Quantcast

ಪರಿಧಿ           

              somashekhar-bidareಸೋಮಶೇಖರ ಬಿದರೆ      

ಸಾಯಂಕಾಲ ೫:೩೦ ಘಂಟೆ, ಆ ಕಡೆಯಿಂದ ಚಿಕ್ಕಪ್ಪ ‘ಲೇ ವಸಂತ ಮಗನೆ ಈ ಸಲ ಆದ್ರೂ ಬಂದು ಹೋಗೊ ಭಾಳ ದಿವಸ ಆಯ್ತ ನಿನ್ ನೋಡಿ ,ಆ ಬೆಂಗಳೂರ ಏನ್ ಜಾದು ಮಾಡ್ಯದೊ ಏನೊ’ ಅಂದ್ರು ಈತ ‘ ಚಿಕ್ಕಪ್ಪ ಮುಂದಿನ ಸಲ ಬರ್ತೀನಿ ಇಬ್ಬರು ಒಂದ ಕಡೆ ಕೂರೋಣಂತ’ ಅಂದ ‘ ಯಾಕೋ ಮನಸ್ಸು ಸರಿ ಇಲ್ಲ ಏನೋ?’  ‘ಹಾಗೆನಿಲ್ಲ ಚಿಕ್ಕಪ್ಪ ನಾಳೆ ನಿಮಗ ಫೋನ್ ಮಾಡ್ತಿನಿ ‘ ಎಂದವನೇ ಫೋನ್ ಕಟ್ಟ ಮಾಡಿದ.

ಚಿಕ್ಕಪ್ಪ ತುಂಬಾ ದೊಡ್ಡವರಾದ್ರೂ ವಸಂತನ ಮೇಲೆ ಅದೇನೋ ಅಕ್ಕರೆ,ಸಂಬಧದಲ್ಲಿ ತನ್ನ ಮಗನಾಗಬೇಕೆಂಬ ಹಂಗೂ ಇರದೇ ಮಹಾರಾಷ್ಟ್ರದ ಅವರ ಊರಿಗೆ ಹೋದಾಗಲೆಲ್ಲ ಊರ ಹೊರಗಿನ ತೋಟದ ಮನೆಯಲ್ಲಿ ದುಂಡು ಮೇಜಿನ ಸಭೆಗಳು ನಡೆಯುತ್ತಿದ್ದವು. ಚಿಕ್ಕಮ್ಮ ಬೈದರೂ ಬಿಡುತ್ತರಲಿಲ್ಲ, ಅವರು ಫೊನ್ ಮಾಡಿದ್ರೆ ಹತ್ತಾರು ನಿಮಿಷಗಳಾದ್ರೂ ಮಾತಾಡತ್ತಿದ್ದರು ಇವತ್ತು ಮಾತ್ರ ಹಾಗಾಗಲಿಲ್ಲ. ಬೆಳಗ್ಗೆ ಇವನ ಮೊಬೈಲ್ ಗೆ ಬಂದ ಒಂದು  ಮೆಸೆಜ್ ಇವನಲ್ಲಿ ಭಾವನೆಗಳ ಸುನಾಮಿಯನ್ನೇ ಎಬ್ಬಿಸಿತ್ತು.

she” ವಸು ಮನೆಯಲ್ಲಿ ಏನ್ ಹೇಳಿದ್ರೂ ಕೇಳ್ತಾ ಇಲ್ಲ ಹಾಗಂತ ನನಗ ಸಾಯಲಿಕ್ಕೂ ಇಷ್ಟ ಇಲ್ಲ ,I am getting engaged tomorrow sorry for everything,Take care, going to miss your love and care forever….” ಆರು ವರ್ಷಗಳ ಪ್ರೀತಿ ಕೇವಲ ೨೦-೩೦  ಶಬ್ಧಗಳಲ್ಲೇ ಮುಗಿದು ಹೋಗಿತ್ತು. ವಾಸಂತಿ ಇನ್ನು ತನ್ನವಳಲ್ಲ ಎಂಬ ಸತ್ಯವೇ ಇವನ ನರ ನಾಡಿಗಳನ್ನು ಅಲ್ಲಾಡಿಸಿಬಿಟ್ಟಿತ್ತು. ಅಪರೂಪಕ್ಕೆ ಊರಿಗೆ ಬಂದಾಗಲೇ ಹೀಗಾಗಬೇಕೆ? ಬೆಂಗ್ಳೂರಲ್ಲೇ ಇದ್ದಿದ್ದರೆ ಹೇಗೋ ಸಂಭಾಳಿಸುತ್ತಿದ್ದ, ಮಾರ್ಕೆಟನಲ್ಲಿರೊ ಮನೆಯ ಗೋಡೆಯ ಬಿರುಕನ್ನೂ,ತುಂಬು ಮನೆಯಲ್ಲಿ ಕಣ್ಣೀರನ್ನೂ ಬಚ್ಚಿಡೊದು ಹೇಗೆ? ಅವ್ವ ಎರಡೆರಡು ಬಾರಿ “ವಸು ಏನ ಆಯ್ತೊ ಆರಾಮ ಇಲ್ಲ ಏನ್”ಎಂದು ಕೇಳಿದ್ಳು      ” ಇಲ್ಲ ಬೆ ಹಂಗೆನಿಲ್ಲ ತಲೆ ನೊಯ್ತಾ ಇದೆ ಕಡಕ್ ಚಹಾ ಮಾಡು” ಎಂದ.

