Quantcast

ನಮ್ಮವರ ಹುಟ್ಟು ಹಬ್ಬ..

ಅಬಲಾಶ್ರಮ

ಸುಧಾ ಸರನೋಬತ್

ನಮ್ಮವರ ಹುಟ್ಟು ಹಬ್ಬ ಎಷ್ಟನೇಯದು? ಅಂತ ಕೇಳಬೇಡಿ, ಏಕೆಂದರೆ ಅವರ ವಯಸ್ಸು ಹೇಳಿದರೆ ಜೊತೆಗೆ ನನ್ನದು ಗೊತ್ತಾಗುತ್ತೆ ವಯಸ್ಸು! ಒಟ್ಟಿನಲ್ಲಿ ನಮ್ಮವರ ಹುಟ್ಟು ಹಬ್ಬ! ಪ್ರತಿ ವರ್ಷ ನಮ್ಮವರ ಹುಟ್ಟು ಹಬ್ಬದ ದಿನ ಒಂದು ಚಿಕ್ಕ ಹೋಮ ಮಾಡಿಸುವ ಪರಿಪಾಠವಿಟ್ಟು ಕೊಂಡವಳು ನಾನು. ನಮ್ಮವರಿಗೆ ಇದಾವುದೂ ಇಷ್ಟವಿಲ್ಲ. ಒಟ್ಟಿನಲ್ಲಿ ಖರ್ಚಿನ ಬಾಬತ್ತು, ಅವರಿಗೆ ಅಲರ್ಜಿ! ಹೋಮದ ಬದಲು ಅಬಲಾಶ್ರಮದಲ್ಲಿ ಒಂದು ದಿನದ ಊಟ ತಿಂಡಿ, ಕಾಫಿ, ಹಣ್ಣು ಅಂತ ದಾನವಾಗಿ ಕೊಟ್ಟರೆ ಒಳ್ಳೆಯದು ‘ಅನ್ನದಾನಕ್ಕಿಂತ ಇನ್ನೊಂದು ದಾನವಿಲ್ಲ’ ಎಂದು ಎಲ್ಲೋ ಓದಿದ ನುಡಿ ನೆನಪಾಯಿತು, ಸರಿ ಯಜಮಾನರಿಗೆ, ನಯವಾಗಿ ಹೇಳಿದೆ.

he3”ರೀ ಈ ಹಣ ಅಬಲಾಶ್ರಮಕ್ಕೆ ಕೊಟ್ಟು ನಿಮ್ಮ ಹುಟ್ಟು ಹಬ್ಬದ ಪ್ರಯುಕ್ತ ಅಲ್ಲಿರುವ ಎಲ್ಲರಿಗೂ ಒಂದು ದಿನದ ಊಟ, ತಿಂಡಿ ಇತ್ಯಾದಿ ಖರ್ಚಿಗೆ ಅಂತ ಕೊಟ್ಟು ನಿಮ್ಮ ಹೆಸರು ಹೇಳಿ ಬನ್ನಿ ಎಂದೆ. ಅದಕ್ಕೆ ಯಜಮಾನರಿಂದ ಯಾವ ಪ್ರತಿಕ್ರಿಯೆ ಬರಲಿಲ್ಲ. ಅಂದ ಮೇಲೆ ನಾನು ಹೇಳಿದ ಮಾತು ಅವರಿಗೆ ಹಿಡಿಸಲಿಲ್ಲವೆಂದು ಅರ್ಥ! ಕಳೆದು ಸುಮಾರು ವರ್ಷಗಳಿಂದ ಅವರನ್ನು ಚೆನ್ನಾಗಿ ಅರ್ಥೈಸಿಕೊಂಡವಳಲ್ಲಿ ನಾನೇ ಮೊದಲಿಗಳು ಅಂದರೆ ಅತಿಶಯೋಕ್ತಿ ಏನಲ್ಲ ಅವರ ಅಮ್ಮ, ಅಂದ್ರೆ ನಮ್ಮ ಅತ್ತೆಯವರು ಕೂಡ ”ಇವನು ಹೀಗೇಕೆ ಆಡುತ್ತಾನೆ ನನಗೆ ಅರ್ಥವೇ ಆಗುವುದಿಲ್ಲ” ಎಂದು ಎಷ್ಟೋ ಸಲ ನನ್ನ ಹತ್ತಿರ ತಮ್ಮ ಅಳಲನ್ನು ತೋಡಿಕೊಂಡಿದ್ದರು.

