Quantcast

ಎಚ್ ಎಸ್ ವಿ ಕಾಲಂ: ಪುತಿನ ಒಂದಿಗೆ ಒಂದು ಮುಂಜಾನೆ..

ತಾವರೆಯ ಬಾಗಿಲು-೬
ಎಚ್.ಎಸ್.ವೆಂಕಟೇಶ ಮೂರ್ತಿ

ನವೋದಯಂದಾನವಹೃತ ಮೇದಿನಿಯಂ
ದಂಷ್ಟಾಗ್ರದೊಳಿರಿಸಿ,
ಭೂದಾರಂ ಪಾತಾಳವ-
ನುಳಿದೆದ್ದನೊ ಎನಿಸಿ,
ದೂರ ದಿಗಂತದೊಳೊಪ್ಪಿದೆ
ರವಿ ಮಂಡಿತ ಶೃಂಗಂ,
ನೀಲಾಚಲಮುದ್ದೀಪಿತ
ಪೂರ್ವೋದಧಿಸಂಗಂ||ದಾನವನೊಬ್ಬನು (ಹಿರಣ್ಯಾಕ್ಷ) ಮೇದಿನಿಯನ್ನು (ಭೂದೇವಿಯನ್ನು) ಅಪಹರಿಸಿ ಪಾತಾಳಕ್ಕೆ ಸೆಳೆದೊಯ್ದಿದ್ದನು. ಆಗ ವಿಷ್ಣುವು ವರಾಹರೂಪ ತಾಳಿ, ಅಸುರನನ್ನು ಕೊಂದು, ಭೂಮಿಯನ್ನು ತನ್ನ ಕೋರೆಯ ಮೇಲೆ ಇರಿಸಿಕೊಂಡು ಪಾತಾಳದಿಂದ ಮೇಲಕ್ಕೆ ಎದ್ದು ಬಂದನಂತೆ! ಬೆಟ್ಟವೊಂದರ ಶೃಂಗವು ದಿಗಂತದಂಚಲ್ಲಿ ಕಾಣುತ್ತಾ ಇದೆ. ಆ ಶೃಂಗದ ಮೇಲೆ ಕೆಂಪಾದ ಸೂರ್ಯಬಿಂಬ ಕಾಣಿಸುತ್ತಾ ಇದೆ! ಇದಲ್ಲವಾ ಪುರಾತನದ ಅತ್ಯಂತ ನವನವೀನ ಕಲ್ಪನೆ! ಮುಂಜಾನೆ ಇನ್ನೂ ನಸುನಸುಕು ಇರುವಾಗ ಬೆಟ್ಟವು ನೀಲ ಶರೀರಿಯಾಗಿ ವರಾಹಮೂರ್ತಿಯಂತೇ ನಿಮಗೆ (ಅಂದರೆ ಪುತಿನ ಅವರಿಗೆ!) ಕಂಡಿರಬೇಕು.

pu-ti-naಆ ಬೆಟ್ಟದ ಶಿಖರದ ಮೇಲೆ ಸೂರ್ಯಬಿಂಬ ಕಾಣುತ್ತಿದೆ. ಆ ಸೂರ್ಯಬಿಂಬ ವರಾಹಮೂರ್ತಿಯು, ತನ್ನ ಕೋರೆಗಳ ಮೇಲೆ ಹೊತ್ತು ತಂದಿರುವ ಭೂಮಂಡಲದಂತೆ ಕಾಣುತ್ತಾ ಇದೆ! ಈ ಸಾಲುಗಳನ್ನು ವಿವರಿಸುತ್ತಾ, ಇಂಥ ನೋಟ ನಿನ್ನ ಕಣ್ಣಿಗೆ ದಕ್ಕಬೇಕಾದರೆ ಮೇಲುಕೋಟೆಯ ಯೋಗಾನರಸಿಂಹನ ದೇವಾಲಯ ಇರುವ ಬೆಟ್ಟದ ಹಿಂದೆ ಆಗುವ ಸೂರ್ಯೋದಯ ದೃಶ್ಯವನ್ನು ನೀನು ನೋಡಬೇಕು!-ಎಂದರು ಪುತಿನ, ಒಂದು ಸುಂದರ ಪ್ರಾತಃಕಾಲ.

