Quantcast

‘ಬಲೇ ಒಡಿಪುಗ್’.. ಸ್ವಾಗತ!

rajaram tallur low res profile

ರಾಜಾರಾಂ ತಲ್ಲೂರು

ಪಶ್ಚಿಮ ಘಟ್ಟದ ಗುಡ್ಡಗಳ ನಡುವಿನಿಂದ ಹೊಸನೀರು ಒಡಿಪ್ಪುನ (ಹರಿದು ಬರುವ) ನೆಲ- ಉಡುಪಿ. ಇಂತಹ ಉಡುಪಿಗೆ “ಚಲೋ ಉಡುಪಿ” ಎಂದು ಮಾನವೀಯತೆಯ ಹೊಸನೀರನ್ನು ಹರಿಸಿತರುತ್ತಿರುವ ಎಲ್ಲ ಗೆಳೆಯರಿಗೂ ಸ್ವಾಗತ.

ಬ್ರಿಟಿಷ್ ಕಾಲದಿಂದಲೂ, ಅತ್ತಣ ಮದರಾಸು ಪ್ರೆಸಿಡೆನ್ಸಿಗೂ ಇತ್ತಣ ಬಾಂಬೆ ಪ್ರೆಸಿಡೆನ್ಸಿಗೂ ದೂರವೇ ಇದ್ದುದರಿಂದ ಅಧಿಕಾರಸ್ಥರ, ರಾಜಕೀಯದ ರಗಳೆಗಳನ್ನು ಅಂಟಿಸಿಕೊಳ್ಳದೇ ಉಳಿದಿದ್ದ ಉಡುಪಿ-ಮಂಗಳೂರುಗಳಂತಹ ಕರಾವಳಿ ಜಿಲ್ಲೆಗಳಲ್ಲಿನ ದೈನಂದಿನ ಬದುಕಿನ ಸಾಮರಸ್ಯವು ಕಳೆದ 50 ವರ್ಷಗಳಲ್ಲಿ ಕಳೆಗುಂದುತ್ತಾ ಬಂದಿದೆ. ಕಳೆದ 25 ವರ್ಷಗಳಲ್ಲಂತೂ ಇದು ಬಹಳ ವೇಗವಾಗಿ ಬದಲಾಗಿದೆ.

avadhi-column-tallur-verti- low res- cropಒಡೆಯ – ಒಕ್ಕಲುಗಳ ತಾಕಲಾಟ ಇಲ್ಲಿ ಬಹಳ ಹಳೆಯದಾದರೂ, ಅದರ ಸ್ವರೂಪ ಸ್ಥಳೀಯವಾದದ್ದಾಗಿತ್ತು. ಸ್ವಾತಂತ್ರ್ಯದ ಬಳಿಕ, ಪ್ರಭಾವಿ ಜಮೀನ್ದಾರರ ಎದುರು ನಿಲ್ಲಲಾಗದ ಬಡ, ಕೆಳ ಜಾತಿಗಳ ಒಕ್ಕಲು ಕುಟುಂಬಗಳು ಇಲ್ಲಿನ ರಗಳೆಯೇ ಬೇಡವೆಂದು ತಮ್ಮ ಮಕ್ಕಳಲ್ಲಿ ಒಬ್ಬರನ್ನಾದರೂ “ಮುಂಬಯಿಗೆ” ದುಡಿಯಲು ಕಳುಹಿಸಲಾರಂಭಿಸುವ ಮೂಲಕ ಸಣ್ಣಗೆ ಸ್ವಾತಂತ್ರ್ಯದ ಹೊಸಗಾಳಿಯನ್ನು ಸವಿಯಲಾರಂಭಿಸಿದ್ದರು.

ಬಳಿಕ  61ರ ಭೂಸುಧಾರಣಾ ಕಾಯಿದೆ ಕರಾವಳಿ ಜಿಲ್ಲೆಗಳಲ್ಲಿ ತಂದ ಬದಲಾವಣೆಗಳಿಂದಾಗಿ, ಇಡಿಯ ಜಿಲ್ಲೆಯ ಸ್ವರೂಪವೇ ಬದಲಾಯಿತು; ಉಳುವವರು ಹೊಲದೊಡೆಯರಾದರು; ಆರ್ಥಿಕ-ರಾಜಕೀಯ ಸ್ವಾತಂತ್ರ್ಯಗಳ ವ್ಯಾಪ್ತಿ ಹಿಗ್ಗತೊಡಗಿತು.

