Quantcast

ಎಲ್ಲಿಂದಲೋ ಬಂದವರು..

darga

ರಂಜಾನ್ ದರ್ಗಾ

ಭಾರತದ ಇತಿಹಾಸದಲ್ಲಿ 12ನೆಯ ಶತಮಾನ, ಶರಣರ ಶತಮಾನ.

ಎಲ್ಲ ಅವೈದಿಕ ಧರ್ಮಗಳು, ಮತಗಳು, ಸಿದ್ಧಾಂತಗಳು ಮತ್ತು ಪಂಥಗಳು ವೈದಿಕವನ್ನು ಎದುರಿಸುವಲ್ಲಿ ಗೊಂದಲಕ್ಕೀಡಾಗಿದ್ದವು.

ಶೈವರಲ್ಲಿ ಕೆಲವರು ಹಿಂಸಾ ಮತ್ತು ಸ್ವಯಂಹಿಂಸಾ ಭಕ್ತಿಯ ಆಚರಣೆಯಲ್ಲಿ ತೊಡಗಿದ್ದರು. ವಿವಿಧ ಶೈವ ಶಾಖೆಗಳು ವೈದಿಕಮಯವಾಗಿ ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡವು. ಇನ್ನಿತರ ಅವೈದಿಕ ಧರ್ಮಗಳು ತೀವ್ರತೆಯನ್ನು ಕಳೆದುಕೊಂಡವು. ವಿವಿಧ ಅವೈದಿಕ ಪಂಥಗಳು ವೈದಿಕ ಧರ್ಮದ circleಯಥಾಸ್ಥಿತಿವಾದವನ್ನು ಎದುರಿಸುವಲ್ಲಿ ನಿರತವಾಗಿದ್ದರೂ ಆ ಕಾಲದ ಸ್ಥಿತಿಗತಿಯಲ್ಲಿ ಅವೆಲ್ಲ ಹೊಸತನದ ಕಡೆಗೆ ಹೋಗುವಲ್ಲಿ ಸಾಧ್ಯವಾಗುವಂಥ ಅವಕಾಶಗಳಿರಲಿಲ್ಲ.

ರಾಜರ ಯುದ್ಧೋನ್ಮಾದ ಮತ್ತು ಹಿಂಸಾಭಕ್ತಿ ಜೊತೆ ಜೊತೆಯಲ್ಲಿ ಸಾಗಿದ್ದವು. ಕನ್ನಡದ ನೆಲದಲ್ಲಿ 10ನೆಯ ಶತಮಾನವಂತೂ ಯುದ್ಧಗಳ ಶತಮಾನವೇ ಆಗಿತ್ತು. 11ನೆಯ ಶತಮಾನದ ವಿದ್ಯಮಾನಗಳು ಕೂಡ ಯುದ್ಧಮಯವಾಗೇ ಇದ್ದವು.

ಇವೆಲ್ಲ ಕಾರಣಗಳಿಂದ ವೈದಿಕವು ಹೆಚ್ಚು ಹೆಚ್ಚು ಪ್ರಭಾವಶಾಲಿಯಾಗಿತ್ತು. ಇಂಥ ಅಂಧಃಕಾರದ ಪರಿಸ್ಥಿತಿಯಲ್ಲಿ ಆಶಾಜ್ಯೋತಿಯೊಂದು ಉದಯಿಸಿತು. ಆ ಜಗಜ್ಜ್ಯೋತಿಯೇ ಬಸವಣ್ಣ!

ಬಸವಣ್ಣನವರು ಕಲ್ಯಾಣದ ಪ್ರಧಾನಿಯಾಗಿದ್ದಾಗ ಅವರ ಅವೈದಿಕ ಸಿದ್ಧಾಂತ ಭರತಖಂಡದ ಮೂಲೆ ಮೂಲೆಗಳನ್ನು ತಲುಪಿತು. ವೈದಿಕ ಸಿದ್ಧಾಂತದ ವಿರುದ್ಧ ದೇಶದ ಎಲ್ಲ ಅವೈದಿಕ ಶಕ್ತಿಗಳನ್ನು ಮೊಟ್ಟ ಮೊದಲ ಬಾರಿಗೆ ಒಂದುಗೂಡಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಹೊಸ ಅವೈದಿಕ ಸಿದ್ಧಾಂತಕ್ಕಾಗಿ ಚಡಪಡಿಸುತ್ತಿದ್ದವರ ದಾರಿಗಳೆಲ್ಲ ಕಲ್ಯಾಣದ ಕಡೆಗೆ ಮುಖ ಮಾಡಿದವು. ಎಲ್ಲೆಲ್ಲಿಂದಲೋ ಬಂದವರು ಕಲ್ಯಾಣದ ಹೆಬ್ಬಾಗಿಲ ಬಳಿ ಇರುವ ಪ್ರಶಸ್ತ ಸ್ಥಳದಲ್ಲಿ ಉಳಿದರು. ಆ ಬಯಲಲ್ಲಿ ಪುಟ್ಟ ಹಳ್ಳ ಹರಿಯುತ್ತಿದೆ. ಸುತ್ತೆಲ್ಲ ಹಸಿರು ಹರಡಿಕೊಂಡಿದೆ. ಆ ಸ್ಥಳಕ್ಕೆ ಇಂದಿಗೂ ‘ಬಂದವರ ಓಣಿ’ ಎಂದೇ ಕರೆಯುತ್ತಾರೆ.

