Quantcast

ಎಚ್ ಎಸ್ ವಿ ಕಾಲಂ: ಕವಿತೆಯನ್ನು ಅರ್ಥದ ಗೂಟಕ್ಕೆ ಕಟ್ಟಬೇಡಿ..

ತಾವರೆಯ ಬಾಗಿಲು-೫
ಎಚ್.ಎಸ್.ವೆಂಕಟೇಶ ಮೂರ್ತಿ

ಕವಿತೆಯನ್ನು ಪಾಠ ಮಾಡುವುದು ಎಂದರೆ ಅಧ್ಯಾಪಕರಿಗೆ ಹಿಂಜರಿಕೆ.

ವರ್ಷಾವರಿ ಪರೀಕ್ಷೆಯಲ್ಲಿ ಕವಿತೆಗೆ ಪ್ರಶ್ನೋತ್ತರಗಳನ್ನು ಹುಟ್ಟಿಸುವುದೆಂದರೆ ವಿದ್ಯಾರ್ಥಿಗಳಿಗೆ ಅಂಜಿಕೆ. ಅರ್ಥವಾಗದು ಎಂಬ ಅಂಜಿಕೆ ಹುಡುಗರಿಗೆ. ಅರ್ಥವಾಗದಿದ್ದರೆ ಎಂಬ ಅಂಜಿಕೆ ಅಧ್ಯಾಪಕರಿಗೆ. ಓದಿದ ಕವಿತೆ ಅರ್ಥವಾಗದಿದ್ದರೆ ನಮ್ಮ ಅಹಂಕಾರಕ್ಕೆ ಪೆಟ್ಟು. ಅದಕ್ಕೇ ನಮಗೆ ಕವಿತೆಯ ಉಸಾಬರಿಯೇ ಬೇಡ ಎಂದು ಮುಖ ತಿರುಗಿಸುವ ಮಂದಿ ಬಹಳ.

hsvಅವರಿಗೆ ನನ್ನ ಒಂದು ಸಲಹೆಯುಂಟು. ಕವಿತೆ ಅರ್ಥವಾಗಲೇ ಬೇಕು ಎಂದು ದಯವಿಟ್ಟು ಹಠಮಾಡಬೇಡಿ. ಕವಿತೆಯನ್ನು ಅರ್ಥದ ಗೂಟಕ್ಕೆ ಕಟ್ಟಬೇಡಿ. ಅದನ್ನು ಸುಮ್ಮನೆ ವಿಹಾರಕ್ಕೆ ಬಿಡಿ. ಅಂಗಳದಲ್ಲಿ ಆಡುವ ಮಗುವಂತೆ ಕವಿತೆ ಆರಾಮಾಗಿ ನಿಮ್ಮ ಮನದ ಅಂಗಳದಲ್ಲಿ ಆಡಿಕೊಳ್ಳಲಿ. ಕವಿತೆಯ ಭಯವನ್ನು ಗೆಲ್ಲಲು ನಾವು ಆರಂಭದಲ್ಲಿ ಕೈಗೊಳ್ಳಬೇಕಾದ ಸುಲಭ ಉಪಾಯವಿದು.

ಸುಮ್ಮನೆ ಓದುತ್ತಾ ಹೋದರೆ, ಓದುತ್ತಲೇ ಹೋದರೆ ಮಗುವಿನ ಆಟದಲ್ಲಿ ಒಂದು ಲಯ ಕಂಡೀತು. ನರ್ತಕರಂತೆ ಅದು ಪಾದವನ್ನು ನೆಲಕ್ಕೆ ಜಬ್ಬುವ ಚಂದ ನೋಡಿ. ಅದರ ತೊಡರುಗಾಲು ನಡೆ ನಿಮಗೆ ಸುಖ ಕೊಡದೆ ಇದ್ದೀತೆ? ಅದರ ತೊದಲು ತೊದಲು ನುಡಿ ಜೊಲ್ಲಿನಲ್ಲಿ ಬೆರೆತು ತುಟಿಯಾಚೆ ಜಾರುವ ಚೆಲುವಿಗೆ ಅರ್ಥವನ್ನೇಕೆ ಹಚ್ಚುವಿರಿ? ಕವಿತೆ ಹೇಗೆ ನಡೆಯುವುದು, ಹೇಗೆ ನಗುವುದು, ಹೇಗೆ ಅತಾರ್ಕಿಕವನ್ನು ಪಲುಕುವುದು ಗಮನಿಸಿ.

