Quantcast

ಗುಬ್ಬಿಗಳು ಸಿಕ್ಕಿದವು..

%e0%b2%8e%e0%b2%b8%e0%b3%8d-%e0%b2%aa%e0%b2%bf-%e0%b2%b5%e0%b2%bf%e0%b2%9c%e0%b2%af%e0%b2%b2%e0%b2%95%e0%b3%8d%e0%b2%b7%e0%b3%8d%e0%b2%ae%e0%b2%bf

  ಎಸ್.ಪಿ.ವಿಜಯಲಕ್ಷ್ಮಿ

‘ ಗುಬ್ಬಿಗಳು ಕಾಣೆಯಾಗಿವೆ’ ಈ ಕೂಗನ್ನು ನಗರಗಳಲ್ಲಿ ಎಲ್ರೂ ಕೇಳಿದ್ದಾರೆ, ಹೇಳಿದ್ದಾರೆ. ಯಾಕೆ ಎನ್ನುವ, ಹೇಗೆ ಎನ್ನುವ ಶೋಧನೆಗಳೂ  ನಡೆದಿವೆ.

ಮತ್ತೆ ಅವುಗಳನ್ನು ನಮ್ಮಂಗಳಕ್ಕೆ ತರುವ ಕ್ರಮಗಳೇನು ಎನ್ನುವ ಚಿಂತನೆಯೂ  ನಡೆದಿವೆ.

sparrow1ಈ ಗಿಜಿಗುಟ್ಟುವ ನಗರಗಳ ನಿಯಾನ್ ದೀಪಗಳ ಬೆಳಕಿಂದ ಅವುಗಳಿಗೆ ಹಗಲು- ರಾತ್ರಿಗಳ ವ್ಯತ್ಯಾಸವೇ ತಿಳಿಯದೆ , ಸೇರುವುದನ್ನೇ ನಿಲ್ಲಿಸಿ ಸಂತಾನೋತ್ಪತ್ತಿ ಕ್ರಿಯೆಯೂ ಕ್ಷೀಣಿಸಿ, ಸಂತತಿಯೇ ಗಮನಾರ್ಹವಾಗಿ  ಕಡಿಮೆಯಾಗುತ್ತಿದೆಯೆನ್ನುವ ಶೋಧನೆ  ಪ್ರಕೃತಿಪ್ರಿಯರನ್ನು,  ಪರಿಸರಪ್ರೇಮಿಗಳನ್ನೂ, ಜನಸಾಮಾನ್ಯರನ್ನೂ ಕಂಗೆಡಿಸಿದ್ದೇನೂ ಸುಳ್ಳಲ್ಲ.. ಈ ಅತಂಕ, ಈ ಶೋಧನೆಯ ಸಂಗತಿಗಳು ಇವೂ ಸುಳ್ಳಲ್ಲ..

ನಲವತ್ತು ವರ್ಷಗಳ ಹಿಂದಿನ ದಿನಗಳು ಈಗಲೂ ಕಣ್ಣಿಗೆ ಕಟ್ಟಿದಂತಿದೆ.. ಮದುವೆಯಾದ ಹೊಸತು . ಎಲ್ಲವೂ ಸುಂದರ ಎನ್ನಿಸುವ ಮಾಯಾಲೋಕ. .ಆಗೆಲ್ಲಾ  ಹಣದ  ಥೈಲಿ  ತುಂಬಾ ಹಗುರ  ಮತ್ತು ಕೆಲವೊಮ್ಮೆ ಖಾಲಿಖಾಲಿ.. ದೊಡ್ಡದೇ ಎನ್ನುವ ಸಂಸಾರ.. ಆದರೂ  ಮನಸ್ಸು ಖಾಲಿಯೆನ್ನಿಸದ ಮನಸ್ಸಿನ ಸರಳತೆ… ನ್ಯಾಯಬೆಲೆಯ ಅಂಗಡಿಯಲ್ಲಿ ಅಕ್ಕಿ ತಂದು, ಅದನ್ನು ಶುಚಿಮಾಡಲು ಮನೆಯ ವೆರಾಂಡಾದಲ್ಲಿ  ಖುಶಿಯಿಂದಲೇ ಕೂರುತ್ತಿದ್ದೆ.

