Quantcast

ಆ ಮೂವರು..

ಮುಂಬೈ- ಅಸ್ಮಿತೆಯ ಹುಡುಕಾಟದ ಯಶೋಗಾಥೆಗಳು!

raajeev narayana nayak

ರಾಜೀವ ನಾರಾಯಣ ನಾಯಕ

ಇದು ಮುಂಬಯಿಯ ವಿಶಿಷ್ಟತೆ!

ಕನಸು ಮತ್ತು ಪರಿಶ್ರಮಗಳಿದ್ದರೆ ಆಕಾಶಕ್ಕೇ ಏಣಿ ಇಡಬಹುದು. ಇಲ್ಲಿಯ ಭಾಗದೌಡ್ ಜಿಂದಗಿ ಮತ್ತು ಇಕ್ಕಟ್ಟಿನ ಸ್ಥಳಾವಕಾಶಗಳಲ್ಲಿ ಬಹುಶ: ಕನಸುಗಳೂ ಊರ್ಧ್ವಮುಖಿಯಾಗಿರುತ್ತವೇನೋ!

ಇಲ್ಲಿ “ಹೆಂಗಿದ್ದ ನಮ್ಮ ಮುತ್ತ ಹೆಂಗಾದ ” ಎನ್ನುವ ನೂರಾರು ಕತೆಗಳು ಸಿಗುತ್ತವೆ.

img-20160918-wa0013-copyಮನೆ ಬಿಟ್ಟು ಮುಂಬೈಗೆ ಬಂದು ಗಲ್ಲಿಗಳಲ್ಲಿ, ಫುಟಪಾತುಗಳಲ್ಲಿ, ಚಾಳುಗಳಲ್ಲಿ ಇದ್ದು, ಹಸಿವೆಗೆ ವಡಾಪಾವ್ ತಿಂದು, ಸಿಕ್ಕ ಕೆಲ್ಸ ಮಾಡುತ್ತಾ ಅವಕಾಶವಿದ್ದರೆ ರಾತ್ರಿಶಾಲೆಯಲ್ಲಿ ಕಲಿಯುತ್ತಾ ಬದುಕಿನಲ್ಲಿ ಏನೆಲ್ಲಾ ಸಾಧಿಸಿದವರ ಕಥಾ ಸಂಪುಟಗಳೇ ಇಲ್ಲಿವೆ!

ಮೊನ್ನೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಡಾ. ಉಪಾಧ್ಯರವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಂಥ ಮೂರು ’ದಂತಕತೆ’ ಗಳು ಸೇರಿದ್ದ ಒಂದು ಸಂದರ್ಭಕ್ಕೆ ನಾನೂ ಸಾಕ್ಷಿಯಾಗಿದ್ದೆ.

ಬಡತನದ ಕಾರಣಕ್ಕೆ ಬದುಕನ್ನರಸಿ ಚಿಕ್ಕಂದಿನಲ್ಲೆ ಮುಂಬಯಿಗೆ ಬಂದು ವಿಭಿನ್ನ ಕ್ಷೇತ್ರದಲ್ಲಿ ಉನ್ನತ ಸಾಧನೆಗೈದ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ, ರಂಗಕಲಾವಿದ ಮೋಹನ್ ಮಾರ್ನಾಡ್ ಮತ್ತು ಸೂಪರ್ ಕಾಪ್ ದಯಾ ನಾಯಕ- ಇವರೇ ಆ ಮೂವರು!

ಬಡತನ, ನೋವು,ಅವಮಾನಗಳನ್ನು ದಾಟಿ ಬದುಕನ್ನು ಸಾರ್ಥಕಗೊಳಿಸಿಕೊಂಡ ಈ ಸಾಧಕರನ್ನು ಕಂಡಾಗ ಅವರ ಬಗ್ಗೆ ಹೆಮ್ಮೆಯೆನಿಸಿತು; ಅವರ ವ್ಯಕ್ತಿತ್ವವನ್ನು ರೂಪಿಸಿದ ಆಮ್ಚಿ ಮುಂಬೈ ಬಗ್ಗೂ!

ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಮುಂಬಯಿ ಕನ್ನಡಿಗರ ಮತ್ತು ಕನ್ನಡ ಸಾರಸ್ವತ ಲೋಕದ ಪರಿಚಿತ ಹೆಸರು. ಪತ್ರಿಕಾರಂಗದಲ್ಲಿ ವಿಶಿಷ್ಟ ಸಂವೇದನೆಯಿಂದ ಬರೆಯುವ ಕೆಲವೇ ಲೇಖಕರಲ್ಲಿ ಒಬ್ಬರು. ಅಷ್ಟೇ ಸೃಜನಶೀಲ ಕಥೆಗಾರ. ಜಯಂತ ಕಾಯ್ಕಿಣಿಯವರು ತಮ್ಮ ಕತೆಗಳಲ್ಲಿ ಧಾವಂತದ ಬದುಕಿನಲ್ಲೂ ಜೀವಂತಿಕೆಯಿಂದ ಮಿಡಿಯುವ ಪಾತ್ರಗಳ ಮೂಲಕ ಕನ್ನಡಿಗರಿಗೆ ಮುಂಬಯಿಯನ್ನು ಆಪ್ತವಾಗಿಸಿದ್ದರೆ, ಜೋಕಟ್ಟೆಯವರು ತಮ್ಮ ಲೇಖನಗಳಲ್ಲಿ ಭೌತಿಕ ಆವರಣದಲ್ಲೇ ಮುಂಬಯಿಯ ಮಾನವೀಯ ಮತ್ತು ಅಮಾನವೀಯ ಮುಖಗಳ ದರ್ಶನ ಮಾಡಿಸುತ್ತಾರೆ.

ಮುಂಬಯಿಯ ಭೂಗತಲೋಕದ ಬಗ್ಗೆ ಇವರಷ್ಟು ವಾಸ್ತವದ ನೆಲಗಟ್ಟಿನಲ್ಲಿ,ಅನಾವಶ್ಯಕವಾಗಿ ರೋಚಕಗೊಳಿಸದೇ ಬರೆದ ಕನ್ನಡ ಲೇಖಕರು ತುಂಬಾ ಕಡಿಮೆ.

ಬಡತನದಿಂದ ಮುಂಬಯಿ ಸೇರಿದ ಜೋಕಟ್ಟೆಯವರು ಪ್ರಾರಂಭದಲ್ಲಿ ಹೊಟ್ಟೆಪಾಡಿಗಾಗಿ ಚಿಕ್ಕಪುಟ್ಟ ಕೆಲಸಕ್ಕೆ ಸೇರಿಕೊಂಡರೂ ಅಕ್ಷರಲೋಕದ ಸೆಳೆತದಿಂದ ಮುಂಬೈನಲ್ಲೂ ಬರೆದೇ ಬದುಕಿದವರು; ಅದೂ ಕನ್ನಡದಲ್ಲಿ! ಸ್ನೇಹಪರ ಪತ್ರಕರ್ತರಾಗಿ, ಲೇಖಕರಾಗಿ ಈ ವರೆಗೆ ೨೪ ಕೃತಿಗಳನ್ನು ರಚಿಸಿದ್ದಾರೆ!

img-20160918-wa0007ವೇದಿಕೆಯಲ್ಲಿದ್ದ ಇನ್ನೊಬ್ಬರು ತಮ್ಮ ಅಮೋಘ ಅಭಿನಯದಿಂದ ಮುಂಬಯಿ ಕನ್ನಡಿಗರನ್ನು ಮುದಗೊಳಿಸುತ್ತಿರುವ ರಂಗನಟ ಮೋಹನ್ ಮಾರ್ನಾಡ್. ಇವರೂ ಕೂಡ ಚಿಕ್ಕವರಿರುವಾಗಲೆ ಬದುಕನ್ನರಸಿ ಮುಂಬಯಿಗೆ ಬಂದವರು.

