Quantcast

ಮಹಾಮನೆಯ ತೇಜಸ್ಸು ಅರಮನೆಯ ಕಣ್ಣು ಕುಕ್ಕಿತು

rattehalli_raghavank_ರಟ್ಟೀಹಳ್ಳಿ ರಾಘವಾಂಕುರ

12 ನೇ ಶತಮಾನದ ಕಲ್ಯಾಣದ ಕ್ರಾಂತಿಗೆ ಸಾಕ್ಷಿಯಾದ ಅನೇಕ ಬರಹಗಳಲ್ಲಿ ಕಂಬಾರರ ‘ಶಿವರಾತ್ರಿ’ ನಾಟಕವೂ ಒಂದು. ಉಳಿದಂತೆ ಹರಿಹರನಿಂದ ಹಿಡಿದು ಹೊಸ ತಲೆಮಾರಿನವರ ಬರಹಗಳವರೆಗೂ ಒಂದಿಲ್ಲೊಂದು ಕಡೆಗೆ ಶರಣರು ಮಾಡಿದ ಕ್ರಾಂತಿಯ ಕಡೆಗೆ ಗಮನಹರಿಸುತ್ತವೆ. ಅದರಲ್ಲಿ ಮುಖ್ಯವಾದವುಗಳು ಸಂಕ್ರಾಂತಿ, ತಲೆದಂಡ, ಮಹಾಚೈತ್ರ ಮುಂತಾದವುಗಳು.

shivaratri_dramaಕಂಬಾರರ ಶಿವರಾತ್ರಿಯ ವಿಶೇಷತೆ ಕಲ್ಯಾಣದ ಕ್ರಾಂತಿಯನ್ನು ಕೆಳವರ್ಗದವರಿಂದಲೇ ಆರಂಭಿಸುವ ಹಾಗೂ ಕೊನೆಯವರೆಗೂ ಸ್ವಾತಂತ್ರ ಹಾಗೂ ಸಮಾನತೆಯ ಕಡೆಗೆ ಮುಖಮಾಡುತ್ತಲೆ, ಅರಮನೆಯ ಪ್ರಭುತ್ವದ ಪಾರಂಪರಿಕ ಪದ್ಧತಿಯ ಕಡೆಗೆ ಬೆನ್ನುಮಾಡಿ ಮಹಾಮನೆಯಲ್ಲಿ ಸರ್ವಸಮಾನರಾಗಿ ಎದುರುಗೊಳ್ಳುವುದು. ಆರಂಭದಲ್ಲಿ ಹರಳಯ್ಯ ಹಾಗೂ ಮಧುವರಸರಂತಹ ಶರಣರ ಕಣ್ಣು ಕೀಳಿಸಿ ಶೂಲಕ್ಕೇರಿಸುವಂತೆ ಮಾಡಿದ ಅಹಂಕಾರ ಅಥವಾ ಪ್ರಭುತ್ವ ಕೊನೆಗೆ ಅಂಧಕಾರಾದ ಪರಮಾವಧಿಯಲ್ಲಿ ಕ್ರೂರ ಅಂತ್ಯವನ್ನು ಕಾಣುವಂತೆ ಮಾಡುತ್ತದೆ.

ದಾಮೋದರ, ಕಳ್ಳ ಚಿಕ್ಕಯ್ಯ, ಸೂಳೆ ಸಾವಂತ್ರಿ, ಕಾಮಿನಿ ಕಾಮಾಕ್ಷಿಯವರಿಂದಲೂ ಪರಿವರ್ತನೆಯನ್ನು ಕಾಣುವಿಕೆ ಶರಣತ್ವದ ಗೊಡವೆಗೇ ಹೋಗದ ಕಾಶವ್ವ, ತುಂಗವ್ವ, ಕಲ್ಲಪ್ಪ, ಮುದುಕಪ್ಪರ ಮುಗ್ಧತೆ, ಮುಗ್ಧ ಸಂಗಯ್ಯ ಹಾಗೂ ನಗರದ ಅದಿದೇವತೆ ಹುಚ್ಚಿಯಿಂದಲೂ ನೀತಿ ಹೇಳುವ ವಿಪರ್ಯಾಸ, ಬಿಜ್ಜಳನ ಚಾಡಿ ಮಾತಿಗೆ ಕಿವಿಗೊಡುವ ಸಣ್ಣತನ ಅಧಿಕಾರದ ಮದ, ಬಸವಣ್ಣನ ಶರಣತ್ವದ ಕಡೆಗೆ ಬೆಳಕು ಚೆಲ್ಲುವ ನಾಟಕ ವಸ್ತುವಿನ ದೃಷ್ಟಿಯಿಂದಲೂ ಲಯಗಾರಿಕೆಯಿಂದಲೂ ತಂತ್ರಗಾರಿಕೆಯ ಹೊಣೆಯಿಂದಲೂ ಜವಾಬ್ಧಾರಿಯುತವಾದುದು.

