Quantcast

ತುಂಬು ಗರ್ಭಿಣಿ ಭೂಮಿಗೆ ಬಯಕೆ ಹಾಕುತ್ತಾ..

ಇಂದು ಭೂಮಿ ಹುಣ್ಣಿಮೆ

%e0%b2%a8%e0%b3%86%e0%b2%82%e0%b2%aa%e0%b3%86-%e0%b2%a6%e0%b3%87%e0%b2%b5%e0%b2%b0%e0%b2%be%e0%b2%9c%e0%b3%8d

ನೆಂಪೆ ದೇವರಾಜ್

ಚಗಟೆ, ಕುನ್ನೇರಲು, ಕೆಸ, ಕೆಂದಾಳ, ಮೀನಿಂಗಿ, ಕೇಸಟ್ಟೆ, ಸಳ್ಳೆ, ಗರ್ಗ, ಗಿಡಾಲೆ ಗರ್ಗ, ಮಳ್ಳಿ, ಮತ್ತಿ, ಮುಕ್ಕುಡುಕ, ಕಲ್ಡಿ, ಕರ್ಜಿ, ಬಾಳೆ, ಹಲಸು ಮಾವು, ಕಬಳೆ, ನೀರಟ್ಟೆ,ಗಂಧ, ನೇರಲು, ಹೈಗ, ಹಾಲುವಾಣ, ಹೊಳೆಲಕ್ಕಿ, ಕಿರಾಲುಭೋಗಿ, ತ್ವಾರಂಗಲು, ಬೋಗಿ, ಕೂಳೆ, ಸದಗ, ಒಂದೆಲಗ, ರತ್ನಗಂಜಿ, ತಗ್ಗಿ, ತುಂಬೆ, ಅರಮರಲು, ಅತ್ತಿ, ನೆಲ್ಲಿ, ಬಲಿಗೆ, ಬಗುನೆ, ಹೀಗೆ ನೂರೊಂದು ಕುಡಿಗಳನ್ನು ಚಿವುಟಿ ಬುಟ್ಟಿ ತುಂಬಿಸಿಕೊಂಡು ಮನೆಯಲ್ಲಿ ಹರಡಿ ಇಡೀ ರಾತ್ರಿ ಎಚ್ಚರಿದ್ದು ಅಡುಗೆ ಮಾಡುವ ಈ ಹಬ್ಬ ಇಡೀ ಪಶ್ಚಿಮ ಘಟ್ಟದ ಸಾವಿರಾರು ಗಿಡಗಂಟಿಗಳ ಪರಿಚಯ ಮಾಡಿಕೊಡುತ್ತದೆ.

ಭೂಮಾತೆಯ ಹಬ್ಬಕ್ಕೆ ಇಂಡಿಯಾ ಸ್ಪಂದಿಸದಿದ್ದರೂ ಇಂಡಿಯಾದ ಜಿಡಿಪಿ ದರದ ಮೇಲೆ ಭಾರತ ನಿಂತಿದೆ ಎಂದು ಹೇಳುವ ಹಾಗೂ ಅದರ ಮೇಲೆ ಅವಲಂಬಿತರಾಗಿರುವವರಿಗೆ ಅನ್ನ ಕೊಡುವ ಭೂಮಿಯಂತೂ ಸ್ಪಂದಿಸುತ್ತಲೇ ಬಂದಿದೆ..

ತೀರ್ಥಹಳ್ಳಿ ಹೊಸನಗರ , ಸಾಗರ, ಸೊರಬ, ಶೃಂಗೇರಿ, ಕೊಪ್ಪ ನರಸಿಂಹರಾಜಪುರಗಳ ಆಜುಬಾಜಿನಲ್ಲಿ ಪ್ರಚಲಿತವಾಗಿರುವ ಪೂರ್ಣ ಚಂದ್ರನ ನೀಲಾಕಾಶದ ಕೆಳಗೆ ಗೃಹಿಣಿಯರ ತಪಸ್ಸಿನ ಫಲವಾಗಿ ಮೂಡಿ ಬರುವ ಭೂಮಿ ಹುಣ್ಣಿಮೆ ಹಬ್ಬ ಬೇರಾವ ಹಬ್ಬವೂ ಕೊಡದಷ್ಟು ಅರ್ಥವಂತಿಕೆಯನ್ನು ಸಾರುತ್ತಾ ಬರುತ್ತಿದೆ.