 ಕವಿತೆ ಎಂದರೆ ಮೊದಲು ಗಮನಿಸ ಬೇಕಾದದ್ದು ಅದನ್ನು ಕವಿಯು ಹೇಗೆ ಗುನುಗುನಿಸುವ ಮಾತುಗಳನ್ನು ಹಿಡಿದು ನೇಯ್ದು ಮಾಲೆ ಮಾಡಿದ್ದಾನೆ ಎಂಬುದು. ಕೆ.ಎಸ್.ನರಸಿಂಹಸ್ವಾಮಿ ಅವರ “ಬದುಕು-ಕವಿತೆ” ಎಂಬ ಪದ್ಯವು ಮಾತುಗಳನ್ನು ಜೋಡಿಸಿಕೊಳ್ಳುವ ಪರಿಯನ್ನು ನೋಡಿ:

ಮೂಲದವರು ಬದುಕು, ಉತ್ಸವಮೂರ್ತಿ ಕವಿತೆ.

ದೇವಾಲಯದಲ್ಲಿ ಇರುವ ಮೂಲ ದೇವರನ್ನು ಮೂಲದವರು ಎನ್ನುತ್ತಾರೆ. ಆ ಮೂಲದೇವರು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿತ. ಮೂಲದೇವರು ಗರ್ಭಗುಡಿಯನ್ನು ಬಿಟ್ಟು ಹೊರಗೆ ಬರಲಾರರು. ಮೂಲದೇವರ ಪ್ರತಿನಿಧಿಯಾಗಿ ಉತ್ಸವ ಮೂರ್ತಿಯೊಂದು (ಅದನ್ನು ಉತ್ಸವರು ಎಂದು ಕರೆಯುವರು) ಪ್ರತಿ ದೇವಾಲಯದಲ್ಲೂ ಇರುವುದು. ಭಕ್ತರು ಅದನ್ನು ಹೊತ್ತು ಊರ ಬೀದಿಗಳಲ್ಲಿ ಮೆರೆಸುತ್ತಾರೆ.
ಕವಿ ಮೂಲಮೂರ್ತಿಯನ್ನು ಬದುಕು ಎಂದು ಕರೆದಿದ್ದಾರೆ. ಮೂಲದವರ ಪ್ರತಿನಿಧಿಯಾದ ಉತ್ಸವಮೂರ್ತಿಯನ್ನು ಕವಿತೆ ಎಂದು ಕರೆದಿದ್ದಾರೆ.
ಇದರಲ್ಲಿ ಯಾವ ಅಸ್ಪಷ್ಟತೆಯೂ ಇಲ್ಲ. ಆದರೆ ಮೂಲದವರು “ಬದುಕು”, ಉತ್ಸವಮೂರ್ತಿ “ಕವಿತೆ” ಎಂಬ ಕವಿಯ ಮಾತನ್ನು ನಾವು ಸ್ವಲ್ಪ ಚಿಂತಿಸಿದಾಗ,  ಓಹೋ! ಈ ಪದ್ಯವು ಮೂಲದವರು ಮತ್ತು ಉತ್ಸವ ಮೂರ್ತಿಯ ನೆಪದಲ್ಲಿ ಜೀವನ ಮತ್ತು ಕವಿತೆಯ ಬಗ್ಗೆ ಏನೋ ಹೇಳುತ್ತಿದೆ ಎಂಬುದು ಹೊಳೆಯುತ್ತದೆ.
ಕವಿತೆಯ ಬಗ್ಗೆ ಮಾತಾಡುವ ಕವಿತೆ ತಾನೇ ಸ್ವತಃ ಕವಿತೆ ಆಗದಿದ್ದರೆ ಹೇಗೆ? ಕವಿ ಎಷ್ಟು ಚೆನ್ನಾಗಿ ಮಾತನ್ನು ಹೆಣೆದಿದ್ದಾರೆ ಗಮನಿಸಿ. ತುಂಬ ಬಿಗಿಯಾಗಿ, ಪದಗಳ ದುಂದು ಮಾಡದೆ, ಕೆಲವು ಸ್ವರಗಳು ಮತ್ತೆ ಮತ್ತೆ ಪುನರಾವರ್ತಿತವಾಗುವಂತೆ ಸಾಲನ್ನು ಕಟ್ಟಲಾಗಿದೆ. ಮೂಲದವರು ಎಂಬಲ್ಲಿ ಬರುವ “ದ”ಕಾರವು, ಬದುಕು ಎಂಬ ಎರಡನೆಯ ಪದದಲ್ಲಿ “ದು” ಎಂಬ ಸ್ವರದಿಂದ ಮತ್ತೆ ಅನುರಣಿತವಾಗುವುದನ್ನು ಗಮನಿಸಿ.