ಬಿಜ್ಜಳ ಹಾಗೂ ಬಸವಣ್ಣನವರ ನಡುವಿನ ವೈಚಾರಿಕ ಸಂಘರ್ಷದ ಅಂಶಗಳು ಮಾತ್ರವಲ್ಲದೇ ಅರಮನೆ ಹಾಗೂ ಮಹಾಮನೆಗಳ ನಡುವೆ ನಡೆದ ಸಂಘರ್ಷ ಅಥವಾ ಎರಡು ವ್ಯವಸ್ಥೆಗಳ ಮಧ್ಯದಲ್ಲಿ ನಡೆದ ಸಂಘರ್ಷ ಎನ್ನಬಹುದು. ಕಲ್ಯಾಣದ ಕ್ರಾಂತಿ ಬಿಜ್ಜಳನ ವಿರುದ್ಧವಲ್ಲ, ಬದಲಾಗಿ ಅರಮನೆಯ ಪ್ರಭುತ್ವದ ಪದ್ಧತಿಯನ್ನು ತಿರಸ್ಕರಿಸಿ. ಬಸವಣ್ಣನ ಮಹಾಮನೆಯ ಚಿಂತನೆಗಳು ಅರಮನೆಯ ವಿರುದ್ಧವಾಗಿ ಉದಿಸಲಿಲ್ಲ.

ಚಿನ್ನದ ಸುತ್ತ ಆಸೆ ಆಮಿಶಗಳಿರುತ್ತವೆ
ಮಣ್ಣಿನ ಸುತ್ತ ಮನುಷ್ಯರಿರುತ್ತಾರೆ
ಮಹಾಮನೆಯ ತೇಜಸ್ಸು
ಅರಮನೆಯ ಕಣ್ಣು ಕುಕ್ಕಿತು

ಸೂತ್ರಧಾರನ ಈ ಮಾತು ಬಹುಸ್ಪಷ್ಟವಾಗಿ ಮಹಾಮನೆಯನ್ನು ಸಮರ್ಥಿಸಿಕೊಳ್ಳುತ್ತದೆಯೇ ಹೊರತು ಅರಮನೆಯನ್ನು ಟೀಕಿಸುತ್ತಿಲ್ಲ ಎಂಬುದು ಸ್ಪಷ್ಟ. ಅರಮನೆ ಹಾಗೂ ಮಹಾಮನೆಗಳ ನಡುವೆ ನಡೆದದ್ದು ವೈಚಾರಿಕ ಸಂಘರ್ಷಗಳು. ಮಹಾಮನೆ ಶರಣರಿಗೆಲ್ಲರಿಗೂ ಜಾತಿಯಿಲ್ಲವೆಂದು ಹೇಳಿದರೆ ಅರಮನೆ ಮನುಷ್ಯರೆಲ್ಲಾ ಒಂದಲ್ಲಾ ಒಂದು ಜಾತಿಗೆ ಸೇರಲೇಬೇಕು ಎಂಬ ಪರಂಪರೆಗೆ ಜೋತು ಬಿದ್ದಿದೆ.

ಶರಣರ ನಡುವಿನ ಸಮ್ಮತವು ಪ್ರಭುತ್ವಕ್ಕೆ ವಿರೋಧವಾಗಿ ಕಂಡಿತು. ಒಂದು ಕಡೆಗೆ ಶರಣತ್ವದ ಕ್ರಾಂತಿ ನಡೆದರೂ ‘ಲಿಂಗ’ ‘ಆತ್ಮ’ ಎಂಬುದರ ಪರಿವೆ ಇಲ್ಲದಿರುವಿಕೆ ವಿಪರ್ಯಾಸ ಎಂದೆನಿಸುತ್ತದೆ. ಹೆಂಗೊಂದು ಎನ್ನುವ ತುಂಗವ್ವನ ಮಾತು, ಪುಕ್ಕಟ ಅಂದರ ಒಂದೆರಡು ತರಬಾರದೇನವಾ ಅಕ್ಕಾ? ಎಂಬ ಕಲ್ಲಪ್ಪನ ಮಾತು ಶರಣತ್ವ ಆ ಕಾಲಕ್ಕೂ ನಿಖರವಾದ ಪ್ರಜ್ಞೆ ಹೊಂದುವಲ್ಲಿ ಎಡವಿದೆಯೇನೋ ಎಂಬ ಅನುಮಾನ ಹುಟ್ಟಿಸುವುದಲ್ಲದೇ ಇಂದಿನ ಅರಿಗೂ ಕನ್ನಡಿ ಹಿಡಿದಂತಾಗುತ್ತದೆ.

