Quantcast

ಕುವೆಂಪು ಕವಿತೆಗೆ ಆರ್ಯಾ ರೂಪಕದಂತಿದ್ದರು

ಎಲ್ಲಿಯೂ ನಿಲ್ಲದ,

ಮನೆಯನೆಂದೂ ಕಟ್ಟದ ಆರ್ಯಾ

rajani garuda

ಕೆರೇಕೈ ರಜನಿ ಗರುಡ 

ಹಿರಿಯ ನಾಗರಿಕರ ಊರಾದ ಈ ಧಾರವಾಡದಲ್ಲಿ ನನಗಿಂತ ಸಾಕಷ್ಟು ಹಿರಿಯರಾದವರೇ ನನಗಿಲ್ಲಿ ಸ್ನೇಹಿತರು. ಇದರಿಂದಾಗಿ ಅವರೆಲ್ಲ ಧಾರವಾಡದಲ್ಲಿ ಪ್ರಚಲಿತವಿರುವ ಹಲವಾರು ಕಥೆಗಳನ್ನು ಪ್ರೀತಿಯಿಂದ ಹೇಳಿದ್ದಾರೆ. ಚಹಾ, ಚುಮ್ಮರಿ, ಮಿರ್ಚಿ ಜೊತೆಯಲ್ಲಿ ಅವ್ಯಾಹತವಾಗಿ ನಡೆವ ಹರಟೆ ಇವೆಲ್ಲ ಯಾವ ಕಾಲದಲ್ಲೂ ಪ್ರತ್ಯೇಕಿಸಲು ಅಸಾಧ್ಯವಾಗಿರುವ ಏಕರಸದ ರಸಾಯನ ಇಲ್ಲಿ. ಆರ್ಯರ ಜೊತೆಯೂ ಸಾಕಷ್ಟು ಬಾರಿ ಅಂತಹ ಆತ್ಮೀಯ ರಸಾಯನ ಸವಿದ ನೆನಪು.

aryaನಾಟಕದ ರಿಹರ್ಸಲ್ ಮುಗಿಸಿ ನಾವು ಅವರ ಪ್ರೀತಿಯ ಆಮಂತ್ರಣದ ಮೇರೆಗೆ ಅವರ ಮನೆಗೆ ಊಟಕ್ಕೆ ಹೋಗಿದ್ದೆವು. ಊಟಕ್ಕೆ ಏನಿದೆಯೆಂದು ನೋಡಿದರೆ ಒಂದಿಷ್ಟು ಹಣ್ಣುಗಳು, ಬ್ರೆಡ್ ಇತ್ತು. ‘ಅಪ್ಪಂ ಮಾಡಿದ್ದೇನೆ, ತಕೊಳ್ಳಿ’ ಎಂದರು. ಒಂದೊ ಎರಡೊ ಅಪ್ಪಂ ಸಣ್ಣ ತಟ್ಟೆಯಲ್ಲಿತ್ತು. ದಣಿವು, ಹಸಿವೆಯಿಂದ ರಾಕ್ಷಸರಾಗಿದ್ದ ನಾವು ಕ್ಷಣದಲ್ಲಿ ಅವನ್ನೆಲ್ಲ ಮುಗಿಸಿ, ಅವರ ಫ್ರಿಜ್ ನ್ನು ತಡಕಾಡಿ ಏನೂ ಸಿಗದಾಗ ಆ ರಾತ್ರಿಯಲ್ಲಿ ಊಟ ಹುಡುಕುತ್ತ ಹೊರಟೆವು.

