Quantcast

ಸೇತುರಾಂ ಹೊಸ ಕಥೆ ‘ಮೋಕ್ಷ’

ಮೋಕ್ಷ

n-s-seturam2

ಎನ್ ಎಸ್ ಸೇತುರಾಂ 

ರಾತ್ರಿ ಊಟ ಸರಿಹೋಗಿರ್ಲಿಲ್ಲ. ಅದ್ಯಾರದ್ದೋ ಮನೆ ಪಾದಪೂಜೆಗೆ ಹೋಗಿದ್ದು. ಬೇಡ ಬೇಡಾ ಅಂದ್ರೂ ಬಲವಂತವಾಗಿ ಬಡಿಸಿದ್ರು. ಅನ್ನ ಬೆಂದಿರ್ಲಿಲ್ಲ, ಸಾರು ಕುದ್ದಿರಲಿಲ್ಲ. ಮೂಲಂಗಿ ಬೇರು, ಹುರುಳಿ ನಾರು ಬಿಡಿಸದೇ ಬೇಯಿಸಿದ್ರು.
ಹ್ಯಾಗೆ ಹೇಳೋದು ಈ ಜನಕ್ಕೆ.

ಮಠದ ಸ್ವಾಮಿ ಸರಿ. ಪೀಠದಲ್ಲಿದ್ದೀನಿ. ಗುರು ಸಮಾನ. ಆದರೆ ಎಲ್ಲರ ಹಾಗೆ ಮನುಷ್ಯಾನೇ ಅಲ್ವಾ. ವಯಸ್ಸು ಅರವತ್ತು ದಾಟಿದೆ. ದವಡೇಲಿ ಹಲ್ಲಿಲ್ಲ. ಕರುಳಿಗೆ ಖಾರ ಒಗ್ಗಲ್ಲ. ಇನ್ನೂ ಬೆಳಗ್ಗಿನ ಜಾವ ನಾಲ್ಕು ಗಂಟೆ. ಆಗ್ಲೇ ಆರು ಸಾರ್ತಿ ಸಂಡಾಸಿಗೆ ಹೋಗಿ ಕೂತೆದ್ದು ಬಂದಾಯ್ತು.

painting1ಅದೇನೋ ಪಾದಪೂಜೆ ಊಟ ಅಜೀರ್ಣ. ಅಯೋಗ್ಯರು! ಪಾಪಾನೇ ಬೇಯ್ಸಿ ಹಾಕ್ತಾರೋ ಏನೋ? ಎಷ್ಟೋ ಸಾರಿ ಅನ್ಸುತ್ತೆ. ಈ ಪಾದಪೂಜೆ ಕಾರ್ಯಕ್ರಮ ಬೇಡಾಂತ. ಆದ್ರೆ ಬಿಡೋದು ಕಷ್ಟ. ಮಠಕ್ಕಿರೋ ಒಂದು ಮುಖ್ಯವಾದ ಸಂಪಾದನೆ ಮಾರ್ಗ. ಗುರು ಅಂತ ಅನ್ನಿಸಿಕೊಂಡ ಮೇಲೆ ಹತ್ತು ಕಡೆ ಸುತ್ತಬೇಕು. ಇಲ್ಲಿ ಉತ್ಸವ, ಅಲ್ಲಿ ಪಾರಾಯಣ, ಮತ್ತೊಂದು ಕಡೆ ಪಾದಪೂಜೆ, ಇನ್ನೆಲ್ಲೋ ಪ್ರವಚನ. ಜನ ಸೇರ್ತಾರೆ, ಕಾಣಿಕೆ ಹರಿಯುತ್ತೆ, ಮಠ ನಡೆಯುತ್ತೆ. ಬಿಟ್ಟು ಕೂತ್ರೆ ಆದಾಯ ಇರಲ್ಲ. ಮಠದಲ್ಲಿ ನಾಲ್ಕು ಹೊತ್ತು ಧಾರಾಳವಾಗಿ ಬೇಯ್ಸಿ ಬಡಿಸೋಕ್ಕಾಗುತ್ತಾ? ಬಿಟ್ಟಿ ಉಂಬಳ ಇಲ್ಲದ ಮಠಕ್ಕೆ ಭಕ್ತರೆಲ್ಲಿ ಬರ್ತಾರೆ? ಅಂಟಿಕೊಂಡ ಶಿಷ್ಯರೂ ಓಡ್ತಾರೆ.

ಒಂದು ಕ್ಷಣ ನಗು ಬಂತು! ಊಟ ಕೆಟ್ಟು ಅಜೀರ್ಣವಾಗಿ ಸಂಡಾಸಿಗೆ ಕೂತ ವಿರಕ್ತ ಸ್ವಾಮಿಯ ಮನಸ್ಸಿನ ತುಂಬಾ ಊಟದ್ದೇ ಚಿಂತೆ!
ಸತ್ಯಾನೇ ಅಲ್ವ?
ಕಾಲು, ಕಣ್ಣು ಸರಿ ಇದ್ದು, ಸ್ವಾಭಾವಿಕವಾಗಿದ್ರೆ ಅವುಗಳ ಇರವೇ ಮನಸ್ಸಿಗೆ ಬರಲ್ಲ. ಊನ ಆಗ್ಲಿ, ಮನಸ್ಸಿನ ತುಂಬೆಲ್ಲಾ ಅವೆ.
ಇನ್ನು ಮಲಗಬೇಕು! ಬೆಳಿಗ್ಗೆ ಆರಕ್ಕೆ ಅದ್ಯಾರೋ ರಾಜಕೀಯದವನಂತೆ! ಬರ್ತಿದ್ದಾನೆ. ದರ್ಶನಕ್ಕೆ ಕೂರಬೇಕು…. ಎದ್ರು.
***
ಇದೊಂದು ಹೆಸರಾಂತ ಮಠ. ಇತಿಹಾಸವೇ ಸಾವಿರ ವರ್ಷಕ್ಕಿಂತ ಹೆಚ್ಚಿದೆ. ನೂರಾರು ಜನ ಪೀಠಾಧಿಪತಿಗಳು ಬಂದು ಹೋಗಿದ್ದಾರೆ.

ರಾಜ್ಯದ ಮುಕ್ಕಾಲು ಮೂರುವಾಸಿ ಜನ ಇದಕ್ಕೆ ನಡ್ಕೋತಾರೆ. ಹಳಬರು ಭಾವುಕರಾಗಿ ಇದು ದ್ವಾಪರ ಮುಗ್ದು ಕಲಿ ಹುಟ್ದಾಗ ಸ್ವಯಂ ಭಗವಂತನೇ ಹುಟ್ಟು ಹಾಕಿದ ಮಠ ಅಂದದ್ದೂ ಇದೆ.

40 ಶಾಖೆಗಳು, 62 ಕಾಲೇಜು, ಸ್ಕೂಲು, 2 ಯೂನಿರ್ವಸಿಟಿ. ಕೋಟಿಗಳಲ್ಲಿ ಆದಾಯ, ಕೋಟಿಗಳಲ್ಲಿ ಖರ್ಚು. ಸ್ವಾಮಿಗಳೇ ಒಮ್ಮೆ ಪೀಠದಲ್ಲಿ ಕೂತು, ಸಭೆ ನಡೆಸ್ತಿದ್ದಾಗ ಅಂದದ್ದು ಉಂಟು, ದಾತರು ನೀವು ಭಕ್ತರು. ಮಠವನ್ನು ಅದ್ಭುತವಾಗಿ ನಡೆಸಿದ್ದೀರಿ. ರಾಜ್ಯದ ಬಜೆಟ್ಗಿಂತ ಪೀಠದ ಬಜೆಟ್ ಒಂದೆರಡು ಕೋಟಿ ಮೇಲೈತೆ, ಹಂಗಿಟ್ಟಿದ್ದೀರಿ!

ಈಗಿರುವ ಸ್ವಾಮಿಗಳು ಪೀಠದಲ್ಲಿ ಕೂತು 45 ವರ್ಷ ಕಳೆದಿದೆ. ಹಾಗೆ ನೋಡಿದರೆ ಮಠದ ಇತಿಹಾಸದಲ್ಲಿ ಇಷ್ಟು ವರ್ಷ ಯಾರೂ ಪೀಠದಲ್ಲಿ ಕೂತದ್ದೇ ಇಲ್ಲ. ಜನ ಏನೋ ಇದರ ಬಗ್ಗೆ ಕತೆ ಕತೆಯಾಗಿ ಮಾತಾಡ್ತಾರೆ. ಸ್ವಷ್ಟವಾಗಿ ಇವರ ಮೂಲ ಯಾರಿಗೂ ಗೊತ್ತಿಲ್ಲ. ಅದೇನೋ ಹಿರಿಸ್ವಾಮಿಗಳು ಧ್ಯಾನದಲ್ಲಿದ್ದಾಗ ಭಗವಂತ ಬಂದು, ಉತ್ತರ ದಿಕ್ಕಿಗೆ ಒಂದು ಸ್ಮಶಾಣ ಅದೆ, ನನ್ನದೊಂದು ಅವತಾರ ಅಲ್ಲಿ ಬತ್ತಲು ಮಲಗಿದೆ. ತಂದು ಸಾಕ್ಕೋ ಅಂದ್ನಂತೆ. ಅವನು ಹೇಳಿದ ಹಾಗೆ ಸ್ಮಶಾಣದಲ್ಲಿ ಕಾಯೋರು ಇಲ್ಲದೆ, ಆಗಷ್ಟೇ ಹುಟ್ಟಿದ ಬತ್ಲು ಮಗು ಇತ್ತಂತೆ. ಹಿರಿಸ್ವಾಮಿಗಳು ತಂದು ಸಾಕ್ಕೊಂಡ್ರಂತೆ. ಮುಂದೆ ಅವನೇ ಕಿರಿಸ್ವಾಮಿಯಾಗಿ ಹಿರಿಸ್ವಾಮಿಗಳ ನಂತ್ರ ಪೀಠದಲ್ಲಿ ಕೂತ್ನಂತೆ. ಸುಮಾರು ಓದ್ಕಂಡಿದ್ದಾನೆ. ಪ್ರವಚನದಷ್ಟು ಆಧ್ಯಾತ್ಮ ಇದೆ. ವ್ಯವಹಾರ ಚುರುಕು. ಜನ ಪ್ರೀತಿಯಿಂದ ಅಂದಿದ್ದಿದೆ:

ಈ ಸ್ವಾಮಿಗಳು ಅಧ್ಯಾತ್ಮಕ್ಕಿಳಿಯುವ ಬದ್ಲು ವ್ಯವಹಾರದಲ್ಲಿದ್ದಿದ್ರೆ ಅಂಬಾನಿನಾ ಮನೆಗೆ ಕಳಿಸ್ತಿದ್ರು ಅಂತ.
ಆಗದವರು ಈ ವಿಷ್ಯದಲ್ಲಿ,
ಮಿಶ್ರತಳಿ ಮುಂಡೇಮಗ, ಲೆಕ್ಕಕ್ಕೆ ಅಂತ ಬೆರಳು ಕೊಟ್ರೆ ಅಂಗೈ ಇರ್ಲಿ, ಪೂರ್ತ ಕೈಯೇ ನುಂಗ್ತಾನೆ.
ಆದ್ರೂ ಒಂದು ಸತ್ಯ!

ಮನುಷ್ಯ ಸಭ್ಯ! ಜನಾನುರಾಗಿ! ಆಡಂಬರವಿಲ್ಲ! ಮಠದ ಕಾಸು ಪೋಲು ಮಾಡಿದವನಲ್ಲ! ದೇಹಿ ಅಂತ ಬಂದವರಿಗೆ ಇಲ್ಲಾ ಅಂದವನಲ್ಲ! ಯಾರೇ ಬಂದ್ರೂ ಊಟ ಸಿಗುತ್ತೆ! ಯಾವುದೇ ಬಡ ಅಥವಾ ಅನಾಥ ಮಗು ಬಂದ್ರೂ ಜಾಗ ಕೊಡ್ತಾನೆ. ಓದಿಸ್ತಾನೆ!
ಯಾವುದು ಜಾತಿ ಅನ್ನೋ ಪ್ರಶ್ನೆನೇ ಉದ್ಭವಿಸೇ ಇಲ್ಲ!

