Quantcast

ಮಾಲಣ್ಣನ ಪೋಲಿ ಬೈಗುಳ

h r sujatha2

ಎಚ್ ಆರ್ ಸುಜಾತ 

ಗೌಡ್ರು ಹಳೆಮರಸಿನ ಕೆರೆ ಏರಿ ಮೇಲೆ ಓಯ್ತಾ ಇದ್ರು. ಅಲ್ಲಿಂದ ಎತ್ತಿನಾಳತಕೆ ಹೋಗಿ ಅಲ್ಲಿಂದ ದೊಡ್ಡಗದ್ದೆ, ಗಾಳಿ ಗದ್ದೆಲಿ ಸಸಿ ಮಡಿ ಹಾಕಿರದ ನೋಡಕಂದು ಮೂಡಗಡೆ ಹೊಲ ದಾಟಿ ಅಂಗೆ ಮನಿಗ್ ಬರನಾಂತ ಅವರ ಹೋದ್ರೂವೆ ಬಾಕಿದು ಅಂಗಿರ್ಲಿ. ಮಣ್ಣನ ಹೊಲದಲ್ಲಿ ಕಲ್ಲಂಗಡಿ ಗಿಡದಲ್ಲಿ ಕಾಯಿ ಕಟ್ಟವೆ ಅಂದ್ರು. ಅದನ್ನ ಅವರು ನೋಡಬೇಕಾಗಿತ್ತು. ಹೊಸದಾಗಿ ಯಾವದಾರ ಬೆಳೆ ನೋಡೂದ್ರು ಅಂದ್ರೆ ಅದ ತಂದು ಊರಿನ ನೆಲಕ್ಕೆ ತೋರಸದು ಅವರಿಗೆ ಒಂದು ಗೀಳೆ ಆಗೋಗಿತ್ತು. ಮಳೆ ಕೊಡಾವ ತಲೆ ಮೇಲೆ ಇಟ್ಟಕಂಡೆ ಓಡಾಡೋ ಈ ಊರು ಅನ್ನದು ಮೂರುದಿನ ಮಳೆಚಪ್ಪರ ಇಳೇಬುಡ್ತು ಅಂದ್ರೆ ದನ ಜನದ ಕಾಲಗೆಲ್ಲಾ ಕೆಸರು ಹುಣ್ಣ ಮಾಡದು. ದಿನಾಲೂ ಕಂಡಕಂಡ ಔಸ್ತಿ ಹಚ್ಚಿಹಚ್ಚಿ ಔಸ್ತಿ ಮುಗಿಬೇಕೆ ಹೊರತು ಕಾಲುಸಂದಿಲಿ ಕೆಸರು ಹುಣ್ಣ ಕಳೆಯಾಕೆ ಆತಿರಲಿಲ್ಲ. ಎಲ್ರುಗೂ ಬೆರಳುಸಂದಿ ಅನ್ನವು ಬೆಳ್ಳಕೆ ಗಿದ್ರುಕಂಡಿರವು. ಅಂಥದ್ರಲ್ಲೂ ಈ ಮಳೆ ಊರಿಗೆ ಇವ್ರು ಹೊರಗಡಿಂದ ಆ ಬೆಳೆ ಈ ಬೆಳೆ ತಂದು ಬೆಳೆಯದ ಬಿಡತಿರಲಿಲ್ಲ. ಇದರಿಂದ ಭಂಗ ಬೀಳದು ತಪ್ತಿರ್ನಿಲ್ಲ.

he wingsಈಗ ಅವರಿಗೆ ಇನ್ನೊಂದು ಹೊಸ ಆಸೆ  ಹುಟ್ಕಂಡಿತ್ತು. ಎಂಗಾರ ಮಾಡಿ ಊರಿಗೊಂದು ದಾರಿ ಅನ್ನದ ಮಾಡೇಬಿಡಬೇಕು. ಹಾಸನಕ್ಕೆ ಈಸತಿ ಹೋದಾಗ, ಕಾಂಗ್ರೆಸಿಂದ ಗೆದ್ದ ನಮ್ಮ ಬೋರಣ್ಣಗೌಡ್ರು ಜತೆಲಿ ಮರಿದಂಗೆ ಈ ವಿಚಾರ ಮಾತಾಡಿ ಇವತ್ತೆ ಯಾವುದುನ್ನೂ ಕೇಳಕಂಬಿಡಬೇಕು ಅನ್ಕಂದು ಗದ್ದೆ ಏರ ಹತ್ತಿ, ಕೆರೆ ಏರಿ ಮೇಲೆ ಬತ್ತಾವರೆ. ಅಷ್ಟ್ರಲ್ಲಿ… ಅವರ ಜೀವ ತೆಗೆದು ಮ್ಯಾಕೆ ಎಸುದು ನೆಲಕ್ಕೆ ಹಾಕಿ ಕುಕ್ಕುರುಸ್ದಂಗಾಯ್ತು. ಸರಿಯಾಗಿ ಇನ್ನಂದ್ಸಲ ನೋಡತಾರೆ. ಅಯ್ಯಪ್ಪ! ಕೆರೆ ನೀರಲ್ಲಿ ತೇಲತಿರೋದು ಹೆಣವೇಯಾ, ಅಲ್ವಾ? ಅಂಗಂಥ ಅವರೇನು ಅದಕ್ಕೆಲ್ಲಾ ಬಡಪಟ್ಟಿಗೆ ಹೆದ್ರರಲ್ಲ! ಬಿಡಿ. ಶೇಖ ಅನ್ನ ಅವರ ಬಲಗೈ ಬಂಟ ಒಬ್ಬಿದಾನೆ. ಒಂದಿನ ಅವರ ಭಂಡ ಧೈರ್ಯ ಕಂಡೋನು.

