Quantcast

ದೇರ್ ಈಸ್ ಹೋಪ್..

ಇವತ್ತು ವಿಶ್ವ ಮನೋ-ಆರೋಗ್ಯ ದಿನ. ಕತ್ತಲಕೋಣೆಗಳಲ್ಲಿ ಮೌನವಾಗಿ ಕಣ್ಣೀರಾಗುತ್ತಿರುವ ಜೀವಗಳು ಧೈರ್ಯವಾಗಿ ಹೊರಬನ್ನಿ. ಜಗವನ್ನು ಬೆಳಗುವ ಭರದಲ್ಲಿ ತಾನು ಹೊತ್ತಿ ಉರಿಯಬೇಕೆಂದೇನೂ ಇಲ್ಲ. ನೀವುಗಳು ಏಕಾಂಗಿಯಲ್ಲ. ಭರವಸೆಯೆಂಬುದು ಇನ್ನೂ ಇದೆ.

ದೇರ್ ಈಸ್ ಹೋಪ್.

prasad naik

ಪ್ರಸಾದ್ ನಾಯ್ಕ್ 

‘ಐ ಹೇಟ್ ಯೂ, ಡೋಂಟ್ ಲೀವ್ ಮೀ’

ರಾತ್ರಿ ಎರಡರ ಸಮಯ.

ದೆಹಲಿಯ ದಿನಗಳ ಮಾತು. ಅರ್ಧರಾತ್ರಿಯಲ್ಲಿ ರಿಂಗಣಿಸುತ್ತಿರುವ ಫೋನನ್ನೆತ್ತಿದರೆ “ಸಾಯೋದಿಕ್ಕೆ ಫಿನಾಯಿಲ್ ಕುಡಿಯಲಾ, ಕೈ ಕುಯ್ದುಕೊಳ್ಳಲಾ?” ಎಂದು ಅತ್ತಕಡೆಯಿಂದ ಕೇಳುತ್ತಿದೆ ಒಂದು ಹೆಣ್ಣುದನಿ. ಭಯ, ಕಣ್ಣೀರು, ಚೀರಾಟ, ನಿಟ್ಟುಸಿರು… ಇನ್ನೂ ಏನೇನೋ ಆ ದನಿಯಲ್ಲಿ.

ಆ ಒಂದು ಪ್ರಶ್ನೆಗೆ ನನ್ನ ನಿದ್ದೆಯೆಲ್ಲಾ ಹಾರಿಹೋಗಿತ್ತು.

a6e342b11e356f72a930d2146dc8c719ಮುಂದೆ ನಡೆದಿದ್ದು ಬರೋಬ್ಬರಿ ಮೂರು ಘಂಟೆಗಳ ಸಂಭಾಷಣೆ. ಮತ್ತದೇ ಮುಂಜಾನೆ, ನಿದ್ದೆಯಿಲ್ಲದ ಕೆಂಡಕಣ್ಣುಗಳ ಜೊತೆ ಆಫೀಸಿಗೆ ಹೋಗಿದ್ದು ಮತ್ತು ಆಫೀಸಿನಲ್ಲಿ ದಿನವಿಡೀ ತೂಕಡಿಸಿದ್ದು. ಅವಳಿಂದ ಈ ಥರದ ಕರೆಗಳು ಬಂದಿದ್ದು ಇದೇ ಮೊದಲಲ್ಲ. ಹಾಗೆಂದು ಇದೊಂದು ಕಡೆಗಣಿಸುವ ವಿಷಯವೂ ಆಗಿರಲಿಲ್ಲ. ಏನಾದರಾಗಲಿ ಇದಕ್ಕೊಂದು ಅಂತ್ಯಕಾಣಿಸಲೇಬೇಕು ಎಂಬ ನಿರ್ಧಾರವನ್ನು ನಾನು ಮನಸ್ಸಿನಲ್ಲೇ ಮಾಡಿದ್ದೆ.

ಯೋಚಿಸಿದಷ್ಟು ಸುಲಭದ ಕೆಲಸವು ಅದಾಗಿರಲಿಲ್ಲ ಎಂಬ ಬಗ್ಗೆಯೂ ನನಗೆ ಸ್ಪಷ್ಟವಾದ ಪರಿಜ್ಞಾನವಿತ್ತು. ಆದರೆ ಬೇರೆ ದಾರಿಯೂ ನನ್ನೆದುರಿಗಿರಲಿಲ್ಲ. ಅದೇ ಸಂಜೆ ಅವಳಿಗೆ ಕರೆಯನ್ನು ಮಾಡಿ ಮುಂದಿನ ಭಾನುವಾರ ಸಿಗೋಣವೆಂದೆ. ಅವಳು ಒಪ್ಪಿಕೊಂಡಳು. ಕೊನೆಗೂ ಕಾಲವು ಕೂಡಿಬಂದಿತ್ತು. ಅಂದಹಾಗೆ ಅವಳ ಹೆಸರು ಗಾರ್ಗಿ. ನಾನು ಅವಳ ಜೊತೆ ಚರ್ಚಿಸಬೇಕೆಂದಿದ್ದ ವಿಷಯವೆಂದರೆ `ಬಾರ್ಡರ್ಲೈನ್ ಪರ್ಸನಾಲಿಟಿ ಡಿಸಾರ್ಡರ್’ (ಬಿ.ಪಿ.ಡಿ).

ಬಾರ್ಡರ್ಲೈನ್ ಪರ್ಸನಾಲಿಟಿಯೆಂಬ ಶಬ್ದ ನನಗೆ ಮೊಟ್ಟಮೊದಲು ಎದುರಾಗಿದ್ದು ಸುಮಾರು ಐದಾರು ವರ್ಷಗಳ ಹಿಂದೆ, ಅದೂ ಕೂಡ ಆಂತೋನಿ ಸಮ್ಮರ್ಸ್ ರವರ `ಗಾಡೆಸ್’ ಕೃತಿಯಲ್ಲಿ.