ಮುಗ್ಧ ಸಂಗಯ್ಯ ಸೂಳೆ ಸಾವಂತ್ರಿಯನ್ನು ಅರಸುತ್ತಾ ಬಂದು ಕೊನೆಗೆ ಕಾಮಿನಿ ಕಾಮಾಕ್ಷಿಯ ಎದುರಲ್ಲಿ ಲಿಂಗ ಪೂಜೆಯನ್ನು ಮಾಡಿಕೊಳ್ಳುವ ತುಡಿತ ಶರಣರಲ್ಲಿ ಮಡಿವಂತಿಕೆ ಇಲ್ಲ ಎಂಬುದರ ಅರಿವನ್ನು ತೋರಿಸುತ್ತದೆ. ಹಾಗೆಯೇ ಶರಣತ್ವ ಸ್ಥಿರವಲ್ಲ; ಚರ ಎಂಬುದನ್ನು ಗುರುತಿಸಬಹುದು. ಆದರೆ ಇಂದಿನ ಮಠ ಮಾನ್ಯಗಳ ಶರಣತ್ವದ ಕಡೆಗೆ ನೋಡುವುದಾದರೆ ಶರಣತ್ವ ಜಂಗಮಶೀಲವಾಗದೆ ಸ್ಥಾವರವಾಗಿ ಕುಳಿತಿದೆ.

ಸಮಾಜ ಮುಖಿಯಾದ, ಜಾತಿ ವಿರೋಧಿಯಾಗಿ ಯಾವ ನಿಲುವನ್ನು ತಾಳದೆ ಇರುವುದು ಶರಣ ತತ್ವಗಳಿಗೆ ಮೋಸ ಮಾಡುತ್ತಿವೆಯೇನೊ ಎಂಬ ಅನುಮಾನದ ಹುತ್ತ ಕಟ್ಟುತ್ತದೆ. ಕಲ್ಯಾಣದ ಅದಿದೇವತೆ ಹುಚ್ಚಿಯ ಭವಿಷ್ಯವೊಂದು ನಿಖರವಾಗಿರುವಾಗ ಅರಮನೆಯ ಪ್ರಭುತ್ವದ ನಿಲುವು ಮಾನವತೆಯೆಡೆಗೆ ಹಾಗೂ ಜಾತಿರಹಿತವಾದ ನಿಲುವುಗಳನ್ನು ತೆಳೆಯದೇ ಪಾರಂಪರಿಕ ಪದ್ಧತಿಯನ್ನೇ ಮುಂದುವರೆಸುವ, ಸಿಂಹಾಸನವನ್ನು ಕಾಪಾಡಿಕೊಳ್ಳುವ ಹಂತದಲ್ಲಿಯೇ ಇದ್ದುದು ಖೇದವೆನಿಸುತ್ತದೆ. ಇಂತಹ ಉದಾರಹಣೆಗಳನೇಕವುಗಳು ಪ್ರಜಾಪ್ರಭುತ್ವದಲ್ಲೇನೂ ಕೊರತೆಯಿಲ್ಲ. ಜಾತಿಗೊಂದು ಪಕ್ಷದ ನಿಯಮಾವಳಿಗಳನ್ನು ಗೊತ್ತು ಮಾಡಿ ಕುಳಿತಿರುವ ಪ್ರಜಾಪ್ರಭುತ್ವ ಕಲ್ಯಾಣದ ಕಾಲಕ್ಕೆ ಹಿಡಿದ ಕೈಗನ್ನಡಿಯಾಗಿ ಈ ನಾಟಕವಿದೆ.

shivaratri_Drama

ಸಮಯದ ಮಿತಿಯಿಂದ ನಾಟಕ ತುಂಬಾ ಚಿಕ್ಕದಾಗಿದ್ದು, ಹರಳಯ್ಯ – ಮುಧುವರಸರ ಕಣ್ಣು ಕೀಳಿಸಿ, ಶೂಲಕ್ಕೇರಿಸಿದ ಮೇಲೆ ಆರಂಭವಾಗುವ ನಾಟಕ, ಶಿವರಾತ್ರಿಯ ಕತ್ತಲ ಅಮವಾಸೆಯ ಒಂದೇ ರಾತ್ರಿಯಲ್ಲಿ ನಡೆಯುವ ಅನೇಕ ಸಂಗತಿಗಳಿವೆ. ಅಲ್ಪ ಸಮಯದರಲ್ಲಿ ಕಂಬಾರರ ಕೈಚಳಕ ತುಂಬ ಅದ್ಭುತವಾದುದು. ಒಂದು ಕಡೆಗೆ ಶರಣ ಕ್ರಾಂತಿ ಸೊಕ್ಕಿಲ್ಲದೆ ಸಾಗುತ್ತಿದ್ದರೆ ಇನ್ನೊಂದರೆಡೆಗೆ ಅದರ ಗೊಡವೆಗೇ ಹೋಗದ ಮನಸ್ಥಿತಿಗಳು.

