Quantcast

ಜೋಗಿ ಕಣ್ಣಲ್ಲಿ ‘ಈ ಪದ್ಯ ಕ್ಲಿಕ್ ಆಗಿದೆ’..

‘ಅವಧಿ’ಗೆ ಸಾಲು ಸಾಲಾಗಿ ಹರಿದು ಬಂದ ಕವಿತೆಗಳಲ್ಲಿ ೧೫ನ್ನು ಮಾತ್ರ ಹೆಕ್ಕಿ ಒಂದನ್ನು ಆಯ್ದು ಕೊಡಿ ಎಂದು ಜೋಗಿಯನ್ನು ಕೇಳಿದೆವು.

ಈ ಪೈಕಿ ಪ್ರೊ ಸಿ ಎನ್ ಆರ್ ಹಾಗೂ ಬಿ ಸುರೇಶ ಅವರ ಕವಿತೆಯನ್ನು ಸೇರಿಸಲಿಲ್ಲ. ಇವು ಅತಿಥಿ ಕವಿತೆಗಳು ಅಥವಾ ‘ಅವಧಿ’ ಎಂಬ ಮನೆಯ ಸದಸ್ಯರ ಕವಿತೆಗಳು

ಜೋಗಿ ಕವಿತೆಗಳೆಲ್ಲವನ್ನೂ ಓದಿ, ಗಟ್ಟಿಯಾಗಿ ಓದಿ.. ಮತ್ತೆ ಮತ್ತೆ ಓದಿ

ಒಂದು ಕವಿತೆಯನ್ನು ಬೆಸ್ಟ್ ಎಂದು ಷರಾ ಬರೆದಿದ್ದಾರೆ. ಅಷ್ಟೇ ಅಲ್ಲ ಏಕೆ ಅದು ನನ್ನ ಆಯ್ಕೆ ಎಂದೂ ತಿಳಿಸಿದ್ದಾರೆ

ಕೆರೆಕೈ ರಜನಿ ಗರುಡರಿಗೆ ‘ಅವಧಿ’ ಕಂಗ್ರಾಟ್ಸ್ ಹೇಳುತ್ತಾ ಬಹುಮಾನ ಕಳಿಸಿಕೊಡಲು ಸಜ್ಜಾಗಿದೆ

jogi

ಅವಧಿ ಏರ್ಪಡಿಸಿದ್ದ ‘ಕ್ಲಿಕ್ ಆಯ್ತು ಕವಿತೆ’ ವಿಭಾಗಕ್ಕೆ ಬಂದ ಪದ್ಯಗಳನ್ನು ಆಯ್ದು ಕೊಡುವ ಜವಾಬ್ದಾರಿಯ ಕೆಲಸವನ್ನು ಗೆಳೆಯ ಜಿ ಎನ್ ಮೋಹನ್ ನನಗೆ ವಹಿಸಿದ್ದಾರೆ.

ಅವರು ಈ ಕೆಲಸ ಹೇಳುವಾಗಲೇ ಇದೊಂದು ಕಷ್ಟದ ಬಾಬತ್ತು ಅನ್ನುವುದು ನನಗೆ ಗೊತ್ತಿತ್ತು.

click-kavite-shilabalikeಇತ್ತೀಚಿನ ದಿನಗಳಲ್ಲಿ ಹೊಸ ಹುಡುಗರು ಹುಡುಗಿಯರು ಕೂಡ ಗಾಢವಾಗಿ ಪದ್ಯಗಳನ್ನು ಬರೆಯುತ್ತಿದ್ದಾರೆ. ಪದ್ಯದ ಕುರಿತ ಗ್ರಹಿಕೆ ಮತ್ತು ನಿಲುವು ಎರಡರಲ್ಲೂ ಆಗಿರುವ ಬದಲಾವಣೆಯನ್ನು ನಾವಿಬ್ಬರೂ ಗಮನಿಸುತ್ತಲೇ ಬಂದಿದ್ದೇವೆ. ಸದ್ದಿಲ್ಲದೇ ಪದ್ಯ ಬರೆಯುತ್ತಾ, ಪದ್ಯದ ಕಟ್ಟುಪಾಡುಗಳನ್ನು ಮೀರಲು ಯತ್ನಿಸುತ್ತಿರುವ ಹೊಸಬರ ಸಂವೇದನೆಗಳನ್ನು ಗುರುತಿಸುವುದಕ್ಕೆ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಇಲ್ಲಿನ ಕವಿತೆಗಳನ್ನು ಓದಿ ಹೀಗೇ ಅಂತ ಹೇಳುವುದು ಸವಾಲಿನ ಕೆಲಸವೇ.