ಮುಷ್ಟಿಅಕ್ಕಿಯಲ್ಲಿ ಹತ್ತಾರು ಭತ್ತದ ಕಾಳು…. ಆರಿಸಿ ಅಂಗಳಕ್ಕೆಸೆದರೆ ಎಲ್ಲಿರುತ್ತಿದ್ದವೋ ಗುಬ್ಬಿಗಳು ಪುರ್ ಎಂದು ಹಾರಿ ಬಂದು ಅಂಗಳದ ತುಂಬಾ ಆಡುತ್ತಿದ್ದವು. ಅತ್ತಿತ್ತ ಸರಸರನೆ ಓಡಾಡಿ, ಕಾಳುಗಳ ಹೆಕ್ಕುತ್ತ, ಕೆಲವೊಮ್ಮೆ  ಒಳಗೇ ಬಂದು , ನಿರ್ಭಯವಾಗಿ ಹತ್ತಿರವೇ ಸುಳಿದು, ಒಂದೆರಡು ಕಾಳು ನನ್ನ ಹಕ್ಕೆನ್ನುವಂತೆ ಕುಕ್ಕಿ ಎತ್ತೊಯ್ಯುವಾಗ ನಾನು  ಅವುಗಳ ಈ ಆಟವನ್ನೇ ನೋಡುತ್ತ, ಅಕ್ಕಿ ಆರಿಸುವುದನ್ನೇ ಮರೆಯುತ್ತಿದ್ದೆ.. ಗುಬ್ಬಿಯಂತೆ ಪುಟ್ಟದಾಗಿದ್ದ ನನ್ನ ಮಗಳು,  ಅವುಗಳನ್ನು ನೋಡಿ, ಸಂಭ್ರಮದಲ್ಲಿ ಚಪ್ಪಾಳೆ ತಟ್ಟುತ್ತ, ಅವುಗಳ ಹಿಂದೆ ಅವುಗಳಂತೇ ಪುಟಪುಟನೇ ಓಡಾಡುತ್ತಿದ್ದ ಆ ಸಂಭ್ರಮ….!

‘ಗುಬ್ಬಿಗಳು ಕಾಣೆಯಾಗಿವೆ’  ಈ ಸತ್ಯ ನನ್ನನ್ನೂ ಅಲ್ಲಾಡಿಸಿದ್ದು ಸುಳ್ಳಲ್ಲ… ಅಕ್ಕಿ ಶುಚಿಮಾಡುವ ಪ್ರಮೇಯವಿಲ್ಲ,   ನನ್ನ ಬಾಲ್ಕನಿಯಲ್ಲಿ ಭತ್ತ,  ರಾಗಿ ಕಾಳು ಬೀಳಲ್ಲ. ಗುಬ್ಬಿಯಂತೆ ಪುಟಿಪುಟಿದು ಓಡಾಡುವ ಮಕ್ಕಳೂ ಅವರವರ ಗೂಡಲ್ಲಿ…  ಎಲ್ಲದರ ಶೂನ್ಯವೂ ಢಾಳಾಗಿ ಮನದಂಗಳದಲ್ಲಿ ….ಒಮ್ಮೊಮ್ಮೆ ಉಬ್ಬೆಗದ ಮನಃಸ್ಥಿತಿ…

ನಲವತ್ತು ವರ್ಷದ ಹಿಂದಿನ ಮನೆಯಂಗಳದ ಸಂಭ್ರಮ ಇಂದೂ ಆಗಾಗ ಕಾಡುವ ಸಿಹಿನೆನಪು, ಮತ್ತೆ ಬಾರದ ವಾಸ್ತವ ವಿಷಣ್ಣತೆ…! ಏಳು ವರ್ಷದ ಹಿಂದೆ ಅಮೇರಿಕೆಯ ಪ್ರವಾಸದಲ್ಲಿ  ‘ಹರ್ಷೀಸ್ ಚಾಕೋಲೇಟ್’ ಫ್ಯಾಕ್ಟರಿ ಭೇಟಿಗೆ ಹೋದೆವು… ದೊಡ್ಡದಾದ ಕಾರ್ ಪಾರ್ಕಿಂಗ್ ನಂತರದ ಶುಭ್ರವಾದ ಗಾರ್ಡನ್ ನಲ್ಲಿ ಸ್ವಲ್ಪಹೊತ್ತು ಕೂರುವಾಸೆಯಾಯ್ತು. ಕೂತೆ.

