Quantcast

ಯಾರು ಬಂದವರು? ನೆನಪಿನ ತೆರೆಯ ಮೇಲೆ?

ಪತ್ರಿಕೋದ್ಯಮ ಇಷ್ಟಪಡಲು ಬಹಳ ಕಾರಣಗಳಿವೆ.

ಯಾಕಂದ್ರೆ ಇಲ್ಲಿ ಪ್ರತಿದಿನವು ಹೊಸತರ ಹುಡುಕಾಟವಿರುತ್ತದೆ. ಅದು ಹೊಸ ಸುದ್ದಿಯಿರಬಹುದು, ಹೊಸ ವ್ಯಕ್ತಿಗಳಿರಬಹುದು, ಹೊಸ ಸಂಗತಿಗಳಿರಬಹುದು.

Jyothi column low resಪತ್ರಿಕೋದ್ಯಮ ಅದು ಜನರ ಮಧ್ಯೆ ಇರುವ ಮಾಧ್ಯಮ. ಜಗತ್ತಿನಲ್ಲಿ ಹೆಸರು ಮಾಡಿರೋ ಎಲ್ಲಾ ಪತ್ರಕರ್ತರು ಜನರ ಮಧ್ಯೆ ಇದ್ದು ಕವರೇಜ್ ಮಾಡಿರೋರು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಎಡ , ಬಲ ಪತ್ರಕರ್ತರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಪತ್ರಕರ್ತರಿಗೆ ಎಡ ಅಥವಾ ಬಲ ಅಂತ ಇರೋಕೆ ಸಾಧ್ಯವಿಲ್ಲ. ಹಾಗೇನೆ ಯಾವುದೇ ಪಕ್ಷಕ್ಕೆ ಸೇರಿದೋರು ನಾವಾಗೋಕೆ ಸಾಧ್ಯವಿಲ್ಲ. ಹಾಗಾದಾಗ ವಸ್ತುನಿಷ್ಟವಾಗಿ ಯಾವುದನ್ನು ವರದಿ ಮಾಡೋಕೆ ಸಾಧ್ಯವಿಲ್ಲ.

ಆದ್ರೆ ಬುದ್ದನ ಧ್ಯಾನದ ವಿಧಾನದಿಂದ ಪ್ರೇರಿತಳಾದ ಮತ್ತು ಆ ಧ್ಯಾನ ವಿಧಾನವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ನನಗೆ ಲೆಫ್ಟಿಸ್ಟ್ ಅಂತ ಕರೆಯುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಪತ್ರಕರ್ತರ ವೈಯಕ್ತಿಕ ವಿಚಾರಗಳು ಬೇರೆ ಆದರೆ ಸುದ್ದಿ ಅಥವಾ ಕವರೇಜ್ ವಿಚಾರಕ್ಕೆ ಬಂದಾಗ ವಸ್ತುನಿಷ್ಟವಾಗಿ ವಿಷಯವನ್ನು ನೋಡೋದು ನಮ್ಮ ಕರ್ತವ್ಯ.

ಇನ್ನು ಜರ್ನಲಿಸಮ್ ಅನ್ನೋದು PASSION ಗಿಂತ FASHION ಆಗಿ ನೋಡೋರ ಸಂಖ್ಯೆ ಜಾಸ್ತಿಯಾಗಿರೋದು ದೊಡ್ಡದೊಂದು ಅಪಾಯವನ್ನು ನಮ್ಮ ಮುಂದೆ ಸೃಷ್ಟಿಸಿದಂತೆ ನಮಗೆ ಕಾಣುತ್ತದೆ. ಹಾಗಾಗಿಯೇ ಈ ವಿಷಯಗಳು ಹಿಂದೆಂದಿಗಿಂತಲು ಹೆಚ್ಚಾಗಿ ಚರ್ಚೆಯನ್ನು ಹುಟ್ಟುಹಾಕಿದೆ.

ಪತ್ರಕರ್ತರಿಗೆ ಅವರದ್ದೇ ಆದ ಶೈಲಿ ಇರಬೇಕು ಹಾಗೆ ಸ್ಪಷ್ಟತೆ ಕೂಡ. ಯಾರ ಅನುಕರಣೆಯನ್ನು ಮಾಡೋದು ಜೀವಂತಿಕೆಯಿಲ್ಲ ಅನ್ನೋದನ್ನು ಸಾಬೀತುಪಡಿಸುತ್ತದೆ ಅಷ್ಟೆ.

