Quantcast

ಕತೆ ಹೇಳಲು ಆರಂಭಿಸಿದಳು..

ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದವರು ಆಯೋಜಿಸಿದ್ದ ಸ್ವರ್ಣಸೇತು ೨೦೧೫ರ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಕಥೆ 

ಹೂಗುಚ್ಛ

prasanna santekadur

ಪ್ರಸನ್ನ ಸಂತೇಕಡೂರು

ನಾನು ಶಿವಮೊಗ್ಗದ ಮಹಾತ್ಮಗಾಂಧಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದಾಗ, ಕನ್ನಡ ಪಠ್ಯ ಪುಸ್ತಕದಲ್ಲಿ ಜಾನ್ ಎಫ್. ಕೆನಡಿಯ ಬಗ್ಗೆ ಒಂದು ಅಧ್ಯಾಯವಿತ್ತು. ಆ ಅಧ್ಯಾಯದಲ್ಲಿ ‘ಅಮೇರಿಕಾದ ಡಲ್ಲಾಸ್ ನಗರದಲ್ಲಿ ೧೯೬೩ರ ನವೆಂಬರ್ ೨೨ನೇ ತಾರೀಕಿನಂದು ಎರಡು ಗುಂಡಿನ ಸದ್ದು ಕೇಳಿಸಿತು. ಆ ಸದ್ದು ಇಡಿ ಜಗತ್ತಿಗೆ ಶೋಕ ಸುದ್ದಿಯಾಯಿತು ಎಂದು ಬರೆದಿತ್ತು.

ಅಂದಿನಿಂದ ಡಲ್ಲಾಸ್ ನಗರದ ಮೇಲೆ ಯಾವುದೋ ಅವ್ಯಕ್ತ ಕುತೂಹಲ ಬೆಳೆದಿತ್ತು.  ನಾನು ಅಮೇರಿಕಾ ಸಂಯುಕ್ತ ಸಂಸ್ಥಾನಗಳಿಗೆ ಬಂದ ಮೇಲೆ ಕೆಲಸದ ನಿಮ್ಮಿತ್ಯ ಡಲ್ಲಾಸ್ ನಗರಕ್ಕೆ ಬರಬೇಕಾಯಿತು. ಮೆಕ್ಸಿಕೋ, ಬರ್ಮಾ, ಭೂತಾನ್, ನೇಪಾಳ, ಭಾರತ, ಚೈನಾ, ಬಾಂಗ್ಲಾ ದೇಶಗಳಲ್ಲದೇ ಪ್ರಪಂಚದ ಬೇರೆ ಬೇರೆ ಭಾಗಗಳಿಂದ ವಲಸೆ ಬಂದಿರುವ ಕಾರ್ಮಿಕರಿಂದ ತುಂಬಿರುವ ನಗರ ಡಲ್ಲಾಸ್.  ಡಲ್ಲಾಸ್ ನಗರಕ್ಕೆ ಬಂದ ಮೇಲೆ ಇಲ್ಲಿ ಪರಿಚಯವಾದ ಒಬ್ಬ ಆತ್ಮಿಯ ಗೆಳೆಯನ ಬಗ್ಗೆ ಹೇಳಲೇಬೇಕು. ಅವನ ಹೆಸರು ಸ್ಯಾಂಟಿಯಾಗೊ.

friendsಸ್ಯಾಂಟಿಯಾಗೊ ಮತ್ತು ನನ್ನ ಪರಿಚಯವಾಗಿದ್ದು ಒಂದು ಆಕಸ್ಮಿಕ. ಸ್ಯಾಂಟಿಯಾಗೊ ಎಂದರೆ ನಿಮಗೆ ಮೊದಲು ಜ್ಞಾಪಕಕ್ಕೆ ಬರುವುದು ಚಿಲಿ ದೇಶದ ರಾಜಧಾನಿ ಅಥವಾ ಅಮೇರಿಕಾ ಸಂಯುಕ್ತ ಸಂಸ್ಥಾನಗಳ ಕ್ಯಾಲಿಫೋರ್ನಿಯಾದ ಸ್ಯಾಂಡಿಯಾಗೊ ನಗರ. ನಾನು ಹೇಳುತ್ತಿರುವುದು ಸ್ಯಾಂಡಿಯಾಗೊ ನಗರದ ಬಗ್ಗೆ ಖಂಡಿತ ಅಲ್ಲ. ಈ  ಸ್ಯಾಂಟಿಯಾಗೊ ಐವತ್ತು ವರ್ಷದ ವ್ಯಕ್ತಿ. ಮೆಕ್ಸಿಕೋದ ತಾಯಿ ಮತ್ತು ಅಮೇರಿಕದ ಬಿಳಿ ತಂದೆಯ ಮಗನಾಗಿ ಹುಟ್ಟಿದವನು ಸ್ಯಾಂಟಿಯಾಗೊ. ಅರ್ಧ ತಾಯಿಯನ್ನು ಮತ್ತರ್ಧ ತಂದೆಯನ್ನು ಹೋಲುತ್ತಾನೆ.