ನೇಗಿಲ ಯೋಗಿ ಇಡೀ ರಾತ್ರಿ ಭೂತಾಯಿಗೆ ಕೃತಜ್ಞನಾಗುವ ರೀತಿಯೇ ಅಭೂತಪೂರ್ವವಾದುದು. ತುಂಬಿದ ಬಸುರಿಯಾಗಿ ತನ್ನೊಳಗೆ ಹಸಿರು ಹೊದ್ದು ಕಂಗೊಳಿಸುವ ಭೂಮಿಗೆ ಉಣ್ಣಿಸುವ ಪರಿಯಲ್ಲಿರುವ ಉಪಕಾರ ಸ್ಮರಣೆಗೆ ಮತ್ತೊಂದು ಉದಾಹರಣೆಯನ್ನು ಬೇರಾವ ವಿಧದಲ್ಲೂ ನೋಡಲು ಅಸಾಧ್ಯ.

ಬೆಳ್ಳಂಬೆಳಿಗ್ಗೆ ಎದ್ದು ಇಡೀ ಕಾಡು ಮೇಡುಗಳನ್ನು ಸುತ್ತುತ್ತಾ ಪ್ರತಿ ಗಿಡಗಳನ್ನು ಮುಟುತ್ತ, ಅದರ ಮೇಲಿನ ಮುತ್ತಿನ ಹನಿಗಳನ್ನು ಬೀಳಿಸಿ ಸಸ್ಯದ ಕುಡಿಗಳನ್ನಷ್ಟೆ ಬುಟ್ಟಿಯೊಳಗೆ ತುಂಬಿಸಿಕೊಳ್ಳುವ ಪ್ರತಿ ಹುಡುಗನ ಮನ ಪುಳಕಗೊಳ್ಳುವ ಬಗೆಗೆ ಇಂದಿಗೂ ವಿಶ್ವ ಶ್ರೇಷ್ಠನೆನಿಸಿಕೊಂಡಿರುವ ಪರಿಸರ ತಜ್ಞ ಅವಜ್ಞೆಗೊಳಪಡಿಸಿದ ರೀತಿ ಕ್ಷಮಾರ್ಹವಲ್ಲವೇ ಅಲ್ಲ.

ಕುವೆಂಪುರವರು ಮಹಿಳೆಯನ್ನು ಮಾತೆ ಎನ್ನಲಿಲ್ಲ. ಪರಮ ಪತಿವ್ರತೆ ಎನ್ನುತ್ತಾ ಸೀತೆ ಸಾವಿತ್ರಿಯರ ತರಹ ಎನ್ನಲಿಲ್ಲ. ಕತ್ತಲ ಕೋಣೆಯೊಳಗೆ ಬೇಯುತ್ತಾ, ಒಲೆಯ ಹೊಗೆಯಲ್ಲಿ ಊದಿಕೊಂಡ ಕಣ್ಣುಗಳಲ್ಲೇ ಸಹನೆಯ ನೋಟ ಬೀರುತ್ತಾ ಒತ್ತರಿಸಿ ಬರುತ್ತಿದ್ದ ದುಃಖಕ್ಕೆ ನಗೆಯ ಸಿಂಚನ ನೀಡಿ ಮನೆಯನ್ನು ತಪೋವನವನ್ನಾಗಿಸಿದ ಆಕೆಯ ಸಾಧನೆಯನ್ನು ಗೃಹ ತಪಸ್ವಿನಿಗೆ ಹೋಲಿಸಿದ ಕುವೆಂಪುರವರ ಬಿರುದನ್ನು ಸವಾಲಾಗಿ ಸ್ವೀಕರಿಸಿ ತನ್ನೊಡಲನ್ನೇ ಹಬ್ಬದ ಯಶಸ್ಸಿಗೆ ಸ್ಪಂದಿಸುವ ಬಗೆಗೆ ಪದಗಳು ದಕ್ಕುತ್ತಿಲ್ಲ

