Quantcast

ಸೇನೆ ಎಂಬುದು ‘ಚೆಕ್’ ಮತ್ತು ‘ಬ್ಯಾಲೆನ್ಸ್’ ಗಳ ಮೊತ್ತ

rajaram tallur low res profile

ರಾಜಾರಾಂ ತಲ್ಲೂರು

ಸಂವಿಧಾನ ನಿರ್ಮಾಪಕರಿಗದು ಚೆನ್ನಾಗಿ ಗೊತ್ತಿತ್ತು. ಹಾಗಾಗಿಯೇ ಅವರು ಭಾರತದ ಸೇನಾಪಡೆಗಳ ಸರ್ವೋಚ್ಛ ದಂಡನಾಯಕರ ಸ್ಥಾನವನ್ನು ರಾಷ್ಟ್ರಪತಿಗಳಿಗೆ ನೀಡಿದ್ದು. ಪ್ರಧಾನಮಂತ್ರಿ ಮತ್ತು ರಕ್ಷಣಾ ಸಚಿವಾಲಯಗಳು ಸೇನೆಯ ಆಗುಹೋಗುಗಳಿಗೆ ಜವಾಬ್ದಾರರಾದರೂ ಅವರ ನಿರ್ಧಾರಗಳಿಗೆ ಅಂತಿಮ ಸಹಿ ಹಾಕಬೇಕಾದವರು ರಾಷ್ಟ್ರಪತಿಗಳು. ಇಂತಹದೊಂದು ‘ಚೆಕ್ ಅಂಡ್ ಬ್ಯಾಲೆನ್ಸ್’ ಸಹಿತ ನಾಜೂಕಾದ ವ್ಯವಸ್ಥೆ ಇರುವುದರಿಂದಾಗಿಯೇ ದೇಶ ಇಂದಿಗೂ ಪ್ರಜಾಸತ್ತಾತ್ಮಕ ಹಾದಿಯಲ್ಲೇ ಉಳಿದಿದೆ.

avadhi-column-tallur-verti- low res- cropಸ್ವಾತಂತ್ರ್ಯದ ಬಳಿಕ ಯುದ್ಧಗಳ ಹೊರತಾಗಿಯೂ ಭಾರತೀಯ ಸೇನೆ ಸಾರ್ವಜನಿಕ ವಲಯದಲ್ಲಿ, ಮಾಧ್ಯಮಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಆಡಿಕೊಳ್ಳುವವರ ಬಾಯಿಗೆ ಸಿಕ್ಕಿರಲಿಲ್ಲ. ಸೇನೆಯ ಕಾರ್ಯಾಚರಣೆಗಳ ಗಾಂಭೀರ್ಯಕ್ಕೆ ಯಾವತ್ತೂ ಚ್ಯುತಿ ಬಂದಿರಲಿಲ್ಲ. ಈ ಸ್ಥಿತಿ ಬದಲಾದದ್ದು 1998ರಲ್ಲಿ ಅಂದಿನ ಪ್ರಧಾನಿ ವಾಜಪೇಯಿಯವರು ರಾಷ್ಟ್ರೀಯ ಭದ್ರತೆಗೆ ಸಲಹೆಗಾರರೊಬ್ಬರನ್ನು (NSA) ನೇಮಿಸುವ ಮೂಲಕ.

ಅಲ್ಲಿಯ ತನಕ ಪ್ರಧಾನಿಯ ಪ್ರಿನ್ಸಿಪಲ್ ಕಾರ್ಯದರ್ಶಿ ಮಾಡುತ್ತಿದ್ದ ಕೆಲಸಗಳನ್ನು, ಕಾರ್ಯಾಂಗದಿಂದ ಹೊರಗಿನ ವ್ಯಕ್ತಿಯೊಬ್ಬರಿಗೆ ವಹಿಸಿಕೊಡಲಾಯಿತು. RAW, IB ಸೇರಿದಂತೆ ಕೇಂದ್ರದ ಎಲ್ಲ ಗುಪ್ತಚರ ವಿಭಾಗಗಳು ಈ ಸಲಹೆಗಾರರಿಗೆ ವರದಿ ಮಾಡಬೇಕಿರುತ್ತದೆ. ಪ್ರಧಾನಿಗೆ ಮತ್ತು ದೇಶದ ರಾಷ್ಟ್ರೀಯ ಭದ್ರತಾ ಮಂಡಳಿಗೆ ಈ ಸಲಹೆಗಾರರು ತಮ್ಮ  ಸಲಹೆಗಳನ್ನು ನೀಡಬೇಕಿರುತ್ತದೆ.