ಸ್ವಾಮಿಗಳು ಎಷ್ಟೋ ಸಾರ್ತಿ ನಗ್ತಾ ಅಂದದ್ದಿದೆ: ದಿಲ್ಲಿ ಕೆಂಪು ಕೋಟೆ ಮೇಲೆ ಇವತ್ತು ಸ್ವಾತಂತ್ರ್ಯ ಅಂತಂದು ಮಧ್ಯರಾತ್ರಿಯಲ್ಲಿ ಮೂರು ಬಣ್ಣದ ಬಾವುಟ ಹಾರಿಸುತ್ತಿದ್ದಾಗ; ಇಲ್ಲಿ ಕಳ್ಳಭಟ್ಟಿ ಕುಡ್ದು ತೂರಾಡ್ತಿದ್ದ ಕುಡುಕನೊಬ್ಬ, ಪಾಪ ಅದೊಂದು ಹುಟ್ಟು ಹುಚ್ಚು ಹೆಂಗ್ಸು, ಅದನ್ನ ಸ್ಮಶಾಣದಲ್ಲಿ ಕೆಡಿಸಿದ್ನಂತೆ. ಅಂಗೇ ನಮ್ಮ ಸೃಷ್ಟಿಯಾದದ್ದು. ನಾಯಿ ನರಿ ಕಿತ್ತು ತಿನ್ನಬೇಕಾದ ದೇಹಾನಾ ಅಂದದ ಅರಮನೆಗೆ ತಂದು ಚಂದದಲ್ಲಿ ಸಾಕಿ, ಮಂದಲಿಗೆ ಮ್ಯಾಗೆ ದರ್ಬಾರದಲ್ಲಿ ಕುಂದರಿಸ್ಯಾನಾ ಭಗವಂತ. ಜಾತಿ ಅಂಬೋದು ನಮ್ಮ ನಾಲಿಗೆಯಲ್ಲಿ ಬಂದ ದಿನ ಸುಲಿದು ಬಿಡಿ ಚರ್ಮಾನಾ. ಮಠದ ಮುಂದಿನ ಆಲದ ಮರಕ್ಕೆ ಕಟ್ಹಾಕಿ ಕಲ್ಲು ಹೊಡ್ದು ಕೊಂದುಬಿಡಿ!

ಮುಂದೆ ಕೂತ ಭಕ್ತರು ಕಣ್ಣಿನಲ್ಲಿ ನೀರು ತುಂಬಿ ತಲೆಯಾಡಿಸಿದ್ದಿದೆ. ಭಾವುಕರಾಗಿ ಸ್ವಾಮಿಗಳು ಎದ್ದು ಹೋದದ್ದೂ ಇದೆ.
***

ರಾತ್ರೆ ಊಟ ಸರಿ ಇಲ್ದೆ ಹತ್ತಾರು ಸಾರ್ತಿ ಸಂಡಾಸಿಗೆ ಹೋಗ್ಬಂದಿದ್ರು. ನಿದ್ದೆ ಸರಿಯಾಗಿ ಆಗಿರ್ಲಿಲ್ಲ. ಹಾಗಂತ ಸಮಯಕ್ಕೆ ಸರಿಯಾಗಿ ಸಿದ್ಧವಾಗಿ ದರ್ಬಾರದಲ್ಲಿ ಕೂರದಿದ್ರೆ, ಬಂದ ಜನಕ್ಕೆ ನಿರಾಶೆಯಾಗತ್ತೆ. ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ, ಪಂಚೆ ಸುತ್ತಿ ಮೇಲುಡುಗೆ ಹೊದ್ದು ಸಿದ್ಧರಾಗ್ತಿದ್ದ ಹಾಗೆ ಫೋನ್ ಹೊಡ್ಕೊಳ್ತು. ಆಗಲೇ ಬಂದನೇನೋ ಅಂದುಕೊಂಡು, ಸ್ವಾಮಿಗಳು ಫೋನ್ ತಗಂಡು ಅಂದ್ರು:
ಬಂದೆ! ಕೂತಿರೋಕ್ಕೇಳು!
ಪರಮೇಶಿ ಬಂದಾನೆ. ಅಪಗೋಳ.
ಯಾಕೆ?
ನಿಮ್ಮನ್ನೇ ನೋಡ್ಬೇಕಂತೆ.
ಈಗ ಆಗ್ದು. ಮುಖ್ಯವಾದವರೊಬ್ರು ಬರ್ತಾ ಇದ್ದಾರೆ. ಸಂಜೆಗೆ ಬರೋಕ್ಕೇಳು.
ತುರ್ತಲ್ಲಿದ್ದಾನೆ. ಕ್ಷಣ ಹಿಂಗ್ ಅಂದು, ಹಂಗೋಗ್ತೀನಿ ಅಂತಾನೆ.
ಕಳ್ಸು.
ಪರಮೇಶಿ ಸ್ವಾಮಿಗಳಿಗೆ ಆಪ್ತ. ಇಲ್ಲೀ ಸ್ಕೂಲು, ಕಾಲೇಜಲ್ಲೇ ಓದ್ದೋನು. ಸ್ವಾಮಿಗಳೇ ನಿಂತು ಅವನಿಗೊಂದು ಮದುವೆ ಅಂತ ಮಾಡಿ ಮನೇನೂ ಕಟ್ಸ್ಕೊಟ್ಟಿದ್ದಾರೆ.
ಕೆಲ್ಸದಲ್ಲಿದ್ದಾನೆ. ಆದಾಯ ತೆರಿಗೆ ಇಲಾಖೆಯಲ್ಲಿ ಇನ್ಸ್ಪೆಕ್ಟ್ರು.
ಸ್ವಾಮಿಗಳು ಮುಕ್ಕಾಲು ಮೂರುವಾಸಿ ಮಠದಲ್ಲೇ ಕಳೆಯೋದ್ರಿಂದ ಪ್ರಪಂಚದ ವಿಷ್ಯ ತಲುಪೋದು ಕಮ್ಮಿ. ಅದಕ್ಕಿವ್ನು. ಒಂದು ಲೆಕ್ಕಕ್ಕೆ ಸ್ವಾಮಿಗಳ ಕಣ್ಣು ಕಿವಿಯೆನ್ನಬಹುದು.
ಬಂದ! ಅಂದ!
ಸಮಸ್ಯೆ ಇರೊ ಅಂಗದೆ!
ಏನು?
ಇಲಾಖೆಯಲ್ಲಿ ಮಠದ ಫೈಲ್ ಮೂವ್ ಆಗ್ತಿದೆ.
painting3ಅಂದ್ರೆ?
ಇಲಾಖೇಲಿ Investigation wing ಅಂತ ಒಂದಿದೆ.
ಗೊತ್ತು.
ತೆರಿಗೆ ಯಾರ್ಯಾರು ಕದ್ದಿರಬಹುದು ಅನ್ನೋ ಸುದ್ದಿ ಬಂದ್ರೆ, ಅಥವಾ ಕದ್ದ ಹಣ ಯಾರಾದ್ರೂ ಇಟ್ಕೊಂಡಿರ್ಬಹುದು ಅನ್ನೋ ಅನುಮಾನ ಇದ್ರೆ, ಅವರ ರೆಕಾರ್ಡ್ ತರ್ಸಿ, ಪರಿಶೀಲಿಸಿ ಅನುಮಾನ ದೃಢವಾದ್ರೆ ರೈಡ್ ಮಾಡ್ತಾರೆ. ಜಪ್ತಿ ಮಾಡಿ ಲೆಕ್ಕದಲ್ಲಿಲ್ಲದ್ದನ್ನ ಮುಟ್ಟಗೋಲು ಹಾಕ್ಕೊತ್ತಾರೆ.
ಇಲ್ಲಿ ಅಂತದ್ದೇನಿದೆ? ನಮ್ದು ಟ್ರಸ್ಟು. ನಾವು ಸ್ವಾಮಿಗಳು. ನಾವಿರೋದು ಧಾರ್ಮಿಕ ಕಾರ್ಯಗಳಿಗೆ, ವಿದ್ಯೆ ವಿನಿಯೋಗಕ್ಕೆ ನಮ್ಮ ಆದಾಯ! ನಿಮ್ಮ ಕಾನೂನಿನಲ್ಲಿ ಎಕ್ಸಂಮ್ಟು. ಲೆಕ್ಕ ಸರಿಯಾಗೇ ಇಟ್ಟು, ಸಮಯಕ್ಕೆ ಸರಿಯಾಗಿ ಕೊಟ್ಟಿದ್ದೀವಿ. ಇನ್ನೇನಿದೆ?
File move ಆಗ್ತಿದೆ. ಅದು ದಿಟ. ಇಲ್ಲೇನದೆ, ಇಲ್ಲ! ಅದು ಅಪ್ಪುಗೊಳ ಆಂತರ್ಯದಿಷ್ಯ. ಮಠದ ಕಣ್ಣು ಕಿವಿ ನಾನು. ಬಂದು ಹೇಳಬೇಕಲ್ವಾ? ಬಂದೀನಿ, ಹೇಳೀನಿ.

ನಿಂತಿದ್ದ!
ಸ್ವಾಮಿಗಳು ಅವನ್ನ ದಿಟ್ಟಿಸಿದ್ರು!
ಏನಿದೆ ಇವನ ಮನಸ್ಸಲ್ಲಿ! ನಾನೂ ಒಬ್ಬ ಕಳ್ಳ ಅನ್ನೋ ಭಾವ ಇದ್ಯಾ? ತುಟಿ ಅಂಚಲ್ಲಿ ಕಂಡೂ ಕಾಣದ ಹಾಗೆ ಸಣ್ಣ ನಗು ಇದೆ. ಅಥವಾ ಸ್ವಲ್ಪ ಹಲ್ಲು ಉಬ್ಬು. ಅದು ಹಾಗ್ ಕಾಣಿಸ್ತಿದ್ಯಾ?
ಪ್ರಸಾದ ತಗೊಂಡು ಹೋಗು.
ಹೊರಟ.
ಇಸ್ಯಾ ಇಲ್ಲಿಗೇ ಬಿಡು! ಮತ್ತೇನಾರ ಕಿವಿಗೆ ಬಿದ್ರೆ ಬಂದ್ ಹೇಳು.
ಒಂದು ನಿಮಿಷ ಕೂತ್ರು.
ಮತ್ತವ ಬಂದಂದ – ನಿಮ್ಮಾಣೆಗೂ ಸತ್ಯ. ಸುಳ್ಳಲ್ಲ. ಇಲ್ಲಿ ಅನ್ನ ತಿಂದಿದ್ದೀನಿ. ನಾನಿವತ್ತಿವ್ನಿ. ನಾಳೆ ಇಲ್ಲ. ವಿರಕ್ತರು ತಾವು. ಇವತ್ತಿಲ್ಲಿದ್ದೀರಿ. ಬ್ಯಾಡ ಅನ್ಸಿದ್ರೆ ಬೆಟ್ಟ ಹತ್ತೀರಿ. ಮಠ ಉಳೀಬೇಕು ಅಲ್ವರಾ?
ಹೋಗು ಅಂದ್ರು. ಹೊರಟ.
***

