Quantcast

ಸ್ನಾನ ಅಂದ್ರೆ ಹಬ್ಬ ಬಂತಾ ಅಂತಾನೆ!

dr-rajegowda-hosahalli

ಡಾ ರಾಜೇಗೌಡ ಹೊಸಹಳ್ಳಿ 

ಅಲ್ಲೊಂದು ಕರಿ ಅತ್ತಿಮರ.

ಅದರಲ್ಲಿ ದೆವ್ವ ಕೂತಿರುತ್ತದೆಂದೂ; ಕಾಲು ಹಿಂದು ಮುಂದು ಮಾಡಿ ಬೆಳ್ಳಗೆ ಅಂಬಾರದುದ್ದ ನಿಂತು ಬಿಡುತ್ತದೆಂದು ಆ ಪಟೇಲನಂತೆ ಕತ್ತು ಬಗ್ಗಿಸಿ ಬೀಡಿ ಕಚ್ಚಿ ಹಿಂದಿರುಗಿ ನೋಡದೆ ಜಿಯಂಕು ಜಿಯಂಕನೆ ನೊರನೊರ ಅಂತಾ ಮೆಟ್ಟಿನ ಕಾಲಿನಲ್ಲಿ ಬರುವವನಿಗೆ ಮಾತ್ರ ಬೆಚ್ಚಿ ದೂರ ಸರಿಯುತ್ತದೆಂದೂ; ದೆವ್ವನ ಹಿಂದಿರುಗಿ ನೋಡಬಾರದೆಂದು ಆಗ ಏನೂ ಮಾಡುವುದಿಲ್ಲವೆಂದು ನಮ್ಮೂರ ಜನ ಹೇಳುತ್ತಿದ್ದುಂಟು.

ಅದರ ಪಕ್ಕದಲ್ಲೆ ಮಿಡಚಲ ಮರ ಅದರ ಬುಡದಲ್ಲೊಬ್ಬಳು ದೇವರು ಕುಂತವಳೆ. ಅವಳು ಆ ಬುಡ್ಡಪ್ಪನ ಮನೆತನದವರ ತಲೆ ಕಾಯುವ ದೇವಿ. ವರ್ಷಕ್ಕೊಂದು ಕೂಗೋ ಕೋಳಿ ಹುಂಜನಿಗೆ ಒಲಿದ ಅವಳು ಆಷಾಡ ಗಾಳಿಯಲ್ಲಿ ಆ ಮನೆತನದವರ ಕರುಳ ಮೂಲದವರಿಗೂ ಕೋಳಿಸಾರ-ಕುಡಿಸಿ ತಾನು ಅವರುಗಳನ್ನು ಸಲಹಲು ಸೈ ಅನಿಸಿಕೊಂಡು ಬಿಟ್ಟಿದ್ದಾಳೆ.

Cow_Skullsಅಲ್ಲಿ ಗದ್ದೆ ಗುಮ್ಮನಂತೆ ಬುಡ್ಡಪ್ಪ ಕುಂತವನೆ. ಅಜ್ಜಪಿಜ್ಜನ ಕಾಲದ ತನ್ನ ಹೊಲದ ಬದುವಿಗೆ ಗೂಟ ಹೊಡೆದು ನಾಲ್ಕು ದನ ಕಟ್ಟವನೆ. ಒಂದು ಹಾಲು ಕೊಡೋ ಗಿಡ್ಡ ಕರಿಹಸ; ಎರಡು ಉಳುವ ಮಲೆನಾಡಗಿಡ್ಡ ಮತ್ತೊಂದು ಹಸುವಿನ ಕರು. ಆಚೆ ಹೊಲದ ಗೋಪಾಲನೆಂಬೋನು ಇವನ ಹೊಲದ ಬದು ತುಳಿಯುವಂತಿಲ್ಲ. ಆತನ ದನವಂತೂ ಇವನ ಬದು ಹುಲ್ಲು ತುಳಿದರೆ ಗುಮ್ಮನಂತೆ ಬೆದರಿಸುತ್ತಾನೆ ಎಂದು ಅದೇ ಗೋಪಾಲ ದೂರು ಹೇಳಿದ.

ನಾನು : ಎಲವೋ ಗೋಪಾಲ ಬುಡ್ಡಪ್ಪನಿಗೆ ವಯಸ್ಸೆಷ್ಟೋ?

ಅವನು : ಅದ್ಯಾಕಣ್ಣ ಹಂಗಂತಿಯಾ ನಿನಗೆ ಗೊತ್ತಿಲ್ಲವೆ? ನಿನಗಿಂತ ಎಷ್ಟು ಹಿರಿಯೋನಪ್ಪ? ಅದೇನೋ ಕಂಟ್ರೋಲ್ ಬಂತಲ್ಲ ಆಗ ಹುಟ್ಟಿದ್ದು ಅಂತಿದ್ದನಪ್ಪಾ ನೀನೇ ಹೇಳು ಅಂದವನು. ನೀನೇ ಕೇಳಣ್ಣೋ ಹೇಳ್ತನೆ. ತುಸಾ ಮೆಲ್ಲಕೆ ಅತ್ತಿ ಮರದ ಮೇಲಿನ ಹಕ್ಕಿ ಹಾರೊ ಹಾಂಗೆ ಕೂಗಬೇಕಷ್ಟೆಯಾ!

ನಾನು : ಹಂಗಂತಿಯಾ ಅಷ್ಟು ‘ತ್ವಾಟ’ ದೂರವಾ! ಅದಕೆ ಗುಳ್ಕಗುಳ್ಕನೆ ಕಣ್ಣಬಿಡ್ತನೆ ಅನ್ನು.

ಅವನು : ಆವೊತ್ತು ಇಲ್ಲೆ ಕೆಳಗೇ ಇರೋಪ್ಲೇನು ಹೋಗ್ತಾಇತ್ತಾ! ಇದೇನ್ಲಾ ಗೋಪಾಲ ಸಬ್ಧವೇ ಇಲ್ಲವಲ್ಲ ಅಂದ ಕಣಣ್ಣೋ! ಅಷ್ಟು ಕಿವಿ ಚುರ್ಕು ಅಂತೀನಿ!

ನಾನು : ಲೋ ಪಾಪ! ಮನೆಲಿ ಚನ್ನಾಗಿ ನೋಡ್ಕಂತರೇನೋ ಮಕ್ಕಳು. ಒಬ್ಬ ಗುಜಾರಿ ಅಲ್ಲವೆ ಮಗ. ಅವನಿಗೂ ಮದ್ವೆ ಗಿದ್ವೆ? ಅಂತಿದ್ದರು!

ಅವನು : ಅಯ್ ಇದ್ಯಾಕಣ್ಣೋ ಹಂಗಂತಿಯಾ! ರಾಜಕುಮಾರನಂಗೆ ಹೆಣ್ಣು ತಂದು ಮದ್ವೆಯಾಗಲಿಲ್ಲವೆ! ಅವನು ಎರಡೂವರೆ ಗೇಣು ಅವಳು ಹುಡುಗಿ ನಾಲ್ಕು ಗೇಣು. ಹೇ ಹಾಸನ ಟಿವಿಲೀ ರೇಡಿಲಿ ಎಲ್ಲಾ ಅವನದೆ ಸುದ್ಧಿ ! ಅಲ್ಲವೇನಣ್ಣೋ! ಆಗಲೇ ಒಂದು ಮಗು ಆಯ್ತೆ ಗಂಡು ಮಗು.

ನಾನು : ಅರರೇ ಜೀವನಕ್ಕೆಲ್ಲ?

ಅವನು : ಅವನಾ! ಅಂಗಡಿ ಇಟ್ಟಿಲ್ಲವೆ! ಜೀವನಕೇನು ತೊಂದರೆ ಇಲ್ಲ ಬುಡು. ಗುಡ್ಡಗವನಲ್ಲ ಅದಕ್ಕೆ ದುಡ್ಡು ಬರ್ತದೆ. ಬುಡ್ಡಪ್ಪಗೂ 500 ಮುದುಕರ ದುಡ್ಡು ಬರ್ತದೆ. ಮಗ ಮಾತ್ರ ಅವನುದ್ದನೆಯ ಬಾಟ್ಲಿ ಎತ್ತಿದೋನು ಇಳ್ಕೊಕಿಲ್ಲ ಅಂತೀನಿ. ಹೆಂಡ್ತಿ ಒಳ್ಳೆಳು. ಮಾವ! ನೀರುಯ್ಕೆ ಬಾ. ಬಟ್ಟೆ ಕುಕ್ಕೊಡ್ತಿನಿ ಅಂತಾಳೆ. ಇವನು ಅಯ್ ಇದ್ಯಾಕಗಿ ‘ಉಗಾದಿ ಹಬ್ಬಬಂತಾ’! ಅಂತಾನೆ ದುಡ್ಡು ಎಷ್ಟು ಇಟ್ಟವ್ನೆ ಗೊತ್ತಾ! ಬಾಯಿ ಬಿಡಿಸು ನೋಡೋಣ! ಬಲೇ ನವಿಲುಗರಿ! ಅವನು.

ನಾನು : ಅಂದರೆ ವರ್ಷಕ್ಕೊಂದೇ ಸಾರಿ ಸ್ನಾನ ಅಂತಿಯಾ? ಸುಳ್ಳೆ ಹೇಳ್ತಿಯೇನಪ್ಪಾ ನೀನು.

ಅವನು : ಆಯ್ತಪ್ಪಾ ಒಂದು ಮಾರು ದೂರದಲಿ ನಿಂತ್ಕಳಪ್ಪಾ ಭೂಮಿ ಪುತ್ರನ ವಾಸನೆ ನಿನಗೆ ತಡೆಯಕಾದೀತೆ! ನೋಡಪ್ಪಾ! ಗೊತ್ತಾಗತ್ತಪ್ಪಾ. ನೀನೇ ಕೇಳು ನಿನಗೂ ಹಂಗೆ ನಿನಗೇ ಕೇಳ್ತನೆ ‘ಉಗಾದಿ ಹಬ್ಬ ಬಂತಾ’ ಅಂತಾ ಕೇಳ್ದೆ ಇದ್ರೆ ಕೇಳು! ಅದ ಮಾತ್ರ ಗ್ಯಾನಾಗಿರ್ತನೆ.

ನಾನು : ಹಂಗಾದರೆ ಅವನು, ಅವನ ದನಾ, ಅವನ ಹೊಲ, ಅಷ್ಟೆ ಅವನ ಪ್ರಪಂಚ ಅನ್ನಪ್ಪಾ.

ಅವನು : ಅದ್ಯಾಕಣ್ಣ ಹಂಗಂದಿಯಾ! ಕಡೆ ಪ್ಯಾಟೆಗೆ ಹೋತನೆ ವರ್ಷಕೆ ಒಂದ ದಪ ತಲೆ ಚೌರ, ಗಡ್ಡ ಹೆರಸೋಕೆ. ಅವತ್ತೆ ಉಗಾದಿ ಹಬ್ಬ. ಅವನು ಜೀವಮಾನದಲ್ಲಿ ಎಷ್ಟು ನೀರುನಿಡಿ ಬಟ್ಟೆ ಸೋಪು ಉಳಿಸವನೆ ಗೊತ್ತಾ! ನೀವು ಖರ್ಚು ಮಾಡೋ ನೀರಾ ಲೆಕ್ಕಾ ಹಾಕಳೆಪ್ಪಾ! ದಿನಾಂಪ್ರತಿ ಎರಡುಕೊಡ ಅಂದ್ರು ವರ್ಷಕ್ಕೆ ಎಷ್ಟಾಯ್ತು, 85 ವರ್ಷಾಗಿರಬೇಕು, ಒಂದು ಕರೆ ಉಳಿಸುವನೆ ಗೊತ್ತೇನಣ್ಣ. ಮಾತ್ರ ವರ್ಷಂಪ್ರತಿ ಒಂದು ಬಿಲ್ಲೆ ‘ಹಸ್ತ’ ಸೋಪೇ ಆಗಬೇಕು. ಒಂದು ಪದರ ತೆಗೆದು ಈಚೆಗೆ ನೂಕ್ತನೆ ಅನ್ನಪ್ಪಾ.

ನಾನು :ನೀನು ಬರೀ ಸುಳ್ಳು ಹೇಳಬ್ಯಾಡ, ದನ ನೀರು ಕುಡಿಸೋಕೆ ಹೋಗಲ್ಲವೆ ಅಲ್ಲೆ ಬಟ್ಟೆ, ಸ್ನಾನ ಮಾಡ್ತನೇನು?

ಅವನು : ಇರಬಹುದೇನಪ್ಪಾ, ಆದರೂ ನಾನೇನೋ ನೋಡಿಲ್ಲಪ್ಪಾ; ಹಿಂಗ್ ಹಗ್ಗ ಹಿಡ್ಕಂಡು ಹೋದವನು ದನ ಮೈ ತೊಳಿತಿರ್ತಾನೆ ಅಷ್ಟು ನೋಡಿದೀನಪ್ಪಾ.

ನಾನು : ಇದೇನು ನೀನು ಹೇಳ್ತಾ ಇರೋದು ನಿಜವೇನ್ಲ. ಬರೀ ಬೂರಿ ಬುಡಬೇಡ! ಅವನ ಅಣ್ಣತಮ್ಮಂದಿರು ಬುದ್ಧಿ ಹೇಳದೆ ಇರ್ತಾರಾ!

village2ಅವನು : ಯಾಕಣ್ಣ ಹಿಂಗಂದಿಯಾ ಅವನೇನು ಬುದ್ದಿ ಹೇಳಿಕೆ ಕಳ್ಳತನ ಮಾಡ್ತನಾ. ಸುಳ್ಳು ಕಡಿಚಾತ್ರ ಹೇಳ್ತನಾ. ವರ್ಷಕ್ಕೆ ಒಂದು ಜೊತೆ ಬಟ್ಟೆ, ಒಂದು ಸ್ನಾನ, ಒಂದು ನೀರು, ಸೋಪು ಒಂದು ಚೌರ. ದನನೋಡು ಹೆಂಗವೆ. ನೊಣಕೂತರೆ ಜಾರ್ತವೆ. ಹೊಲ ನೋಡು ಹೆಂಗವೆ. ಹಿಡಿಗಾತ್ರ ರಾಗಿ ತೆನೆ ಇಲ್ಲವೆ. ಎಷ್ಟು ಜನವೋ ನಿನ್ನ ಜೊತೆಲಿ ಹುಟ್ಟಿದೋರು ಅಂತಾ ಕೇಳು ಏನು ಹೇಳ್ತನೆ ನೋಡೋಣ.

ನಾನು : ಏನ ಹೇಳ್ತನೆ? ನೀನೇ ಹೇಳು?

ಅವನು : ಅದೇ ನಾನು ನನ್ನಣ್ಣ ಮಾಲ ಇಬ್ಬರೆ ಅಲ್ಲವೆ! ಅಂತನೆ. ನಿನ್ನ ಹೆಂಡ್ತಿ ಯಾರ ಮಗಳು ಅಂದ್ರೆ? ಅದೇ ಅವಳು ನನ್ನ ಮುಂಡೂರಕ್ಕನ ಮಗಳಲ್ಲವೆ ಅಂತಾನೆ. ಮತ್ತೆ ಒಬ್ಬಳ ಚಿಗಳೂರಿಗೆ ಕೊಟ್ಟಿತ್ತಲ್ಲ? ಅಂದೆ, ಅದೇ ಅವಳೊಬ್ಬಳು ಅಕ್ಕ ಅಂತನೆ. ಕಣಗಾಲಿಗೆ ಮತ್ತೊಬ್ಬಳು ಕೊಟ್ಟಿತ್ತಲ್ಲ ಅಂದ್ರೆ. ಅದೆ ಕನ್ಲ ಅವಳು ಒಬ್ಬಳು ತಂಗಿ ಅಲ್ಲವೇ! ಅಂತಾನೆ. ಅದೇ ಸೊಪ್ಪಿನ ಹಳ್ಳಿಗೆ ಕೊಟ್ಟಿರೋಳು ಅಂದ್ರೆ. ಹೂಕನಲಾ ಅವಳೊಬ್ಬಳು ಅಂತಾನೆ. ಕೂಗಿ ಕೇಳಬೇಕು ಆಚೆ ಊರಿಗೆ ಕೇಳೋಹಂಗೆ.

ನಾನು : ಲೋ ಗೋಪಾಲ ನೀನು ಆಕ್ಲಾಸ ಮಾಡಬ್ಯಾಡ ಕೇಳ್ತಿನಿ ತಡಿ ಅಂದೆ. ಬುಡ್ಡಪ್ಪಾ ಬುಡ್ಡಪ್ಪಾ! ಏನು ಚೆನ್ನಾಗಿದಿಯಾ?

ಬುಡ್ಡಪ್ಪ : ಈ ಹಸ ಆಗಲೇ ನಾಕು ಕರು ಹಾಕಿದೆ. ಈ ಎತ್ತು ಆಗ್ಲೆ ಹಲ್ಲುಟ್ಟಿಲ್ಲವೆ? ಎಂದು ನನ್ನನ್ನೆ ಕೇಳಿದ. ಅಲ್ಲ ನೀನು ಸ್ನಾನ ಮಾಡಲ್ಲವಾ! ಅಣ್ಣತಮ್ಮದಿರು ಎಷ್ಟು ಜನ ಅಂತಾನೆ ಗೊತ್ತಿಲ್ಲ ಅಂತಾ ಇವನು ಹೇಳ್ತಾ ಅವನೆ ಎಂದು ಇವನನ್ನು ತೋರಿಸಿದ್ರೆ! ಅದೆ ಅಪ್ಪಾ ರಾಜು ನೀನು ನನ್ನ ಮದುವೆಲಿ ಹುಟ್ಟಿದೋನಲ್ಲವೆ! ಇದೇನಪ್ಪಾ ಹಿಂಗೆ ನನಗಿಂತ ಅತ್ತತ್ತ ಆಗಿದಿಯಾ? ಏನಪ್ಪಾ ಓದಿದ್ದೋರು ಹಿಂಗೇ ಎನಪ್ಪಾ. ಒಂದು ಹಿಡಿ ಉಣ್ತಿರಿ, ಮೈಕೈನೆಲ್ಲ ಕೆರ್ಕಂಡು ಬೆಳ್ಳಗ್ಮಾಡ್ಕೋತೀರಿ. ಏನಪ್ಪಾ ಒಯ್ನಾಗಿದಿಯೇನಪ್ಪಾ….ಇನ್ನೇನು ಚೌಡಿ ಹಬ್ಬ ಬಂತು. ಕೋಳಿ ಆಗ್ಲೆ ಕೆಕ್ಕರಿಸ್ಕೊಂಡು ಕೂಗ್ತತೆ. ಬರ್ತೀನಪ್ಪಾ ಸಂಧ್ಯಾತು! ಅಂತಾ ದನ ಬಿಚ್ಚಿ ಹೊರಟ.

ಗೋಪಾಲ ಹೇಳಿದ ವಿಚಾರಗಳಿಗೆ ಅವನಿಂದ ಉತ್ತರ ಸಿಗಲಿಲ್ಲ! ಹೇಳುವ ಜರೂರು ಬುಡ್ಡಪ್ಪನಿಗೂ ಬರಲಿಲ್ಲ. ಅತ್ತಿ ಮರದ ದೆವ್ವ ಮಾಡಿದ ಸದ್ದು ಅವನಿಗೆ ಕೇಳುತ್ತಲೂ ಇರಲಿಲ್ಲ.

Add Comment

Leave a Reply