ಶಿಲ್ಪಕಲೆಯೊಂದರ ಫೋಟೋ ನೋಡಿ, ಅದರಿಂದ ಸ್ಪೂರ್ತಗೊಂಡ ಪದ್ಯವೊಂದನ್ನು ಬರೆಯುವುದು ಹೊಸತೇನಲ್ಲ. ಹೊಸತನ ಇರುವುದು ಚಿತ್ರದಲ್ಲೂ ಅಲ್ಲ, ಕವಿತೆಯಲ್ಲೂ ಅಲ್ಲ, ಗಮನದಲ್ಲಿ. ಒಂದು ಫೋಟೋವನ್ನು ಗಮನವಿಟ್ಟು ನೋಡುವ ಚಾಳಿಯನ್ನೇ ಮರೆತವರಿಗೆ ಕವಿತೆ ಎಲ್ಲಿಂದ ಹುಟ್ಟಬೇಕು? ಇಲ್ಲಿ ಬಂದ ಕವಿತೆಗಳನ್ನು ಓದಿದಾಗ ನನಗೆ ಥಟ್ಟನೆ ಅನ್ನಿಸಿದ್ದೆಂದರೆ ಎಲ್ಲರೂ ಏಕಾಗ್ರತೆಯಿಂದ ತನ್ಮಯರಾಗಿ, ಒಂದು ಧ್ಯಾನಸ್ಥ ಸ್ಥಿತಿಯಲ್ಲಿ, ಆ ಶಿಲಾಬಾಲಿಕೆಯನ್ನು ನೋಡಿದ್ದಾರೆ. ಹಾಗೆ ನೋಡಲು ಕಲಿಯುವುದೇ ಕವಿತೆಗೆ ಕೊಡುವ ಮೊದಲ ಮರ್ಯಾದೆ.

ಹೀಗೆ ಶಿಲಾಬಾಲಿಕೆಯನ್ನು ನೋಡಿ ಪದ್ಯ ಬರೆಯುವುದಕ್ಕೆ ನಮ್ಮಲ್ಲಿರುವ ಅತ್ಯುತ್ತಮ ಮಾದರಿಯೆಂದರೆ ಡಿವಿಜಿಯವರ ಅಂತಃಪುರ ಗೀತೆ. ಬೇಲೂರಿನ ಚನ್ನಕೇಶವ ದೇವಾಲಯದಲ್ಲಿರುವ ಶಿಲಾಬಾಲಿಕೆಯರ ಭಾವಭಂಗಿಯನ್ನಿಟ್ಟುಕೊಂಡು ಡಿವಿಜಿಯವರು ಬರೆದ ಈ ಗೀತೆಗಳು ಡಿವಿಜಿಯವರ ಭಾಷೆ. ಕವಿತ್ವ ಮತ್ತು ರಸಿಕತೆಗೆ ಸಾಕ್ಷಿಯಾಗಿದ್ದವು.

ನಾವೀಗ ಅದೇ ಮಾದರಿಯ ಪದ್ಯವನ್ನು ನಿರೀಕ್ಷಿಸುವಂತಿಲ್ಲ. ಅಂಥ ಪದ್ಯಗಳನ್ನು ಬರೆಯುವ ಕಾಲವೂ ಇದಲ್ಲ.