ನಾವಿಬ್ಬರು ಡಲ್ಲಾಸ್ ನಗರದ ವಲಸಿಗರೇ ತುಂಬಿರುವ ಒಂದು ವಸತಿ ಸಂಕೀರ್ಣಗಳಲ್ಲಿ ವಾಸಿಸುತ್ತಿದ್ದೆವು. ಪ್ರತಿದಿನ ಬಸ್ ಗಾಗಿ ಕಾಯುತಿದ್ದ ನನಗೆ ಕಾರ್ಲೋಸ್ ಎಂಬ ಇನ್ನೊಬ್ಬ ಮೆಕ್ಸಿಕೋ ಮೂಲದ ವ್ಯಕ್ತಿಯ ಪರಿಚಯವಾಗಿತ್ತು. ಕಾರ್ಲೋಸ್ ಕೂಡ  ಐವತ್ತು ವರ್ಷದವನಿರಬೇಕು.  ಕಾರ್ಲೋಸ್ಗೂ ಸ್ಯಾಂಟಿಯಾಗೊಗು ಅದೇ ವಸತಿ ಸಂಕೀರ್ಣಗಳಲ್ಲಿ ಪರಿಚಯವಾಗಿತ್ತು. ಇಬ್ಬರು ಒಳ್ಳೆಯ ಮಿತ್ರರಾಗಿದ್ದರು. ಸ್ಯಾಂಟಿಯಾಗೊನನ್ನು ನನಗೆ ಪರಿಚಯ ಮಾಡಿಕೊಟ್ಟಿದ್ದು ಕೂಡ ಕಾರ್ಲೋಸ್.

ಕಾರ್ಲೋಸ್ ನಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಹತ್ತಿರ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಸ್ಯಾಂಟಿಯಾಗೊ ಡಲ್ಲಾಸ್ ನಗರದ ಹೃದಯ ಭಾಗದಲ್ಲಿ ಒಂದು ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ನಾವು ಮೂರು ಜನರು ಪಾರ್ಕ್ ಲೇನ್ ರೈಲ್ವೆ ಸ್ಟೇಷನ್ನಲ್ಲಿ ಒಟ್ಟಿಗೆ ಸೇರುತ್ತಿದ್ದೆವು.  ಅಲ್ಲಿಂದ ಡಲ್ಲಾಸ್ ಕೆಳಗಿನ ಪೇಟೆಗೆ ಹೋಗಿ  ನಾನು ಮತ್ತು ಕಾರ್ಲೋಸ್ ಇನ್ನೊಂದು  ರೈಲಿನ ಮೂಲಕ ನಮ್ಮ ಕೆಲಸಗಳಿಗೆ ಹೋಗುತ್ತಿದ್ದೆವು.  ಸಂಜೆ ಮತ್ತೆ ಕೆಳಗಿನ ಪೇಟೆಯಲ್ಲಿ ಬಂದು ಮೂವರು ಸೇರುತ್ತಿದ್ದೆವು.  ಅಲ್ಲಿಂದ ಪಾರ್ಕ್ ಲೇನ್ ಸ್ಟೇಷನ್ ಗೆ  ಬಂದು ನಮ್ಮ ವಸತಿ ಸಂಕೀರ್ಣಗಳಿಗೆ ಬರುತ್ತಿದ್ದೆವು. ಇದು ನಮ್ಮ ಪ್ರತಿದಿನದ ದಿನಚರಿಯಾಗಿತ್ತು.

ಹೆಂಡತಿಯಿಂದ ಬಹಳ ದೂರ ವಾಸಿಸುತ್ತಿದ್ದ ನಾನು ಸಂಜೆಯಾದೊಡನೆ ನನ್ನದೆ ಪ್ರಪಂಚದಲ್ಲಿ ಮುಳುಗುತ್ತಿದ್ದೆ. ಹೆಂಡತಿಗೆ ವಿಚ್ಛೇದನ ಕೊಟ್ಟು ಬರಿ ಕ್ರೀಡೆ ಮತ್ತು ಸಿನಿಮಾ ನೋಡುವುದೇ ಜೀವನದ ಪರಮ ಗುರಿಯೆಂದುಕೊಂಡು ಬದುಕುತ್ತಿದ್ದ ಕಾರ್ಲೋಸ್. ಆದರೆ ಸ್ಯಾಂಟಿಯಾಗೊ ಮಾತ್ರ ತನ್ನ ಹೆಂಡತಿ ಮತ್ತು ಮಕ್ಕಳ ವಿಚಾರ ನಮಗೆ ಗೌಪ್ಯವಾಗಿಟ್ಟಿದ್ದ. ನಾನು ಯಾವಾಗ ಕೇಳಿದರು ಆ ವಿಷಯವನ್ನ ಮರೆಸುತ್ತಿದ್ದ. ಆದರೆ ಪ್ರತಿ ಭಾನುವಾರ ಹೆಂಡತಿಯನ್ನ ನೋಡುವುದಕ್ಕೆ ಹೋಗುತ್ತಿದ್ದ.

