Quantcast

ನೆಮ್ಮದಿಯ ‘ನಡು’ವಿನ ಹುಡುಕಾಟದಲ್ಲಿ..

manjunath_kamathಮಂಜುನಾಥ್ ಕಾಮತ್

ಮಾಳ ಕಾರ್ಕಳ ತಾಲೂಕಿನ ಸುಂದರ ಗ್ರಾಮ. ಕುದುರೆಮುಖ ಘಟ್ಟದ ಬುಡದಲ್ಲಿರುವ ಹಸಿರು ಹಳ್ಳಿ. ಪೋರ್ಚುಗೀಸರ ಕಾಲದಲ್ಲಿ ವಲಸೆ ಬಂದ ಚಿತ್ಪಾವನ ಬ್ರಾಹ್ಮಣರು ಈ ಗುಡ್ಡದೂರನ್ನು ಕೃಷಿಯಿಂದ ಶ್ರೀಮಂತಗೊಳಿಸಿದರು. ಸುವರ್ಣಾ ನದಿ ಹಾಗೂ ಅದರ ಉಪಹೊಳೆಗಳ ಹತ್ತಾರು ಜಲಪಾತಗಳ ನೀರತಾವು ಬೆಟ್ಟದ ಜೀವಗಳನ್ನು ಬೆಚ್ಚಗಿಟ್ಟವಾದರೂ ಅವೇ ಹರಿವು ಮಳೆಗಾಲದಲ್ಲಿ ಇಡೀ ಗ್ರಾಮವನ್ನೇ ದ್ವೀಪವನ್ನಾಗಿಸುತ್ತಿದ್ದವು.

tundu-hykluಇಡೀ ಊರಿಗೆ ನಿಸರ್ಗ ಬಂಧನ. ಪ್ರಮುಖ ಪೇಟೆಯಾಗಿದ್ದ ಕಾರ್ಕಳ ಹಾಗೂ ಇನ್ನಿತರ ಊರುಗಳ ಸಂಪರ್ಕ ಕಡಿತ. ಘಟ್ಟದ ಮೇಲಿನ ಶೃಂಗೇರಿ, ಕಳಸಕ್ಕೆ ಹೋಗೋಣವೆಂದರೆ ಭಯಂಕರ ಕಾಡು ಬೆಟ್ಟಗಳ ನಡುವೆ ಪದೇ ಪದೇ ಮುಚ್ಚಿ ಹೋಗುತ್ತಿದ್ದ ಹೇರೆತ್ತು ದಾರಿಯೊಂದೇ. ಗಂಗಾಮೂಲಕ್ಕೆ ಎಳ್ಳಮವಾಸ್ಯೆಯ ತೀರ್ಥಯಾತ್ರೆಗೂ ಇದೇ ಹಾದಿ. ಭೈರರಸನ ರಾಜಧಾನಿ ಕಳಸದಿಂದ ಕಾರ್ಕಳಕ್ಕೆ ಸ್ಥಳಾಂತರವಾದದ್ದೂ ಇದೇ ರಸ್ತೆಯಲ್ಲಿ. ಆದರೆ ವರ್ಷದ ಆರು ತಿಂಗಳು ಮಾತ್ರಾ ಆ ಹಾದಿ ತೆರೆದುಕೊಂಡಿರುತ್ತಿತ್ತು. ಹೀಗೆ ಹೊರ ಜಗತ್ತಿಗೆ ಮುಚ್ಚಿ ಕೊಂಡಿದ್ದ  ಬಾಗಿಲುಗಳು ವರ್ಷಪೂರ್ತಿ ಎಂಬಂತೆ ತೆರೆದುಕೊಂಡದ್ದು 1970 ರ ದಶಕದಲ್ಲಿ. ಮಂಗಳೂರು- ಕುದುರೆಮುಖ ಹೆದ್ದಾರಿ ಯೋಜನೆಯಿಂದಾಗಿ. ಮಾಳ ಗ್ರಾಮದ ಕಡಾರಿ ಎಂಬಲ್ಲಿ ನಿರ್ಮಾಣವಾದ ಸೇತುವೆಯಿಂದಾಗಿ.