ಕಂಡುದ್ದ… ಕಂಡಂಗೆ ಹೇಳ್ತಾನೆ ನಮ್ಮ ಊರಿನ ಕಿವಿಗೆ ? ಆವತ್ತು ಏನು ನಡಿತು ಅಂತ…. ಇವತ್ತುವೆ.

“ಆವತ್ತು, ಏನಾಯ್ತು? ಅಂದ್ರೆ, ಗೌಡ್ರು ಹಿಂದ್ಗುಟ್ಟೆ ನಾನೂವೆ ಹೋಗಿದ್ದೆ. ಹಾಸನದಿಂದ ಬರೋವಾಗಲೇ ತಡ ಆಗಿತ್ತಾ? ಇಬ್ಬರೂ ಆಲೂರಲ್ಲಿ ಬಸ್ಸಿಳೀದು ಊರು ಕಡಿಕೆ ನಡ್ಕೊಂಡು ಬತ್ತಿದ್ವಾ? ನಮ್ಮೂರ ದಿಬ್ಬ ಏರೊವಾಗ  ಏನೋ ಕಂಡಂಗಾತು. ಇಬ್ಬರೂ ನೋಡತಿವಿ. ಮರದಲ್ಲಿ ಏನೋ ನೇತಾಡತೈತೆ. ಗೌಡ್ರು ಹತ್ರಕ್ಕೆ ಹೋದರೆಯ ಬೆಂಕಿಕಡ್ಡಿ ಜೀರಿ ನೋಡುದ್ರು. ಯಾರೋ ಹೆಣ ತಂದು ದಾರಿ ಮರಕ್ಕೆ ನೇತು ಹಾಕಬುಟ್ವವರೆ. ಅವ್ವೆ…ಅಂಥ ಗವ್ವಗತ್ತಲೆಲಿ ಇವರು ಇನ್ನೂ ಹತ್ರುಕ್ಕೆ ಹೋಗಿ ಅಷ್ಟೊತ್ನಲ್ಲಿ ಅದರ ಗುರುತು ಸಿಕ್ಕದೋ ಏನೋ ಅಂತ ಹುಡುಕತಾ ಕೂತವರೆ. ಏನ್ ಹೇಳನಾ ಹೇಳು ಮತ್ತೇ…. “ನಮ್ಮೂರ್ನರಾ ಏನು? ಯಾರದ್ದು ಈ ಹೆಣ” ಅಂತವ ಅವರಂತಿದ್ರೆ, ನಂಗೆ ಅಲ್ಲೇ… ಚಳಿಜ್ವರ ಬಂದುದ್ದೆ ತಗಳಪ್ಪಾ…. ಯಾಕೇಳ್ತೀಯಾ? ಬಳಬಳನೆ ಚಡ್ಡಿ ವಳಗೆ ಉಚ್ಚೆ ಹೊಂಟೋದ್ವು. ಅದ ಕಂಡು ಗೌಡ್ರು ’ಥೂ! ಹೇತಲಾಂಡಿ ನನ್ನ ಮಗನೆ’ ಅಂತ ಮಕಕ್ಕೆ ಉಗುದ್ರು. ಆಮೇಲೆ, ದಾರಿ ಉದ್ದಕ್ಕೂ… ಬಯ್ಯಸ್ಕಬಂದೆ ಕನ್ರಲಾ…” ಅಂತ ಹೇಳಕಂದು ಇವತ್ತೂ ನಗಾಡತಾನೆ.

ಆ ಥರಲೇ ಗೌಡ್ರು ಇವತ್ತೂವೆ ಏರಿ ಮೇಲೆ ನಿಂತ್ಕಂಡು, ’ಯಾರು?ನೋಡನ ತಡಿ” ಅಂದು ನೋಡುದ್ರು. ಗುರ್ತು ಸಿಕ್ಕುತ್ತಾ ಏನಾರ ಅಂತವ. ಅಷ್ಟರಲ್ಲಿ ಹೆಣ ಅಲುಗಾಡತು.’ ಏ… ಹೆಣ ಅಲ್ಲ…. ಅದು ಸಿಂಗಪುರದಮ್ಮಾರ ಮಾಲ” ಅನ್ನದು ಗೊತ್ತಾಯ್ತು. ಏರಿ ಮೇಲಿಂದಲೇ, ’ಇದ್ಯಾಕೆ ಇವನು ಕೆರೆ ಮಧ್ಯಕ್ಕೆ ಹೋಗಿ ಗುಬ್ರಾಕಂಡವನೆ” ಅಂಥವ ಜೋರಾಗಿ ಕೂಕ್ಕಂಡರು.

“ಏ ಮಾಲಾ, ಈಜು ಬರುಕುಲ್ವೇನ್ಲಾ? ನಿಂಗೆ.” ಅಂದ್ರು. ಅಷ್ಟೆ ತಗಳಪ್ಪಾ….