ಇದು ಹಾಲಿವುಡ್ ನಟಿ ಮರ್ಲಿನ್ ಮನ್ರೋರವರ ಬಯಾಗ್ರಫಿ. ನಾನು ಈವರೆಗೂ ಓದಿ ಮೆಚ್ಚಿದ ಅತ್ಯಮೂಲ್ಯ ಪುಸ್ತಕಗಳಲ್ಲೊಂದು. ಖ್ಯಾತ ಲೇಖಕ ಸಮ್ಮರ್ಸ್, ಮರ್ಲಿನ್ ಮನ್ರೋರ ಬಗ್ಗೆ ಅದೆಷ್ಟು ಸಂಶೋಧನೆ ಮಾಡಿ ಬರೆದಿದ್ದಾರೆಂದರೆ ಓದುತ್ತಾ ಹೋದಂತೆ ಮರ್ಲಿನ್  ಸಿಕ್ಕಾಪಟ್ಟೆ ಆಪ್ತಳಾಗುತ್ತಾಳೆ. ಅವಳು ಅಭಿಮಾನಿಗಳತ್ತ ಕೈಬೀಸುವಾಗ ಓದುಗನ ಎದೆಯುಬ್ಬುತ್ತದೆ. ಅಂತೆಯೇ ಅವಳು ಮಡುಗಟ್ಟಿದ್ದ ದುಃಖದಲ್ಲಿ, ಅಭದ್ರತೆಯ ಭಾವಗಳಲ್ಲಿ ಗೀಚಿದ ಪತ್ರಗಳನ್ನು, ಕವಿತೆಗಳನ್ನು ಓದಿದರೆ ಓದುಗನೂ ಕಣ್ಣೀರಾಗುತ್ತಾನೆ. ಹಾಲಿವುಡ್ಡಿನ ಗ್ಲಾಮರ್ ಪರದೆಯು ಹಂತಹಂತಗಳಲ್ಲಿ ಜಾರುತ್ತಾ ಹೋಗಿ ನೋವಿನಲ್ಲಿರುವ ಪಕ್ಕದ್ಮನೆ ಹುಡುಗಿಯಷ್ಟೇ ಆಗಿ ಮರ್ಲಿನ್ ಕಾಣತೊಡಗುತ್ತಾಳೆ.

ಹೀಗೆ ಆಕಸ್ಮಿಕವಾಗಿ ಸಿಕ್ಕ, ಇದುವರೆಗೆ ಕೇಳಿರದ ಬಿ.ಪಿ.ಡಿ ಎಂಬ ಮನೋಸ್ಥಿತಿಯ ಹೊಸ ವಿಷಯವು ನನ್ನನ್ನು ನಿಜಕ್ಕೂ ಅಲ್ಲಾಡಿಸಿತ್ತು. ಇದಕ್ಕೆ ಕೆಲವು ಕಾರಣಗಳೂ ಇದ್ದವು ಅನ್ನುವುದು ಬೇರೆ ವಿಷಯ. ಆದರೆ ಎಲ್ಲದಕ್ಕಿಂತಲೂ ನನ್ನನ್ನು ಹೆಚ್ಚಾಗಿ ಕಾಡಿದ್ದು ಈ ಮನೋಸ್ಥಿತಿಯು ಕ್ಷಣಕ್ಷಣವೂ ಮನುಷ್ಯನನ್ನು ಕೊಲ್ಲುವ ಬಗೆಯನ್ನು.

ಮುಂದಿನ ಹಲವು ತಿಂಗಳುಗಳ ಕಾಲ ಈ ಬಗ್ಗೆ ಮಾಹಿತಿಗಳನ್ನು ಕಲೆಹಾಕಿದ್ದೇ ಆಯಿತು. ಬಿ.ಪಿ.ಡಿ ಯ ಜೊತೆಗೆ ಜೀವಿಸುತ್ತಿರುವ ಹಲವರ ಲೇಖನಗಳನ್ನು, ಬ್ಲಾಗುಗಳನ್ನು ಓದುತ್ತಾ, ಸಂಬಂಧಿ ಜರ್ನಲ್ಲುಗಳನ್ನು, ಉಪನ್ಯಾಸಗಳನ್ನು, ಸಿನೆಮಾಗಳನ್ನು ನೋಡುತ್ತಾ ಅದರ ನೈಜಸ್ಥಿತಿಯನ್ನರಿಯಲು ನಾನು ಪ್ರಯತ್ನಿಸುತ್ತಿದ್ದೆ. ಆದರೆ ಈ ಪಯಣಕ್ಕೆ ಹೊಸದಿಕ್ಕು ದೊರೆತಿದ್ದು ರೇಚಲ್ ರೇಲಾಂಡರ (ಕಾವ್ಯನಾಮ)  ‘ಗೆಟ್ ಮೀ ಔಟ್ ಆಫ್ ಹಿಯರ್: ಮೈ ರಿಕವರಿ ಫ್ರಮ್ ಬಾರ್ಡರ್ಲೈನ್ ಪರ್ಸನಾಲಿಟಿ ಡಿಸಾರ್ಡರ್’ ಎಂಬ ಪುಸ್ತಕದಿಂದ.

ಇಂಪೋರ್ಟೆಡ್ ಎಡಿಷನ್ ಆಗಿದ್ದ ಈ ದುಬಾರಿ ಪುಸ್ತಕವನ್ನು ತರಿಸುವಷ್ಟರಲ್ಲೇ ನಾನು ಸುಸ್ತಾಗಿದ್ದಂತೂ ಹೌದು. ಆದರೆ ಕಾಯುವಿಕೆಯು ಫಲನೀಡಿತ್ತು. ಬಿ.ಪಿ.ಡಿ ಯ ಎಲ್ಲಾ ಲಭ್ಯಮಾಹಿತಿಗಳಿಗೂ ತಾಯಿಯಂತಿರುವ ಈ ಪುಸ್ತಕವನ್ನು ಓದಿ ಮುಗಿಸುವಷ್ಟರಲ್ಲಿ ನಾನೂ ಹೈರಾಣಾಗಿದ್ದೆ. ಮಡುಗಟ್ಟಿದ ದುಃಖದ ಹ್ಯಾಂಗೋವರ್ ನಿಂದ ಹೊರಬರಲೇ ನನಗೆ ಒಂದು ವಾರ ಹಿಡಿದಿತ್ತು.