ಆ ನಂತರ ಆ ಊರಿನಲ್ಲಿ ಬದಲಾವಣೆಯ ಗಾಳಿ ಬೀಸಿತು. ಆ ಊರಿನ ಯುವಕ, ಯುವತಿಯರಿಗೆ ವಯಸ್ಸಿಗೆ ಸರಿಯಾಗಿ ಶಾದಿ ಭಾಗ್ಯ, ಆಧುನಿಕ ಆಸ್ಪತ್ರೆಗಳ ಆರೋಗ್ಯ ಭಾಗ್ಯ. ಊರುಗಳೆಲ್ಲಾ ಹತ್ತಿರವಾಗಿ ಕೂಲಿ, ಕೆಲಸದ ವ್ಯಾಪ್ತಿ ಹೆಚ್ಚಿ, ಬೆಳೆದ ಬೆಳೆಗಳ ಸಾಗಾಟಕ್ಕೆ ಹಾದಿ ನೆಚ್ಚಿ ಮೂರು ಹೊತ್ತಿನ ಅನ್ನ ಭಾಗ್ಯ. ಹೀಗೆ ಮಾಳ ಗ್ರಾಮಕ್ಕೆ ಹಿಡಿದಿದ್ದ ಶಾಪವೆಲ್ಲಾ ಕರಗುತ್ತಾ ಬಂತು. ಸೇತುವೆ, ಹೆದ್ದಾರಿಗೆ ಕಾರಣವಾಗಿದ್ದ ಕುದುರೇಮುಖ ಕಬ್ಬಿಣದದಿರು ಕಂಪನಿಗೆ ಧನ್ಯೋಸ್ಮಿ ಅಂದಿತು ಜನ.

ರಸ್ತೆ ಪಕ್ಕದ ಊರುಗಳೆಲ್ಲಾ ಸುಖದ ನಿದ್ದೆಗೆ ಜಾರಿತು. ಅದೇ ರಸ್ತೆಯಲ್ಲಿ ಕುದುರೆಮುಖದ ಹಸಿರು ಗುಡ್ಡಗಳನ್ನು ಲಾರಿಗೆ ತುಂಬಿಸಲಾಯಿತು. ಹಗಲು ರಾತ್ರಿಯೆನ್ನದೆ ಅದಿರುಗಳನ್ನು ಸಾಗಿಸಲಾಯ್ತು. ಆದರೆ ಕಂಪನಿಯವರಿಗೂ ಕನಸು ಬಿತ್ತಿರಬೇಕು. ಸದ್ದು ಹೆಚ್ಚಾಗಿ ನಿದ್ದೆ ಹೋದವರು ಎಚ್ಚರಾದರೆ ಕಷ್ಟವೆಂದು ಅರಿವಾಯಿತಿರಬೇಕು. ಕುದುರೆಮುಖದಿಂದ ಮಂಗಳೂರಿಗೆ ನೇರವಾಗಿ ಕೊಳವೆ ಮಾರ್ಗವೇ ನಿರ್ಮಾಣವಾಯಿತು. ಆ ಮೂಲಕವೇ ಅದಿರನ್ನು ನೀರಿನಂತೆ ಹರಿಸಲಾಯ್ತು.

