Quantcast

ಎಚ್ ಎಸ್ ವಿ ಕಾಲಂ: ಹೊರಟಿದ್ದೀಗ ಎಲ್ಲಿಗೆ?

ತಾವರೆಯ ಬಾಗಿಲು-2
ಎಚ್.ಎಸ್.ವೆಂಕಟೇಶ ಮೂರ್ತಿ

“ಕಾವ್ಯಾರ್ಥ” ಎಂಬ ಗ್ರಹಿಕೆ ಮೊದಲಿಂದಲೂ ನಮ್ಮಲ್ಲಿ ಚಾಲ್ತಿಯಲ್ಲಿದೆ. ಕಾವ್ಯವು ಭಾಷೆಯಲ್ಲಾದ ಒಂದು ರಚನೆ. ಭಾಷೆಯಾದರೋ ಸ್ವಯಂ ತಾನೇ ಅರ್ಥವುಳ್ಳ ಪದಗಳ ಮತ್ತೊಂದು ರಚನೆ. ಆ ಪದಗಳಿಗೆ ರೂಢಿಯಲ್ಲಿ ಅರ್ಥವೆಂಬುದು (ಕೆಲವೊಮ್ಮೆ ಅನೇಕಾರ್ಥಗಳು) ಇದೆ.

ಹಳಗನ್ನಡಕಾವ್ಯ ನಮಗೆ ಅರ್ಥವಾಗುವುದಿಲ್ಲ ಎಂದರೆ ಅಲ್ಲಿ ಬಳಕೆಯಾಗಿರುವ ಸಂಸ್ಕೃತ ಮತ್ತು ಈಗ ಪ್ರಚಲಿತವಿಲ್ಲದ ಹಳಗನ್ನಡ ಪದಗಳು ನಮಗೆ ಅರ್ಥವಾಗುವುದಿಲ್ಲ ಎಂಬುದು ಸರಳ ಗ್ರಹಿಕೆ.

hsvಹಾಗಾಗಿ ಪಂಪನನ್ನೋ, ರನ್ನನನ್ನೋ ಪಾಠ ಮಾಡುವಾಗ ಪದಪದಕ್ಕೂ ಅರ್ಥ ಹೇಳುವ ಕ್ರಮ ಹಿಂದೆ ರೂಢಿಯಲ್ಲಿತ್ತು. ಪದವಿಂಗಡಣೆ, ಪದಗಳ ಅರ್ಥ, ಆಮೇಲೆ ಅನ್ವಯ ರೀತಿಯಲ್ಲಿ ಪದಗಳ ಮರು ಜೋಡಣೆ, ಕೊನೆಗೆ ತಾತ್ಪರ್ಯ… ಅಲ್ಲಿಗೆ ಕಾವ್ಯದ ಗ್ರಹಿಕೆ ಮುಗಿಯಿತು ಎಂಬ ತೃಪ್ತಿ.

ಆದರೆ ಕಾವ್ಯಾರ್ಥವನ್ನು ಹೀಗೆ ಗ್ರಹಿಸುವ ಕ್ರಮವೇ ಅವೈಜ್ಞಾನಿಕ ಎಂಬುದನ್ನು ನಾವು ತಿಳಿಯಬೇಕಾಗಿದೆ.

ಶಬ್ದಕೋಶದಲ್ಲಿ ದೊರೆಯುವ ಪದಗಳ ಅರ್ಥವನ್ನು ಹಾಗೆ ಹಾಗೇ ಅನ್ವಯಿಸುವುದು ಸರಿಯಾದ ಅರ್ಥಗ್ರಹಿಕೆಯ ಕ್ರಮವಲ್ಲ.