ಹೋಗುವುದಕ್ಕು ಮೊದಲು ಪಾರ್ಕ್ ಲೇನ್ ನಲ್ಲಿದ್ದ ಒಂದು ಹೂವಿನ ಅಂಗಡಿಗೆ ಹೋಗಿ ಅಲ್ಲಿಂದ ಸೀತಾಳೆ ಹೂವಿನ ಗುಚ್ಛವನ್ನು ತೆಗೆದು ಕೊಂಡು ಹೋಗುತ್ತಿದ್ದ. ಕೆಲವು ಸಾರಿ ಅವನು ಹೂ ಕೊಳ್ಳುವುದನ್ನ ನಾನು ನೋಡಿದ್ದೆ. ಅಮೇರಿಕಾದಲ್ಲಿ ಹೂವನ್ನ ಪ್ರೀತಿ ಪಾತ್ರರಾದವರಿಗೆ  ಕೊಡುವುದು ರೂಡಿ. ಆಸ್ಪತ್ರೆಯಲ್ಲಿರುವವರನ್ನ, ಮಿತ್ರರ ಕುಟುಂಬವನ್ನ ನೋಡಲು ಹೋದಾಗ ಅಥವಾ ಯಾರಿಗಾದರು ಪ್ರಶಸ್ತಿಯೋ, ಪಾರಿತೋಷಕವೋ  ಬಂದಾಗ  ಮತ್ತು ಶುಭ ಕಾರ್ಯಗಳಿಗೆಲ್ಲಾ ಹೂಗುಚ್ಛವನ್ನು ಕೊಟ್ಟು ಅಭಿನಂದಿಸುವುದು ಸರ್ವೇ ಸಾಮಾನ್ಯ. ಆದ್ದರಿಂದ ಅದರ ಬಗ್ಗೆ ನಾನು ಹೆಚ್ಚಾಗಿ ಯೋಚಿಸಿರಲಿಲ್ಲ.

ಒಂದು ದಿನ ದೂರದ ಊರಿನಲ್ಲಿದ್ದ ಹೆಂಡತಿಯನ್ನ ನೋಡಲು ಹೊರಡುತ್ತಿದ್ದೆ. ಸ್ಯಾಂಟಿಯಾಗೊ ತನ್ನ ಕಾರಿನಲ್ಲಿಯೇ ಲವ್ ಫೀಲ್ಡ್ ವಿಮಾನ ನಿಲ್ದಾಣಕ್ಕೆ ಬಂದು ನನ್ನನ್ನ  ಬಿಟ್ಟು ಹೋಗಿದ್ದ. ಕಾರಿನಲ್ಲಿ ನನ್ನ ಮದುವೆಯ ಬಗ್ಗೆ, ನಾನು ಮತ್ತು ನನ್ನ ಹೆಂಡತಿ ಹೇಗೆ ಮೊದಲ ಸಲ ಸಂಧಿಸಿದ್ದು, ಇನ್ನೂ ಬಹಳ ವಿಷಯದ ಬಗ್ಗೆ ತನ್ನ ಕುತೂಹಲದ ಪ್ರಶ್ನೆಗಳನ್ನ ಕೇಳಿದ್ದ. ಪ್ರೀತಿ ಮತ್ತು ಜೀವನದ ಬಗ್ಗೆ ಬಹಳಷ್ಟು ಸಲಹೆಯನ್ನು ಕೊಟ್ಟಿದ್ದ.  ಹೆಂಡತಿಯ ಜೊತೆ ಹೇಗೆಲ್ಲಾ ಉತ್ತಮವಾಗಿ ನಡೆದುಕೊಳ್ಳಬೇಕೆಂದು ತಿಳಿ ಹೇಳಿದ್ದ.

ನನಗಿಂತ ಸುಮಾರು ಹದಿನೈದು ವರ್ಷ ದೊಡ್ಡವನಾಗಿದ್ದರಿಂದ ನಾನು ಸಲಹೆಯನ್ನ ಪ್ರೀತಿಯಿಂದಲೇ ಸ್ವೀಕರಿಸಿದ್ದೆ. ಇದೆ ಸರಿಯಾದ ಸಮಯವೆಂದುಕೊಂಡು ‘ನೀನು ಯಾವಾಗ ನಿನ್ನ ಪತ್ನಿ ಮತ್ತು ಮಕ್ಕಳನ್ನ ನನಗೆ ಪರಿಚಯಿಸುತ್ತಿಯಾ ?’ ಅಂತ ಪ್ರಶ್ನೆ ಕೇಳಿದ್ದೆ. ‘ನೀನು ಹಿಂತಿರುಗಿ ಬಂದಾಗ ಖಂಡಿತ ಪರಿಚಯಿಸುತ್ತೇನೆ’ ಎಂದು ಹೇಳಿದ್ದ.  ಆ ಸಮಯಕ್ಕಾಗಿ ನಾನು ಕಾಯುತ್ತಿದ್ದೆ.