ಈ ಚಿತ್ರದಲ್ಲಿ ನೀವು ಮೊದಲ ಬಾರಿಗೆ ಸೂರ್ಯನನ್ನು ಭೂಮಿ ಎಂದು ಕಲ್ಪಿಸಿದ್ದೀರಿ. ಉದಯ ಸೂರ್ಯ ಕೆಂಪಾಗಿ ಇದೆ. ಭೂಮಿ ಹಸಿರಾಗಿರಬೇಕಾಗಿತ್ತಲ್ಲವೆ? ಎಂದೆ ನಾನು ಕವಿಯನ್ನು ಸಣ್ಣಗೆ ರೇಗಿಸುವಂತೆ. ಪುತಿನ ನಕ್ಕರು. ಅಲ್ಲವಯ್ಯಾ… ವರಾಹಮೂರ್ತಿಯಾದ ವಿಷ್ಣು ತನ್ನ (ಭೂದಾರಂ ಎಂದರೆ ಭೂಮಿಯ ಪತಿ ಎಂದೇ ಅರ್ಥ!) ಪತ್ನಿಯಾದ ಭೂದೇವಿಯನ್ನು ಹೀಗೆ ರಾಜಾರೋಷಾಗಿ ತಲೆಯ ಮೇಲೆ ಹೊತ್ತು ಮೆರೆಸಿದರೆ ಯಾವ ಹೆಂಡತಿ ನಾಚಿ ಕೆಂಪಾಗುವುದಿಲ್ಲ ಹೇಳು!? ನಾನು ಕವಿಯ ಉತ್ತರದಿಂದ ಅವಾಕ್ಕಾಗದೆ ಗತ್ಯಂತರವೇ ಇರಲಿಲ್ಲ.

ಸರ್! ಚಿತ್ರ ತುಂಬ ಸೊಗಸಾಗಿದೆ… ಆದರೆ ಆ ಚಿತ್ರವನ್ನು ಕಟ್ಟಿಕೊಡುವ ಭಾಷೆ ಸಂಸ್ಕೃತಮಯವಾಗಿರುವುದರಿಂದ ಕಾವ್ಯಾಸಕ್ತರಿಗೆ ಸುಲಭವಾಗಿ ದಕ್ಕಲಾರದೇನೋ…! ಎಂದು ಸುಲಭವಾಗಿ ಪುತಿನ ಬಗ್ಗೆ ಅನೇಕರು ಮಾಡುವ ಒಂದು ಆಕ್ಷೇಪಣೆ ಎತ್ತಿದ್ದಾಯ್ತು.

ಪುತಿನ ಒಂದು ಕ್ಷಣ ಅರೆಗಣ್ಣಲ್ಲಿ ಧ್ಯಾನಿಸಿ ಮೆಲು ದನಿಯಲ್ಲಿ ಹೇಳಿದರು. ನಾನು ಅನೇಕ ಸಂಸ್ಕೃತ ಪದಗಳನ್ನು ಕನ್ನಡದೊಂದಿಗೆ ಸಮಾಸಮ ಬಳಸಿ “ಕನ್ನಡ ಕವಿತೆ” ಬರೆದಿದ್ದೇನೆ ಅಲ್ಲವೇ? ಭಾಷೆ ಎನ್ನುವುದು ಯಾವತ್ತೂ ಸೋಸಿಕೊಂಡು ಇರುವುದಿಲ್ಲವಯ್ಯಾ…. ಪ್ರತಿಯೊಂದು ಭಾಷೆಯೂ ಬೇರೆ ಬೇರೆ ಭಾಷಾ ಸಂಗತಿಗಳನ್ನು ತನ್ನ ಕೊರಳಲ್ಲಿ ಇಟ್ಟುಕೊಂಡು ಪೋಷಿಸುತ್ತಾ ಇರುತ್ತದೆ. ಶುದ್ಧಾಂಗ ಕನ್ನಡದಲ್ಲಿ ಬರೆಯುತ್ತೇನೆ ಎಂದು ಹೊರಟವ ಆಂಡಯ್ಯ ಮಾತ್ರ. ಬೇರೆ ಬೇರೆ ಭಾಷೆಗಳನ್ನು ನಮ್ಮ ಕನ್ನಡ ಸರಸ್ವತಿ ಒಳಗೊಳ್ಳದೆ ತಾನು ಸಂಪದ್ಭರಿತವಾಗಳು.