ಬಿ.ಪಿ.ಡಿ ಎಂದರೇನು ಎಂಬ ಬಗ್ಗೆ ಅಂತರ್ಜಾಲದಲ್ಲಿ ತಡಕಾಡಿದರೆ ಕೆಲವೊಂದು ಮಾಹಿತಿಗಳು ಸಿಗುವುದೇನೂ ಸತ್ಯವೇ. ಆದರೆ ಬಿ.ಪಿ.ಡಿ ಯ ಜೊತೆ ಬದುಕುವ ವ್ಯಥೆಯು ಆ ಸ್ಥಿತಿಯಲ್ಲಿ ಮಿಂದೆದ್ದವರಿಗೇ ಗೊತ್ತು. ಬಿ.ಪಿ.ಡಿ ಎಂದು ಗೂಗಲ್ಲಿನಲ್ಲಿ ನೋಡಿದರೆ ಒಂಬತ್ತು ಲಕ್ಷಣಗಳನ್ನು ಹೆಸರಿಸುವ ಡಯಾಗ್ನೋಸ್ಟಿಕ್ ಆಂಡ್ ಸ್ಟಟಿಸ್ಟಿಕಲ್ ಮ್ಯಾನುವೆಲ್ ಫಾರ್ ಮೆಂಟಲ್ ಡಿಸಾರ್ಡರ್ಸ್ (ಡಿ.ಎಸ್.ಎಮ್) ವ್ಯವಸ್ಥೆಯು, ಇವುಗಳಲ್ಲಿ ಐದಾದರೂ ಇದ್ದಲ್ಲಿ ಬಿ.ಪಿ.ಡಿ ಇರುವ ಸಾಧ್ಯತೆಗಳಿವೆ ಎಂಬುದನ್ನು ಹೇಳುತ್ತದೆ. ಆದರೆ ಈ ಬಗ್ಗೆ ಗೊತ್ತೇ ಇಲ್ಲದ ಅಥವಾ ತನ್ನೊಳಗೆ ಏನಾಗುತ್ತಿದೆಯೆಂಬುದನ್ನೇ ತಿಳಿಯದ, ಮನೋವೈದ್ಯರಲ್ಲಿಗೆ ಹೋಗುವುದನ್ನು ತಪ್ಪಿಸಲು ಹತ್ತಿಕ್ಕಲಾಗದ ಭಾವನೆಗಳೊಂದಿಗೆ ಸೆಣಸಾಡುತ್ತಾ ದಿನತಳ್ಳುವ ಜನರ ಅವಸ್ಥೆಯಾದರೂ ಏನು!

handsಗಾರ್ಗಿ ಮೂಲತಃ ಬೆಂಗಾಲಿ ಹುಡುಗಿ. ಒಳ್ಳೆಯ ಲೇಖಕಿ, ಪ್ರತಿಭಾವಂತೆ, ಸ್ವಲ್ಪ ಹೆಚ್ಚೇ ಅನ್ನುವಷ್ಟು ಭಾವಜೀವಿ. ಆದರೆ ಭಾವನೆಗಳೇ ಮನುಷ್ಯನೊಬ್ಬನನ್ನು ನಿಯಂತ್ರಿಸತೊಡಗಿದರೆ?

ಬಿ.ಪಿ.ಡಿ ಯ ವಿಷವರ್ತುಲವಿರುವುದೇ ಇಲ್ಲಿ. ಈ ಸ್ಥಿತಿಯಲ್ಲಿ ವ್ಯಕ್ತಿಯು ಬಹುಬೇಗನೇ ತನ್ನ ಸುತ್ತಮುತ್ತಲಿನವರನ್ನು ಹಚ್ಚಿಕೊಳ್ಳುತ್ತಾನೆ. ಆದರೆ ಹೀಗೆ ಹತ್ತಿರವಾದವರು ದೂರವಾಗಬಾರದೆಂದು ಶಕ್ತಿಮೀರಿ ಪ್ರಯತ್ನಿಸುತ್ತಾನೆ. ತನ್ನ ಆಪ್ತರಾದವರು ತನ್ನನ್ನು ಬಿಟ್ಟುಹೋಗುವರೆಂಬ ಭ್ರಮೆಯು ಅವರನ್ನು ಸದಾ ಕಾಡುತ್ತಿರುತ್ತದೆ.

ಉದಾಹರಣೆಗೆ ಐದು ಗಂಟೆಗೆ ಬರಬೇಕಾದ ಗೆಳತಿ ಐದೂ ಹತ್ತಕ್ಕೆ ಬಂದರೆ ಆಕೆ ನನ್ನನ್ನು ಶಾಶ್ವತವಾಗಿ ಬಿಟ್ಟೇಹೋದಳು ಎಂದು ಬಿ.ಪಿ.ಡಿ ಹೊಂದಿರುವ ನನಗನ್ನಿಸಬಹುದು. ಆ ಹತ್ತು ನಿಮಿಷಗಳು ನನಗೆ ಶುದ್ಧ ನರಕ. ಆಕೆ ತನ್ನನ್ನು ದ್ವೇಷಿಸುತ್ತಿದ್ದಾಳೆ. ಹೀಗಾಗಿ ಉದ್ದೇಶಪೂರ್ವಕವಾಗಿಯೇ ತಡವಾಗಿ ಬಂದಳು' ಎಂದು ಒಳಗೊಳಗೇ ಬುಸುಗುಡುವ ಅಸಮಾಧಾನ. ಈ ಭ್ರಮೆಯು ಆ ವ್ಯಕ್ತಿಯ ಆಪ್ತವಲಯದ ಸದಸ್ಯನೊಬ್ಬನನ್ನು ಉಸಿರುಗಟ್ಟಿಸಬಲ್ಲದು. ಬಹಳಷ್ಟು ಬಾರಿ ಹೀಗಾಗುತ್ತದೆ ಕೂಡ.

ಹತ್ತಿರವಿದ್ದವರು ಗೊಂದಲಗೊಂಡೋ ಭಯಪಟ್ಟೋ ಕೊಂಚ ದೂರ ಸರಿದುಬಿಡುತ್ತಾರೆ. ಇತ್ತ ಇಷ್ಟು ದಿನ ಕಾಡುತ್ತಿದ್ದ ಅಗಲಿಕೆಯ ಭ್ರಮೆಯು ನಿಜವಾಗಿರುತ್ತದೆ. ಅಂದಿನಿಂದ ಆ ವ್ಯಕ್ತಿಯು ಯಾರನ್ನೂ ತನ್ನ ತೀರಾ ಹತ್ತಿರಕ್ಕೆ ಬಿಟ್ಟುಕೊಡದೆ ಮಾನಸಿಕವಾದ ಒಂದು ಮಹಾತಡೆಗೋಡೆಯನ್ನೇ ಕಟ್ಟಿಬಿಡುತ್ತಾನೆ. ಒಬ್ಬಂಟಿತನ ಸಾಧ್ಯವಿಲ್ಲ, ಸಂಗಾತಿ ಬೇಕೆಂಬ ಆಸೆ, ಆದರೆ ತೀವ್ರವಾದ ಅಗಲಿಕೆಯ ಭಯ...ನಾನು ನಿನ್ನನ್ನು ದ್ವೇಷಿಸುತ್ತಿದ್ದೇನೆ, ಆದರೆ ನನ್ನ ಬಿಟ್ಟುಹೋಗಬೇಡ’ ಎಂಬ ಉದ್ವೇಗ. ಹೀಗೆ ಇದೊಂದು ಮುಗಿಯದ ವಿಷವರ್ತುಲ.