ನಿನ್ನೆಯಷ್ಟೇ ಫೊನ್ ಮಾಡಿ ” ನನಗೆ ಯಾರೂ ಬೇಡ ನಿನಗ ನಾ ಬೇಡ ಅಂದ್ರ ಹೇಳು ನಾ ಮದುವಿ ಆಗದ ಹಂಗ ಉಳಿತಿನಿ” ಎಂದು Engineer ಆದ ಹುಡುಗಿ ಬಾಲೀಶವಾಗಿ ಹೇಳಿದಾಗ ಇವನು ಜೋರಾಗಿ ನಕ್ಕು “ಅಷ್ಟೇನೂ ನಾಟಕ ಬ್ಯಾಡ ಬಾಯಿ ಮುಚ್ಚಿ ತಾಳೆ ಕಟ್ಟಿಸಿಕೊಂಡ್ರ ಸಾಕು” ಎಂದಾಗ ಅವಳೂ  ಜೋರಾಗಿ ನಕ್ಕಿದ್ಳು . ಅದೆಷ್ಟು  ಬೇಗ ಕಾಲ ಬದಲಾಯ್ತು,ಕೇವಲ ೨೪ ಘಂಟೆಗಳ ಅಂತರದಲ್ಲಿ ವಾಸಂತಿ ಬದಲಾಗಿ ಹೋದ್ಳಾ,ಅವಳಪ್ಪ ಏನಾದರೂ ತಾನು ಸತ್ತು ಉಳಿದವರನ್ನೂ ಸಾಯಿಸ್ತಿನಿ ಅಂತ  blackmail ಮಾಡಿದ್ನಾ, ಅಥವಾ ಇದ್ಯಾವದನ್ನೂ  ಪ್ರಶ್ನಿಸದೆ ಮನೋಸಹಜ ಭಾವನೆಗಳಂತೆ ಶ್ರೀಮಂತರ ಮನೆಯ ಸೊಸೆಯಾಗಲು ವಾಸಂತಿ ತಯಾರಾದ್ಳಾ? ಉಹುಂ ಇವನಿಗೆ ಯಾವುದೂ ತೋಚಲಿಲ್ಲ !! ಅವನಲ್ಲಾದ ತೀವ್ರ   ಉದ್ವೇಗದಿಂದಾಗಿ ಎರಡೂ ಕಾಲುಗಳು ಕಂಪಿಸತೊಡಗಿದವು.

ಆವತ್ತಿನ ರಾತ್ರಿ ವಸಂತನಿಗೆ ಹಿಂಸಾತ್ಮಕವಾಗಿತ್ತು. ಬೇಸಿಗೆಯಾದ್ದರಿಂದ ಮನೆಯ ಜಗಲಿಯ ಮೇಲೆ ಮಲಗಿದವನಿಗೆ ನಿದ್ರೆ ಬರಲೊಲ್ಲದು, ವಾಸಂತಿಯ ಜೊತೆಗೆ ಕಳೆದ ಪ್ರತಿ ಕ್ಷಣವೂ ಅವನಲ್ಲಿ ಅಚ್ಚೊತ್ತಿತ್ತು. ಇಬ್ಬರ ನಡುವಿನ ಅನಾಮತ್ತಾದ ಪ್ರೀತಿ, ಕಿಮ್ಮತ್ತು, ಬಿಟ್ಟಿರಲಾಗದ ಅನುಭೂತಿ, ನೂರಾರು ಕನಸು, ನಿದ್ರೆಯಿಲ್ಲದೆ ಬರಿ ಮಾತುಗಳಲ್ಲೇ ಮುಗಿದ ಹಲವಾರು   ರಾತ್ರಿಗಳು– ಎಲ್ಲದರ ನೆನಪುಗಳು ಇಷ್ಟು ಬೇಗ ಮನಸ್ಸಿನ Dustbin ಸೇರುತ್ತವೆ ಎಂದು ಅಂದುಕೊಂಡಿರಲಿಲ್ಲ!! ಇದೆಲ್ಲವುಗಳನ್ನೂ ಮೀರಿ ಇವರಿಬ್ಬರ ಭಾವನಾ ಲೋಕದಲ್ಲಿದ್ದ ಇಬ್ಬರೂ ಮಕ್ಕಳು ಬರಿ ಮೈಯಲ್ಲಿ ಸಿಂಬಳ ಸೋರಿಸಿಕೊಂಡು ಜೋರಾಗಿ ಅಳುತ್ತಾ ಇವನ ಮನೆಯ ಬಾಗಿಲಲ್ಲಿ ನಿಂತಂತೆ ಭಾಸವಾಗತೊಡಗಿತು, ಕುದ್ದು ಹೋದ ವಸಂತ!

ಮಧ್ಯ ರಾತ್ರಿಯ ಹೊತ್ತು ಅವಳದ್ದೇನಾದ್ರೂ ಮೆಸೆಜ್ ಬರಬಹುದೆಂದು ಅದೆಷ್ಟೋ ಬಾರಿ ಮೊಬೈಲ್ ಒತ್ತಿ ಒತ್ತಿ ನೋಡಿದ ಎಲ್ಲವೂ ಸುಳ್ಳಾಗತೊಡಗಿತು ಅವಳ ಅಸ್ತಿತ್ವವೇ ಸುಳ್ಳು ಎಂದೆನಿಸಿಕೊಂಡು ನಿಟ್ಟುಸಿರಿಟ್ಟು ಮಗ್ಗಲು ಬದಲಿಸಿದ.

