Quantcast

ಅಪಾರ ಬರೆದ ‘ಉಳಿದ ಕತೆ’

ಉಳಿದ ಕತೆ

ಅಪಾರ 

ತುಂಬ ವರುಷಗಳ ನಂತರ ಅಜ್ಜಿ ಊರಿಗೆ ಹೋಗಿದ್ದೆ. ಹುಷಾರಿಲ್ಲದೆ ಹಾಸಿಗೆ ಹಿಡಿದ ನನ್ನ ಅಜ್ಜಿ ನಿರಂತರ ಎರಡು ದಿನ ಅರ್ಧರಾತ್ರಿಯಲ್ಲಿ ಎದ್ದು ಕುಳಿತು ನನ್ನ ಹೆಸರು ಕನವರಿಸಿಕೊಂಡು, “ಇನ್ನೂ ನನ್ನ ನೋಡೋಕೆ ಬರಲಿಲ್ಲವೆ ಅವನು? ಸಣ್ಣವನಿದ್ದಾಗ ನಾನು ಅವನನ್ನು ಎಷ್ಟೊಂದು ಎತ್ತಿ ಆಡಿಸಿದ್ದೆ’ ಅಂತೆಲ್ಲಾ ಹಂಬಲಿಸಿದಮೇಲೆ ಹೋಗದೆ ಉಳಿಯುವುದು apara-colorಸಾಧ್ಯವಿರಲಿಲ್ಲ. ಸಾಕಷ್ಟು ಉದ್ದವಿದ್ದ ಊರಿನ ಬೀದಿಗಳೆಲ್ಲಾ, ಇದೀಗ ಬೆಂಗಳೂರಿನ ವಿರಾಟ್‌ ಹಾದಿಗಳನ್ನು ನೋಡಿ ಹಿಗ್ಗಿದ ಕಣ್ಣುಗಳಿಗೆ ಬಲು ಕಿರಿದಾಗಿ, ಶುರುವಾದೊಡನೆಯೇ ಮುಗಿಯುತ್ತಿರುವಂತೆ ಕಂಡವು. ಎರಡು ದಿನವಿಡೀ ಅಜ್ಜಿಯ ಕೈಹಿಡಿದು ಕೂತು ಕಿವಿ ಪೂರ್ತಿ ಕೇಳಿಸದ ಅವರೊಂದಿಗೆ ಹೇಗೋ ರಾಜಿ ಮಾಡಿಕೊಂಡೆ.
ಮರಳಿ ಬರುವಾಗ ಖಾಸಗಿ ಬಸ್ಸಿನಲ್ಲಿ ಸಿಕ್ಕಾಪಟ್ಟೆ ರಷ್‌. ಕಷ್ಟಪಟ್ಟು ಕಂಬಿ ಹಿಡಿದು ಬಾಗಿಲ ಬಳಿಯೇ ನಿಂತಿದ್ದ ನನ್ನ ಮುಖದ ತುಂಬಾ ಸನಿಹದಲ್ಲೇ ಒಬ್ಬ ಹೆಂಗಸಿನ ಮುಖವಿತ್ತು. ಒಂದು ಬಗೆಯ ಮುಜುಗರದಿಂದ ಅವರತ್ತ ನೋಡಿ ಅಸಹಾಯಕ ನಗು ಚೆಲ್ಲಲೆತ್ನಿಸಿದೆ. ಸುಮಾರು ೬೦ ವರುಷದ ಲಕ್ಷಣವಾಗಿದ್ದ ಅಗಲ ಮುಖದ ಆಕೆ ಆ ಇಕ್ಕಟ್ಟಿನಲ್ಲೂ “ಶಶಿಯಮ್ಮನ ಮಗ ಅಲ್ವೇನಪ್ಪ?’ ಎಂದಾಗ ಹೌದು ಎನ್ನುತ್ತಲೇ ಬೀದಿಗಳೇ ಗುರುತುಸಿಗದಷ್ಟು ವರ್ಷಗಳು ಉರುಳಿದ ಮೇಲೂ ಮುಖಗಳನ್ನು ನೆನಪಿಡುವ ಜನರ ಶಕ್ತಿಗೆ ತಲೆದೂಗಿದೆ.

“ನಿಮ್ಮಮ್ಮ ನಾನೂ ಒಂದೇ ಕ್ಲಾಸಲ್ಲಿ ಓದ್ತಿದ್ವಪ್ಪ, ಈಗಲೂ ನಿಮ್ಮ ಅಮ್ಮ ಊರಿಗೆ ಬಂದರೆ ಮಾತಾಡಿಸದೆ ಹಂಗೇ ಹೋಗಲ್ಲ’ ಎಂದರು. ನಾನು ನಕ್ಕೆ. “ಎಷ್ಟು ಜನ ಮಕ್ಕಳಪ್ಪಾ’ ಎಂದು ಕೇಳಿದರು. “ಇಲ್ಲ ಮದುವೆ ಆಗಿಲ್ಲ’ ಅಂದೆ, ಯಾಕೆ? ಏನು? ಆಗಬೇಕಿತ್ತು ಎಂಬೆಲ್ಲಾ ಉಪದೇಶಗಳಿಗೆ ತಯಾರಾಗುತ್ತ. ಆದರೆ ಅವರು ” ಇರಲಿ ಬಿಡು ಮದುವೆ ಆಗಿ ಪಡೋ ಸುಖ ಅಷ್ಟರಲ್ಲೇ ಇದೆ’ ಎಂದರು. ಈಗೀಗ ಮದುವೆ ಎಂಬ ವ್ಯವಸ್ಥೆಯ ಬಗ್ಗೆ ಹಳ್ಳಿ ಜನರೂ ವಿಶ್ವಾಸ ಕಳಕೋತಿದ್ದಾರೇನೋ ಎಂಬ ಸಣ್ಣ ಆತಂಕವಾಯಿತು.