“ನಿನ್ಯಾವನ್ಲಾ ಕೇಳಕೆ…ನೀನೇನ್ ಊರ್ ಪಾಳೆಗಾರನಾ? ಬಂದ್ಬುಟ್ಟ, ಇಲ್ಲಿ ಎಲ್ಲಿಡ್ಲಿ ನಂದ ಅಂತವಾ….ನಿನ್ನವ್ವನ್ನಾ….ನಿನ್ನ ಬಾಯಿಗ್ ನನ್…..ಹಾಕ. ನಂದ…..ತೆರಿಯಕೆ ಬಂದಿದೀಯ ಇಲ್ಲಿಗೆ. ನಂದು ಒಂದು ರೋಮಾ ಅಳ್ಳಾಡುಸಕ್ಕೆ ಆಗಕುಲ್ಲ ನಿನ್ ಕೈಲಿ, ತಿಳ್ಕಾ….. ನಿಂದ್ ನೀ ತೊಳ್ಕಂದು  ಹೋಗಲೋ ಕಂಡಿದಿನಿ ಈಗ, ನಿನ್ನಮ್ಮನ್ನ….”

ಎಲ್ಲೆಟ್ಟಿದ್ದನೋ ಕಾಣೆ ಆ ಬೈಗುಳವ, ಶುರು ಮಾಡದ. ಮಾಡದ… ತಲೆ ಎತ್ತನು… ಬಯ್ಯನು. ತಿರುಗಿ ನೀರಿಗೆ ಮುಳುಗನು. ಎದ್ದು ಮತ್ತೆ ಬಯ್ಯನು. ಅವನ ನೆಣ ಕೊಚ್ಚಿ ಮಗ್ಗಲಿಗೆ ಹರವಾ…  ಹಾವು ಚೇಳು ತಂದು ಮೈಮೇಲೆ ಬುಟ್ಟಂಗೆ….ಬೈದಾ ಬೈದಾ ಬೈದಾ ಅಂಗೆ ಬೈತಲೇ ಇದ್ದ. ಇಂಗೆ ಕಿವಿಲಿ ಕೇಳಬಾರದಂಥ, ಅಪ್ಪಂತರು ಬಾಯಲ್ಲಿ ಆಡಬಾರದಂಥ ಮಾತೆಲ್ಲ….ನೂ ತಂದು ಮೂಟೆ ಬಿಚ್ಚಿ ನೀರೊಳುಕ್ಕೆ ಕೊಡವಿ ತೇಲಿಬಿಟ್ಟಂಗೆ… ಊರು ಮೂಟೆ ಕಟ್ಟಿ ಇಟ್ಟಿದ್ದ ಹಲ್ಕಾ ಬೈಗುಳ ಎಲ್ಲನೂ ತಂದು….ಗೌಡ್ರನ್ನ ಬಯ್ಯತಲೇ ಇದ್ದ. ನಿನ್ನಮ್ಮನ್ನ…..ನಿನ್ನಪ್ಪನ್ನ…..ತು…..ತು ….ತೂತಾನುತೂತದಲ್ಲಿ ಹುಟ್ಟದೋರೆಲ್ಲ ಬಟ್ಟೆ ವಳಿಗೆ ಮಾನವಾಗಿ ಮುಚ್ಚಿಟ್ಟಿರ ಅಂಗಗಳೆಲ್ಲನೂ ಬಿಚ್ಚ್ಕಂದು ಓಡಾಡೊ ಹುಚ್ಚುಮುಂಡೇಗಂಡರ ಥರದಲ್ಲಿ….ಅವನ ತಲೇಲಿ ಮನೆ ಮಾಡಕಂಡು ಯಾವ್ಯಾವ ಪೋಲಿ ಬಯ್ಗಳು ಇದ್ದವೋ, ಅವೆಲ್ಲನೂ ಹೊತ್ಕಬಂದು ಬಯ್ದ. ಊರಲ್ಲಿ ಅವನ ಸರೀಕರ ಜತೆ ಕಿತ್ತಾಡ್ಕೊಳ್ಳೋವಾಗ ಬಯ್ಯಂಗೆ ಅವೆಲ್ಲನೂ ಒಂದೇ ಉಸುರಿಗೆ ಉದುರಿಸಿ ಇವ್ರಗೆ ಬಯ್ದ.

ಇಂಥ ಹೀನಾಮಾನ ಬಯ್ಗಳ ಅನ್ನವು ಇಂಥ ಹುಡಿಪಡಿ ಜನರ ಬಾಯಿಂದ ಆಗಾಗ  ಪುಂಖಾನುಪುಂಖವಾಗಿ ಬರೋದು ಊರಲ್ಲೇನೂ ಇವತ್ತು ಹೊಸತಾಗಿರಲಿಲ್ಲ, ಆಗೀಗ ಈ ಸಹಸ್ರನಾಮವ ಇವರೂ ಕಿವಿಲಿ ಕೇಳತಾಲೆ ಇರರು. ಆದ್ರೂ ಇವರ ಮುಖ ಕಂಡ ತಕ್ಷಣಲೆ ಗಾಳಿ ಹಿಡದಂಗೆ ಬಯ್ಯತಿರೋರೂವೆ ತಟ್ಟನೆ ಬಾಯಿ ಮುಚ್ಚಕಂಡು ಅಂಗೇ… ಮೆತ್ತಗೆ ಅರಗಾಗಬುಡೋರು. ಅವು ಅಲ್ಲೆ ನಿಂತು ಹೋಗಾವು. ಆದ್ರೆ ಇವತ್ತಿನ ಈ ಭಂಗವ ನೋಡಿ ಅವರಿಗೆ ಹುಬ್ಬು ಅನ್ನವು ಅಂಗೆ ನೆತ್ತಿ ಮ್ಯಾಕೆ ಹೋದ್ವು. ಪಿತ್ಥ ನೆತ್ತಿಗೇರತು. ಊರಗೇ ಹಿಡದಿರೋ ಈ ಬಯ್ಯ ಗಾಳಿಯ ಇಂಥದ್ರಿಂದ ಬುಡಸ್ಬೇಕು ಅಂಥ ಇವ್ರು ಓಡಾದ್ತಿದ್ರೆ…. ಇದು ಬುಟ್ಟಾದ. ’ಕಲ್ತುದ್ದ ಬುಡೋ ಕಲಕೇತಿ ಅಂದ್ರೆ ಊರು ಬುಟ್ರೂ ಸೈ. ನಾ ಕಲ್ತುದ್ದ ಮಾತ್ರ ಬುಡಕುಲ್ಲ ಕನಪ್ಪಾ’ ಅಂತವ ಅದು ದೇವ್ರಾಣೆ ಇಟ್ಟು ಹೇಳತಂತೆ. ಇನ್ನು ಗೌಡ್ರು ಕೈಲಿ ಆತೀತಾ?ಏನಪ್ಪ….