ಒಂದು ವಾರದ ನಂತರ ನಾನು ಮತ್ತೇ ಡಲ್ಲಾಸ್ ಗೆ ಬಂದಾಗ ಒತ್ತಡದ ಯಾಂತ್ರಿಕ ಜೀವನದಲ್ಲಿ ಮುಳುಗಿ ಹೋದೆ. ಅದೇ, ಎಂದು ಮುಗಿಯದ ಏಕತಾನತೆಯ ಕೆಲಸಗಳು. ಬದುಕಿನಲ್ಲಿ ಏನು ರುಚಿಯೇ ಇಲ್ಲವೇನೊ ಅಂತ ಅನ್ನಿಸತೊಡಗಿತು. ಒಂದು ದಿನ ಸಂಜೆ  ವಸತಿ ಸಂಕೀರ್ಣಗಳ ಕಾಂಪೌಂಡ್ನಲ್ಲಿ ಓಡಾಡುತ್ತಿದ್ದೆ. ಸ್ಯಾಂಟಿಯಾಗೊ ತನ್ನ ಎರಡು ಚಿಹುಹಾ ಜಾತಿಯ ಚಿಕ್ಕ ನಾಯಿಗಳನ್ನ ಹಿಡಿದುಕೊಂಡು ಓಡಾಡುತ್ತಿದ. ಅವನ ಪರಿಸ್ಥಿತಿಯನ್ನ ನೋಡಿ ನಗುತ್ತಿದ್ದೆ.

Flower7ಅವನು ಮತ್ತು ಅವನ ಹೆಂಡತಿ ಇಬ್ಬರು ಒಂದೇ ಊರಿನಲಿದ್ದರು ಬೇರೆ ಬೇರೆ ಮನೆಯಲ್ಲಿರುವುದು ನನಗೆ ಬಹಳ ವಿಚಿತ್ರವೆನಿಸುತ್ತಿತ್ತು. ಆದರು ಡಲ್ಲಾಸ್ ನಲ್ಲಿ ಆ ರೀತಿ ಬಹಳ ಜನ ಇದ್ದರು. ಅವನು ಹೆಂಡತಿಗಿಂತ ಆ ಎರಡು ನಾಯಿಗಳನ್ನ ತುಂಬಾ ಹಚ್ಚಿಕೊಂಡಿದ್ದ ರೀತಿ ಕಾಣುತ್ತಿತ್ತು. ಆ ನಾಯಿಗಳು ಅವನನ್ನ ಅಷ್ಟೇ ಪ್ರೀತಿಸುತ್ತಿದ್ದವು. ಅಮೇರಿಕಾದಲ್ಲಿ ಮನುಷ್ಯ ಮನುಷ್ಯರ ನಡುವೆ ಎಷ್ಟೇ ಕಂದರವಿದ್ದರು ನಾಯಿ ಮತ್ತು ಮನುಷ್ಯರ ನಡುವೆ ಅದೊಂದು ಅವರ್ಣನೀಯ ಸಂಬಂಧವಿದೆ. ಹತ್ತಿರ ಬಂದವನೇ ‘ನಾಳೆ ಶನಿವಾರ ಬಿಳಿಕಲ್ಲಿನಕೆರೆಗೆ ಹೋಗೋಣ ಅಂದ. ನಾನು ಆ ಕೆರೆಯನ್ನ ನೋಡಬೇಕು ಅಂತ ತುಂಬಾ ದಿನಗಳಿಂದ ಕಾಯುತ್ತಿದ್ದೆ. ಬಹಳ ಸಂತೋಷದಿಂದಲೇ ಕೆರೆಗೆ ಹೋಗಲು ಒಪ್ಪಿಕೊಂಡೆ. ಸ್ವಲ್ಪ ಹೊತ್ತು ಮಾತನಾಡಿದ ಮೇಲೆ ಕತ್ತಲಾದ್ದರಿಂದ ನಮ್ಮ ನಮ್ಮ ವಸತಿ ಸಂಕೀರ್ಣಗಳಿಗೆ ಹೋದೆವು.

ಮರುದಿನ ಬೆಳಗ್ಗೆ ಬೇಗನೆ ಎದ್ದು ಆ ದಿನದ ಕೆಲಸಗಳನ್ನೆಲ್ಲಾ ಮುಗಿಸಿ ಮೂರು ಜನರು ಬಿಳಿಕಲ್ಲಿನಕೆರೆಗೆ  ಹೊರಟೆವು. ಅದು ಒಂದು ದೊಡ್ಡ ಕೆರೆಯಾಗಿತ್ತು. ಉತ್ತರದಿಂದ ಒಂದು ಚಿಕ್ಕ ತೊರೆ ಬಂದು ಆ  ಕೆರೆಯನ್ನ ಸೇರುತ್ತಿತ್ತು. ಆ  ಕೆರೆಯ ಸುತ್ತಾ ಸುಂದರವಾದ ಮರಗಳು, ಉತ್ತಮ ವರ್ತುಲ ರಸ್ತೆ ಇತ್ತು. ಕೆರೆಯ ಈಶಾನ್ಯಕ್ಕೆ ಒಂದು ಚಿಕ್ಕ ಗುಡ್ಡ, ಅದರ ಮೇಲೊಂದು ಬಂಗಲೆಯಿತ್ತು. ಪೂರ್ವಕ್ಕೆ ಡಲ್ಲಾಸ್ ಸಸ್ಯವನವಿತ್ತು. ಸಂಜೆಯ ಹೊತ್ತು ಸೂರ್ಯಾಸ್ತಮಾನವನ್ನ ನೋಡಲು ಬಹಳ ಜನ  ಅಲ್ಲಿಗೆ ಬರುತ್ತಿದ್ದರು.