ಸಭೆ ಸೇರಿತ್ತು. ಮಠದ ವರ್ತಕರ ಸಂಘದ ಅಧ್ಯಕ್ಷ ಶಿವಮೂರ್ತಿ ಇದ್ರು. ಲೆಕ್ಕ  ಪರಿಶೋಧಕ ಐತಾಳ್ರಿದ್ರು. ರಾಜ್ಯದಲ್ಲಿದ್ದ ಎರಡು ಮುಖ್ಯ ರಾಜಕೀಯ ಪಕ್ಷಗಳು, ಎರಡರ ಧುರೀಣರೂ ಇದ್ರು. ಮಹಿಳೆಯರಿಗೆ ಪ್ರಾತಿನಿಧ್ಯವಿಲ್ಲದಿದ್ರೆ ಹ್ಯಾಗೆ? ಅಂಬಾಬಾಯಿ ಅಲಿಯಾಸ್ ರೂಪ ಶ್ಯಾನಭೋಗ್ ಇದ್ರು. ಎಲ್ಲಾ ಟ್ರಸ್ಟಿಗಳೂ ಸೇರಿದ್ರು. ಆಕೇನೇ ಮೊದ್ಲು ಮಾತಾಡಿದ್ದು.
ಸಿಂಬಳ ಅಂದ್ಮೇಲೆ ನೊಣ ಇರ್ತದೆ. ಹಣ, ಆದಾಯ ಇರೋ ಕಡೆ ಆದಾಯ ತೆರಿಗೆಯವ್ರು ಬರ್ತಾರೆ. ಬರ್ಲಿ ಬಿಡಿ.
ಎಲ್ಲ ಮುಖ ಮುಖ ನೋಡ್ಕೊಂಡ್ರು. ಯಾರೂ ಬಾಯಿ ಬಿಡ್ಲಿಲ್ಲ. ಆಕೆ ಮತ್ತಂದ್ಲು –
ಸೂಳೆಗೇರಿ ಅಂದ್ಮೇಲೆ ರೋಗ ಇರುತ್ತೆ. ಹಾದರಕ್ಕೆ ಕುಂತಮೇಲೆ ಇಂತೋನೇ ಬರ್ಬೇಕು ಅನ್ನೋಕಾಯ್ತದಾ? ಹತ್ತಾರು ಜನ ಓಡಾಡೋ ದಾರಿಯಾಗೇ ಹೊಲ್ಸಿರುತ್ತೆ. ವಾಸ್ನೆ ಬರುತ್ತೆ. ತೊಳಿಯೋಕ್ಕೆ ಜನ ಬರ್ತಾರೆ. ಆದಾಯ ತೆರಿಗೆ ಇರೋದೇ ಅದಕ್ಕಲ್ವಾ? ಬರ್ಲಿ ಬಿಡಿ.
ಆಳೋ ಪಕ್ಷದ ಧುರೀಣರು, ಗೋವಿಂದಯ್ಯನವರಿಗೆ ಇರಿಸುಮುರಿಸಾಯ್ತು.
ಸುಮ್ನಿರಮ್ಮ, ನಿನಗೇನ್ ಅರ್ಥಆಗುತ್ತೆ. ಇದು ಮಠ. ಧರ್ಮದ ಜಾಗ! ಸುಲಭ ಶೌಚಾಲಯ ಅಲ್ಲ. ಕೊಳಕು ಮಾತಾಡ್ಬೇಡ.
ನೀವಿದ್ಧೀರಿ! ವಿರೋಧ ಪಕ್ಷದ ಲೀಡರ್ ಇದ್ದಾರೆ! ವರ್ತಕರ ಸಂಘದ ಅಧ್ಯಕ್ಷರು ಇದ್ದಾರೆ! ಸಗಣೀನಾ ಸಗಣಿ ಅಲ್ಲ ಅಂತ ಸಾಧಿಸೋ ಬಿಂಬಿಸೋ ಐತಾಳ್ರಿದ್ದಾರೆ! ನಿರ್ಧರಿಸೋ ಧಣಿಗಳು ನೀವು ಅಂತ ಆದ್ಮೇಲೆ ಧರ್ಮ ಎಲ್ಲಿದೆ? ಮಠ ಇದೆ ಅದು ಸತ್ಯ! ಧರ್ಮ ಎಲ್ಲಿದೆ?
ಈ ಅಂಬಾಬಾಯಿ ಅಲಿಯಾಸ್ ರೂಪ ಶ್ಯಾನಭೋಗ್ ನಾಲ್ಕನೇ ಕ್ಲಾಸ್ ಓದ್ದೋಳಲ್ಲ. ಬೆಂಗ್ಳೂರ್ ಹತ್ರದ ಒಂದು ಸಣ್ಣ ಊರಲ್ಲಿ ಇವಳಪ್ಪ ಗಾರೆ ಕೆಲ್ಸ ಮಾಡ್ತಿದ್ನಂತೆ. ಹದಿನಾರನೇ ವಯಸ್ಸಿಗೆ ಪ್ರೀತಿ ಪ್ರೇಮ ಅಂತ ಯಾರೊಟ್ಟಿಗೋ ಓಡ್ಹೋದೋಳು ಮೂರು ಮಕ್ಳಾದ ಮೇಲೆ ಅವನ್ನ ಬಿಟ್ಳಂತೆ. ಇವ್ಳು ಬಿಟ್ಳು ಅಂದೋರೂ ಇದ್ದಾರೆ. ಅವ್ನೇ ಓಡ್ಹೋದ ಅಂದೋರೂ ಇದ್ದಾರೆ. ಕಸ ಮುಸುರೆ ತಿಕ್ಕಿದ್ದಿದೆ, ಆಯಾ ಕೆಲ್ಸ ಮಾಡಿದ್ದಿದೆ, ಎಲ್.ಕೆ.ಜಿ., ಯು.ಕೆ.ಜಿ.ಗೆ ಮೇಡಂ ಆದದ್ದೂ ಇದೆ. ಅದ್ಯಾರೋ ಗಾರ್ಮೆಂಟ್ ಓನರ್ ಒಬ್ಬ ಇದ್ದ. ವಯಸ್ಸಾಗಿತ್ತು. ಆಸ್ತಿ ಇತ್ತು. ಅಲ್ಲಿ ಕೆಲ್ಸಕ್ಕಿದ್ದವಳು ಅವನಿಗೆ ಸಹಾಯವಾಗಿದ್ಲಂತೆ. ಸಂಬಂಧ ಇತ್ತು ಅಂತಾರೆ. ಇಲ್ಲಾ ಮುದುಕನ ಕೊನೆಗಾಲದಲ್ಲಿ ನೋಡ್ಕೊಂಡ್ಲು ಅಂತಾರೆ. ಅವನು ಸತ್ತ, ಆಸ್ತಿ ಇವಳಗ್ಬಂತು. ಹಣ ಇತ್ತು, ಆಸ್ತಿ ಇತ್ತು, ಪುರುಸ್ಸೊತ್ತಿತ್ತು, ವಯಸ್ಸಿತ್ತು, ಕಂಡವ್ರ ಆಸ್ತಿ ಕೈಗೆ ದಕ್ಬೇಕು, ಜೀರ್ಣ ಆಗ್ಬೇಕು ಅಂತಾದ ಮೇಲೆ ಅಧಿಕಾರದವರ ನೆಂಟಸ್ತಿಕೆ ಬೇಕಿತ್ತು. ಹಾಗಾಗಿ ಮೊದಲಿಗೆ ಅಧಿಕಾರಿಗಳು. ಅನ್ಯಾಯದ ಪ್ರಶ್ನೆ ಬಂದಾಗ ರೌಡಿಗಳು, ಮತ್ತೆ ನಿಧಾನವಾಗಿ ರಾಜಕಾರಣಿಗಳ ನೆಂಟಸ್ತಿಕೇನೂ ಆಯ್ತು. ಸಣ್ಣದೊಂದು ಬೋರ್ಡ್ ಮೆಂಬರ್ ಅಂತ ಶುರುವಾದದ್ದು ಈಗ ಎಕ್ಸ್ಎಂಎಲ್ಸಿ ಪ್ರಪಂಚವನ್ನು ವಿವರವಾಗಿ ಕಂಡಿದ್ದಾಳೆ. ಅನುಭವಿಸಿದ್ದಾಳೆ. ಹಾಗಾಗಿ ಸತ್ಯಾನ ಪ್ರಖರವಾಗಿ ಮಾತಾಡ್ತಾಳೆ. ರಾಚ್ತಾಳೆ. ಅಂದೇ ಬಿಟ್ಳು-
ಇಲ್ಲಿ ಧರ್ಮ ಎಲ್ಲಿದೆ? ಮಠ ಅಷ್ಟೇ!
ಸುಮ್ನಿದ್ರೆ ವಿಷ್ಯ ಎಲ್ಲಿಂದೆಲ್ಲಿಗೋ ಹೋಗುತ್ತೆ ಅನ್ನಿಸ್ತು ಸ್ವಾಮಿಗಳಿಗೆ. ಮೌನ ಮುರಿದ್ರು.
ಮಾನವಾಗಿ ಬದುಕಿದ್ದೀನಿ. ಮಾನವಾಗಿ ಸಾಯೋ ಇಚ್ಛೆ ನನ್ಗೆ. ಧರ್ಮದ ಬಗ್ಗೆ ಪುಟಗಟ್ಲೆ ಮಾತಾಡೋ ಚೈತನ್ಯ ಇಲ್ಲ. ವೇದ ಓದ್ದೋನಲ್ಲ, ಉಪನಿಷತ್ನ ಕಲತವ್ನಲ್ಲ. ರಾಮಾಯಣ, ಮಹಾಭಾರತ ಕೇಳಿ ಗೊತ್ತು. ಭಗವದ್ಗೀತೆ ಉಲೀತೀನಿ. ವ್ಯಾಖ್ಯಾನ ಮಾಡಲಾರೆ. ಆದ್ರೆ ಒಂದು! ಶಿಸ್ತಲ್ಲೇ ಬದುಕಿದ್ದೀನಿ. ಕಳ್ಳತನ ಮಾಡಿಲ್ಲ, ಸುಳ್ಳು ಹೇಳ್ಳಿಲ್ಲ, ಕೇಡು ಬಯಸ್ದವ್ನಲ್ಲ. ಈ ಮಠ ಆಸ್ತಿ ಎಲ್ಲ ನನ್ನದಲ್ಲ ಜನರದ್ದು ಅಂತ ನಂಬಿ ಹಾಗೇ ನಡ್ಕಂಡಿದೀನಿ. ಸುಖ ಅಪೇಕ್ಷಿಸಿಲ್ಲ. ಈ ಬದುಕನ್ನ ಕಷ್ಟ ಅಂತ್ಲೂ ಅಂದ್ಕಂಡಿಲ್ಲ. ಮಾನವಾಗಿದ್ದೀನಿ. ಮಾನವಾಗಿ ಬದುಕಿದ್ದೀನಿ. ಮಾನವಾಗಿ ಸಾಯೋ ಇಚ್ಛೆ ನನ್ಗೆ.
ಸುಮ್ಮನಾದ್ರು. ಕ್ಷಣ ಕೂತ್ರು.
ಯಾರೂ ಮೌನ ಮುರೀಲಿಲ್ಲ.
ಮಾತು ಮುಂದುವರ್ಸಿದ್ರು – ನನ್ನನ್ಯಾರು ಬುದ್ಧವಂತ ಅಂತ ಕರ್ದಿಲ್ಲ, ಪವಾಡ ಪುರುಷ ಅನ್ಲಿಲ್ಲ. ಆದ್ರೆ ಪ್ರಾಮಾಣಿಕ ಅಂತಾರೆ. ಪೀಠದಲ್ಲಿ ಕೂತವ್ನು ಬುದ್ಧಿವಂತ ಆಗಿರ್ಬೇಕಿಲ್ಲ. ಪ್ರಾಮಾಣಿಕ ಆಗಿದ್ರೆ ಸಾಕು. ಜನ ಬರ್ತಾರೆ. ಜನ ಸೇರ್ತಾರೆ. ಹಾಗಾಗಿ ಈ ಮಠ ಉಳ್ದಿದೆ. ಜನ ಬರದ ದಿನ ಮಠ ಇಲ್ಲ. ಸ್ಮಶಾಣ. ಮಠದ ಆದಾಯದ ಲೆಕ್ಕದಲ್ಲಿ ಐಬಿಲ್ಲ. ಕನ್ನಡಿಯಷ್ಟು ನಿಚ್ಚಳ. ಅಲ್ಲಿ ನನಗೆ ಆದಾಯ ತೆರಿಗೆ ಭಯ ಇಲ್ಲ. ಮಠದ್ದಲ್ಲದ್ದು ಮಠದಲ್ಲಿ ಏನಿದೆ ಬಿಟ್ಟಿದೆ ಅದು ನಿಮಗೆ ಬಿಟ್ಟದ್ದು. ನಿರ್ಧರಿಸಬೇಕಾದ್ದು ನೀವು. ದರ್ಬಾರಲ್ಲಿ ಭಕ್ತರು ಕಾಯ್ತಿದ್ದಾರೆ. ಮುಗ್ಸಿ ಬರ್ತೀನಿ. ಧಣಿಗಳು ನೀವು. ನಿರ್ಧಾರಕ್ಕೆ ಬನ್ನಿ.
ಎದ್ರು. ಹೊರಟ್ರು.
ಟ್ರಸ್ಟಿಗಳಷ್ಟೂ ಜನ ಮುಖ ಮುಖ ನೋಡ್ತಾ ಕೂತ್ರು.
ಆಳುವ ಪಕ್ಷದ ಧುರೀಣರಿಂದ ಮಾತುಗಳು ಶುರುವಾಯ್ತು.
ಈ ಪ್ರಾಮಾಣಿಕ ತಳಿ ಯಾವತ್ತೂ ಅಪಾಯಾನೇ!
ತೆರಿಗೆಯವನು ಬರ್ತಾನೆ, ಪರಮೇಶಿ ಅಂದ ಅಂತಾರೆ. ಸತ್ಯಾನಾ ಸುಳ್ಳಾ ಕಂಡೋರ್ಯಾರು?
ಕತೆಕಟ್ಟಿ ಹೇಳ್ತಾವ್ನಾ ವಯ್ಯಾ? ನಮ್ಮನ್ನ ಹೆದರ್ಸಾಕೆ?
ಸಂತ ಅಂದ್ಕಂಡಿದ್ವಿ. ನಮ್ಗಿಂತ ಖದೀಮ ಇದ್ದಂಗದೆ. ಅವರು ಬರ್ತಾರೋ ಇಲ್ವೋ, ಇವ್ನೇ ಕರ್ಸಿ, ಎಲ್ಲಾ ಆಸ್ತಿ ಮಠದ್ದೆಯೇ ಅಂದ್ರೂ ಅಂದ್ನೇ!
ಎಲ್ಲರ ಆಸ್ತೀನೂ ಇಲ್ಲಿತ್ತು. ಎಷ್ಟಿತ್ತು? ಎಷ್ಟಿರಬಹುದು? ಏನು? ಯಾರೂ ಬಾಯ್ಬಿಡ್ಲಾರ್ರು. ಒಂದು ಎಂ.ಪಿ. ಎಲೆಕ್ಷನ್ನಿಗೆ ಐದು ಕೋಟಿ, ಎಂ.ಎಲ್.ಎ.ಗೆ ಎರಡೂವರೆ ಕೋಟಿ, ಕಾರ್ಪೊರೇಷನ್ಗೆ ಒಂದೂವರೆ ಕೋಟಿ, ಸುಡುಗಾಡು ಪಂಚಾತಿಗೆ ಐವತ್ತೈದು ಲಕ್ಷ. ಖರ್ಚು ಮಾಡದೆ ಅಧಿಕಾರ ಇಲ್ಲ. ಅಧಿಕಾರದಲ್ಲಿದ್ದಾಗ ದುಡ್ದು ಇಟ್ರೆ ತಾನೇ ಮತ್ತೆ ಅಧಿಕಾರಕ್ಕೆ ಬರೋದು. ದುಡಿಯೋದಾಗುತ್ತೆ, ಇಡೋದೆಲ್ಲಿ?
painting4ಮನೇಲಿ ಹೆಂಡ್ತಿ ಮಕ್ಳ ಭಯ. ಪ್ರಪಂಚದಲ್ಲಿ ಕಳ್ಳ-ಕಾಕರ ಭಯ, ನೆಂಟ್ರು ಇಷ್ಟರ ಭಯ, ಮೇಲೆ ಸರ್ಕಾರದ ಇಲಾಖೆಗಳ ಭಯ. ತಂದು ತಂದು ಇಲ್ಲಿ ಇಟ್ಟಿದ್ರು; ಮಠದಲ್ಲಿ. ಮೊದಲಿಗೆ ರಾಜಕಾರಣಿಗಳು ತಂದಿಟ್ರು. ನಿಧಾನವಾಗಿ ವರ್ತಕರು ಕಲತ್ರು. ಕೊನೆಗೆ ಪ್ರೊಪೆಷನಲ್ಸ್… ಅಂಬಾಬಾಯಿ. ತಂದು ತಂದು ಇಲ್ಲಿ ತುಂಬಿದ್ರು. ಇವರೇ ಟ್ರಸ್ಟಿಗಳು. ಇವರದ್ದೇ ಮಠ. ಒಬ್ಬೊಬ್ರು ಒಂದೊಂದು ಕೋಣೇನೇ ಕಟ್ಟಿಸ್ಕೊಂಡಿದ್ರು. ದೋಚಿದ್ದೆಲ್ಲಾ ತುಂಬೋಕೆ. ಕೋಟ್ಯಂತರ ಇತ್ತು. ಮಠದ ಆಸ್ತಿಯ ನಾಲ್ಕರಷ್ಟು.
ಪೀಠದಲ್ಲಿ ಧರ್ಮಗುರು ವಿರಕ್ತಿಲಿ ಕೂತಿದ್ದ. ತಳದಲ್ಲಿ ಅಧರ್ಮದ ಭಂಡಾರವೇ ಇತ್ತು. ಬೇಡ ಅನ್ನುವ ಹಕ್ಕು ಅಧಿಕಾರ ಅವನಿಗಿರ್ಲಿಲ್ಲ. ಅವನ್ದು ಧರ್ಮ ಅಷ್ಟೇ. ಮಠ ಇವರದ್ದಲ್ವಾ?
ಮಾನವಾಗಿದ್ರು. ಆದಾಯ ತೆರಿಗೆಯವರು. ಈಗೆಲ್ಲ ಬಿಟ್ಬಿಟ್ಟಿದ್ದಾರೆ. ಮಠಕ್ಕೆ ಬರೋದಾ ಜಪ್ತಿಗೆ?
ಎಲ್ಲಾ ಉತ್ತರದಿಂದ ಬಂದು ಕೂತಿದ್ದಾರೆ. ದೇವ್ರಿಲ್ಲ, ದಿಂಡ್ರಿಲ್ಲ. ಧರ್ಮದ ವಾಸ್ನೇನೇ ಇಲ್ಲ. ಮಠ ಏನು? ಮಸೀದಿ ಏನು? ಹೊಲ್ಸ್ ಮಾಡ್ತಾರೆ.
ಮಾನಸ್ಥರು ಆಳ್ತಿದ್ರೆ ಅಧಿಕಾರ್ದವರು ಮಾನವಾಗಿ ಇರ್ತಾರೆ. ಆಳೋರು ಮಾನ ಬಿಟ್ರು, ಅಧಿಕಾರಿಗಳಿಗೆಲ್ಲಿರುತ್ತೆ?
ಅಂಬಾಬಾಯಿ ಅ0ದ್ಲೂ, ಅವರ್ಗೂ ಗೊತ್ತಿದೆ. ಮಠದಲ್ಲಿ ಮಾನಸ್ಥರು ಇಲ್ಲಾ ಅಂತ. ಮಾನ ಕಳ್ಕೊಂಡಿರೋದು ಮಠ. ಬರ್ತಾರಪ್ಪ.
ಅಮ್ಮಾ ಸುಮ್ನಿರಮ್ಮಾ! ನೀನು ಪರಾನೋ, ವಿರೋಧಾನೋ ಅದೇ ಗೊತ್ತಾಗಲ್ಲ.
ಆದ್ರೆ ಸತ್ಯ ಮಾತಾಡುತ್ತೆ! ಹೆಂಗ್ಸು.
ಮಾತೆಲ್ಲೆಲ್ಲಿಗೋ ಹೋಗ್ತಿತ್ತು. ಐತಾಳ್ರಂದ್ರು, ವಿಷಯಕ್ಕೆ ಬನ್ನಿ.
ಅಂಬಾಬಾಯಿ ಅಂದ್ಲು,
ಮೂವತ್ತು ವರ್ಷ ದುಡ್ದು ಕವಡೆ ಕವಡೆ ಲೆಕ್ಕ ಹಾಕಿ ಕೂಡಿಟ್ಟದ್ದು. ಒಡವೆ ಇದೆ, ಕ್ಯಾಶ್ ಇದೆ, ಪ್ರೂನೋಟ್ಸ್ ಇದೆ, ಪ್ರಾಪರ್ಟಿ ಡಾಕ್ಯುಮೆಂಟ್ಸ್ ಇದೆ. ಮುಳುಗ್ಹೋಗ್ತೀನಿ. ಮಕ್ಳುಮರಿ ತಿರುಪೆ ಎತ್ಬೇಕಾಗುತ್ತೆ. ನಂದು ನಾನು ತಗೊಂಡೋಗ್ತೀನಿ ಎದ್ಲು.
ವಿರೋಧ ಪಕ್ಷದವ್ರು ಎದ್ರು.
ನಂದಕ್ಕೂ ವ್ಯವಸ್ಥೆ ಮಾಡ್ಕೊಳ್ತೀನಿ.
ಮಿಕ್ಕವರಿಬ್ರು ಹೇಳ್ಳಿಲ್ಲ. ಎದ್ರು.
ಐತಾಳ್ರಂದ್ರು, ಮಿಶ್ರತಳಿ ಮುಂಡೇಮಗ, ಖೆಡ್ಡ ತೋಡಿದ್ದಾನೆ. ಬೀಳ್ತಿದ್ದೀವಿ.
ಎಲ್ಲಾ ನಿಂತ್ರು.
ತಕ್ಕೊಂಡ್ಹೋಗಿ ಎಲ್ಲಿ ಇಟ್ಕೊಳ್ತೀರಿ? ಮನೆಗಳಲ್ಲಿ. ಸ್ನೇಹಿತರ ಮನೆಗಳಲ್ಲಿ? ನಂಬಿಕಸ್ಥರ ಮನೆಗಳಲ್ಲಿ? ಆದಾಯ ತೆರಿಗೆಯವ್ರು ಬರ್ತಾರೋ ಇಲ್ವೊ ಆ ಮಾತು ಬೇರೆ. ಅವರು ಬರೋದೇ ದಿಟವಾಗಿದ್ರೆ ಗಮನಿಸ್ತಿರ್ತಾರೆ. ಕಾರುಗಳಲ್ಲಿ ತುಂಬಿಕೊಂಡು ಹೋದ್ರೆ ಕಾಣಿಸ್ದೇ ಇರುತ್ತಾ? ಎಲ್ಲಾ ತಕ್ಕೊಂಡ್ ಹೋಗಿ ಇಟ್ಕಳಿ. ಬಂದು ಬಡ್ದು ತಗೊಂಡ್ಹೋಗ್ತಾರೆ. ಏನಿರಲ್ಲ. ಏನೂ ಉಳ್ಸಲ್ಲ.
ನಿಂತೇ ಇದ್ರು.
ಬುದ್ಧಿವಂತ. ಒಂದೇ ಕಲ್ಲಲ್ಲಿ ಹತ್ತು ಹಕ್ಕಿ ಹೊಡೀತಿದ್ದಾನೆ. ಮಠದ ಆಸ್ತಿ ಎಷ್ಟಿರ್ಬಹುದು. ಗೊತ್ತಿದ್ಯಾ ನಿಮ್ಗೆ? ಈ ರಾಜ್ಯದ ಬೊಕ್ಕಸದ ಎರಡರಷ್ಟಿದೆ. ನಾವು ಟ್ರಸ್ಟಿಗಳು. ನಮ್ಮ ಅಧಿಕಾರದಲ್ಲಿದೆ ಅದು. ಧರ್ಮಕ್ಕೆ ಅವ್ರು. ಆಳ್ವಿಕೆ ನಮ್ದು. ಲೆಕ್ಕ ಹಾಕ್ದ ಸ್ವಾಮಿ. ಧಾಳಿ ಅಂತ ಆದ್ರೆ ನಮ್ಮ ಪೂರ್ತ ಆಸ್ತಿನಾ ನಾವು ಕಳ್ಕೋತೀವಿ. ಜೊತೆಗೆ ಮಾನವೂ ಹರಾಜು. ಆಸ್ತಿ, ಮಾನ ಹೋದ್ಮೇಲೆ ಅಧಿಕಾರ ಉಳಿಯುತ್ತಾ? ಕಿತ್ತಾಕ್ತಾರೆ ಟ್ರಸ್ಟಿ ಶಿಪ್ಪಿಂದ್ಲೆ, ಪೂರ್ತ ಚಕ್ರಾಧಿಪತ್ಯಾನಾ ಈ ಮನುಷ್ಯ ಆಳ್ತಾನೆ. ದಿನಕ್ಕೆ ಮೂರು ಹೊತ್ತು ಸಂಸಾರ ಸಮೇತ ಬಂದು ಮಠದಲ್ಲೇ ಪ್ರಸಾದಕ್ಕೆ ಕೂತ್ಕೋ ಬೇಕಾಗುತ್ತೆ.
ಎಲ್ಲಾ ಕೂತ್ರು.
ಮತ್ತಂದ –
ಧಾಳಿ ಆಗುತ್ತೋ ಇಲ್ವೋ? ಅದು ಗೊತ್ತಿಲ್ಲ. ಆದ್ರೆ ಈಗಿಲ್ಲಿಂದ ತಗೊಂಡ್ಹೋಗೋದು ಸೂಕ್ತ ಅಲ್ಲ.
ಇಲ್ಲಿದ್ರೂ ಹೋಗುತ್ತೆ.
ಹಾವೂ ಸಾಯ್ಬಾರ್ದು, ಕೋಲೂ ಮುರೀಬಾರ್ದು.
saffron2ರಾಜಕೀಯದಲ್ಲಿದ್ದೀರಿ, ಅಧಿಕಾರದಲ್ಲಿದ್ದೀರಿ. ಮೇಲಿಂದ ಪ್ರೆಜರ್ ತರ್ಸಿ ಆಗದ ಹಾಗೆ ನೋಡಿ.
ಅಯ್ಯೋ ಅಲ್ಲೂ ಕೀಳ್ತಾರೆ. ಅವರಿಗಿವ್ರೆ ವಾಸಿ.!
ಐತಾಳ್ರೇ, ಅಧಿಕಾರದಲ್ಲಿರೋರು ನಿಮಗೆ ಪರಿಚಯದವ್ರೇ. ಆದಾಯ ತೆರಿಗೆಯಲ್ಲಿ ಮೇಲಿನೋರ್ನಾ ನೋಡಿ. ಖರ್ಚಾಗೋದಾದ್ರೆ ಆಗ್ಲಿ. ಇದು ನಿಲ್ಸಿ.
ಸದ್ಯಕ್ಕೆ ನಿಲ್ಲಿಸ್ಬಹುದು. ಕಾಸು ತಕೋತಾರೆ. ಬರಾಕಿಲ್ಲ ಅಂತಾರೆ. ಒಂದಾರು ತಿಂಗಳಿಗೆ ಈಗಿರೋನ್ಹೋಗಿ ಮತ್ತೊಬ್ಬ ಬರ್ತಾನೆ. ಅವ್ನು ಬರ್ತೀನಿ ಅಂತಾನೆ. ಅವ್ನುಗ್ ಕೊಡ್ಬೇಕು. ವರ್ತನೆ ಆಗೋಗುತ್ತೆ.
ಮತ್ತೆ!
ತೆರಿಗೆ ಧಾಳಿ ಆಗುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ಆಗ್ಹೋಗೋದು ಸೂಕ್ತ. ಆದ್ರೆ ಸರಿ. ಆಗ್ದಿದ್ರೆ ಆಗ್ಸೋಣ. ಆಗ್ ಹೋಗ್ಲಿ.
ಎಲ್ರೂ ನೋಡ್ತಾರೆ.
ಧಾಳಿ ಆಗ್ಬೇಕು. ಇದ್ಯಾವ್ದೂ ಸಿಗ್ಬಾರ್ದು.
ಅಂದ್ರೆ?
ವಿಷ್ಯಾ ನನ್ಗೆ ಬಿಡ್ತೀರಾ? ನಾನು ಹೇಳಿದ್ದು ಕೇಳ್ತೀರಾ?
ಸರಿ.
ನಾನು ಹೇಳ್ತೀನಿ. ನೀವು ಹ್ಞೂಂ ಅನ್ನಿ.