ಕ್ಷಣಮಾತ್ರದಲ್ಲಿ ಎಲ್ಲಿದ್ದವೋ ನೂರಾರು ಗುಬ್ಬಿಗಳು, ಪುರ್ರೆಂದು ಹಾರಿಬಂದವು. ಸುತ್ತಮುತ್ತ ಕುಪ್ಪಳಿಸಿ ನೆಗೆಯುತ್ತ,  ಚಂದದ ಹಾರಾಡುವ ಹೂಗಳಂತೆ ಇಡೀ ವಾತಾವರಣವನ್ನೇ ಚಿಲಿಪಿಲಿಗುಟ್ಟಿಸಿಬಿಟ್ಟವು. .’ ಅರೆರೆ, ನೀವೆಲ್ಲ ಕಾಣೆಯಾಗಿದ್ದೀರಿ ಎಂದು ನಾವು ಅಳ್ತಾ ಕೂತಿದ್ರೆ, ನೀವೆಲ್ಲ ಡಾಲರ್ ಗೆ ಮರುಳಾಗಿ ಇಲ್ಲಿ ಬಂದು ಕೂತ್ರಾ….? ನಮ್ಮ ಸೊಸೈಟಿ ಅಕ್ಕಿ ಬೇಜಾರಾಯ್ತಾ ನಿಮ್ಗೆ…ಇಲ್ಲಿನ ಝಗಮಗದ ಹುಚ್ಚುಬಯಕೆ ನಿಮ್ಗೂ ಅಂಟಿಬಿಡ್ತಾ….?’

ಎಷ್ಟೋ ವರ್ಷಗಳ ನಂತರ , ಹತ್ತಿರವೇ ಇಷ್ಟೊಂದು ಸಂಖ್ಯೆಯ ಗುಬ್ಬಿಗಳನ್ನು ಕಂಡ ಖುಷಿ ಮನಸಿನಲ್ಲಿ ಲಹರಿಯ ಮಾಲೆಯನ್ನು ನೇಯುತ್ತಲೇ ಹೋಯ್ತು…..

ಕಳೆದವಾರ ಸಿಂಗಪೂರಿಗೆ ಬಂದೆ… ಮಗಳ ಮನೆಯಿರುವ  ಇಪ್ಪತ್ತು ಅಂತಸ್ತಿನ  ಕಟ್ಟಡದ   ಹದಿನಾಲ್ಕನೇ ಫ್ಲೋರಿನ ಫ್ಲಾಟ್ ಒಳಗೆ ಕಾಲಿಟ್ಟಾಗ, ಎಂತದೋ ಅಂಜಿಕೆ….. ಗಗನಚುಂಬಿಯ  ಈ ಎತ್ತರದಲ್ಲಿ ವಾಸ ಇದೇ ಮೊದಲು. ನೆಲ ಬಿಟ್ಟು ಬದುಕುಂಟೇ… ಎಂತದೋ ಅಳುಕು…!