ಆದರೆ ಜಿ ಎನ್ ಮೋಹನ್ ಹೀಗೊಂದು ಪರಿಕಲ್ಪನೆ ಇದೆ ಎಂದಾಗ ಥಟ್ಟನೆ ಹೊಳೆದದ್ದು- ಕವಿತೆಗೂ ಫೋಟೋಗೂ ಇರುವ ಸಂಬಂಧ. ಫೋಟೋ ಒಂದು ಕ್ಷಣವನ್ನು ಕ್ಲಿಕ್ಕಿಸುತ್ತದೆ. ಕವಿತೆ ಕೂಡ ಒಂದು ಕ್ಷಣವನ್ನು ಹಿಡಿದಿಡುತ್ತದೆ. ಈ ಕ್ಷಣ ಹೊಮ್ಮಿದ ಭಾವ ಮತ್ತೊಮ್ಮೆ ಹೊಮ್ಮಲಿಕ್ಕಿಲ್ಲ. ಎರಡನೇ ಕ್ಲಿಕ್ಕಿನ ಫೋಟೋ ಬೇರೆಯೇ ಆಗುವಂತೆ, ಎರಡನೇ ಗುಕ್ಕಿನ ಪದ್ಯವೂ ಬೇರೆಯೇ ಆಗಿರುತ್ತದೆ.  ಅದೇ ಈ ಕ್ಲಿಕ್ ಆಯ್ತು ಕವಿತೆಯ ಹೆಚ್ಚುಗಾರಿಕೆ,

ಇಲ್ಲಿರುವ ಕವಿತೆಗಳನ್ನು ನಾನು ಒಂದೆರಡು ಸಲ ಜೋರಾಗಿ ಓದಿಕೊಂಡೆ. ಗಟ್ಟಿಯಾಗಿ ಓದಿದಾಗಲೇ ಕವಿತೆ ನಮ್ಮದಾಗುವುದು. ಎತ್ತರದ ದನಿಯ ಓದು ಕವಿತೆಯ ಬಾಗಿಲು ತಟ್ಟುವ ಪ್ರಯತ್ನ. ಕವಿತೆ ಕನಿಷ್ಟ, ಬಾಗಿಲು ತಟ್ಟಿದ್ದು ಯಾರು ಅಂತಲಾದರೂ ಕಿಟಕಿಯಿಂದ ನೋಡುತ್ತದೆ. ಪರಿಚಿತ ಅನ್ನಿಸಿದರೆ ಒಳಗೆ ಬಿಟ್ಟುಕೊಳ್ಳುತ್ತದೆ.

ಮದನಿಕೆಗೆ ಬಿನ್ನವತ್ತಳೆ ಬರೆದ ಜಯಶ್ರೀ ದೇಶಪಾಂಡೆ, ಸ್ಪಂದಿಸಬೇಡ ಸಹಕರಿಸಿದರೆ ಸಾಕು ಎಂದು ಅವಳು ಕಲ್ಲೆಂಬುದನ್ನು ನೆನಪಿಸಿಕೊಂಡ ಬಿ ಯು ಗೀತಾ,  ಬಿಸುಸುಯ್ಯುವ ಬಡನಡುವಿಗೆ ಬಲುಜಘನದ ಅಭಯ ಎಂಬಂಥ ತುಂಟಸಾಲುಗಳನ್ನು ಕೊಟ್ಟ ಉಮಾಕಾಂತ್,  ಅವನಿವಳ ಶಿಲ್ಪಿಯಾದರೂ ನೀನವನ ಶಿಲ್ಪಿ ಅಲ್ಲವೇನು? ಎಂಬ ವಿಚಿತ್ರ ತರ್ಕದ ಸತ್ಯಕಾಮ ಶರ್ಮ, ಪ್ರೇಮ ಮತ್ತು ಫಲಿಸದ ಪ್ರೇಮದ ಮೂರ್ತಿಯಾಗಿ ಕಂಡ ವನಿತಾ ಸತೀಶ್, ಕೃಷ್ಣಮೂರ್ತಿ, ಗೋವರ್ಧನ್, ಪ್ರಾಸದಲ್ಲಿ ಬಂಧಿಸಿದ ಸರಯೂ.