ಸ್ವಾಮಿ ಬಂದ್ರು! ಕೂತ್ರು! ನೋಡಿದ್ರು! ಕೇಳಿದ್ರು!
ಏನ್ ನಿರ್ಧರಿಸಿದ್ರಿ?
ಮಠ ನಂಬಿ ಬದುಕಿದ್ದೀವಿ. ಮಠಾನೇ ನಂಬಿ ಬದುಕ್ತೀವಿ.
ಅರ್ಥವಾಗ್ಲಿಲ್ಲ.
ಮಠದ ಲೆಖ್ಖ ಮತ್ತೆ ಮತ್ತೆ ಪರಿಶೀಲಿಸಿದ್ದೀನಿ. ಒಂದು ಚಿಕ್ಕಾಸು ಅತ್ಲಾಗಿತ್ಲಾಗ್ ಆಗಿಲ್ಲ. ಅಲ್ಲಿ ಸಮಸ್ಯೆ ಇಲ್ಲ.
ಅದ ಗೊತ್ತು.
ನನ್ನ ಮುತ್ತಜ್ಜ ಈ ಜಾಗ ಕೊಟ್ಟದ್ದು. ಆ ಕಾಲಕ್ಕೆ ಮಠ ಕಾಡು ಕೊಂಪೇಲಿತ್ತು. ಅಲ್ಲಿಂದ ಇಲ್ಲಿ ನಗರದ ಮಧ್ಯೆ ಸೇರಕ್ಕಾದದ್ದು ನನ್ನಜ್ಜ ಜಾಗ ಕೊಟ್ಟಿದ್ರಿಂದ.
ಮಠ ಅದನ್ನೇನೂ ಮರ್ತಿಲ್ಲ.
ಅದು ದಿಟ. ನಮ್ಮಲ್ಲೊಬ್ರು ಪರ್ಮನೆಂಟ್ ಟ್ರಸ್ಟಿ ಅಂತ್ಲೇ ಇದ್ದೀವಿ.
ಮತ್ತೆ?
ಜನವೇ ಇಲ್ಲದಲ್ಲಿ ಧರ್ಮದ ಅವಶ್ಯಕತೆ ಏನಿದೆ? ಜನ ಇದ್ದಲ್ಲಿ ಧರ್ಮ. ಇಲ್ಲಿ ಜಾಗ ಕೊಟ್ಟಿದ್ರಿಂದ, ಮಠ ಕಟ್ಟಿದ್ರಿಂದ ಧರ್ಮ ಉಳ್ದಿದೆ. ಅದೇ ಮಠದಲ್ಲೇ, ನನ್ನದೊಂದು ಸಣ್ಣ ಜಾಗ ಇದೆ. ಮೂರು ಕಾಸು, ಆರು ಕಾಸು ಉಳಿಸಿದ್ದನ್ನ ಅಲ್ಲಿಟ್ಟಿದ್ದೀನಿ.
ಕೋಟಿಗಳಲ್ಲಿದೆ ನಿಮ್ಮ ಮೂರ್ಕಾಸು ಆರ್ಕಾಸು.
ನಮ್ದೂ ಇದೆ!
ತಗೊಂಡ್ಹೋಗ್ ಬಿಡಿ. ನಿಮ್ಮ ನಿಮ್ಮ ಆಸ್ತಿ ನೀವು ಜೋಪಾನ ಮಾಡ್ಕಳ್ಳಿ.
ಈಗ ಬ್ಯಾಡ.
ನನ್ಗೆ ಕಾಯೋದು ಕಷ್ಟವಾಗುತ್ತೆ. ಧಾಳಿ ಅಂತ ಆದ್ರೆ ಅದು ಸಿಗುತ್ತೆ. ನಾನು ಉತ್ತರಿಸ್ಬೇಕು. ಮಠದ್ದು ಅಂದ್ರೆ ಲೆಕ್ಕ ಸರಿ ಇರ್ಲಿಲ್ಲ ಅಂತಾಗುತ್ತೆ. ಮಠದ್ದಲ್ಲ ಅಂದ್ರೆ ಯಾರದ್ದು? ಅದು ಪ್ರಶ್ನೆ ಬರುತ್ತೆ.
ನಾವು ತಕ್ಕೊಂಡ್ಹೋದ್ರೂ ಉಳೀತದೇ ಅನ್ನೋ ನಂಬಿಕೆಯೆಲ್ಲಿ?
ಮತ್ತೆ?
ಹೋಗೋದಾದ್ರೆ ಇಲ್ಲಿಂದ್ಲೇ ಹೋಗ್ಲಿ ಬಿಡಿ!
ನನ್ನ ಮಾನದ ಪ್ರಶ್ನೆ. ಇಲ್ಲಿ ಬೇಡ.
ಸ್ವಾಮಿಗಳು ನೀವು!
ಚೆನ್ನಾಗಿದೆ. ನಮ್ಗ್ ಮಾನ ಇಲ್ವಾ?
ವಿರಕ್ತರು ತಾವು. ಎಲ್ಲ ಬಿಟ್ಟವ್ರು. ನಿಮ್ಗ ಮಾನ ಎಲ್ಲದೆ? ಗಂಡು ಹುಡುಕ್ಬೇಕಾ? ಹೆಣ್ಣು ತರ್ಬೇಕಾ?
ಮಾನ ಇಲ್ಲ ಅಂತಲ್ಲ. ಸ್ವಾಮಿಗಳಿಗೆ ಮಾನದ ಅವಶ್ಯಕತೆಯಿಲ್ಲ.