ಪದ್ಯದ ಸಂದರ್ಭದಲ್ಲಿ ಆ ಪದಕ್ಕೆ ಯಾವ ಅರ್ಥ ಸೂಕ್ತ ಎಂಬುದನ್ನು ಗ್ರಹಿಸಬೇಕಾದದ್ದು ನಮ್ಮ ಮೊದಲ ಜವಾಬುದಾರಿ. ಈ ಪದ್ಯದಲ್ಲಿ ಈ ಪದದ ಅರ್ಥವನ್ನು ಯಾವ ನೆಲೆಯಲ್ಲಿ ಗ್ರಹಿಸಿದಾಗ ಪದ್ಯವು ಹೆಚ್ಚು ಅರ್ಥಪೂರ್ಣವಾಗುವುದು ಎಂಬುದು ನಮ್ಮ ಅರ್ಥಾರೋಪದ ಕ್ರಮವಾಗಬೇಕಾಗುತ್ತದೆ.

ಒಂದೇ ಅರ್ಥವನ್ನು ಹೇಳುವ ಅನೇಕ ಪದಗಳಿರುವಾಗ ಈ ಪದವನ್ನೇ ಕವಿ ಬಳಸಿದ್ದೇಕೆ? ಅದರಿಂದ ಕಾವ್ಯಕ್ಕೆ ವಿಶೇಷ ಲಾಭವೇನಾದರೂ ಆಗಿದೆಯೇ?-ಎಂಬುದನ್ನು ನಾವು ಪರಿಭಾವಿಸಬೇಕು.

ಕಾವ್ಯಾರ್ಥವು ಕಾವ್ಯಚಿಂತನೆಯ ಪರಿಣಾಮವಾಗಿ ದಕ್ಕತಕ್ಕದ್ದು ಎಂಬುದನ್ನು ನಾವು ಮೊದಲು ಗ್ರಹಿಸಬೇಕಾಗಿದೆ. ಎರಡನೇದು ಪದ್ಯದ ಬಿಡಿ ಬಿಡಿ ಪದಗಳ ಅರ್ಥವನ್ನು ತಿಳಿದ ಮಾತ್ರಕ್ಕೆ ನಾವು ಪದ್ಯದ ಅಂತರಾರ್ಥವನ್ನು ಸಮೀಪಿಸಿದಂತೆ ಆಗುವುದಿಲ್ಲ. ಅರ್ಥವಾಗಿರುವುದು ಪದಗಳು ಮಾತ್ರ! ಪದ್ಯವಲ್ಲ!

ಕೆಲವು ನಿರ್ದುಷ್ಟ ಪದಗಳ ನಿರ್ದುಷ್ಟ ಸಂಯೋಜನೆಯಿಂದ ಒಂದು ಅರ್ಥವ್ಯವಸ್ಥೆಯನ್ನು ಕವಿ ಸೃಷ್ಟಿಸಿದ್ದಾನೆ. ಆ ವ್ಯವಸ್ಥೆಯನ್ನು ಪದ್ಯದ ಸಂಯೋಜನೆಯ ವಿಶಿಷ್ಟ ಗ್ರಹಿಕೆಯ ಮೂಲಕವೇ ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ!

“ಕಂದ ನಿಜಾನುಜರೆಲ್ಲಿದರೆಂದು” ಎಂಬ ರನ್ನನ ಗದಾಯುದ್ಧ ಕಾವ್ಯದ ಪ್ರಸಿದ್ಧ ಕಂದ ಪದ್ಯವು ಪ್ರಾರಂಭವಾಗುವುದು ಕಂದ ಎಂಬ ಶಬ್ದದಿಂದ. ಕಂದ ಎಂಬುದು ಸಂಬೋಧನೆಯಾದುದರಿಂದ ಪದ್ಯದ ಮೊದಲ ಶಬ್ದ ಅದೇ ಆಗಬೇಕಾಗಿದೆ. ಜೊತೆಗೆ ಕಂದ ಎಂಬ ಪದಕ್ಕಿರುವ ಆತ್ಮೀಯತೆ, ಆರ್ದ್ರತೆ ರಾಜಪುತ್ರ, ಕುಮಾರ ಎಂಬ ಶಬ್ದಗಳಿಗೆ ಇಲ್ಲ. ಹಾಗಾಗಿ ಕಂದ ಎಂಬ ಪದದ ಬಳಕೆ ಕವಿಯ ಪ್ರತಿಭಾಶಕ್ತಿಯ ಅನಿವಾರ್ಯ ಆಯ್ಕೆಯ ಫಲ.

