Quantcast

ಆದರೂ ಇದು ಒಂದೊಳ್ಳೆ ರಾಮಾಯಣ!

Reader’s Review

b-c-chandrashekhar-webp

ಚಂದ್ರಶೇಖರ ಬಿ ಸಿ 

ನಾವು ಈ ಸಿನಿಮಾಗೆ ಹೋಗಿದ್ದೇ ಪ್ರಕಾಶ್ ರೈಗಾಗಿ!!

ಪ್ರಕಾಶ್ ರೈ ನಿರ್ದೇಶಿಸಿರುವ, ನಟಿಸಿರುವ ಹಾಗು ತನ್ನಂತೆಯೇ ಇತರ ನುರಿತ ಕಲಾವಿದರ ಬಳಗವನ್ನು ಬಳಸಿಕೊಂಡು ‘ಒಂದೊಳ್ಳೇ’ ಚಿತ್ರವನ್ನು ಮಾಡಲು ಪ್ರಯತ್ನಿಸಿರುವ ಅವರ ಹೊಸ ಕಲಾಕೃತಿಯನ್ನು ನೋಡುವುದಕ್ಕೆ.

ಸೂಕ್ಷ್ಮ ಮನೋಭಾವಿಗಳೂ ಕಲಾಪ್ರೇಮಿಗಳೂ, ಕಥಾವಸ್ತು ಆರಾಧಕರೂ ಆದ ಕೆಲವು ನೋಡುಗ ಸಮುದಾಯವನ್ನು ಸಾಧಾರಣ ಕಮರ್ಷಿಯಲ್ ಚಿತ್ರಗಳು ಆಕರ್ಷಿಸಲು ಸೋಲುತ್ತವೆ. ಆದರೆ ಅವರಿಗೆ ರುಚಿಸುವಂತೆ, ಅವರನ್ನು ಆಕರ್ಷಿಸುವಂತೆ ಚಿತ್ರಕಥೆ ಸೃಷ್ಟಿಸುವ ಶಕ್ತಿ, ಯುಕ್ತಿ ಎರಡನ್ನೂ ಹೊಂದಿರುವ ಕೆಲವೇ ನಿರ್ದೇಶಕರುಗಳಲ್ಲಿ ಪ್ರಕಾಶ್ ರೈ ಒಬ್ಬರು.

idolle-ramayana2ಆದರೆ ತಮ್ಮ ಈ ಹೊಸ ಚಿತ್ರ ನಿರ್ದೇಶನದಲ್ಲಿ ಅವರು ಅಷ್ಟು ಯಶಸ್ವಿಯಾಗಿಲ್ಲ ಎಂಬುದು ನನ್ನ ಅನಿಸಿಕೆ. ( ನನ್ನ ಜೊತೆಯಲ್ಲಿದ್ದವರ ಅಭಿಪ್ರಾಯವೂ ಕೂಡ).

ಕಥಾವಸ್ತು ಆಧಾರಿತ ಚಿತ್ರಗಳಲ್ಲಿ ಕೆಲವು ಪಾತ್ರಗಳು ಆಳವಾಗಿ ಬೆಳೆದು , ಕಥೆಯ ಮುಖ್ಯ ಉದ್ದೇಶವನ್ನು, ಅದು ತಕ್ಕ ಗುರಿ ಸೇರುವಂತೆ ನೋಡಿಕೊಳ್ಳುವ ಜವಾಬ್ಧಾರಿಯನ್ನು ತಮ್ಮ ಹೆಗಲಿನಲ್ಲಿ ಹೊತ್ತು ನಡೆಸುತ್ತವೆ (ನಿರ್ದೇಶಕನ ನೋಟಕ್ಕೆ ಅನುಸಾರವಾಗಿ). ಕಥೆಯ ಸೂಕ್ಷ್ಮ ಎಳೆಗಳನ್ನು ಹೊರಗಿಡುತ್ತಾ ನೋಡುಗರ ಅಂತರಂಗಕ್ಕೆ ಮುಖ್ಯ ಉದ್ದೇಶ ನಾಟುವಂತೆ ಮಾಡುತ್ತವೆ.