ಆ ದಿನವು ಕೂಡ ಹುಡುಗ ಹುಡುಗಿಯರು, ಹಲವಾರು ಕುಟುಂಬಗಳು ಗುಂಪು ಗುಂಪಾಗಿ ವಿಹರಿಸುತ್ತಿದ್ದವು. ಸ್ವಲ್ಪ ಹೊತ್ತು ಸ್ಯಾಂಟಿಯಾಗೋ ತಂದಿದ್ದ ಮೀನಿನ ಗಾಣದಿಂದ ಮೀನುಗಳನ್ನ ಹಿಡಿದು ಮತ್ತೆ ಕೆರೆಗೆ ಬಿಟ್ಟೆವು. ನಂತರ ನಾವು ಮೂವರು ಚಿಕ್ಕ ಗುಡ್ಡದ ಮೇಲೆ ಹೋಗಿ ಸೂರ್ಯ ಮುಳುಗುವುದನ್ನ ಆನಂದಿಸಿದೆವು.  ಪಶ್ಚಿಮಕ್ಕೆ ಸೂರ್ಯಾಸ್ತಮಾನ, ಪೂರ್ವಕ್ಕೆ ಚಂದ್ರೋದಯವನ್ನ ಒಟ್ಟಿಗೆ ನೋಡಬಹುದಾದ ಜಾಗವದು. ಸೂರ್ಯ ಮುಳುಗುವಾಗ ಪಡುವಣವೆಲ್ಲಾ ಕೆಂಪಾಗುವ ದೃಶ್ಯ ಕೆರೆಯ ನೀರನ್ನೆಲ್ಲಾ ಕೆಂಪಾಗಿಸಿತ್ತು.

ಆ  ಸುಂದರ ವಿಹಂಗಮ ನೋಟ ನಮ್ಮ ಮನಸ್ಸೂರೆಗೊಂಡಿತ್ತು. ಇನ್ನೇನು ಕೆರೆಯಿಂದ ನಮ್ಮ ಕಾರಿನ ಹತ್ತಿರ ಬಂದಾಗ  ಕಾರ್ಲೋಸನ ಮಾಜಿ ಪತ್ನಿ ಮತ್ತು ಅವಳ ಹೊಸ ಗಂಡ ಅಲ್ಲಿಯೇ ವಿಹಾರಿಸುತ್ತಿದ್ದರು.  ನಮ್ಮನ್ನ ಕಂಡವಳೇ ನಗುತ್ತಾ ಬಂದು ಕಾರ್ಲೋಸನಿಗೆ ಅವಳ ಹೊಸ ಗಂಡನನ್ನ ಪರಿಚಯ ಮಾಡಿಕೊಟ್ಟಳು. ನಂತರ ಕೆರೆಯ ಆ ತೀರದ ಕಡೆಗೆ ಗಂಡನ ಜೊತೆ ಹೊರಟಳು. ಸ್ವಲ್ಪ ಮುಂದೆ ಬಂದಾಗ ಕಾರ್ಲೋಸನ ಇಪ್ಪತ್ತೈದು ವರ್ಷದ ಮೊದಲನೇ ಹೆಂಡತಿಯ ಮಗ ತನ್ನ ಮೂರನೇ ಗೆಳತಿಯ ಜೊತೆ ಅಲ್ಲಿಯೇ ಓಡಾಡುತ್ತಿದ್ದ.  ನಮ್ಮನ್ನ ಕಂಡವನೇ ನಗುತ್ತಾ ಮುಂದೆ ನಡೆದ. ಅಮೇರಿಕಾಗೆ ಬಂದ  ಆರಂಭದಲ್ಲಿ ನನಗೆ ಇದೆಲ್ಲಾ ವಿಚಿತ್ರವಾಗಿ ಕಾಣಿಸುತ್ತಿತ್ತು. ಆದರೆ ಆರು ವರ್ಷದ ನಂತರ ಎಲ್ಲವು ಸಾಮಾನ್ಯ ವಿಷಯವಾಗಿದೆ. ಆ ನಂತರ ನಾವು ವಸತಿ ಸಂಕೀರ್ಣಗಳ ಕಡೆ ಹೊರಟೆವು.