ಇರಲಿ ಇತ್ತೀಚಿನ ಬೆಳವಣಿಗೆ ಕುರಿತಂತೆ ಒಂದಿಷ್ಟು ಬರೆದ ನಂತರ ನಾನಿಷ್ಟು ವರ್ಷದಲ್ಲಿ ಭೇಟಿಯಾದ ಪ್ರಮುಖ ವ್ಯಕ್ತಿಗಳ ಬಗ್ಗೆ ಬರೆಯಬೇಕೆನಿಸುತ್ತಿದೆ. ಈ ಕುರಿತು ಯೋಚನೆ ಮಾಡುತ್ತಿರುವಾಗ ಮೊದಲು ನೆನಪಾಗಿದ್ದು ಸೂಕಿ. ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದ ಸೂಕಿಯನ್ನು ಕಂಡಾಗ ಮೈಪುಳಕವಾಯಿತು. ಆಕೆಯ ಮುಖದಲ್ಲಿನ ಕಾಂತಿ ನನ್ನನ್ನು ಸೆಳೆಯಿತು ಮತ್ತು ಆಕೆಯ ಹೋರಾಟದ ಹಾದಿ ನೆನಪಾಗಿ ಏನೋ ಸಂಚಲನವಾದಂತೆ ಭಾಸವಾಯಿತು.ಇಂತವರನ್ನು ನೋಡಿದಾಗಲೆಲ್ಲಾ ಸತ್ಯದ ಪಥದಲ್ಲಿ ಸಾಗಬೇಕೆನ್ನುವ ತುಡಿತ ಹೆಚ್ಚಾಗುತ್ತದೆ. ಅಹಿಂಸೆಯ ಪ್ರತಿಪಾದನೆಗೆ ಮತ್ತಷ್ಟು ಬಲ ಬಂದಂತೆ ಗೋಚರವಾಗುತ್ತದೆ.

ಪ್ರಮುಖವಾಗಿ ರಾಜಕಾರಣಿಗಳ ಬಗ್ಗೆ ನೆನಪು ಮಾಡೋದಾದ್ರೆ ನೆನಪಾಗೋದು ಬಂಗಾರಪ್ಪ. ಆ ವರ್ಷದಲ್ಲು ಸ್ಟೈಲಿಷ್ ಆಗಿದ್ದ ಬಂಗಾರಪ್ಪ ಮಾತಾಡುತ್ತಿದ್ದ ಶೈಲಿಯೇ ಅಂತದ್ದು. ಖಡಕ್ ಮತ್ತು ಶಾರ್ಪ್. ಮೂರು ನಾಲ್ಕು ಬಾರಿ ಸಂದರ್ಶನ ಮಾಡೋ ಅವಕಾಶವಿದ್ದಾಗ ಒಂದಿಷ್ಟು ಬಂಗಾರಪ್ಪ ಅವರ ಕುರಿತು ತಿಳಿದುಕೊಳ್ಳೋ ಅವಕಾಶ ಸಿಕ್ತು.

ಇನ್ನು ಸಿದ್ಧರಾಮಯ್ಯ ಸರಳತೆಯಿದ ಇಷ್ಟವಾಗ್ತಾರೆ. ಇನ್ನು ಮುಖ್ಯಮಂತ್ರಿಯಾಗಿರಲಿಲ್ಲ. ಸಂದರ್ಶನ ಮಾಡೋಕು ಮುಂಚೆ ಲಿಫ್ಟ್ ನಲ್ಲಿ ಕಲರ್ ಜುಬ್ಬಾದಲ್ಲಿದ್ದ ಸಿದ್ಧರಾಮಯ್ಯ ಅವರಿಗೆ ಏನ್ ಸರ್ ಕಲರ್ ಜುಬ್ಬಾ ಅಂದ್ರೆ ಹಾಗೆ ಸುಮ್ಮನೆ ಅಂತ ನಕ್ರು. ಮೊಬೈಲ್ ಫೋನ್ ರಿಸೀವ್ ಮಾಡ್ತಿಲ್ಲ ಅಂದ್ರೆ ಅಯ್ಯೋ ನಂಗೆ ಈ ಮೊಬೈಲ್ ಯೂಸ್ ಮಾಡೋಕೆ ಸರಿ ಬರೋಲ್ಲ ಅಂತ ಮುಗ್ಧತೆಯ ಉತ್ತರ ನೀಡಿದ್ರು. ಹಸಿವೆಂದ ಸಿದ್ದರಾಮಯ್ಯ ಅಲ್ಲೇ ಬೇರೆ ಯಾರಿಗೋ ಇಟ್ಟ ತಣ್ಣಗಿನ ಬಿಸಿಬೇಳೆ ಬಾತ್ ತಿಂದಿದ್ರು.