ಐದು ನಿಮಿಷದ ಇಕ್ಕಟ್ಟಿನ ನಂತರ ಸಾಣೀಕೆರೆಯಲ್ಲಿ ಇಳಿದು ಬೆಂಗಳೂರಿನ ಬಸ್ಸು ಹಿಡಿದಾಗ ಹಿರಿಯೂರಿಗೆ ಹೊರಟಿದ್ದ ಆಕೆಯೂ ಅದೇ ಬಸ್ಸು ಹತ್ತಿದರು. ಟಿಕೆಟ್‌ ತೆಗೆದುಕೊಳ್ಳುವಾಗ ನಾನು ಅವರದ್ದೂ ಸೇರಿಸಿ ತೆಗೆದುಕೊಂಡಾಗ ಮುಜುಗರ ಪಟ್ಟುಕೊಂಡರು. “ಹಿರಿಯೂರಿನಲ್ಲಿ ಸಂತೆಗೆ ಹೊರಟಿರೇನೊ’ ಎಂದೆ ಮಾತಿಗೆ. ಅವರು “ಇಲ್ಲ ನನ್ನ ತಂಗಿ ಮನೆಗೆ ಹೋಗ್ತಿರೋದು. ಅವಳಿಗೆ ಹುಷಾರಿಲ್ಲ. ನೋಡೋಕ್‌ ಹೋಗ್ತಿದ್ದೀನಿ’ ಅಂದ್ರು. ” “ಮಕ್ಕಳು ಏನ್‌ ಮಾಡ್ತಾರೆ’ ಎಂದೆ. “ಮಕ್ಕಳು ಇಲ್ಲಪ್ಪ. ಗಂಡನೂ ಈಗಿಲ್ಲ. ತಮ್ಮನ ಮನೇಲಿದೀನಿ. ಅವರು ಸೇರಲ್ಲ’ ಎಂದರು ಆಕೆ.

apara-clock“ಅವರು ಸೇರಲ್ಲ’ ಎಂಬ ಕಡೆಯ ಮಾತು, ಮತ್ತು ಅದನ್ನು ಉಳಿದ ಮಾತುಗಳ ಜತೆಗೆ ಸೇರಿಸಿ ಒಂದೇ ಉಸಿರಿನಲ್ಲೆಂಬಂತೆ ಆಕೆ ಹೇಳಿದ್ದು, ಆಗಷ್ಟೇ ಪರಿಚಯವಾದ ನನ್ನಂಥ ಕಿರಿಯನೊಡನೆ ಅದನ್ನು ಹೇಳಬೇಕೆನಿಸಿದ್ದು-ನನ್ನಲ್ಲಿ ಒಂದು ಬಗೆಯ ತಲ್ಲಣ ಮೂಡಿಸಿದವು.. ನಾನು ಮತ್ತೇನನ್ನೂ ಕೇಳಲಿಲ್ಲ. ಕೆಲವು ನಿಮಿಷಗಳ ಹಿಂದೆ “ಮದುವೆ ಆಗಿ ಪಡೋ ಸುಖ ಅಷ್ಟರಲ್ಲೇ ಇದೆ’ ಎಂಬ ಆಕೆಯ ಮಾತು ಈಗ ಅರ್ಥವಾಗತೊಡಗಿತ್ತು. ಹಿರಿಯೂರು ಬಂದಾಗ “ನಾನು ಇಲ್ಲೇ ಇಳೀತಿನಿ, ಬರ್ತಿನಪ್ಪಿ ಹಾ..’ ಎಂದು ಆಪ್ತವಾಗಿ ಹೇಳಿ ಅವರು ಇಳಿಯುತ್ತಿರುವಾಗ ಯಾಕೋ ಚೂರು ಭಾವುಕನಾದೆ.

ಬೆಂಗಳೂರಿಗೆ ಬಂದು ನಿನ್ನ ಕ್ಲಾಸ್‌ಮೇಟಂತೆ, ಹೋದಾಗೆಲ್ಲ ನೀನು ಮಾತಾಡಿಸ್ತೀಯಂತಲ್ಲ ಅಂತ ಎಷ್ಟು ನೆನಪಿಸಿದರೂ ಅಮ್ಮನಿಗೇನೂ ನೆನಪಾಗದೆ “ಹೌದೆ, ಯಾರಿರಬಹುದು’ ಅಂತ ಯೋಚಿಸುತ್ತಲೇ ಇದ್ದರು. ಹೋಗಲಿ ಬಿಡು ಎಂದ ನನಗೆ ಈಗ ಆ ಹೆಂಗಸು ತನ್ನ ಗುಣವಾಗುತ್ತಿರುವ ತಂಗಿಯ ಮಂಚದ ಪಕ್ಕ ಕೂತು ಲೋಕಾಭಿರಾಮವಾಗಿ ಮಾತಾಡುತ್ತಿರುವ ಚಿತ್ರ ಕಣ್ಣಿಗೆ ಬಂತು. ಮಾತಿನ ಮಧ್ಯೆ ಅವರು ಬಸ್ಸಿನಲ್ಲಿ ಸಿಕ್ಕು ತನ್ನ ಟಿಕೇಟನ್ನೂ ತೆಗೆಸಿಕೊಟ್ಟ ಶಶಿಯಮ್ಮನ ಮಗನ ವಿಷಯವನ್ನೂ ತೆಗೆದಿರಬಹುದು ಅನಿಸಿತು.

Add Comment

Leave a Reply