ತುಂಬು ಗರ್ಭಿಣಿ ಭೂಮಿಯ ಬಯಕೆಗಳು ಹತ್ತು ಹಲವು. ದಟ್ಟಾರಣ್ಯದಲ್ಲಿರುವ ನೂರೊಂದು ಕುಡಿಗಳ ಪಲ್ಯ, ಕಬ್ಬಿನ ಪಚೀಡಿ, ಚೆಂಡು ಹೂವಿನ ಪಚೀಡಿ, ಬಾಳೆ ದಿಂಡಿನ ಪಚೀಡಿ, ಹಾಲು ಮತ್ತು ಮಜ್ಜಿಗೆಯ ಅಂಬಲಿಗಳು, ಹೀರೆ, ಸೌತೆ ಕಾಯಿಯ ಹುಳಿಗಳು, ಹೀಗೆ ಒಂದೇ ಎರಡೇ. ತರಕಾರಿಗಳ ಸುರಿಮಳೆ. ಇಡೀ ರಾತ್ರಿ ಪುರುಷರು ಗೊರಕೆ ಹೊಡೆಯುತ್ತಲೋ, ಇಸ್ಪೀಟು ಆಡುತ್ತಲೋ ಕಾಲ ಕಳೆದರೆ ಹೆಂಗಸರು ಪಾತ್ರೆಗಳ ಮೇಲೆ ಪಾತ್ರೆ ತೆಗೆದು ಸಿಟ್ಟು ಮತ್ತು ಸಡಗರದಲ್ಲಿ ಸದ್ದು ಮಾಡುತ್ತಾ ಬೆಳದಿಂಗಳನ್ನು ಚೇತೋಹಾರಿಗೊಳಿಸುತ್ತಿರುತ್ತಾರೆ.

ಮೊದಲ ಕೋಳಿ ಕೂಗುವ ವೇಳೆಗೆ ಗಂಡಸರ ಗೊರಕೆಗೆ ಇತಿಶ್ರಿ ಬೀಳುತ್ತದೆ. ಬೆಳಿಗ್ಗೆ ನಾಲ್ಕರೊಳಗೆ ಎದ್ದು ಸ್ನಾನ ಮಾಡಿ ಹಿಂದಿನ ದಿನವೇ ಮಾಡಿಟ್ಟ ಅಡಿಕೆ ದಬ್ಬೆಯ ದೊಂದಿಗಳ ಜ್ವಾಲೆಯೊಂದಿಗೆ ಬಗೆ ಬಗೆಯ ಭಕ್ಷ್ಯಗಳೂ, ಅಮಟೆ ಕಾಯಿ ಮತ್ತು ಕೆಸುವಿನ ಸೊಪ್ಪು ಮಿಶ್ರಿತ ಅನ್ನವೂ ಸೇರಿದಂತೆ ಎಲ್ಲವನ್ನೂ ಗೆರಸಿಗೆ ಹಾಕಿ ದೊಡ್ಡ ಮಣೆ ಎದುರು ಜ್ಯೋತಿ ಹಚ್ಚಿ ಜಾಗಟೆಯ ಸದ್ದು ಮೊಳಗಿಸಲಾಗುತ್ತದೆ.