ಮಾತಿಗೆ ಮಾತು ಬೆಳೀತು.
ಐತಾಳ್ರಂದ್ರು, ವಿಷ್ಯಕ್ಕೆ ಬರೋಣ. ಸಭ್ಯರು ನೀವು, ಪ್ರಾಮಾಣಿಕರು ನೀವು. ಅದರ ಬಗ್ಗೆ ನಮಗೆ ಗೌರವ ಇದೆ. ನಾವಷ್ಟು ಸಭ್ಯರೂ ಅಲ್ಲ, ಪ್ರಾಮಾಣಿಕರೂ ಅಲ್ಲ. ಅದೂ ಗೊತ್ತಿದೆ. ಆದ್ರೆ ಒಂದು – ಈ ಪೀಠ, ಮಠ ಇಲ್ಲದೇ ನಿಮ್ಗೆಲ್ಲಿದೆ ಅಸ್ತಿತ್ವ. ಧರ್ಮ ವೈಯಕ್ತಿಕ. ಪೀಠ ಮಠ ಸಾಮಾಜಿಕ. ನಾವು ಅಯೋಗ್ಯರು, ಅಪ್ರಾಮಾಣಿಕರು ಮಠ ಕಟ್ತೀವಿ. ಪೀಠ ನಡೆಸ್ತೀವಿ. ಆ ಪೀಠದಲ್ಲಿ ಯಾರನ್ನೇ ಕೂರಿಸಿದ್ರು ಅವರೇ ಧರ್ಮ. ಕೂಡ್ಸೋದು ನಾವು. ಸದ್ಯಕ್ಕೆ ಕೂತ್ಕೊಳ್ಳಿ, ಕೇಳ್ಸ್ಕೊಳ್ಳಿ.
ಸ್ವಾಮಿಗಳು ಕೂತ್ರು.
ಐತಾಳ್ರಂದ್ರು, ಪೀಠದಲ್ಲಿ ಒಂದು ಪದ್ಧತಿ ಇದೆ. ದಿನಾ ದರ್ಬಾರಲ್ಲಿ ಕೂತು ಕೂತು ಲೌಕಿಕ ಹೆಚ್ಚಾಯ್ತು ಅನ್ನಿಸ್ದಾಗ ಸ್ವಾಮಿಗಳು ಏಕಾಂತಕ್ಕೆ ಹೋಗಬೇಕು. ತಿಂಗಳಾಗಬಹುದು. ಎರಡು ತಿಂಗಳಾಗಬಹುದು. ವೈಯಕ್ತಿಕ ಉಪಯೋಗಕ್ಕಿರುವ ಕೋಣೆಯಲ್ಲಿ ಸೇರ್ಕೊಂಡು ಬಾಗಲು ಹಾಕ್ಕೊತಾರೆ. ಏಕಾಂತದಲ್ಲಿರ್ತಾರೆ. ಅವರಾಗೇ ಬಾಗಿಲು ತೆಗ್ದು ಬರೋವರ್ಗೂ ಯಾರೂ ಅವರನ್ನ ಮಾತಾಡ್ಸೋ ಹಂಗಿಲ್ಲ. ಅವರೂ ಯಾರನ್ನೂ ನೋಡಲ್ಲ. ಯಾರ ಹತ್ರಾನೂ ಮಾತಾಡಲ್ಲ. ಅವಶ್ಯಕತೆಗೆ ಒಂದು ಕಿಂಡಿ ಇದೆ. ಅಲ್ಲಿ ಊಟ ಇಟ್ರಾಯ್ತು. ಬೇಕಿದ್ದು ತಗೊಳ್ತಾರೆ. ಬ್ಯಾಡಾ ಅಂತ ಬಿಟ್ಟದ್ದು ಪ್ರಸಾದವಾಗುತ್ತೆ. ತಾವು ಏಕಾಂತಕ್ಕೆ ಹೋಗಿ ಮೂವತ್ತು ವರ್ಷಗಳಾಗಿವೆ. ಲೌಕಿಕ ಹೆಚ್ಚಾಗಿದೆ. ದಯವಿಟ್ಟು ಏಕಾಂತಕ್ಕೆ ಹೋಗಿ.
ಸ್ವಾಮಿಗಳು ಎದ್ರು.
ಅನೌನ್ಸ್ ಮಾಡಿ. ಮುಂದಿನ ಅಮಾವಾಸ್ಯೆ. ಸ್ವಾಮಿಗಳು ಏಕಾಂತಕ್ಕೆ ಹೋಗ್ತಾರೆ. ಜನ ಸೇರ್ಲಿ. ಕೊನೆಯ ದರ್ಬಾರ್ ಆಗ್ಲಿ. ಎರಡು ತಿಂಗ್ಳು ಅಂದ್ಕೊಳ್ಳೋಣ. ಬೇಕಿದ್ರೆ ಮುಂದುವರ್ಸೋಣ.