ಪಂಪ, ಕುಮಾರವ್ಯಾಸ, ರತ್ನಾಕರವರ್ಣಿ, ಬೇಂದ್ರೆ ಕನ್ನಡದೊಂದಿಗೆ ಸಂಸ್ಕೃತ, ಮರಾಠಿ, ತುಳು ಮೊದಲಾದ ಭಾಷೆಗಳನ್ನು ಹದವಾಗಿ ಹೆಣೆದು ತಮ್ಮ ತಮ್ಮ ಸಂಸ್ಕಾರಕ್ಕೆ ತಕ್ಕ ಕಾವ್ಯಭಾಷೆಯನ್ನು ರೂಪಿಸಿಕೊಂಡಿದ್ದಾರೆ. ರಾಜರತ್ನಂ, ಗೋಕಾಕ, ಅಡಿಗ ಮೊದಲಾದ ಕವಿಗಳು ಇಂಗ್ಲಿಷ್ ಭಾಷೆಯನ್ನೂ ಸಹಾ ಯಾವುದೇ ಹೇವವಿಲ್ಲದೆ ರೂಢಿಸಲಿಲ್ಲವೇ? “ನಪ್ರಮದಿತವ್ಯ ಬೋರ್ಡಿನ ಕೆಳಗೆ”- ಎಂಬ ಪದಗುಚ್ಚವೊಂದು ಅಡಿಗರ ಕಾವ್ಯದಲ್ಲಿ ಬರುತ್ತದೆ. ಇದರಲ್ಲಿ ಸಂಸ್ಕೃತ, ಇಂಗ್ಲಿಷ್, ಮತ್ತು ಅಚ್ಚಗನ್ನಡ ಹೇಗೆ ಸಹಪಂಕ್ತಿಯಲ್ಲಿ ಸಮಾನಸ್ಕಂದರಾಗಿ ನಿಂತಿವೆ ನೋಡು! ಸಂಸ್ಕೃತ ಇದೆ ಅಂತ ನಾವು ಪಂಪ, ರನ್ನರನ್ನು ದೂರವಿಟ್ಟರೆ ಹೇಗೆ? ನನ್ನ ಭಾಷೆಯೊಂದಿದೆ. ನನ್ನ ಅಗತ್ಯಕ್ಕೆ ನಾನು ರೂಪಿಸಿಕೊಂಡದ್ದು. ನನ್ನ ಮಾತು ನಿನಗೆ ಅರ್ಥವಾಗಬೇಕೋ, ನನ್ನ ಭಾಷೆಯನ್ನು ನೀನು ಕಲಿಯಬೇಕು.