ಸ್ವಲ್ಪ ಹೊತ್ತಿಗೆ ಗಾಡ ನಿದ್ರೆ, ವಿಚಿತ್ರ ಕನಸು– ಚಿಕ್ಕಪ್ಪ ಕೆಂಪು ಕುದುರೆಯನ್ನೇರಿ ಥೇಟು ಮರಾಠ ಶೈಲಿಯಲ್ಲಿ ತಲೆಗೊಂದು ಕೆಂಪು ಪೇಟ ತೊಟ್ಟು ಧೂಳೆಬ್ಬಿಸುತ್ತ ಎಷ್ಟು ವೇಗವಾಗಿ ಬಂದಿದ್ದನೆಂದರೆ ವಸಂತ ಹೆದರಿ ಬೆವತು “ಬ್ಯಾಡ ಚಿಕ್ಕಪ್ಪ ನನ್ನ ಮ್ಯಾಲ ಕುದುರಿ  ಹಾಸಬ್ಯಾಡ” ಎಂದು ಕೂಗತೊಡಗಿದ,ಇವನ ಕಿರಿಚಾಟಕ್ಕೆ ಪಕ್ಕದಲ್ಲೇ ಮಲಗಿದ್ದ ಅಪ್ಪ ಎಚ್ಚೆತ್ತು “ಲೇ ವಸಂತ್ಯಾ ಏನಾರ ಬಡಬಡಸ್ತಿದಿ ಎದ್ದ ನೀರ್ ಕುಡದ ಮಲ್ಕೊ ಸಿನಿಮ ನೊಡೊದ ಕಡಿಮಿ ಮಾಡ ಮಗನ” ಎಂದ್ಹೇಳಿ ಮಗ್ಗಲು ಬದಲಿಸಿದರು.ಇವನಿಗೆ ಮತ್ತದೇ ಸಂಕಟ , ಯಾಕ ಚಿಕ್ಕಪ್ಪ ಕನಿಸಿನ್ಯಾಗ ಬಂದ,ಬೆಟ್ಟಿ ಆಗಲಿಲ್ಲ ಅಂತ ಸಿಟ್ಟ ಮಾಡಿಕೊಂಡಿರಬೇಕು ನಾಳೆ ಫೊನ್ ಮಾಡಿದರಾಯ್ತ ಎಂದು ಕಣ್ಮುಚ್ಚಿದ.

ಬೆಳಗ್ಗೆ ೫:೩೦ ಘಂಟೆ ಈತನ ಫೊನ್ ರಿಂಗಿಸಲಾರಂಬಿಸಿತು, ಕನಸಲ್ಲೇನೋ ಬಾರಿಸಿದಂತಾಗಿ ಇವನು ಮತ್ತೂ ನಿದ್ರೆಗೆ ಜಾರುವವನಿದ್ದ ಅಷ್ಟರಲ್ಲಿ ಅಪ್ಪ “ಲೇ ವಸಂತ್ಯಾ ಫೊನ್ ಬಂದದ ನೋಡೊ ನಿನಗ ಬೆಳಿಗ್ಗೆ ಬೆಳಿಗ್ಗೆ ಯಾರ ಮಾಡಿದಾರ ನೋಡ” ಅಂದ್ರು, ಯಾರದ್ದೆಂದು ನೋಡಿದ್ರೆ ಚಿಕ್ಕಪ್ಪನ ನಂಬರ್ ಕಾಣಿಸ್ತಿದೆ “ಹಲೋ ಚಿಕ್ಕಪ್ಪ ಹೇಳ್ರಿ” ಎಂದ,ಆ ಕಡೆಯಿಂದ ಚಿಕ್ಕಮ್ಮ “ವಸು ನಿಮ್ಮ ಚಿಕ್ಕಪ್ಪ ಹೊದ್ರೋ ನನ್ನ ಮಗನ, ರಾತ್ರಿ heart (attack) ಆಯ್ತು, ಬೆಳಗಿನ ತನಕ ಕಾಯ್ದು ಎಲ್ಲರಿಗೂ ಹೇಳಬೇಕಂತ ಈಗ ಫೋನ್ ಮಾಡಿದಿನಿ” ಅಂದವಳೇ ಇನ್ನೂ ಜೋರಾಗಿ ಅಳತೊಡಗಿದಳು,ಇವನು ಹಾಂ ಅಂದವನೇ ಫೋನ್ ಕೆಳಗಿಟ್ಟ. “ಏನ್ ಅಯ್ತೋ?” ಎಂದರು ಅಪ್ಪ, “ಚಿಕ್ಕಪ್ಪ ತೀರಕೊಂಡ್ರಂತ” ಎಂದನಷ್ಟೇ ಆಗಲೇ ಇಡಿ ಮನೆ ಎಚ್ಚೆತ್ತು ಬಿಟ್ಟಿತ್ತು,ಅವ್ವ ಅಂತೂ ಜೋರಾಗಿ ಹಲುಬತೊಡಗಿದಳು ‘ ನನ್ನ ತಂಗಿ ಅನಾಥ ಆದ್ಳು’ ಎಂದು ಇನ್ನೂ ಜೊರಾಗಿ ಅಳತೊಡಗಿದಳು, ಅಪ್ಪ ದಬಾಯಿಸಿದ ಸುಮ್ಮನಾದ್ಳು, ಇವನಿಗೆ ಮಾತ್ರ ಕಣ್ಣೀರು ಬರಲೇ ಇಲ್ಲ. ಕೂಡಲೇ ಒಂದು ಕಾರು ಅನುಕೂಲ ಮಾಡಿ ಎಲ್ಲರೂ ಹೊರಟ್ರು ಹಿಂದೆ ಕೂತಿದ್ದ ಈತನಿಗೆ ರಾತ್ರಿಯ ಕನಸು,ನಿನ್ನೆಯ ಚಿಕ್ಕಪ್ಪನ ಫೋನು ಎಲ್ಲವೂ ಕಣ್ಣ್ಮುಂದೆ ಬಂದು  ತೀವ್ರವಾಗಿ ವಿಚಲಿತಗೊಂಡ. ಆಗಷ್ಟೇ ಬೆಳಗಿನ ಸೂರ್ಯ ಕಣ್ಣು ಬಿಡುತ್ತಿದ್ದ ,ಹಳ್ಳಿಯ ಪ್ರತಿ ಒಲೆಗಳು ಉಸಿರಾಟ ಆರಂಭಿಸಿದ್ದವು, ಯಾರಾರ ಕನಸುಗಳು,ತೆವಲುಗಳು ಏನೇನೋ… ವಾಸಂತಿ ನೆನಪಾಗತೊಡಗಿದಳು ಬಹುಶಃ ತನ್ನ ಜೀವಮಾನದ ಅತ್ಯಂತ ಶುಭ ಘಳಿಗೆ ಎಂಬಂತೆ ಹಾಸಿಗೆಯಿಂದ ಎದ್ದಿರಬಹುದು,  ತನ್ನನ್ನು ಮಾತ್ರ ಆ ಸೂರ್ಯ ಈ ದಿನ ಸಾವಿನ ಮನೆಗೆ ಕರೆದೊಯ್ಯುತ್ತಿದ್ದ!!ಇದೆಂತಹ ಘಳಿಗೆಯೆಂದು ನಿಡುಸುಯ್ದ.

