Quantcast

ಡಾ. ಅಶೋಕ್ ಪೈಯವರ ಆ ಒಂದು ಪತ್ರ..

prasad-naik

ಪ್ರಸಾದ್ ನಾಯ್ಕ್ 

ಅಂಗೋಲಾದಿಂದ 

ಸುಮಾರು ಹನ್ನೊಂದು ವರ್ಷಗಳ ಹಿಂದಿನ ಮಾತು.

ನಮ್ಮ ಮನೆಗೆ ನನ್ನ ಹೆಸರಿನಲ್ಲಿ ಪತ್ರವೊಂದು ಬಂದಿತ್ತು.

img-20161001-wa0003ನನ್ನ ಬಹುನಿರೀಕ್ಷಿತ ಎಸ್ಸೆಸ್ಸೆಲ್ಸಿಯ ಫಲಿತಾಂಶದ ದಿನಗಳವು. ಅಂತೂ ಇಂತೂ ತೊಂಭತ್ತರ ಗಡಿಗೆ ಹತ್ತಿರ ಬರುವಷ್ಟು ಅಂಕಗಳು ಬಂದಿದ್ದವು. ಆದರೆ ಅಚ್ಚರಿಯೆಂಬಂತೆ ಭಾಷಾ ವಿಷಯಗಳಲ್ಲೊಂದಾಗಿದ್ದ ಸಂಸ್ಕೃತದಲ್ಲಿ ನೂರಿಪ್ಪತ್ತೈದಕ್ಕೆ ನೂರಿಪ್ಪತ್ತೈದು ಅಂಕಗಳು ಜಾಕ್-ಪಾಟ್ ಬಂದಂತೆ ಒಲಿದಿದ್ದವು.

ಅದರಲ್ಲೂ ಹತ್ತನೇ ತರಗತಿಯ ಬೋರ್ಡ್ ಎಕ್ಸಾಮಿನೇಷನ್ ಎನ್ನುವ ಹಿನ್ನೆಲೆಯೂ ಇದ್ದಿದ್ದರಿಂದ ಬಹು ಮಹತ್ವದ್ದೂ ಆಗಿತ್ತು ಅನ್ನಬೇಕು. ಹೀಗೆ ಸಂಸ್ಕೃತ ಭಾಷಾ ವಿಷಯದಲ್ಲಿ ಆ ಅಕಾಡೆಮಿಕ್ ವರ್ಷದಲ್ಲಿ ಸೆಂಚುರಿ ಬಾರಿಸಿದ ರಾಜ್ಯದ ಬೆರಳೆಣಿಕೆಯ ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬನಾಗಿದ್ದೆ.

ಆದರೆ ಆ ಸಂದರ್ಭವು ಇನ್ನಷ್ಟು ಆಪ್ತವಾಗಿದ್ದು ಶಿವಮೊಗ್ಗದಿಂದ ಬಂದ ಆ ಪತ್ರದಿಂದ. ಅಂದ ಹಾಗೆ ಪತ್ರವನ್ನು ಕಳುಹಿಸಿದವರು ಇನ್ಯಾರೂ ಅಲ್ಲ. ಈ ನಾಡು ಕಂಡ ಖ್ಯಾತ ಮನೋವೈದ್ಯ, ಲೇಖಕ ಡಾ. ಅಶೋಕ್ ಪೈ.

ಮೊದಲೇ ಆಟೋಗ್ರಾಫುಗಳ ಕಾಲವದು. ಪತ್ರಿಕೆಗಳಲ್ಲಿ ಅವರ ಬಗ್ಗೆ ಓದಿಯಷ್ಟೇ ಅಲ್ಪಸ್ವಲ್ಪ ತಿಳಿದುಕೊಂಡಿದ್ದ ನಾನು ಸಹಜವಾಗಿಯೇ ರೋಮಾಂಚಿತನಾಗಿದ್ದೆ. ವೈಯಕ್ತಿಕ ನೆಲೆಯಲ್ಲಿ ಯಾವ ರೀತಿಯಲ್ಲೂ ಪರಿಚಿತರಲ್ಲದ ಡಾ. ಪೈಯವರಿಂದ ಬಂದ ಆ ಪತ್ರವು ನಮ್ಮೆಲ್ಲರಲ್ಲೂ ಅಚ್ಚರಿಯನ್ನೂ, ಸಂತಸವನ್ನೂ ತಂದಿದ್ದಂತೂ ಸತ್ಯ. ಭಾಷಾ ವಿಷಯದಲ್ಲಿ ಗಳಿಸಿದ ಅಂಕಗಳಿಗೆ ಸಂಬಂಧಿಸಿದಂತೆ ಶುಭಾಷಯವನ್ನು ಕೋರುತ್ತಾ, ಅಕ್ಷರಗಳಲ್ಲೇ ಬೆನ್ನು ತಟ್ಟುತ್ತಾ, ಪತ್ರದೊಂದಿಗೆ ಪ್ರೋತ್ಸಾಹಧನವನ್ನು ಕಳುಹಿಸಿದ್ದರು ಡಾ. ಪೈ.