ಮುಂದೆ ಅವರ ಮನೆಗೆ ಹೋಗುವಾಗೆಲ್ಲ ತಿನ್ನಲು ಒಂದಿಷ್ಟು ತೆಗೆದುಕೊಂಡೇ ಹೋಗುತ್ತಿದ್ದೆವು. ಅವರು ತಿನ್ನುತ್ತಿದ್ದುದೇ ಬಹಳ ಕಡಿಮೆ. ಅವರ ಮನೆಯಲ್ಲಿ ಕಂಡಲ್ಲಿ ಕೈಹಾಕಿ, ಎಲ್ಲವನ್ನೂ ಜಾಲಾಡುತ್ತಿದ್ದ ನನ್ನ ಮಗಳಿಗೆ ನಾನೇನೂ ಬೈಯಕೂಡದು ಎಂದು ಮಕ್ಕಳಿಗೆ ನಾವು ಕೊಡಬೇಕಾದ ಸ್ವಾತಂತ್ರದ ಕುರಿತು ನನಗೆ ಸಣ್ಣ ಉಪದೇಶ ಕೊಟ್ಟರು. ಒಂದಿಷ್ಟು ಬಣ್ಣ , ಪೇಪರ್ ಕೊಟ್ಟು ‘ಚಿತ್ರ ತೆಗೆ ಆಯ್ತಾ’ ಎಂದು ಕೋರಿಸಿದರು.

ನಾಟಕ, ಕವನ, ಕಥೆ, ಅನುವಾದ, ಚಿತ್ರಕಲೆ ಹೀಗೆ ಹಲವು ಮಾಧ್ಯಮದಲ್ಲಿ ತೊಡಗಿಸಿ ಕೊಂಡಿದ್ದ ಆರ್ಯಾ, ತಮ್ಮ ನಾಟಕ ಪ್ರಯೋಗದ ಬಗ್ಗೆ ಹೆಚ್ಚು ಆಸಕ್ತಿ ವಹಿಸಲಿಲ್ಲ. ನಾವು ನಾಟಕದ ವಸ್ತು, ವಿಷಯಗಳನ್ನು ಚರ್ಚಿಸಿದ್ದೇ ಬಹಳ. ನಾಟಕದ ಹುಟ್ಟಿಗೆ ಕಾರಣವಾದ ಸಾಂಸ್ಕೃತಿಕ ಹಿನ್ನೆಲೆ ಅವರಿಗೆ ಮುಖ್ಯವಾಗಿತ್ತು. ಪ್ರಯೋಗ ಅದರ ಕರ್ಮಿಗಳಿಗೆ ಬಿಟ್ಟಿದ್ದು ಎಂಬ ಧೋರಣೆ ಅವರದ್ದು. ನಾಟಕಕ್ಕೆ ಅಗತ್ಯವಾದರೆ ಪುರಾಣ, ವೇದ, ಇತಿಹಾಸ ಹೀಗೆ ಇನ್ನೂ ಹಲವಾರು ವಿಷಯಗಳನ್ನು ಚರ್ಚಿಸಲು ಹೋಗುತ್ತಿದ್ದುದು ಅವರ ಬಳಿಯೆ. ಯಾರು ಯಾವ ಕಾರ್ಯಕ್ರಮಕ್ಕೆ ಕರೆದರೂ ತಪ್ಪದೆ ಅಲ್ಲಿ ಹಾಜರಾಗುತ್ತಿದ್ದರು. ಪೂರ್ತಿ ಅದು ಮುಗಿಯುವವರೆಗೂ ಇರುವುದು ಅಪರೂಪ. ಕರೆದವರಿಗೆ ಶುಭಾಶಯ ಕೋರಿ ಹೋಗಿಬಿಡುವುದೆ ಹೆಚ್ಚು. ಎಲ್ಲಿಯೂ ಹತ್ತು ನಿಮಿಷಕ್ಕಿಂತ ಹೆಚ್ಚು ಸಮಯ ಇರುತ್ತಿರಲಿಲ್ಲ. ಆದ್ದರಿಂದ ನಮ್ಮ ಮಿತ್ರಮಂಡಳಿಯವರು ಅವರನ್ನು ‘ಸಾಡೇಸಾತ್’ ಎಂದು ಕರೆಯುತ್ತಿದ್ದರು.