he1ಸಂಕೇಶ್ವರ ಮುಟ್ಟಿರಬಹುದು, ಅಷ್ಟರಲ್ಲಿ ರಸ್ತೆ ಬದಿಯ ATM ಪಾಸ್ ಆಯ್ತು . “ಗಾಡಿ ನಿಲ್ಸಪಾ” ಎಂದು ಕಿರುಚಿದ, ಅಪ್ಪ ” ಏನ್ ಆಯ್ತಲೇ” ಎಂದು ಕೇಳಿದ್ರೂ ಅವರಿಗೆ ಉತ್ತರಿಸುವ ಇರಾದೆಯಿರದೆ ಗಬಕ್ಕನೇ ಇಳಿದವನೇ ATM ದಿಂದ ೫೦೦೦ ರೂಪಾಯಿ ತೆಗೆದು ಜೇಬಿಗೆ ಇಳಿಸಿ “ಹೊಡಿರಿ ಗಾಡಿ” ಎಂದ. ಇವನ ಈ ರೀತಿಯ ನಡತೆ ಯಾರಿಗೂ ಅರ್ಥವಾಗಲಿಲ್ಲ.

ಮನೆಯ ಪಡಸಾಲೆಯಲ್ಲಿ ಚಿಕ್ಕಪ್ಪನ ಶವ ಕುಳ್ಳಿರಿಸಿದ್ದರು,ಹಣೆಯ ಮೇಲೆ ದೊಡ್ಡದಾದ ವಿಭೂತಿ, ಬಗಲಲ್ಲಿ ಜೋತಾಡುತ್ತಿದ್ದ ಲಿಂಗ,ತಲೆಯ ಮೇಲೆ ರಾತ್ರಿಯ ಕನಸಲ್ಲಿ ಕಂಡಂತಹ ಕೆಂಪು ಪೇಟ,ಬದುಕಿದ್ದಾಗ ಯಾವ ದೇವರಿಗೂ ಕೈ ಮುಗಿದವನಲ್ಲ ವಿಭೂತಿ, ಲಿಂಗಗಳಂತೂ ದೂರದ ಮಾತು ಈಗ ಹೆಂಡತಿ, ಮೂರು ಮಕ್ಕಳನ್ನು ತ್ಯಜಿಸಿ ತನ್ನ ಪಯಣ ಮುಗಿಸಿದ್ದ ಇವೆಲ್ಲದರುವುಗಳ ನಡುವೆ ಉಹುಂ ವಸಂತನಿಗೆ ಕಣ್ಣೀರು ಬರಲೊಲ್ಲದು.

ಇಬ್ಬರೂ ತಮ್ಮಂದಿರು,ತಂಗಿ ಹೆಗಲಿಗೆ ಬಿದ್ದು “ಅಣ್ಣಾsss” ಎಂದಾಗ ಮಾತ್ರ ಕಣ್ಣೀರು ಕಟ್ಟೆಯೊಡೆದಿತ್ತು. ಹೊರಬಂದವನೇ ಕಣ್ಣೀರು ಒರೆಸಿ ಮುಂದಿನದು ಯಾವ ಕಾರ್ಯ ಎಂದು ಅಪ್ಪನ ಕೇಳಿದ ‘ಅದೆಲ್ಲಾ ಮಾಡಾಕ ಹಿರಿಯರಿದ್ದಾರ ನೀ ಏನ ಮಾಡಬ್ಯಾಡ ಸುಮ್ಮಗ ಕೂತ್ಕೊ” ಅಂದ್ರೂ ಇವನ ಮನಸ್ಸು ತಡೆಯಲಾಗಲಿಲ್ಲ. ಚಿಕ್ಕಪ್ಪ ಕಳೆದೆರಡು ವರುಷಗಳಲ್ಲಿ ದಿವಾಳಿಯಾಗಿದ್ದ, ಹೊಲದಲ್ಲಿದ್ದ ಯಾವ ಪೈರೂ ಕೈಗೆ ಬರಲಿಲ್ಲ, ಅದರ ನಡುವೆ  ಕುಡಿತದ ಚಟ ಎಲ್ಲೆ ಮೀರಿ ಅರ್ಧ ಎಕರೆ ಹೊಲವನ್ನೂ ನುಂಗಿಬಿಟ್ಟಿತ್ತು,ರಕ್ತ ಹಂಚಿಕೊಂಡು ಬೆಳೆದ ಅಣ್ಣ ತಮ್ಮಂದಿರೇ ಅವನನ್ನು ಮೂದಲಿಸತೊಡಗಿದರು ಇವೆಲ್ಲ ವಿಷಯಗಳನ್ನು ಚಿಕ್ಕಪ್ಪ ದುಂಡು ಮೇಜಿನ ಸಭೆಯಲ್ಲಿ ಬಾಯಿ ಬಿಟ್ಟಿದ್ದ. ಮನಸ್ಸು ತಡೆಯಲಾಗದೆ ಎದ್ದು, ಮುಂದಿನ ವಾರ  ತನ್ನ ಮಗಳ ಮದುವೆ ಮಾಡಲು ತಯಾರಾಗಿದ್ದ ಚಿಕ್ಕಪ್ಪನ ಅಣ್ಣನೊಬ್ಬನನ್ನು “ಗೋರಿ ತಗ್ಯಾಕ ಯಾರಾರ ಮಂದಿ ಅದಾರೋ ಅಥವಾ ನಾವು ಹೋಗಬೇಕೋ” ಎಂದಾಗ ಆತ ” ನೀನ ಹೋಗಿ ನೋಡಪಾ ನಿನಗ ಭಾಳ ಬೇಕಾಗಿದ್ದವ ಆಗಿದ್ದಲ್ಲ ನಿಮ್ಮ ಚಿಕ್ಕಪ್ಪ, ಈಗ ನೋಡ ಒಳ್ಳೆ ಶುಭಕಾರ್ಯ ನಡೆಯುವಾಗನ ಸತ್ತ ಹೋದ ಇದ್ದಾಗೂ ಯಾರಿಗೂ ಸುಖ ಮಾಡಲಿಲ್ಲ ಹೋದಾಗಲೂ ಇಲ್ಲ” ಎಂದುಬಿಟ್ಟ. ವಸಂತನ ಕೋಪ ನೆತ್ತಿಗೇರಿ ಕಂಪಿಸತೊಡಗಿದ ಅಲ್ಲೇ ಅವನ ಎಳೆದು ಎರಡು ಬಿಡಬೇಕೆಂದುಕೊಂಡ ಆದರೂ ತಾಳಿ ಯಾರನ್ನೋ ಕೇಳುತ್ತಾ ಸ್ಮಶಾನದ ಹಾದಿ ಹಿಡಿದ.