ಆ ದಿನಗಳಲ್ಲಿ ಡಾ. ಅಶೋಕ್ ಪೈಯವರ ಬಗ್ಗೆ ಹೆಚ್ಚೇನೂ ತಿಳಿಯದೇ ಇದ್ದರೂ ಪತ್ರಿಕೆಗಳಿಗೆ ಸಂಕ್ಷಿಪ್ತವಾಗಿ ಕಣ್ಣಾಡಿಸುವ ಅಭ್ಯಾಸವಿದ್ದುದರಿಂದ ಅವರು ಖ್ಯಾತ ಮನೋವೈದ್ಯರಾಗಿದ್ದರು ಎಂಬುದಂತೂ ತಿಳಿದಿತ್ತು.

ಅಲ್ಲದೆ ಟೆಲಿವಿಷನ್ನಿನಿಂದ ತಕ್ಕಮಟ್ಟಿನ ದೂರವನ್ನೇ ಕಾಯ್ದಿರಿಸಿಕೊಂಡಿದ್ದ ನಮ್ಮ ಮನೆಯಲ್ಲೂ ಪ್ರತೀ ಭಾನುವಾರ ನಾಲ್ಕರ ಹೊತ್ತಿಗೆ ಪ್ರಸಾರವಾಗುತ್ತಿದ್ದ ವಾರಕ್ಕೊಂದು ಕನ್ನಡ ಸಿನೆಮಾವನ್ನು ನೋಡುವ ಅಭ್ಯಾಸವಿದ್ದುದರಿಂದ ಡಾ. ಅಶೋಕ್ ಪೈಯವರ “ಉಷಾಕಿರಣ” ಚಿತ್ರದ ಪರಿಚಯವು ನನಗಿತ್ತು. ಸುರೇಶ್ ಹೆಬ್ಳೀಕರ್ ಮತ್ತು ಗಿರೀಶ್ ಕಾನರ್ಾಡರ ಪಾತ್ರಗಳು ಆಗಲೇ ನನಗೆ ಇಷ್ಟವಾಗಿದ್ದವು. ಅಂಥಾ ಹುಡುಗಾಟದ ಕಾಲದಲ್ಲೂ ಗಂಭೀರವಾಗಿ ಮತ್ತು ಇಷ್ಟಪಟ್ಟು ನೋಡಿದ್ದ ಚಿತ್ರವೆಂದರೇ ಇದೊಂದೇ. ಖುಷಿಪಡಲು ಇನ್ನೇನು ಬೇಕಿತ್ತು ನನಗೆ?

ಬಂದ ಪತ್ರಕ್ಕೆ ಧನ್ಯವಾದವನ್ನರ್ಪಿಸಿ ಬರೆದ ಪತ್ರಕ್ಕೂ ಉತ್ತರವನ್ನು ಬರೆದು ಕಳಿಸಿದ್ದರು ಡಾ. ಪೈ. ಪತ್ರವು ನಾನು ಕಲಿಯುತ್ತಿದ್ದ ಕಟೀಲು ವಿದ್ಯಾಸಂಸ್ಥೆಯನ್ನು ತಲುಪಿತ್ತು. ಅಪ್ಪ ಆ ಪತ್ರವನ್ನು ನೆನಪಿಸುತ್ತಾ ಡಾ. ಪೈಯವರನ್ನು ಭೇಟಿಯಾಗಲಂತೂ ನಮ್ಮಿಂದಾಗಲಿಲ್ಲ, ಒಂದು ಇ-ಮೈಲ್ ಆದರೂ ಕಳಿಸು ಎಂದು ವಾರದ ಹಿಂದಷ್ಟೇ ಪರಿತಪಿಸಿದ್ದಾರೆ. ಪತ್ರವು ಈಗಲೂ ಕಿನ್ನಿಗೋಳಿಯ ನಿವಾಸದ ಸಂಗ್ರಹದಲ್ಲಿ ಭದ್ರವಾಗಿದೆ.