ನಾನು ಪಟ್ಟು ಬಿಡದ ಬೇತಾಳನಂತೆ ಅವರ ಬೆನ್ನು ಬಿದ್ದೆ, ಕೈಯಲ್ಲಿ ದುಡ್ಡು ಇಟ್ಟು ಬಲವಂತವಾಗಿ ಇವತ್ತು ಅಬಲಾಶ್ರಮಕ್ಕೆ ಕೊಟ್ಟೇ ಬರಬೇಕು ಎಂದು ಹೇಳಿ ಕಳುಹಿಸಿದೆ. ಅವರ ಹುಟ್ಟುಹಬ್ಬ ಅಂದ ಮೇಲೆ ಅವರ ಕೈಯಿಂದಲೇ ದಾನವಾಗಲಿ ಇದು ನನ್ನ ಸದ್ಭಾವನೆ. ನಮ್ಮವರಿಗೆ ಯಾವ ಭಾವನೆಗಳೂ ಇಲ್ಲ! ನಾಳೆ ಕೊಡುತ್ತೇನೆ ಎಂದು ಹೇಳಿ ಅಂದು ತಪ್ಪಿಸಿಕೊಂಡರು. ಅಂದು ರಾತ್ರಿಯೆಲ್ಲ ನಿದ್ರೆ ಮಾಡದೆ ಕನವರಿಸುತ್ತಿದ್ದರು, ಮರುದಿನ ಅಬಲಾಶ್ರಮಕ್ಕೆ ಹೋಗಿ ವಾಪಸ್ಸು ಬಂದು ”ಇವತ್ತು ರಜ” ಎಂದು ಹೇಳಿ ರೈಲು ಬಿಟ್ಟರು. ಅವರ ರೈಲಿಗೆ ಹೆದರುವ ಮಾರುತಿ ವ್ಯಾನ್ ನಾನಲ್ಲ! ಮರುದಿನ ನಮ್ಮವರ ಪ್ರೀತಿಯ ಗೆಳೆಯ ರಾಮರಾಯರಿಗೆ ಫೋನ್ ಮಾಡಿ, ವಿಷಯ ತಿಳಿಸಿದೆ. ರಾಮರಾಯರು ರಿಟೈಯರ್ಡ್ ಹೌಸ್ ಹಸ್ಬೆಂಡ್ ತಕ್ಷಣ ಬಂದರು, ಅವರಿಗೆ ಬಿಸಿ ಕಾಫಿ ಕೈಗಿತ್ತು ಹೇಳಿದೆ ”ನಿಮ್ಮಿಂದ ಒಂದು ಸಹಾಯ ಆಗಬೇಕು” ಎಂದೆ. ರಾಮರಾಯರು ಚಕಿತರಾಗಿ ಕೇಳಿದರು ”ಏನು ಸಹಾಯ ಬೇಕಿತ್ತು”? ನಾನು, ಮೆಲ್ಲಗೆ ಬಾತ್ರೂಮನಲ್ಲಿ ಇದ್ದ ನಮ್ಮವರಿಗೆ ಕೇಳಿಸಬಾರದೆಂದು ಹೇಳಿದೆ.