kudremukh_hillನನಗಿನ್ನೂ ನೆನಪಿದೆ. ಪ್ರಾಥಮಿಕ ಶಾಲೆಯ ಶೈಕ್ಷಣಿಕ ಪ್ರವಾಸ. ಶೃಂಗೇರಿ, ಹೊರನಾಡು. ಹಿಂತಿರುಗುವಾಗ ಕುದುರೆಮುಖ. ಎರಡು ಭಾರಿ ಹೋದಾಗಲೂ ಅಲ್ಲಿನ ವೃಂದಾವನದಲ್ಲಿ ಕಿಕ್ಕಿರಿದ ಜನ. ಮೊದಲ ಸಲ ಮೊಸಳೆಯನ್ನು ನೋಡಿದ್ದು, ಜೋಕಾಲಿ, ಜಾರುಬಂಡಿಯಲ್ಲಿ ಕುಣಿದಾಡಿದ್ದು, ವೃಂದಾವನದ ಬಾಗಿಲಿನಲ್ಲಿ ಗಿಡಗಳಿಂದಲೇ ರಚಿಸಿದ ಹಸಿರು ಕುದುರೆಯ ಮುಖದ ಮುಂದೆ ನಿಂತು ಫೋಟೋ ತೆಗೆಸಿದ್ದು, ಲಕ್ಯಾ ಡ್ಯಾಮಿನ ಮೇಲೆ ಓಟದ ಸ್ಪರ್ಧೆ ಹೂಡಿದಾಗ ನಮ್ಮ ಜೊತೆಗೆ ಹೆಡ್ಮಾಸ್ಟರ್ರೂ ಓಡಿ ಕೊನೆಗುಳಿದದ್ದು ಅಚ್ಚಳಿಯದ ನೆನಪು.

20 ವರ್ಷದ ಬಳಿಕ ಅದೇ ವೃಂದಾವನದಲ್ಲೀಗ ಸ್ಮಶಾನ ಮೌನ. ಕಿಕ್ಕಿರಿದಿದ್ದ ಹಾದಿಯಲ್ಲಿ ಜನರಿಲ್ಲ. ಪಾರ್ಕಿಂಗ್ ಏರಿಯಾದಲ್ಲಿ ಡ್ರೈವರ್ ಗಳ ಜಗಳವಿಲ್ಲ. ಫೋಟೋ ತೆಗೆಸಿಕೊಂಡಿದ್ದ ಹಸಿರು ಕುದುರೆಯ ಮುಖದಲ್ಲಿಗ ಹಸುರಿಲ್ಲ. ಬಣ್ಣ ಮಾಸಿದ ಕಾರ್ಮಿಕರ ಕಟ್ಟಡಗಳು. ಸಾಹಿತ್ಯ ಸಂಘದಲ್ಲಿ ಕನ್ನಡವಿಲ್ಲ. ಶಾಲೆಯಲ್ಲಿ ವಿದ್ಯಾರ್ಥಿಗಳ ಗೌಜು ಗದ್ದಲವಿಲ್ಲ. ಅದೆಷ್ಟೋ ಸಾಮ್ರಾಜ್ಯಗಳು ಅಳಿದ ಕಥೆಯನ್ನು ಓದಿದ್ದೇವೆ, ಕೇಳಿದ್ದೇವೆ. ಆದರಿದು ಸ್ವಾತಂತ್ರ್ಯಾ ನಂತರ ನಿರ್ಮಾಣವಾದ ಜಾಗತೀಕರಣ ಪ್ರೇರಿತ ಆಧುನಿಕ ಸಾಮ್ರಾಜ್ಯ. ಇಷ್ಟು ಬೇಗ ಮಣ್ಣು ಪಾಲಾಗಬಾರದಿತ್ತು ಎಂದು ಯೋಚಿಸುತ್ತಿರಬೇಕಾದರೆ ನನ್ನ ಇಂಗಿತ ಅರ್ಥವಾಗಿಯೇ ನನ್ನನ್ನು ಬಯ್ಯುವಂತೆ, ಮನುಕುಲವನ್ನೇ ಹೆದರಿಸುಂತೆ ಹಕ್ಕಿಯೊಂದು ಕೂಗುತ್ತಿತ್ತು. ಕಿರುಚುತ್ತಿತ್ತು. ಅಥವಾ ತೆರವಾದ ತೋಟದಲ್ಲಿ ಗೂಡು ಕಟ್ಟಿ ಗೆಳತಿಯನ್ನು ಮಿಲನಕ್ಕಾಗಿ ಕರೆಯುತ್ತಿತ್ತೋ ?