img-20161001-wa0005ನಂತರದ ಪ್ರತೀ ಹೆಜ್ಜೆಗಳಲ್ಲೂ ಈ ಪತ್ರವು ಅಗೋಚರ ಶಕ್ತಿಯಂತೆ ನನ್ನ ಬೆನ್ನ ಹಿಂದೆ ನಿಂತಿದೆ, ಕಾರ್ಯೋನ್ಮುಖನಾಗಲು ಪ್ರೇರೇಪಿಸಿದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಯಶಸ್ಸಿನ ಯಾವುದೇ ಮಜಲನ್ನು ತಲುಪಿದರೂ ನಿಭಾಯಿಸಲೇಬೇಕಾದ ಒಂದು ಸಾಮಾಜಿಕ ಜವಾಬ್ದಾರಿಯನ್ನೂ ನನಗೆ ಕಲಿಸಿ ಕೊಟ್ಟಿದೆ. ಯಾವುದೇ ಪ್ರತಿಷ್ಠೆಯ, ಪ್ರಚಾರದ ಸೋಂಕಿಲ್ಲದೆ ಶಿವಮೊಗ್ಗದ ಮಾನಸಾ ನರ್ಸಿಂಗ್ ಹೋಮ್ ನಿಂದ ನಮ್ಮ ಕಾಲೇಜನ್ನು ತಲುಪಿದ ಆ ಪತ್ರವೇ ಇದಕ್ಕೆ ಸಾಕ್ಷಿ.

ಡಾ. ಅಶೋಕ್ ಪೈಯವರನ್ನು ಮುಖತಃ ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂಬ ಹತಾಶೆಯು ಹಲವು ವರ್ಷಗಳಿಂದ ಕಾಡಿದ್ದಿದೆ. ಅಂಗೋಲಾದ ಅರ್ಧರಾತ್ರಿಯಲ್ಲಿ ಓದುತ್ತಿದ್ದ ಮಧ್ಯದಲ್ಲೇ ಡಾ. ಅಶೋಕ್ ಪೈಯವರು ಇನ್ನಿಲ್ಲ ಎಂಬ ಸಂದೇಶವು ಬಂದಾಗ ದುಃಖವೂ, ಆಘಾತವೂ ಜೊತೆಗೇ ಆಗಿ ಮನಸ್ಸು ಭಾರವಾಯಿತು. ಸುದ್ದಿಯು ಸುಳ್ಳಾಗಲಪ್ಪಾ ಎಂದುಕೊಂಡೇ ಅಂತರ್ಜಾಲವನ್ನು ತಡಕಾಡಿದ ನನಗೆ ನಿರಾಶೆಯು ಕಾದಿತ್ತು.

ಮನೋವಿಜ್ಞಾನ, ಬರಹ, ಚಿತ್ರರಂಗ ಇತ್ಯಾದಿ ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆಯನ್ನಿತ್ತ ಹಿರಿಯರು ಡಾ. ಅಶೋಕ್ ಪೈ. ಜೊತೆಗೇ ನನ್ನಂತಹ ಹಲವು ಜೀವಗಳಿಗೆ, ಆಸಕ್ತರಿಗೆ ದನಿಯಾಗಿ, ಮಾರ್ಗದರ್ಶಕರಾಗಿ ಭರವಸೆಯ ಬೆಳಕಾದವರು.

ಡಿಯರ್ ಸರ್… ಮತ್ತೆ ಹುಟ್ಟಿ ಬನ್ನಿ…

2 Comments

  1. Anonymous
    October 3, 2016
    • Prasad
      October 3, 2016

Add Comment

Leave a Reply