ಹಾಗೇ ಉತ್ಸವ ಎನ್ನುವಾಗ ಬರುವ “ವ”ಕಾರವು, ಕವಿತೆ ಎಂಬ ಪದದಲ್ಲಿ “ವಿ” ಎಂಬ ಸ್ವರದಿಂದ ಮತ್ತೆ ಅನುರಣನಗೊಳ್ಳುತ್ತದೆ. ಒಂದೇ ಬಗೆಯ ಸ್ವರಗಳು ಸಾಲುಗಳು ಸಾಲಿನ ಉದ್ದಕ್ಕೂ ಅನುರಣಿತವಾಗುವುದನ್ನು ನೀವು ಪೆನ್ಸಿಲ್ಲಿನಿಂದ ಗುರುತಿಸಕೊಳ್ಳಬಹುದು. ಇದನ್ನೇ ಪದಮೈತ್ರಿ, ಸ್ವರ ಮೈತ್ರಿ, ಮಾತಿನ ಹೆಣಿಗೆ ಅನ್ನುವುದು.
ಹೊಸ ಹುರುಪು ಹುಟ್ಟುವುದು ಊರ ಬೀದಿಗಳಲ್ಲಿ ಎಂಬ ಇನ್ನೊಂದು ಸಾಲನ್ನು ಗಮನಿಸಿ. ಅದರಲ್ಲಿ “ಹ”ಕಾರ ಮತ್ತೆ ಅತ್ತೆ ಅನುರಣಿತವಾಗುತ್ತಿದೆಯಲ್ಲವೆ? ಪದ್ಯದ ಹೆಣಿಗೆಯಲ್ಲಿ ಸಮಾನ ಸ್ವರಗಳ ಅನುರಣನೆ ಬಹಳ ಮುಖ್ಯವಾದುದು. ಇದನ್ನು ಪ್ರಜ್ಞಾಪೂರ್ವಕವಾಗಿ ಕವಿ ಹೊಸೆಯುವುದಿಲ್ಲ. ಈ ಪದಮೈತ್ರಿ ಅತ್ಯಂತ ಸಹಜವಾಗಿ ಪ್ರಾಪ್ತವಾಗುವುದೆಂಬುದೇ ಕಾವ್ಯದ ಒಂದು ಬೆರಗಿನ ಸಂಗತಿ.ಹೀಗೆ ಅನುರಣಿತವಾಗುವ ಅಕ್ಷರಗಳುಳ್ಳ ಪದಗಳನ್ನು ಒಂದು ಹಾಳತವಾದ ಲಯದಲ್ಲಿ ಕವಿತೆಯಲ್ಲಿ ಹೂಡಲಾಗುವುದು.
Abstract Drawing and Painting Inspired by Dan Eldon, Journeyಕವಿತೆಯನ್ನು ನೀವು ಗಟ್ಟಿಯಾಗಿ, ತಾಳ ಹಿಡಿದು ಓದಿದರೆ ಈ ಅಂಶ ಸುಲಭವಾಗಿಯೇ ನಿಮ್ಮ ಗಮನಕ್ಕೆ ಬರುವುದು. ಕಾವ್ಯವನ್ನು ಹೊಸದಾಗಿ ಪ್ರವೇಶಮಾಡಲು ಹೊರಟ ವಿದ್ಯಾರ್ಥಿಗಳು ಅರ್ಥದ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಾವು ಓದುತ್ತಿರುವ ಪದ್ಯದ ಸಾಲುಗಳಲ್ಲಿ ಒಂದೇ ಬಗೆಯ ಸ್ವರಾಕ್ಷರಗಳು ಹೇಗೆ ಸಹಜವಾಗಿ ಬಂದಿವೆ ಎಂಬುದನ್ನು ಮೊದಲು ಗುರುತಿಸಿಕೊಳ್ಳಬೇಕು. ಆಮೇಲೆ ಪದ್ಯವನ್ನು ಲಯ ಹಿಡಿದು ಓದುವ ಯತ್ನ. ನೀವು ಪದ್ಯದ ಲಯ ಹಿಡಿದು ಓದುವುದನ್ನು ಅಭ್ಯಾಸ ಮಾಡಿದರೆ ಕವಿತೆ  ಶೇ. ಐವತ್ತರಷ್ಟು ನಿಮ್ಮ ಕೈವಶವಾದಂತೆಯೇ ಸರಿ.