ಬಂದವರ ಓಣಿಗೆ ನದಿಗಳಂತೆ ಹರಿದು ಬಂದವರೆಲ್ಲ ಬಸವಾದ್ವೈತದ ಸಾಗರದಲ್ಲಿ ಒಂದಾದರು.

ಬಸವಾದ್ವೈತ ಅರಿವು ಮತ್ತು ಆಚಾರವನ್ನು ನಡೆ ನುಡಿ ಸಿದ್ಧಾಂತವಾಗಿಸುವಲ್ಲಿ ತಮ್ಮ ಬದುಕನ್ನೇ ಪಣಕ್ಕಿಟ್ಟರು. ಬಸವಣ್ಣನವರ ಜೊತೆ ಸೇರಿ ಸೈದ್ಧಾಂತಿಕವಾಗಿ ಬಸವಣ್ಣನೇ ಆದರು. ಅದಕ್ಕಾಗಿ ಎಲ್ಲ ಕಷ್ಟನಷ್ಟಗಳನ್ನು ಅನುಭಿಸಿದರು. ಕೊನೆಯಲ್ಲಿ ಸಮಗಾರ ಹರಳಯ್ಯ ಮತ್ತು ಮಧುವರಸರ ಮಕ್ಕಳ ಮದುವೆಯನ್ನು ನೆಪವಾಗಿಸಿಕೊಂಡು ‘ವಿಲೋಮ ವಿವಾಹವಿದು, ಧರ್ಮಶಾಸ್ತ್ರಕ್ಕೆ ವಿರುದ್ಧವಾದುದು’ ಎಂದು ಲೋಕಮಾನ್ಯವಾದ ಬಸವತತ್ತ್ವದ ವಿರುದ್ಧ ಗುಲ್ಲೆಬ್ಬಿಸಿದರು.

ವೈದಿಕರ ಶಾಸ್ತ್ರಗಳು ಹೇಳಿದಂತೆ ಬಿಜ್ಜಳನ ಶಸ್ತ್ರಗಳು ಕೇಳಿದವು. ಕಲ್ಯಾಣ ನಗರದಲ್ಲಿ ಶರಣರ ಹತ್ಯಾಕಾಂಡವಾಯಿತು. ಎಲ್ಲಿಂದಲೋ ಬಂದು ಶರಣರಾದವರಲ್ಲಿ ಅನೇಕರು ಹುತಾತ್ಮರಾದರು. ಅವರ ಬಹುಪಾಲು ವಚನಗಳು ಬೆಂಕಿಗೆ ಆಹುತಿಯಾದವು. ಅಳಿದುಳಿದವರು ದಿಕ್ಕೆಟ್ಟು ಹೋದರು.

ಶರಣರು

ಎಲ್ಲಿಂದಲೊ ಬಂದವರು ಅವರು
ಬಂದವರ ಓಣಿಯ ತುಂಬಿದವರು.
ನುಡಿದರವರು ಸರಳ ನುಡಿಯನು
ನಡೆದರವರು ಕಠಿಣ ನಡೆಯನು.

designಕಂದಹಾರದಿಂದಲೊ ಕಾಶ್ಮೀರದಿಂದಲೊ
ಮಾಳವದಿಂದಲೊ ಕೇರಳದಿಂದಲೊ
ಎಲ್ಲೆಲ್ಲಿಂದಲೊ ಬಂದವರು ಅವರು
ಬಸವಣ್ಣನ ಜೊತೆಯಲಿ ನಡೆದವರು.

ಹೊನ್ನ ಕಿರೀಟ ಪಲ್ಲಕ್ಕಿಯವರಲ್ಲ ಅವರು
ಆನೆ ಕುದುರೆ ಒಂಟೆಯವರಲ್ಲ ಅವರು
ಅರಿವು ಆಚಾರವಾಗಿಸಿ ಬದುಕಿದವರು
ಭವಿತನವ ದಾಟಿ ಅನುಭಾವ ಕಂಡವರು.

ಎಲ್ಲಿಂದಲೊ ಬಂದವರು ಅವರು
ಲೋಕವನ್ನೇ ನಾಕ ಮಾಡಿದವರು
ಕಣ ಕಣದಲಿ ದೇವರ ಕಂಡವರು
ಎಲ್ಲರನು ಶಿವನೆಂದು ನಂಬಿದವರು.

ಕಾಳಾಮುಖರು ಸಕಲಶೈವರು ವೈದಿಕರು
ಗಾಣಪತ್ಯರು ಸಿದ್ಧರು ನಾಥ ಅನಾಥರು
ಬಡವರು ಸಿರಿವಂತರು ಮತ ಮೀರಿದರು
ಜಾತಿ ಕಳೆದರು ಬಸವಣ್ಣನೇ ಆದರವರು.

ಎಲ್ಲಿಂದಲೊ ಬಂದು ಎಲ್ಲರೊಡನೆ ಬೆರೆತು
ಶರಣ ಸಂಕುಲ ನಿರ್ಮಿಸಿದವರು ಅವರು
ಬ್ರಹ್ಮ ಒಂದೇ ಬ್ರಹ್ಮಾಂಡ ಒಂದೇ ಒಂದೇ
ಮಾನವಕುಲ ಒಂದೇ ಎಂದು ಸಾರಿದವರು.

Add Comment

Leave a Reply