ಮರುದಿನ ಕೆಳಗಿನ ಪೇಟೆಯ ಅಂಚೆ ಕಛೇರಿಯಲ್ಲಿ ಸ್ವಲ್ಪ ಕೆಲಸವಿತ್ತು. ಆಸ್ಪತ್ರೆಯ ಕೆಲಸದ ಬಿಡುವಿನಲ್ಲಿ ಮಧ್ಯಾಹ್ನವೇ ಕೆಳಗಿನ ಪೇಟೆಗೆ ಹೋಗಿದ್ದೆ. ಅಲ್ಲಿ ಆಫ್ರಿಕಾದ ಮೂಲದವಳಾದ ಒಬ್ಬ ಕಪ್ಪು ಮಹಿಳೆಯ ಜೊತೆ ಕಾರ್ಲೋಸ್ ಬಹಳ ಸಲುಗೆಯಿಂದ ಮಾತನಾಡುತ್ತಿದ್ದ.  ನನ್ನನ್ನ ಕಂಡವನೇ ಅವಳನ್ನ ಪರಿಚಯ ಮಾಡಿಕೊಟ್ಟ. “ಮುಂದಿನವಾರ ನಮ್ಮಿಬ್ಬರ ಮದುವೆ” ಅಂದ. ನಾನು ಇಬ್ಬರಿಗು ಶುಭಕೋರಿ ಅಲ್ಲಿಂದ ಹೊರಟೆ. ಬಟ್ಟೆ ಬದಲಿಸುವ ಹಾಗೇ ಸಂಗಾತಿಗಳನ್ನ ಬದಲಿಸುವ ಈ ದೇಶದ ಸಂಸ್ಕೃತಿಯ ಬಗ್ಗೆ ಆಶ್ಚರ್ಯ ಪಡಬೇಕೋ ಅಥವಾ ವಿಸ್ಮಯದಿಂದ ನೋಡಬೇಕೋ  ತಿಳಿಯುತ್ತಿರಲಿಲ್ಲ. ನೆನ್ನೆ ಕಂಡ ಅವನ ಎರಡನೆ ಹೆಂಡತಿಯ ಮೇಲೆ ಇಷ್ಟೊಂದು ವೇಗದಲ್ಲಿ ಸೇಡನ್ನ ತೀರಿಸಿಕೊಳ್ಳುತ್ತಾನೆಂದುಕೊಂಡಿರಲಿಲ್ಲ.

ಕಾರ್ಲೋಸ್ ನ ಮದುವೆಯ ದಿನ ಬಂದೇಬಿಟ್ಟಿತು.  ಆ ದಿನ ನಾನು ಸ್ಯಾಂಟಿಯಾಗೊ ಮೊದಲೇ ಹೋಗಿ  ಮದುವೆಯ ಚರ್ಚಿನಲ್ಲಿ ಕಾರ್ಲೋಸ್ನ ಜೊತೆಗಿದ್ದು ಒಂದು ಗುಲಾಬಿ ಹೂವಿನಗುಚ್ಛವನ್ನು ಕೊಟ್ಟು, ಅಭಿನಂದಿಸಿ ಹೊಸ ದಂಪತಿಗಳನ್ನ ಗ್ಯಾಲ್ವಸ್ಟನ್ ಬೀಚಿಗೆ ಕಳಿಸಿಕೊಟ್ಟೆವು. ಆ ಬೀಚು ಒಂದು ಸುಂದರವಾದ ಜಾಗ. ಅದು ಮೆಕ್ಸಿಕೋ ಕೊಲ್ಲಿಯಲ್ಲಿರುವ ಟೆಕ್ಸಾಸ್ ಸಂಸ್ಥಾನಕ್ಕೆ ಸೇರಿರುವ ಒಂದು ದ್ವೀಪದ ಊರು. ಬೇಸಿಗೆಯಲ್ಲಿನ ಜಲಕ್ರೀಡೆಗೆ ಮತ್ತು ಮಧುಚಂದ್ರಕ್ಕೆ ಹೋಗುವವರಿಗೆ ಪ್ರಶಸ್ಥವಾದ ಸ್ಥಳ.

cemetryಈ ದಿನ ಭಾನುವಾರವಾದ್ದರಿಂದ ಏನಾದರೂ ಮಾಡಿ ಸ್ಯಾಂಟಿಯಾಗೊ ಜೀವನ ರಹಸ್ಯವನ್ನ ಭೇದಿಸಬೇಕೆಂದು ನಿರ್ಣಯಿಸಿದೆ. ಬೇಗ ಬೇಗ ಸ್ನಾನ ಮಾಡಿಕೊಂಡು ಸಿದ್ದನಾದೆ. ಅವನಿಗಿಂತ ಮುಂಚೆಯೇ ಅವನ ಕಾರಿನ ಹತ್ತಿರ ನಿಂತಿದ್ದೆ.  ಹಸನ್ಮುಖನಾಗಿ ಹೊರಟು ಬಂದವನೇ ನನ್ನನ್ನ ತಬ್ಬಿಕೊಂಡ. ‘ಕೆಲವು ರಹಸ್ಯಗಳು ತಿಳಿಯದೆಯೇ ಇದ್ದರೆ ಒಳ್ಳೆಯದು’ ಅಂದ.  ಕೊನೆಗೆ ಒಪ್ಪಿಕೊಂಡು ಕಾರಿನಲ್ಲಿ ಕೂರಿಸಿಕೊಂಡ.  ಪಾರ್ಕ್ ಲೇನ್ ನಲ್ಲಿದ್ದ ಹೂವಿನ ಅಂಗಡಿಗೆ ಕರೆದುಕೊಂಡು ಹೋದ. ಆ ಅಂಗಡಿಯ ಮಹಿಳೆಗೆ ಇವನು ಎಷ್ಟೋ ವರ್ಷದ ಪರಿಚಯವಿದ್ದಾಗಿತ್ತು.