ದೇವಾಲ| ಯದ ಹಿಂದೆ| ಹರಿಯುವುದು| ತುಂಬು ಹೊಳೆ|

ಈ ಸಾಲಿನಲ್ಲಿ ಹೀಗೆ ಐದು ನಿಯತವಾದ ಲಯದ ಘಟಕಗಳಿವೆ. ಇವನ್ನು ಐದು ಐದು ಮಾತ್ರೆಗಳ ಘಟಕಗಳು ಎಂದು ಛಂದಸ್ಸು ಬಲ್ಲವರು ಗುರುತಿಸುತ್ತಾರೆ. ಆದರೆ ಆರಂಭದ ವಿದ್ಯಾರ್ಥಿಗೆ ಈ ಮಾತ್ರೆಗಳ ಲೆಕ್ಖಾಚಾರದ ಕಾಗುಣಿತ ಬೇಡ. ಈ ಲಯದಲ್ಲಿ ಇಡೀ ಪದ್ಯವನ್ನೇ ಮತ್ತೆ ಮತ್ತೆ ಓದುವ ಯತ್ನ ನಡೆಯಲಿ. ಆಗ, ಹೇಗೆ ಇದೊಂದು ನಿಯತ ಲಯದ ರಚನೆ ಎಂಬುದು ತಿಳಿಯುವುದು.  ಪದ ಮೈತ್ರಿ ಮತ್ತು ನಿಯತ ಲಯ ಎಂಬುದು ನಮ್ಮ ಕವಿಗಳು ಕವಿತೆಯ ರಚನೆಯಲ್ಲಿ ಸಾವಿರಾರು ವರ್ಷಗಳಿಂದ ಸಾಧಿಸಿಕೊಂಡು ಬಂದಿರುವ ಪರಿಣತಿ. ಪದ್ಯದ ಗ್ರಹಿಕೆಗೆ ಈ ಎರಡು ಮೂಲ ಅಂಶಗಳನ್ನು ಮನನ ಮಾಡುವುದು ಅತ್ಯಗತ್ಯ.

ಕೆ.ಎಸ್.ನ. ಅವರ ಕವಿತೆಯಲ್ಲಿ, ಒಂದು ದೇವಾಲಯ, ದೇವಾಲಯದ ಗರ್ಭಗುಡಿಯಲ್ಲಿ ಇರುವ ಮೂಲ ಮೂರ್ತಿ, ಆ ಮೂಲಮೂರ್ತಿಗೆ ನಡೆಯುವ ಅಭಿಷೇಕ, ಪೂಜೆ ಪುರಸ್ಕಾರ, ಅರ್ಚಕರು, ಭಕ್ತರ ಸಂದಣಿ, ಆಮೇಲೆ ಉತ್ಸವ ಮೂರ್ತಿಯನ್ನು ಹೊತ್ತು ಊರ ಮುಖ್ಯ ಬೀದಿಗಳಲ್ಲಿ ಮೆರೆಸುವುದು, ಉತ್ಸವ ಮುಗಿದ ಮೇಲೆ ಉತ್ಸವ ಮೂರ್ತಿಯನ್ನು ದೇವಾಲಯಕ್ಕೆ ಪುನಃ ತಂದು ಮೂಲಮೂರ್ತಿಯ ಸನಿಹ ಅದನ್ನು ಇರಿಸುವುದು-ಈ ಎಲ್ಲ ವಿವರಗಳು ಬರುತ್ತವೆ.

