Quantcast

ಮಂಸೋರೆ ಕಂಡಂತೆ ‘ಕಿವಿ ಮಾತು’..

ನಿನ್ನೆ ‘ಅವಧಿ’ಯಲ್ಲಿ ಸಂದೀಪ್ ಕುಮಾರ್ ನಿರ್ದೇಶನದ ‘ಕಿವಿ ಮಾತು’ ನೋಡಿದ್ದೀರಿ.

ಈ ಕಿರುಚಿತ್ರದ ಬಗ್ಗೆ ಇನ್ನೊಬ್ಬ ಮಹತ್ವದ ನಿರ್ದೇಶಕ ಮಂಸೋರೆ ಅನಿಸಿಕೆ ಇಲ್ಲಿದೆ ..

ಮನ್ಸೋರೆ

ಮಂಸೋರೆ

ಕಿವಿ ಮಾತು ಒಂದಲ್ಲಾ ಒಂದು ಸಂಧರ್ಭದಲ್ಲಿ ಪ್ರತಿಯೊಬ್ಬರೂ ಹೇಳುವವರೇ..

ಕೆಲವರು ಅದನ್ನು ಉಪೇಕ್ಷಿಸಿದರೆ, ಕೆಲವೊಮ್ಮೆ ಅದೇ ಕಿವಿ ಮಾತು ವ್ಯಕ್ತಿಯೊಬ್ಬ ತಾನು ತೆಗೆದುಕೊಳ್ಳಬೇಕಿರುವ ನಿರ್ಧಾರಕ್ಕೆ ಆಸರೆಯಾಗುತ್ತದೆ. ಈ ಎರೆಡು ವೈರುಧ್ಯಗಳ ನಡುವಿನ ಸೂಕ್ಷ್ಮ ತೆಳುಪದರವನ್ನು ತಂದೆಯೊಬ್ಬನ ಅಂತರಂಗವನ್ನು ‘ಪಾತ್ರದ ರೂಪಕದಲ್ಲಿ ಅನಾವರಣಗೊಳಿಸುವ ಕಿರುಚಿತ್ರ ‘ಕಿವಿ ಮಾತು.

imatu4ಈ ಕಿರುಚಿತ್ರದ ಕಥಾ ವಸ್ತುವು ಹೊಸತೇನನ್ನೋ ಹೇಳುವುದಿಲ್ಲವಾದರೂ, ಇಂದಿನ ಆಧುನಿಕ ಸಮಾಜದ ಅದರಲ್ಲೂ ನಗರದಲ್ಲಿ ವಾಸಿಸುತ್ತಾ ‘ಎಲ್ಲವನ್ನೂ ಪಡೆದುಕೊಳ್ಳಬೇಕು/ಗಳಿಸಿಕೊಳ್ಳಬೇಕೆಂಬ ಧಾವಂತದಲ್ಲಿರುವ ವರ್ಗವೊಂದರ, ಜೀವನ ಸಂಘರ್ಷದ ನಡುವೆಯೂ ತಮ್ಮೊಳಗೆ ಆಳವಾಗಿ ಬೇರೂರಿರುವ ಸ್ಥಾಪಿತ ನಂಬಿಕೆಗಳ ನೆಲೆಗಟ್ಟನ್ನು ಅನಾವರಣಗೊಳಿಸುವ ಚಿತ್ರವಾಗಿದೆ.

ಚಿತ್ರದ ಕಥಾಭಾಗವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಹೆಂಡತಿ ಕರೆ ಮಾಡಿ ಮಗಳು ಹುಡುಗನೊಬ್ಬನ ಜೊತೆ ಓಡಿ ಹೋಗಿದ್ದಾಳೆ ಮತ್ತು ಮಗಳು ಬಸುರಿಯಾಗಿದ್ದಾಳೆ ಎಂದು ‘ಅಳುತ್ತಾ ಹೇಳುತ್ತಾಳೆ. ಈ ವಿಷಯ ತಿಳಿದ ಆ ವ್ಯಕ್ತಿ ಚಿಂತಾಕ್ರಾಂತನಾಗುತ್ತಾನೆ. ಏನು ಮಾಡುವುದೋ ತಿಳಿಯದೆ ಚಡಪಡಿಸುತ್ತಿರುವಾಗ, ಆಗಾಗ ತನ್ನ ದೇಹ ತೃಷೆಯ ತೀರಿಸಿಕೊಳ್ಳಲಷ್ಟೇ ಬಳಸಲ್ಪಡುತ್ತಿದ್ದ ಮಂಗಳಮುಖಿಯೊಬ್ಬಳು ಹೇಳುವ ‘ಕಿವಿಮಾತಿನಿಂದ ತಾನು ಮುಂದೇನು ಮಾಡಬೇಕೆಂಬ ನಿರ್ಧಾರ ತೆಗೆದುಕೊಳ್ಳುತ್ತಾನೆ.