ಹೋಟೆಲುಗಳಲ್ಲಿ ಕೆಲಸ ಮಾಡುತ್ತಾ ಮಾಯಾನಗರಿಯನ್ನು ಕನಸುಕಣ್ಣುಗಳಲ್ಲಿ ಕಂಡಿರಿಸಿದವರು. ದುಡಿಮೆ ಮತ್ತು ವಿದ್ಯಾಭ್ಯಾಸಗಳ ನಡುವೆ ಸಾಂಸ್ಕೃತಿಕ ಅಭಿರುಚಿಯನ್ನೂ ಬೆಳೆಸಿಕೊಂಡವರು. ನಟನಾಗಿ ನಿರ್ದೇಶಕನಾಗಿ ಅವರಿಂದು ತುಂಬ ಎತ್ತರಕ್ಕೆ ಬೆಳೆದಿದ್ದಾರೆ. ಎಲ್ಲ ರೀತಿಯ ಪಾತ್ರಗಳಿಗೆ ಜೀವ ತುಂಬುವ ಅಭಿನಯ ಅವರಿಗೆ ಕೀರ್ತಿಯನ್ನೂ ಪ್ರಶಸ್ತಿಗಳನ್ನೂ ಅಭಿಮಾನಿಗಳನ್ನೂ ತಂದಿದೆ. ಅವರು ರಂಗ ಪ್ರವೇಶ ಮಾಡಿದರೆ ಸಾಕು, ವೇದಿಕೆಯ ಜಡ ವಸ್ತುಗಳಿಗೂ ಜೀವ ಬರುತ್ತದೆ.

ಮೋಹನ ಮಾರ್ನಾಡ್ ಒಬ್ಬ ಶ್ರೇಷ್ಠ ಕಂಠದಾನ ಕಲಾವಿದರೂ ಕೂಡ. ಮೋಹನ್ ಮಾರ್ನಾಡರನ್ನು ನೋಡದವರು, ಅವರ ಬಗ್ಗೆ ತಿಳಿಯದವರು ಇರಬಹುದು. ಆದರೆ ಅವರ ಧ್ವನಿಯನ್ನು ಕೇಳಿರದ ಕನ್ನಡಿಗರು ಇರಲಾರರು. ಟಿವಿಯಲ್ಲಿ ಬರುವ ಕನ್ನಡದ ಜಾಹೀರಾತುಗಳಲ್ಲಿಯ ಪ್ರಮುಖ ಪಾತ್ರಗಳ ಕನ್ನಡ ಧ್ವನಿ ಇವರದೇ. ತಮ್ಮ ಧ್ವನಿ ವೈವಿಧ್ಯದಲ್ಲೇ ಗ್ರಾಹಕರಿಗೆ ಚಾ ಕಾಫೀ ತಿಂಡಿಗಳನ್ನು ರುಚಿರುಚಿಯಾಗಿಸುತ್ತಿದ್ದ ಹೊಟೇಲ್ ಮಾಣಿ ಇಂದು ಖ್ಯಾತ ಡಬ್ಬಿಂಗ್ ಕಲಾವಿದ!

ಜೋಕಟ್ಟೆ ಮತ್ತು ಮಾರ್ನಾಡ್ ಇಬ್ಬರೂ ಕನ್ನಡ ನಾಡು ಬಿಟ್ಟು ಮುಂಬೈಗೆ ಬಂದರೂ ಬದುಕಿನಲ್ಲಿ ನೆಲೆ ಕಂಡುಕೊಂಡಿದ್ದು ಮತ್ತು ಸಾಧನೆಗೈದಿದ್ದು ಕನ್ನಡ ಭಾಷೆ ಮತ್ತು ನುಡಿಯಿಂದಲೇ!