ಅವಳು ಗುಲಾಬಿ ಬಣ್ಣದ ಸೀತಾಳೆ ಹೂವಿನ ದಂಡೆಯ ಗುಚ್ಛವನ್ನ ತುಂಬಾ ನೈಪುಣ್ಯದಿಂದ ಪ್ಲಾಸ್ಟಿಕ್ ಚೀಲದಲ್ಲಿ ಮೃದುವಾಗಿ ಇಟ್ಟು ಕೊಟ್ಟಳು. ಅವಳು ಕೊಡುತ್ತಿದ್ದ ರೀತಿಯನ್ನ ನೋಡಿ ದಂಗಾದೆ ! ಕೋಟಿ ರುಪಾಯಿ ಬೆಲೆ ಬಾಳುವ ವಸ್ತುವಿನ ಹಾಗಿತ್ತು ಅವಳು ಹೂಗುಚ್ಛವನ್ನು ಕಟ್ಟುತ್ತಿದ್ದ ರೀತಿ. ಸ್ಯಾಂಟಿಯಾಗೊ ಆ ಹೂವಿಗೆ ಕೊಡುತ್ತಿದ್ದ ಗೌರವ ಅವಳು ಅಷ್ಟೊಂದು ಎಚ್ಚರ ವಹಿಸುವ ಹಾಗೆ ಮಾಡಿತ್ತು. ಹೂಗುಚ್ಛವನ್ನು ತೆಗೆದುಕೊಂಡು ಹೊರಟೆವು. ನನ್ನಲ್ಲಿ ಕುತೂಹಲ ಹೆಚ್ಚುತಲೇ ಇತ್ತು.

ಗ್ರೀನ್ ವಿಲ್ ರಸ್ತೆಯಲ್ಲಿ ಸುಮಾರು ನಾಲ್ಕು ಮೈಲುಗಳ ದೂರ ಸಾಗಿದ್ದೆವು. ಅಷ್ಟರಲ್ಲಿ ಕಾರನ್ನ ಒಂದು ಹುಲ್ಲುಗಾವಲಿನ ತರಹ ಇದ್ದ ಜಾಗದೊಳಕ್ಕೆ ತೆಗೆದುಕೊಂಡು ಹೋದ. ಅಲ್ಲಲ್ಲಿ ತುಂಬಾ ಹೂಗುಚ್ಛಗಳನ್ನ  ಯಾರೋ ಇಟ್ಟು ಹೋಗಿದ್ದರು. ಕೆಲವು ಕಡೆ ಸಾಲುಸಾಲಾಗಿ ಹೂಗುಚ್ಛಗಳಿದ್ದವು. ನನ್ನ ಬಾಯಿಯಿಂದ ಯಾವುದೇ ಮಾತುಗಳು ಬರುತ್ತಿರಲಿಲ್ಲ. ಅದೊಂದು ಚಿರಶಾಂತಿಧಾಮವಾಗಿತ್ತು. ಅಲ್ಲಿ ಯಾವುದೇ ವಿಧವಾದ ಗೋರಿ ಕಲ್ಲುಗಳು ಕಾಣುತ್ತಿರಲಿಲ್ಲ. ಆದರೆ ಮಲಗಿಸಿದ ಆಯತಾಕಾರದ ಅಮೃತ ಶಿಲೆಯ ಮೇಲೆ  ಸತ್ತವರ ಹೆಸರು, ಹುಟ್ಟಿದ ದಿನಾಂಕ ಮತ್ತು ಮರಣ ದಿನವನ್ನ ಬರೆದಿದ್ದರು.  ಸ್ಯಾಂಟಿಯಾಗೊ ಕಾರಿನಿಂದ ಕೆಳಗಿಳಿದು ಸ್ವಲ ಎಡಕ್ಕೆ ಸಾಗಿ ಒಂದು ಸಮಾಧಿಯ ಮುಂದೆ ಬಗ್ಗಿ ಆ ಹೂಗುಚ್ಛವನ್ನ ಇಟ್ಟು ತನ್ನ ಎರಡು ಕೈಗಳನ್ನ ಮಡಚಿ ಕಣ್ಣು ಮುಚ್ಚಿ ಸುಮಾರು ಇಪ್ಪತ್ತು ನಿಮಿಷ ನಿಂತಿದ್ದ.  ನಾನು ಹತ್ತಿರ ಹೋಗಿ ನಿಂತುಕೊಂಡೆ.  ಕೆಳಗಡೆ ಅಮೃತ ಶಿಲೆಯ ಕಲ್ಲಿನ ಮೇಲೆ ಈ ಕೆಳಗಿನ ರೀತಿ ಬರೆದಿತ್ತು.