ಇತ್ತ ಮನೆ ಬಿಟ್ಟು ಬರುವ ಮಗಳು ಬಸ್ ಸ್ಟ್ಯಾಂಡಿನಲ್ಲಿ ತಾನು ಪ್ರೀತಿಸಿದ ಹುಡುಗನ ಎದುರು ನಿಂತಿದ್ದರೆ ಎದುರಿಗಿರುವ ಹುಡುಗ ತನ್ನ ತಂದೆ ತಾಯಿಯನ್ನು ಅಲ್ಲಿಗೆ ಕರೆಸಿಕೊಂಡು, ತಾನು ಮಾಡಿರುವ ‘ಅರಿವುಗೇಡಿತನದಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿರುತ್ತಾನೆ.

ಪ್ರೀತಿಸಿ, ಕೂಡಿದ ಹುಡುಗನೊಬ್ಬ ಹೀಗೆ ದುರ್ಬಲ ವ್ಯಕ್ತಿತ್ವದವನಾಗಿ ಆ ಹುಡುಗಿಯ ಮುಂದೆ ನಿಂತಿದ್ದರೆ, ಮತ್ತೊಂದೆಡೆ ಆ ಹುಡುಗನ ‘ತಾಯಿ ಗರ್ಭಪಾತ ಮಾಡಿಸುವ ಮೂಲಕ ತನ್ನ ಮಗನನ್ನು ಈ ಸಮಸ್ಯೆಯಿಂದ ಪಾರು ಮಾಡಿಸುವ ದಾರಿ ಹುಡುಕಿಕೊಂಡು, ಈ ‘ಹುಡುಗಿಯಿಂದ ಮಗನನ್ನು ಆದಷ್ಟು ಬೇಗ ಮುಕ್ತಿಗೊಳಿಸುವ ಅಲೋಚನೆಯಲ್ಲಿದ್ದಾಳೆ. ಅದಕ್ಕೆ ತನ್ನ ಸಹಮತ ಇದೆಯೆಂಬ ಧೋರಣೆಯಲ್ಲಿ ಹುಡುಗನ ಅಪ್ಪ ನಿಂತಿರುತ್ತಾನೆ. ಅಲ್ಲಿಗೆ ಬರುವ ಹುಡುಗಿಯ ಅಪ್ಪ ಮುಂದೆ ಯಾವ ನಿರ್ಣಯ ಕೈಗೊಳ್ಳುತ್ತಾನೆ ಎಂಬುದು ಕಥಾವಸ್ತು.

kivimatu2ಕಥನದ ಸೀಮಿತ ಅವಧಿಯಲ್ಲಿ ಹಲವು ಆಯಾಮಗಳನ್ನು ಒಳಗೊಂಡಿರುವ ಈ ಚಿತ್ರ, ವರ್ಗವೊಂದು ಸಂಧಿಗ್ದ ಸಮಯದಲ್ಲಿ ಅನುಭವಿಸುವ ತವಕ ತಲ್ಲಣಗಳನ್ನು ಹುಡುಗಿಯ ತಾಯಿಯ ಪಾತ್ರವೊಂದನ್ನು ಹೊರತುಪಡಿಸಿ ಎಲ್ಲೂ ವಾಚ್ಯವಾಗಿಸದೇ, ಉದ್ಧೇಶಪೂರ್ವಕವಾಗಿ ಘಟಿಸದೇ, ತುಂಬಾ ಸಹಜವಾಗಿ ಎಂಬಂತೆ ಚಿತ್ರಿಸಲ್ಪಟ್ಟಿದೆ. ಇಲ್ಲಿರುವ ಪ್ರತಿಯೊಂದು ಪಾತ್ರವೂ ತನ್ನದೇ ಆದ ರೀತಿಯಲ್ಲಿ ಸನ್ನಿವೇಶಕ್ಕೆ ಪ್ರತಿಕ್ರಿಯೆ ನೀಡುತ್ತದೆ.

ಯಾವ ಪಾತ್ರವೂ ಮತೊಂದು ಪಾತ್ರವನ್ನು ಅನುಕರಿಸುವುದಿಲ್ಲ. ತಾನು ಮಾಡಿರುವ ಕ್ರಿಯೆಗೆ ‘ತಪ್ಪಿನ ಚೌಕಟ್ಟು ಹಾಕಿ ಅದರಿಂದ ತಪ್ಪಿಸಿಕೊಳ್ಳುವ ತವಕ ಹುಡುಗನದ್ದಾದರೆ.. ತನ್ನ ನಿರ್ಧಾರ ತನ್ನ ವ್ಯಕ್ತಿತ್ವ, ಇಂದು ತಾನು ಎದುರಿಸುತ್ತಿರುವ ಪರಿಸ್ಥಿತಿಗಳಿಗೆ ತಾನು ಹಾಗೂ ತನ್ನೊಡಲಲ್ಲಿರುವ ಮಗು ಯಾವ ರೀತಿಯಲ್ಲೂ ಬಲಿಪಶುವಾಗಲು ತಾನು ಬಿಡುವುದಿಲ್ಲ ಎಂಬ ಆತ್ಮವಿಶ್ವಾಸ ಹುಡುಗಿಯದು. ಇಂತಹ ಸನ್ನಿವೇಶದಲ್ಲಿ ಕೆಲವೇ ಕೆಲವು ಮಾತುಗಳ ಸಹಾಯದಿಂದ ತೀವ್ರತರವಾಗಿ ಅಭಿವ್ಯಕ್ತಿಸುವ ಮುಖಭಾವದ ದೃಶ್ಯಗಳ ಚೌಕಟ್ಟಿನಲ್ಲಿ ಸನ್ನಿವೇಶವನ್ನು ಕಟ್ಟಿಕೊಟ್ಟಿರುವುದು ಈ ಚಿತ್ರದ ಹೆಗ್ಗಳಿಕೆ ಎನ್ನಬಹುದು.

kivimatu3ಈ ಚಿತ್ರದ ಕಥೆ ನಡೆಯುವುದು ಎರಡೇ ಸ್ಥಳಗಳಲ್ಲಾದರೂ ಇದು ನಗರವೊಂದರಲ್ಲಿ ನಡೆಯುತ್ತಿರುವ ಘಟನೆಗಳು ಎಂದು ನೋಡುಗನಿಗೆ ಅರ್ಥವಾಗಿಸಿರುವುದು ಹಿನ್ನೆಲೆಯಲ್ಲಿ ಬಳಸಿರುವ ಶಬ್ದ ವಿನ್ಯಾಸ. ಪ್ರತಿಯೊಂದು ಪ್ರದೇಶಕ್ಕೂ ಅದರದೇ ಆದ ‘ಶಬ್ದವಿರುತ್ತದೆ. ಆ ಶಬ್ದವು ಆಯಾ ಪರಿಸರವನ್ನು ಪ್ರತಿನಿಧಿಸುತ್ತದೆ. ಅಂತಹ ಶಬ್ದವನ್ನು ನೈಜವಾಗಿ ಹಿನ್ನೆಲೆಯಲ್ಲಿ ಬಳಸಿ, ಸಂಯೋಜಿಸಿ ವಿನ್ಯಾಸಗೊಳಿಸಲಾಗಿದೆ. ಇಡೀ ಚಿತ್ರಕ್ಕೆ ನಗರದ ಶಬ್ದ ಚೌಕಟ್ಟನ್ನು ಕಟ್ಟಿಕೊಡುವುದರ ಜೊತೆಜೊತೆಗೆ ಅದರಲ್ಲಿ ಸೂಕ್ಷ್ಮವಾಗಿ ಕೇಳಲ್ಪಡುವ ಗೌಜು ಗದ್ದ ನಗರದ ವಾಸಿಗಳ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.

ಈ ಚಿತ್ರದಲ್ಲಿ ಬಳಸಿರುವ ಹಿನ್ನೆಲೆಯ ಶಬ್ದ ವಿನ್ಯಾಸದಲ್ಲಿ ಗಮನಿಸಲೇಬೇಕಾದ ಮತ್ತೊಂದು ಅಂಶವೆಂದರೆ ಚಿತ್ರದ ಕೊನೆಗೆ ಬಸ್‌ಸ್ಟಾಪಿನಲ್ಲಿ ಬರುವ ಹಿನ್ನೆಲೆ ಧ್ವನಿ. ಅದರಲ್ಲಿ ಅಲ್ಲಿಂದ ಹೊರಡುವ ಬಸ್ಸುಗಳು ತಲುಪುವ ಊರಿನ ಹೆಸರುಗಳನ್ನು ಕೂಗುವ ಧ್ವನಿಯನ್ನು ಬಳಸಿರುವುದು. ಇದು ಕೇಳುವುದಕ್ಕೆ ಸಾಮಾನ್ಯ ಎನಿಸಿದರೂ ಚಿತ್ರದ ಕಥಾವಸ್ತುವಿನ ಜೊತೆಗೆ ಈ ಧ್ವನಿಯನ್ನು ಸಮೀಕರಿಸಿದರೆ ಇದು ಬರೀ ಒಂದು ನಗರಕ್ಕೆ ಸೀಮಿತವಾದ ಕಥೆಯಲ್ಲ ಎಂಬುದನ್ನು ಸೂಚಿಸುತ್ತದೆ.

ಇತ್ತೀಚೆಗೆ ಬರುತ್ತಿರುವ ಕನ್ನಡದ ಕಿರುಚಿತ್ರಗಳಲ್ಲೇ ಇದು ನಿರೂಪಣೆ ಹಾಗೂ ವಿನ್ಯಾಸದ ಮೂಲಕ ನೋಡುಗನಿಗೆ ವಿಶಿಷ್ಟ ಅನುಭವದ ಜೊತೆಗೆ ಚಿಂತನೆಗೆ ಹಚ್ಚುವಲ್ಲಿಯೂ ಯಶಸ್ವಿಯಾಗಿದೆ ಎಂದು ಹೇಳಬಹುದು.

Add Comment

Leave a Reply