ಸ್ವಾಮಿಗಳು ಎದ್ದು ಹೊರಡ್ತಾರೆ.
ಆಸ್ತಿ ಪಾಸ್ತಿ ಎಲ್ಲ ಅವರ ಕೋಣೇಲೇ ತುಂಬಿ, ಜೊತೇಲೇ ಸ್ವಾಮೀನೂ ಕೂಡಿ ಏಕಾಂತಕ್ಕೆ ಬಿಡೋಣ. ಮಡಿಮಡಿಯಾಗಿ ವಿರಕ್ತೀಲಿ ಸರ್ಪ ಕುದೀತೀದೆ. ಕೊಪ್ಪರಿಗೆ ಕಾಯ್ಲಿ. ಆದಾಯ ತೆರಿಗೆಯವ್ರು ಬರ್ಲಿ; ಹೋಗ್ಲಿ. ಸ್ವಾಮಿಗಳು ಏಕಾಂತದಲ್ಲಿರೋ ವೈಯಕ್ತಿಕ ಕೋಣೇಲಿ ಮುಚ್ಚಿಟ್ಟಿರಬಹ್ದು ಅನ್ನೋ ಅನುಮಾನ ಖಂಡಿತಾ ಬರಲ್ಲ. ಸಣ್ಣ ಪುಟ್ಟ ಗುಮಾನಿ ಬಂದ್ರು, ನಿತ್ಯ ಸಾವ್ರಾರು ಜನ ಸುತ್ತ ಸೇರಿ ಭಜನೆ ಮಾಡ್ತಿರ್ತಾರೆ. ಅವರ ಭಾವನೆಗಳಿಗೆ ವಿರುದ್ಧವಾಗಿ ಸ್ವಾಮಿ ಏಕಾಂತದ ವ್ರತಾನಾ ಭಂಗಪಡ್ಸೋ ಧೈರ್ಯನೂ ಬರಲ್ಲ, ಹಾಗಾಗಿ ಕೋಣೆ ಜಪ್ತಿ ಆಗಲ್ಲ. ಇದ್ಯಾವ್ದೂ ಸಿಗಲ್ಲ.
ಮಠಕ್ಕೆ, ಪೀಠಕ್ಕೆ, ಧರ್ಮ ಕಾಯಕ್ಕೆ ಸ್ವಾಮಿ ಅಂತ ನನ್ನನ್ನು ಕೂರ್ಸಿದ್ದಾರೆ ಅನ್ನೋ ಭ್ರಮೆ ಇತ್ತು. ಕದ್ದದ್ದು ಬಚ್ಚಿಟ್ಟದ್ದು ಕಾಯೋಕ್ಕೊಂದು ಖಾವಿ ಅನ್ನೋದು ಸ್ಪಷ್ಟವಾಗಿತ್ತು.

ಎಲ್ಲ ಹೊರಟ್ರು.
ಸ್ವಾಮಿಗಳು ಧ್ಯಾನದಲ್ಲಿ ಕೂತ್ರು. ಮನಸ್ಸು ಹಿಂದಕ್ಕೆ ಓಡಿತ್ತು. ಅಪ್ಪ ಯಾರು? ಪ್ರಪಂಚಕ್ಕೆ ಗೊತ್ತಿಲ್ಲ. ಇವ್ರು ಹುಟ್ಟಿದ ಕೂಡ್ಲೇ ಅಮ್ಮ ಸತ್ತಿದ್ಲು. ಅವಳನ್ನಿವ್ರು ನೋಡೇ ಇರ್ಲಿಲ್ಲ. ಊರ ಹೊರಗಿನ ಸ್ಮಶಾಣದಲ್ಲಿ ಮಗು ಅಳ್ತಿದೆ ಅಂತ ಆಗಿನ ದೊಡ್ಡ ಸ್ವಾಮಿಗಳು ತಂದು ಸಾಕ್ಕೊಂಡಿದ್ದು. ಇಲ್ಲೇ ಬೆಳೆದಿದ್ದು, ಅಷ್ಟೋ ಇಷ್ಟೋ ಓದಿದ್ದು. ಹಿಂದಿನ ಸ್ವಾಮಿಗಳು ಇದ್ದಕ್ಕಿದ್ದ ಹಾಗೆ ಸತ್ರು. ಪೀಠಕ್ಕೆ ಜನ ಬೇಕಿತ್ತು. ಎಲ್ಲ ಸೇರಿ ಇವರನ್ನ ಕೂರ್ಸುದ್ರು. ಬಯಸಿ ಬಯಸಿ ಕೂತದ್ದಲ್ಲ. ಕೂತ ಮೇಲೆ ತೋಚಿದ್ದು ಮಾಡಿದ್ದು. ಮೂಲವಾಗಿ ಪ್ರಾಮಾಣಿಕ, ಸಭ್ಯ. ನಡೀತಿದ್ದ ವ್ಯವಸ್ಥೆಯನ್ನು ಮತ್ತಷ್ಟು ಚುರುಕಾಗಿಸಿ, ನೂರಾರು ಜನಕ್ಕೆ ಪ್ರಯೋಜನವಾಗೋ ಹಾಗೆ ಮಾಡಿದ್ರು. ಜಗತ್ತಿನ ಧರ್ಮ ಜವಾಬ್ದಾರಿ ಅಂತ್ಲೂ ಅನ್ಸಿರ್ಲಿಲ್ಲ. ಪೀಠ ಅಧಿಕಾರ ಅಂತ್ಲೂ ಅನ್ಸಿರ್ಲಿಲ್ಲ. ವಿರಕ್ತೀಲೀ ಆನಂದವಾಗಿದ್ರು. ಗೊತ್ತಿತ್ತು. ಟ್ರಸ್ಟಿಗಳು ಕದ್ದು ಮುಚ್ಚಿ ಕೋಣೆಗಳಲ್ಲಿ ತುಂಬಿಟ್ಕಂಡಿದ್ದಾರೆ ಅಂತ. ಸಮಸ್ಯೆ ಅಂತಿರ್ಲಿಲ್ಲ. ಕೆದಕಿದ್ರೆ ಪೀಠದಿಂದೆಬ್ಬಿಸ್ತಾರೆ. ಯಾಕ್ಬೇಕು? ಸುಮ್ನಿದ್ರು. ಪೀಠ ಅಧಿಕಾರ ಅಂತ ಯಾವತ್ತೂ ಅನ್ಸಿರ್ಲಿಲ್ಲ. ವಿರಕ್ತೀಲಿ ಆನಂದವಾಗಿದ್ರು. ಬದುಕಿನಲ್ಲಿ ಮೊದಲ ಬಾರಿಗೆ ಮನಸ್ಸಿಗೆ ಕಸಿವಿಸಿ ಅನ್ನಿಸ್ತು. ಕಲಸಿ ತಿನ್ನಿಸೋದು ಅಸಹ್ಯ ಅನ್ನಿಸಿರ್ಲಿಲ್ಲ. ಎಂಜಲು ತೊಳೆಯೋದು, ಒರೆಸೋದು ಅಸಹ್ಯ ಅನ್ಸಿರ್ಲಿಲ್ಲ. ಇವತ್ತು ಅಯೋಗ್ಯರು ಸ್ವಾಮಿಗಳು ಪಟ್ಟದಲ್ಲಿ ಕೂರ್ಸಿ ತೊಳೆಸ್ಕೋತಿದ್ದಾರೆ ಅನ್ಸಿಬಿಡ್ತು. ಬದುಕ್ನಲ್ಲಿ ಒಂದೇ ಒಂದು ಸಾತರ್ತಿ ಕೋಪ ಬಂತು. ಬುದ್ಧಿ ಕಲ್ಸಬೇಕು ಅನ್ನೋ ದುರ್ಬುದ್ಧಿ ಹುಟ್ಟಿ, ರಾಗದ್ವೇಷಗಳು ಏನೂ ಅಂಬುದೇ ಗೊತ್ತಿಲ್ಲದಿದ್ದ ಸ್ವಾಮಿಜಿ ಬದುಕ್ನಲ್ಲಿ ಮೊಟ್ಟ ಮೊದಲಿಗೆ ರೋಷಾದ್ವೇಷದಲ್ಲಿ ಕುದ್ರು.
ಬಾಗಲಿಗೆ ಬಂದು ಕೂಗು ಹಾಕಿದ್ರು. ಪರಮೇಶೀನಾ ಬರಕ್ಕೇಳು.
***

ಕೂತ್ರು. ಮನಸ್ಸು ವಿಹ್ವಲವಾಗಿತ್ತು. ಗುರುಗಳು ಎಂದೋ ಅಂದಿದ್ರು. ಪ್ರಪಂಚಕ್ಕೆ ಅಂಟಿಕೊಂಡ ಮೇಲೆ, ಮಠದ ಪೀಠ ಅಂತ ಕುಂತ ಮೇಲೆ ಬಡಿಸೋದಷ್ಟೇ ಅಲ್ಲ; ಬಳೀಲೂ ಬೇಕಾಗುತ್ತೆ ಅಂತ. ಆವತ್ತು ಅರ್ಥವಾಗಿರ್ಲಿಲ್ಲ. ಯಾರ್ಗೋ ಬಡ್ಸಬೇಕು ಅಂದ್ರೆ, ಇನ್ಯಾರ್ಗೋ ಬಳೀಬೇಕಾಗುತ್ತೆ ಅಂತ. ಐವತ್ತು ವರ್ಷ ಪೂರ್ತಿ ಕಳ್ದಿದ್ದೀನಿ ಮಠದ ಅಂಗಳದಲ್ಲಿ. ಅಂಬೆಗಾಲಿಟ್ಟಿದ್ದಿಲ್ಲಿ, ತಪ್ಪು ಹೆಜ್ಜೆ ಇಲ್ಲಿ. ಮೊದಲ ಮಾತಿಲ್ಲಿ. ಅತ್ರೆ ಕೇಳೋರ್ಲಿಲ್ಲ ಹಾಗಾಗಿ ಅತ್ತೇ ಇರ್ಲಿಲ್ಲ. ನಕ್ಕರೆ ಸಂಭ್ರಮಿಸೋಕೆ ಯಾರಿರ್ಲಿಲ್ಲ. ನಗೂನೂ ಕಲ್ತಿರ್ಲಿಲ್ಲ. ಒಳಗಿನ ಕೋಣೇಲಿರೋ ದೇವ್ರಿಗೂ ಇವ್ರಿಗೂ ವ್ಯತ್ಯಾಸವೇ ಇರ್ಲಿಲ್ಲ. ಅವನು ಕಲ್ಲು; ಇವರಲ್ಲ ಅಂಬುದು ಬಿಟ್ಟು.

ಹೊಟ್ಟೆ ಕಟ್ಟಿದ್ದಾಯ್ತು, ಬಟ್ಟೆ ಕಟ್ಟಿದ್ದಾಯ್ತು, ವಯಸ್ಸಿಗೆ ಬಂದ್ಮೇಲೆ ಕಚ್ಚೆ ಕಟ್ಟಿದ್ದಾಯ್ತು. ನಾಲಿಗೆ ರುಚಿ ನೋಡ್ಲಿಲ್ಲ, ದೇಹ ಹೆಣ್ಣನ್ನ ಕಾಣ್ಲಿಲ್ಲ. ಮನಸ್ಸು ಸಂಬಂಧಗಳನ್ನ ಅಪ್ಪ, ಅಮ್ಮ, ತಂಗಿ, ಹೆಂಡ್ತಿ, ಮಕ್ಳು, ಸ್ನೇಹಿತ್ರು ಸಂಬಂಧಗಳನ್ನೇ ಸವೀಲಿಲ್ಲ. ಇಂದ್ರೀಯಗಳೇ ಸತ್ತ ಮೇಲೆ ಮನುಷ್ಯ ಎಲ್ಲಿ ಬದುಕಿದ್ದಾನೆ. ಇಂದ್ರಿಯಗಳಿದ್ರೆ, ಚುರುಕಾಗಿದ್ರೆ ಬದುಕಿದ್ದಾನೆ, ಅದೂ ಶಿಸ್ತಲ್ಲಿದ್ರೆ ಯೋಗ್ಯವಾಗಿ ಬದುಕಿದ್ದಾನೆ. ಅದು ಸತ್ತ ಮೇಲೆ ಅವನಿಗೆಲ್ಲಿ ಅಸ್ತಿತ್ವ ಅನ್ನಿಸ್ತು.