ಈ ವಿವರಗಳನ್ನು ನೀವು ಕಣ್ಣ ಮುಂದೆ ತಂದುಕೊಳ್ಳಿ. ಆದರೆ ದೇವಾಲಯ, ದೇವ ಮೂರ್ತಿಗಳು, ಪೂಜೆ ಪುರಸ್ಕಾರ, ಜನರ ಸಂಭ್ರಮ, ಉತ್ಸವ-ಇವುಗಳನ್ನು ಹೇಳುವುದು ಕವಿತೆಯ ಉದ್ದೇಶವಾಗಿಲ್ಲ. ನೀವೇ ನೋಡಿ. ದೇವಾಲಯ ಉತ್ಸವಕ್ಕೆ ಎಷ್ಟು ಮಾತ್ರಕ್ಕೂ ಸಂಬಂಧಿಸದ ಅನೇಕ ಶಬ್ದಗಳು ಪದ್ಯದ ಉದ್ದಕ್ಕೂ ಬರುತ್ತಾ ಇವೆ. ಬದುಕು, ತಿಳಿದವರು, ತಿಳಿಯದವರು, ಮೂಲದವರ ಮುಟ್ಟುವ ಪುಟ್ಟ ಮಗು, ದೇವಾಲಯದ ಹಿಂದೆ ಹರಿಯುವ ತುಂಬು ಹೊಳೆ, ಗೋಪುರದ ಮೇಲೆ ತಂಗುವ ಬಗೆ ಬಗೆ ಹಕ್ಕಿ, ಮೂಲ ಭಾವನೆಗಳಿಗೆ ತಲೆ ಬಾಗುವ ಕವಿತೆ, ಕಂಬನಿ, ಕರವಸ್ತ್ರ, ಕವಿತೆ ಇತ್ಯಾದಿ.

ವರ್ಣಿಸಲಾಗುತ್ತಿರುವ ಸಂಗತಿಗೆ ತೀರ ನಿಕಟವಲ್ಲದ ಆಗಂತುಕರಂತೆ ಇಂಥ ಪದಗಳು , ಪದಗುಚ್ಛಗಳು ಕವಿತೆಯ ನೇಯ್ಗೆಯನ್ನು ಸಿದ್ಧಪಡಿಸಿವೆ. ಅಂದರೆ ಕವಿಯ ಅಪೇಕ್ಷೆ ದೇವಾಲಯದ ಬಗ್ಗೆ ಮಾತ್ರವಲ್ಲ ಕವಿತೆಯ ಬಗ್ಗೆಯೂ ಹೇಳುವುದು! ಅದಕ್ಕಿಂತ ಹೆಚ್ಚಾಗಿ ಬದುಕಿಗೇ ಒಂದು ಭಾಷ್ಯ ಬರೆಯುವುದು! ಆ ಬದುಕಿನಲ್ಲಿ ಕವಿತೆಯ ಕರ್ತವ್ಯವೇನು ಎಂದು ಚಿಂತಿಸುವುದು!

ನೋವು ಕಂಬನಿ ಬದುಕು; ಕರವಸ್ತ್ರ ಕವಿತೆ.
ಕವಿತೆ ಬದುಕಿಗೆ ಸಮಾಧಾನ ಹೇಳುವುದು.

