Quantcast

ಲಕ್ಷ್ಮಣರಾಯರು ಮದುವಣಿಗನಂತಿದ್ದರು..

S_P_Vijayalakshmiಎಸ್. ಪಿ. ವಿಜಯಲಕ್ಷ್ಮಿ

ವಾರದಿಂದ ಈ ಸಾಲುಗಳನ್ನು ಎಲ್ಲ ಕಡೆಯೂ ನೋಡುತ್ತಿದ್ದೆ: ಅರ್ಥವಾಗಿತ್ತು: ಕನ್ನಡಿಗರ ಪ್ರೀತಿಯ, ‘ಪ್ರೇಮಕವಿ’ಗೆ ಎಪ್ಪತ್ತು ತುಂಬಿತು, ಆ ಪ್ರಯುಕ್ತ ಅವರ ಕಾವ್ಯಬದುಕು ಕುರಿತಂತೆ ಪುಸ್ತಕವೊಂದು ಬಿಡುಗಡೆಯಾಗುತ್ತಿದೆ. ಅದು ‘ಹಿನ್ನೋಟದ ಕನ್ನಡಿ’ ಎಂದು. ಆದರೆ, ಈ ಒಂದು ಪದ “ಪ್ರವೇಶಿಕೆಗಳೊಂದಿಗೆ” ಇದೇನು ಅರ್ಥವಾಗಿರಲಿಲ್ಲ. ಓಕೇ, ಪ್ರವೇಶ…ಹೊಗುವಿಕೆ…! ಆದರೆ, ಇಲ್ಲಿ ಇದಕ್ಕೇನರ್ಥ…? ಕಾಡುತ್ತಿದ್ದದ್ದು ಇದೊಂದೇ ಸಂಗತಿ.

hinnotada-kannadi1ಈ ದಿನ ಬೆಳಿಗ್ಗೆ ಹೋದಾಗ, ಸಾಹಿತ್ಯ ಶ್ರೇಷ್ಠರ ಗುಂಪೇ ನೆರೆದಿತ್ತು, ನೆರೆಯುತ್ತಿತ್ತು. ಲಕ್ಷ್ಮಣರಾಯರು ಮದುವಣಿಗನಂತೆ ಸಂಭ್ರಮದಿಂದ ಎಲ್ಲರನ್ನೂ ಸ್ವಾಗತಿಸುತ್ತ, ಅವರ ಮನೋಸಹಜ ಲವಲವಿಕೆಯಲ್ಲಿ ಓಡಾಡುತ್ತಿದ್ದರು.

ಹೌದು, ಎಪ್ಪತ್ತು ಎನ್ನಲು ಸಾಧ್ಯವಿಲ್ಲ ಎಂದೇ ಹೇಳುವಂತಿತ್ತು ಎಲ್ಲರೊಳಗೂ ಹುದುಗಿದ್ದ ಅವರ ಮೇಲಣ ಪ್ರೀತಿಯ ಮನಸ್ಸು. ಕೊನೆಯಲ್ಲಿ ಬಂದವರು ನಮ್ಮ ಪ್ರೀತಿಯ ಕವಿ ಶ್ರೇಷ್ಠರಾದ ‘ನಿಸ್ಸಾರ್ ಅಹಮ್ಮದರು’. ಆ ಮಾಗಿದ ಹೃದಯದ ಪ್ರೀತಿ, ಉತ್ಸಾಹ, ಅವರ ಠಾಕೋಠೀಕ್ ಉಡುಗೆ ಎಲ್ಲರನ್ನೂ ಆಯಸ್ಕಾಂತದಂತೆ ಎಳೆದಿತ್ತು.

ನಿಜಕ್ಕೂ ಈ ವಾತಾವರಣ, ಯುಗಾದಿ ಹಬ್ಬ, ಮಾವಿನ ಎಳೆದಳಿರ ತೋರಣ, ಅಂಗಳದ ರಂಗೋಲಿ, ಘಮಘಮಿಸುವ ಒಬ್ಬಟ್ಟು-ಮಾವಿನಕಾಯಿ ಚಿತ್ರಾನ್ನ , ದೇವರ ಪೂಜೆ, ನೀಲಾಂಜನ, ಮಂಗಳಾರತಿ ಹೀಗೇ ಶುಭಗಳೆಲ್ಲ ಸಮ್ಮಿಳಿತವಾದ ಸಂಭ್ರಮದಂತಿತ್ತು.