ಕೆಳವರ್ಗದವರಿಂದಲೂ ಶರಣತ್ವಕ್ಕೆ ಗೌರವ ಕೊಡಿಸುವ, ಅರಮನೆಯನ್ನು ತಿರಸ್ಕರಿಸುವ ಭಾವಗಳು, ವೇಶ್ಯೆಯರಿಂದಲೂ ಕಾಯಕ ಧರ್ಮದ ಬಗ್ಗೆ ಇರುವ ಶ್ರದ್ಧೆ ಇವೆಲ್ಲ ಒಂದು ಕಡೆಯಾದರೆ, ಬಸವಣ್ಣನನ್ನು ಕೊಲ್ಲಲು ಬಂದ ಕಳ್ಳ ಚಿಕ್ಕಯ್ಯ ಪರಿವರ್ತಿತನಾಗುತ್ತಾನೆ. ಆದರೆ ಬಿಜ್ಜಳನನ್ನು ಕೊಲ್ಲು ಬಂದ ಜಗದೇವ ಹಾಗೂ ಮಲ್ಲಿಬೊಮ್ಮಣ್ಣರು ಸಾಧಿಸಿದ ಕೊಲೆ ಎರೆಡೆರಡು ದಿಕ್ಕಿನಿಂದ ಯಾವುದು ಸರಿ ಎನ್ನುವ ಪರಿಕಲ್ಪನೆಯನ್ನು ಕೊಡುತ್ತವೆ.

ತಂದೆ ಹರಿಹರನಿಂದ ಪ್ರಚೋದನೆಗೆ ಒಳಗಾದ ದಾಮೋದರ ಅರಮನೆಯಿಂದ ರತ್ನಹಾರ (ಸರ)ವನ್ನು ಕಳ್ಳತನ ಮಾಡಿ ಮುಂದೆ ಶರಣತ್ವಕ್ಕೆ ತನ್ನನ್ನು ಅರ್ಪಿಸಿಕೊಂಡು, ತನ್ನ ತಪ್ಪನ್ನು ಒಪ್ಪಿಕೊಳ್ಳುವ ಹಂತಕ್ಕೆ ಬಂದದ್ದು ಅಭೂತಪೂರ್ಣ ಬದಲಾವಣೆ. ಇಷ್ಟಾದರೂ ಹರಿಹರ ತನ್ನ ಸ್ವಂತ ಮಗನನ್ನು ಒಪ್ಪಿಕೊಳ್ಳದೆ ಸುಳ್ಳನ್ನು ಸಮರ್ಥಿಸಿಕೊಳ್ಳುತ್ತ ತಪ್ಪನ್ನು ಮುಚ್ಚಿಹಾಕುವ ಪ್ರಸಂಗ ಅರಮನೆಯ ನೆರಳಾಗಿದೆ.

ತಂದೆ ಮಗನಿಬ್ಬರ ವ್ಯಕ್ತಿತ್ವ ವೈರುಧ್ಯವನ್ನು ಅರಮನೆ ಹಾಗೂ ಮಹಾಮನೆಗಳ ನಡುವಿನ ವೈರುಧ್ಯಕ್ಕೆ ತುಲನೆ ಮಾಡಿಕೊಳ್ಳಬಹುದು. ಬಸವಣ್ಣ ವ್ಯವಹಾರಿಕ ಜಗತ್ತಿನಲ್ಲಿದ್ದರೂ ಮಹಾಮನೆಯ ಸಂಬಂಧವನ್ನು ಬಿಡಲಿಲ್ಲ, ಬದಲಾಗಿ ಮಹಾಮನೆಯ ತೇಜಸ್ಸಿಗೋಸ್ಕರ ಅರಮನೆಯನ್ನು ತ್ಯಜಿಸಿದ. ತನ್ನನ್ನೂ ಮೀರಿದ ಶಕ್ತಿಯೊಂದಿದೆ ಎಂಬ ಪರಿಕಲ್ಪನೆಯಲ್ಲಿ ಬೆಳೆದವನು.