”ಇವರ ಹುಟ್ಟು ಹಬ್ಬವಿದೆ ಇನ್ನೊಂದು ವಾರಕ್ಕೆ, ಅವತ್ತು ಅಬಲಾಶ್ರಮದಲ್ಲಿ ಇರುವ ಎಲ್ಲ ಸದಸ್ಯರಿಗೂ ಒಂದು ದಿನದ ಊಟ, ತಿಂಡಿಗೆ ಇಂತಿಷ್ಟು ದುಡ್ಡು ಅಂತ ತೆಗೆದಿಟ್ಟಿದ್ದೇನೆ. ಇವರ ಕೈಯಿಂದಲೇ ಕೊಡಿಸಬೇಕು ಅಂತ ನನ್ನ ಇಚ್ಛೆ. ಇವರ ಸ್ವಭಾವ ಗೊತ್ತಲ್ಲ ನಿಮಗೆ! ಒಂದು ವಾರದಿಂದ ದುಡ್ಡು ಇಟ್ಟುಕೊಂಡು ಅಬಲಾಶ್ರಮಕ್ಕೆ ಕೊಡದೆ ಸತಾಯಿಸುತ್ತಿದ್ದಾರೆ! ಅದರೆ ರಾಮರಾಯರು ವಿಷಣ್ಣವಾಗಿ ನಗುತ್ತ,” ಅಯ್ಯೋ ಪುಣ್ಯಾತ್ಮ ಅಷ್ಟು ವರ್ಷದ ಗೆಳೆತನ ಒಂದು ದಿನವೂ ಹೊರಗೆ ಹೋದಾಗ ಒಂದು ಕಪ್ ಕಾಫೀ ಕುಡಿಸಿದವನಲ್ಲ, ಇನ್ನು ಅಷ್ಟೊಂದು ಜನರಿಗೆ ಊಟ ಹಾಕಿಸ್ತಾನಾ? ಎಲ್ಲಿ ಕೊಡಿ ನನ್ನ ಕೈಗೆ ಆ ದುಡ್ಡನ್ನು ನಾನೇ ಅವನನ್ನು ಕರೆದುಕೊಂಡು ಹೋಗಿ ಅವನ ಕೈಯಿಂದಲೇ ಈ ದುಡ್ಡನ್ನು ಕೊಡಿಸುತ್ತೇನೆ. ನಿಮಗಿಂತ ಚೆನ್ನಾಗಿ ನಾನು Goat_cheeseಅವನನ್ನು ಅರ್ಥ ಮಾಡಿಕೊಂಡಿದ್ದೇನೆ ಎಂಬಂತೆ ಮಾತನಾಡಿ ‘ನಿಮಗೆಲ್ಲೋ ಭ್ರಾಂತು ಎಂದು ಹೇಳಿ ನನ್ನ ಮುಖ ನೋಡಿದರು! ನನ್ನ ಭ್ರಾಂತಿ ಬಿಟ್ಟು ಹೋಯಿತು ರಾಮರಾಯರ ಕೈಗೆ ದುಡ್ಡು ಕೊಟ್ಟು ಅವರ ಹೆಗಲಿಗೆ ಆ ಜವಾಬ್ದಾರಿ ಹೊರಿಸಿ ನಿಶ್ಚಿಂತಳಾದೆ!
ಅಂದೇ ಸಂಜೆ ರಾಮರಾಯರು ನಮ್ಮವರನ್ನು ವಾಕಿಂಗ್ಗೆ ಕರೆದೊಯ್ದ ಅಬಲಾಶ್ರಮದ ದಾರಿ ಹಿಡಿದರು. ನಮ್ಮವರಿಗೆ ಅವರು ಅಬಲಾಶ್ರಮದ ದಾರಿ ಹಿಡಿಯುತ್ತಿದ್ದಂತೆಯೇ ನಾಲ್ಕರ ಚಳಿ!