She_Hairನಿತಂಬ ಸೀಳಿ ಹರಿದ ನಾಗವೇಣಿ ಎಂದು ಕರೆದ ಪ್ರೇಮಲತಾ, ಕೆ ಎಸ್ ನ ಲಯದಲ್ಲಿ ಕಟ್ಟಿಹಾಕಲು ನೋಡಿದ ಗಣಪತಿ ದಿವಾಣ, ನಿನ್ನಂಥ ರೂಪಸಿಗೆ ರೂಪವೇ ಶಾಪ ಈ ಲೋಕದಲ್ಲಿ ಎಂದು ಬುದ್ಧಿಮಾತು ಹೇಳಿ ಅವಳ ಮನಸ್ಸನ್ನೂ ಕಲ್ಲಾಗಿಸಿದ ವಿಜಯಲಕ್ಷ್ಮಿ, ನೀಳವೇಣಿಯರಿಗೆ ಕಾಲವಲ್ಲ ಇದು ಎಂದ ಪಂಪಾಪತಿ, ಜಡೆಯ ಮೋಹಿಸಿದ ಅನಂತರಮೇಶ್, ನೆಲಕ್ಕೆ ಬಿದ್ದು ಒಡೆದು ಚೂರಾದ ನಕ್ಷತ್ರದ ಅಲುಗಿನಿಂದ ಇರಿಯುವುದಿಲ್ಲ ಎನ್ನುವುದ ನಂಬುವುದು ಹೇಗೆ ಎಂದ ಸಂದೀಪ್ ಈಶಾನ್ಯ, ಜಡೆನಾಗರ ಎಂಬ ಚೆಂದದ ಪದವನ್ನು ನಾಗವೇಣಿಗೆ ಪರ್ಯಾಯವಾಗಿ ಕೊಟ್ಟ ಲಕ್ಷ್ಮಣ- ಇವರೆಲ್ಲರ ಕವಿತೆಗಳನ್ನೂ ಓದುತ್ತಾ ಹೋದ ಹಾಗೆ ಆ ಶಿಲಾಬಾಲಿಕೆಗೆ ಜೀವ ಬಂದು, ಆಕೆ ಕಾಲಾಂತರಗಳಲ್ಲಿ ಸಂಚರಿಸಿ, ರೂಪಾಂತರ ಹೊಂದಿ, ಏನೇನೋ ಆಗಿಹೋಗಿ, ಸೃಷ್ಟಿ, ವಿಕಾಸ, ಚಲನೆ, ನಿಷ್ಪನ್ನಗಳಲ್ಲಿ ತನ್ನನ್ನು ತೊಡಗಿಸಿಕೊಂಡು, ಎಲ್ಲ ಸಿದ್ಧಾಂತಗಳ ಆಭರಣದ ಥರ ಹೇರಿಕೊಂಡು, ಮತ್ತೆ ಕಲ್ಲಾಗುವ ವಿಸ್ಮಯವನ್ನು ಕಂಡೆ.

ಬಂದ ಅಷ್ಟೂ ಪದ್ಯಗಳ ಪೈಕಿ ಕರೇಕೈ ರಜನಿ ಗರುಡ ಅವರ ‘ಜಿಮ್ಮು ಯೋಗ ಮಾಡಿ ಹದದಲ್ಲಿದ್ರೆ ಚಂದ್ವಲೆ..’  ದೇಶಕಾಲಗಳ ಹಂಗಿಲ್ಲದೇ ಶಿಲಾಬಾಲಿಕೆಯನ್ನು ನೋಡುವ ವಿನೂತನ ಯತ್ನದಂತೆ ನನಗೆ ಕಂಡಿತು.

ಅವಳನ್ನು ತನ್ನೊಬ್ಬಳು ಗೆಳತಿಯೆಂದೇ ಭಾವಿಸಿ, ಏನೇ ನೀನು ಹಿಂಗಿದ್ದೀಯಲ್ಲ, ಯಾವ ಕಾಲದಲ್ಲಿದ್ದೀಯ ನೀನು ಎಂದು ಕೇಳೋ ಹಳೇ ಕ್ಲಾಸ್-ಮೇಟ್ ಥರದ ಅಪ್ರೋಚ್ ಅವರ ಪದ್ಯವನ್ನು ಹೊಸದಾಗಿಸಿದೆ, ಬೆಳಗಿಸಿದೆ. ನಿಧಾನವಾಗಿ ಅವರಿಬ್ಬರೂ ಮಿಕ್ಕ ವಿಚಾರಗಳ ಬಗ್ಗೆ, ಸುಖ-ದುಃಖದ ಬಗ್ಗೆ ಮಾತಾಡಿಕೊಳ್ಳಲಿ. ಮೊದಲು ಮಾತಾಡುವುದಂತೂ ಇದನ್ನೇ ಅಲ್ಲವೇ!

