Quantcast

ನನ್ನ ಮಾತು ನಿಂತು ಹೋಗಿತ್ತು..

ಅವನು ಹೇಳುತ್ತಲೇ ಇದ್ದ..

suchith kotianಸುಚಿತ್ ಕೋಟ್ಯಾನ್ ಕುರ್ಕಾಲು 

‘ನೀನು ಹಾಗಾದ್ರೆ ನನ್ನ ಮದುವೆಯಾಗುದಿಲ್ಲ ಅಲ್ಲಾ… ಆಗುದಿಲ್ಲ ಅಲ್ಲ………’

ನನಗೆ ಭಯವಾಗುತ್ತಿತ್ತು. ಈ ಹುಡುಗಿ ತುಂಬಾ ಡಿಪ್ರೆಸ್ ಆಗಿದ್ದಾಳೆ ಅಂತ ಅನ್ನಿಸ್ತಿತ್ತು. ಆಮೇಲೆ ಆ ಕಡೆ ಫೋನ್ ನಲ್ಲಿ  ಅವಳ ಮಾತು ಕೇಳಿಸ್ಲಿಲ್ಲ. ‘ಸೌಮ್ಯ.. ಸೌಮ್ಯ’ ಅಂತ ಕರೆದೆ. ಬಸ್ಸು, ಲಾರಿ ಹೋಗೋ ಸೌಂಡು ಕೇಳಿಸ್ತಿತ್ತೇ ಹೊರತು ಮತ್ತೇನೂ ಕೇಳಿಸ್ಲಿಲ್ಲ. ಅಮ್ಮ ತಿಂಡಿಗೆ ಕರೆದ್ರು. ಕಾಲ್ ಕಟ್ ಮಾಡಿ ಹೊರಗೆ ಹೋದೆ.

tundu-hykluಅವಳದ್ದು, ನಂದು ಐದು ವರ್ಷದ ಪ್ರೀತಿ. ಮನೆಯವರದ್ದೂ ಒಪ್ಪಿಗೆ ಇತ್ತು. ಒಂದು ವರ್ಷದ ಹಿಂದೆ ಎಂಗೇಜ್ ಮೆಂಟ್ ಆಗಿ ಈ ಡಿಸೆಂಬರ್ ಗೆ ಮದುವೆ ಅಂತ ಫಿಕ್ಸ್ ಆಗಿತ್ತು. ಆದ್ರೆ ಇತ್ತೀಚೆಗೆ ಕೆಲ ತಿಂಗಳಿಂದ ಅವಳ ವರ್ತನೆ ಏನೋ ಸರಿಯಿರಲಿಲ್ಲ. ಕೇಳಿದ್ರೆ ಹೇಳ್ತಾನೂ ಇರಲಿಲ್ಲ.

ಇವತ್ತು ಬೆಳಿಗ್ಗೆ ಸಡನ್ನಾಗಿ ಕಾಲ್ ಮಾಡಿದವಳು ನಿಂಜೊತೆ ಒಂದು ಸತ್ಯ ಹೇಳಬೇಕು ಅಂದ್ಲು. ಆ ಸತ್ಯ ಇಷ್ಟು ಭೀಕರವಾಗಿರುತ್ತೆ ಅಂತ ಅಂದ್ಕೊಂಡಿರಲಿಲ್ಲ. ‘ನಂಗೀವಾಗ ನಾಲ್ಕು ತಿಂಗಳು, ಪ್ಲೀಸ್ ನನ್ನ ಕೈಬಿಡಬೇಡ’ ಅಂತ ಅಳತೊಡಗಿದಳು. ನಂಗೆ ಆ ಕ್ಷಣಕ್ಕೆ ಏನೂ ಹೊಳೀಲಿಲ್ಲ. ಆವತ್ತು ಮಣ್ಣಪಳ್ಳದ ಕೆರೆಯ ಹತ್ರ ಕೆನ್ನೆಗೆ ಒಂದು ಮುತ್ತುಕೊಟ್ಟಿದ್ದನ್ನು ಬಿಟ್ರೆ ನಾನು ಅವಳನ್ನು ಮುಟ್ಟಿರಲೇ ಇಲ್ಲ. ಹಾಗಿರುವಾಗ ಸಡನ್ನಾಗಿ ‘ನಂಗೀಗ ನಾಲ್ಕು ತಿಂಗಳು, ನನ್ನ ಕೈ ಬಿಡಬೇಡ’ ಅಂದ್ರೆ ಹೇಗೆ ಒಪ್ಕೊಳ್ಲಿ ಈ ಹುಡುಗೀನ?

ಇಲ್ಲಿಯವರೆಗೆ ನಾನು ನೆಟ್ಟಗೆ ಒಂದ್ಮಾತು ಈ ಹುಡುಗಿಗೆ ಬೈದವನೇ ಅಲ್ಲ. ಅಷ್ಟಕ್ಕೂ ನಂಗೆ ಅವಳ ಮೇಲೆ ಸಿಟ್ಟು ಬರೋದೇ ಇಲ್ಲ. ಆದ್ರೆ ಅವಳ ಈ ದ್ರೋಹ ನನ್ನನ್ನು ಅಕ್ಷರಶಃ ಸುಟ್ಟುಹಾಕಿತ್ತು. ಮುಖಕ್ಕೆ ಹೊಡೆದ ಹಾಗೆ ಹೇಳಿ ಬಿಟ್ಟಿದ್ದೆ; ‘ಯಾವನಿಗೆ ಬಸುರಾಗಿದ್ಯೋ ಹೋಗಿ ಅವನನ್ನೇ ಕಟ್ಕೋ..’ ನನ್ನ ಧ್ವನಿ ಕಂಪಿಸುತ್ತಿತ್ತು. ಆ ಕಡೆಯಿಂದ ‘ನನ್ನ ಮದುವೆಯಾಗಲ್ಲ ಅಲ್ವಾ..?’ ಅಂತ ಎರಡೆರಡು ಸರಿ ಕೇಳಿತ್ತು. ನನ್ನ ಮೌನವೇ ಅವಳಿಗೆ ಉತ್ತರ ಕೊಟ್ಟಿತ್ತು.

ಮನಸ್ಸು ಕದಡಿ ಹೋಗಿತ್ತು. ಅಷ್ಟು ನಂಬಿದ್ದೆ ಅವಳನ್ನು. ಈ ರೀತಿ ನಂಗೆ ಮೋಸವಾಗುತ್ತೆ ಅಂತ ಅನ್ಕೊಂಡಿರಲಿಲ್ಲ. ಎಲ್ಲಿ ದಾರಿ ತಪ್ಪಿದಳು ಅವಳು? ಯಾಕೆ ಹೀಗಾಯಿತು ನಂಗೆ?

mobile-babyಫೋನ್ ಮತ್ತೆ ರಿಂಗಾಗಿತ್ತು. ಹೆಸರು ನೋಡೋ ಗೋಜಿಗೆ ಹೋಗದೆ ಸೀದಾ ಎತ್ತಿಬಿಟ್ಟೆ. ಆ ಕಡೆಯಿಂದ ಅಪರಿಚಿತ ಗಂಡು ಧ್ವನಿ. ‘ಸರ್. ನಾನು ಮುಲ್ಕಿ ಸೇತುವೆಯಿಂದ ಮಾತಾಡ್ತಿದ್ದೇನೆ. ಇಲ್ಲಿ ಒಬ್ಳು ಹುಡುಗಿ ಸೇತುವೆ ಮೇಲಿಂದ ಈಗಷ್ಟೇ ಹಾರಿದ್ದನ್ನು ನಾನು ನೋಡಿದೆ. ಮೊಬೈಲ್, ಚಪ್ಲಿ, ಪರ್ಸು, ಚಿನ್ನದ ಸರ ಎಲ್ಲ ತೆಗೆದಿಟ್ಟು ಹಾರಿದ್ದಾಳೆ ಸರ್. ಅವರ ಮೊಬೈಲ್ನಲ್ಲಿ ಲಾಸ್ಟ್ ಕಾಲ್ ನಿಮ್ಮ ಹೆಸರಲ್ಲಿತ್ತು. ಅದಕ್ಕೆ ಹೇಳೋಣ ಅಂತ ಮಾಡಿದ್ದು. ನೀವು ಬೇಗ ಇಲ್ಲಿ ಬನ್ನಿ.’

ಮುಂದೆ ನಡೆದ್ದಕ್ಕೆಲ್ಲಾ ನಾನು ಯಾಂತ್ರಿಕವಾಗಿ ಸಾಕ್ಷಿಯಾಗಿದ್ದೆ. ಮೂರು ದಿನದವರೆಗೆ ಅವಳ ದೇಹ ನದಿಯಲ್ಲಿ ಸಿಗದೆ ನಮ್ಮನ್ನು ಸತಾಯಿಸಿತ್ತು. ಕೊನೆಗೂ ಕೊಳೆತ ದೇಹ ಸಿಕ್ಕಾಗ ಪೋಸ್ಟ್‌ಮಾರ್ಟಂ ಮಾಡಿಸಿ ಅವಸರವಸರವಾಗಿ ಅಂತ್ಯಕ್ರಿಯೆಯೂ ಆಗಿ ಹೋಯ್ತು. ನನ್ನ ಲವ್, ಹುಡುಗಿಯ ದ್ರೋಹದಿಂದ ಹಾಳಾಗಿ ಹೋಯ್ತು ಅಂತ ಅಂದ್ಕೊಂಡು ವಾಸ್ತವ ಒಪ್ಪಿಕೊಳ್ಳುವ ಸಿದ್ಧತೆಯಲ್ಲಿದ್ದಾಗ ನಾನು ತೆಗೆದಿಟ್ಟಿದ್ದ ಆಕೆಯ ಮೊಬೈಲ್ ನ ಇನ್ಬಾಕ್ಸು, ಗ್ಯಾಲರಿಗಳು, ನನ್ನ ಜೊತೆ ಮಾತಾಡಿದ್ದವು.