ಜನ ನಿದ್ದೆಯಿಂದ ಬೇಗ ಎಚ್ಚರವಾದ ಪರಿಣಾಮ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ನಿಂತುಹೋಗಿದೆ. ಪರಿಸರವಾದಿಗಳ ಸಂಘಟಿತ ಹೋರಾಟಕ್ಕೆ ಜಯ ಸಂದಿದೆ. ಅದಿರು ಸಾಗಿಸುತ್ತಿದ್ದ ಅದೇ ಹೆದ್ದಾರಿಯಲ್ಲಿಂದು ಕಂಪನಿಯ ಯಂತ್ರಗಳು ಗುಜರಿಗೆ ಹೋಗುತ್ತಿವೆ. ಒಂದು ವೇಳೆ ಕಂಪನಿ ಸ್ಥಗಿತಗೊಳ್ಳುವುದಿಲ್ಲವಾದರೆ ಇಂದಲ್ಲ ನಾಳೆ ಕುದುರೆಮುಖದ ಆ ಕಾರ್ಖಾನೆ ಮತ್ತದರ ಹೊಗೆ ಕಾರ್ಕಳದ ಗೊಮ್ಮಟ ಬೆಟ್ಟದ ಮೇಲೆ ಕೂತವರಿಗೆಲ್ಲಾ ಸ್ಪಷ್ಟವಾಗಿ ಕಾಣುತ್ತಿತ್ತೇನೋ. ಅಷ್ಟರ ಮಟ್ಟಿಗೆ ಗುಡ್ಡಗಳು ಕರಗುತ್ತಿದ್ದವು.

ಅಭಿವೃದ್ಧಿಯ ಕನಸು ಕಟ್ಟಿಸಿ ಪರಿಸರವನ್ನು ಧ್ವಂಸಗೊಳಿಸುವ ಅದೆಷ್ಟೋ ಯೋಜನೆಗಳು ಮನೆಯ ಹಿತ್ತಿಲಿನಲ್ಲಿ ಬಂದು ಬಿದ್ದಿವೆ. ಅವುಗಳಿಂದ ನಮ್ಮ ಪ್ರಕೃತಿಯನ್ನು ಉಳಿಸಬೇಕು ಎಂದು ಜಾಗೃತಿ ಮೂಡುತ್ತಿರುವ ಹೊತ್ತಿಗೇನೇ ಮಾಳ ಸೇರಿದಂತೆ ದೇಶದ ಆರು ರಾಜ್ಯಗಳ ಪಶ್ಚಿಮ ಘಟ್ಟ ತಪ್ಪಲಿನ ಹಳ್ಳಿಗಳು ತತ್ತರಿಸುತ್ತಿವೆ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ನಿರಾಶ್ರಿತರಾಗುವ ಭೀತಿ. ಮತ್ತೆ ಕೆಲವೆಡೆ ಹುಲಿ ಯೋಜನೆಯ ಘರ್ಜನೆ.

kudaremuka_roadಬೆಟ್ಟದ ಜೀವಗಳಿಗೆ ಹುಲಿಯ ಹೆದರಿಕೆ ಹೆಚ್ಚಿಲ್ಲ. ಇಳಿ ಜಾರಿನಲ್ಲಿ ಅದು ಬರುವುದೂ ಇಲ್ಲ, ಬಂದರೆ ತೆಂಗು ಕಂಗುಗಳನ್ನು ಹಾಳು ಮಾಡುವ ಮಂಗಗಳು ಓಡಿ ಹೋಗಿ ತಮಗೆ ಉಪಕಾರವಾದೀತು ಎಂಬ ಭರವಸೆಯಲ್ಲಿದ್ದಾರೆ. ಆದರೆ ಕಸ್ತೂರಿ ರಂಗನ್ ವರದಿ ಹಾಗಲ್ಲ. ತೋಟಕ್ಕೆ ನುಗ್ಗಿ ಬೆಳೆ ನುಂಗುವ ಕೋತಿಗಳಂತೆಯೇ ಸ್ಥಳೀಕರನ್ನು ಆ ವರದಿ ಕಾಣುವಂತಿದೆ. ಪರಿಸರ ಉಳಿಯ ಬೇಕಾದರೆ ಒಕ್ಕಲೆಬ್ಬಿಸುವುದೇ ಸೂಕ್ತವೆಂಬಂತಿದೆ. ದೈನಂದಿನ ಚಟುವಟಿಕೆಗಳಿಗೂ ಕಡಿವಾಣ ಬೀಳಲಿದೆ ಎಂಬ ಆತಂಕ ಮನೆಮಾಡಿದೆ.

