Quantcast

ಚಂದ್ರಗಿರಿಯ ತೀರದಲ್ಲಿ ‘ತಲಾಖ್’

‘ಚಂದ್ರಗಿರಿಯ ತೀರದಲ್ಲಿ’ ಸಾರಾ ಅಬೂಬಕ್ಕರ್

prasanna santekadur

ಪ್ರಸನ್ನ ಸಂತೆಕಡೂರು 

ಇದು ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು.

ಆಗ ನಾನು ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿದ್ದೆ ಆಗ ನಮಗೆ ಕನ್ನಡದ sara aboobakarಅಧ್ಯಾಪಕರಾಗಿದ್ದವರು ಕಲೀಮ್ ಉಲ್ಲಾ, ಆರುಂಡಿ ನಾಗರಾಜ್ ಮತ್ತು ಮಂಜುಳಾ ರಾಜುರವರು. ಕಲೀಮ್ ಉಲ್ಲಾರವರು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಪರಮ ಅಭಿಮಾನಿಯಾಗಿದ್ದವರು. ವಿಜ್ಞಾನ ವಿದ್ಯಾರ್ಥಿಗಳಾದ ನಮ್ಮಗೆಲ್ಲಾ ಕನ್ನಡ ಸಾಹಿತ್ಯದ ಕಡೆ ಆಸಕ್ತಿ ಹೆಚ್ಚುವಂತೆ ಮಾಡಿ ತೀವ್ರ ಚಿಂತನೆಗೀಡು ಮಾಡುತ್ತಿದ್ದರು.

ಹಾಗೇ ಪಾಠಮಾಡುವಾಗ ಸಾರಾ ಅಬೂಬಕ್ಕರ್ ರವರ “ಚಂದ್ರಗಿರಿಯ ತೀರದಲ್ಲಿ” ಕಾದಂಬರಿಯ ಬಗ್ಗೆ ತಿಳಿಸಿದ್ದರು. ಪಿ. ಯು. ಸಿ. ಮುಗಿಯುವದರೊಳಗೆ ಅವರು ಸರ್ಕಾರಿ ಹುದ್ದೆ ಪಡೆದು ವಾರಾಹಿ ಕಣಿವೆಯ ಯಾವುದೋ ಚಿಕ್ಕ ಊರಿಗೆ ವರ್ಗವಾಗಿ ಹೋದರು. ನಾನು ಪಿ. ಯು. ಸಿ. ಮುಗಿಸಿ ವಿಜ್ಞಾನ ವಿಷಯದಲ್ಲಿ ಮುಳುಗಿದ್ದರಿಂದ ಸಾಹಿತ್ಯ ದೂರವಾಗಿ ಉಳಿಯಿತು. ಚಂದ್ರಗಿರಿಯ ತೀರದಲ್ಲಿ ಕಾದಂಬರಿಯನ್ನ ಓದಬೇಕೆನ್ನುವ ಆಸೆ ನೆನಸಾಗಲಿಲ್ಲ.

೨೦೧೩ ರಲ್ಲಿ ಭಾರತಕ್ಕೆ ಬಂದಿದ್ದಾಗ ಶಿವಮೊಗ್ಗದ ಸಾಹಿತ್ಯ ಅಭಿಮಾನಿಗಳು ಮತ್ತು ಸಾಹಿತ್ಯ ಕೃಷಿ ಮಾಡುತ್ತಿರುವ ಕೆಲವರು ತಿಂಗಳ ಹೊತ್ತಿಗೆ ಎಂಬ ಪುಸ್ತಕ ಓದುಗರ ಕ್ಲಬ್ ಒಂದನ್ನ ಮಾಡಿಕೊಂಡಿದ್ದರು. ಆ ತಿಂಗಳಲ್ಲಿ ಸಾರಾ ಅಬೂಬಕ್ಕರ್ ರವರ “ಚಂದ್ರಗಿರಿಯ ತೀರದಲ್ಲಿ” ಕಾದಂಬರಿಯನ್ನ ಓದಿ ಅದರ ಬಗ್ಗೆ ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಚರ್ಚೆಯನ್ನು ಏರ್ಪಡಿಸಿದ್ದರು. ಅದಕ್ಕೆ ಸ್ವತಃ ಸಾರಾ ಅಬೂಬಕ್ಕರ್ ರವರೇ ಆಹ್ವಾನಿತರಾಗಿದ್ದರು. ನಾನು ಆ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ನಂತರ ಪುಸ್ತಕದ ಮನೆಯವರ ಸಹಾಯದಿಂದ ಕಾದಂಬರಿಯನ್ನು ಓದುವ ಅವಕಾಶ ಸಿಕ್ಕಿತು.