ಕಂದ ನಿಜಾನುಜರೆಲ್ಲಿದ
ರೆಂದೆನ್ನಂ  ಜನನಿ ಬಂದು ಬೆಸಗೊಂಡೊಡದೇ-|
ನೆಂದು ಮರುಮಾತುಗುಡುವೆಂ
ಕೊಂದರ್ ಕೌಂತೇಯರೆಂದು ಬಿನ್ನೈಸುವೆನೋ||

ಇಲ್ಲಿ ಒಂದೊಂದು ಪದವೂ ಹೊಂದಿರುವ ಧ್ವನಿಶಕ್ತಿ ಮತ್ತು ಅರ್ಥಭಾರವನ್ನು ತಮ್ಮ ಭಾರತೀಯ ಕಾವ್ಯಮೀಮಾಂಸೆಯಲ್ಲಿ ತೀನಂಶ್ರೀ ಅದ್ಭುತವಾಗಿ ವಿಶ್ಲೇಷಿಸಿದ್ದಾರೆ.

ಎಂದರೆ ಒಂದು ಪದ್ಯವು ಸೃಷ್ಟಿಸುವ ಅರ್ಥ ವ್ಯವಸ್ಥೆಯು ಕವಿಯ ಪ್ರತಿಭಾ ಶಕ್ತಿಯಿಂದ ಹೀಗಲ್ಲದೆ ಬೇರೆ ಅಲ್ಲ ಎಂಬಂತೆ ರಚನೆಗೊಂಡಿರುತ್ತದೆ. ಅದೇ ಪದ್ಯದ ಅರ್ಥವಲ್ಲ. ನಾವು ಗ್ರಹಿಸಬೇಕಾಗಿರುವುದು ಕೂಡ ಪದ್ಯದ ಅರ್ಥವನ್ನಲ್ಲ; ಪದ್ಯದ ಅಂತರಾರ್ಥವನ್ನು! ಪದ್ಯದ ಅಂತರಾರ್ಥ ನಮಗೆ ದಕ್ಕಿತೋ ಆಗ ಪದ್ಯದ ಅರ್ಥ ನಮಗೆ ದಕ್ಕಿದಂತೆ.

ಮಹಾಕವಿ ರನ್ನನ ಈ ಪದ್ಯವು ಬರೀ ಶಬ್ದಸಂಬಂಧೀ ಸಂಯೋಗವಲ್ಲ;ಸಂಬಂಧ ಸೂಚೀ ಶಬ್ದಗಳ ಸಂಯೋಗ. ಈ ಸಂಯೋಗವಾದರೂ ಒಂದು ಮಹಾ ವಿಯೋಗವನ್ನು ವ್ಯಂಜಿಸಲಿಕ್ಕಾಗಿ. ಎಷ್ಟೆಲ್ಲ ಸಂಬಂಧಗಳು ಸಂಬಂಧದ ವಿಘಟನೆಗಾಗಿ ಈ ಪದ್ಯದಲ್ಲಿ ಸಂಘಟಿಸಿವೆ!

ಖಾಸಾ ಅಣ್ಣತಮ್ಮಂದಿರ ಸಂಬಂಧ (ನಿಜಾನುಜರ್); ದಾಯಾದಿಗಳ ಸಂಬಂಧ (ಕೌಂತೇಯರ್); ಸವತಿಯರ ಸಂಬಂಧ (ಕುಂತಿ ಮತ್ತು ಗಾಂಧಾರಿ). ದುರ್ಯೋಧನನ 99 ಮಂದಿ ಸಹೋದರರೂ ಈಗ ತೀರಿಹೋಗಿದ್ದಾರೆ. ಸಹಜ ಸಾವಲ್ಲ. ಅದೊಂದು ಭಯಂಕರವಾದ ಹತ್ಯಾಕಾಂಡ. ಕೊಂದವನು ದಾಯಾದಿ ಭೀಮ. ಗಾಂಧಾರಿಯ ಪಾಲಿಗೆ ಆ ಭೀಮ ತನ್ನ ಸವತಿಯ ಮಗ! ಈ ದುರಂತ ಸಂಭವಿಸಿರುವುದಾದರೂ ದುರ್ಯೋಧನನ ಹಠದಿಂದ. ಯುದ್ಧ ಬೇಡ; ಸಂಧಿ ಮಾಡಿಕೋ ಎಂದು ಇದೇ ತಾಯಿ ಅವನಿಗೆ ಸಾರಿ ಸಾರಿ ಹೇಳಿದ್ದಳಲವೇ? ಆದರೂ ತಾಯಿ ಮತ್ತು ಉಳಿದ ಹಿರಿಯರ ಮಾತನ್ನು ಉಲ್ಲಂಘಿಸಿ ದುರ್ಯೋಧನ ಸಂಗ್ರಾಮಕ್ಕೆ ತೊಡಗಿದನು.