ವಿದೇಶಾಂಗ ಕಾರ್ಯದರ್ಶಿ ಆಗಿದ್ದ ಬ್ರಜೇಶ್ ಮಿಶ್ರಾ ದೇಶದ ಮೊದಲ NSA. ಈ ಹುದ್ದೆ ಮಹತ್ವಪೂರ್ಣವಾದದ್ದಾಗಿದ್ದು, ಅದರ ಬಲುದೊಡ್ಡ ಮಿತಿ ಎಂದರೆ, ಅದು ಈಗ ರಾಜಕೀಯ ಆಯ್ಕೆ ಆಗಿ ಬದಲಾಗಿರುವುದು. ಅಂದರೆ ಕೇಂದ್ರ ಸರಕಾರ ಬದಲಾದಾಗಲೆಲ್ಲ, NSA ಬದಲಾಗಬಹುದು.

NSA ಹುದ್ದೆಯಲ್ಲಿ ಹಾಲೀ ಇರುವ ಅಜಿತ್ ದೋವಲ್ ಕೇರಳ ಕೆಡೇರ್ ನ ಪೊಲೀಸ್ ಸೇವೆ ಅಧಿಕಾರಿ ಆಗಿದ್ದು, IB ಮಹಾನಿರ್ದೇಶಕರಾಗಿ ನಿವ್ರತ್ತರಾದ ಬಳಿಕ ಬಲಪಂಥೀಯ ಸಿದ್ಧಾಂತಗಳಿಗೆ ಸಮೀಪವಿರುವ ಸಂಘಟನೆಯೊಂದನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿದ್ದವರು.

ಗಡಿಯಲ್ಲಿ ಭಾರತ-ಪಾಕಿಸ್ಥಾನಗಳ ನಡುವೆ ಘರ್ಷಣೆಗಳು ಹೊಸದೇನಲ್ಲ. ಅದನ್ನು ಭಾರತೀಯ ಸೇನಾಪಡೆಗಳು ಸಮರ್ಥವಾಗಿಯೇ ಎದುರಿಸುತ್ತಲೂ ಬಂದಿವೆ. ಈ ವಿಚಾರ ಎಂದೂ ಸಾರ್ವಜನಿಕವಾಗಿ ವಿವಾದಕ್ಕೀಡಾದ ಹಿನ್ನೆಲೆ ಇಲ್ಲ. ಸೇನೆಯ ಕುರಿತಾದ ಖರೀದಿ-ಟೆಂಡರ್ ಗಳಂತಹ ವಿಚಾರಗಳಲ್ಲಿ ವಿವಾದಗಳು, ಹಗರಣಗಳಾಗಿದ್ದವೇ ಹೊರತು ಭಾರತೀಯ ಸೇನಾಪಡೆಗಳ ರಣತಂತ್ರಗಾರಿಕೆ, ಸಾಮರ್ಥ್ಯ, ನೆಲದ ಪ್ರೀತಿ ಇವೆಲ್ಲ ಎಂದೆಂದಿಗೂ ಪ್ರಶ್ನಾತೀತವೇ ಆಗಿದ್ದವು ಮತ್ತು ಸಾರ್ವಜನಿಕ ಚರ್ಚಾವಲಯದಿಂದ ಹೊರಗೇ ಇದ್ದವು.

ಮೊನ್ನೆ ಭಾರತೀಯ ಸೇನಾಪಡೆಗಳು ಗಡಿಯಲ್ಲಿ ನಡೆಸಿದ ಕಾರ್ಯಾಚರಣೆಗಳನ್ನು ಸರ್ಕಾರದ ಸಮರ್ಥಕರು ಅಜಿತ್ ದೋವಲ್ ನಿರ್ದೇಶಿತ ‘ಸರ್ಜಿಕಲ್ ಸ್ಟ್ರೈಕ್’ ಎಂದು ಸಾರ್ವಜನಿಕವಾಗಿ ವರ್ಣಿಸಹೊರಟಲ್ಲಿಂದ, ಕೇಂದ್ರ ಸಚಿವ ಸಂಪುಟ ಈ ಘಟನೆಯ ರಾಜಕೀಯ ಮೈಲೇಜ್ ಪಡೆಯಲು ಯತ್ನಿಸಿದಲ್ಲಿಂದ ಈಚೆಗೆ, ತೀರಾ ಕೀಳು ಮಟ್ಟದ ರಾಜಕೀಯ ಕೆಸರೆರಚಾಟ ಆರಂಭವಾಗಿದ್ದು, ಇದು ಅಂತಿಮವಾಗಿ ಹಾನಿ ಮಾಡಲಿರುವುದು ಭಾರತೀಯ ಸೇನಾಪಡೆಗಳ ಆತ್ಮಸ್ಥೈರ್ಯಕ್ಕೇ ಎಂಬುದನ್ನು ಎಲ್ಲರೂ ಮರೆತಂತಿದೆ. ದೇಶದ ಹಿತದ್ರಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಅಲ್ಲ.

ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿ ಇದೆ. NDA ಸರಕಾರ ಬಂದ ಹೊಸದರಲ್ಲಿ ಪ್ರಧಾನಿ ಮೋದಿಯವರು ದಿಲ್ಲಿಯಲ್ಲಿ ರಕ್ಷಣಾ ಸಚಿವಾಲಯ ಇರುವ ನಾರ್ತ್ ಬ್ಲಾಕ್ ಗೆ ಮತ್ತು  ಸೇನಾ ಕಮಾಂಡ್ ಗಳಿಗೆ ಮಾಧ್ಯಮಗಳ ಪ್ರವೇಶವನ್ನು ಕಟ್ಟುನಿಟ್ಟಾಗಿ amul-surgical-strikes-lನಿರ್ಬಂಧಿಸಿದ್ದರು ಮತ್ತು ಎಲ್ಲ ಹೇಳಿಕೆಗಳೂ ಸರಿಯಾದ ಹಾದಿಯ ಮೂಲಕವೇ (ರಕ್ಷಣಾ ಸಚಿವರು ಅಥವಾ ಸೇನಾ ಸಾರ್ವಜನಿಕ ಸಂಪರ್ಕ ವಿಭಾಗ) ಮಾಧ್ಯಮಗಳನ್ನು ತಲುಪಬೇಕೆಂದು ನಿರ್ದೇಶಿಸಿದ್ದರು. ಅಲ್ಲಿಂದೀಚೆಗೆ ರಕ್ಷಣಾ ಖರೀದಿಗಳು, ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳು ಕತ್ತಲಲ್ಲೇ ಇವೆ.

ಇದು ಎಷ್ಟರ ಮಟ್ಟಿಗೆಂದರೆ, ಮೊನ್ನೆ ರಫೇಲ್ ಯುದ್ಧವಿಮಾನಗಳ ಖರೀದಿ ಅಂತಿಮಗೊಂಡ ವಿಚಾರ ಮಾಧ್ಯಮಗಳ ಕೈಗೆ ಸಿಕ್ಕಿದ್ದು ಫ್ರೆಂಚ್ ಸಚಿವರು ಇಲ್ಲಿಗೆ ತಲುಪುವ ಒಂದು ದಿನ ಮೊದಲು! ಆ ಮೊದಲು, ಜಲಾಂತರ್ಗಾಮಿ ಮಾಹಿತಿ ಸೋರಿಕೆ ವಿಚಾರ ಮಾಧ್ಯಮಗಳಿಗೆ ದೊರೆತದ್ದು ಆಸ್ಟ್ರೇಲಿಯನ್ ಪತ್ರಿಕೆಯಿಂದ!!

ರಕ್ಷಣೆಯ ವಿಚಾರಕ್ಕೆ ಸಂಬಂಧಿಸಿ ಇಷ್ಟೊಂದು ಎಚ್ಚರ ವಹಿಸಿದವರು, ಸೇನೆಯು ಗಡಿಭಾಗದಲ್ಲಿ ನಡೆಸಿದ ಒಂದು ಕಾರ್ಯಾಚರಣೆಯ ಕ್ರೆಡಿಟ್ ಪಡೆಯಲು ಹೊರಟದ್ದು ಮತ್ತು ಅದರಿಂದ ಎದ್ದಿರುವ ಕೆಸರೆರಚಾಟ ನೇರವಾಗಿ ಸೇನೆಯ ಆತ್ಮಸ್ಥೈರ್ಯವನ್ನೇ ಕುಗ್ಗಿಸುವ ಮಟ್ಟಕ್ಕೆ ಹೋಗುತ್ತಿರುವುದು ಖಂಡಿತಾ ಒಳ್ಳೆಯ ಮೇಲ್ಪಂಕ್ತಿ ಅಲ್ಲ.

ಸೇನಾ ಕಾರ್ಯಾಚರಣೆ, ಸೇನಾ ತಂತ್ರಗಾರಿಕೆ – ಇವನ್ನೆಲ್ಲ ಸೇನೆಗೇ ಬಿಟ್ಟು, ಚಾಲ್ತಿ ರಾಜಕೀಯ ಕೆಸರೆರಚಾಟಕ್ಕೆ ಅವರನ್ನು ಎಳೆತರದೆ, ಸೇನಾಪಡೆಗಳ ಆವಶ್ಯಕತೆ ಪೂರೈಕೆ, ಅವರ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸಗಳನ್ನಷ್ಟೇ ಸರಕಾರ ನಿಷ್ಠೆಯಿಂದ ಮಾಡಿದರೆ, ಅದೇ ದೊಡ್ಡ ದೇಶಸೇವೆ.

4 Comments

 1. M A Sriranga
  October 8, 2016
 2. Guru
  October 7, 2016
  • Rajaram Tallur
   October 7, 2016
 3. Suma
  October 7, 2016

Add Comment

Leave a Reply