ಒಂದು ಕ್ಷಣ ಸ್ವಾಮಿಗೆ ತಾವು ಬದುಕೇ ಇಲ್ಲ ಅನ್ನೋದು ಅರಿವಾಗಿತ್ತು. ಮನುಷ್ಯನಾಗಿಯಂತೂ ಬದುಕೇ ಇಲ್ಲ. ಪೀಠಕ್ಕಂಟಿಕೊಂಡ ನಾಯಿ. ಯಾರೋ ಊಟ ಹಾಕ್ತಾರೆ, ಅವರಿಗೆ ಬೇಕಾದಾಗ ಅವರಿಗೆ ಬೇಕಾದ್ದನ್ನು. ಯಾರದ್ದೋ ಹಣ, ಆಸ್ತಿ ನಿದ್ದೆಗೆಟ್ಟು ಕಾಯೋದಾಗುತ್ತೆ! ನಿಯತ್ತಿನ ನಾಯಿ!. ಈ ಅಸ್ತಿತ್ವದೊಳಗೆ ಬೇಸರವಿರಲಿಲ್ಲ. ಆದ್ರಿವತ್ತು ಅಯೋಗ್ಯರು ಅಧಿಕಾರದಲ್ಲಿ ಹೇಳ್ತಾರೆ – ಏಕಾಂತದಲ್ಲಿ ಕೂರು, ಕದ್ದ ಕಾಸು ತುಂಬಿದ್ದೀವಿ ಅದನ್ನ ಕಾಯ್ತಾ ಏಕಾಂತದಲ್ಲಿ ಕೂರು, ಅತಿಯಾಗಿ ತಿಂದು ಅಜೀರ್ಣವಾಗಿ ಹೊಲಸು ಮಾಡ್ಕೊಂಡಿದ್ದೀವಿ. ಅಂಡು ನೆಕ್ಕು ಅಂತಾರೆ. ಇಲ್ಲದಿದ್ರೆ ಪೀಠದಿಂದೆಬ್ಬಿಸಿ ಬೆಟ್ಟ ಹತ್ತಿಸ್ತೀವಿ.
ಶಿವ! ಶಾಂತಿ ನೆಮ್ಮದೀಲಿ ಕೂತ್ರೆ ತಣ್ಣಗಿನ ಹಿಮ, ಮುಕ್ಕಣ್ಣನಾದ್ರೆ, ಕುಣಿಯೋಕೆ ಎದ್ರೆ, ನಾಶ, ಸರ್ವನಾಶ.

ಮಠ ಮುಳುಗಿಸಿ ಪ್ರಯೋಜನ ಇಲ್ಲ. ಧರ್ಮ ಕೊಂದು ಪ್ರಯೋಜನ ಇಲ್ಲ. ಜನಕ್ಕೆ ಎರಡೂ ಬೇಕು. ಎದ್ದು ಹೊರಟು ಬಿಡ್ಲಾ? ಇದ್ಯಾವ್ದೂ ಬೇಡ ಅಂತ ಎದ್ದು ಹೊರಟು ಬಿಡ್ಲಾ? ಏನಾದ್ಹಾಗಾಯ್ತು? ಇನ್ನೊಬ್ರನ್ನ ಕೂರಸ್ಕೋತಾರೆ, ಅಂಡು ನೆಕ್ಕಕ್ಕೆ. ಒಡ್ಡಿದ್ದಾರೆ ನೆಕ್ಕು ಅಂತ ನಂಬಿಕೇನಲ್ಲಿ ಒಡ್ಡಿದ್ದಾರೆ. ಛಾಯ್ಸಿಲ್ಲ, ನೆಕ್ತಾನೆ ಅನ್ನೋ ಅಹಂಕಾರ ಇದೆ. ಒಮ್ಮೆ ಕಚ್ಚಿ ಬಿಟ್ರೆ? ಮುಂದಿನ ಎರಡು ಬಾಚಿ ಹಲ್ಲು, ಪಕ್ಕದ ಚೂಪು ಹಲ್ಲು ಮಾಂಸದೊಳಕ್ಕೆ ಇಳೀಬೇಕು. ಕಚ್ಬಿಟ್ರೇ? ನಕ್ಕರು ಸ್ವಾಮಿ. ಆಲೋಚನಾ ಲಹರಿಗೆ ನಗು ಬಂತು. ಕಚ್ತೀನಿ. ನಂತರ ಬಿಡಲ್ಲ. ಕೊಲ್ತಾರೆ. ಆದ್ರೆ ಕಚ್ತೀನಿ. ಬಲವಾಗೇ ಕಚ್ತೀನಿ. ಕೊಲ್ಲೋದಾದ್ರೆ ಕೊಂದು ಬಿಡ್ಲಿ; ಈಗೆಲ್ಲಿ ಬದುಕ್ಕಿದ್ದೀನಿ? ಸಂತೋಷವಾಯ್ತು ಸ್ವಾಮಿಗಳಿಗೆ. ನಗು ಬಂತು. ಮತ್ತೆದ್ದು ಬಂದು ಸುಖದಲ್ಲಿ ಪ್ರಶ್ನೆ ಕೇಳಿದ್ರು, ಬಂದ್ನಾ ಪರಮೇಶಿ?
***

ಜಪ್ತಿ ಅಂತ ಬಂದ್ರೇನ್ಮಾಡ್ತಾರೆ?
ಲೆಕ್ಕ ನೋಡ್ತಾರೆ. ಆಸ್ತಿನಾ ಪಂಚನಾಮೆ ಮಾಡ್ತಾರೆ. ಕಾಸು ಎಷ್ಟಿದೆ? ಆಸ್ತಿ ಎಷ್ಟಿದೆ? ಒಡವೆ ಎಷ್ಟಿದೆ? ಲೆಕ್ಕ ಹಾಕ್ತಾರೆ.
ಹಾಕಿ…?
ಲೆಕ್ಕದಲ್ಲಿರೋದು ಬಿಡ್ತಾರೆ. ಮಿಕ್ಕದ್ದು ಮುಟ್ಗೋಲ್ ಹಾಕ್ಕೋತ್ತಾರೆ.
ಪೂರ್ತಿ ಹೋಗೇ ಬಿಡ್ತದಾ?
ಇಲ್ರಾ, ಟ್ಯಾಕ್ಸ್ ಇಟ್ಕೊಳ್ತಾರೆ. ಬಡ್ಡಿ ಪೆನಾಲ್ಟಿ ಅಂತ ಮಾಡಿ ಅದನ್ನೂ ಕಟ್ಟಿಸ್ಕೋತಾರೆ.
ಕಟ್ಟಿಸ್ಕೊಂಡು ಮಿಕ್ಕಿದ್ದೆಲ್ಲಾ ವಾಪಾಸ್ ಬರುತ್ತಾ?
ಹೌದ್ರಾ.
ಸರಿ ಬಿಡು! ಹೊರಡು! ಎದ್ರು. ಅವನು ಮತ್ತಂದ –
ಗೊತ್ತಿದ್ದು ಗೊತ್ತಿದ್ದು ತೆರಿಗೆ ಕದ್ದಿದ್ರೆ, ಕದ್ದವ್ರೆ ಅಂತಾದ್ರೆ ಜೈಲು ಆಗ್ಬಹುದ್ರಾ!
ಸ್ವಾಮಿಗಳಿಗೆ ನಗು ಬಂತು.
ಮಠಕ್ಕೆ ಹೆಂಗಯ್ಯ ಜೈಲು?
ಮಠಕ್ಕಲ್ವರ್ರಾ, ಸ್ವಾಮಿಗಳು ನೀವು. ಇಲ್ಲಿ ನಿರ್ಧಾರ ನಿಮ್ಮದಲ್ಲವ್ರಾ? ತಪ್ಪು ನೀವು ಮಾಡೀರಿ ಅಂತ ಹೇಳಿ ನಿಮ್ಗಾಗುತ್ತೆ.
ಸ್ವಾಮಿಗಳು ನಗು ಜೋರಾಯ್ತು.
ಈಗಿರೋದಿನ್ನೇನು? ಅದೇ ಅಲ್ವಾ?
ಮತ್ತೆ ನಕ್ಕರು. ಜೀವನದಲ್ಲಿ ಮೊದಲಬಾರಿ ಮನಃಪೂರ್ತಿ ನಕ್ಕರು.
ಪರಮೇಶಿ ಬಿಟ್ಟಕಣ್ಣು ಬಿಟ್ಟ ಬಾಯಲ್ಲಿ ನಿಂತೇ ಇದ್ದ.
***

painting2ರಾಜ್ಯದಲ್ಲೆಲ್ಲಾ ಸುದ್ದಿಯಾಗಿತ್ತು. ಅಮಾವಾಸ್ಯೆ ದಿನ ಬೆಳಗ್ಗೆ ಪೂಜೆ, ಮತ್ತೆ ಮಂಗಳಾರತಿ. ಸ್ವಾಮಿಗಳು ದರ್ಬಾರಿಗೆ ಕೂರ್ತಾರೆ. ದರ್ಶನ ಕೊಡ್ತಾರೆ. ಮತ್ತೆ ಏಕಾಂತಕ್ಕೆ ಹೋಗ್ತಾರೆ. ಈ ಸಾರ್ತಿ ಎಷ್ಟು ತಿಂಗಳು ಅಂತ ಹೇಳಿಲ್ವಂತೆ. ಮೂರು ತಿಂಗ್ಳು ಆಗ್ಬಹುದು. ಆರು ತಿಂಗ್ಳು ಆಗ್ಬಹುದು. ವರ್ಷಾನೇ ಆಗ್ಬಹುದು. ಒಳಿಕ್ ಬಂದ್ಹಾಯ್ತು. ಮತ್ತಾಚೆ ಬರಾಕಿಲ್ಲ. ಗದ್ದಿಗೆ ಕಟ್ಟಿ ಅಂತ ಅಂದ್ರೂ ಅಂದ್ರೆ. ಕೊನೆಯ ದರ್ಶನ. ಎಲ್ಲಾ ಕಡೆ ಜನ! ಮಠದ ಕಡೆಗೆ ಸ್ವಾಮಿಗಳ ದರ್ಶನಕ್ಕೆ ಹೊರಟಿತ್ತು ಜನಸಾಗರ.
***

ರಾತ್ರೆ ಪರಮೇಶಿಗೆ ನಿದ್ದೆ ಹತ್ಲಿಲ್ಲ. ಅದೇನೋ ಸ್ವಾಮಿಗಳ ಮಾತು ಸ್ವಾಭಾವಿಕ ಅನ್ನಿಸ್ಲಿಲ್ಲ. ಹಾಗೆ ನೋಡಿದ್ರೆ ಸ್ವಾಮಿ ನಕ್ಕದ್ದೇ ಇವನು ಕಂಡಿರ್ಲಿಲ್ಲ. ಯಾವತ್ತೂ ನಿರ್ಭಾವುಕ ಮುಖ. ಅಳುವಿಲ್ಲ, ಕೋಪವಿಲ್ಲ, ನಗುವಿಲ್ಲ. ಇವತ್ತು ಅಟ್ಟಹಾಸದಲ್ಲಿ ನಕ್ಕದ್ದು. ಸ್ವಾಭಾವಿಕ ಅನ್ನಿಸ್ಲಿಲ್ಲ. ನಿದ್ದೆ ಹತ್ಲಿಲ್ಲ. ಮೂರಕ್ಕೇ ಎದ್ದು ಸ್ನಾನ ಮಾಡ್ದ. ಸ್ವಾಮಿಗಳು ನಾಲ್ಕಕ್ಕೇ ಎದ್ದು ಪೂಜೆಗೆ ಹೊರಟುಬಿಡ್ತಾರೆ. ಕಾರ್ಯಕ್ರಮ ಮುಗ್ಸಿ ಏಕಾಂತಕ್ಕೆ ಹೊರಟ್ರೆ ಮತ್ತೆ ಸಿಗಲ್ಲ. ನಗು ಸ್ವಾಭಾವಿಕ ಅಲ್ಲ. ಅದೇನದು ಕೇಳಬೇಕು. ಮಠಕ್ಕೆ ಧಾವಿಸ್ದ.