ಇನ್ನು ಯಡಿಯೂರಪ್ಪ ನಮ್ಮ ಮೇಲೆ ಆ ಜನಜಂಗುಳಿಯಲ್ಲಿ ಮೈಮೇಲೆ ಬೀಳುತ್ತಿದ್ದವರೊಬ್ಬರಿಗೆ ಗದರಿಸಿ ಕೈಯೆತ್ತಿದ್ರು. ಏನಯ್ಯ ಹೆಣ್ಣು ಮಕ್ಕಳು ಕಾಣಲ್ವ ಅಂತ ಒಂದೇ ಸವನೆ ಬೈಯ್ದರು. ಅವರಾಗ ಮುಖ್ಯಮಂತ್ರಿಯಾಗಿದ್ರು. ಯಾವುದೋ ವಿಷಯಕ್ಕೆ ಅವರ ಪ್ರತಿಕ್ರಿಯೆಗಾಗಿ ಹೋದಾಗ ನಡೆದ ಘಟನೆಯಿದು.

ಎಸ್. ಎಂ.ಕೃಷ್ಣ ಅವರದ್ದು ಡಿಫರೆಂಟ್ ಸ್ಟೈಲ್. ಅವರು ಡಿಪ್ಲೋಮಾಟಿಕ್ ಅಗತ್ಯವಿಲ್ಲಾಂದ್ರೆ ಮುಖವನ್ನು ನೋಡದೆ ಮುಂದೆ ಸಾಗುತ್ತಿದ್ದವರು. ಯಾಕೋ ಹೈಫೈ ಅನ್ನೋ ಭಾವನೆ ಅವರನ್ನು ಕಂಡಾಗ ಮೂಡಿದ್ದು ಜಾಸ್ತಿ.

groupಪ್ರೊ. ನಂಜುಂಡಸ್ವಾಮಿ ನಾನು ಭೇಟಿ ಮಾಡಿದ ಅಮೂಲ್ಯ ಅಸ್ತಿ ಅನ್ನಿಸುತ್ತದೆ. ಕೃಷಿಗೆ ಸಂಬಂಧಪಟ್ಟ ಹಲವಾರು ಸ್ಟೋರೀಸ್ ಗೆ ಮಾಹಿತಿಗಾಗಿ ಅವರ ಮನೆಗೆ ಆಗಾಗ ಹೋಗುತ್ತಿದ್ದೆ. ಒಳ್ಳೇ ಟೀ ಕುಡಿಯುತ್ತಾ ವಿಷಯ ಚರ್ಚಿಸುತ್ತಿದ್ದೆ. ಅವರೊಂದು ವಿಶ್ವಕೋಶ. ಅಂತಹ ವ್ಯಕ್ತಿಗಳೇ ಮಾಯವಾದಂತೆ ತೋರುತ್ತಿದೆ ಈಗ.

ಮೊನ್ನೆ ಮೊನ್ನೆ ಪಚ್ಚೆ ನಂಜುಂಡಸ್ವಾಮಿ ಸಿಕ್ಕಿದಾಗ ನೀವು ಅಂದ್ರೆ ಅಪ್ಪನಿಗೆ ಇಷ್ಟ. ನಿಮ್ಮ ಬಗ್ಗೆ ಮಾತಾಡ್ತಿದ್ರು ಅಂದಾಗ ತುಂಬಾನೆ ಖುಷಿಯೆನಿಸಿತು. ನಂಜುಂಡಸ್ವಾಮಿಯಂತವರನ್ನು ನೋಡೋದು ಮಾತಾಡೋದೆ ಒಂದು ಭಾಗ್ಯ ಅನ್ನೋದು ನನ್ನ ಭಾವನೆ,

ಹಾಗೆ ಡಾ. ರಾಜ್ ಕುಮಾರ್ ಮುಖ ಕವರೇಜ್ ಮಾಡಿದ ದಿನಗಳ್ನು ನೆನಪು ಮಾಡಿದಾಗ ಮುಂದೆ ಬರುತ್ತದೆ. ಮತ್ತೆ ಹಾಗೆ ವಿಷ್ಣುವರ್ಧನ್, ಸಚಿನ್ ತೆಂಡೂಲ್ಕರ್ ಮುಖವು ನೆನಪಿಗೆ ಬರುತ್ತಿದೆ.