ಮುಂದೆ ಗೆರಸಿ ಹೊತ್ತ ಚಿಕ್ಕಪ್ಪ, ಆತನ ಹಿಂದೆ ಧಗಧಗಸುವ ದೊಂದಿ ಹೊತ್ತ ನನ್ನಪ್ಪ, ಆ ಬೆಳಕಿನ ಹಿಂದೆ ಜಾಗಟೆ ಸದ್ದನ್ನು ಇಡೀ ಊರು ಮೊಳಗಿಸುವ ನಾನು. ಬೆಳಿಗ್ಗೆ ಐದಕ್ಕೋ ಆರಕ್ಕೋ ಕೂಗಬೇಕಾದ ಕೋಳಿಗಳು ಅಂದು ಗೊಂದಲಕ್ಕೊಳಗಾಗಿ ಎಲ್ಲೆಲ್ಲೂ ದೊಂದಿಯ ಜ್ವಾಲೆಗಳನ್ನು ನೋಡಿಯೂ ಮತ್ತು, ಶಂಖ – ಜಾಗಟೆಗಳ ಸದ್ದಿಗೆ ಬೆಚ್ಚಿ ಬಿದ್ದು ಕೊಕೋ ಕೋ ಎಂದು ಕೂಗತೊಡಗುತ್ತವೆ. ಒಡು ವಟ್ಟೆಗಳ ಗದ್ದೆಯ ಬದುಗಳನ್ನು ದಾಟುತ್ತಾ, ಕಿರಿದಾದ ಅಂಚುಗಳ ಮೇಲೆ ಕಗ್ಗತ್ತಲ ಬೆಳಗಲ್ಲಿ ಹೋಗುವ ದಿನಗಳು ಮನಸಿಂದ ಮರೆಯಲಾಗದ ಹೃದಯ ಹೊಕ್ಕ ಕ್ಷಣಗಳು.

ಹಿಂದಿನ ದಿನ ರಾತ್ರಿಯೇ ಗದ್ದೆಯಲ್ಲಿ ಮಾಡಿಟ್ಟ ಬಾಳೆ ಮರಗಳನ್ನು ಹೂಚಿ ಅಲ್ಲೊಂದು ಸಣ್ಣ ತೋರಣ ಕಟ್ಟಲಾಗಿರುತ್ತದೆ. ಚೆಂಡು ಹೂ ತುಳಸಿ ಗಿಡಗಳನ್ನು ನೆಡಲಾಗಿರುತ್ತದೆ. ಹೊಡೆಗಳಿಂದ ಹಿಳ್ಳೊಡೆದ ಕೇವಿಯ ಒಂದೊಂದೇ ಓಲಿಗಳಿಗೆ ಪುಟ್ಟ ಬಳೆಗಳನ್ನೂ, ಸರಗಳನ್ನೂ, ಕಣ್ಣು ಕಪ್ಪನ್ನೂ ಹಚ್ಚಿ ಶೃಂರಿಸಲಾಗುತ್ತದೆ. ಬಂಗಾರದ ಸರವನ್ನು ನಟ್ಟಿಯ ಬುಡಕ್ಕೆ ಹಾಕಿ ಮಂಗಳಾರತಿ ಮಾಡಲಾಗುತ್ತದೆ. ಪೂಜೆ ಮಾಡಿ ಗೆರಸಿಯಲ್ಲಿದ್ದ ಒಂಭತ್ತು ಬಗೆಯ ಪಲ್ಯಗಳನ್ನು ಅನ್ನದೊಂದಿಗೆ ಕಲಿಸಲಾಗುತ್ತದೆ.

ಮೊದಲೇ ಮಾಡಿಟ್ಟ ಕೊಟ್ಟೆ ಕಡುಬನ್ನು ಗದ್ದೆಯ ಮಧ್ಯದಲ್ಲಿ ಹುಗಿದು ಬಂದವರೆ ಕಲಿಸಿಟ್ಟಿದ್ದ ಅನ್ನವನ್ನು ಮುದ್ದೆ ಮಾಡಿ ಒಂದೊಂದೇ ಮುದ್ದೆಗಳನ್ನು ಗದ್ದೆಗೆ ಎಸೆಯುತ್ತಾರೆ. ಎಸೆವಾಗ ಅಚ್ಚಂಬಲಿ ಹಾಲಂಬಲಿ, ಬೇಲಿ ಮೇಲಿರೋ ಧಾರೆ ಹೀರೇಕಾ ಭೂತಾಯಿ ಉಂಡು ಹೋಗು ಎಂದು ಮಕ್ಕಳು ಮಹಿಳೆಯರಾದಿಯಾಗಿ ಹೇಳುವಾಗ ಚಳಿ ಮತ್ತಷ್ಟು ತೀವ್ರತೆ ಪಡೆಯುತ್ತಾ ಹೋಗುತ್ತದೆ.