ಜೊತೆಗೇ ಕಾಡುವ ಭೂತಗಳೆಂದರೆ ಖಾಲಿತನ ಮತ್ತು ಕಪ್ಪುಬಿಳುಪು ಚಿಂತನೆಗಳು. ಬಿ.ಪಿ.ಡಿ ಯ ಖಾಲಿತನವೆಂಬುದು ಅದೆಷ್ಟು ತೀವ್ರವಾಗಿರುತ್ತದೆಂದರೆ ದೇಹವೆಂಬುದು ಟೊಳ್ಳುಬೊಂಬೆಯಂತೆನಿಸಿ, ಭೌತ ಅಸ್ತಿತ್ವವೇ ಇಲ್ಲವೆಂಬಂತೆ ನರಳಾಡುವ ಪರಿಸ್ಥಿತಿ. ಭಾವನೆಗಳು ಎಂಥದ್ದೇ ಆಗಿರಲಿ… ಸಂತಸ, ದುಃಖ, ಕೋಪ, ಆತಂಕ, ಅಭದ್ರತೆ… ಭಾವನೆಗಳು ಸಾಮಾನ್ಯ ಮನುಷ್ಯನೊಬ್ಬನಿಗಿಂತ ಹಲವು ಪಟ್ಟು ಹೆಚ್ಚಿನ ತೀವ್ರತೆಯಲ್ಲಿ ಇವರಲ್ಲಿ ಹರಿದಾಡುತ್ತವೆ.

ಬಿ.ಪಿ.ಡಿ ಯಲ್ಲಿ ಭಾವನೆಗಳೆಂದರೆ ಥೇಟು ರೋಲರ್-ಕೋಸ್ಟರ್ ರೈಡ್. ಸಾಮಾನ್ಯನೊಬ್ಬ ಬೇಗನೇ ಮರೆತುಬಿಡುವಂಥಾ ಚಿಕ್ಕದೊಂದು ಸಿಡುಕು ಬಿ.ಪಿ.ಡಿ ಯ ರೋಗಿಯನ್ನು ವಾರಗಟ್ಟಲೆ ಸತಾಯಿಸಬಹುದು. ಬ್ರೇಕಪ್, ಅಗಲಿಕೆಯಂತಹ ನೋವುಗಳು ಹಲವು ತಿಂಗಳುಗಳಿಂದ ವರ್ಷಾನುಗಟ್ಟಲೆ ಆ ವ್ಯಕ್ತಿಯನ್ನು ಖಿನ್ನತೆಯ ರೂಪದಲ್ಲಿ ತಿಂದುಹಾಕಬಲ್ಲದು. ಹೀಗಾಗಿ ಹತ್ತಿಕ್ಕಲಾಗದ ಭಾವನೆಗಳನ್ನು ನಿಯಂತ್ರಿಸುವ ಭರದಲ್ಲಿ ಭಾವನೆಗಳನ್ನು ಸಂಪೂರ್ಣವಾಗಿ ಕೊಂದುಹಾಕಿ ನಿರ್ಭಾವುಕನಾಗುವ ಪ್ರಯತ್ನಗಳೂ ಇಲ್ಲಿ ಕಾಣಬರುತ್ತವೆ. ಭಾವನೆಗಳೊಂದಿಗೆ ನಡೆಯುವ ಈ ನಿರಂತರ ಯುದ್ಧಗಳು ಶಬ್ದಗಳಲ್ಲಿ ಹಿಡಿದಿಡಲಾಗದಷ್ಟು ಘೋರ.

ಬಿ.ಪಿ.ಡಿ ಯ ರೋಗಿಯೊಬ್ಬನಿಗೆ ಕಪ್ಪುಬಿಳುಪು ಚಿಂತನಾ ಕ್ರಮದಲ್ಲಿ ಇಷ್ಟು ದಿನ ದೇವರಂತೆ ಆರಾಧಿಸುತ್ತಿದ್ದ ಬಹು ಆಪ್ತನೊಬ್ಬ ಕ್ಷಣಮಾತ್ರದಲ್ಲಿ ರಾಕ್ಷಸನಾಗಬಲ್ಲ. ಎಲ್ಲವನ್ನೂ ಎರಡು ದಿಕ್ಕುಗಳ ತುದಿಗಳಷ್ಟಾಗಿಯೇ ನೋಡುವ ವಿಲಕ್ಷಣ ಅಭ್ಯಾಸವಿದು. ಅಸಲಿಗೆ ಇಲ್ಲಿರುವುದು `ನನ್ನನ್ನು ಪ್ರೀತಿಸುವುದಾದರೆ ಸತ್ತುಹೋಗುವಂತೆ ಪ್ರೀತಿಸು, ಇಲ್ಲವೆಂದರೆ ಸುಮ್ಮನೆ ಬಿಟ್ಟು ಹೋಗು… ನರಳುವುದಂತೂ ನನ್ನ ಕರ್ಮ’, ಎಂಬ ಭಾವನೆಗಳು.

ಬಿ.ಪಿ.ಡಿ ಯನ್ನು ಹೊಂದಿರುವ ವ್ಯಕ್ತಿಯೊಬ್ಬನ ಆಪ್ತವಲಯದಲ್ಲಿರುವವರು ಈ ಬಗೆಯ ವರ್ತನೆಗಳಿಂದ ಬಹುಬೇಗ ಗೊಂದಲಕ್ಕೀಡಾಗಿ ದೂರವಾಗುವುದು ಸರ್ವೇಸಾಮಾನ್ಯ. ತನ್ನನ್ನಷ್ಟೇ ಪ್ರೀತಿಸಬೇಕೆಂಬ, ಆರಾಧಿಸಬೇಕೆಂಬ ಪ್ರತ್ಯಕ್ಷ ಅಥವಾ ಪರೋಕ್ಷ ಅಹವಾಲುಗಳು ಈ ಆಪ್ತರನ್ನು ಉಸಿರುಗಟ್ಟಿಸಬಲ್ಲದು. ಜೊತೆಗೇ ಅಗಲಿಕೆಯ ಅಥವಾ ಮಾನಸಿಕವಾಗಿ ದೂರವಾಗುವ ಸಂದರ್ಭಗಳನ್ನು ತಡೆಯಲು ಬಿ.ಪಿ.ಡಿ ಯ ಸ್ಥಿತಿಯಲ್ಲಿರುವ ವ್ಯಕ್ತಿಗಳು ಯಾವ ಸ್ಥಿತಿಗೂ ಇಳಿಯಲು ತಯಾರಾಗುವ ಪ್ರಯತ್ನಗಳು ಆಪ್ತವಲಯದ ಸದಸ್ಯರನ್ನು ವಿಚಲಿತಗೊಳಿಸಬಲ್ಲದು. ತಾನು ಒಲ್ಲೆ ಎಂದರೆ ತನ್ನ ಪ್ರೇಮಿ ಸಿಟ್ಟಾಗಬಹುದು ಎಂಬ ಒಂದೇ ಕಾರಣಕ್ಕೆ ಎಂದೂ ಸಿಗರೇಟು ಮುಟ್ಟದ ಹುಡುಗಿಯೊಬ್ಬಳು ತನ್ನ ಪ್ರಿಯತಮನಿಗಾಗಿ ನೇರವಾಗಿ ಗಾಂಜಾ ಸೇದಬಹುದು.