ಅದರ ಫಲ ತನ್ನ ತಮ್ಮಂದಿರ ಸಾವು. ಆ ಹೊಣೆಗಾರಿಕೆಯ ಭಾರ ಈಗ ಅವನ ಹೆಗಲ ಮೇಲಿದೆ. ದಾರುಣವಾದ ಪಾಪ ಪ್ರಜ್ಞೆ ಅವನನ್ನು ಕಾಡುತ್ತಿದೆ. ಈ ಸಂದರ್ಭದಲ್ಲಿ ಯುದ್ಧ ಭೂಮಿಯಲ್ಲಿ ಗಾಂಧಾರಿ ತನ್ನನ್ನು ಅರಸಿಕೊಂಡುಬಂದಾಗ ಆಕೆಯೊಂದಿಗೆ ಮಾತಾಡಲು ಅವನು ತಯಾರಿಲ್ಲ. ನಿನ್ನ ತಮ್ಮಂದಿರು ಎಲ್ಲಿದ್ದಾರೆಂದು ತಾಯಿ ಕೇಳಿದರೆ ಆಕೆಗೆ ಏನೆಂದು ಉತ್ತರಕೊಡುವುದು? ನಿನ್ನ ಸವತಿಯ ಮಕ್ಕಳಾದ ಪಾಂಡವರು ಅವರನ್ನೆಲ್ಲಾ ಕೊಂದರೆಂದು ಯಾವ ಬಾಯಲ್ಲಿ ಹೇಳಬಹುದು? ಗಾಂಧಾರಿ ಆ ಪ್ರಶ್ನೆಯನ್ನು ಕೇಳಿಲ್ಲ. ಆದರೆ ಕೇಳಿದರೆ! ಎಂದು ದುರ್ಯೋಧನ ತಲ್ಲಣಿಸುತ್ತಿದ್ದಾನೆ.

seaಪದ್ಯದ ಶಬ್ದಸಂಯಮ ಗುರಿಯಿಟ್ಟು ಹೂಡಿದ ಶಬ್ದಾಸ್ತ್ರಗಳ ಸಂಕುಲದಂತಿದೆ. ದುರ್ಯೋಧನನಾದರೂ ಅದನ್ನು ತಾನೇ ಕಟ್ಟಿ, ತಾನೇ ಘಾಸಿಗೊಳ್ಳುತ್ತಿದ್ದಾನೆ! ಹೀಗೆ ಭಾಷಿಕವಾಗಿಯೂ ನಮ್ಮ ಘಾಸಿಯನ್ನು ನಾವೇ ನಿರ್ಮಿಸಿಕೊಳ್ಳುತ್ತೇವೆ. ಹೊಣೆಗಾರಿಕೆ ವಿಧಿಯ ಮೇಲೆ ಇಲ್ಲ. ಎಲ್ಲವೂ ಸ್ವಯಂ ಆಯ್ಕೆಯ ಫಲ. ಹಾಗಾಗಿಯೇ ಇಲ್ಲಿ ಅಸ್ತಿತ್ವವಾದದ ಘಾಟು ಕಾಣುತ್ತಿದೆ.