ಸೂರ್ಯ ಇಣುಕಲು ಹರ ಸಾಹಸ ಪಡುತ್ತಿರುತ್ತಾನೆ. ಕಾಗೆಗಳು ಕೂಗಲಾರಂಭಿಸುತ್ತವೆ. ದೊಂದಿಯ ಜ್ವಾಜಲ್ಯಮಾನತೆ ನಿಧಾನವಾಗಿ ಕಡಿಮೆಯಾಗತೊಡಗುತ್ತ ಹೋಗುತ್ತದೆ. ಭೂಮಿಗೆ ಹಾಕಿ ಉಳಿದ ಅನ್ನವನ್ನು ಉಳಿದ ಕಡೆ ಇರುವ ಗದ್ದೆಗಳಿಗೆ ತೆಗೆದು ಕೊಂಡು ಹೋಗಲಾತ್ತದೆ. ಪ್ರತಿ ಗದ್ದೆಗೂ ಒಂದೊಂದು ಮುಷ್ಟಿ ಅನ್ನ ಹಾಕುವಾಗಲೂ ಅಚ್ಚಂಬಲಿ ಹಾಲಂಬಲಿ ಘೋಷಣೆ ಕೂಗು ಮುಗಿಲು ಮುಟ್ಟುತ್ತಿರುತ್ತದೆ.

she-pregnentಭೂಮಿ ಹುಣ್ಣಿಮೆ ಭೂತಾಯಿಯ ಜೊತೆಗೆ ಇಟ್ಟುಕೊಂಡ ಭಾವನಾತ್ಮಕ ಸಂಬಂಧದ ದ್ಯೋತಕ. ಗರ್ಭಿಣಿಯ ಬೇಕು ಬೇಡಗಳನ್ನು ಈ ಹಬ್ಬದಲ್ಲಿ ಬಹು ಮುತುವರ್ಜಿಯಿಂದ ನೋಡಲಾಗುತ್ತದೆ. ಚೀನಿ ಕಾಯಿ, ಬದನೆ ಕಾಯಿತರಹದ ನಂಜೇರಿಸುವ ತರಕಾರಿಗಳ ಯಾವ ಅಡುಗೆಯೂ ಇಲ್ಲ. ಯಾವ ಪಲ್ಯಕ್ಕೂ ಒಗ್ಗರಣೆ ಅಥವಾ ತೆಂಗಿನ ಕಾಯಿಯನ್ನು ಉಪಯೋಗಿಸಿದರೆ ತುಂಬು ಗರ್ಭಿಣಿ ಭೂಮಿ ತಾಳಿಕೊಳ್ಳಲಾರಳು.

ಹೆಂಗಸರು ರಾತ್ರಿ ನಿದ್ದೆ ಮಾಡಿದರೆ ಹೊಡೆಗಳಿಂದಾವೃತವಾಗಿ ಫಸಲನ್ನು ಕೈಗೆ ಕೊಡಲು ಸಿದ್ದಗೊಂಡಿರುವ ಬತ್ತದ ತೆನೆಗಳು ಕಾಳು ಕಟ್ಟದೆ ಚಟ್ಟಾಗುತ್ತವೆಯಂತೆ. ಹಬ್ಬದ ಮಾರನೇ ದಿನ ಯಾವುದೇ ಕಾರಣಕ್ಕೂ ಭೂಮಿಯನ್ನು ಅಗಿಯುವ ಕೆಲಸ ನಿಷಿದ್ದ. ಈ ದಿನವನ್ನು ಭೂಮಿ ಬಲಿಯುವ ದಿನ ಎನ್ನುತ್ತಾರೆ. ಭೂಮಿ ಹುಣ್ಣಿಮೆಯಂದು ಹುಗಿದ ಕೊಟ್ಟೆ ಕಡಬು ಗದ್ದೆಕೊಯ್ಲು ಮಾಡುವಾಗ ದೊರೆತರೆ ಅದೊಂದು ಅದೃಷ್ಟದ ಸಂಕೇತವೆಂದೇ ಬಗೆಯಲಾಗುತ್ತದೆ.

