ಹೊರಹಾಕುವ ಸಾಹಸಕ್ಕೆ ಕೈ ಹಾಕಲೇಬಾರದು. ಯಾವುದೇ ಸದ್ದು ಒದ್ದಾಟವಿಲ್ಲದೆ ಮಲಗಿಕೊಂಡ ಚೇಳಿ ಮೀನಿಗೆ ಮಯಾತು ಮತ್ತು ತಾಂತ್ರಿಕತೆ ಗೊತ್ತಿಲ್ಲದೆ ಬಲೆಯಿಂದ ಬಿಡಿಸಲು ಹೋದವರ ಉಚ್ಚೆ ಆ ಸ್ಥಳದಲ್ಲೇ ಆದ ಉದಾಹರಣೆಗಳು ಹಲವು.

fish1ಚೇಳಿ ಮೀನುಗಳು ನಮ್ಮೂರ ಕರೆಯಲ್ಲಿ ಮಾತ್ರ ಎಂದು ತಿಳಿದಿದ್ದ ನನಗೆ ತೀರಾ ಇತ್ತೀಚೆಗೆ ಗೊತ್ತು ಮಾಡಿಕೊಂಡ ಸತ್ಯವೆಂದರೆ ಆರಗದ ದೊಡ್ಡ ಕೆರೆಯಲ್ಲೂ ಇವುಗಳು ಇವೆ ಎಂಬುದು. ಅಲ್ಲೂ

ಈ ಮೀನುಗಳು ಕೊಟ್ಟ ಕಾಟಗಳ ಬಗ್ಗೆ ಹೇಳುವ ಕತೆಗಳು ರಸವತ್ತಾಗಿವೆ. ಗಾಜನೂರು ಆಣೆಕಟ್ಟೆಯಲ್ಲಿ ಈಗೀಗ ಶಿಳ್ಳೆ ಕ್ಯಾತರ ಬಲೆಗಳು ಚೇಳಿ ಮೀನುಗಳನ್ನೂ ಆಕರ್ಷಿಸುತ್ತಿವೆ. ಶಿಳ್ಳೆ ಕ್ಯಾತರು ಬಲೆಗೆ ಬಿದ್ದ ಮೀನುಗಳನ್ನು ಬಿಡಿಸುವಲ್ಲಿ ಹೊಂದಿರುವ ಕಲೆಗಾರಿಕೆ ಹಾಗೂ ವೃತ್ತಿಪರ ಕೌಶಲ್ಯಗಳು ಇವರನ್ನು ಇದರ ಮುಳ್ಳುಗಳು ಅಪಾಯಕ್ಕೆ ದೂಡಿದ್ದರ ಬಗ್ಗೆ ಅಷ್ಟೇನೂ ರಸವತ್ತಾದ ಕತೆಗಳು ಹೊರ ಹೊಮ್ಮುತ್ತಿಲ್ಲ.

ಎರಡು ವರ್ಷಕ್ಕೊಮ್ಮೆ ಜೋಡು ಕೆರೆಯ ಅಚ್ಚುಕಟ್ಟುದಾರರೆಲ್ಲ ಸೇರಿ ಇರಗುಣಿಗಳೊಂದಿಗೆ ಕೆರೆ ಇಳಿಯುವ ಹಬ್ಬದ ಸಂಭ್ರಮ ಸಂಪೂರ್ಣ ಸತ್ತು ಹತ್ತು ಹಲವು ವರುಷಗಳೇ ಆಗಿವೆ. ಇರಗುಣಿಗಳು ಯಾರ ಅಟ್ಟದಲ್ಲೂ ಇಲ್ಲ .ಈಗ್ಗೆ ಹತ್ತು ವರ್ಷಗಳಿಂದ ಕೆರೆಗೆ ಗೌರ್ ಹಾಗೂ ಕಾಟ್ಳಾ ತರಹದ ಮೀನುಗಳನ್ನು ಇಲಾಖೆಗಳ ಮೂಲಕ ಸಾಕುವ ಹಂತಕ್ಕೆ ಹೋದರೂ ಅವುಗಳ ಲಾಲನೆ ಪಾಲನೆಗೆ ಯಾರಿಗೂ ಪುರುಸೋತ್ತೇ ಇಲ್ಲ. ಕೆರೆಯ ನೀರು ಹಾಗೂ ಮೀನು ಇವೆರಡರ ರಕ್ಷಣೆ ಒಂದು ಕಾಲದಲ್ಲಿ ಎಲ್ಲ ಅಚ್ಚುಕಟ್ಟುದಾರರ ಹೊಣೆಯಾಗಿತ್ತು.