shivaratri-bookಬಿಜ್ಜಳನ ವಿಫಲತೆಗೆ ಎರಡು ಕಾರಣಗಳಿವೆ. ಒಂದು ಅವನು ವಾಸ್ತವ ಬದುಕನ್ನು ಅರ್ಥ ಮಾಡಿಕೊಳ್ಳದೇ ಪಾರಂಪರಿಕ ಪದ್ಧತಿಯನ್ನು ಒಪ್ಪಿಕೊಳ್ಳುತ್ತಾ ಬಂದುದು. ಇನ್ನೊಂದು ಚಾಡಿ ಮಾತಿಗೆ ಕಿವಿ ಕೊಟ್ಟದ್ದು. ಇದಲ್ಲದೇ ತನ್ನ ವ್ಯವಸ್ಥೆಗೆ ಸಮಾನವಾದ ಇನ್ನೊಂದು ಅಧಿಕಾರವನ್ನು ಆತ ಸಹಿಸಲಾರ. ಇಲ್ಲದನ್ನು ಇದೆ ಎಂದು ಗ್ರಹಿಸುವಿಕೆ ಬಿಜ್ಜಳನ ಅವನತಿಗೆ ಕಾರಣವಾಗಿತು. ಆದರೆ ಬಸವಣ್ಣ ಎಂದಿಗೂ ಅರಮನೆಯನ್ನು ಅಧಿಕಾರ ಕೇಂದ್ರವಾದುದು ಎಂದು ಭಾವಿಸಲಿಲ್ಲ. ಬಿಜ್ಜಳನಿಗೆ ಅಡ್ಡವಾದದ್ದು ಶರಣರ ಆಚರಣೆಗಳು ಪದ್ಧತಿಯನ್ನು ತಿರಸ್ಕರಿಸುವ ಮನೋಭಾವಿಕೆಗಳು.

ನಾಟಕದ ಬಹುಪಾಲು ಭಾಗ ನಡೆದದ್ದು ಸೂಳೆ ಸಾವಂತ್ರಿಯ ಮನೆಯಲ್ಲಿ. ಸಾವಂತ್ರಿಯಂತಹ ಸೂಳೆಯರ ಮನೆಯಲ್ಲಿಯೂ ಕಾಯಕ ಧರ್ಮವನ್ನು ಎತ್ತಿ ತೋರಿಸುವ ಶ್ರಮವಿದೆ. ಸಾವಂತ್ರಿಯ ಮನೆಯಲ್ಲಿ ಸಂಗಯ್ಯ ಲಿಂಗ ಪೂಜೆಯನ್ನು ಮಾಡಿಕೊಂಡದ್ದನ್ನು ಬಸವಣ್ಣ ಪುಣ್ಯದ ಕಾಯಕ ಎಂದು ಒಪ್ಪಿದರೆ ಉಳಿದವರು ಅದನ್ನು ಮಡಿವಂತಿಕೆಯ ಭಾಗವಾಗಿ ದೃಷ್ಟಿಯಿಂದ ಹಿಒಂದೆ ತಳ್ಳುವ ಯೋಚನೆಯುಳ್ಳವರಾಗಿರುವ ಮನೋಭಾವಿಕೆಯನ್ನು ನಾಟಕ ಕಟ್ಟಿಕೊಟ್ಟಿದೆ.

ಇನ್ನು ಕನ್ನಡ ಹಾಗೂ ಸಂಸ್ಕೃತದ ಬಳಕೆಯನ್ನು ಸೂಕ್ಷ್ಮವಾಗಿ ತಿಳಿಹೇಳುವ ಪ್ರಸಂಗ ಅದ್ಭುತವಾದುದು. ಶಿವಭಕ್ತರು ತಮಗೆ ತಿಳಿದಿರುವ ಭಾಷೆಯಲ್ಲಿಯೇ ಲಿಂಗಪೂಜೆಯನ್ನು ಮಾಡಿಕೊಳ್ಳುವ ಬಾರದ ಸಂಸ್ಕೃತವನ್ನು ಕೈಬಿಡುವ ಕೆಲಸ ಪುರೋಹಿತಶಾಹಿ ವರ್ಗಗಳಿಗೆ ಪ್ರಭುತ್ವಕ್ಕೆ ಧಕ್ಕೆಯನ್ನು ಉಂಟುಮಾಡಿತು. ಆದರೆ ಶರಣರು ದೇವರನ್ನು ತಮ್ಮ ಪ್ರೀತಿಯಿಂದ ಪೂಜಿಸುವುದು, ಬಾರದ ಪದ್ಧತಿಯನ್ನು ಕೈಬಿಡುವ ನಿಲುವಿಗೆ ಬಂದದ್ದೂ ಕೂಡ ಮೂಲಭೂತ ಕ್ರಾಂತಿಗಳಲ್ಲಿ ಒಂದಾಗಿದೆ.