ವೇದಿಕೆಯಲ್ಲಿದ್ದ ಮೂರನೆಯ ವ್ಯಕ್ತಿ ಮುಂಬೈನಲ್ಲಿ ಕನ್ನಡಿಗರ ಹೆಮ್ಮೆ ಗೌರವವನ್ನು ಹೆಚ್ಚಿಸಿದ ದಯಾ ನಾಯಕ್. ಮುಂಬೈ ಪೋಲಿಸ್ ಇಲಾಖೆಯಲ್ಲಿ ಎನಕೌಂಟರ್ ಸ್ಪೆಷಲಿಸ್ಟ್ ಆಗಿ ಭೂಗತ ಲೋಕದ ಪಾತಕಿಗಳನ್ನು ಹೊಡೆದುರುಳಿಸಿ ದಂತಕತೆಯಾದವರು ದಯಾ ನಾಯಕ್.

dayaಒಂದು ಕಾಲದಲ್ಲಿ ಮುಂಬೈನ್ನೇ ತಮ್ಮ ಹಿಡಿತದಲ್ಲಿಟ್ಟುಕೊಂಡ ಅಂಡರವರ್ಲ್ಡ್ ನ್ನು ಹತೋಟಿಗೆ ತಂದ ಶ್ರೇಯಸ್ಸು ಇವರಿಗಿದೆ. ಇವರ ಧೈರ್ಯ ಸಾಹಸಗಳ ಮೇಲೆ ಅನೇಕ ಸಿನಿಮಾಗಳು ಬಂದಿವೆ.

ಸುಮಾರು ಒಂದೂವರೆ ದಶಕದ ಹಿಂದೆ ನಾನು ಮುಂಬಯಿಗೆ ಬಂದಾಗಿನಿಂದಲೂ ಕನ್ನಡದ ಈ ಕೆಚ್ಚೆದೆಯ ಕುವರನ ಸಾಹಸಗಳನ್ನು ಕೇಳಿದ್ದ ನನಗೆ ಅವರನ್ನು ಮೀಟ್ ಮಾಡುವ ಅವಕಾಶ ಸಿಕ್ಕಿದ್ದು ಸಹಜವಾಗಿಯೇ ಖುಶಿಯಾಯ್ತು.

ಕಟ್ಟುಮಸ್ತಾದ ದೇಹ, ತೀಕ್ಷ್ಣ ಕಣ್ಣುಗಳು ಆದರೂ ನಗು ಸೂಸುವ ಮುಖ-ಇಂಥ ಆಕರ್ಷಕ ವ್ಯಕ್ತಿತ್ವವಿದ್ದರೂ ಸರಳತೆ ಮತ್ತು ಸೌಜನ್ಯತೆಯಿಂದ ಎಂಥವರ ಮನಸ್ಸನ್ನೂ ಗೆಲ್ಲುವಂತಿದ್ದರು. ಬ್ರಿಟಿಷರ ಕಾಲದ ವಿಶಿಷ್ಠ ವಾಸ್ತುಶಿಲ್ಪದ ಕಟ್ಟಡಗಳಿರುವ ನಮ್ಮ ಆಫೀಸಿನ ಸಮೀಪದಲ್ಲಿ ಕೆಲವೊಮ್ಮೆ ಸಿನಿಮಾ ಶೂಟಿಂಗುಗಳು ಆಗುತ್ತಿರುತ್ತವೆ. ಅಲ್ಲಿ ಖ್ಯಾತ ಹಿಂದಿ ನಟರೂ ಹತ್ತಿರದಿಂದ ಕಾಣಸಿಗುತ್ತಾರೆ. ತೆರೆಯ ಮೇಲೆ ಸೂಪರ್ ಹೀರೋಗಳಾಗಿ ಮಿಂಚುವ ಇವರು ನಿಜಸ್ವರೂಪದಲ್ಲಿ ಪಿಚ್ಚೆನಿಸುತ್ತಾರೆ. ಆದರೆ ದಯಾ ನಾಯಕರನ್ನು ಕಂಡಾಗ ಒಬ್ಬ ರಿಯಲ್ ಸ್ಟಾರ್ ನೋಡಿದ ಪುಳಕ ಉಂಟಾಗುತ್ತದೆ.