ಅಲ್ಲಿ ನೋಡಿದರೆ ಯಾರೋ ನಾಲ್ಕು ಜನ ನರಪೇತಲಗಳು ಬೆಳಂಬೆಳಗ್ಗೆ ಕುಡಿದು ಬಂದು ಒಂದು ಆಕಳು ಕರುವನ್ನು ಮಣ್ಣು ಮಾಡವಷ್ಟು ತಗ್ಗು  ಮಾಡಿ  “ಇದರೊಳಗೆ ಮಣ್ಣ ಮಾಡ್ರಿ ನೆಲ ಭಾಳ ಬಿರಸ ಅದ ಮುಂದ ತಗ್ಯಾಕ ನಮಗೆ  ಆಗೊದಿಲ್ಲ ” ಅಂದ್ರು.ವಸಂತನ ಕೋಪ ಇನ್ನೂ ತನ್ನಗಾಗಿರಲಿಲ್ಲ ಅವರಲ್ಲೊಬ್ಬನ ಕಾಲರ್ ಹಿಡಿದು ರಪ ರಪ ಅಂತ ಮುಖ ಮಸುಡಿ  ನೋಡದೆ ಬಾರಿಸತೊಡಗಿದ,ಇನ್ನುಳಿದ ಮೂವರು ವಸಂತನ ಕಾಲರ್ಗೆ ಕೈ ಹಾಕಿ “ನಿನ್ನ ಬಿಡುದಿಲ್ಲ ಮಗನ ನಮ್ಮ ಊರಿಗೆ ಬಂದು ನಮ್ಮ ಮಂದಿನ ಬಡಿತಿ ಸರಿ ಆಗೊದಿಲ್ಲ ನೋಡು” ಎಂದು ಕೈ ಕೈ ಮಿಲಾಯಿಸುವಷ್ಟರಲ್ಲಿ ಅಲ್ಲಿದ್ದ ಕೆಲ ಸಂಭದಿಕರು ಬಂದು ಜಗಳ ಬಿಡಿಸಿದ್ರು. ಮ್ಲಾನಗೊಂಡ ವಸಂತ!! ಹಲವಾರು ದಾಸರ,ಶರಣರ,ಸಾಹಿತಿಕಾರರ ಸಾಹಿತ್ಯವನ್ನೆಲ್ಲಾ ಓದಿಕೊಂಡವನ ತಲೆಯಲ್ಲಿ ಹಲವಾರು ವಿಚಾರಗಳು ಫಿರ್ಕಿ ಹೊಡೆಯಲಾರಂಭಿಸಿದವು.   ಬೆಳಗ್ಗೆ ಯಿಂದ ಒಂದು ಹನಿ ನೀರೂ ಹೊಟ್ಟೆಗೆ ಬಿದ್ದರಲಿಲ್ಲ ಹಾಗಂತ ಕಣ್ಣೀರೂ ಹರಿಯಲಿಲ್ಲ. ಜಗಳಾಡಿದವರೆಲ್ಲಾ ಗುದ್ದಲಿ,ಪಿಕಾಸಿ ಹಿಡಿದು ಬೈಯ್ಕೊಂಡು ಹೊರಟು ಹೋದರು ಅಲ್ಲಿದ್ದ ಕೆಲವರು ಇವನದ್ದೇ ತಪ್ಪು ಎನ್ನುವಂತೆ ಮಾತಾಡತೊಡಗಿದರು, ಸಂಬದಿಕನೊಬ್ಬನ ಬೈಕ್ ಹತ್ತಿ JCB ಹುಡುಕಲು ಹೊರಟ  ಒಂದಿಬ್ಬರು ಗೋರಿ ತೆಗೆಯಲು ಸುತಾರಾಂ ಒಪ್ಪಲಿಲ್ಲ ಕೊನೆಗೆ  ಮೂರನೆಯವನಿಗೆ ” ದೋಸ್ತ ನಾಳೆ ನೀ ಆದರೂ ನಾ ಅದ್ರೂ ಸತ್ರ ಈ JCBನ ಗತಿ ಇಲ್ಲ ಅನಬ್ಯಾಡ ದಯವಿಟ್ಟು ಬಾ” ಎಂದ. ಅವನು ಒಪ್ಪಿ ಬಂದ,15-20 ನಿಮಿಷದಲ್ಲಿ ಗೋರಿ ತಯಾರಾಯ್ತು,ಯಾರಿಗೂ ಕಾಣದ ಹಾಗೆ JCB ಯವನ ಕಿಸೆಯಲ್ಲಿ ಐದನೂರರ ನೋಟು ಇಳಿಸಿದ್ದ .