‘ವಾಕಿಂಗ್ ಆ ಕಡೆ ಅಲ್ವೇನಯ್ಯ ಇಲ್ಲಿಗೇಕೆ ಬಂದೆ ಎಂದು ನಮ್ಮವರ ಮಾತಿಗೆ ರಾಮರಾಯರು ಅಬಲಾಶ್ರಮದ ಒಳಗೆ ಅಡಿ ಇಟ್ಟೇ ಬಿಟ್ಟರು. ಅಲ್ಲಿ ದುಡ್ಡು ಪಾವತಿಸಿ ಇವರ ಹೆಸರು ವಯಸ್ಸು ಎಲ್ಲ ಇವರಿಂದಲೇ ಬಾಯಿ ಬಿಡಿಸಿ ಗೆದ್ದವರಂತೆ ಮನೆಗೆ ಬಂದರು. ರಶೀದಿ ನನ್ನ ಕೈಗಿಡುತ್ತ ನಿಮ್ಮ ಕೆಲಸವಾಯಿತು ಎಂದು ಮುಗುಳ್ನಕ್ಕರು. ತಕ್ಷಣ ನನ್ನ ಕೈಲಿದ್ದ ರಶೀದಿ ನಮ್ಮವರು ತೆಗೆದುಕೊಂಡು ತಮ್ಮ ಜೇಬಿನಲ್ಲಿ ಇಡುತ್ತ ನಾನು ಸೇಫಾಗಿ ಇಡುತ್ತೇನೆ ನೀನಾದ್ರೆ ಅಲ್ಲಿ ಇಲ್ಲಿ ಬಿಸಾಡುತ್ತೀ ಎಂದರು. ರಶೀದಿ ತಾನೆ ದುಡ್ಡು ತಲುಪಿದೆ ಎಂದು ರಾಮರಾಯರಿಗೆ ‘ಥ್ಯಾಂಕ್ಸ್’ ಹೇಳಿ ಬಿಸಿ ಬಿಸಿ ಚಪಾತಿ ಸಾಗು ತಿನ್ನಲು ಕೊಟ್ಟೆ. ರಾಮರಾಯರು ಹೌಸ್ ಹಸ್ಬೆಂಡ್ ಅಡಿಗೆ ತಿಂಡಿ ತಾವೇ ತಮ್ಮ ಕೈಯಾರ ಮಾಡಿ ತಿಂದು (ಬೇ) ಸತ್ತಿದ್ದರು! ಖುಷಿಯಿಂದ ತಿಂದರು!

ಇವರ ಹುಟ್ಟು ಹಬ್ಬ ನಾಳೆ ಎನ್ನುವಾಗ ಒಂದು ಫೋನ್ ಕಾಲ್ ಬಂತು.
”ಯಾರು”? ಎಂದೆ
”ನಾನು ಅಬಲಾಶ್ರಮದ ಮ್ಯಾನೇಜರ್ ಆನಂದರಾವ್ ಅಂತ” ನಿಮಗೆ ಒಂದು ವಿಷಯ ತಿಳಿಸಬೇಕಾಗಿತ್ತು’ ಎಂದರು.
”ಹೇಳಿ’ ಎಂದೆ ನಾನು.
ನಿನ್ನೆ ದಿವಸ ನಿಮ್ಮ ಯಜಮಾನರು ನಮ್ಮ ಅಬಲಾಶ್ರಮಕ್ಕೆ ಬಂದು ಒಂದು ರಶೀದಿ ತೋರಿಸಿ ನಿಮ್ಮ ನೂರು ಜನ ಸದಸ್ಯರ ಜೊತೆಗೆ ನಮ್ಮ ಕಡೆಯ ಮನೆಮಂದಿ ನೆಂಟರಿಸ್ಟರು ಎಲ್ಲ ಸೇರಿ 15-20 ಜನ ಅಲ್ಲಿಗೆ ಊಟಕ್ಕೆ ಬರುತ್ತೇವೆ ಎಂದು ಹಟ ಹಿಡಿದು ಕುಳಿತಿದ್ದಾರೆ. ನಮ್ಮಲ್ಲಿ ಆ ತರದ ಪದ್ಧತಿ ಇಲ್ಲ! ಹಣ ವಾಪಸ್ ಕೊಡುವುದೂ ಇಲ್ಲ! ದಯವಿಟ್ಟು ನಿಮ್ಮಲ್ಲಿ ನನ್ನದೊಂದು ವಿನಂತಿ, ನಿಮ್ಮ ಯಜಮಾನರ ಹುಟ್ಟು ಹಬ್ಬದ ದಿನ ನಿಮ್ಮ ಮನೆಯಲ್ಲಿಯೇ ಅವರಿಷ್ಟದ ಅಡುಗೆ ಮಾಡಿ ಅವರಿಗೆ ಬಡಿಸಿ ನಮ್ಮ ಅಬಲಾಶ್ರಮದ ಹತ್ತಿರವೂ ಅವರು ಸುಳಿಯದಂತೆ ನೋಡಿಕೊಳ್ಳಿ!

3 Comments

  1. Sudha sarnobat
    December 14, 2016
  2. Sangeeta Kalmane
    October 23, 2016
  3. Kusumapatel
    October 20, 2016

Add Comment

Leave a Reply