ನವೋದಯಂ ಪದ್ಯದ ಎರಡನೇ ನುಡಿಯಲ್ಲಿ ಮೊದಲ ಸ್ಟಾಂಜಾದಲ್ಲಿ ಭೂಮಿಯಾಗಿದ್ದ ಸೂರ್ಯ ಸೂರ್ಯನಾಗಿಯೇ ಸ್ವಧರ್ಮದಲ್ಲಿ ಕಾಣಿಸುತ್ತಾನೆ. ಇಲ್ಲಿ ಸೂರ್ಯ ಸೂರ್ಯನೇ ಹೌದು. ಆದರೆ ಅವನು ಕೇವಲ ಸೂರ್ಯನಲ್ಲ! ತನ್ನ ಕನ್ನೆಯ ನಿದ್ರೆಯ ಕೆಡಿಸಲು, ಅವಳಿಗೆ ಮೆಲ್ಲಗೆ ಮುತ್ತಿಡುವ ಪ್ರಣಯ ವೀರ! ನಿದ್ರೆಯಲ್ಲಿದ್ದ ಲೋಕ ಈಗ ಚೇತನಮಯವಾಗುತ್ತದೆ! ಸೂರ್ಯನ ಕಿರಣದ (ಕಿರಣಕ್ಕೆ ಕರ ಎಂಬ ಪರ್ಯಾಯ ಪದವೂ ಉಂಟು!) ಸ್ಪರ್ಶಕ್ಕೆ ಲೋಕ ಚಿನ್ಮುಖವಾಗುತ್ತದೆ! ನಾನು ಮಧ್ಯೆ ಬಾಯಿ ಹಾಕಿದೆ. ಸರ್! ಈ ಐಡಿಯಾ ಅಕ್ಕನ ವಚನವೊಂದರಲ್ಲಿ ಬಂದಿದೆ! ಲೋಕದ ಚೇಷ್ಟೆಗೆ ರವಿ ಬೀಜವಾದಂತೆ!-ಅಂತ. ಪುತಿನ ಪ್ರಸನ್ನವಾಗಿ ನಕ್ಕರು. “ಭಾಷೆಗೂ ಕಾಡುವ ನೆನಪುಗಳಿರುತ್ತವಪ್ಪಾ!”

melukote

ಪದ್ಯದ ಮೂರನೇ ಸ್ಟಾಂಜ ಇನ್ನೂ ಅದ್ಭುತವಾಗಿದೆ. ಪ್ರಕೃತಿಯ ಅನುರೇಣುತೃಣಕಾಷ್ಠಗಳೆಲ್ಲಾ ಚೇತನಮಯವಾಗುವ ಸೋಜಿಗವನ್ನು ಆ ಸಾಲುಗಳು ವರ್ಣಿಸುತ್ತಿವೆ ಎಂದೆ ನಾನು. ಅಲ್ಲವೇ ಮತ್ತೆ? ಎಂದು ಪುತಿನ ಬೆನ್ನು ತಟ್ಟಿದರು. ಏನನ್ನೋ ನೋಡುವುದಕ್ಕಾಗಿ ತಾವರೆ ಹೂ, ದೃಷ್ಟಿ ತೆರೆದಂತೆ ಅರಳಿದೆ.  ಒಂದು ನವೀನ ಸೃಷ್ಟಿಯ ಕನಸು ಲೋಕವನ್ನೇ ವ್ಯಾಪಿಸಿಬಿಡುತ್ತದೆ.  ನನ್ನ ಮಾತು ಕೇಳಿ ನಿನ್ನ ಗ್ರಹಿಕೆ ಸರಿಯಾಗಿದೆ! ಎನ್ನುತ್ತಾ ಪುತಿನ ಪ್ರಸನ್ನವದನರಾದರು.

ಆದರೆ ಇಡೀ ಕವಿತೆಗೆ ತಿರುವು ಬರುವುದು ಕೊನೆಯ ಸ್ಟಾಂಜಾದಲ್ಲಿ. ಈ ನವೋನವವಾದ ಕೆಂಬಣ್ಣದ ಚೆಂಬೆಳಕು ಕವಿಗೆ ಇದ್ದಕ್ಕಿದ್ದಂತೆ ದ್ವಾಪರಯುಗದ ಬೃಂದಾವನದ ಮುಂಜಾವನ್ನು ನೆನಪಿಸಿಬಿಡುತ್ತದೆ.  ಅತ್ಯಂತ ಪ್ರಾಚೀನ ಹೀಗೆ ಅತ್ಯಂತ ನವೀನವನ್ನು ತನ್ನ ತೆಕ್ಕೆಯಲ್ಲಿ ಅಪ್ಪಿಕೊಳ್ಳುತ್ತದೆ!  ಸಾತತ್ಯವನ್ನು ಚಿಂತಿಸುವ ಇಂಥ ಸಾಲುಗಳು ಅದೆಷ್ಟು ಬಂದಿವೆಯೋ ನಿಮ್ಮ ಕವಿತೆಯಲ್ಲಿ ಎಂದು ನಾನು ಬೆರಗಿನ ಧ್ವನಿಯಲ್ಲಿ ಹೇಳಿದಾಗ ನಿನಗೆ ಹಾಗನ್ನಿಸುತ್ತದಾ? ಎಂದು ಪುತಿನ ಮುಗ್ಧವಾಗಿ ಕೇಳಿದ್ದು ನೆನೆದಾಗ ನನಗೆ ಈಗಲೂ ಸೋಜಿಗವಾಗುತ್ತದೆ!