ಈ ಭಾವನೆಗಳ ಇನ್ನಷ್ಟು ಆಳಕ್ಕೆ ಹೋದರೆ ಕಾಣಸಿಗುವುದು ತೀವ್ರವಾದ ಕೀಳರಿಮೆ ಮತ್ತು ಅಭದ್ರತೆಯ ಭಾವಗಳು. ಭಾವನೆಗಳನ್ನು ಹೇಳಿಕೊಳ್ಳಲಾರದ ಅಸಹಾಯಕತೆ. ಇಲ್ಲವೇ ಇಲ್ಲ ಎನ್ನುವಷ್ಟಿರುವ ಸ್ವಂತ, ಅಪರಿಪೂರ್ಣ ವ್ಯಕ್ತಿತ್ವ. ಬಿ.ಪಿ.ಡಿ ಯ ರೋಗಿಯು ಮಾನಸಿಕವಾಗಿ ಯಾವತ್ತೂ ಅಪರಿಪೂರ್ಣನೇ. ಈ ಕಾರಣಕ್ಕಾಗಿಯೇ ಆತ ಎಲ್ಲೆಲ್ಲೂ ದೈನ್ಯವಾಗಿ ಪ್ರೀತಿಗಾಗಿ ಹುಡುಕುತ್ತಾನೆ. ಪ್ರೀತಿ ಯಾವ ಮೂಲದಲ್ಲಾದರೂ ಸಿಕ್ಕರೆ ಗಬಕ್ಕನೆ ಬಾಚುತ್ತಾನೆ. ಅದು ಕಳೆದುಹೋಗದಂತೆ ಶಕ್ತಿಮೀರಿ ಪ್ರಯತ್ನಿಸುತ್ತಾನೆ.

ಹಾಗೇನಾದರೂ ಆ ಪ್ರೀತಿಯನ್ನು ಕಳೆದುಕೊಂಡರೆ ಪುನಃ ಸಾಯುವ ಮಟ್ಟಿಗಿನ ಖಿನ್ನತೆಗೆ ಜಾರಿ ನರಳುತ್ತಾನೆ. ಆ ಅಗಲಿಕೆಯೊಂದಿಗೆ ಆತ ಮತ್ತೆ ಅಪರಿಪೂರ್ಣನಾಗಿರುತ್ತಾನೆ. ಮುಂದೆಂದೂ ಅಂಥಾ ತಪ್ಪನ್ನು ಮಾಡದಂತೆ ತನ್ನನ್ನು ತಾನು ತಡೆಯುತ್ತಾನೆ, ಆದರೆ ಒಬ್ಬಂಟಿಯಾಗಿರಲು ಸಾಧ್ಯವಾಗದೆ ಬಹುಬೇಗನೇ ಪ್ರೀತಿಯ ತಲಾಶೆಗೆಂದು ಮತ್ತೊಮ್ಮೆ ತೆರಳುತ್ತಾನೆ. ಬಿ.ಪಿ.ಡಿ ಹೊಂದಿರುವ ವ್ಯಕ್ತಿಗಳು ಮಾನಸಿಕವಾಗಿ ಪರಿಪೂರ್ಣರಾಗಿರುವುದಿಲ್ಲವಾದ್ದರಿಂದ ತಾನ್ಯಾರು, ತಮಗೇನು ಬೇಕು ಎಂಬ ಸ್ಪಷ್ಟ ಅರಿವಿಲ್ಲದೆ ನಿರಂತರವಾಗಿ ಸಂಕಷ್ಟಕ್ಕೀಡಾಗುತ್ತಾರೆ. ಯಾವ ವೃತ್ತಿಗಳೂ, ಆಸಕ್ತಿಗಳೂ, ಸಂಬಂಧಗಳೂ, ನಿರ್ಧಾರಗಳೂ ರುಚಿಸದೆ ಇನ್ನಷ್ಟು ಖಿನ್ನರಾಗುತ್ತಾರೆ.

ಹೀಗೆ ಲೆಕ್ಕವಿಲ್ಲದಷ್ಟು ಗೊಂದಲಗಳು, ಆತಂಕಗಳು, ಹತ್ತಿಕ್ಕಲಾಗದ ಭಾವನೆಗಳನ್ನು ನಿಯಂತ್ರಿಸಲು ಆತ ಮೊರೆಹೋಗುವುದು ಮಾದಕವಸ್ತುಗಳ ದುವ್ರ್ಯಸನ, ಅನೈತಿಕ ಸಂಬಂಧಗಳು, ಬೇಕಾಬಿಟ್ಟಿ ಆರ್ಥಿಕ ಖರ್ಚು, ಅಪಾಯಕಾರಿ ಡ್ರೈವಿಂಗ್/ಸಾಹಸಗಳು, ಮಿತಿಮೀರಿದ ಅಥವಾ ಅತೀ ಕಡಿಮೆ ಆಹಾರ ಸೇವನೆ… ಮುಂತಾದ ಅಪಾಯಕಾರಿ ಇಂಪಲ್ಸಿವ್ ಚಟುವಟಿಕೆಗಳಲ್ಲಿ. ಅಸಲಿಗೆ ಬಿ.ಪಿ.ಡಿ ಯ ಭಾವನೆಗಳ ತೀವ್ರತೆಗಳು ಆ ವ್ಯಕ್ತಿಯನ್ನು ಹಿಂಡಿಹಿಪ್ಪೆ ಮಾಡಿ ಹಾಕಬಲ್ಲದು. ದಿನವಿಡೀ ಮಲಗಿಕೊಂಡೇ ಇದ್ದರೂ ಇಡೀ ದಿನ ಹೊಲ ಉತ್ತಂತಿರುವ she-faceಆಯಾಸವನ್ನು ಈ ಭಾವಗಳು ನೀಡಬಲ್ಲವು.

ಅದೊಂದು ಸ್ವತಃ ಕನ್ಸ್ಯೂಮ್ ಆಗುತ್ತಿರುವಂತೆ, ಸುಡುತ್ತಿರುವ ಸಿಗರೇಟಿನಂತೆ ಮೆಲ್ಲಗೆ ಕರಗುತ್ತಿರುವ ಭಯಾನಕ ನೋವು. ಹೀಗೆ ಕ್ಷಣಕ್ಷಣವೂ ತಲೆಯೊಳಗೆ ಮಹಾಯುದ್ಧವೇ ನಡೆಯುತ್ತಿರುವಂತಹ ಪರಿಸ್ಥಿತಿಗಳಲ್ಲಿ ಆತ್ಮಹತ್ಯೆಯ ಯೋಚನೆಗಳೂ, ಪ್ರಯತ್ನಗಳೂ ಆಗುವುದುಂಟು. ಜೊತೆಗೇ ತನ್ನನ್ನು ತಾನು ದೈಹಿಕವಾಗಿ ಹಿಂಸಿಸಿಕೊಳ್ಳುತ್ತಾ ತಡೆಯಲಾಗದ ಮನದ ನೋವನ್ನು ಮರೆಯುವ ಒಂದು ಕ್ಷೀಣ ಪ್ರಯತ್ನ.

ಹೀಗೆ ಬಿ.ಪಿ.ಡಿ ಯೆಂದರೆ ನಿತ್ಯ ನರಕ. ಭಾವನೆಗಳೊಂದಿಗೆ ನಡೆಯುವ ಅವಿರತ ಯುದ್ಧ. ಪ್ರೀತಿಯಾಗಲೀ, ದ್ವೇಷವಾಗಲೀ ಚಾಕುವಿನಂತೆ ಹರಿತ. ಮುಚ್ಚಿದ ಕೋಣೆಗಳ ಕತ್ತಲಿನಲ್ಲಿ ಮುಂದುವರಿಯುವ ಮುಗಿಯದ ಬಿಕ್ಕು. ‘ಬಿ.ಪಿ.ಡಿ ಹೊಂದಿರುವ ವ್ಯಕ್ತಿಯೊಬ್ಬ ತೊಂಭತ್ತು ಪ್ರತಿಶತ ಸುಟ್ಟಗಾಯಗಳನ್ನು ಹೊಂದಿರುವ ಮನುಷ್ಯನಂತೆ. ಇವರ ಮನಸ್ಸುಗಳು ಅದೆಷ್ಟು ಸೂಕ್ಷ್ಮವಾಗಿರುತ್ತದೆಂದರೆ ನೀವು ಮೆತ್ತಗೆ ಸ್ಪರ್ಶಿಸಿದರೂ ಕೂಡ ಅದು ಹರಿದುಹೋಗಬಲ್ಲದು’, ಎನ್ನುತ್ತಾರೆ ಈ ವಿಭಾಗದಲ್ಲಿ ಸಾಕಷ್ಟು ಅಧ್ಯಯನವನ್ನು ಮಾಡಿರುವ ಖ್ಯಾತ ತಜ್ಞೆ ಡಾ. ಮಾರ್ಷ್ ಲಿನೆಹನ್.

ವಂಶವಾಹಿ ಜೀನ್ ಗಳು, ನ್ಯೂರೋಲಾಜಿಕಲ್ ಕಾರಣಗಳು, ಹುಟ್ಟಿ ಬೆಳೆದ ಪರಿಸರ (ದೌರ್ಜನ್ಯಗಳ ಹಿನ್ನೆಲೆ) ಇತ್ಯಾದಿಗಳು ಬಿ.ಪಿ.ಡಿ ಯ ಹಿಂದಿರುವ ಮುಖ್ಯ ಕಾರಣಗಳು. ಗಂಡಸರಿಗೆ ಹೋಲಿಸಿದರೆ ಹೆಂಗಸರಲ್ಲಿ ಡಿ.ಬಿ.ಟಿ ಯ ಸಂಖ್ಯೆಯು ಹೆಚ್ಚು. ವಂಶವಾಹಿ ಕಾರಣಗಳ ಜೊತೆಗೇ ದೈಹಿಕ, ಮಾನಸಿಕ ಮತ್ತು ಲೈಂಗಿಕ ದೌರ್ಜನ್ಯಗಳ ಹಿನ್ನೆಲೆಗಳು ಬಿ.ಪಿ.ಡಿ ಹೊಂದಿರುವ ವ್ಯಕ್ತಿಗಳಲ್ಲಿ ಕಾಣುವುದು ಸಾಮಾನ್ಯ. ಡಯಲೆಕ್ಟಿಕಲ್ ಬಿಹೇವಿಯರಲ್ ಥೆರಪಿ (ಡಿ.ಬಿ.ಟಿ)ಯು ಬಿ.ಪಿ.ಡಿ ಗೆಂದೇ ಸೂಚಿಸಲಾಗುವ ಪ್ರಮುಖ ಚಿಕಿತ್ಸಾವಿಧಾನಗಳಲ್ಲೊಂದು.

ಬಿ.ಪಿ.ಡಿ ಸಾಮಾನ್ಯವಾಗಿ ಬೈಪೋಲಾರ್, ಖಿನ್ನತೆ, ವ್ಯಸನ ಸಂಬಂಧಿ ಖಾಯಿಲೆಗಳೊಂದಿಗೆ ಬೆರೆತು ಬರುವುದರಿಂದಾಗಿ ಇದನ್ನು ಪತ್ತೆಹಚ್ಚುವುದೂ ಕೊಂಚ ಕಷ್ಟ ಎನ್ನುತ್ತಾರೆ ತಜ್ಞರು. ಹೀಗಾಗಿ ಬಿ.ಪಿ.ಡಿ ಗೆ ಸಂಬಂಧಪಟ್ಟಂತೆ ನೀಡಬೇಕಾದ ಚಿಕಿತ್ಸೆಗಳು ರೋಗಿಗೆ ಸಿಗದೇಹೋಗಬಹುದು.