ವೀಕ್ಷಕರ ಭಾವ ಎಲ್ಲಿಯೂ ಎಡವದೆ, ನಿಧಾನಿಸಿದೆ ನಡೆಸಿಕೊಂಡು ಕಥೆಯ ಗುರಿಯ ಕಡೆಗೆ ತಂದು ನಿಲ್ಲಿಸುತ್ತದೆ. ಈ ಚಿತ್ರದಲ್ಲಿ ಕಥಾವಸ್ತು, ಕಥೆಯ ಹರಿವು ಎರಡೂ ಸೊರಗಿವೆ. ಕಥೆ ಅತಿ ಸರಳತೆಯಿಂದ ದುರ್ಬಲವಾದರೆ, ಕಥಾಸಂಕಲನ ಕಥೆಯ ಹರಿವನ್ನು ನೀರಸವಾಗಿಸಿದೆ. ಈ ದುರ್ಬಲತೆಗಳ ನಡುವೆ ಪಾತ್ರಗಳು ಕಥಾ ಉದ್ದೇಶವನ್ನು ಅಭಿವ್ಯಕ್ತಿಸಲು ಕೊನೆಯವರೆಗೂ ಕಷ್ಟಪಟ್ಟು ಹೆಣಗುವಂತೆ ತೋರುತ್ತದೆ.

ಹೌದು ಕಥೆ, ಕಾದಂಬರಿ, ವಿಮರ್ಶೆಗಳನ್ನು ಓದುವವರಿಗೆ ಈ ಚಿತ್ರ ಕೊಂಚ ಇಷ್ಟವಾಗಬಹುದು, ಏಕೆಂದರೆ ಅಲ್ಲಿ ನಿಧಾನವೇ ಪ್ರಧಾನ. ಪಾತ್ರವೊಂದರ ಭಾವಸಂವೇದನೆಯೊಂದು ನಿಧಾನವಾಗಿ ಚಿಗುರಿ, ಮೊಗ್ಗಾಗಿ ಕೊನೆಗೆ ಪೂರ್ಣವಾಗಿ ಅರಳಿ ತನ್ನ ಅಂತರಂಗವನ್ನು ಓದುಗರೆದುರು ತೆರೆದಿಡುತ್ತದೆ. ಓದುಗ ಅದೇ ಗುಂಗಿನಲ್ಲಿ ಕೆಲವು ಗಂಟೆಗಳೊ, ಕೊಂಚ ದಿನಗಳೊ ಅದೇ ಪ್ರಪಂಚದ ಸುತ್ತ ಸುತ್ತುತ್ತಾ ಹೃದಯಕ್ಕೆ ಹತ್ತಿರವಾಗಿ ಅನುಭವಿಸುತ್ತಾನೆ….ನಿಧಾನವಾಗಿ.

ಆದರೆ ಒಂದು ಚಲನಚಿತ್ರಕ್ಕೆ ಅಷ್ಟು ವ್ಯವಧಾನವಿರುವುದಿಲ್ಲ. ಒಂದೆರೆಡು ಗಂಟೆಯೊಳಗೆ ಎಲ್ಲಾ ಪಾತ್ರಗಳ ಪರಿಚಯವಾಗಿ, ಪ್ರಮುಖ ಪಾತ್ರಗಳು ಬೆಳೆದು, ಕಥಾ ನಿರೂಪಣೆ ಕಲಾತ್ಮಕವಾಗಿ ಸನ್ನಿವೇಷಗಳ ಸರಣಿಯನ್ನು, ಪಾತ್ರಗಳ ಭಾವನೆಗಳನ್ನು, ಅವು ಮಾತುಗಳಲ್ಲಿ ಅಭಿವ್ಯಕ್ತಿಸುವ ಸಂದೇಶವನ್ನು, ಮುಖಭಾವಗಳು ಬಿಂಬಿಸುವ ಸಂಕೇತಗಳನ್ನು ಜಾಣ್ಮೆಯಿಂದ ಹೆಣೆದು, ಬುದ್ದಿವಂತ ಪ್ರೇಕ್ಷಕರ ಮುಂದೆ ತೆರೆದಿಡಬೇಕು.

idolle-ramayana3ಎಲ್ಲರನ್ನೂ ಸಂತುಷ್ಟಪಡಿಸದಿದ್ದರೂ ಬಹುಪಾಲು ಜನರ ಮನವನ್ನು ಗೆಲ್ಲಬೇಕು. ಕಮರ್ಷಿಯಲ್ ಚಿತ್ರಗಳು ಹಾಡು, ಗಲಾಟೆ, ಹಾಸ್ಯ, ಅನಿರೀಕ್ಷಿತ ತಿರುವುಗಳ ಸಹಾಯಗಳಿಂದ ಕಥಾರೋಚಕತೆಯನ್ನು, ಭಾವತೀವ್ರತೆಯನ್ನು ಕೃತಕವಾಗಿ ಸೃಷ್ಟಿಸಿ ಗೆಲ್ಲುತ್ತವೆ ಆದರೆ ಕಲಾತ್ಮಕ ಚಿತ್ರಗಳು ಹಾಗಲ್ಲ, ಇಲ್ಲಿ ಎಲ್ಲವೂ ನೈಜ, ಸರಳವಾದರೂ ಪಕ್ವ, ಆಳ. ಇಂತಹ ಚಿತ್ರಗಳನ್ನು ತೆಗೆಯುವುದು ಕಷ್ಟ ಆದರೆ ಅಸಾಧ್ಯವಲ್ಲ.

ಅದರಲ್ಲೂ ಪ್ರಕಾಶ್ ರೈಗಿರುವ ಅನುಭವ ಚಾತುರ್ಯ ಅದನ್ನು ಸಾಧಿಸಿ ಗೆಲ್ಲಬಹುದು. ಆದರೆ ‘ಇದೊಳ್ಳೆ ರಾಮಾಯಣ’ದಲ್ಲಿ ಹಾಗಾಗಿಲ್ಲ. “ಭುಜಂಗಯ್ಯ ಶೆಟ್ಟಿ”, “ಶಿವು”, “ಬಂಗಾರ” ಪಾತ್ರಗಳು ನೈಜವಾಗಿದ್ದರೂ, ಪ್ರತಿಭಾನ್ವಿತವಾಗಿದ್ದರೂ ಉತ್ತಮ ಕಥಾನಿರೂಪಣೆಯೊಂದಿಗೆ ಬೆಸೆದುಕೊಂಡು ಪಕ್ವವಾಗಿಲ್ಲ. ಕಥೆ ಸರಳ ಸುಂದರವಾಗಿದ್ದರೂ ಅಂತರಂಗದ ಪ್ರೇಕ್ಷಕನ ಆಳಕ್ಕಿಳಿಯಲು ವಿಫಲವಾಗಿದೆ.

ಚಿತ್ರದಲ್ಲಿ ನಿರ್ದೇಶಕನ ಅಂತರಾಳದಲ್ಲಿರುವ ಚಡಪಡಿಕೆ, ತಲ್ಲಣ, ವೈಚಾರಿಕೆಗಳು ಪಾತ್ರಗಳ, ಸನ್ನಿವೇಶಗಳ ಮೂಲಕ ನಮ್ಮನ್ನು ಸೇರುವ ಪ್ರಯತ್ನ ಅಲ್ಲಲ್ಲಿ ಕಂಡರೂ, ಪರಿಣಾಮಕಾರಿಯಾಗಿ ಮನಸ್ಸಿಗೆ ಒತ್ತುವುದಿಲ್ಲ. ಕಥೆಯ ಮನಸ್ಸಿನೊಳಗಿರುವ ತುಮುಲ, ಸಂಕಟ, ಪ್ರಾಯಶ್ಚಿತ್ತಗಳು ಕೊನೆಯಲ್ಲಿ ಹೊರಬಂದರೂ, ನೋಡುಗ ಅಷ್ಟರಲ್ಲಾಗಲೇ ಕಥೆಯಲ್ಲಿ ಆಸಕ್ತಿ ಕಳೆದುಕೊಂಡು ಬಿಟ್ಟಿರುತ್ತಾನೆ.

ಈ ಚಿತ್ರ ಕನ್ನಡ ಚಿತ್ರರಂಗದ ಒಂದು ಉತ್ತಮ ಪ್ರಯತ್ನವೆಂದು ಹೇಳಬಹುದು ಆದರೆ ಪ್ರಕಾಶ್ ರೈ ಅವರ ಉತ್ತಮ ಪ್ರಯತ್ನವಲ್ಲ!!

Add Comment

Leave a Reply