70ರ ದಶಕದಲ್ಲಿ ಕೈಗಾರಿಕೀಕರಣದ ಆರಂಭಿಕ ಹೆಜ್ಜೆಗಳು ಕರಾವಳಿಯಲ್ಲಿ ಊರಲಾರಂಭಿಸಿದ್ದು ಪಣಂಬೂರಿನಲ್ಲಿ ಬಂದರು ಆರಂಭಗೊಂಡಾಗ. ನಿಧಾನಕ್ಕೆ, ಮುಂಬಯಿಯಲ್ಲಿ ಕಷ್ಟಪಟ್ಟು ದುಡಿದು ಕರಾವಳಿಗೆ ‘ಮನಿಯಾರ್ಡರ್ ಎಕಾನಮಿ’ಯ ರುಚಿ ತೋರಿಸಿದವರು ಕ್ರಮೇಣ ಬೆಳೆದು, ಆ ರುಚಿಯನ್ನು ‘ಗಲ್ಫ್ ರಾಷ್ಟ್ರ’ಗಳಿಂದ (ಇತ್ತೀಚೆಗೆ ಅಮೆರಿಕದಿಂದಲೂ) ತೋರಿಸಲಾರಂಭಿಸಿದರು.

ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿ ಎಂದರೆ, ದಲಿತ ಸಮುದಾಯ ಈ ಬದಲಾವಣೆಗಳ ಭಾಗ ಆಗತೊಡಗಿದ್ದು ಸುಮಾರಿಗೆ 90-95ರ ಬಳಿಕವೇ!

ಕಾಡುತ್ತಿರುವ ಒಂದು ಸಂಗತಿ…

ಈವತ್ತು ಅಮಾನವೀಯ ಹಿಂಸೆಗೆ ಪ್ರಯೋಗಶಾಲೆಯಂತಾಗಿರುವ ಕರಾವಳಿ ಜಿಲ್ಲೆಗಳು ಈ ಸ್ಥಿತಿಗೆ ಬರಲು ಕಾರಣವಾದರೂ ಏನು? ಸಾಮರಸ್ಯದಿಂದ ಬದುಕುತ್ತಿದ್ದ ಕರಾವಳಿ ಯಾಕೆ ಬದಲಾಯಿತು ಎಂದು ಯೋಚಿಸಿದರೆ, ವೈಯಕ್ತಿಕವಾಗಿ ನನ್ನನ್ನು ಕಾಡುವುದು ಈ ಸಂಗತಿ:

ಕರಾವಳಿಯ ‘ಮನಿಯಾರ್ಡರ್ ಇಕಾನಮಿ’ ಇಲ್ಲಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಬೇಗ ತಂದುಕೊಟ್ಟದ್ದು, ಶಿಕ್ಷಣಕ್ಕೆ ಹಾದಿ ತೆರೆದದ್ದು – ಎಲ್ಲವೂ ಸರಿ. ಅದರ ಜೊತೆಗೇ ಇನ್ನೊಂದು ಅಪಾಯಕ್ಕೂ  ಅದು ಹಾದಿ ಮಾಡಿಕೊಟ್ಟಿದೆ. ಮೊದಮೊದಲು ಕ್ರಷಿ ಚಟುವಟಿಕೆಗಳಲ್ಲಿ ಉತ್ಸಾಹದಿಂದ ತೊಡಗಿಕೊಂಡ ಕುಟುಂಬಗಳು, ಕ್ರಮೇಣ ಹಲವು ಕಾರಣಗಳಿಗಾಗಿ ಅದರಿಂದ ವಿಮುಖವಾದಂತೆಲ್ಲ ‘ಕೂತುಣ್ಣುವ’ ಒಂದು ವರ್ಗವೂ ಗಾತ್ರದಲ್ಲಿ ಬೆಳೆಯಲಾರಂಭಿಸಿತು.

ಆರ್ಥಿಕವಾಗಿ ಲಾಭವಿಲ್ಲದ ಭತ್ತದಂತಹ ಕ್ರಷಿ ಭೂಮಿಗಳಲ್ಲಿ ತೆಂಗು, ಬತ್ತ, ಕಂಗು, ಗೇರು ಇತ್ಯಾದಿ ವಾಣಿಜ್ಯ ಬೆಳೆಗಳು ಬಂದವು. ದುಡಿದುಣ್ಣುವುದು ಕಡಿಮೆ ಆಗತೊಡಗಿತು. ಗದ್ದೆಗಳು ಹಡಿಲುಬಿದ್ದವು. ಗಲ್ಫ್, ಮುಂಬಯಿಯಿಂದ ಮನಿಯಾರ್ಡರ್ ಮೂಲಕ ಹಣ ಹರಿದುಬರುತ್ತಿದ್ದುದರಿಂದ ಜೀವನೋಪಾಯಕ್ಕೆ ತೊಂದರೆ ಇರಲಿಲ್ಲ.

handsಆಗ, ತೊಡಗಿಕೊಳ್ಳುವುದಕ್ಕೆ ‘ಕೆಲಸ ಇಲ್ಲದ’ ಮನಸ್ಸುಗಳು ಸಾಮಾಜಿಕವಾಗಿ-ರಾಜಕೀಯವಾಗಿ ಗುರುತಿಸಿಕೊಳ್ಳಲು ಸುಲಭಹಾದಿಯನ್ನು ಅರಸತೊಡಗಿದವು. ಮೊದಮೊದಲು ಇದು ಸುಮಾರಿಗೆ ಆರೋಗ್ಯಕರವಾಗಿಯೇ ಇತ್ತಾದರೂ, ಕ್ರಮೇಣ ಕೋಮು-ಧರ್ಮ ಆಧರಿತ ರಾಜಕೀಯವು ಕರಾವಳಿಯನ್ನು ಪ್ರವೇಶಿಸಿದಾಗ ಪರಿಸ್ಥಿತಿ ಕೆಡತೊಡಗಿತು.