ಒಳಗಡಿಯಿಟ್ಟವಳಿಗೆ  ಎದುರಿಗೆ  ಕಂಡಿದ್ದು ಗೋಡೆಯ  ಬದಲಿಗಿದ್ದ ಗಾಜಿನ ಗೋಡೆ. ಅಲ್ಲಿಂದ ಕಣ್ಣೆದುರು ಕಂಡ ನೋಟಕ್ಕೆ  ಗಲಿಬಿಲಿಯಾಯ್ತು. ಇಂಥ ನೋಟ ಹೊಸದಲ್ಲವಾದರೂ , ಅದೆಷ್ಟೋಕಡೆ ಕಂಡದ್ದಾಗಿದ್ದರೂ,  ಮನೆಯ ಸುತ್ತಲೇ ಹೀಗೊಂದು ಮೆಗಾಸಿಟಿಯ ದರ್ಶನ, ಮೈ ಝುಮ್ಮೆಂದಿತು. ಬಾಲ್ಕನಿಗೆ ಹೋಗಲೂ ಅಂಜಿಕೆಯಾಗಿ ಒಳಗೇ ಉಳಿದೆ.. ಒಳಗೆ ಗಾಜಿನಗೋಡೆ, ಕಿಟಕಿ  ಎಲ್ಲಿಂದ ನೋಡಿದರೂ,  ಕಾಣುವ ಅರ್ಧಚಂದ್ರಾಕೃತಿಯ ಜಾಗೆಯಲ್ಲಿ ಸುತ್ತುವರಿದು ನಿಂತಿರುವುದು ಇಪ್ಪತ್ತು, unnamed-3ಇಪ್ಪತ್ತೈದು ಅಂತಸ್ತಿನ ಗಗನಚುಂಬಿ ಮೆಗಾ ಕಟ್ಟಡಗಳೇ.. ಕಣ್ಣುಹಾಯಿಸಿದ ಸುತ್ತೆಲ್ಲಾ ಇದೇ ದೃಶ್ಯ. ನೋಡಲೇನೋ ಕಣ್ಣು ಕೋರೈಸುವಂತಿತ್ತು.  ಅಬ್ಬಾ, ವಿನ್ಯಾಸ, ಬೆಡಗು, ಬಿನ್ನಾಣ, ವೈಭವ.. ಉಪಮಾತೀತವೇ ಸರಿ.

ಆದರೂ.. ಇದೆಂಥ ಮುಗಿಲಲ್ಲಿ ವಾಸ, ಬದುಕು ನೆಲದಲ್ಲಿ ಅಲ್ಲವೇ, ಸುತ್ತ ಹಸಿರು, ಹೂವು, ಹಕ್ಕಿ, ನೀರು, ಜನ ಬೇಕಲ್ಲವೇ.?  ನನ್ನದೇ ಆದ ಚಿಂತನೆಗಳಲ್ಲಿ ರಾತ್ರಿ ಕಳೆದೆ.. ಬೆಳಿಗ್ಗೆ ಬೇಗನೆ ಎಚ್ಚರವಾಯ್ತು. ಹಾಲ್ ಗೆ ಬಂದು ಮತ್ತೆ ಹೊರಗಣ ಗಗನಚುಂಬಿಗಳನ್ನೇ ನೋಡಿದೆ…

ಗಾಜಿನ ಗೋಡೆ  ಸ್ಲೈಡ್  ಮಾಡಿದೆ. ಕ್ಷಣವಷ್ಟೇ,  ಸುಮಧುರವಾದ ಚಿಲಿಪಿಲಿ ಕೂಗು  ಕಿವಿ ತಬ್ಬಿತು.  ಒಂದುಕ್ಷಣ ನಿಜವೋ, ಭ್ರಮೆಯೋ ತಿಳಿಯಲಿಲ್ಲ. ಈ ಇಂಚರದನಿಯ  ದಿಕ್ಕುದೆಸೆ  ಎಲ್ಲಿಂದ ಎಂದು  ತನ್ಮಯಳಾಗಿ  ಆಲಿಸಿದೆ,  ಕೆಳಗಿನದೆನ್ನಿಸಿತು.  ನಿನ್ನೆ ಬಾಲ್ಕನಿಗೆ ಬರಲು, ಈ ಎತ್ತರದಿಂದ ಕೆಳನೋಡಲು ಹೆದರಿ ಒಳಗಿದ್ದೆ. ಆದರೆ,  ನಿನ್ನೆಯ ಭಯ ಮರೆತೇಹೋದಂತೆ, ಆ ಚಿಲಿಪಿಲಿ ನನ್ನನ್ನು ಬಗ್ಗಿಸಿಬಿಟ್ಟಿತು.  ಈ ಎತ್ತರದಿಂದ  ಪ್ರಪಾತ  ಕಾಣುತ್ತಿರುವೆನೇ.. ಕ್ಷಣ ನಡುಕ ಹುಟ್ಟಿಸಿತು,  ಅರೆರೇ, ಅಲ್ಲಿ ಕಂಡ ದೃಶ್ಯ,  ನಾ ಬಯಸಿಬಯಸಿ ಹಂಬಲಿಸುತ್ತಿದ್ದದ್ದೇ  ಆಗೊ ಹಾಗೇ  ನನ್ನ ನೋಟವನ್ನು ತನ್ನ ತೆಕ್ಕೆಗೆ ತೊಗೊಂಡೇಬಿಟ್ಟಿತು..

ನನ್ನ ಭಯ ನಿರಾಧಾರವಾಗಿತ್ತು. ಮನೆ ಸುತ್ತ ನನ್ನ ಕಣ್ಣನೇರಕ್ಕೆ ಗಗನಚುಂಬಿಗಳ ಸಂಸಾರವೇ  ವಾಸ್ತವ್ಯ ಹೂಡಿದ್ದರೂ, ಕೆಳಗೆ ವಿಶಾಲವಾದ ಜಾಗ, ಗಾರ್ಡನ್, ದಷ್ಟಪುಷ್ಟ ಮರಗಳು, ಈಜುಕೊಳ, ಎರಡೇ ಅಂತಸ್ತಿನ  ಹೆಂಚುಹೊದಿಕೆಯ ಮಾದರಿ ಸಾಲಿನ ಕಟ್ಟಡಗಳು, ತಂಪುತಂಪು ದೃಶ್ಯ ಮನಸೆಳೆಯಿತು.. ಎಲ್ಲಕ್ಕಿಂತ  ಆ  ಹೆಂಚಿನ ಇಳಿಜಾರಿನ ಛಾವಣಿ ತುಂಬಾ ಚಿಲಿಪಿಲಿಗುಟ್ಟುತ್ತಾ ಕಷ್ಟಸುಖ ಹಂಚಿಕೊಳ್ಳುತ್ತಿರುವ ಗುಬ್ಬಚ್ಚಿಗಳು.. ಓಹ್, ನನಗಾದ ಖುಶಿ  ಮೇರೆಯಿಲ್ಲದ್ದು.. ಏನೇನೊ ಮಾತಾಡಿಕೊಂಡವು,.

ಅತ್ತಿತ್ತ ಅಲ್ಲಲ್ಲೇ ಪುಟಿಪುಟಿದು ನೆಗೆದವು, ನೋಡನೋಡುತ್ತಿರುವಂತೇ  ಏಳೆಂಟರ  ಸಂಖ್ಯೆಯ  ಗುಂಪುಗುಂಪಾಗಿ  ತಮ್ಮ ಕಾರ್ಯಗಳೇನಿತ್ತೋ, ನನ್ನ ಕಣ್ಣೆದುರೇ ಹಾರುತ್ತ ಗಗನಗಾಮಿಗಳಾಗಿ ಸಾಗುತ್ತಾಹೋದವು.. ಇನ್ನಷ್ಟು ಬಂದವು, ಮತ್ತಷ್ಟು ಹಾರಿದವು.. ಲೆಕ್ಕ  ಹಾಕಲು ಸಾಧ್ಯವಿರಲಿಲ್ಲ.. ನೂರಾರು.. ನೂರಾರು..! ಸಂಜೆ ಮತ್ತೆ  ಮರಳಿದವು, ಹೆಂಚಿನ ಮೇಲೆ ಕೂತವು, ಏನೋ ಚಿಲಿಪಿಲಿ ಎಂದು ಮಾತಾಡಿದವು. ಮತ್ತೆ, ಕರಗುತ್ತಿದ್ದ ಬೆಳಕಲ್ಲಿ,  ಹಾಸುತ್ತಿದ್ದ ಇರುಳ ಮುಸುಕಲ್ಲಿ ಮರೆಯಾಗುತ್ತ, ಮರಗಳ ಗೂಡೊಳಗೆ ಅಡಗಿದವು. ನನಗೀಗ ನಿತ್ಯವೂ ಬೈಗು- ಬೆಳಗುಗಳಲ್ಲಿ ಇದೇ ಗುಂಗು ಹಿಡಿಸುವ ನಿಸರ್ಗದಾಟ..