ನಮಗೂ ನಿಯಮಗಳಿವೆ ಎಂದು ಹೇಳುವ ಸೂಳೆ ಸಾವಂತ್ರಿಯ ಮಾತು ಕಾಯಕದ ಧರ್ಮದಲ್ಲಿ ತೊಡಗಿರುವ ಪರಿಯನ್ನು ತಿಳಿಸುತ್ತದೆ. ತನ್ನ ದೇಹಕ್ಕಿಂತಲೂ ಮಿಗಿಲಾದದ್ದನ್ನು ತಾನು ಪಡೆಯಲಾರೆ ಆತ್ಮಸುಖಕ್ಕಾಗಿ ಕಾಯಕ ಮಾಡುವೆ ಎನ್ನುವ ಕಾಮಿನಿ ಕಾಮಾಕ್ಷಿಯ ಮಾತು ಶ್ರಮಸಂಸ್ಕೃತಿಯನ್ನು ಕಟ್ಟಿಕೊಡುತ್ತದೆ. ಹಾಗೆಯೇ ನಮ್ಮನ್ನು ಮೀರಿದ್ದು ನಮಗೆ ಕಲ್ಲು ಎಂಬ ಮಾತೂ ಕೂಡಾ. ದಾಮೋದರ ಸರದ ಬೆಲೆ ಎಷ್ಟು ಗೊತ್ತೇನು? ಎಂದು ಪ್ರಶ್ನಿಸಿದಾಗ ಕಾಶವ್ವಜನ ಉತ್ತರ ನಾವದನ್ನು ಕಾಯಕದಿಂದ ಗಳಿಸಿಲ್ಲವಲ್ಲ ಎಂಬ ಕಾಯಕ ಧರ್ಮದ ಪರವಾದುದು. ಮಾಡಿದ ಕೆಲಸಕ್ಕೂ ಬಯಸುವ ಫಲಕ್ಕೂ ತಾಳೆ ಇರಬೇಕು ಅದಿಲ್ಲವಾದರೆ ಅದು ಭ್ರಷ್ಟಾಚಾರ ಎನ್ನುವ ಸೂಳೆ ಸಾವಂತ್ರಿಯ ಮಾತು ಬಿಜ್ಜಳನಲ್ಲಿ ತಲ್ಲಣ ಉಂಟು ಮಾಡುತ್ತದೆ.

ಧರ್ಮವನ್ನು ಆಚರಿಸುವವರಿಗೆ ಸಮಾನತೆ ಹಾಗೂ ಸ್ವಾತಂತ್ರ್ಯ ಎವೆರಡೂ ಮುಕ್ತವಾಗಿ ಬೇಕಾಗುತ್ತವೆ. ಇಲ್ಲವಾದರೆ ಇವೆರಡನ್ನೂ ಬಯಸಿ ಜನ ಬೇರೆ ವೈವಸ್ಥೆಯ ಪರವಾಗಿ ಸಮರ್ಥಿಸಿಕೊಳ್ಳುವುದನ್ನೋ ಅಥವಾ ಬೇರೆಯದೇ ಧರ್ಮವನ್ನು ಪಾಲಿಸುವಲ್ಲಿ ಮುಂದಾಗುತ್ತಾರೆ. ಕಟ್ಟಳೆಗಳನ್ನು ವಿಧಿಸಿದ, ಕಟ್ಟುಪಾಡುಗಳನ್ನು ಹಾಕಿದ ಪಾರಂಪರಿಕ ಪದ್ಧತಿಯಿಂದ ಕಳಚಿಕೊಳ್ಳುವ ಮೂಲಕ ಮುಕ್ತತೆಯನ್ನು ಬಯಸುತ್ತಾರೆ.

