Quantcast

ಕ್ಲಿಕ್ ಆಯ್ತು ಕವಿತೆ: ಸ್ಟುಡಿಯೊ ಹಾಕೋಕಿತ್ತು..

ಅಜ್ಜಿ ಬಗಲಲ್ಲಿ ಅಪ್ಪ ಇರೋ ಚಿಕ್ಕಂದಿನ ಪಟ

%e0%b2%95%e0%b3%83%e0%b2%b7%e0%b3%8d%e0%b2%a3-%e0%b2%b6%e0%b3%8d%e0%b2%b0%e0%b3%80%e0%b2%95%e0%b2%be%e0%b2%82%e0%b2%a4-%e0%b2%a6%e0%b3%87%e0%b2%b5%e0%b2%be%e0%b2%82%e0%b2%97%e0%b2%ae%e0%b2%a0  

ಕೃಷ್ಣ ಶ್ರೀಕಾಂತ ದೇವಾಂಗಮಠ

ಮನೆ ಸಾರಸಿ ವರ್ಷ ಆಯ್ತು
ಇವ್ರಿಗೆ ಬೇರೆ ಕೆಲಸಾನೇ ಎಲ್ಲ
ವಯಸ್ಸಾಯ್ತು ಆರಾಮಾಗಿರಿ ಅಂದ್ರೆ ನನ್ನ ಮಾತು ಎಲ್ಲಿ ಕೇಳತಾರೆ
ಈ ಸಾರಿ ಗೋಡೆಗೆ ಕೇಸರಿ ಬಣ್ಣ ಬಳಸೋಣ
ಹೀಗೆ  ವಾರದಿಂದ ಒಂದೇ ಮಾತು
ನನಗೂ ಕೇಳಿ ಕೇಳಿ ಬೇಜಾರಾಗಿತ್ತು
ಬಾನುವಾರ ಅಂತ ದಿನಾಂಕ ನಿಗದಿ ಮಾಡಿಕೊಂಡು ಮುಂಚಿತವಾಗಿಯೇ
ಕೆಲಸದವರಿಗೆ ಹೇಳಿದ್ದೆ

ಮಂಚದ ಕೆಳಗೆ ಅಡುಗೆ ಮನೆಲಿ
ಅಲ್ಲಿ ಇಲ್ಲಿ ಅಂತಾ ಎಲ್ಲಾ ಮೂಲೆಲೂ ಸರಕು
ಅಟ್ಟದ ಮೇಲಂತು ಹಳೇ ವಸ್ತುಗಳು
ರಾಶಿ ರಾಶಿ ಧೂಳು ಜಂಗು ತಿಂದು
ಹಾಗೆ ಬಿದ್ದಿವೆ
ಮೂರು ವರ್ಷದಿಂದ ಎಲ್ಲಾ ಕಿತ್ತು ಬಿಸಾಕೋಣ ಅಂದ್ರೆ ಕೆಲಸದ ಒತ್ತಡ ಬೇರೆ

ಈ ಸಾರಿ ಕಾಲ ಕೂಡಿಬಂದು
ಕೂಲಿಗಳಿಗೆ ಪೂರ್ತಿ ಅಟ್ಟ ಶುಚಿ
ಮಾಡೋಕೆ ಹೇಳ್ದೆ
ಬೇಕು ಬೇಡಾ ನೋಡಮ್ಮ ಅಂದ್ರೆ
ಕನ್ನಡಕದ್ದು ಒಂದು ಕಣ್ಣು ಒಡದೋಗಬಿಟ್ಟಿದೆ
ಕಣ್ಣು ಸರಿಯಾಗಿ ಕಾಣಸಲ್ಲ
ಆಳು ಮಾಡಿದ್ದು ಹಾಳು ಅಂತಾರೆ
ಅದಕ್ಕೆ ಗ್ಲಾಸ್ ಹಾಕಿಸಿಕೊಂಡು ಹಾಗೆ
ಹಾಲು ತಗೊಂಡು ಬಾ ಅಂದ್ರು

ಹೇಗಿದ್ದೆನೋ ಹಾಗೆ ಹಾಳು ಮುಖದಲ್ಲಿ
ಸೀದಾ ಚಶ್ಮಾ ಅಂಗಡಿಗೆ ಹೋಗಿ
ರಿಪೇರಿ ಮಾಡ್ಸಿ ಡೈರಿಲಿ ಹಾಲು ಹಾಕಿಸಿಕೊಂಡು ಬಂದ್ರೆ
ವಠಾರದ ತುಂಬಾ ಪಾತ್ರೆ ಪಗಡೆ,
ಬಟ್ಟೆ ಬರೆ, ಟ್ರಂಕು , ಹಾಳು ಮೂಳು,
ಅಮ್ಮ ಟೀ ಕಾಸತಿದ್ರು ಹಾಲು ಕೊಟ್ಟು
ಸಾಮಾನು ತೆರವಿಗೆ ಸಹಾಯಕ್ಕಿಳಿದೆ
ನಂತರ ಎಲ್ಲರಿಗೂ ಬಿಸಿ ಬಿಸಿ ಚಾಯ್

ಹೀರಿ ಮುಗಿಸೋವಷ್ಟರಲ್ಲಿ ಗುಜರಿಯೋರು ಬಂದ್ರು ಹಿಂದೆ ಅಮ್ಮ
ಬೇಡವಾಗಿರೋವನ್ನ ತೂಕಕ್ಕೆ ಹಾಕಿ
ಉಳಿದೋವನ್ನ ಸೇರಿ ಮಾಡೋ ಉಪಾಯ
ನಾನು ಬಾಲ ಸುಟ್ಟ ಬೆಕ್ಕಿನಂಗೆ
ಒಳಗೂ ಹೊರಗೂ ಓಡಾಡತಿದ್ದೆ

ಸಡನ್ನಾಗಿ ವಾಚುಗಳ ಡಬ್ಬ ಕಣ್ಣಿಗೆ ಬಿತ್ತು
ಅಕ್ಕ ಪಕ್ಕಕ್ಕೆ ಸೂಕ್ಷ್ಮದರ್ಶಕ ಮತ್ತೆ ಕ್ಯಾಮೆರಾ
ಮೊದಲೇ ತುಕ್ಕು ಹಿಡಿದಿದ್ದವು ಮಳೆ ಹೂಯ್ದಿದ್ದರಿಂದ ರಾಡಿ ಸಿಡಿದು
ಮೇಲ್ಮೈ ರೊಜ್ಜಾಗಿದ್ದವು
ಜೊತೆಗೆ ಒಂದಷ್ಟು ಪುಸ್ತಕ ಪೇಪರ್ರು ,
ಕಿತ್ತೋದ ಟಿವಿ ರೇಡಿಯೋ , ನೆಗ್ಗಿದ ಕೊಡಾ

ಚಿಕ್ಕಂದಿನಲ್ಲಿ ಚಿತ್ರಾ ಬಿಡಿಸೋ ಚಾಳಿ
ಸ್ಟುಡಿಯೊ ಹಾಕೋಕಿತ್ತು
ಹೆಚ್ಚಿಗೆ ಓದಿದ್ದಕ್ಕೆ ಇಂಜಿನೀಯರ್ ಆಗಬಿಟ್ಟೆ
ಆದರೂ ಹುಚ್ಚು ಹಾಗೆ ಇತ್ತು
ಕ್ಯಾಮೆರಾ ಮಾತ್ರ ಎತ್ತಕೊಂಡು ಅದನ್ನ
ನನ್ನ ಕೋಣೆಗೆ ತಂದಿಟ್ಟುಕೊಂಡೆ

ಅದರಲ್ಲಿ ಏನೋ ಆಕರ್ಷಣೆ
ಫೋಟೋ ಸೆರೆಹಿಡಿಯೋಕೆ ಆಗಲಿಲ್ಲ
ಮೂಲೆ ಸೇರಿ ಹಾಳು ಹಿಡಿದಿತ್ತು
ಒಳಗೆ ರೀಲ್ ಇರಬೇಕಲ್ಲ
ಹಾ ಇತ್ತು ಬೆಳಕಿಗೆ ಹಿಡಿದರೆ ಮೊದಲಲ್ಲಿ
ಅಜ್ಜಿ ಬಗಲಲ್ಲಿ ಅಪ್ಪ ಇರೋ ಚಿಕ್ಕಂದಿನ ಪಟ
ಅಪ್ಪ ಅಮ್ಮ ಮದುವೆ ಆಗಿದ್ದು
ಮುಂದೆ ಸಾಲು ಸಾಲು ನೆನಪು

ಕೊನೆಗೆ ಒಂದರಲ್ಲಿ ಅಮ್ಮನ ತಾಯಿ
ಮೊದಲು ಹೋಗಿ ಆ ಫೋಟೋಗೆ
ಫ್ರೇಮ್ ಹಾಕಿಸಿ ಅಮ್ಮನಿಗೆ ಗಿಫ್ಟ್ ಕೊಟ್ಟೆ
ಇಷ್ಟು ವರ್ಷಕ್ಕೆ ಅಮ್ಮ ಮತ್ತೆ ಹುಡುಗಿ ಥರ
ಖುಷಿಲಿ ಮನೆಪೂರ್ತಿ ಓಡಾಡಿ
ಕುಣಿದು ಕುಪ್ಪಳಿಸಿದ್ದು
ಇದೇ ಈಗ ಅಪ್ಪನಿಗೂ ಸಂತೋಷ
ಕ್ಯಾಮೆರಾ ಇಷ್ಟೆಲ್ಲದರ ಕೇಂದ್ರವಾಗಿ
ರಾರಾಜಿಸುತ್ತ ಮತ್ತೆ ಮೂಲೆ ಸೇರುತ್ತದೆ

Add Comment

Leave a Reply