ಅದ್ರಲ್ಲಿ ಒಂದಷ್ಟು ಮೆಸೇಜುಗಳಿದ್ದವು. ಆ ಮೆಸೇಜಿಗೆ ಪೂರಕವಾಗಿ ಒಂದಷ್ಟು ಫೋಟೋಗಳು, ವಿಡಿಯೋಗಳು ನನ್ನ ಹುಡುಗಿಯ ನಿಜಸ್ಥಿತಿಯ ಪರಿಚಯ ಮಾಡಿಸಿತ್ತು. ಅದ್ಯಾರೋ ಹುಡುಗ ಅಕಸ್ಮಾತ್ತಾಗಿ ಇವಳ ನಂಬರ್ ಹುಡುಕಿ ಮೆಸೇಜು ಮಾಡಿ ಸತಾಯಿಸಿದ್ದು, ಉದ್ಯೋಗ ಕೊಡಿಸುವ ಭರವಸೆ ನೀಡಿ ಮೈಸೂರಿಗೆ ಕರ್ಕೊಂಡು ಹೋಗಿದ್ದು, ಇವಳಿಗೆ ಗೊತ್ತಿಲ್ಲದ ಹಾಗೆ ಫೋಟೋ ಹೊಡೆದು ಬ್ಲ್ಯಾಕ್ ಮೇಲ್ ಮಾಡಿದ್ದು, ಅವನ ಐದು ಜನ ಸ್ನೇಹಿತರು ನನ್ನ ಹುಡುಗಿಯ ಮೇಲೆ ದೌರ್ಜನ್ಯ ಮಾಡಿದ್ದು, ಅದರ ವಿಡಿಯೋ ಮಾಡಿ ಮತ್ತೆ ಮತ್ತೆ ಹೆದರಿಸಿದ್ದು, ಎಲ್ಲವೂ ಅದರಲ್ಲಿ ಬಟಾಬಯಲಾಗಿತ್ತು.

ನಾನು ಕುಗ್ಗಿಹೋಗಿದ್ದೆ. ‘ಆ ದಿನ ನಾನು ಮಾಡಿದ್ದು ತಪ್ಪಲ್ಲ, ಮೋಸ ಮಾಡಿದ ಹುಡುಗಿಗೆ ಪಾಠ ಕಲಿಸಿದೆ ನೀನು’ ಅಂತ ಇಡೀ ಜಗತ್ತು ನನ್ನ ಬೆಂಬಲಕ್ಕೆ ನಿಲ್ಲುತ್ತೆ. ಆದರೆ ನನ್ನ ಹುಡುಗಿಗಾದ ಅನ್ಯಾಯವನ್ನು ಕೇಳಿಸಿಕೊಳ್ಳಲಾಗದಷ್ಟು ಕಿವುಡಾಗಿ ಹೋಯಿತೆ ನನ್ನ ಕಿವಿ? ನಾನೊಂಚೂರು ತಾಳ್ಮೆಯಿಂದ, ಎಲ್ಲವನ್ನೂ ಸ್ಪಷ್ಟವಾಗಿ ಕೇಳಿ ತಿಳಿದುಕೊಂಡಿದ್ದರೆ ಬಹುಶಃ ನನ್ನ ಹುಡುಗಿ ಉಳಿಯುತ್ತಿದ್ದಳೇನೋ? ಇವತ್ತು ಪಾಪ ಪ್ರಜ್ಞೆ ಕಾಡುತ್ತಿದೆ ನಂಗೆ.

ಎದುರಲ್ಲಿ ಕೂತ್ಕೊಂಡ ಗೆಳೆಯ ಹೇಳುತ್ತಲೇ ಇದ್ದ.

ನನ್ನ ಮಾತು ನಿಂತು ಹೋಗಿತ್ತು.

One Response

  1. Sandeep shetty heggadde
    October 13, 2016

Add Comment

Leave a Reply