‘ಗೆಟ್ ಮೀ ಔಟ್ ಆಫ್ ಹಿಯರ್ ‘ ಕೃತಿಯ ಲೇಖಕಿ ರೇಚಲ್ ರೇಲಾಂಡ್ ರ ಕಥೆಯಲ್ಲೂ ಅಪಾಯದ ಬಾಗಿಲನ್ನು ತಟ್ಟುವ ಸಮಯಕ್ಕಷ್ಟೇ ಏನೋ ಗಂಭೀರವಾದ ಸಮಸ್ಯೆಯಿದೆ ಎಂಬ ಸಂದೇಹವು ಅವರಿಗುಂಟಾಗಿದ್ದು. ಆದರೆ ನಿಯಮಿತ ಕೌನ್ಸಿಲಿಂಗ್ ಸೆಷನ್ ಗಳಲ್ಲಿ ತಾನು ಈ ಮನಸ್ಥಿತಿಯನ್ನು ಬಾಲ್ಯದಿಂದಲೇ ತನಗರಿವಿಲ್ಲದಂತೆ ಪೋಷಿಸಿಕೊಂಡು ಬಂದಿದ್ದೆ ಎಂಬ ನಂಬಲಸಾಧ್ಯ ಸತ್ಯವು ಅವರೆದುರು ಅನಾವರಣವಾಗುತ್ತದೆ. ಬಹುತೇಕ ಎಲ್ಲರಿಗೂ ಸಲ್ಲುವ ಸತ್ಯವೇ ಇದು. ಹರೆಯದ ಸಮಯದಲ್ಲಿ ವ್ಯಸನಗಳು, ಸಿಡುಕುವಿಕೆ, ಖಿನ್ನತೆಗಳು ಸಾಮಾನ್ಯವಾಗಿ ಕಾಣಬರುವುದರಿಂದ ಬಹಳಷ್ಟು ಬಾರಿ ಈ ಲಕ್ಷಣಗಳು `ಹಾರ್ಮೋನು’ಗಳೆಂಬ ಉಡಾಫೆಯ ಹೆಸರಿನಲ್ಲಿ ನಿರ್ಲಕ್ಷ್ಯಕ್ಕೀಡಾಗುತ್ತವೆ. ಆದರೆ ಬಿ.ಪಿ.ಡಿ ಯಲ್ಲಿ ಈ ಲಕ್ಷಣಗಳು ಒಟ್ಟಾಗಿ ಮತ್ತು ತಡೆಯಲಾರದಷ್ಟು ಹೆಚ್ಚಾಗಿ ಕಾಡುವುದರಿಂದಾಗಿ ಅಪಾಯದಂಚಿಗೆ ಜಾರುವ ಮೊದಲು ಮನೋವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಬಿ.ಪಿ.ಡಿ ಯ ಬಲೆಯಲ್ಲಿ ಕ್ಷಣಕ್ಷಣವೂ ನರಳುವ ವ್ಯಕ್ತಿಗಳಲ್ಲದೆ ಅವರ ಆಸುಪಾಸಿನವರಿಗೂ ಸವಾಲಿನ ಸಂಗತಿ ಈ ಬಿ.ಪಿ.ಡಿ. ಆಪ್ತರ ಅಗಲಿಕೆಯ ಭಯದಲ್ಲಿ ಮೊದಲೇ ಕಂಗೆಟ್ಟಿರುವ ಈ ಅಮಾಯಕರನ್ನು ದಾರಿಮಧ್ಯದಲ್ಲೇ ಕೈಬಿಡುವುದು ಮತ್ತಷ್ಟು ಭೀಕರ. ಸಂಗಾತಿ, ಸ್ನೇಹಿತರು ಮತ್ತು ಸಂಬಂಧಿಗಳ ಸಹಕಾರವು ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲಾ ಸಂದರ್ಭಗಳಿಗಿಂತಲೂ ಹೆಚ್ಚು. ಈ ಕತ್ತಿಯಲಗಿನಲ್ಲಿ ನಾನೂ ನಡೆದಿರುವುದರಿಂದ ಇದರ ಗಂಭೀರತೆಯ ಸ್ಪಷ್ಟ ಅರಿವು ನನಗಿದೆ.

'ಸ್ಟಾಪ್ ವಾಕಿಂಗ್ ಆನ್ ಎಗ್ಶೆಲ್ಸ್''ದ ಬುದ್ಧ ಆಂಡ್ ದ ಬಾರ್ಡರ್ ಲೈನ್’ ನಂತಹ ಕೃತಿಗಳು ಈ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿವೆ. ಬಿ.ಪಿ.ಡಿ ಎಂದಾಕ್ಷಣ ಮೈಕಲ್ ಡಗ್ಲಾಸ್ ಮತ್ತು ಗ್ಲೆನ್ ಕ್ಲೋಸ್ ರ ‘ಫೇಟಲ್ ಅಟ್ರಾಕ್ಷನ್' ಚಿತ್ರದ ಹೆಸರು ಹೇಳುತ್ತಾ ಬಿ.ಪಿ.ಡಿ ಮನಸ್ಥಿತಿಯುಳ್ಳವರು ತಮ್ಮ ಸ್ವಾರ್ಥಕ್ಕಾಗಿ ಬಣ್ಣಬದಲಿಸುವ ಗೋಸುಂಬೆಗಳು, ತೀರಾ ಅಪಾಯಕಾರಿ ಎಂದೆಲ್ಲಾ ಹಲವರು ಷರಾ ಬರೆಯುವುದುಂಟು. ಆದರೆ ಈ ಚಿತ್ರದಲ್ಲಿ ಗ್ಲೆನ್ ಕ್ಲೋಸ್ ರ ಪಾತ್ರವನ್ನು ಅದೆಷ್ಟು ಅಪಾಯಕಾರಿಯಾಗಿ ಚಿತ್ರಿಸಲಾಗಿದೆಯೋ, ಬಾರ್ಡರ್ಲೈನ್ ಪರ್ಸನಾಲಿಟಿಯ ಎಲ್ಲಾ ವಿಧಗಳು ಈ ರೀತಿಯಿರುವುದು ತೀರಾ ಕಮ್ಮಿಯೆನ್ನುವುದೂ ಅಷ್ಟೇ ಸತ್ಯ.

ಬಿ.ಪಿ.ಡಿ ಹೊಂದಿರುವ ವ್ಯಕ್ತಿಯೊಬ್ಬ (ಡಿಫೆನ್ಸಿವ್ ಮೆಕಾನಿಸಮ್ ರೂಪವಾಗಿ) ತನ್ನನ್ನು ತಾನು ನಾಶಗೊಳಿಸುವುದರಲ್ಲಿ ಹೆಚ್ಚು ತೊಡಗಿರುತ್ತಾನೆಯೇ ಹೊರತು ಇತರರಿಗೆ ಹಾನಿಯುಂಟುಮಾಡುವುದರಲ್ಲಿ ಅಲ್ಲ.'ಬಾರ್ಡರ್ಲೈನ್ ವಾಯಿಫ್’ ಎಂಬ ವಿಧವು ಇದಕ್ಕೊಂದು ಉತ್ತಮ ಉದಾಹರಣೆ. `ಬಾರ್ಡರ್ಲೈನ್ ವಾಯಿಫ್’ ಕೆಟಗರಿಯ ವ್ಯಕ್ತಿಯೊಬ್ಬ ಕ್ಷಣಕ್ಷಣವೂ ಸಾವಿನಂಚಿನತ್ತ ನಡೆಯುತ್ತಿದ್ದರೂ ಸಾಮಾನ್ಯನಂತೆ, ಹೊರಜಗತ್ತಿಗೆ ಇದರ ಸುಳಿವೇ ಬರದಂತೆ ಸಮರ್ಥವಾಗಿ ನಟಿಸುತ್ತಾ ಜೀವಿಸಬಲ್ಲ.