“ನೋಡಾನ! ತಡಿ, ಇವತ್ತು ಮಲನಾಗರ ಬಂದಂಗೆ ಆಡತಾವನೆ, ಸತ್ರೆ ಸಾಯಲಿ ಈ ನನ್ಮಗ”, ಅಂದು ಸ್ವಲ್ಪ ಹೊತ್ತು ದೂರದಲ್ಲೆ ನಿಂತು ನೋಡಿ ಗದ್ದೆ ಬದಿಗೆ ಅತ್ಲಾಗೆ….  ಇಳದು ಹೋದ್ರು.

“ಅಗ್ಗದ ಮುಂಡೇವ ಸಾವಾಸನ ತಂದು”

“ಹಲ್ಕಾ ನನ್ನ ಮಕ್ಕಳ ಸಾವಾಸಾನಾ ತಂದು” ಸಿಟ್ಟಲ್ಲಿ ಹಿಂಗೆ ಅವರು ಬಯ್ಯಕಳೊ ಹೊತ್ನಲ್ಲಿ, ಎದುರಗಡೇಲೆ ಚೋಟಾಮರಿ ಸಿಕ್ಕದ. ಇಷ್ಟಾದ್ರೂವೆ…ಅವರಿಗೆ ಜೀವ ತಡಿದೆ, ಅವ್ನಗೆ ತಾಕೀತು ಮಾಡುದ್ರು.

he sad“ಕ್ವಾಣ ಕೆರೆ ನೀರಿಗೆ ಬಿದ್ದಂಗೆ ಬಿದ್ದು, ವದ್ದಾಡ್ತಾವನೆ ಮಾಲ, ಅದೇನು ನೋಡ್ಲಾ ಹೋಗಿ. ಸತ್ಗಿತ್ ಹೋದಾನು ಎಳದ ಹಾಕು ಆಚಿಗೆ. ದೆವ್ವ ಮೆಟ್ಕಂಡಿರ್ಬೇಕು ಅವನುಗೆ. ಅವನ ತಮ್ಮ ಕುಂಟ ಬಾವಿಗೆ ಬಿದ್ದು ಇನ್ನೂ ವರ್ಶ ತುಂಬಿಲ್ಲ. ಇವ್ನಿಗೂ ಬಂದೀತೆ ಈಗಲೆ ದೊಡ್ಡರೋಗ. ಇವನುಗೂ ಹತ್ರದಲ್ಲೆ ತಗಲುಕಂದೀತೆ ಕಣ್ಲಾ ಆ ಮಾರಿಕಣ್ಣು! ಅದಕ್ಕೆ ಅಂಗಾಡತಾವನೆ. ಕಳ್ಳ, ಮಾದರ್ಚೋದು ತಂದು” ಅಂತಂದ್ರು. ಈ ಬೈಗುಳ ಮಾತ್ರವ ಗೌಡ್ರು ಅಲೂರ ಸಾಬರು ಸ್ನೇಹಿತ್ರ ಬಾಯಿಂದ ಕಲ್ತಿದ್ದು ಕನಪ್ಪ. ಇದು ನಮ್ಮೂರಿಂದಲ್ಲ.

ಮನಿಗೆ ಬತ್ತಿದ್ದಂಗೆ ಹಾಸನ ಕೋಟೆಗೆ ಹೊರಡ ಆತುರದಲ್ಲಿ, ಇದ ಅತ್ಲಾಗೇ ಮರ್ತು ರೊಟ್ಟಿ ತಿಂದರು. ಪ್ಯಾಟೆಲಿರೊ ಮಕ್ಕಳಿಗೆ ಗೌಡಮ್ಮಾರು ಕಟ್ಟಿಕೊಟ್ಟ ಹಾಲು ಮೊಸರು ಬೆಣ್ಣೆ ಹಿಡಕಂದು, ಬಟ್ಟೆಬೂಟ ತೊಟ್ಟಕಂಡು ಅವರು ಇನ್ನೇನು…ಮನೆ ಬುಡಬೇಕು. ಆಗ ಬಂದ್ಲು ನೋಡಪ್ಪಾ ಸಿಂಗಾಪುರದಮ್ಮ….. ಓಡಕಂದು ಒಂದೇ ಉಸರಿಗೆ ಬಂದೋಳೆ ತಕ ” ಎತ್ತು ಗಾಡಿ ಕಟ್ಸಿಕೊಡಪ್ಪಾ, ನಿನ್ ಕಾಲಿಗೆ ಬೂಳುತೀನಿ” ಅಂತ ಗೋಗರಕಂಡು ಗ್ವಟ್ರೆ ಸೇರೊ ಹಂಗೆ ಅಳ್ತಾ ನಿಂತಕಂಡಳು. ಬೆಳ್ಗಿನ್ನೂವೆ ಅವಳ ಮಗನ್ನ ಅವತಾರ ಕಂಡಿದ್ದಂಥ ಗೌಡರು ವಾಸನೆ ಹಿಡದು “ಏನಾಯ್ತು?” ಅಂದ್ರು. ಸಿಂಗಪುರದಮ್ಮ ನಡುದುದ್ದ ಹೇಳುದ್ಲು.