ಆ ಸ್ವಾತಂತ್ರ ಹಾಗೂ ಸಮಾನತೆಗಳೆರಡೂ ಶರಣತ್ವದಲ್ಲಿ ಕಾಣಿಸಿದ್ದರಿಂದ ಜನ ಪ್ರಭುತ್ವಕ್ಕೆ ಬೆನ್ನು ಮಾಡಿ ಶರಣತ್ವವನ್ನು ಒಪ್ಪಿಕೊಂಡಿದ್ದಾರೆ. ಆದರೆ ಈ ಪರಿಸ್ಥಿತಿ ಬಸವಣ್ಣ ಪವಾಡಗಳನ್ನು ಮಾಡುತ್ತಿದ್ದಾನೆ ಎಂದು ಬಿಜ್ಜಳನೂ ಸೇರಿದಂತೆ ಜನಗಳೂ ನಂಬುತ್ತಾರೆ. ಆದರೆ ನಂಬುವಿಕೆಯಲ್ಲಿ ವೈರುಧ್ಯಗಳಿವೆ. ಇದನ್ನೇ ಬಿಜ್ಜಳ ಸ್ವಾಮಿಭಕ್ತಿ ಕಡಿಮೆಯಾಗಿ ಬಸವಭಕ್ತಿ ಅಧಿಕವಾಗುತ್ತಿದೆ, ಪವಾಡಗಳು ನಡೆಯುತ್ತಿವೆ ಎಂದು ಆರೋಪಿಸುತ್ತಿರುವುದು.

ಬಸವಣ್ಣನ ಈ ರೀತಿಯ ವರ್ತನೆ ನಡುವಳಿಕೆಗಳು ಬಿಜ್ಜಳನಲ್ಲಿ ಬಸವಣ್ಣ ತನ್ನ ವೈರಿ ಎಂಬ Colorful-hand-images-550ಮನೋಭಾವವನ್ನು ಹುಟ್ಟುಹಾಕುವಂತೆ ಮಾಡಿದೆ. ಇವರು ನಾಡಿನ ಪ್ರಭು ಎಂದು ಬಸವಣ್ಣ ರಾಜರನ್ನು ಪರಿಚಯಿಸುವ ಕ್ರಮವಂತರೂ ಬಿಜ್ಜಳನಲ್ಲಿ ಅಸಾಧಾರಣವಾದ ಕ್ರೋಧವನ್ನು ಉಂಡುಮಾಡಿದೆ. ಇಷ್ಟೆಲ್ಲವುದರ ನಡುವೆಯೂ ಬಸವಣ್ಣ ಕಾಯಕದೆಡೆಗೆ ಮುಖಮಾಡುತ್ತಾನೆಯೇ ಹೊರತು ಅರಮನೆಯ ವಿರುದ್ಧ ಯಾವ ಸಂಘರ್ಷವನ್ನು ಮಾಡದೇ ಮಹಾಮನೆಯ ತೇಜಸ್ಸನ್ನು ವೃದ್ಧಿಸುತ್ತಾನೆ.

ನಾಟಕದಲ್ಲಿ ಸತ್ಯವನ್ನು ಒಪ್ಪಿಕೊಂಡ ದಾಮೋದರ ಬಿಜ್ಜಳನ ಕೈಯಿಂದಲೇ ಕೊಲೆಯಾಗುತ್ತಾನೆ. ಕಳ್ಳತನ ಮಾಡಿಸಿದ ಹರಿಹರ ನುಣುಚಿಕೊಳ್ಳುತ್ತಾನೆ. ಬಿಜ್ಜಳನಲ್ಲಿರುವ ದ್ವಂದ್ವತೆ ಈ ಎಲ್ಲ ಕಾರಣಗಳಿಗೆ ಬಹುಶಃ ಸರಿಯಾದ ಉತ್ತರವಾದೀತು. ಪರಿಸ್ಥಿತಿ ಹಾಗೂ ಕಾಲವನ್ನು ಬಿಜ್ಜಳ ಎಂದಿಗೂ ಸರಿಯಾಗಿ ಅರ್ಥ ಮಾಡಿಕೊಳ್ಳಲೇ ಇಲ್ಲ. ಆದರೆ ಹುಚ್ಚಿಯು ಆಡುವ ಮಾತು ಎಲ್ಲೊ ಒಂದು ಕಡೆಗೆ ಬಿಜ್ಜಳನನ್ನು ಅಲ್ಪ ಪರಿವರ್ತನೆಯನ್ನು ಮಾಡಲು ಯತ್ನಿಸಿ, ಅಧಿಕಾರದ ಧರ್ಪದಿಂದ ಕುಸಿಯುವಂತೆ ಮಾಡಿದ್ದು ಈ ಮಾತುಗಳಿಂದಲೇ ಇರಬೇಕು.

ಅವನೆದುರು ನಾನೊಬ್ಬ ಅಲ್ಪನೆನಿಸಿ ಪಶ್ಚಾತಾಪ
ಪಡುವಂತೆ ಮಾಡಿದ ಸಂಗಯ್ಯ ಆದರೆ
ಯಾವ ರಾಜ ತಾನೆ ಸದಾಕಾಲ
ಪಶ್ಚಾತಾಪ ಪಡಲು ಇಚ್ಚಿಸುತ್ತಾನೆ?