ತಿರುಗಿ ಮನೆಗೆ ಬಂದರೆ ಇನ್ನೂ ಯಾವುದೇ ಕಾರ್ಯಗಳು ಆಗದೇ ಇದ್ದುದನ್ನು ನೋಡಿ ಸೀದಾ ಚಿಕ್ಕಪ್ಪನ ಸಂಬಂಧಿಕರೆಡೆಗೆ ಹೋದ,ಮದುವೆ ಮನೆಯ ಹಂದರದಲ್ಲಿ ನಿಂತ ಸಂಬಧಗಳಿಗೆ ಸಾವಿನ ಮನೆಯ  ದುಃಖ ಇರಲಿಲ್ಲ ಯಾರಿಗೂ ಈ ವಿಷಯಗಳಲ್ಲಿ   ಆಸಕ್ತಿ ಇರದುದನ್ನು ನೋಡಿ ಈತ ಇನ್ನೂ ಮ್ಲಾನಗೊಂಡ. ಅಷ್ಟರಲ್ಲೇ ಊರ ಸ್ವಾಮಿಗಳು ಬಂದು ಇಲ್ಲಿರೋ  ಪರಿಸ್ಥಿತಿ  ನೋಡಿ ಕೂಗಾಡತೊಡಗಿದರು,ವಸಂತ ಅವರ ಹತ್ರ ಹೋಗಿ ಕಿವಿಯಲ್ಲೇನೋ ಉಸುರಿದ ಅವರು ಸಮಾಧಾನವಾದರು. ಏನೆನ್ ಬೇಕೋ ಎಲ್ಲದರ ಪಟ್ಟಿಯನ್ನು ಸ್ವಾಮಿಗಳಿಂದ ತೆಗೆದುಕೊಂಡು ಬೈಕ್ ಹತ್ತಿ ಪೇಟೆಗೆ ಹೋಗಿ ಎಲ್ಲವನ್ನೂ ತಂದಿಟ್ಟ. ಇನ್ನೊಂದು ಘಂಟೆಯಲ್ಲಿ ಎಲ್ಲಾ ರೀತಿಯ ತಯಾರಿಯೂ ಮುಗಿದಿತ್ತು,ಬೆಳಗ್ಗೆ ತಂದ ದುಡ್ಡು ನಿಧಾನವಾಗಿ ತನ್ನ ಮಾನ  ಉಳಿಸತೊಡಗಿತ್ತು ಚಿಕ್ಕಪ್ಪನ ಋಣ ತುಂಬಾ ದೊಡ್ಡದೆಂದುಕೊಂಡ.

ಶವದ ಮೆರವಣಿಗೆಯ ಮುಂಚೂಣಿಯಲ್ಲಿ ತಾನೇ ನಿಂತ ,ರಾತ್ರಿಯಿಂದ ಅತ್ತು ಅತ್ತು ಹೈರಾಣಾಗಿದ್ದ ಚಿಕ್ಕಮ್ಮನ ಧ್ವನಿ ವಿಕಾರವಾಗಿತ್ತು. ಏನೂ ಅರಿಯದ ತನ್ನ ತಮ್ಮನ ಕೈಯಲ್ಲಿದ್ದ ಬೆಂಕಿಯನ್ನು ಆವಾಗವಾಗ ತನ್ನ ಕೈಗೆ ತೆಗೆದುಕೊಳ್ಳುತ್ತಿದ್ದ. ಇದೆಲ್ಲದರ ನಡುವೆ ವಾಸಂತಿಯ ನೆನಪಾಗದೇ ಇರಲಿಲ್ಲ. ಅಲ್ಲಿ ಅವಳು ಬಹುಶಃ ಬಂಗಾರದ ಬಹುದೊಡ್ಡ ಉಂಗುರ ತೊಟ್ಟು ಬೀಗುತ್ತ ಹೊಸ ಹುಡುಗನ ಜೊತೆಗೆ photoshoot ನಡೆಸುತ್ತಿದ್ದರೆ ತಾನು ಚಿಕ್ಕಪ್ಪನ ಕೊನೆಯ ಯಾತ್ರೆಯ ಬೆಂಕಿಯನ್ನು ಹಿಡಿದುಕೊಂಡಿದ್ದ,ಎಲ್ಲವನ್ನೂ ನೆನೆಸಿ  ಒಮ್ಮೆ  ಮುಗುಳ್ನಕ್ಕ!!