“ನೋಡಪ್ಪಾ, ಹೆಜ್ಜೇನು ಗೂಡ ರಾಡೀಲ್ಲಿ, ತುಪ್ಪ ಹೆಚ್ಚಾಗಿ ಸಿಗತೀತೆ ಅನ್ಕಂದು ಇವನು ಮರ ಹತ್ತವನೆ. ಕೆಳುಗೆ ಹಾಕುದ ಹೊಗಿಗೆ ಜೇನುಳ ಅಷ್ಟೂ ಎದ್ದಬುಟ್ಟವೆ.ತಕ. ಕಂಬಳಿ ಮುಸಗುನೂ ಹಾಕಳದೆ ಓಗವನೆ. ಹೋಗ್ಲಿ, ಹಸುರು ಸೊಪ್ಪನಾರು ಮೈಗೆ ಸವರ್ಕಳದಲೆಯ ಅಂಗೆ… ತಿರಕೆ ಜಂಭ ಮಾಡಕಂಡು ಮರ ಹತ್ತವನೆ. ಹೋಗ್ಲಿ, ಜತಿಗೆ ಯಾರನ್ನಾರು ಕರಕಳದಲೆಯ ಹಂಗೆ ಹೋಗವನಲ್ಲ ನೋಡಪ್ಪಾ….ಅತಿ ಆಸೆ ಮುಕ್ಕನ್ನ ತಂದು. ಹೆಜ್ಜೇನು ಅಂಗೆ ಮುಕ್ಕುರ್ಸ್ಬುಟ್ಟವೆ. ನಾ ಏನ್ ಮಾಡ್ಲಿ? ಮರದಿಂದ ಜಾರ್ಕಂದು ಬಿದ್ದು ತೊಡೆ ಎಲ್ಲಾ ಕಿತ್ತೋಗಿ ರಂಪ ಆಗೀತೆ! ಏನ್ ಮಾಡಾನು? ಹೇಳು. ಕೆರೆ ನೀರಿಗೋಗಿ ಬಿದ್ದವನೆ. ಆದ್ರೂ ಬುಡತಾವಾ ಅವು. ತಲೆ ಎತ್ತುದ್ರೆ ಸಾಕು. ನೊಣ ಮುತ್ಕಳವಂತೆ. ಅವು ನಾಸ್… ಆಗ. ಅಟ್ಟಸ್ಕಬಂದು ನನ್ ಮಗನ ಮೈ ತುಂಬಾ ಮುಳ್ಳು ಬುಟ್ಟಬುಟ್ಟವೆ. ಮುಳ್ಳ ಹುಶಾರಾಗಿ ಕಿತ್ತ ಹಾಕಿದೀವಿ. ಆದ್ರೂ ಮೈಮೂತೆಲ್ಲಾ ಊದ್ಕಂದೀತೆ. ವಿಷ ಏರುದ್ರೆ ಸತ್ತೋಗ್ಬುಡ್ತಾನೆ ಕನಪ್ಪಾ. ನಂಗೆ ಕೈಕಾಲೇ ಆಡೊಲ್ವು. ಒಬ್ಬನ್ನ ಮಣ್ಣಗೆ ಹಾಕಿ ಇನ್ನೂ ವರ್ಷ ಆಗನಿಲ್ಲೋ…” ತಾಯಳಲು ಜೋರಾಯ್ತು.