ಈ ಪದ್ಯ ಕ್ಲಿಕ್ ಆಗಿದೆ.

 

she

ಕೆರೇಕೈ ರಜನಿ ಗರುಡ 

 

ಏ ಕೂಸೆ ಹಿಂಗೆ ನಿಂತ್ರೆ | ಮುಂದೆ ಹ್ಯಾಂಗೆ ನೋಡದೆ ||

ಎಂಥ ಕಾಲ್ದಲಿದ್ಯ ನಾವು | ಚೂರು ಚಿಂತೆ ಇಲ್ಯನೆ ||

ಮಳೆ ಇಲ್ಲೆ ಈ ವರ್ಷ | ಕೆರೆ ಬಾವಿ ತುಂಬಿದ್ದಿಲ್ಲೆ ||

ಉದ್ದನ್ ಜಡೆ ಬಿಟ್ಕಂಬುಟ್ರೆ | ತಲೆ ಮೀಸದ ಹ್ಯಾಂಗಡೆ ||

ನಾಲ್ಕ್ ದಿನಕ್ಕೆ ನೀರಿಲ್ಲಿ | ಕುಡಿಯಲ್ಲಷ್ಟು ಬೇಕಲೆ ||

ಮಾರುದ್ದನ್ ಜಡೆ ಈಗ | ಬಾಚಲ್ಲಂತು ಹೊತ್ತಿಲ್ಲೆ ||

ಅಂಥಾ ವಜ್ಜೆ ಜಡೆ ಈಗಾ| ನಾಟ್ಕದವ್ಕು ಬೇಕಾಜಿಲ್ಲೆ ||

ಹಂಡೆಯಂತ ಅಂಡುಕಂಡು | ಬೆಚ್ಚಿ ಆನು ಬಿದ್ನಲೆ ||

ಜಿಮ್ಮು-ಯೋಗ ಮಾಡಿ ಸ್ವಲ್ಪ | ಹದದಲ್ಲಿದ್ರೆ ಚಂದ್ವಲೆ ||

ಬ್ರಾಂಡೆಂಡ್ ವಸ್ತ್ರದ್ ಕಾಲಾ ಇದು | ಈ ಸೈಜಿಂದ್ ಸಿಕ್ತಿಲ್ಲೆ ||

ಸಿಕ್ಸ್ ಪ್ಯಾಕ್ ಇಲ್ದೆ ಇದ್ರೆ | ಯಾರು ನಿನ್ನ ನೋಡ್ತವಿಲ್ಲೆ ||

ನಮ್ಮೂರ ಘಟ್ಟ ಹತ್ತಿ ಇಳದ್ರೆ | ಬಂದ ಮೈ ಹೋಗ್ತಲೆ ||

ತ್ವಾಟಾ ಗದ್ದೆ ತಿರಗಿದ್ರಂತು | ಬಿಪಿ ಶುಗರ್ ಬರ್ತಿಲ್ಲೆ ||

ಅಪ್ಪೆಹುಳಿ ಸುರದ್ರಂತು | ಎಂತೆಂತಾ ಆಗ್ತಿಲ್ಲೆ ||

ಕಳಲೆ-ಬಸಳೆ ತಿಂದ್ರಂತು | ದೇಸಿ ಸೊಗಡು ಹೇಳ್ತವಲೆ||

ಇಂಥಾ ಡೌಲು ಕಂಡಾಗ್ಲಾದ್ರು | ಮಕಾ ಕಾಂಬಲ್ಲಾಗ್ತಿಲ್ಲೆ ||

ಮುಂದಿನ್ಸಾರಿ ತಪ್ಸದ್ ಬ್ಯಾಡಾ | ಶಿರಸಿ ಜಾತ್ರೆಗ್ ಹೋಪದೆ |

3 Comments

  1. Sathyakama Sharma Kasaragodu
    September 26, 2016
  2. lakshmikanth itnal
    September 25, 2016
  3. Mallappa
    September 25, 2016

Add Comment

Leave a Reply