Quantcast

ಈ ಚಿಟ್ಟೆ ಕವಿತೆಗಳ ಸಾಕ್ಷಿ..

ಜಿ ಎನ್ ಮೋಹನ್

ವಿನಯಾ ಒಕ್ಕುಂದರಿಗೆ ಡಾ ನರಹಳ್ಳಿ ಪ್ರಶಸ್ತಿ ಬಂದ ಸಂದರ್ಭ. ಮೊನ್ನೆ ಆ ಪ್ರಶಸ್ತಿ ನೀಡುವ ಕಾರ್ಯಕ್ರಮದಲ್ಲಿ ನಾನು, ಎಚ್ ಎಸ್ ರಾಘವೇಂದ್ರರಾವ್ ಮಾತನಾಡಬೇಕಿತ್ತು. ನಾನೂ ಮತ್ತು ಅವರು ಇಬ್ಬರೂ ಹಿಂದಿನ ದಿನ ಇಡೀ ವಿನಯಾ ಅವರ ಅಷ್ಟೂ ಕವಿತೆಗಳನ್ನು ಮಾತನಾಡಿಸಿ ಬಂದಿದ್ದೆವು.

img-20160924-wa0020ಹಾಗಾಗಿ ಎಚ್ ಎಸ್ ರಾಘವೇಂದ್ರರಾವ್ ಒಂದು ಗಂಭೀರ ಪ್ರಶ್ನೆ ಎತ್ತಿದ್ದರು. ಇಂದಿನ ಬರಹಗಾರರು ಒಂದೆರಡು ಸಂಕಲನ ತಂದು ಮುಕ್ತಾಯ ಹಾಡಿ ಬಿಡುತ್ತಾರೆ. ಒಂದೋ ಅವರ ಸರಕು ಮುಗಿದು ಹೋಗಿರುತ್ತದೆ ಇಲ್ಲಾ ಅವರ ಬರಹದಲ್ಲಿ ಜಿಗಿತ ಕಾಣುವುದಿಲ್ಲ ಎಂದು. ವಿನಯಾ ಈ ಅಪಾಯವನ್ನು ದಾಟಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ನಾವು ಮಾತನಾಡಿದ್ದು.

ಅದನ್ನೇ ಚಲಂ ಅಲಿಯಾಸ್ ಪ್ರಸನ್ನ ಹಾಡ್ಲಹಳ್ಳಿ ಅವರ ಬರವಣಿಗೆಗೂ, ವ್ಯಕ್ತಿತ್ವಕ್ಕೂ ಯಥಾವತ್ತಾಗಿ ಅನ್ವಯಿಸಬಹುದು . ಚಲಂ ಹಾಗೂ ನಾನು ಕೈ ಕುಲುಕಿದ್ದು ಅವರ ಪುಸ್ತಕ ಪ್ರೀತಿಯ ಕಾರಣಕ್ಕೆ. ಅವರ ಕಥಾ ಸಂಕಲನಕ್ಕೆ ಬೆಳಕು ನೀಡಲು ಹಾಗೂ ಅವರ ಕನಸಾದ ಪುಸ್ತಕ ಮಳಿಗೆಯನ್ನು ಉದ್ಘಾಟನೆ ಮಾಡುವ ನೆಪದಲ್ಲಿ. ಆಗಿನ ಚಲಂ ಹಾಗೂ ಈಗಿನ ಚಲಂ ಇಬ್ಬರ ನಡುವೆ ದೊಡ್ಡ ಜಿಗಿತವಿದೆ.

ಖುಷಿ ಏನೆಂದರೆ ಆ ಜಿಗಿತ ಒಂದು ಒಳ್ಳೆಯ ದಿಕ್ಕಿನ ಕಡೆ ಆದ ಜಿಗಿತ. ವ್ಯಕ್ತಿತ್ವ ಹಾಗೂ ಕಾವ್ಯ ಎರಡೂ ಜಿಗಿತಗೊಂಡಿವೆ . ಉರಿದು ಬೆಳಕು ಕೊಟ್ಟ ಒಲವಿನಂತೆ-