ನೋವನ್ನು ನಿವಾರಿಸುವುದು, ಕಂಬನಿಯನ್ನು ಒರೆಸುವುದು ಕವಿತೆಯೆಂಬ ಕರವಸ್ತ್ರದ ಕರ್ತವ್ಯ ಎಂಬುದು ನರಸಿಂಹಸ್ವಾಮಿಯವರ ಜೀವನ ಮತ್ತು ಕಾವ್ಯಚಿಂತನೆ. ರುದಿತಾನುಸಾರೀ ಕವಿಃ ಎಂದು ಎಂಬ ಮಾತು ಸಂಸ್ಕೃತ ಕಾವ್ಯದಲ್ಲಿ ಬರುತ್ತಿದೆಯಲ್ಲ! ಕಂಬನಿಯನ್ನು ಹಿಂಬಾಲಿಸುವವನೇ ಕವಿ! ಕಂಬನಿ ಬದುಕು; ಕವಿತೆ ಆ ಕಂಬನಿಯನ್ನು ಒರೆಸುವ ಕರವಸ್ತ್ರ!-ಎಂಬುದಾಗಿ ಹೊಸ ಭಾಷೆಯಲ್ಲಿ ಕವಿ ತಮ್ಮ ಕಾವ್ಯಚಿಂತನೆಯನ್ನು ಮಂಡಿಸುತ್ತಿದ್ದಾರೆ.

pain paintingಈ ಹಿನ್ನೆಲೆಯಲ್ಲಿ ಮತ್ತೆ ಮತ್ತೆ ಏಕಾಂತದಲ್ಲಿ ಕುಳಿತು ನಾವು ಕೆ ಎಸ್ ನ ಅವರ ಕವಿತೆಯನ್ನು ಓದಿಕೊಂಡರೆ ನಿಧಾನಕ್ಕೆ ಕವಿತೆಯ ಅನುಭವ ನಮ್ಮ ಅಂತರಂಗಕ್ಕೆ ಇಳಿಯುವುದು. ಕವಿತೆಯ ಭೀತಿಯನ್ನು ಗೆಲ್ಲುವ ಸಾವಧಾನದ ಉಪಾಯವಿದು! ಅರ್ಥಕ್ಕೆ ತಲೆಕೆಡಿಸಕೊಳ್ಳದಿರುವುದು. ಪದ ಮೈತ್ರಿಯನ್ನು ಗುರುತಿಸಿ ಗುರುತಿಸಿ ಸಂತೋಷಪಡುವುದು. ಓದುವ ಮಟ್ಟನ್ನು ಕಂಡುಕೊಳ್ಳುವುದು. ಹೇಳುತ್ತಿರುವ ವಿಷಯದ ಬಗೆಗಿನ ಶಬ್ದಗಳು, ಸೂಚಿಸುತ್ತಿರುವ ವಿಷಯದ ಬಗೆಗಿನ ಶಬ್ದಗಳು ಇವನ್ನು  ಪ್ರತ್ಯೇಕಿಸಿ ಗುರುತಿಸಿಕೊಳ್ಳುವುದು. ಆಮೇಲೆ ಒಂದಕ್ಕೆ ಒಂದನ್ನು ಸಂಬಂಧಿಸಿ ಕವಿತೆಯ ಧ್ವನ್ಯಾರ್ಥವನ್ನು ಗ್ರಹಿಸಿವುದು!

ಕವಿತೆಯ ಗ್ರಹಿಕೆ ಎಂಬುದು ಕವಿತೆಯ ಶಬ್ದ ಸಾಮಗ್ರಿಯಿಂದ ನೀವೇ ಸ್ವಂತ ಕಟ್ಟಿಕೊಂಡ ಗ್ರಹಿಕೆ ಎಂಬುದನ್ನು ಮರೆಯದಿರಿ. ಈ ಪದ್ಯದ ಇನ್ನೊಬ್ಬ ಓದುಗ ಭಿನ್ನವಾದ ಬೇರೆ ಒಂದು ಗ್ರಹಿಕೆಯನ್ನೇ ತನ್ನ ಓದಿನಿಂದ ಕಟ್ಟಿಕೊಂಡರೆ ನೀವು ಆತಂಕಗೊಳ್ಳಬೇಕಿಲ್ಲ. ಸದ್ಯಕ್ಕೆ ಇದು ನಿಮ್ಮ ಕಾವ್ಯ ಗ್ರಹಿಕೆ. ಮುಂದೆ ನಿಮ್ಮ ಓದು ಪರಿಷ್ಕಾರಗೊಂಡಂತೆ ಕವಿತೆ ಬೇರೊಂದು ವಿಭಿನ್ನವಾದ ಗ್ರಹಿಕೆಯನ್ನೇ ಕಟ್ಟಿಕೊಳ್ಳಬಲ್ಲುದು. ಕವಿತೆ ಒಂದೇ; ಆದರೆ ಅದರ ಗ್ರಹಿಕೆಗಳೂ ಅನಂತ. ಈ ನಂಬಿಕೆ ಮತ್ತು ವಿಶ್ವಾಸದೊಂದಿಗೆ ಹೊಸ ಕಾವ್ಯಾರ್ಥಿಗಳು ತಮ್ಮ ಕಾವ್ಯ ಶೋಧವನ್ನು ಮುಂದುವರೆಸಲಿ. ಕವಿತೆಯೆಂಬುದು ನಿರಂತರ ವಿಕಸನಶೀಲವಾದ ಒಂದು ಜೈವಿಕ ಭಾಷಾನುಸಂಧಾನ ಎಂಬ ಅರಿವು ನಿಮಗಿರಲಿ.

ಪದ್ಯದ ಪೂರ್ಣ ಪಾಠ

ಬದುಕು – ಕವಿತೆ
ಕೆ.ಎಸ್.ನರಸಿಂಹಸ್ವಾಮಿ

ಮೂಲದವರು ಬದುಕು. ಉತ್ಸವ ಮೂರ್ತಿ ಕವಿತೆ.
ಹೂವು ಆಭರಣಗಳ ಗೊಂದಲವೋ ಗೊಂದಲ!
ಅರ್ಧ ಕತ್ತಲೆಯಲ್ಲಿ ಮೂಲದವರಿಗಭಿಷೇಕ.
ದೇವಾಲಯದ ಹಿಂದೆ ಹರಿಯುವುದು ತುಂಬು ಹೊಳೆ.
ಗೋಪುರದ ಮೇಲೆ ತಂಗುವುದು ಬಗೆ ಬಗೆ ಹಕ್ಕಿ.
ರಾಜಬೀದಿಗಳಲ್ಲಿ ಮೆರವಣಿಗೆ ಹೊರಡುವುದು,
ತಿಳಿದವರ ಜೊತೆಗೆ ತಿಳಿಯದ ಮಂದಿ ಸೇರುವರು,
ದಾರಿ ಬಿಡಿ ದಾರಿ ಬಿಡಿ ಎಂದು ಕೂಗಾಡುವರು.
ಪ್ರಾಕಾರದೊಳಗೆ ಮಂದಿಯ ಸಡಗರವೋ ಸಡಗರ!
ದೇವರನು ತೇರಿನಿಂದಿಳಿಸಿ ಕೈಮುಗಿಯುವರು.
ಮೂಲದವರು, ಉತ್ಸವರು, ಗುಡಿಯೊಳಗೆ ಸೇರುವರು.
ಕರ್ಪೂರದಾರತಿಯ ಬೆಳಗುವರು ಪುರೋಹಿತರು.
ಚಪ್ಪಾಳೆ ತಟ್ಟುವರು. ಮೂಲವರ ಮುಟ್ಟುವುದು
ಪುಟ್ಟ ಮಗು ನಗು ನಗುತ. ಇದು ಬದುಕು!

ಪ್ರತಿ ವರುಷ ನಡೆಯುವುದು ಇಂಥ ಉತ್ಸವ ಇಲ್ಲಿ.
ಹೊಸ ಹುರುಪು ಹುಟ್ಟುವುದು ಊರ ಬೀದಿಗಳಲ್ಲಿ.
ಮೂಲ ಭಾವನೆಗಳಿಗೆ ಕವಿತೆ ತಲೆಬಾಗುವುದು.
ಮೌನದಲಿ ಹರಡಿಕೊಳ್ಳುವುದು ಸಂತಸ, ಚೆಲುವು.
ನೋವು ಕಂಬನಿ ಬದುಕು; ಕರವಸ್ತ್ರ ಕವಿತೆ.
ಕವಿತೆ ಬದುಕಿಗೆ ಸಮಾಧಾನ ಹೇಳುವುದು.

3 Comments

  1. Sangeeta Kalmane
    October 23, 2016
  2. Sarojini Padasalagi
    October 22, 2016
  3. S.p.vijaya Lakshmi
    October 22, 2016

Add Comment

Leave a Reply