ಇಷ್ಟೆಲ್ಲಾ ವಿರೋಧಗಳ ನಡುವೆಯೂ ಸಾಯುವ ಕೊನೆಗಾಲದಲ್ಲಿ ಬಿಜ್ಜಳ ಪರಿವರ್ತತಿವಾದದ್ದು ಹಾಗೂ ಸ್ವವಿಮರ್ಶೆ ಮಾಡಿಕೊಂಡದ್ದನ್ನು ಈ ಮಾತಿನಿಂದ ತಿಳಿಯಬಹುದು.

ಮುಟ್ಟಲಾಗದ ನನ್ನ ಎದೆಯ ಮೂಲೆಗಳನ್ನ
ಮುಟ್ಟಿದವ, ತಟ್ಟಿವದ ನೀನೊಬ್ಬನೇ ಬಸವಣ್ಣ
ನಿನ್ನವಚನಗಳಿಗೆ ಆ ಶಕ್ತಿ ಇತ್ತು ನಿಜ
ಆದರೆ ಚಾಡಿಗೆ ನಿನ್ನ ಮಾತಿಗಿಂತ ಹೆಚ್ಚಿನ ಶಕ್ತಿ
ವ್ಯಾಪ್ತಿ, ವೇಗವಿತ್ತು ಬಸವಣ್ಣ!

ಈ ನಾಟಕವನ್ನು ಓದಿದ ತರುವಾಯ ಉಳಿದ ಸಂಕ್ರಾಂತಿ, ತಲೆದಂಡ ನಾಟಕಗಳಿಗೆ ತುಲನೆ ಮಾಡಿ ಯೋಚಿಸುವುದಾದರೆ ಶಿವರಾತ್ರಿ ನಾಟಕ ಉಳಿದ ನಾಟಕಗಳಿಗಿಂತ ಹೆಚ್ಚಿನ ವಿಸ್ತಾರತೆಯ ಹಾದಿಯನ್ನು ತೆರೆದಿಡುತ್ತದೆ. ಹುಚ್ಚಿಯನ್ನು ದೈವತ್ವದ ಕಡೆಗೇರಿಸುವ, ಬಾಲಕನಿಂದ ಬಿಜ್ಜಳನಲ್ಲಿ ಕ್ರಾಂತಿ ಮೂಡಿಸುವ, ವೇಶ್ಯೆಯರ ಮನೆ-ಮನದಿಂದ, ಕಳ್ಳ ಚಿಕ್ಕಯ್ಯ ಹಾಗೂ ದಾಮೋದರನಿಂದಲೂ ಕಾಯಕಯೋಗ ಧರ್ಮವನ್ನು ಪರಿಪಾಲಿಸುವಂತೆ ಮಾಡಿದ ತಂತ್ರಗಾರಿಕೆ ಕಂಬಾರರದು.

ವ್ಯವಸ್ಥೆಯೊಂದನ್ನು ವಿರೋಧಿಸುವ ಮೂಲಕವೇ ತಮಗನುಕೂಲಕರವಾದ ಉಸಿರಾಡಲು ಹಿತವಾದ ಮಾರ್ಗ ತೆಳೆದ ಮಹಾಮನೆಯ ನೀತಿಗಳು ಅನುಸರಿಸುವ ಮಾರ್ಗಗಳು ಯುಕ್ತವಾಗಿವೆ. ಅಂತ್ಯಕಾಲದಲ್ಲಿ ಪಶ್ಚಾತಾಪ ಪಡುವ ರಾಜನಿಂದಲೂ ಪರಿವರ್ತನೆಯ ಸ್ವವಿಮರ್ಶೆಯನ್ನು ಮಾಡಿಕೊಳ್ಳುವಂತೆ ಮಾಡುವ ಕ್ರಿಯೆ ಅರ್ಥಪೂರ್ಣವಾದುದು. ತಮ್ಮ ಬರಹದಲ್ಲಿ ಆಡುಮಾತನ್ನು ಹಾಗೂ ಶಿವಾಪುರವನ್ನು ಪ್ರತಿನಿಧಿಸುವ ಕಂಬಾರರ ವಿಶಿಷ್ಟ ಪ್ರಯತ್ನ ಯಾವಾಗಲೂ ಈ ರೀತಿಯ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿರುತ್ತವೆ. ಅದರಲ್ಲೂ ಶಿವರಾತ್ರಿ ನಾಟಕ ತೀರಾ ಚಾರಿತ್ರಿಕ ವಿಭಿನ್ನ ಎನಿಸಿಕೊಂಡಿದೆ.

2 Comments

  1. ರಾಜಕುಮಾರ
    October 26, 2016
  2. Anonymous
    October 26, 2016

Add Comment

Leave a Reply