‘ಉರಿದು ಬೆಳಕು ಕೊಟ್ಟ ಒಲವೇ
ಉರಿಯ ಕಲ್ಪನೆಯಿರದ ಕತ್ತಲ ಬಗ್ಗೆ
ನಿನಗೆ ಮಾತ್ರ
ಸಹನೆಯಿಂದಿರುವುದು ಸಾಧ್ಯ’
ಯಾವುದೇ ಲೇಖಕನಿಗೆ ಏಕಾಂತ ಎಷ್ಟು ಮುಖ್ಯವೋ ಲೋಕಾಂತವೂ ಅಷ್ಟೇ ಮುಖ್ಯ. ತನ್ನೊಳಗಿಗೆ ದೀಪ ಇಳಿಬಿಟ್ಟು ನೋಡಿಕೊಳ್ಳುವ ವೇಳೆಗೆ ಇನ್ನಷ್ಟು ಮನಸ್ಸುಗಳ ಜೊತೆ ಮನ ಕೂಡಿಸದಿದ್ದರೆ ಆ ದೀಪಕ್ಕೆ ಇನ್ನಷ್ಟು ಬೆಳಗುವ ಕಸುವೇ ಸಿಕ್ಕುವುದಿಲ್ಲ. ಹೊಸ ಆಲೋಚನೆಯ ಕಿಡಿಗಳು ಚಿಮ್ಮುವುದೇ ಲೋಕಾಂತದ ಕಲ್ಲುಗಳ ಉಜ್ಜುವಿಕೆಯಲ್ಲಿ. ಅಂತಹ ಲೋಕಾಂತವನ್ನು ಚಲಂ ಕಂಡುಕೊಂಡ ಕಾರಣಕ್ಕೇ ಇರಬೇಕು ಅವರೊಳಗೆ ಒಂದು ವಿಶ್ವಾಸ ಎದ್ದು ಕಾಣುತ್ತದೆ. ಆ ವಿಶ್ವಾಸ ಅವರ ಬರಹದಲ್ಲೂ ಕಾಣುತ್ತದೆ.

‘ಅವಳ ಪಾದಗಳು’ ಕಾವ್ಯ ಗುಚ್ಛವನ್ನು ನನ್ನ ಕೈನಲ್ಲಿಟ್ಟು ನಿಲ್ಲುವ ವೇಳೆಗೆ ಪ್ರಸನ್ನ ಪಡೆದಿರುವ ತಿರುವು ಕಾಡುತ್ತದೆ.

‘ಕಾಲಲ್ಲಿಲ್ಲದ ಗೆಜ್ಜೆಯ ಸದ್ದು
ನಗುವಿನಲ್ಲಿ ತುಂಬಿಕೊಂಡವಳೇ
ಇನ್ನಷ್ಟು ನಕ್ಕುಬಿಡು’

‘ಎದೆಯ ಬೆವರಿನಿಂದ
ಅವಳನ್ನು ಚಿತ್ರಿಸಿದ
ಭೂಮಿಯನ್ನು ಯಾರೂ ಇಷ್ಟು
ಚೆನ್ನಾಗಿ ಚಿತ್ರಿಸಿಲ್ಲ ಅಂತ ಬೆನ್ನು ತಟ್ಟಿದರು’
ಹಾಂ, ಅದೇ ವಿನಯಾ ಕಾರ್ಯಕ್ರಮದಲ್ಲಿ ಎಚ್ ಎಸ್ ಆರ್ ಇನ್ನೊಂದು ವಿಶೇಷತೆ ಗುರುತಿಸಿದರು. ಡಾ ವಿನಯಾ ಒಕ್ಕುಂದ ಆಗಿದ್ದವರು ಹೇಗೆ ತಮ್ಮ ಹೆಸರಿನಿಂದ ‘ವಕ್ಕುಂದ’ ಬಿಟ್ಟುಕೊಟ್ಟು, ನಂತರ ‘ಡಾ’ ಬಿಟ್ಟುಕೊಟ್ಟು ಕೊನೆಗೆ ವಿನಯಾ ಆದರು ಎಂದು. ಅದು ಕಾವ್ಯದ ಶಕ್ತಿ. ಅದು ನೀಡುವ ಬೆಳಕಿನ ಪರಿಣಾಮದಿಂದ ಮಾತ್ರ ಸಾಧ್ಯ. ಹಾಗೆಯೇ ಪ್ರಸ,ನ್ನ ಚಲಂ ಆದದ್ದು ನನಗೆ ಕಂಬಳಿಹುಳು ಚಿಟ್ಟೆಯಾದಂತೆಯೇ ಅನಿಸಿದೆ.

‘ನನಗೆ ಬರೆಯುವುದು ಗೊತ್ತಿದೆ ನಿನಗೆ ಬದುಕುವುದು..’ ಎನ್ನುತ್ತಾರೆ ಬಹುಷಃ ಚಲಂ ಘೋಷ ವಾಕ್ಯ ಇದು. ಬದುಕುವುದು ಮಾತ್ರವೇ ಮುಖ್ಯವಾಗಿ ಹೋಗಿರುವ ಈ ಕಾಲದಲ್ಲಿ ಚಲಂ ಬರಹವೆಂಬ ಚಿಟ್ಟೆಯ ಹಿಂದೆ ಬಿದ್ದಿದ್ದಾರೆ. ‘ಅವಳ ಪಾದಗಳು’ ನಮ್ಮೆಲ್ಲರೊಳಗೂ ನಮ್ಮ ‘ಅವಳ’ ಪಾದಗಳನ್ನು ಮೂಡಿಸದಿದ್ದರೆ ಕೇಳಿ..

ಹಿಂದೆ ಗವೀಶ ಹಿರೇಮಠ ‘ಪ್ರಣಯ ಮುಕ್ತಕ’ಗಳನ್ನು ಬರೆದಿದ್ದರು. ಸಿದ್ಧಲಿಂಗ ದೇಸಾಯಿ ‘ಚಿಗಳಿ’ ಎದುರಿಗಿಟ್ಟಿದ್ದರು. ಆಮೇಲೆ ಒಂದು ಕಾಲ ಬಂತು. ಜಗತ್ತು ತನ್ನ ಗಡಿ ಕಳಚಿಕೊಂಡಂತೆಲ್ಲಾ ಖುಷಿ ಎನ್ನುವುದಕ್ಕೆ ಅರ್ಥವೇ ಇಲ್ಲವಾಗುತ್ತಾ ಹೋಯಿತು. ‘ಏಕೆಂದರೆ ಇದು ‘ಅರ್ಥ’ದ ಕಾಲ. ಒಂದು ಹಾಡು ಸಾಕು.. ಒಂದು ಬಿರುಗಾಳಿಯನ್ನೂ ಎದುರಿಸಿ ದೋಣಿ ಮುಂದೆ ತೇಲಲು.. ಅಂತಹ ಪುಟ್ಟ ಪುಟ್ಟ ದೋಣಿಗಳೇ ಸರಮಾಲೆಯಾಗಿ ಚಲಂ ಅವರ ‘ಅವಳ ಪಾದಗಳು’ ಮೂಡಿವೆ.

chalam hadlahalli
‘ಅದೆಷ್ಟು ಆಸೆಯಿದೆ
ನಮಗೆ
ಮುಳುಗಿಹೋಗುವುದಕ್ಕೆ
ಸುಂದರ ನಾವೆಯಲಿ
ಸಮತೂಕದ ವೇಗದಲಿ
ಸಾಗುತ್ತಿರುವ ನಾವು
ಚಿಕ್ಕದೊಂದು
ರಂಧ್ರ ಕೊರೆದಿದ್ದೇವೆ’

‘ಪದಗಳು ನಾಚುವುದಿಲ್ಲ
ಎಂಬಲ್ಲೇ
ಒಬ್ಬರೊಳಗಿನ್ನೊಬ್ಬರ ಪಿಸುಮಾತು
ಕೇಳುತ್ತ’

ಸದಾ ಏನನ್ನೋ ಧ್ಯಾನಿಸುವಂತೆ ಇರುವ ಚಲಂ ಏನನ್ನು ಧ್ಯಾನಿಸುತ್ತಿರಬಹುದು ಎನ್ನುವುದಕ್ಕೆ ಇಲ್ಲಿನ ಕವಿತೆಗಳು ಸಾಕ್ಷಿ ಕೊಟ್ಟುಬಿಡುತ್ತವೆ
ಅಂತಹ ಸಾಕ್ಷಿಗಳನ್ನು ಅಂತರಂಗದ ಕೋರ್ಟ್ ಗಳಲ್ಲಿ ಮಾತ್ರ ಮಾನ್ಯ ಮಾಡಲಾಗುವುದರಿಂದ ನಿಮ್ಮ ಎಲ್ಲರ ಅಂತರಂಗದಲ್ಲಿ ಈ ಕವಿತೆ ಎಸಳಿನ ಸಾಕ್ಷಿ ಅವಳು ಎಂದೋ ಕೊಟ್ಟ ನವಿಲುಗರಿಯಂತೆ ಮನೆ ಮಾಡಲಿ..

Add Comment

Leave a Reply