ಭೂಮಿ ಹುಣ್ಣಿಮೆಯಂದು ಹಚ್ಚಿದ್ದ ಅಡಿಕೆ ದೊಂದಿ ಉಳಿದರೆ ಅದನ್ನು ಹಾಗೇ ಜೋಪಾನವಾಗಿ ದೀಪಾವಳಿಯವರೆಗೆ ಇಟ್ಟುಕೊಳ್ಳಲಾಗುತ್ತದೆ. ಬಲಿಪಾಡ್ಯಮಿಯಂದು ರಾತ್ರಿ ಗದ್ದೆ ತೋಟಗಳಿಗೆ ಕೋಲು ದೀಪಬೆಳಗಿಸಲು ಈ ಅರ್ಧ ಸುಟ್ಟ ದೊಂದಿಯನ್ನು ಉಪಯೋಗಿಸಲಾಗುತ್ತದೆ.

ನೂರೊಂದು ಕಾಡು ಸೊಪ್ಪುಗಳ ಬೆರಕೆ ಸೊಪ್ಪಿನ ಪಲ್ಯವೂ, ಹಾಲು ಮತ್ತು ಮಜ್ಜಿಗೆಯ ಅಂಬಲಿಯೂ, ಕಾಡು ಗೆಣಸಿನ ಹುರುಕಲೂ ಬದಿಗೆ ಸರಿದು ಬರ್ಗರ್ ಮತ್ತು ಫಿಜ್ಜಾಗಳ ಜೊತೆ ತೀರ್ಥಹಳ್ಳಿಯ ಆಯ್ದ ಹೋಟೆಲುಗಳಲ್ಲಿ ಮಾಡುವ ಮಟನ್ ಮತ್ತು ಚಿಕನ್ ಬಿರ್ಯಾನಿಗಳು ಹಬ್ಬದ ದಿನ ಮನಗೆ ಸಲೀಸಾಗಿ ಆಗಮಿಸಿ ತಮ್ಮ ಪಾರಮ್ಯ ಸಾರುತ್ತಿವೆ. ಭೂಮಿ ಹುಣ್ಣಿಮೆ ತರಹದ ಹಬ್ಬಗಳು ನಿಧಾನಕ್ಕೆ ಬದಿಗೆ ಸರಿಯುತ್ತಿವೆ.

ಕ್ಯಾಲೆಂಡರುಗಳು ಸಹಾ ಭೂಮಿ ಹುಣ್ಣಿಮೆ ಎಂಬುದನ್ನು ಸಂಬೋಧಿಸಲು ಕೂಡಾ ಇಷ್ಟಪಡಲಾರವು. ಬರಿ ಹುಣ್ಣಿಮೆ ಎಂದು ಹಾಕಿ ಕೈತೊಳೆದುಕೊಳ್ಳುವುದರಲ್ಲಿ ಕ್ಯಾಲೆಂಡರು ತಯಾರಕರಿಗೆ ತುಂಬಾ ಖುಷಿ.

9 Comments

 1. sudha y.m
  October 21, 2016
 2. Gayatri Badiger, Dharwad
  October 19, 2016
 3. H S Eswara
  October 16, 2016
 4. Anonymous
  October 16, 2016
 5. .ಮಹೇಶ್ವರಿ.ಯು
  October 16, 2016
 6. Anonymous
  October 16, 2016
 7. S.p.vijaya Lakshmi
  October 15, 2016
 8. Anonymous
  October 15, 2016
 9. Anonymous
  October 15, 2016

Add Comment

Leave a Reply