ಒಮ್ಮೆ ಶಿರೂರು ಮಠದ ಪೀಠಾರೋಹಣ, ತಮ್ಮ ಸನ್ಯಾಸ ದೀಕ್ಷೆ ಮತ್ತದರ ಪೀಠತ್ಯಾಗದ ಕಥೆಯನ್ನೆಲ್ಲ ಹೇಳಿದರು. ಯಾವುದೆ ಹಳಹಳಿಕೆಯಿಲ್ಲದೆ ಅಥವಾ ಯಾವುದೆ ಜಿಗುಪ್ಸೆಯಿಲ್ಲದೆ ಯಾರೊ ಒಬ್ಬ ಅಪರಿಚಿತನ ಕಥೆ ಹೇಳುವಷ್ಟೇ ನಿರ್ಲಿಪ್ತವಾಗಿ ಹೇಳಿದರು. ಇನ್ನೊಮ್ಮೆ ಅವರ ಹೆಂಡತಿ ವಿದ್ಯಾ ಅವರ ಬಗೆಗೆ ಹೇಳುವಾಗ ಭಾವುಕರಾಗಿದ್ದರು. ಆ ಹಿರಿಯನನ್ನು ಹೇಗೆ ಸಂತೈಸಬಹುದು ಎನ್ನುವುದು ತಿಳಿಯದೆ ಅಕ್ಕ-ಪಕ್ಕದಲ್ಲೆಲ್ಲ ಎನೋ ಆಸರೆಗೆ ಹಿಡಿಯಲು ಹುಡುಕುವಂತೆ ತಡಕಾಡಿ ಬಿಟ್ಟೆ. ವಿದುರನೊಬ್ಬನ ಒಂಟಿತನ ಅಂದು ನನ್ನನ್ನು ಅಲುಗಾಡಿಸಿ ಬಿಟ್ಟಿತ್ತು.

ರಂಗಭೂಮಿ, ಸಾಹಿತ್ಯ, ಚಿತ್ರಕಲೆ ಹೀಗೆ ಯಾವಯಾವುದನ್ನೊ ತೆಗೆದುಕೊಂಡು ನಾವೆಲ್ಲ ವಾದಿಸುತ್ತಿರುವಾಗ ‘ರಜನಿ ನಾನು ನಿನ್ನ ಪಾರ್ಟಿ ಆಯ್ತಾ’ ಎನ್ನುತ್ತಿದ್ದ ಅವರಿಗೆ ‘ಕೈ ಕೊಡಿ ಸರ್’ ಎಂದು ಕೈ ಕುಲುಕುತ್ತಿದ್ದೆ. ತಮ್ಮ ಹೊಸ ಪುಸ್ತಕ ಬಂತೆಂದರೆ ನಾವೆಲ್ಲಿದ್ದರು ಅಲ್ಲಿಗೇ ಬಂದು ಪುಸ್ತಕ ಕೊಟ್ಟು ಹೋಗುತ್ತಿದ್ದರು.

ಕಳೆದ 3-4ವರ್ಷಗಳಿಂದ ನನ್ನ, ಅವರ ಭೇಟಿ ಕಡಿಮೆಯಾಗಿತ್ತು. ಅನಾರೋಗ್ಯದಿಂದಾಗಿ ಅವರು ಓಡಾಟ ಕಡಿಮೆ ಮಾಡಿದ್ದರು. ಸಣ್ಣ ಮಗುವಿನಂತೆ ಚಡಪಡಿಕೆಯ ಈ ವ್ಯಕ್ತಿ ಯಾವ ಒಣ ಉಸಾಬರಿಗೂ ಹೋಗದೆ ಪದ್ಮಪತ್ರದೊಳಗಣ ನೀರಬಿಂದುವಂತಿದ್ದರು.

ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು ಎಂಬ ಕುವೆಂಪು ಸಾಲಿಗೆ ಆರ್ಯಾ ರೂಪಕದಂತಿದ್ದರು.

One Response

  1. S.p.vijaya Lakshmi
    October 1, 2016

Add Comment

Leave a Reply