ಪುಸ್ತಕ ಬಿಡುಗಡೆಯಾದ ಮೇಲೆ ನನ್ನ ಈ ಕುತೂಹಲದ ‘ಪ್ರವೇಶಿಕೆ’ ಗೆ ಅರ್ಥ ತಿಳಿಯಿತು. ‘ರಾಮಾಯಣದ ರಾಮನ ಮಾತುಗಳನ್ನು ಯಥಾವತ್ತಾಗಿ ಅನುರಣಿಸುವ ಪ್ರಸ್ರವಣ ಪರ್ವತದಂತೆ, ಲಕ್ಷ್ಮಣರಾವ್ ಕಾವ್ಯ ಅವರ ಬದುಕಿನ ಪ್ರಸ್ರವಣ ಪರ್ವತ. ಅವರ ಆಯ್ದ ಎಪ್ಪತ್ತು ಕವಿತೆಗಳನ್ನು ಅವರ ಬದುಕಿನ ಹಿನ್ನೋಟವಾಗಿ, ವಿಶೇಷವಾದ ರೀತಿಯಲ್ಲಿ ಪ್ರಕಟಿಸಿ ಕವಿಗೇ ಓದಿಸುವ ಪ್ರಯತ್ನ …’ ಹೀಗೆಂದರು ಅವರ ಮೆಚ್ಚಿನ ಕವಿಮಿತ್ರ, ನಮ್ಮೆಲ್ಲರ ಗುರುಗಳಾದ ಎಚ್ಎಸ್ವಿ ಅವರು.

ನಿಜ, ಇದೊಂದು ಅಪೂರ್ವ ಪ್ರಯತ್ನ. ಹಿಂದೆ ಜಿ.ಎಸ್.ಶಿವರುದ್ರಪ್ಪ ಅವರ ಕೆಲವು ಕವಿತೆಗಳಿಗೆ ಈ ಪ್ರಯತ್ನ ನಡೆದಿತ್ತಂತೆ… ಲಕ್ಷ್ಮಣರಾವ್ ಕವಿತೆಗಳಿಗೆ ಒಂದು ‘ಪ್ರವೇಶಿಕೆಯ ಪೂರ್ವಸಿದ್ಧತೆ’, ಅದೂ, ಶ್ರೇಷ್ಠರಾದ ಕವಿಗಳು, ಸಾಹಿತಿಗಳು, ವಿಮರ್ಶಕರು ಇಂಥವರಿಂದ. ಅಬ್ಬಾ, ಎಷ್ಟೊಂದು ಚಂದದ ಪ್ರಯತ್ನ ಎನ್ನಿಸಿತು. ಲವಲವಿಕೆ, ತುಂಟತನದಿಂದ ಅಧ್ಯಕ್ಷ ಭಾಷಣ ಮಾಡಿದ ನಿಸ್ಸಾರ್ ಅವರ ಮಾತು ಕೇಳುವುದೇ ಬಹಳ ಅಪ್ಯಾಯಮಾನವಾಗಿತ್ತು: ಹಿನ್ನೋಟದ ಅನಾವರಣವಾಗಿತ್ತು: ಇನ್ನೂ ಮಾತನಾಡುತ್ತಲೇ ಇದ್ದರೂ ಕೇಳುವ ಹುಮ್ಮಸ್ಸು ಎಲ್ಲರಲ್ಲಿತ್ತು.

ಪುಸ್ತಕದ ಪುಟದಿರುವಿದಾಗ ಎಚ್ಎಸ್ವಿಯವರ ಮುನ್ನುಡಿಯೊಂದಿಗೆ ಕೆ.ವಿ.ತಿರುಮಲೇಶ್ ಸರ್ ಇವರ ಮುನ್ನುಡಿಯೂ ಕಂಡಿದೆ. ಶ್ರೇಷ್ಠ ಸಾಹಿತಿಗಳ ‘ಪ್ರವೇಶಿಕೆ’ಯಿದೆ. ಬಿ.ಆರ್.ಎಲ್ ರ ಕವಿತೆಗಳ ಆಳ, ಹರವು ನಮಗೆ ಬೇರೆ ಬೇರೆ ಕೋನಗಳಲ್ಲಿ ದಕ್ಕುತ್ತದೆ. ತುಂಬ ಸುಂದರವಾದ, ತುಂಬ ಕುತೂಹಲವುಕ್ಕಿಸುವ, ತುಂಬ ಪ್ರೀತಿ , ಸ್ಪಷ್ಠತೆಯ ವ್ಯಾಖ್ಯಾನಗಳನ್ನು ಒದಗಿಸಬಲ್ಲ ಈ ‘ಹಿನ್ನೋಟದ ಕನ್ನಡಿ’ ನಮ್ಮ ಪ್ರೀತಿಯ ಪುಸ್ತಕವೂ ಆಗುವುದರಲ್ಲಿ ಸಂಶಯವಿಲ್ಲ.

Add Comment

Leave a Reply