ಆಹ್, ಸಿಂಗಪುರ್.. ಇದು ಕೇವಲ ಅಭಿವೃದ್ಧಿ, ಬೆಳವಣಿಗೆ ಎಂದು ಗಗನಚುಂಬಿಯ ದೈತ್ಯನಾಗಿ ಊರ್ಧ್ವಮುಖಿಯಾಗಿ ಮಾತ್ರ ಬೆಳೆಯುತ್ತಿಲ್ಲ, ಅದಕ್ಕೆ ಅರಿವಿದೆ, ಬದುಕು ಅರಳುವುದು ಭೂಮಿಯಲ್ಲೇ ಹೊರತು ಗಗನದಲ್ಲಿ  ಅಲ್ಲವೆಂದು.. ಭೂಮಿಯಲ್ಲಿ ಇರಬೇಕೆಂದರೆ  ಕಾಂಕ್ರೀಟ್ ನಾಡಿನೊಂದಿಗೆ ಹಸಿರಿನ ಕಾಡೂ ಇರಬೇಕು, ಹಸಿರಿದ್ದಲ್ಲಿ ಹಕ್ಕಿಪಕ್ಷಿಗಳಿರಬೇಕು.. ಅವುಗಳಿಗೆ ತಕ್ಕ ವಾತಾವರಣ, ಪುಷ್ಟಿ, ಜಾಗ ಎಲ್ಲವನ್ನೂ ಒದಗಿಸಬೇಕು, ಅವು ನಿರ್ಭಯವಾಗಿರಬೇಕು.. ನಿಜನಿಜ, ಈ ಎಲ್ಲ ಅರಿವೂ ಸಿಂಗಪೂರಕ್ಕಿದೆ….

sparrow3ಹಾಗೆಂದೇ, ಇಲ್ಲಿಯ ಗಗನಚುಂಬಿಗಳು, ಕಣ್ಣುಕೋರೈಸುವ ಝಗಮಗದ ನಿಯಾನ್ ದೀಪಗಳ ಬೆಳಕು  ಪುಟ್ಟಆಕಾರದ ಗುಬ್ಬಿಗಳ ಮೇಲೆ  ಬ್ರಹ್ಮಾಸ್ತ್ರ ಪ್ರಯೋಗಿಸಿ ಹೆದರಿಸುತ್ತಿಲ್ಲ, , ಬದಲಾಗಿ ಮಡಿಲಲ್ಲಿಟ್ಟು ಪೋಷಿಸುತ್ತಿವೆ, ಪ್ರೀತಿಸುತ್ತಿವೆ , ಬೆಳೆಸುತ್ತಿವೆ….”ನೀವು ಭೂಮಿ ಮೇಲಿದ್ದು  ನಕ್ಕುನಲಿಯಿರಿ. ಆಗಲೇ  ನಾವು  ನಿರಾಳವಾಗಿ ಊರ್ಧ್ವಮುಖಿಯಾಗಿ ಗಗನದಲ್ಲಿ ಬೀಗುತ್ತ , ಸುಭದ್ರವಾಗಿ ನಿಲ್ಲುತ್ತೇವೆ.. ನಿಮ್ಮಿಂದ ನಾವು, ನಮ್ಮಿಂದ ನೀವಲ್ಲ’ ಎಂದು ವಿನೀತವಾಗಿ ಹೇಳುತ್ತಾ ಬೀಗಿ ನಿಂತಂತೆ ನನಗೆ ಭಾಸವಾಯ್ತು..

ಈಗ ಈ ಗಗನವಾಸ ನನ್ನನ್ನೂ ಹೆದರಿಸುತ್ತಿಲ್ಲ, ಸುತ್ತುವರಿದ  ಗಗನಚುಂಬಿಗಳೂ ಹೆದರಿಸುತ್ತಿಲ್ಲ.. ಒಂದುರೀತಿಯ ಮೋಹಕ ಭಾವ,  ಒಂದುರೀತಿಯ ನಶೆ, ಒಂದುರೀತಿಯ ಖುಶಿಯ ಅಮಲನ್ನೂ ಉಂಟುಮಾಡಿವೆ…

ಮರಗಳನ್ನು ನಿರ್ದಾಕ್ಷಿಣ್ಯವಾಗಿ ಏನೇನೋ ನೆಪಗಳಲ್ಲಿ ಕಡಿದುರುಳಿಸುವ ಮುನ್ನ ಹೀಗೊಂದು ಅರಿವು  ನಮ್ಮಲ್ಲೂ ಎಚ್ಚೆತ್ತುಕೊಳ್ಳಬೇಕಲ್ಲವೇ…!

2 Comments

  1. Sarojini Padasalagi
    October 21, 2016
    • S.p.vijaya Lakshmi
      October 21, 2016

Add Comment

Leave a Reply