ಈಗೀಗ ನೀರಿಗಾಗಿ ಹಾಗೂ ಮೀನಿಗಾಗಿ ನೂರಾರು ತರಹದ ಮೂಲಗಳು ಎದುರು ಬದುರಾಗುತ್ತಿರುವುದರಿಂದ ಇವೆಲ್ಲ ಕ್ಷುಲ್ಲಕ ವಿಷಗಳಾಗಿವೆ. ಕಾಟ್ಳಾ, ಗೌರ್ ತರಹದ ಮೀನುಗಳು ಇಡೀ ಕೆರೆಯ ಮೇಲೆ ತಮ್ಮ ಪಾರಮ್ಯ ಸಾಧಿಸಲು ಹೆಣಗಾಡಿದಂತೆಲ್ಲ ಚೇಳಿ ಮೀನುಗಳೂ ಸಹಸ್ರ ಸಂಖ್ಯೆಯಲ್ಲಿ ಹುಟ್ಟತ್ತಲೇ ಇರುವುದು ಗಮನಾರ್ಹ. ಚೇಳಿ ಮೀನುಗಳು ಶೈಶವಾಸ್ಥೆಯಲ್ಲಿ ಕೆರೆಗೆ ಬರುವ ಗೌರ್ಮೆಂಟ್ ಮೀನುಗಳ ತಂಡದ ಮೇಲೆ ದಾಳಿ ನಡೆಸದೆ ಬಿಡುವುದಿಲ್ಲ.

ತಂಡೋಪ ತಂಡವಾಗಿ ವಾಸಿಸುವ ಗೌರ್ ಮತ್ತು ಕಾಟ್ಳಾ ತರದ ಮೀನುಗಳಗಳನ್ನು ಹಿಡಿದು ತಿನ್ನುವುದು ಚೇಳಿ ಮೀನುಗಳಿಗೆ ನೀರು ಕುಡಿದಷ್ಟು ಸುಲಭವಿರಬಹುದು. ಗದ್ದೆ ಚರ, ಕೊಚ್ಚಲಿ, ಕಂಬರ ಕಟ್ಟಿಯಂತಹ ನಾಟಿ ಸೋಸಲುಗಳನ್ನು ಚೇಳಿಗಳು ಹಿಡಿಯಬೇಕಾದರೆ ಹರ ಸಾಹಸಪಡಬೇಕಾದ್ದರಿಂದ ಚೇಳಿಗಳ ಹೊಟ್ಟೆಗೆ ಗೌರ್ಮೆಂಟ್ ಮೀನುಗಳು ನೂರಕ್ಕೆ ನೂರರಷ್ಟೂ ಸಿಗದಿದ್ದರೂ ಎಪ್ಪತ್ತು ಭಾಗವನ್ನಂತೂ ಕಬಳಿಸುತ್ತವೆ ಎಂಬುದು ಅನುಭವಸ್ಥರ ಮಾತು.

ಒಮ್ಮೆ ಚೇಳಿಯಿಂದ ಹೊಡೆಸಿಕೊಂಡವರು ಮತ್ತೆ ಈ ಕೆರೆಯ ಸಹವಾಸದಿಂದ ದೂರವಿರಲೇಬೇಕೆನಿಸುವಷ್ಟು ಇವುಗಳ ಹೊಡೆತದ ಪರಿಣಾಮವಿರುತ್ತದೆ. ಐಬೆಕ್ಸ್ ಕಂಪೆನಿಯ ಕರೆಂಟ್ ಬೇಲಿಗೆ ಮೂತಿ ತಾಗಿಸಿಕೊಂಡ ಜಾನುವಾರುಗಳು ಮತ್ತೆಂದೂ ತೋಟ ಗದ್ದೆಯ ಸಹವಾಸ ಸಾಕೆಂದು ಅತ್ತ ಕಡೆ ಸುಳಿಯುವುದಿಲ್ಲವೋ ಹಾಗೆ ಚೇಳಿ ಮೀನುಗಳು ಕೂಡಾ ತಮ್ಮ ಭಯೋತ್ಪಾದಕ ಮೌಲ್ಯಗಳನ್ನು ಆಗಾಗ್ಗೆ ಪಸರಿಸುತ್ತಲೇ ಇರುತ್ತವೆ.

Add Comment

Leave a Reply