ಅನುನಾಸಿಕಗಳಿಂದ ಸಂಯೋಜಿತವಾಗಿರುವ ಪದ್ಯದ ತುಂಬ ಸಂಬಂಧಸೂಚೀ ಪದಗಳು. ಸಂದರ್ಭ ಆ ಸಂಬಂಧಗಳು ಛಿದ್ರಗೊಂಡಿರುವ ಸಂದರ್ಭ.

ತಾಯಿ-ಮಗನ ಪರಮಾಪ್ತ ಸಂಬಂಧದ ನೆಲೆಯಲ್ಲಿ ದುರ್ಯೋಧನ ವಿಘಟಿತ ಸಂಬಂಧವನ್ನು ಕುರಿತು ಚಿಂತಿಸಬೇಕಾದ ದುಃಸ್ಥಿತಿಗೆ ಒಳಗಾಗಿದ್ದಾನೆ. ಇಡೀ ದೃಶ್ಯವನ್ನು ತನ್ನ ಸಂಸಾರದ ಹೊರಗಿನ ಒಂದು ವ್ಯಕ್ತಿತ್ವ (ಸಂಜಯ) ಸಾಕ್ಷೀಪ್ರಜ್ಞೆಯಂತೆ ವೀಕ್ಷಿಸುತ್ತಾ ಇದೆ. ಹೇಗಿರಬೇಡ ಆಗ ದುರ್ಯೋಧನನ ಮನಃಸ್ಥಿತಿ?

ಆಯ್ದು ಆಯ್ದು ಕಟ್ಟಿದ ಕಂಬನಿಯ ಹರಳಂಥ ಶಬ್ದಗಳು. ಆ ಶಬ್ದಗಳ ಚಲನೆಯಾದರೂ ಏಕಾರ್ಥದಿಂದ ಅನಂತಾರ್ಥದ ಕಡೆಗೆ. ಭಾರವಾದ ಪದಗಳನ್ನು ತೂಗಿ ತೂಗಿ ಊರುತ್ತಾ ಪದ್ಯ ಚಲಿಸುತ್ತಾ ಇದೆ. ರಣರಂಗದಲ್ಲಿ ದುರ್ಯೋಧನನ ಪದಗತಿಯನ್ನೇ ಈ ಪದ್ಯದ ಪದಲಯವೂ ಅಭಿನಯಿಸುವಂತಿದೆ! ಭಾವಿಸಿ ಓದಿದಲ್ಲದೆ ಈ ಪದ್ಯದ ಅರ್ಥಭಾರವು ತನ್ನ ಎಲ್ಲ ವರ್ಣಪಟ್ಟಿಕೆಯೊಂದಿಗೆ ನಮ್ಮ ಎದುರು ಮೂರ್ತಗೊಳ್ಳಲಾರದು.

ನಾವು ಒಂದು ಪದ್ಯವನ್ನು ಹೀಗೆ ಸಾವಧಾನವಾಗಿ, ಶಬ್ದ ಶಬ್ದಗಳಲ್ಲಿ ಕಣ್ಣೂರಿ, ಅದರ ಹೆಜ್ಜೆಸಪ್ಪುಳಕ್ಕೆ ಕಿವಿಗೊಟ್ಟು, ತಾದಾತ್ಮ್ಯ ಭಾವದಿಂದ ಅಂತರಂಗದ ಸ್ವತ್ತಾಗಿ ಮಾಡಿಕೊಳ್ಳದೆ ಪದ್ಯದ ಕಾವ್ಯತ್ವದ ಸಂವೇದನೆಯು ಯಾವತ್ತೂ ನಮ್ಮದಾಗದು.

ಕಾವ್ಯವು ಅವಸರದ ಓದಿಗೆ ಯಾವತ್ತೂ ವಿಮುಖಿಯಾದುದು.

7 Comments

 1. Anonymous
  September 30, 2016
 2. C P Nagaraja
  September 30, 2016
  • Anonymous
   September 30, 2016
 3. Anonymous
  September 29, 2016
 4. Sarojini Padasalagi
  September 29, 2016
 5. S.p.vijaya Lakshmi
  September 29, 2016

Add Comment

Leave a Reply