ಮಠಕ್ಕೆ ಇವ್ನು ಬಹಳ ಪರಿಚಿತ. ಸ್ವಾಮಿಗಳಿಗೆ ಆಪ್ತ. ಎಷ್ಟೇ ಹೊತ್ತಿನಲ್ಲಿ ಎಲ್ಲಿ ಬೇಕಾದ್ರೂ ಹೋಗ್ಬಹುದಿತ್ತು. ಸೀದಾ ಸ್ವಾಮಿಗಳ ಕೋಣೆಗೇ ಹೋದ. ದೇವರ ಮುಂದೆ ದೀಪ ಉರೀತಿತ್ತು. ಆಗಷ್ಟೇ ಹಚ್ಚಿದ ಗಂಧದಕಡ್ಡಿ ಪರಿಮಳ ಸೂಸ್ತಿತ್ತು. ಪೀಠದಲ್ಲಿ ಗುರು ಕಾಣ್ಲಿಲ್ಲ. ಬಚ್ಚಲ ಮನೇಲಿ ಇರಲಾರ್ರು, ಪೂಜೆಯಾಗಿದೆ. ಅಂದ್ರೆ ಸ್ನಾನ ಆಗಿದೆ. ಮತ್ತೆಲ್ಲಿಗೆ? ಹಿತ್ತಲ ಬಾಗ್ಲು ತೆಗೆದಿತ್ತು. ಆಚೆ ಹಿತ್ಲಿಗೆ ಬಂದ. ಅಮಾಸೆ ಕತ್ಲು. ರೂಮಲ್ಲಿ ಹಚ್ಚಿಟ್ಟ ದೇವರ ಎದುರಿಗಿನ ದೀಪದ ಬೆಳಕು ಕಿಟಕಿ ಬಾಗಿಲುಗಳಿಂದಾಚೆಗೆ ಮಬ್ಬು ಮಬ್ಬಾಗಿ ಇಣುಕಿತ್ತು. ನಿಂತು ನೋಡ್ದವನಿಗೆ ಹಿತ್ತಲ ಮರದಲ್ಲಿ ಬಿಳಲು ನೇತಾಡ್ತಿದೆ ಅನ್ನಿಸ್ತು. ಇಲ್ಲ, ಆಲದ ಮರ ಅಲ್ಲ ಇದು; ಮಾವಿನ ಮರ. ಇದಕ್ಕೆ ಬಿಳಲೆಲ್ಲಿ? ಹತ್ರ ಹೋದ. ಕಂಡ್ತು. ಬರೀ ಮೈಯಲ್ಲಿ ಸ್ವಾಮೀಜಿ ಕೊಂಬೆಗೆ ನೇತಾಕ್ಕೊಂಡಿದ್ರು.
***

ಅಮವಾಸೆ ದಿನ ಊರೆಲ್ಲಾ ಸುದ್ದಿ. ಸ್ವಾಮಿಗಳು ಕದ್ದು ಮುಚ್ಚಿ ಕೋಟ್ಯಂತರ ಹಣ, ಒಡವೆ, ಆಸ್ತಿ ಬಚ್ಚಿಟ್ಟಿದ್ರಂತೆ. ಮಠದ ಲೆಕ್ಕಕ್ಕೆ ತರದೇ ಬಚ್ಚಿಟ್ಟಿದ್ರಂತೆ. ಏಕಾಂತಕ್ಕೆ ಆರು ತಿಂಗಳು ಹೋಗಬೇಕು ಅಂತ ಕಂಡಾಗ ಕನಸ್ನಾಗೆ ಭಗವಂತ ಪ್ರತ್ಯಕ್ಷ ಆಗಿ, ನಿಂದು ಟೈಮು ಮುಗೀತು ಬಾ ಅಂದ್ನಂತೆ.
ಅದಕ್ಕಿವ್ರು, ನನ್ನ ಕೋಣೆ ತುಂಬಾ ಹಣ, ಒಡವೆ, ಆಸ್ತಿ ಪಾಸ್ತಿ, ಪತ್ರಗಳನ್ನು ತುಂಬಿದ್ದೀನಿ. ಇದು ಮಠಕ್ಕೆ ಸೇರಿದ್ದು, ಲೆಕ್ಕಕ್ಕೆ ಸೇರಿಸ್ದೇ ಕದ್ದು ಮುಚ್ಚಿ ಗುಡ್ಡೆ ಹಾಕ್ಕಂಡಿದ್ದೀನಿ. ಈಗ ಜ್ಞಾನೋದಯ ಆಗಿದೆ, ಬದುಕು ನಶ್ವರ; ಆಸ್ತಿ ಅಸ್ಥಿರ ಅನ್ಸಿದೆ. ಲೆಕ್ಕಕ್ಕೆ ತಗಳ್ಳಿ. ಮಠದ ಲೆಕ್ಕಕ್ಕೆ ತಗಳ್ರಿ. ಪಾಪ ಮಾಡೀನಿ. ಪ್ರಾಯಶ್ಚಿತ್ತ ಅಂತ ನೇತಾಕ್ಕೊಂಡೀನಿ. ಇದಕ್ಯಾರೂ ಜವಾಬ್ದಾರರಲ್ಲ. ಬರದಿಟ್ಟು ಬತ್ಲು ನೇತಾಕ್ಕೊಂಡ್ರಂತೆ.
***

ಪೊಲೀಸ್ನೋರು ಬಂದ್ರು. ಸರಕಾರದ ಅಧಿಕಾರಿಗಳು ಬಂದ್ರು. ಜನಸಾಗರ ಸೇರಿದ್ರು. ಆಸ್ತಿ ಪಾಸ್ತಿ ಎಲ್ಲ ಮಠದ ಲೆಕ್ಕಕ್ಕೆ ಸೇರ್ತು. ವಾರಸ್ದಾರರು ಯಾರೂ ಇರ್ಲಿಲ್ಲ. ಸದ್ಯಕ್ಕೆ ಸರ್ಕಾರವೇ ಒಬ್ಬ ಅಧಿಕಾರಿಯನ್ನ ನೇಮಿಸ್ತು.
ಕಚ್ಚಿದ್ರು ಸ್ವಾಮಿಗಳು. ಬಲವಾಗೇ ಕಚ್ಚಿದ್ರು. ಇವರುಗಳು ದೋಚಿ ಗುಡ್ಡೆ ಹಾಕಿದ್ದೆಲ್ಲ ಮಠದ ಬೊಕ್ಕಸ ಸೇರಿತ್ತು. ಕಚ್ಚಿ ಇವರು ಕೊಲ್ಲೋಕೂ ಮೊದ್ಲೇ ನೇತಾಕ್ಕೊಂಡಿದ್ರು. ಬಡುಕ್ಕೊತ್ತಿದ್ರು ಪಾಪ ಟ್ರಸ್ಟಿಗಳು ದುಃಖದಲ್ಲಿ.
ಟ್ರಸ್ಟಿಗಳು ಸಭೆ ಸೇರಿದ್ರು. ದುಃಖದಲ್ಲಿ ಜರ್ಝರಿತವಾಗಿದ್ರು; ಆಸ್ತಿ ಹೋಯ್ತು ಅಂತ ಬಡ್ಕೊತಿದ್ರು. ಭಕ್ತಿ ಅಂತ ಜನ ಅಂದ್ಕಂಡ್ರು. ಆಸ್ತಿ ಹೋಯ್ತು ಅಂತ ಮಠ ಬಿಟ್ರೆ ಅಧಿಕಾರವೂ ಹೋಗುತ್ತೆ. ಚರ್ಚಿಸಿ ಠರಾವು ಪಾಸು ಮಾಡಿದ್ರು.
ಗೊತ್ತೋ ಗೊತ್ತಿಲ್ದೆನೋ ಮಠದ ಸ್ವಾಮಿಗಳು ತಪ್ಪು ಮಾಡಿದ್ದಾರೆ. ಹಂಗಂತ ಮಠದ ಮರ್ವಾದೆ ಕಳ್ಕೋಬಾರ್ದು. ಪೀಠದ ಯೋಗ್ಯತೆಗೆ ತಕ್ಕಂತೆ ಕ್ರಿಯಾ ಕರ್ಮಗಳನ್ನು ಮುಗ್ಸಿ ಸಮಾಧಿ ಕಟ್ಟಿಸ್ಬೇಕು.

painting3ಹಂಗೇ ಆಯ್ತು.
ಇನ್ನೊಂದು ಠರಾವು ಪಾಸಾಯ್ತು!
ಸದ್ಯಕ್ಕೆ ಸರ್ಕಾರದ ಅಧಿಕಾರಿ ಮಠದ ಉಸ್ತುವಾರಿಗೆ ಕುಂತವ್ರೆ. ಧರ್ಮ ಸಕರ್ಕಾರಕ್ಕೆ ಗೊತ್ತಿಲ್ದೇ ಇರೋ ವಿಷ್ಯ. ಹಂಗಾಗಿ ಭಕ್ತರೆಲ್ಲ ಸೇರಿ ಮತ್ತೊಬ್ಬ ಯೋಗ್ಯನ್ನ ಪೀಠಕ್ಕೆ ಕೂರಿಸ್ಬೇಕು!
ವಾರದಲ್ಲಿ ಅದೂ ಆಯ್ತು.
ಮತ್ತೆ ಶುರು! ಅವರವರ ಕೋಣೆ ಕೀಲಿ ಅವರವರೇ ಇಟ್ಕಂಡ್ರು. ಆಯ್ಕಂಡಿದ್ದು, ಕಿತ್ಕಂಡಿದ್ದು, ಬಡ್ದದ್ದು, ದೋಚಿದ್ದು, ಕದ್ದದ್ದು ತಂದು ತಂದು ತುಂಬಿದ್ರು.
***

ಪೇಪರಲ್ಲಿ ಸುದ್ದಿ – ಸ್ವಾಮಿಗಳ ಸೇವೆಯನ್ನು ಗಮನಿಸಿ ಕೇಂದ್ರ ಸರಕಾರ ‘ಪದ್ಮವಿಭೂಷಣ ಪ್ರಶಸ್ತಿ’ ಕೊಟ್ಟಿದೆ. ಅವರಿದ್ದಾಗ್ಲೇ ನಿರ್ಧಾರ ಆಗಿತ್ತಂತೆ. ಪ್ರಕಟಿಸುವಷ್ಟರಲ್ಲಿ ತೀರಿ ಹೋಗಿದ್ರು. ಹಾಗಾಗಿ ಪ್ರಶಸ್ತಿ ಮರಣೋತ್ತರ ಕೊಡ್ತಾರೆ.
ಪರಮೇಶಿ ಪಾಪ ಪೇಚಾಡ್ಕಂಡ. ಆದಾಯ ತೆರಿಗೆ ಇಲಾಖೆಯಲ್ಲಿ ಮಠದ ಕಡತ ಓಡಾಡಿದ್ದು ದಿಟ. ಸ್ವಾಮಿಗಳಿಗೆ ಪದ್ಮವಿಭೂಷಣ ಕೊಡ್ಬೇಕು, ಕಡತಗಳಲ್ಲಿ ಸಮಸ್ಯೆ ಏನಿಲ್ಲ ಅನ್ನೋದನ್ನು ದಾಖಲಿಸೋದಕ್ಕೆ. ಇವನು ಪಾಪ, ಜಪ್ತಿಗಿರಬೇಕು ಅಂತ ತಪ್ಪು ತಿಳ್ಕೊಂಡು ಸುದ್ದಿ ಮುಟ್ಸಿದ್ದ. ಕದ್ದು ಕೂಡಿಟ್ಟ ಕಾಸು ಟ್ರಸ್ಟಿಗಳು ಕಳ್ಕೊಂಡ್ರು, ಗೊತ್ತೊ ಗೊತ್ತಿಲ್ದೇನೊ ಕಾದ ಪಾಪಕ್ಕೆ ಸ್ವಾಮಿಗಳಿಗೆ ಮೋಕ್ಷ.

ಸರ್ಕಾರ, ಸೇವೇನಾ ಧರ್ಮಾನಾ ಗುರುತಿಸಿ ಪದ್ಮವಿಭೂಷಣ ಕೊಟ್ಟಿತ್ತು. ಮುಚ್ಚಿಟ್ಟ ಪಾಪ ಮೋಕ್ಷಕ್ಕೆ ದಬ್ಬಿತ್ತು. ಪ್ರಪಂಚ ಅದಕ್ಕೆ ಅರ್ಥವಾದ ಕಂಡ ಸತ್ಯದ ಮೇಲೆ ಪ್ರತಿಕ್ರಿಯಿಸತ್ತೆ. ನಮ್ಮ ಸತ್ಯದ ಮೇಲೆ ನಾವು ಅನುಭವಿಸ್ತೀವಿ.
ಹೊರಗಿಂದೆಲ್ಲಿ ಶಿಕ್ಷೆ? ಒಳಗಿಂದೇ. ಬಾಹ್ಯಕ್ಕೆ ಬಿರುದು, ಶಿಕ್ಷೆ ಆಂತರ್ಯದ್ದಲ್ವಾ…..

11 Comments

 1. Vinayak Kulkarni
  November 3, 2016
 2. Arun Patel
  October 28, 2016
 3. Anonymous
  October 26, 2016
  • Ramaswamny RT
   November 3, 2016
 4. Samatha
  October 25, 2016
 5. Anil
  October 25, 2016
 6. Pradeep
  October 24, 2016
 7. Ashalatha, Mangaluru
  October 24, 2016
 8. ನಾಗೇಂದ್ರ ಶಾನ್.
  October 24, 2016
 9. narayan raichur
  October 24, 2016
 10. Raghavendra
  October 24, 2016

Add Comment

Leave a Reply