ಕವಿತೆಯ ಪೂರ್ಣಪಾಠ

ನವೋದಯಂ


ದಾನವಹೃತ ಮೇದಿನಿಯಂ
ದಂಷ್ಟ್ರಾಗ್ರದೊಳಿರಿಸಿ,
ಭೂದಾರಂ ಪಾತಾಳವ-
ನುಳಿದೆದ್ದನೊ ಎನಿಸಿ,
ದೂರದಿಗಂತದೊಳೊಪ್ಪಿದೆ
ರವಿಮಂಡಿತ ಶೃಂಗಂ
ನೀಲಾಚಮುದ್ದೀಪಿತ
ಪೂರ್ವೋದಧಿ ಸಂಗಂ||


ಕನ್ನೆಯ ನಿದ್ರೆಯು ಸಡಿಲಲು
ಮುತ್ತಿಟ್ಟನೊ ಧೀರಂ!
ಹೊಲ್ಲಳ ಶಾಪಂ ತೊಲಗಿತೆ
ಬಹುಗಾಢ ಗಭೀರಂ!
ಚಿನ್ಮುಖಮಾಯಿತೊ ಲೋಕಂ
ಉಕ್ಕುಕ್ಕಿತೊ ಹರ್ಷಂ!
ಸೋಜಿಗಮೇನೆಸೆಗಿಹುದೊ
ಇನಕರ ಸಂಸ್ಪರ್ಶಂ!


ಮಿಸುಮಿಸುಗಿದೆ ಪಸುರ್ಮುಡಿಯೊಳು
ಮಂಜಿನ ಹರಳು ಹನಿ;
ಪಿಸುಮಾತೊಳು ದೆಸೆ ದೆಸೆಯೊಳು
ಹಬ್ಬಿದೆ ಎಲೆಯ ದನಿ;
ಚಿಲಿಪಿಲಿ ಹಾಡಿಗೆ ಗುಬ್ಬಿಯ
ಥಕ ಥೋಂ ಧಿಕ್ಕಿಟ್ಟಿ;
ಏನೀಕ್ಷಿಸಲಿಂತರಳಿದೆ
ತಾವರೆ ಹೂ ದಿಟ್ಟಿ!


ದಿನದಿನದಂತಲ್ಲೀದಿನ-
ನವಸುಂದರಮೆಲ್ಲಂ;
ಹೊಸ ಸೃಷ್ಟಿಯ ಕನಸೊಂದನು
ಬಗೆಗೊಂಡನೊ ನಲ್ಲಂ-
ಈ ಖಗವೀ ಮೃಗವೀ ನಗ-
ವೀ ವನ ಕಂದರವಂ,
ಮಂಜುಳನಾದಿನಿ ಧುನಿಯಂ
ಸ್ವರ್ಣಾರುಣ ನಭವಂ.


ಪಗಲಂ ಈ ಚೆಂಬೆಳಕೊಲು
ಆವುದೊ ಅನುರಾಗಂ,
ಎಲರಂ ಈ ಸೌರಭದೊಲು-
ಆವುದೊ ಅನುಭೋಗಂ,
ಬಗೆ ಬೆಳಗಿದೆ, ಮನಕಾಗಿದೆ-
ಅಂದಿನ ದಿನದಂತೆ,
ಮೋಹನನೆನ್ನಂ ಮೋಹಿಸಿ
ರಾಸಕೆ ಕರೆದಂತೆ.

4 Comments

 1. Sarojini Padasalagi
  October 27, 2016
 2. S.p.vijaya Lakshmi
  October 27, 2016
 3. Anonymous
  October 27, 2016
  • H S Venkatesha Murthy
   October 28, 2016

Add Comment

Leave a Reply