ಕಾರ್ಕಳದ ಎಣ್ಣೆಹೊಳೆಯಂಥ ಚಿಕ್ಕ ಹಳ್ಳಿಯಿಂದ ಬಾಲಕನಾಗಿದ್ದಾಗಲೇ ಮುಂಬೈಗೆ ಬಂದು ಅಲ್ಲಿ ಇಲ್ಲಿ ಕೆಲ್ಸಮಾಡ್ಕೊಂಡಿದ್ದು ಕನಸುಗಳನ್ನು ಕಟ್ಟಿಕೊಳ್ಳುತ್ತಾ ಇಂದು ಹಿರಿಯ ಪೋಲಿಸ್ ಅಧಿಕಾರಿಯಾಗಿದ್ದರೂ ತನ್ನ ಹುಟ್ಟಿದೂರನ್ನು ಮರೆಯದೇ ಅಲ್ಲಿ ಶಿಕ್ಷಣ ಸಂಸ್ಥೆಯನ್ನು ಅದ್ಭುತ ರೀತಿಯಲ್ಲಿ ಅಭಿವೃದ್ಧಿಗೊಳಿಸಿದ್ದಾರೆ.

ಇನ್ನೂ ಅಂಥ ಅನೇಕ ಶಾಲೆಗಳಿಗೆ ಅಗತ್ಯದ ಸೌಲಭ್ಯಗಳನ್ನು ಒದಗಿಸುವ ಯೋಚನೆ ಅವರಿಗಿದೆ. “ನಾನು ಎನಕೌಂಟರ್ ಸ್ಪೆಷಲಿಸ್ಟ್ ಎನ್ನಿಸಿಕೊಳ್ಳುವುದಕ್ಕಿಂತ ಎಜುಕೇಶನ್ ಸ್ಪೆಷಲಿಸ್ಟ್ ಎಂದು ಗುರುತಿಸಿಕೊಳ್ಳಲು ಬಯಸುತ್ತೇನೆ” ಎನ್ನುವ ಅವರ ಮಾತು ಅವರ ಬಗ್ಗೆ ಗೌರವವನ್ನು ಹೆಚ್ಚಿಸುವಂತೆ ಮಾಡಿತು.

ನಗರ ಸಂಸ್ಕ್ರತಿಯ ಎಲ್ಲ ಗುಣಾವಗುಣಗಳನ್ನು ಹೊಂದಿದ್ದರೂ ಮುಂಬೈಯೆಂಬ ಮುಂಬೈ ಕನಸುಗಳ ನಗರಿ ಎಂಬುದು ಮಾತ್ರ ನಿಜ. ಕನಸು + ಸಂಕಲ್ಪ + ಪರಿಶ್ರಮ = ಸಾಧನೆ. ಇದು ಸರ್ವತ್ರ ಅನ್ವಯಿಸಿದರೂ ಮುಂಬೈ ಈ ಸೂತ್ರದ ಅದ್ಭುತ ಪ್ರಯೋಗಶಾಲೆ. ಮುಂಬೈನಲ್ಲಿ ಅಸ್ಮಿತೆಯ ಹುಡುಕಾಟವೇ ಯಶಸ್ಸಿನ ದಾರಿಯೂ ಆಗುತ್ತದೆ! ಹೀಗಾಗಿಯೇ ಇಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಯಶೋಗಾಥೆಗಳು ಯಥೇಚ್ಛವಾಗಿವೆ.

One Response

  1. S.p.vijaya Lakshmi
    September 26, 2016

Add Comment

Leave a Reply