ಈ ಕಾದಂಬರಿ ತುಂಬಾ ಜನಪ್ರಿಯವಾಗಿ, ನಾಟಕ ರೂಪದಲ್ಲೂ ಬಂದು ಸಿನಿಮಾವಾಗಿ ಸಾರಾ ಅಬೂಬಕ್ಕರ್ ರವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ತಂದುಕೊಟ್ಟಿತು. ಇದು ಮೊದಲು ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯ ರೂಪದಲ್ಲಿ ಬಂದಿತ್ತು ಎಂದು ಕೇಳಿದ್ದೆ.

chandragiriya-teeradalliಇನ್ನೂ ಈ ಕಾದಂಬರಿಯ ವಿಷಯಕ್ಕೆ ಬರುವುದಾದರೇ ಇದು ಮುಸ್ಲಿಂಮರಲ್ಲಿ ಮೂರು ಸಲ ತಲಾಖ್ ಎಂದು ಹೇಳಿ ವಿಚ್ಛೇದನ ಪಡೆಯುವ ಅನಿಷ್ಟ ಪದ್ದತಿಯಿಂದ ಮಹಿಳೆಯರ ಮೇಲೆ ನೆಡೆಯುವ ಘೋರ ಶೋಷಣೆಯ ಬಗ್ಗೆ ಬರೆದ ಕಥಾವಸ್ತು. ಇಲ್ಲಿ ಸಾರಾರವರು ತಮ್ಮ ಬಾಲ್ಯದ ಕಾಸರಗೋಡು ಜಿಲ್ಲೆಯ ಚಂದ್ರಗಿರಿ ನದಿಯ ತೀರವನ್ನೇ ಹಿನ್ನೆಲೆಯಾಗಿಟ್ಟು ಅಲ್ಲಿ ಜೀವಿಸುತ್ತಿದ್ದ ಬಡ ರೈತಾಪಿ ಮುಸ್ಲಿಂ ಕುಟುಂಬ ಒಂದರ ಹೆಣ್ಣುಮಗಳೊಬ್ಬಳ ಮದುವೆಯ ನಂತರದ ಬದುಕಿನ ದುರಂತ ಕತೆಯನ್ನ ಮನೋಜ್ಞವಾಗಿ ಚಿತ್ರಿಸಿದ್ದಾರೆ.

ಈ ಘೋರ ನರಕದಲ್ಲಿ ಬೇಯುತ್ತಿರುವ ಮಹಿಳೆಯರಿಗೆ ಇನ್ನಾದರೂ ಮುಕ್ತಿ ಸಿಗಲಿ. ಮುಸ್ಲಿಂಮರಲ್ಲಿ ಇರುವ ಮೌಢ್ಯಗಳ ಬಗ್ಗೆ ಬರೆಯಲು ಆ ಸಾಹಿತಿಗೆ ಅಪಾರವಾದ ಇಚ್ಛಾಶಕ್ತಿ ಮತ್ತು ಧೈರ್ಯ ಬೇಕು. ಆ ರೀತಿ ಬರೆಯಲು ಹೋದರೆ ಸಲ್ಮಾನ್ ರಷ್ಡಿ ಮತ್ತು ತಸ್ಲೀಮಾ ನಸ್ರೀನ್ ರ ಸ್ಥಿತಿ ಬರುವುದೇ ಹೆಚ್ಚು.

ಪುರುಷ ಸಾಹಿತಿಗಳೇ ಹೆದರಿ ನಡುಗುವವಾಗ ಇಂತಹ ಸೂಕ್ಷ್ಮ ವಿಷಯವನ್ನ ಆಯ್ಕೆ ಮಾಡಿಕೊಂಡು ಬರೆದ ಸಾರಾರವರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು ಮತ್ತು ಪ್ರಶಂಸಾರ್ಹರು ಕೂಡ. ಶಿವಮೊಗ್ಗದ ಆ ಭಾಷಣದಲ್ಲಿ ಸಾರಾರವರು ತಮ್ಮ ತಂದೆ ತಾಯಿ ಸಹೋದರರು ಮತ್ತು ಪತಿಯವರ ಬೆಂಬಲದ ಬಗ್ಗೆ ತುಂಬಾ ಹೇಳಿದ್ದರು. ಅಂತಹ ಕುಟುಂಬ ಎಲ್ಲಾ ಹೆಣ್ಣು ಮಕ್ಕಳಿಗೂ ಸಿಗಲಿ ಎಂದು ಆಶಿಸುತ್ತೇನೆ.

One Response

  1. Anonymous
    October 15, 2016

Add Comment

Leave a Reply