ಎಲ್ಲಾ ಬೀಟ್ ಗಳನ್ನು ಮಾಡಿರೋದ್ರಿಂದ ಸಿನಿಮಾ ತಾರೆಯರನ್ನು ಕೂಡ ಭೇಟಿಯಾಗುವ ಅವಕಾಶ. ಐಶ್ವರ್ಯ ರೈ ಕಾರ್ಯಕ್ರಮವೊಂದನ್ನು ಅಟೆಂಡ್ ಮಾಡಿದಾಗ ಅರೆ ಇಷ್ಟೊಂದು ತೆಳ್ಳಗೆ , ಸ್ಕ್ರೀನ್ ನಲ್ಲೇ ಚೆನ್ನಾಗಿ ಕಾಣುತ್ತಾರೆ ಎಂದು ಉಸುರಿದವರು ಇದ್ದಾರೆ.

ಇನ್ನು ಶಬಾನಾ ಅಜ್ಮಿ, ಅಭಿಷೇಕ್ ಬಚ್ಚನ್ , ಊರ್ಮಿಳಾ ಮಾತೋಂಡ್ಕರ್ ಹೀಗೆ ಹಲವು ಮಂದಿ ಕಣ್ಣ ಮುಂದೆ ಬಂದು ಹೋಗುತ್ತಾರೆ. ಆದ್ರೆ ನನಗ್ಯಾಕೋ ತುಂಬಾ ಇಷ್ಟವಾಗಿದ್ದು ನಂದಿತಾ ದಾಸ್. ಹೊಳೆಯುವ ಕಂದುಬಣ್ಣದ ಚೆಲುವೆ ತನ್ನ ಕಳಕಳಿಯ ಮತ್ತು ಸಾಮಾಜಿಕ ಪ್ರಜ್ಞೆಯಿಂದ ಎಂದಿಗು ನನಗಿಷ್ಟವಾಗುತ್ತಾರೆ. ಸಮಸ್ಯೆಗಳ ಮೂಲ ಹುಡುಕುತ್ತಾ ಸವಾಲೆಸುವ ಆಕೆಯ ಚಿಂತನೆ ತುಂಬಾನೆ ಹೃದಯಕ್ಕೆ ಹತ್ತಿರವೆನಿಸುತ್ತವೆ.

ಜಗಜೀತ್ ಸಿಂಗ್ ಗಜಲ್ ಕಾರ್ಯಕ್ರಮವನ್ನು ಅಟೆಂಡ್ ಮಾಡಿದ್ದು ಮರೆಯಲಾಗದ್ದು. ಅದ್ಯಾಕೋ ಪದ್ಯಗಳ ಸಾಲುಗಳ ಅರ್ಥವನ್ನು ಹುಡುಕುವತ್ತ ಮನಸ್ಸು ಹೊರಳುತ್ತದೆ. ಅದು ಯಾವುದೇ ಭಾಷೆಯಿರಬಹುದು. ಗಜಲ್ ಪುಟ್ಟ ಸಾಲಿನಲ್ಲಿ ಅದ್ಭುತ ಅರ್ಥವನ್ನು ಕಟ್ಟಿಕೊಡುತ್ತದೆ ಅದಕ್ಕಾಗಿ ಗಜಲ್ ಪಂಚಪ್ರಾಣ. ಹಾಗೆ ಜಗಜೀತ್ ಸಿಂಗ್ ಧ್ವನಿಯೆಂದ್ರೆ ಮತ್ತೆ ಕೇಳಬೇಕೆ? ರಾತ್ರಿ ಅಟೆಂಡ್ ಮಾಡಿದ ಆ ಕಾರ್ಯಕ್ರಮ ಇನ್ನು ಕಿವಿಯ ಹತ್ತಿರ ಗುನುಗುನಿಸುತ್ತಿದೆ.

ಸದ್ಯಕ್ಕೆ ನಿಲ್ಲಿಸ್ತೀನಿ….

ಮುಂದಿನ ವಾರ ಮತ್ತೊಂದಿಷ್ಟು ಕವರೇಜ್ ನ ನೆನಪಿನ ಜೊತೆ ವಾಪಾಸಾಗುವೆ..
ಜ್ಯೋತಿ

Add Comment

Leave a Reply