ಸಾಮಾಜಿಕವಾಗಿ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಿದ್ದರೂ ದುಡ್ಡು, ಜಾತಿ, ರೂಪ, ವೇಷ, ಮಾತುಗಳ ಬಲದಲ್ಲೇ ನಾಯಕತ್ವದ ಹಾದಿಗಳು ಸುಲಭವಾಗಿ ತೆರೆದುಕೊಳ್ಳತೊಡಗಿದವು.

ಬುದ್ಧಿವಂತಿಕೆ ಬಳಸಿ ‘ಕುಳಿತು’ ರಾಜಕೀಯ ಮಾಡುವವರಿಗೆ ಸುಲಭದಲ್ಲೇ ಸಿಕ್ಕಿ, ಅವರ ಕೈ-ಕಾಲುಗಳಾಗಿ ವರ್ತಿಸತೊಡಗಿದ ಈ  ‘ನವನಾಯಕರು’ಗಳು ಮತ್ತು ಸಾಮಾಜಿಕವಾಗಿ ಗುರುತಿಸಿಕೊಳ್ಳುವ ‘ಆಕಾಂಕ್ಷಿಗಳು’, ಕರಾವಳಿಯ ಸಾಮರಸ್ಯ ಕೆಡುವುದಕ್ಕೆ ‘ಪರಿಕರ’ಗಳಾಗಿ ಬಳಕೆಯಾಗತೊಡಗಿದರು.  ಅವರ ಮಹತ್ವಾಕಾಂಕ್ಷೆ – ಇವರ ಹತಾಶೆಗಳ ನಡುವಿನ ತಾಕಲಾಟಗಳೇ ಈವತ್ತಿನ ಕರಾವಳಿಯ ರಾಜಕೀಯ-ಸಾಮಾಜಿಕ ಕೆಡುಕುಗಳಿಗೆ ಮೂಲ ಕಾರಣ.

ದುಡಿದುಣ್ಣುವ, ಬೆವರಿನ ಬೆಲೆ ಅರಿಯುವ ವಾತಾವರಣ ಮೂಡುವ ತನಕ, ತಮ್ಮನ್ನು ಕಬ್ಬಿನ ಜಲ್ಲೆಗಳಂತೆ ಬಳಸಿ ಎಸೆಯಲಾಗುತ್ತಿದೆ ಎಂಬ ಅರಿವು ಈ ಸಮುದಾಯಗಳಲ್ಲಿ ಬರುವ ತನಕ ಇಲ್ಲಿ ಕರಾವಳಿಯಲ್ಲಿ, ಈಗಿರುವ ವಾತಾವರಣ ಸುಧಾರಿಸೀತೆಂದು ನನಗಂತೂ ಅನ್ನಿಸುವುದಿಲ್ಲ.

ಈ ಕೆಡುಕಿನ ದಿನಗಳ ನಡುವೆಯೇ, ನಮ್ಮ ನೆಲ, ನಮ್ಮ ಜಲ, ನಮ್ಮ ಆಹಾರ, ನಮ್ಮ ಬದುಕು, ನಮ್ಮ ಸ್ವಾಭಿಮಾನ, ನಮ್ಮ ಹಕ್ಕುಗಳ ಕುರಿತು ಹೊಸದೊಂದು ಎಚ್ಚರ ಮೂಡಿಸಲು ನಡೆದಿರುವ ಪ್ರಯತ್ನಕ್ಕೆ ಪ್ರೀತಿಯ ಸ್ವಾಗತ.

ಕರಾವಳಿಯಲ್ಲಿ ರೈತ ಕುಟುಂಬಗಳು ತಾವು ಬೆಳೆದ ಬೆಳೆಯನ್ನು ಮನೆಗೆ ತರುವ ‘ಹೊಸ್ತು’ ಆಚರಿಸುವ ದಿನಗಳಿವು. ‘ಚಲೋ ಉಡುಪಿ’ ಎಂದು ಕರಾವಳಿಯತ್ತ ಹೊರಟಿರುವ ‘ಎಚ್ಚರದ’ ಹೊಸತೆನೆ ಜಾಥಾ ನಾಡಿನೆಲ್ಲೆಡೆಯಿಂದ ಈ ಜಿಲ್ಲೆಗೆ ಶಾಂತಿ, ಸಾಮರಸ್ಯ, ಸಮ್ರದ್ಧಿಗಳ ‘ ಹೊಸತು’ ತರುವಂತಾದರೆ, ಅದಕ್ಕಿಂತ ಸಂತಸದ ಸಂಗತಿ ಬೇರೊಂದಿಲ್ಲ.

Add Comment

Leave a Reply