ಅಲ್ಲೆ ಹಟ್ಟಿ ಕಲ್ಲ ಮೇಲೆ ಬಿಸ್ಲು ಕಾಯಸ್ತಾ ಕುಂತಿದ್ದ ಅಜ್ಜಮ್ಮ “ಎಂಗೆ ಕೀಳಬೇಕೋ ಹಂಗೆ ಕೀಳಬೇಕು ಕನಡ್ಗೀ…. ಜೇನು ಹುಟ್ಟು ಅಂದ್ರೆ ಸುಮ್ನೆ ಆಯ್ತೇನೆ. ಜೇನ ರಾಡೀಲಿ, ನಿಧಾನಕ್ಕೆ… ಒಂದು ಕಡ್ಡಿಬುಟ್ಟು… ನೋಡಿ… ತುಪ್ಪ ಆಗೀತೋ? ಇಲ್ಲವೋ? ಅನ್ನದ ಕಂಡಕಂಡ ಮೇಲೆ, ತಯ್ಯಾರಾಗಿ ಹೋಗಿ, ಜೇನಹುಟ್ಟ ವಸಿ ಅಲ್ಲಿ ಮರದಲ್ಲೇ… ಬುಟ್ಟು, ಉಳುದುದ್ದ ಕಿತ್ಕಬರಬೇಕು ಕಣಡ್ಗೀ..ಅಂಗಾರೆ ಮತ್ತೆ ಮೂರು ತಿಂಗಳಿಗೆ, ಅಲ್ಲೆ ಜೇನುಹುಟ್ಟು ತಿರುಗಿ ಬಲಿತೀತೆ. ತುಪ್ಪ ಸಿಕ್ತೀತೆ. ಇಲ್ಲದೆ ಹೋದ್ರೆ ಜೇನುಹುಳ ನಿಲ್ಲದೇಯ ಬೇರೆ ಕಡೀಕೆ ಹಾರು ಹೋಯ್ತವೆ. ಅಷ್ಟೆಯಾ! ಅದ ಬುಟ್ಟು ಇವನು ಇದ್ದಬದ್ದ ತುಪ್ಪನೆಲ್ಲಾ ನನ್ನೊಬ್ಬನ ಬಾಯಿಗೇ ಸುರುಕಂಬತ್ತೀನಿ ಅಂತ ಹೋದ್ರೆ, ದುರಾಸೆ ಮೂದೇವಿ. ಅವು ಬುಡತಾವಾ? ಅದುಕ್ಕೆ ಮತ್ತೆ ಸರ್ಯಾಗಿ ಮುಳ್ಳು ಹೊಡದು ಮುಖಮೂತಿ ಎಲ್ಲನೂ ಊದಸಿ ಕಳಸಾವೆ. ಜೇನ ಒಡಲಿಗೆ… ಕೈ ಹಾಕುದ್ರೆ, ಸುಮ್ಮನಾಯ್ತವಾ?ಅವು !

ಅದೂ ಕೆರೆ ನೀರಿನ ತನು ಬೇರೇ! ಕೇಳ್ಬೇಕಾ? ಆ ದೊಡ್ಡ ಮರದಲ್ಲಿ ಒಂದು ಮಾರು ಸರ್ಯಾಗಿ ಗೂಡ ಕಟ್ಟಿದ್ವು ಕರ್ರಗೆ. ಜೇನುಳ ಅಂಗೆ ಮುಲಗುಡವು. ಆವತ್ತು ನಿಂತ್ಕಂದು ತಲೆ ಎತ್ತಿ ನಾನೂ ನೋಡಿ ಬಂದಿದ್ದೆ ತಗ. ಈ ಕಾಲದಲ್ಲಿ ತೊಗರಿ ಹೂವು, ಸೆಣಬಿನ ಹೂವು. ಹುಚ್ಚಳ್ಳು ಹೂವು, ಪುಟ್ಟಳ್ಳು ಅಂತ ಬಯಲು ತುಂಬ ಹೂವಿನ ನಗೆ ಅನ್ನದು ಚೆಲ್ಲಾಡಿ ಸೂಸಾಡತೀತೆ. ಅವಕ್ಕೆ ನಾಕೂ ದಿಕ್ಕಲ್ಲೂ ಮೇವು ಬೇಕ್ಕಾದಂಗೀತೆ. ಎಲ್ಲಾ ಹೂವಲ್ಲೂ ಮುಕ್ಕರ್ಸಿ ವಸಿ ಜೇನುದಂಡು ಕಟ್ಟಿರ್ತಾವೆನೆ? ಅಂಗೆ ಸೊಕ್ಕಿ ಹೂವಿನ ವನದ ತುಂಬಲೂವೆ ಗುಂಯ್ಗುಟ್ಕಂಡು ತೊನದಾಡತಿರ್ತಾವೆ. ಇವ್ನೂ ದಿನಾಲೂ ನೋಡತಿದ್ನಲ್ಲ ಅಷ್ಟೂ ಗೊತ್ತಾಗಕುಲ್ವಾ? ಹೆಡ್ಡ ತಗ ಇವ್ನು”