ಕ್ಲಾರ ಸ್ಯಾಂಟಿಯಾಗೊ

ಜನನ: ನವೆಂಬರ ೨೪-೧೯೬೭

ಮರಣ: ಜೂನ್ ೧೫-೧೯೯೫

ಅವನು ಕಣ್ಣು ತೆರೆದು ನನ್ನ ಕಡೆ ತಿರುಗಿ ‘ನೀನು ಯಾವಾಗಲು ಕೇಳುತ್ತಿದ್ದ ನನ್ನ ಕ್ಲಾರ ಇಲ್ಲಿ ಮಲಗಿದ್ದಾಳೆ ನೋಡು’ ಅಂದ. ಬದುಕಿನ ಕ್ರೂರತೆಯನ್ನ ಕಂಡು ಯಾವುದೇ ಪದಗಳು ಬಾಯಿಂದ ಬರದ ಮೂಗನಾಗಿದ್ದೆ. ನಾನು ಮೌನಕ್ಕೆ ಶರಣಾದೆ. ಅವನ ಕಣ್ಣುಗಳಲ್ಲಿ ನೀರಿದ್ದರು ಮುಖದಲ್ಲಿ ನಗು ತಂದುಕೊಂಡ. ಕಾರಿನ ಕಡೆ ಹೊರಟೆವು. ಅವಳು ಕ್ಷಯ ರೋಗ ಬಂದು ಸತ್ತುಹೋಗಿದ್ದಳು.

ಅಲ್ಲಿಂದ ಪ್ಲೇನೋ ಕಡೆ ಕಾರನ್ನು ಓಡಿಸುತ್ತಿದ್ದ. ಎಲ್ಲಿಗೆ ಎಂದು ಕೇಳುವಷ್ಟು ಕುತೂಹಲ ನನ್ನಲ್ಲಿ ಉಳಿದಿರಲಿಲ್ಲ. ಹತ್ತು ಮೈಲುಗಳಷ್ಟು ದೂರ ಸಾಗಿದ ನಂತರ ಕಾರನ್ನ ಒಂದು ಅರಮನೆಯಂತಹ ಮನೆಯ ಮುಂದೆ ನಿಲ್ಲಿಸಿದ. ಆ ಮನೆಯೊಳಗೆ ನನ್ನನ್ನ ಕರೆದುಕೊಂಡು ಹೋದ. ಒಳಗೆ ನಡುಮನೆಯಲ್ಲಿ ಮೂರು ಜನ ಅಪರಿಚಿತರು ಕುಳಿತ್ತಿದ್ದರು. ಇಬ್ಬರು ಮುದುಕರು, ಒಬ್ಬಳು ಮುದುಕಿ. ಅವರಲ್ಲಿ ಆ ಮುದುಕಿ ಅವನ ತಾಯಿ ಮತ್ತು ಒಬ್ಬ ಮುದುಕ ಅವನ ತಂದೆಯಾಗಿದ್ದರು. ಇನ್ನೊಬ್ಬ ಮುದುಕ ಅವನ ಹೆಂಡತಿ ಕ್ಲಾರಳ ತಂದೆಯಾಗಿದ್ದ. ಆ ವಯಸ್ಸಿನಲ್ಲೂ ಬಹಳ ಸಂತೋಷವಾಗಿದ್ದರು.

ನನ್ನನ್ನ ಒಳಗಡೆಯ ಕೋಣೆಯೊಂದಕ್ಕೆ ಕರೆದುಕೊಂಡು ಹೋದ. ಅಲ್ಲಿ ಮುದುಕಿಯೊಬ್ಬಳು ಹಾಸಿಗೆಯ ಮೇಲೆ ಮಲಗಿದ್ದಳು. ಅವಳಿಗೆ ಕೆಲವು ಔಷದಗಳ ಬಾಟಲಿಗಳ ಕೊಟ್ಟ. ನನ್ನನ್ನ ಅಲ್ಲಿಯೇ ಕೂರಲು ಹೇಳಿ ಒಳಗಡೆ ಅಡುಗೆ ಮನೆಗೆ ಹೋದ. ಅಷ್ಟರಲ್ಲಿ ಆ ಮುದುಕಿ ತನ್ನ ಕತೆ ಹೇಳಲು ಆರಂಭಿಸಿದಳು. ಅವಳು ಕ್ಲಾರಳ ತಾಯಿ. ಕ್ಲಾರ ಸತ್ತು ಇಪ್ಪತು ವರ್ಷಗಳಾದರು ಸ್ಯಾಂಟಿಯಾಗೊ ಮದುವೆಯಾಗದನ್ನ ಕಂಡು ತುಂಬಾ ನೊಂದುಕೊಂಡಿದ್ದಳು.

ಯಾರಾದರು ಒಳ್ಳೆಯ ಹುಡುಗಿಯರಿದ್ದರೆ ಸ್ಯಾಂಟಿಯಾಗೊಗೆ ಮದುವೆ ಮಾಡಿಸೆಂದು ಕೇಳಿಕೊಂಡಳು. ಕ್ಲಾರ ಸತ್ತಾಗಿನಿಂದ ಪ್ರತೀ ಭಾನುವಾರ ಚಾಚುತಪ್ಪದೇ ಅವಳ ಸಮಾಧಿಯ ಮೇಲೆ ಹೂಗುಚ್ಛವನ್ನು ಇಟ್ಟು ