Quantcast

ಮೀನಿಗೆ ಉಪ್ಪು, ಹುಳಿ ಹಾಕಿ ಕಡುಬು ತಿನ್ನುವಾಗ..

nempe-devarajನೆಂಪೆ ದೇವರಾಜ್

ಸಾಮಾನ್ಯವಾಗಿ ಮುಂಗಾರು ಮಳೆ ಬಂದು ನಾಲ್ಕೈದು ದಿನಗಳ ಕಾಲ ಹೊಡೆವ ಮೃಗಾಶಿರಾ ಮಳೆಗೆ ಎಲ್ಲರ ಗಡಿಗೆಯಲ್ಲಿ ಸ್ವಲ್ಪವೇ ಮೀನಿನ ಪರಿಮಳ ಹೊರಹೊಮ್ಮುತ್ತಾ ಹೋಗುತ್ತದೆ.

ಮೀನು ಕಡಿವವರು ಈ ಬಾರಿಯ ಮೀನುಗಳ ಮೇಲೆ ಹೊಸ ಹೊಸ ವಿಧಾನದಿಂದ ದಾಳಿ ಇಡುವ ಹೊಸ ಹೊಸ ಆವಿಷ್ಕಾರಗಳ ಬಗ್ಗೆ ಯೋಚಿಸಲಾರಂಭಿಸುತ್ತಾರೆ.

ಹಳ್ಳಕ್ಕೆ ಸ್ವಲ್ಪ ಮಳೆ ಬಿದ್ದಾಗಲೇ ಕಾರೇಡಿಗಳು ಹೊರಬರಲಾರಂಭಿಸುತ್ತವೆ. ಈ ಎರಡೋ ಮೂರೋ ಕಾರೇಡಿಗಳು ಸಿಕ್ಕದ್ದನ್ನೇ ಸವಿವರವಾಗಿ ಹೇಳುತ್ತಾ ರೋಚಕತೆ ನೀಡುತ್ತಾ ಮೈಮರೆಯುವವರಿಗೆ ಕೊರತೆ ಏನಿಲ್ಲ. ಬ್ಯಾಟರಿ ಬೆಳಕಲ್ಲಿ, ಗ್ಯಾಸು ಲೈಟಿನಲ್ಲಿ, ಗದ್ದೆ ತುಂಬಾ ಓಡಾಡಿ ಹಳ್ಳದೊಳಗಿನ ಬಿಲವನ್ನೆಲ್ಲ ಶೋಧಿಸುತ್ತಾ ಒಂದೇ ಒಂದು ಕಾರೇಡಿ ಹಿಡಿದು ಮನೆ ಸೇರುವವರ ಸಂಖ್ಯೆಯೇ ಜಾಸ್ತಿ.

ಪಾತಾಳ ಗರಡಿ ಹಾಕಿಯಾದರೂ ಮೀನನ್ನು ಶೋಧಿಸಿ ಕಡಿಯಲು ಅಣಿಯಾಗುವ ಮತ್ಸ್ಯ ಪರಿಣಿತರಾದ ಕೆಲವರು ಬಾಯಿ ಬಿಡುವುದೇ ಇಲ್ಲ. ಗಡುಗೆ ತುಂಬಾ ಮಾಡಿದ್ದ ಬತ್ತಿಸಿದ್ದ ಮೀನು ತಿಂದು ಜೀರ್ಣವಾಗಿ ಘನ ತ್ಯಾಜ್ಯ ಮಣ್ಣು ಸೇರಿದ ನಾಲ್ಕೋ ಐದೋ ದಿನದ ನಂತರ ತಮ್ಮ ಶಿಕಾರಿಯ ಬಗ್ಗೆ ಸಾವಧಾನದಿಂದ ವಿವರಿಸುವವರದು ಒಂದು ಮನಸ್ಥಿತಿ. ಮತ್ತೊಂದಷ್ಟು ಜನ ತಮಗಾದ ಶಿಕಾರಿಯ ಸೊಗಸುಗಾರಿಕೆಯನ್ನು ಹೇಳಲು ಒಂದು ವರ್ಷವನ್ನೇ ತೆಗೆದುಕೊಂಡು ಬಾಯಿ ಬಿಟ್ಟು ಜನರ ಬಾಯಲ್ಲಿ ನೀರೂರಿಸುತ್ತಾ ಮತ್ತೊಂದು ಬೇಟೆಗೆ ಅಣಿಯಾಗಗುವವರೂ ಇದ್ಧಾರೆ.

ಇವರೆಲ್ಲ ವೃತ್ತಿ ಪರರಲ್ಲ. ಇವರ ಚಟುವಟಿಕೆಗಳೇನಿದ್ದರೂ ಮೀನು ಹತ್ತುವ ಸಮಯದಲ್ಲಿ ಮಾತ್ರ. ಹತ್ತು ಮೀನಿನ ಬಗ್ಗೆ ನಮ್ಮ ಸುತ್ತ ಮುತ್ತಲಿನ ಕೆಲವರು ತೆಗೆದುಕೊಳ್ಳುವ ಸವಾಲು ಬಹಳ ಕುತೂಹಲ ಹುಟ್ಟಿಸುವಂತದ್ದು. ರಾತ್ರಿ ಬೀಸುವ ಗಾಳಿಮಳೆಯ ಮಳೆಯ ದೆಸೆಯಿಂದ ಮನೆಯಿಂದ ಹೊರಗೆ ಇಡೀ ರಾತ್ರಿ ಮೀನಿಗಾಗಿ ನಡು ನೀರಲ್ಲಿ ಕಾಲ ಕಳೆವುದಿರಲಿ, ಆ ಮರಗಟ್ಟಿಸುವ ಥಂಡಿಯಲ್ಲಿ ಇಣುಕಿ ನೋಡಲೂ ಹೆದರುವಂತಹ ಕಾಲ.

ಕೆಲವರ ಮೀನಿನ ಹಂಬಲಕ್ಕೆ ಒಂದು ಕಾರಣವೂ ಇದೆ. ಮುಂಗಾರು ಮಳೆಯಲ್ಲಿ ಸಿಕ್ಕ ಮೀನು ಸಣ್ಣದಿರಲಿ ದೊಡ್ಡದಿರಲಿ ಈ ಎಲ್ಲ ಮೀನುಗಳೂ ಉದರದೊಳಗೆ ಇಟ್ಟುಕೊಂಡ ತತ್ತಿಯೇ ಇವರುಗಳ ಈ ಬೇಗಾಟಕ್ಕೆ ಕಾರಣ. ಈ ಸಂದರ್ಭದಲ್ಲಿ ಸಿಗುವ ಮೀನಿಗೆ ಉಪ್ಪು, ಹುಳಿ, ಖಾರ ಹಾಕಿ ಸಾರು ಮಾಡಿ ಕಡುಬು ತಿನ್ನುವಾಗ ದೊರೆವ ರುಚಿ ಬೇರಾವ ಸಂದರ್ಭದಲ್ಲೂ ಸಿಗದು.

ಕಗ್ಗತ್ತಲ ನಡು ರಾತ್ರಿ ಹಿಡಿದುಕೊಂಡು ಬಂದ ಮೀನುಗಳಿಗೆ ಅಡುಳಿ (ಕಪ್ಪು ವೈನಿನಂತೆ ಕಂಗೊಳಿಸುವ ಅಡುಳಿಯನ್ನು ದಿರ್ಕ ಎಂಬ ಸೇಬಿನಾಕಾರದ ಹಳದಿ ಹಣ್ಣುಗಳಿಂದ ತಯಾರಿಸಲಾಗುತ್ತದೆ. ಒಂದು ಗೊಬ್ಬರದ ಹೆಡಿಗೆ ಹಣ್ಣುಗಳನ್ನು ಕ್ವಿಂಟಾಲು ಗಟ್ಟಲೆ ಕಟ್ಟಿಗೆಗಳಿಂದ ಬೇಯಿಸಿ ಅದರ ರಸವನ್ನು ತೆಗದು ವರ್ಷಾನುಗಟ್ಟಲೆ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಇದರ ನಾಲ್ಕು ಹನಿಗಳು ಐದು ನಿಂಬೆಹಣ್ಣುಗಳ ಹುಳಿಗೆ ಸರಿ ಸಮಾನ.) ಖಾರ ಮಿಶ್ರಿತ ಮೀನು ಸಾರನ್ನು ಬೆಳಿಗ್ಗೆಯ ಕಡುಬಿಗೆ ಹಾಕಲ್ಪಟ್ಟಾಗ ಇತರೆ ದಿನಗಳಲ್ಲಿ ಅಮ್ಮಮ್ಮ ಎಂದರೆ ಮೂರ್ನಾಲ್ಕು ಕಡುಬುಗಳಿಗೆ ತೃಪ್ತಿ ಹೊಂದುವ ಮಂದಿ ಹತ್ತು ಕಡುಬು ತಿಂದರೂ ಬಟ್ಟಲು ಬಿಟ್ಟು ಮೇಲೇಳಿಸದಷ್ಟು ಮಾದಕವಾದ ಸೆಳೆತವಿರುತ್ತದೆ.