ಬೆಳಿಗ್ಗೆ ವಿಚಾರ ಏನೂ ತಿಳಿದಿರೊ ಗೌಡಮ್ಮರು ಮಜ್ಜಿಗೆ ಕಡೆಯದ ಬುಟ್ಟು ಒಳಗಿಂದ ಬಂದರು. “ಡಾಕ್ಟ್ರು ಸಿಗದೆ ಹೋದ್ರೆ ರಾಮಾಜೋಯಿಸರು ಮದ್ದು ಅರದು ಹಚ್ಚುತಾರಂತೆ ಕಣಿ. ನಮ್ಮ ದಾಸಯ್ಯ ಇದ್ದಿದ್ರೆ ಅವನೆ ಹಚ್ಚನು.ಅವನಾದ್ರೆ ಹಸುರೌಸ್ತಿ ಕಂಡಿದ್ದ. ಅವನು ಊರ ಮೇಲೆ ಹೋಗವನೆ. ಎಂಗೂ ಹೋಯ್ತೀರ, ಪ್ಯಾಟೇಗೆ ಮಾಲನ್ನ ಜತೀಗೆ ಕರಕಹೋಗಿ. ನಮಗೂ ಮಕ್ಳು ಮರಿ ಅವೆ. ಬಡವಿ ಪಾಪಾ…ಅಳ್ತಾ ನಿಂತವಳೆ” ಅಂತಂದ್ರು. ಇವರಿಗೆ ಅವರಿಗಿಂತಲೂ ಎಂಗುರುಳು. ಗೌಡ್ರುಗೆ ಹೊಟ್ಟುರ್ಯೋಲ್ದೆ? ಬುಟ್ಟು ಹೋದಾರೆ… ಆಗಲೇ ಎತ್ತು ಗಾಡಿ ಹೊರಡ್ಸಿದ್ರು ಶೇಖಂಗೆ ಹೇಳಿ. ಶೇಖನ ಅಣ್ಣನೇ ಮಾಲ. ಅವ್ನೂ ಕರುಳ ಎಡಗೈಲಿ ಹಿಡಕಂದು ಬೇಗ ಬೇಗ ಎತ್ತಿಗೆ ನೀರು ಕುಡಸಿ ಎತ್ತು ಹೂಡಿ, ಕಡ್ಡಾಣಿಗೆ ಎಣ್ಣೆ ಬುಟ್ಟು, ಮೂಕಿಎತ್ತಿ, ನೊಗದ ಕಣ್ಣಿಗೆ ಜತಿಗೆ ಗೂಟ ನೆಟ್ಟು, ಎತ್ತಿನ ಹೆಗಲಿಗೆ ಇಳೆ ಬುಟ್ಟು, ಕೊಳ್ಳಿಗೆ ಹಗ್ಗದ ಕಣ್ಣಿ ಕಟ್ಟದ. ಅವು ಪಾಠ ಆಗಿದ್ವಲ್ಲ? ಅಂಗೆ, ಸುಮ್ಮಗೆ ತಲೆ ಕೊಟ್ಕಂಡು ನಿಂತ್ಕಂದವು.

ಗಾಡಿ ಮೇಲೆ ಹುಲ್ಲ ಹಾಸಿ ಮಾಲಣ್ಣನ್ನ ಎತ್ತಕಬಂದು, ತಂದು ಹಾಕುದ್ರು. ಅರೆ ಪ್ರಗ್ನೇಲಿದ್ದ ಅವನ ಮಾಲಗಣ್ಣು ಮುಚ್ಚಿದ್ವು. ಅಮ್ಮಾ ಅಂತ ಕನವರ್ಸೋದು ಕಿವಿ ಮೇಲೆ ಬೀಳತಿತ್ತು. ಅವನು ದಿನಾಲು ಮಾಲಗಣ್ಣು ಬುಟ್ಟು ಯಾರನ್ನಾರ ನೋಡುದ್ರೆ, ಅವನು ಯಾರ ನೋಡುತವನೆ ಅಂತ ಊರಾನುಊರಿಗೆ ಅವರಪ್ಪನಾಣೆ ತಿಳಿತಿರಲಿಲ್ವಾ? ಅಂಗೆ ಆಗಿತ್ತು ಗೌಡ್ರಿಗೆ ಬೆಳಗಿನ ಪ್ರಸಂಗ. ಯಾಕೆ ಆವಾಗ ಅಂಗಾಡದ? ಅವನು ಯಾಕೆ ಥೂ.. ಥೂ… ಅಂಥ ಪೋಲಿ ಬೈಗಳವ ತಂದು ನನಗೆ ಬೈದ? ಅನ್ನ ಒಗಟು ಈಗ ಬುಡಸ್ಕಂಡಿತ್ತು. “ಪಾಪ್ ನನ್ ಮಗನು ಎಂಥ ನೋವ ತಿಂದ್ನಲ್ಲಪ್ಪ!” ತಾಯಿ ಕರುಳು ಗಾಡಿ ಮೇಲೂ ಹಲುಬುತಿತ್ತು. ಈ ಮಾತಿಗೆ ಅವರಿಗಾಗಲೇ ಬೆಳಗಿನ ಅವನ ಹಾರಾಟ ಮನಸಿಂದ ಕಣ್ಮರೆಯಾಗಿ ಹೋಗಿತ್ತು.  ಊದಕಂಡಿರೊ ಹನುಮಂತರಾಯನ ವೇಶ ಹಾಕಿದ ಅವ್ನ ಮಕಮಯ್ಯ ತಿರುಗಿ ನೋಡುದ್ರು. ಅಂಥ ಟೈಮಲ್ಲೂ ಅವ್ರಿಗೆ ನಗೆ ಅನ್ನದು ಉಕ್ಕುಕ್ಕಿ ಬಂತು. ಬೆಳಗಿನ ಅವನ ಪಾಡೂ ಇದಕ್ಕೆ ಕಾರಣ ಆಗಿತ್ತು. ಸಿಂಗಪುರದಮ್ಮನ  ಕಡೆ ನೋಡುದ್ರು. ಛೇ!ಪಾಪಾ! ಅವಳು ಕಾಡಪಾಪನಂಗೆ ಪಿಳಿಪಿಳಿನೆ ಕಣ್ಣು ಬಿಟ್ಟ್ಕಂಡು ಮಾತ ಕಳಕಂದು ಗಾಳಿರಾಯನ ಆಟ ನೋಡತಾ ಕುಂತಿದ್ಲು. ಅವಳ ಬೆಳ್ಳನೆ ತಂತಿ ಹಂಗಿರೊ ಗುಂಗುರು ಕೂದಲು ದಿಕ್ಕೆಟ್ಟು ಹರವಿ ಹರಿಯೋ ಮೋಡದಂಗೆ, ಅಂಕೆ ಶಂಕೆ ಒಂದೂ ಇಲ್ಲದಲೆ ಗಾಳಿರಾಯ ಕರದ ಕಡಿಗೆಲ್ಲಾ ಆಕಾಶ ನೋಡಕಂಡು ಹಾರಡತಿದ್ವು.