ಮನೋವಿಜ್ಞಾನವನ್ನು ನಮ್ಮಲ್ಲಿ ಅರ್ಥೈಸಿಕೊಂಡವರಿಗಿಂತ ಅದನ್ನು ದೂರವಿಟ್ಟವರೇ ಹೆಚ್ಚು. ಹೀಗಾಗಿ ಮನೋವೈದ್ಯರನ್ನು ಸಂಪರ್ಕಿಸುವಲ್ಲಿ, ತಮ್ಮ ಆಪ್ತರೊಂದಿಗೆ ಸಮಸ್ಯೆಗಳನ್ನು ಹೇಳಿಕೊಳ್ಳುವಲ್ಲಿ ಇಂದಿಗೂ ಮಡಿಮೈಲಿಗೆಗಳು ಉಳಿದುಕೊಂಡಿರುವುದು ಸತ್ಯ. ಆದರೆ ಒಳಗೊಳಗೇ ನರಳುತ್ತಾ ಹೊರಜಗತ್ತಿಗೊಂದು ಮುಖವಾಡ ಹಾಕಿಕೊಂಡು ನಡೆಸುವ ಬದುಕು ಶಾಶ್ವತವಾದ ಪರಿಹಾರವಂತೂ ಖಂಡಿತವಾಗಿಯೂ ಅಲ್ಲ.

ತಮ್ಮ ಸಮಸ್ಯೆಗಳನ್ನು ಹೇಳಿಕೊಂಡ ನಂತರ ಸಂಬಂಧಗಳು ಮೊದಲಿನಂತೆಯೇ ಉಳಿದುಕೊಳ್ಳಲಿವೆಯೇ, ತನ್ನವರಿಂದಲೇ ದೂರತಳ್ಳಲ್ಪಡುವೆನೇ, ಇಂಥದ್ದೆಲ್ಲಾ ಇದ್ದಿದ್ದೇ ತಾನೇ, ಇದೂ ಕೂಡ ಒಂದು ಹೇಳಿಕೊಳ್ಳುವಂಥಾ ಸಮಸ್ಯೆಯೇ… ಇಂಥಾ ಹತ್ತಾರು ಭಯ, ಸಂಶಯ ಮತ್ತು ಅಸಂಬದ್ಧ ವಿಚಾರಧಾರೆಗಳು ಈ ಹಿಂಜರಿಕೆಗಳಲ್ಲಿವೆ. ಈ ನಿಟ್ಟಿನಲ್ಲಿ ‘ಯುವರ್ ದೋಸ್ತ್' ನಂತಹ ಅಂತರ್ಜಾಲ ತಾಣಗಳು ತಮ್ಮ ಗೌಪ್ಯತೆಯನ್ನು ಕಾಯ್ದುಕೊಂಡೇ ತಜ್ಞರನ್ನು ಸಂಪರ್ಕಿಸುವಂಥಾ, ಅವರೊಂದಿಗೆ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವಂಥಾ ಸೌಲಭ್ಯಗಳನ್ನು ಪರಿಚಯಿಸಿ ಪ್ರಶಂಸನೀಯ ಹೆಜ್ಜೆಗಳನ್ನಿಟ್ಟಿವೆ.

‘ಬಿ.ಪಿ.ಡಿ ನಿನಗಾಗಿದೆಯಷ್ಟೇ, ಆದರೆ ನೀನೇ ಬಿ.ಪಿ.ಡಿ ಯಲ್ಲ’, ಎಂಬ ಆಪ್ತಮಾತೊಂದು ರೇಚಲ್ ರ ಕೃತಿಯಲ್ಲಿ ಬರುತ್ತದೆ. ಅಷ್ಟಕ್ಕೂ ಮನೋರೋಗಗಳೆಂದರೆ ತಾವೇ ಶಾಪಿಂಗ್ ಮಾಲ್ ಗಳಿಗೆ ಹೋಗಿ ಖರೀದಿಸಿ ತಂದ ವಸ್ತುಗಳಲ್ಲ. ನೋವನ್ನೇ ಉಸಿರಾಡುತ್ತಿರುವ ಜೀವಕ್ಕೊಂದು ಹೇಳಬಹುದಾದ ಇದಕ್ಕಿಂತ ಹೆಚ್ಚಿನ ಸಾಂತ್ವನದ ಮಾತಾದರೂ ಏನು?

ಅಂದಹಾಗೆ ಗಾರ್ಗಿಯ ವಿಚಾರಕ್ಕೆ ಬಂದರೆ ‘ನಿನಗೆ ಬಿ.ಪಿ.ಡಿ ಇದೆ. ನಿನಗೆ ಹೇಳಿದ್ದೇನೆ, ಇಗೋ ನಾನು ಹೊರಟೆ', ಎಂದು ಹೇಳಿ ಮಾಯವಾಗುವ ಮಾರ್ಗವು ನನ್ನದಾಗಿರಲಿಲ್ಲ. ಹಾಗೆ ತೀರ್ಪು ಕೊಡಲು ನಾನು ಮನೋವೈದ್ಯನೂ ಅಲ್ಲ. ಆದರೆ ಚಿಕಿತ್ಸೆಯ ದಿಕ್ಕಿನತ್ತ ಕೈ ತೋರಿಸುವುದನ್ನಂತೂ ನಾನು ಮಾಡಲೇಬೇಕಿತ್ತು. ಸಹಜವಾಗಿಯೇ ನನ್ನ ಈ ಸಲಹೆಗೆ ಪ್ರತಿರೋಧವೆಂಬುದು ಜೋರಾಗಿಯೇ ಬಂದಿತ್ತು. ಅತ್ತುಕೂಗಿ ರಂಪಾಟಗಳಾದವು. 'ನಾನು ಸರಿಯಾಗಿಯೇ ಇದ್ದೇನೆ’ ಎಂಬ ಮಾತುಗಳು ರಾಚಿದವು.

ಕೊನೆಗೂ ಮಾರ್ಗವೊಂದನ್ನು ನಾನು ತೋರಿಸಿದ್ದೆ. ಸಾಗಬೇಕಾದ ದೂರ ಗಾರ್ಗಿಗಿತ್ತು. ಯಾವುದಕ್ಕೂ ಒಮ್ಮೆ ಹೋಗಿ ಬಾ ಅಂದಿದ್ದೆ. ಇಂತಹ ದೀರ್ಘಕಾಲಿಕ ಕೌನ್ಸಿಲಿಂಗ್ ಗಳು ನಾಲ್ಕು ಮಾತುಗಳಲ್ಲಿ ಹೇಳಿ ಮುಗಿಸುವಷ್ಟು ಸುಲಭದ ವಿಷಯಗಳೂ ಅಲ್ಲ. ಅದೇನಿದ್ದರೂ `ನಾನಿದ್ದೇನೆ… ನೀನು ಧೈರ್ಯವಾಗಿ ಮುನ್ನಡೆ’, ಎಂದವಳಿಗೆ ಹೇಳುವ ಸಮಯವಾಗಿತ್ತು.

 

Add Comment

Leave a Reply