ಆ ವರದಿಯ ಜಾರಿಗೆ ವಿರೋಧ ಎಷ್ಟೇ ಇದ್ದರೂ ಸಾವಿರ ಕೋಟಿ ಭಂಡವಾಳದ ಕುದುರೆಮುಖ ಕಾರ್ಖಾನೆಯನ್ನೇ ಪರಿಸರ ಸಂರಕ್ಷಣೆಗಾಗಿ ನಿಲ್ಲಿಸಲಾಗಿರುವಾಗ ಪರಿಸರದ ಹೆಸರಿನಲ್ಲೇ ಜನರನ್ನು ಒಕ್ಕಲೆಬ್ಬಿಸುವ ಈ ಯೋಜನೆಯೂ ಜಾರಿಯಾಗುತ್ತದೆಯೇನೋ ಎಂಬ ಹೆದರಿಕೆಯಂತೂ ಖಂಡಿತವಾಗಿಯೂ ಇದ್ದೇ ಇದೆ.

ಒಕ್ಕಲೆಬ್ಬಿಸಿದ ಜನರಿಗೆ ಸರಕಾರ ಎಲ್ಲಿ ಹಾಗೂ ಯಾವಾಗ ಭೂಮಿ ನೀಡುತ್ತದೆಯೆಂಬುದೇ ಕುತೂಹಲ. ಕರಾವಳಿಯಲ್ಲಿ ಕೇಳಿದರೆ ಉಷ್ಣ ವಿದ್ಯುತ್ ಸ್ಥಾವರ, ವಿಶೇಷ ಆರ್ಥಿಕ ವಲಯ, ಭೂಗತ ತೈಲ ಸಂಗ್ರಹಗಾರಗಳು, ಸುವರ್ಣ ಕಾರಿಡಾರ್ ಯೋಜನೆಗಳು ಸಮುದ್ರಕ್ಕೆ ಹತ್ತಿರದವರ ಬಲಿ ಪಡೆಯುತ್ತಿದೆ. ಸರಿಸುಮಾರು 50 ಕಿ.ಮೀ ವ್ಯಾಪ್ತಿಯ ಸಮುದ್ರ ಘಟ್ಟಗಳ ಮಧ್ಯದ ಕರಾವಳಿಯ ಭೂಮಿಯಲ್ಲಿ ನೆಮ್ಮದಿಯಿಂದ ಬದುಕುವ ನಡು ವಾದರೂ ಈಗ ಎಲ್ಲಿದೆ?

ಒಟ್ಟಿನಲ್ಲಿ ‘ಜಟ್ಟ’ ಸಿನಿಮಾದ ಹಾಡೊಂದರಲ್ಲಿ ಹೇಳಿದಂತೆ ಸಂತನೊಬ್ಬನ ಹಳೆಯ ಹೆಜ್ಜೆ ಕಾಡ ಹಾದಿಯಾಗಿ, ಇದೀಗ ಅದು ಹೆದ್ದಾರಿಯಾಗಿ ಅಗಲವಾಗಿದೆ. ಆ ಅಗಲ ರಸ್ತೆ ಒಕ್ಕಲೆದ್ದ ಜನರಿಗಾಗಿ ಕಾಯುತ್ತಿದೆಯೇ ? ಜನ ಖಾಲಿಯಾದ ಮೇಲೆ ಆ ಹೆದ್ದಾರಿ ಮುಚ್ಚುತ್ತದೆಯೇ ? ಎಂಬುದಂತೂ ಅನುಮಾನವಾಗಿಯೇ ಉಳಿಯುತ್ತದೆ.

Add Comment

Leave a Reply