ಮುಂಗಾರು ಸತತ ನಾಲ್ಕಾರು ದಿನಗಳ ಕಾಲ ಹೊಡೆದರೆ ಒಂದಷ್ಟು ಜಾತಿಯ ಮೀನುಗಳು ಹತ್ತುವುದು ಸಾಮಾನ್ಯವಾದ ಸಂಗತಿಯಾದರೆ, ಜಿಟಿ ಜಿಟಿಯಾಗಿ ಸಂಜೆ ಮಳೆ ಸುರಿದರೆ ತುಂಗಾ ನದಿಯನ್ನು ಸಹಸ್ರ ಸಂಖ್ಯೆಯಲ್ಲಿ ಹಾಲುಗುಸುಬ ಎಂಬ ಜಾತಿಯ ಮೀನುಗಳು ತುಂಬಿಕೊಳ್ಳುವುದು ಆಸಕ್ತಿದಾಯಕ ಇನ್ನೊಂದು ಸಂಗತಿ. ಈ ಮೀನುಗಳು ನೋಡಲು ಹಾಲಿನಷ್ಟು ಬಿಳಿ.

ತುಂಗಾ ನದಿ ತನ್ನ ಸ್ಪಟಿಕ ಶುಭ್ರತೆ ಕಳೆದು ಕೆಂಪಾಗಲು ಹಾತೊರೆವ ಕಾಲ. ಅಲ್ಲಲ್ಲಿ ಇರುವ ಬಂಡೆಗಳು ತಮ್ಮನ್ನು ಇನ್ನೂ ಮುಳುಗಿಸಿಕೊಂಡಿರುವುದಿಲ್ಲ. ಬೃಹದಾಕಾರದ ಮರಿಯಾನೆಗಳ ತರಹದ ಬಂಡೆಗಳ ಬುಡಕ್ಕೆ ನೀರು ಕೆಮ್ಮಣ್ಣು ಮೆತ್ತಿದಂತೆ ಕಾಣುತ್ತಿರುತ್ತವೆ.

ಮೀನು ಶಿಖಾರಿದಾರರೋ.. ಅಥವಾ ಅದೂ ಹೊಳೆಯ ಪಕ್ಕದಲ್ಲಿರುವರಿಗೆ ಇವುಗಳ ಓಡಾಟ ಗದ್ದಲ, ಮುಳುಗಾಟ ಯಾವುದೂ ಸ್ವಲ್ಪ ಸ್ವಲ್ಪವೇ ಆಗುತ್ತಿರುವ ಅವಿಶ್ರಾಂತ ಜಿಗುಟು ಮಳೆಯ ಕಳಕು ನೀರಿನಲ್ಲಿ ಕಾಣಿಸುವಂತದ್ದಲ್ಲ. ಆದರೂ ಅನುಭವ ಮತ್ತು ಅಂದಾಜಿನ ಮೇಲೆ ತುಂಗಾ ನದಿಗೆ ಅಡ್ಡಲಾಗಿ ಈ ಮೀನುಗಳಿಗಾಗಿಯೇ ತಯಾರಿಸಿರುವ ಬಲೆಯನ್ನು ಸಂಜೆ ಐದು ಆರರ ಸಮಯದಲ್ಲಿ ಹಾಕುತ್ತಾರೆ.

ಸಾಮಾನ್ಯವಾಗಿ ಮೀನುಗಳು ಒಂದು ಬಲೆಯಲ್ಲಿ ಬರೋಬ್ಬರಿ ಎಂದರೆ ಹತ್ತೋ ಹನ್ನೆರಡೋ ಕೆಜಿ ಸಿಕ್ಕರೆ ಅದೇ ಬಹು ದೊಡ್ಡ ಹಬ್ಬ. ಆದರೆ ನಿರ್ಧಿಷ್ಟ ಸಮಯದಲ್ಲಿ ಹೊಳೆಯ ಮೇಲ್ಭಾಗಕ್ಕೆ ಬರುವ ಹಾಲು ಬಣ್ಣದ ಕುಸುಬಗಳು ತಮ್ಮ ಒಡಲಿನ ತತ್ತಿ ಹೊತ್ತುಕೊಂಡು ಸಹಸ್ರ ಸಂಖ್ಯೆಯಲ್ಲಿ ಸೇರುತ್ತವೆ. ಅದಾವ ಕಾರಣಕ್ಕೆ ಸಹಸ್ರ ಸಂಖ್ಯೆಯ ಮೀನುಗಳು ಬರುತ್ತವೆ ಎಂಬುದು ಗೊತ್ತಿಲ್ಲದಿದ್ದರೂ ತತ್ತಿ ಉಲುಬಲೋ… ಬೆದೆ ಹತ್ತಿಯೋ,… ಶರವೇಗದಲ್ಲಿ ಜಾಗದ ಹುಡುಕಾಟಕ್ಕೆ ಬರುತ್ತಿರಬಹುದು ಎಂಬುದು ಲಾಗಾಯ್ತಿನ ಮೀನು ಪ್ರಿಯ ಶಿಖಾರಿದಾರರ ಅಂಬೋಣ.

ತುಂಬಿದ ಬಸುರಿಯರಿಗಿರುವ ಬಯಕೆಯ ಕಾರಣವನ್ನೂ ಅಲ್ಲಗಳೆಯಲಾಗದ ಸಂಗತಿ. ನಮ್ಮ ಊರಿನ ಹವ್ಯಾಸಿ ಬಲೆಗಾರರು ಈ ಸಂದರ್ಭದಲ್ಲಿ ಹಾಲುಗುಸುಬಗಳನ್ನು ಕ್ವಿಂಟಾಲು ಗಟ್ಟಲೆ ಹಿಡಿದು ಮೀನ ಹಸಿವನ್ನು ನೀಗಿಸಿಕೊಳ್ಳುವುದು ಮಾತ್ರವಲ್ಲ ಹೆಚ್ಚಾದ ಬಾರೀ ಮೀನುಗಳನ್ನು ಗೊಬ್ಬರ ಗುಂಡಿಯಲ್ಲಿ ಹುಗಿದದ್ದನ್ನು ತಿಂದ ಮೂರ್ನಾಲ್ಕು ವರ್ಷಗಳ ನಂತರ ಬಾಯಿ ಬಿಟ್ಟಿದ್ದೂ ಉಂಟು.

ಈ ಮೀನುಗಳು ಹತ್ತುವುದನ್ನು ಕಂಡು ಹಿಡಿಯುವಿಕೆ ಮಳೆ ಬೀಳುವ ಪ್ರಮಾಣದ ಮೇಲೆ ಅವಲಂಭಿತವಾಗಿರುತ್ತದೆ. ಸಂಜೆ ಐದು ಮತ್ತು ಆರು ಗಂಟೆಗಳ ನಡುವೆ ಮೀನುಗಳ ಮೆರವಣಿಗೆ ಹೊರಡುವುದನ್ನು ಊಹಿಸಿ ಬಲೆ ಬೀಸುತ್ತಾರೆ. ಸ್ಥಳೀಯ ಪರಿಜ್ಞಾನ ಸ್ವಲ್ಲ ಕೈಕೊಟ್ಟರೂ ಮೀನುಗಳು ಮಂಗಮಾಯವಾಗುತ್ತವೆ. ಕಳೆದ ಐದಾರು ವರ್ಷಗಳಿಂದ ಈ ರೀತಿಯ ಮೀನುಗಳ ಬೇಟೆಯಲ್ಲಿ ಯಶಸ್ಸು ಸಾಧಿಸಿದ ನಮ್ಮೂರ ಬೇಟೆಗಾರರು ಈ ಒಂದೆರಡು ವರ್ಷಗಳಲ್ಲಿ ಇವುಗಳನ್ನು ಸೆರೆ ಹಿಡಿವಲ್ಲಿ ಸತತ ಸೋಲಿನ ಸುಳಿಯಲ್ಲಿ ಸಿಕ್ಕು ಸುಯುಲು ಮರುಗುತ್ತಿದ್ದಾರೆ. ಮೀನು ಸಿಕ್ಕ ಬಗ್ಗೆ ಬಾಯಿ ಬಿಟ್ಟರೆ ಮುಂಬರುವ ದಿನಗಳಲ್ಲಿ ಮೀನಿನ ದಾರಿದ್ರ್ಯ ಉಂಟಾಗುತ್ತದೆ ಎಂಬ ಭಾವನೆಯನ್ನು ತಮ್ಮಷ್ಟಕ್ಕೆ ತಾವು ಬೆಳೆಸಿಕೊಂಡರಲೂ ಸಾಕು.

ಹಾಲುಗುಸುಬಗಳು ಈ ಪ್ರಮಾಣದಲ್ಲಿ ಸಿಕ್ಕ ಮೇಲೆ ತಮ್ಮ ನೆಂಟರಿಷ್ಟರು, ಸ್ನೇಹಿತರು ಇವರಿಗೆಲ್ಲ ಹಂಚುತ್ತಾರೆ ಎಂದು ತಿಳಿದರೆ ಅದು ತಪ್ಪಾಗುತ್ತದೆ. ಕ್ವಿಂಟಾಲು ಗಟ್ಟಲೆ ಮೀನುಗಳನ್ನು ಮನೆ ಮಂದಿಯಲ್ಲ ತಿಂದು ಉಳಿಯುವುದು ಮಾಮೂಲಿ. ಇಂತಹ ಸಮೃದ್ದ ಸ್ಥಿತಿಯಲ್ಲೂ ತಮಗೆ ಹೆಚ್ಚಾಗುವ ಮೀನುಗಳನ್ನು ಹಂಚುವುದನ್ನು ಮಾತ್ರ ಇವರುಗಳು ಇಷ್ಟ ಪಡುವುದಿಲ್ಲ. ನಾಯಿ ನರಿಗಳಿಗೆ ಹಾಕುತ್ತಾರೆ.

ಪುಕ್ಕಟೆಯಾಗಿ ನೆರೆಮನೆ ಅಥವಾ ಸ್ನೇಹಿತರುಗಳಿಗೆ ಕೊಟ್ಟರೆ ಮುಂದಿನ ದಿನಗಳಲ್ಲಿ ಮೀನು ಸಿಗುವುದಿಲ್ಲ ಎಂಬ ನಂಬುಗೆ ಹವ್ಯಾಸಿ ಬೇಟೆಗಾರರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ದೊಡ್ಡ ಶಿಕಾರಿಯಲ್ಲಿ ಹಂದಿ ಕಡವೆ ಹೊಡೆದಾಗಲೂ ಇದೇ ಪದ್ದತಿಯನ್ನು ಅನೂಚಾನವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರಾದ್ದರಿಂದ ಇದು ಹೊಸ ವಿಚಾರವಲ್ಲ. ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲೂ ಹೋಗುವುದಿಲ್ಲ. ಈಗೀಗ ಮಧ್ಯಮ ವರ್ಗದವರ ಮನೆಯಲ್ಲೆಲ್ಲ ಫ್ರಿಜ್ಜು ಇರುವುದರಿಂದ ದೊಡ್ಡ ಪ್ರಮಾಣದ ಶಿಕಾರಿಯಾದಾಗ ಗೊಬ್ಬರ ಗುಂಡಿಗೆ ಎಸೆವ ಸಮಸ್ಯೆಯಾಗುತ್ತಿಲ್ಲ.

ಈ ಮೀನುಗಳ ಬಗ್ಗೆ ಪರಿಣಿತಿ ಹೊಂದಿರುವ ಹೊನ್ನಾನಿ ದೇವರಾಜ್ ‘ಸಂಜೆ ಐದು ಗಂಟೆಗೆ ಬಲೆ ಹಾಕಬೇಕು. ಆರು ಗಂಟೆಯೊಳಗೆ ಮೇಲೆತ್ತಬೇಕು. ಆ ನಂತರ ಬಲೆ ಹಾಕಿದರೂ ಸಿಗುವುದಿಲ್ಲ. ಸಂಜೆ ಐದಕ್ಕಿಂತ ಮೊದಲೂ ಹಾಕಬಾರದು. ಮಳೆಯೂ ಸಹಾ ಅತಿ ಹೆಚ್ಚಾಗಬಾರದು. ರಭಸವಾಗಿ ಮಳೆ ಬಿದ್ದು ಹೊಳೆ ಏರಿದರೆ ಪ್ರಯೋಜನವಿಲ್ಲ. ಇಡೀ ಮೀನಿನ ಸಮೂಹದಲ್ಲೇ ತತ್ತಿ ತುಂಬಿದ ಈ ಮೀನುಗಳ ರುಚಿ ಬೇರಾವ ಮೀನುಗಳಿಗೂ ಇಲ್ಲ’ ಎನ್ನುತ್ತಾರೆ.

ಕ್ವಿಂಟಾಲುಗಟ್ಟಲೆ ಮೀನುಗಳು ಸಿಕ್ಕ ಸುದ್ದಿ ಮೀನು ಹಿಡಿಯಲು ಹೋದವರಿಗಷ್ಟೇ ಗೊತ್ತಾಗುವಂತೆ ಎಲ್ಲ ಮುತುರ್ವಜಿಗಳನ್ನು ವಹಿಸಿದರೂ ಬೆಳಗು ಹರಿಯುವ ಮುನ್ನವೇ ಇಡೀ ಊರಿನ ಸುದ್ದಿಯಾಗುವುದು ಮಾತ್ರ ಹವ್ಯಾಸಿ ಬಲೆಗಾರರಿಗೆ ವಿಸ್ಮಯಕಾರಕ ಸಂಗತಿ.

ತಮಗೆ ಗೊತ್ತಿಲ್ಲದಿದ್ದರೂ ಒಂದು ಅಂದಾಜಿನ ಪ್ರಕಾರ ಯಾರಾದರೊಬ್ಬ ಬಾರೀ ಮೀನು ನಿನ್ನೆ ರಾತ್ರಿ ಸಿಕ್ಕಿವೆಯಂತೆ ಎಂದು ಅಂದಾಜಿನ ಗುಂಡು ಹೊಡೆದಾಗ ಮೀನು ಶಿಕಾರಿದಾರ ಕೊಂಚ ವಿಚಲಿತನಾದರೂ ತೋರಿಸಿಕೊಳ್ಳದೆ ಒಂದೆರಡು ಕೆಜಿ ಸಿಕ್ಕಿದ್ದವು ಅಷ್ಟೆ. ಸುಮಾರು ಜನ ಇದ್ದೆವು ಎಂದು ಹೇಳುತ್ತಾ ನಿನಗೆ ಯಾರು ಹೇಳಿದರು ಎಂಬ ಪ್ರಶ್ನೆ ಎಸೆವುದನ್ನೇ ಕಾಯುತಿದ್ದವನಂತೆ ನನಗೆ ಎಲ್ಲ ಗೊತ್ತಾಗುತ್ತದೆ ಎಂದು ಹೇಳುತ್ತಾ ಮೀಸೆ ಮೇಲೆ ಕೈ ಎಳೆವುದು ಮುಂಗಾರು ಮಳೆಯ ಕಾಲದಲ್ಲಿ ಮಾಮೂಲಿ.

2 Comments

  1. Anonymous
    October 22, 2016
  2. Arunprasad
    October 22, 2016

Add Comment

Leave a Reply