ಈಕಡೆ ಮಣ್ಣಿನ ಕಾರ್ಯಗಳು ಭರದಿಂದ ಸಾಗತೊಡಗಿದವು ಸ್ವಾಮಿಗಳು ಬಸವಣ್ಣನವರ ವಚನ ಹೇಳಿ ” ನಿನ್ನ ಜಾತ್ರೆ ಮುಗಿಸಿದಿ ಶರಣ, ನಿನ್ನ ಯಾತ್ರೆ ಮುಗಿಸಿದಿ ಶರಣ ” ಎನ್ನುವಾಗ ಚಿಕ್ಕಮ್ಮನ ಆಕ್ರಂದನ ಮುಗಿಲು ಮುಟ್ಟಿತ್ತು. ಎಲ್ಲಾ ಪದ್ಧತಿಗಳು ಮುಗಿದ ಮೇಲೆ ಸ್ವಾಮಿಗಳು “ತಿಥಿ ಯಾವತ್ತ ಮಾಡತಿರಿ” ಎಂದಾಗ ಚಿಕ್ಕಪ್ಪನ ತಮ್ಮ ನೊಬ್ಬ ” ಸ್ವಾಮಿಗೊಳ ಈ ವಾರದಾಗ ನಮ್ಮ ಮನಿ ಒಳಗ ಲಗ್ನ ಅದ ಅದಕ್ಕೆ ಇವತ್ತನ ಮಾಡಿ ಬಿಡ್ರಿ, ಮುಂದ ಹಾಕಿದ್ರ ಸರಿ ಆಗೊದಿಲ್ಲ ಏನ್ ಇದ್ರೂ ಇವತ್ತ ಅವನ ಕಾರ್ಯ ಎಲ್ಲಾ ಮುಗಿಸಿ ಬಿಡ್ರಿ” ಎಂದದಕ್ಕೆ ಉಳಿದ ಸಂಬಂಧಿಕರೆಲ್ಲರೂ ಧ್ವನಿಗೂಡಿಸಿದ್ರು!! ಆದ್ರ ವಸಂತ ಮಾತ್ರ ಎದ್ದು ನಿಂತು “೨೪ ತಾಸ ಹಿಂದ ನನ್ನ ಜೊತೆ ಮಾತಾಡಿದವನ ತಿಥಿ ಊಟ ಇವತ್ತನ ಮಾಡಾಕ ನನಗ ಆಗೋದಿಲ್ಲ ಪದ್ಧತಿ ಪ್ರಕಾರ ಮೂರ ದಿವಸಕ್ಕ ಮಾಡ್ರಿ “ಎಂದು ಬೇಡಿದ,ಅದಕ್ಕೆ ಚಿಕ್ಕಪ್ಪನ ತಮ್ಮ ” ನಿನಗ ಆಗೋದಿಲ್ಲ ಅಂದ್ರ ನೀ ಹೋಗಿ ಬಿಡ ಸತ್ತಾಂವ ನಮ ಅಣ್ಣ ಏನ ಮಾಡಬೆಕ ಅನ್ನೋದ ನಮಗೆ ಗೊತ್ತದ” ಎಂದುದಕ್ಕೆ “ಇಗ ಅದ್ರು ಸಂಬಂಧ ಹೊತ್ತ ಆಯ್ತಲ್ಲ ಅಷ್ಟು ಸಾಕು” ಎಂದವನೆ ಅಲ್ಲಿಂದ ಮೇಲೆದ್ದ.

heಮೊದಲ ಬಾರಿಗೆ ಈ ಪರಪಂಚ ತನ್ನ ನಿಜವಾದ ಕರಾಳ ಮುಖವನ್ನೊಮ್ಮೆ ಇವನಿಗೆ ತೊರಿಸಿ ವಿಚಿತ್ರವಾಗಿ ಕುಣಿದಾಡತೊಡಗಿತ್ತು. ರಕ್ತ ಸಂಬಂಧಗಳೆಂಬ ಬರಿದಾದ ತೊಗಲಿನ ಚೀಲಗಳು ಹರಿದು  ಹೋಗುತ್ತಿರುವ ಹಗ್ಗದ ಮೇಲೆ ಜೋತಾಡುತ್ತಿದ್ದವು!! ಒಂದು ಕಡೆ ಅನ್ನ ಸಾರು ಬೇಯತೊಡಗಿದವು,ಬೇಕರಿಯಿಂದ ಬಾಯಿ ಸಿಹಿ  ಮಾಡಲಿಕ್ಕೆ ಜಲೆಬಿಯನ್ನೂ ತರಿಸಲಾಯ್ತು,ತನ್ನ ಇಬ್ಬರೂ ತಮ್ಮಂದಿರನ್ನು ಹಿಡಿದುಕೊಂಡು ವಸಂತ ಒಂದು ಕಡೆಗೆ ಕುಳಿತುಬಿಟ್ಟ.

ಸ್ವಲ್ಪ ಸಮಯದ ನಂತರ ಗೋರಿಯ ಹತ್ತಿರ ಎಲ್ಲರೂ ಜಮಾವಣೆಗೊಂಡರು,ಯಥಾವತ್ತಾಗಿ ಸ್ವಾಮಿಗಳ ಮಂತ್ರೋಚ್ಚಾರಣೆ ನಡೆಯತೊಡಗಿತು. “ಈಗ ಎಲ್ಲಾರು ಬಂದು ಕಾಗಿಗೆ ಎಡಿ ಇಡ್ರಿಪಾ” ಎಂದು ದೂರ ಸರಿದರು. ಎಲ್ಲ್ರೂ ತಂದಿದ್ದ Biscuit, mixture,ಜಿಲೆಬಿಗಳನ್ನು ಇಟ್ಟು ದೂರ ಸರಿದರು,ಒಂದೇ ಒಂದು ಕಾಗೆಯೂ ಹತ್ತಿರ ಬರಲೊಲ್ಲದು ಹೆಂಡತಿ, ಮಕ್ಕಳೆಲ್ಲಾ ಸೇರಿ ಮೂರು ಬಾರಿ ಕೈ ಮುಗಿದರೂ ಏನೂ ಪ್ರಯೋಜನವಾಗಲಿಲ್ಲ. ಅಷ್ಟೊರೊಳಗೆ ಸ್ವಾಮಿಗಳು “ಏ ತಮ್ಮ ನೀನ” ಎಂದು ವಸಂತನ ಕಡೆ ತಿರುಗಿ “ಆ ಮೂರು ಮಕ್ಕಳನ್ನು ಹಿಡಕೊಂಡ ಬಂದ ಇವರನ್ನು ನಾ ನೋಡಕೊಂತಿನಿ ಅಂತ್ಹೇಳಿ ಕೈ ಮುಗಿ ಕಾಗೆ ತಾನ ಮುಟ್ಟತೈತಿ” ಅಂದ್ರು.ಇವನು ಹಾಗೆ ಮಾಡಿದ್ದೇ ತಡ ಕಾಗೆಗಳ ಗುಂಪು ನೋಡನೋಡುತ್ತಿದ್ದಂತೆಯೇ ಎಲ್ಲವನ್ನೂ ಖಾಲಿ ಮಾಡಿದವು.  ಸ್ವಾಮಿಗಳು ಕೊನೆಯ ಮಂತ್ರೋಚ್ಚಾರಣೆ ಶುರು ಮಾಡಿದರು, ಈ ಕಡೆಯ ಓಂ ಸ್ವಾಹಾ ಗಳೂ, ವಾಸಂತಿಯ ಮನೆಯ ಪುರೋಹಿತನ ಓಂ  ಸ್ವಾಹಾಗಳೊ ಒಂದೆಡೆ ಅವನ ಚಿಕ್ಕಪ್ಪನ,ಇನ್ನೊಂದೆಡೆ ಅವನ ಅಮೋಘ ಪ್ರೀತಿಯ ತಿಥಿಯನ್ನು ಮುಗಿಸತೊಡಗಿದವು. ಚಿಕ್ಕಪ್ಪನ ಜೊತೆಗೆ ತನ್ನ   ಪ್ರೀತಿಯನ್ನೂ ಮಣ್ಣು ಮಾಡಿದ್ದು ವಸಂತನ ಅರಿವಿಗೆ ಬರಲೇ ಇಲ್ಲ, ಒಂದು  ತೊಟ್ಟು ಕಣ್ಣೀರು ಸುರಿಸಲಿಲ್ಲ!!