ಗಾಡಿ ಕೆಳಗಡೆ ಸಿಗಹಾಕಿದ, ಮೊಸರಿನ ಪಾತ್ರೆ ಹಿಡಿ ಅನ್ನದು ತೂಗಾಡತಾ, ಅದರೊಳಗಿದ್ದ ಬೆಣ್ಣೆ ತನ್ನ ಕಟ್ಟಿಹಾಕಿದ ದಬ್ರಿ ಕಂಠಕ್ಕೆ ಹಣೆ ಹಣೆ ಬಡಕೋತಾ, ದಾರೀ ಒಲಿಯೊ ಬರಸಿಗೆ  ಒಂದೊಂದು ಹನಿ ತುಳುಕುಸ್ತಾ, ನೀರು ಬಿಟ್ಟು ಬಂದಂಥ ಬಾವೀ ದಾರಿಯ ನೆನಕಂದು ಕೊಡ ತುಳಕಿಸೋ ನೀರಹನಿ ಹಂಗೆ ಮುಂದಿನ ದಾರಿಯ ಕಂಡಕಂತಾ, ಮುಂದಕ್ಕೆ ಹೋದಂಗೆ ಅದು ಹೆದ್ದಾರಿಯ ಬಂದು ಸೇರಕಂತು. ಗೌಡ್ರು “ಬೇಗ ಬೇಗ ಹೊಡಿಲಾ ಗಾಡಿಯ” ಅಂತ ಶೇಖಂಗೆ ಹೇಳುತಿದ್ರು. ಸಿಂಗಪುರದಮ್ಮ ಇಬ್ಬರ ಮೇಲೂ ತನ್ನ ಉಸುರಿನ ಭಾರ ಹಾಕಿ ’ಏನಾರ ಮಾಡಕಳಿ ಅತ್ಲಾಗೆ”, ಅಂತ ಕುಂತಿದ್ಲು. ಗೌಡ್ರು ಹೆದ್ದಾರಿಗೆ ಹತ್ತುವಾಗ ಗಾಡಿಯ ಲಡಬಡಾ ಅನ್ನ ಜೋರಾದ ಸದ್ದನ್ನ ಕೇಳಿದ್ದೆಯ  ” ತಥ್! ಎಂಗಾರಾ ಆಗ್ಲಿ? ತಲೆ ಮೇಲೆ ತಲೆ ಬೀಳಲಿ. ರಾತ್ರೋರಾತ್ರಿನೆ ಈ ಹುಣ್ಣಿಮೆ ದಿಸ ರಸ್ತೆ ಮಾಡೇ ಬುಡಬೇಕು. ಈಗ ಆಲೂರಿಗೂ ಕಾರು ಅಲ್ಲೊಂದು ಇಲ್ಲೊಂದು ಬಂದವೆ. ಅಪ್ಪಂತೋರ ಕಾರಲ್ಲಿ ಊರಿಗೆ ಕರಕಬಂದರೆ! ನಾನು ಸೈಕಲ್ಲಲ್ಲಿ ಹೋಗದೆ ಕಷ್ಟ. ಹೋಗ್ಲಿ ಅಂದ್ರೆ, ಇಂಥ ಆಪತ್ತನಲ್ಲಿ ಗಾಡಿ ನಿಸೂರಾಗಿ ಸಾಗಾಕಾದ್ರೂವೆ, ಒಂದು ಸರಿಯಾದ ಜಾಡು ಬೇಡವಾ? ನಮ್ಮ… ಊರಿನ ಯೋಗ್ಯತೆಗೆ?

“ನಮ್ಮೂರು ಅನ್ನದ ನಾವು ನೆಟ್ಕಗಿಟ್ಕಬೇಕು ಮೊದಲು” ಅಂತ ಅವ್ರು ಅನ್ನಕತಿದ್ರು.           “ಅಕ್ಕಪಕ್ಕದ ಊರೋರು ನಿಷ್ಟೂರ ಆದ್ರೆ ಆಯ್ತಾರೆ.” ಅಂತ ಮನಸಲ್ಲೆ ಇನ್ನೊಂದು ಊರ ಉಸಾಬಾರಿಯ ತಲೆ ಮೇಲೆ ಎಳ್ಕತಿದ್ರು. ತಮ್ಮೂರಲ್ಲಿ ಆಸ್ಪತ್ರೆ ಸೇರಕ್ಕಾದ್ರೂ ಒಂದು ದಾರೀಯ ಎಂಗಾರ ಮಾಡಿ ತಂದುಬುಡೋಂತ ಅವರ ಕನಸನ್ನ ತುಂಡು ಹಾಕತಾ, ಮಧ್ಯಮಧ್ಯದಲ್ಲಿ, ಮಾಲಣ್ಣ “ಅವ್ವಾಅವ್ವಾ” ಅನ್ಕಂದು ಹಲುಬಿ ನರಳತಿದ್ದ. ತಕ್ಷಣಕ್ಕೆ, ಅವರಿಗೆ ಈ…. ನೋವಿಗೆ ಮದ್ದು ಹಾಕುಸೋ ಜವಾಬ್ದಾರಿ ತಲೆ ಮೇಲೆ ಬಂದು ಕುಂತಿಂತ್ತು.

One Response

  1. H.r. Sujatha
    October 24, 2016

Add Comment

Leave a Reply