ಎರಡು ದಿನಗಳ ನಂತರ ವಾಪಸು ಬೆಂಗಳೂರಿಗೆ ಹೊರಡುವ ಬಸ್ಸು ಹತ್ತಿದ,ಬೆಳಗಾವಿ, ಹುಬ್ಬಳ್ಳಿಯ Highway ಪ್ರತಿ ಡ್ರೈವರನ ಸ್ವರ್ಗ, ಬಸ್ಸು ತನ್ನ ವೇಗ ಹೆಚ್ಚಿಸತೊಡಗಿತು,ಹತ್ತಾರು ಸೀಟ್ ಬಿಟ್ಟರೆ ಬಸ್ಸು ಖಾಲಿ ಖಾಲಿ. ಹಾಡಾದ್ರೂ ಕೇಳೋಣವೆಂದು ಕಿವಿಗೆ Earphones ಹಾಕಿ ಹಾಗೆಯೇ ಹೊರಗೆ ದ್ರಷ್ಟಿ ಹಾಯಿಸಿದ,ಹಾಡಿನ ಅಮಲೋ,ಅಥವಾ ಇದುವರೆಗೂ ಕಟ್ಟಿಟ್ಟಿದ್ದ ಕಣ್ಣೀರ ಕಟ್ಟೇಯೋ ಗೊತ್ತಿಲ್ಲ ಧಾರಾಕಾರವಾಗಿ ಕಣ್ಣೀರು ಸುರಿಯತೊಡಗಿತು- ಹಲವಾರು ಧಾರ್ಮಿಕ ಗ್ರಂಥಗಳಿಂದ ಪ್ರಭಾವಿತನಾಗಿ ತನ್ನ ಬಾಳಿಗೆ ಇಂತಿಷ್ಟೇ ಎಂದು ಗುರುತು ಹಾಕಿಕೊಂಡ ಪರಿಧಿಯು ಸಮಾಜದ ಡೊಂಗಿ ಮುಖವಾಡಕ್ಕೆ, ಕಹಿ ಸತ್ಯಕ್ಕೆ ಹೆದರಿ ಛಿದ್ರ ಛಿದ್ರಗೊಂಡಿತ್ತು. ಒಂದು ಕ್ಷಣವೂ ಬಿಟ್ಟಿರದಿದ್ದ  ಪ್ರೀತಿ ಸತ್ತು ಬರೊಬ್ಬರಿ ೪೮ಘಂಟೆಗಳೇ ಮುಗಿದಿದ್ದವು. ಬಿಕ್ಕಿ ಬಿಕ್ಕಿ ಅಳತೊಡಗಿದ,ಅತ್ತಿದ್ದು ಕೇಳಿಸಬಾರದೆಂದು ಬಾಯಿಗೆ ಕರ್ಚೀಪ್ ಹಾಕಿ ಇನ್ನೂ ಅಳತೊಡಗಿದ,ಹುಬ್ಬಳ್ಳಿಯವರಿಗೂ ಕಣ್ಣೀರ ಕೋಡಿ ನಿಲ್ಲಲೇ ಇಲ್ಲ. ಅಲ್ಲೇ ಬಸ್ಟ್ಯಾಂಡಲ್ಲಿ  ಮುಖ ತೊಳೆದು ಯಾವ ಜನ್ಮದ ಹಸಿವೋ ಎಂಬಂತೆ ರಾತ್ರಿ ೧೧ಘಂಟೆಯಲ್ಲಿ ಗಬಗಬ ಊಟ ಮಾಡಿದ ಮನಸ್ಸು ಹಗುರಾಗತೊಡಗಿತು. “ನಾನಾರೆಂಬುದು ನಾನಲ್ಲ ಈ ಮಾನುಷ ಜನುಮವು ನಾನಲ್ಲ” ಎಂಬ ಸಂತರ ಹಾಡು ಕೇಳುತ್ತಾ ಪ್ರಯಾಣ ಮುಂದುವರೆಸಿದ.

ಬೆಳಗ್ಗೆ ಬೆಂಗಳೂರಿಗೆ ಬಂದಿಳಿದವನೇ ತನ್ನ ವಿಚಿತ್ರವಾದ ತಲೆಯಲ್ಲಿ ಏನೋ ಯೋಚಿಸತೊಡಗಿದ– ಮಣ್ಣು ಮಾಡಿದ ಚಿಕ್ಕಪ್ಪ ಚೂರ್ ಚೂರೇ ಮಣ್ಣು ಪಾಲಾಗುತ್ತಾನೆ  ಆದ್ರೆ ಮಣ್ಣು ಮಾಡಿದ ಪ್ರೀತಿ? ಒಂದು ವಿಕಾರವಾದ ನಗೆ ನಕ್ಕು ಮೆಜೆಸ್ಟಿಕ್ಕಿನ ಜನಸಾಗರದಲ್ಲಿ ಮುಳುಗಿಹೋದ!!!!

Add Comment

Leave a Reply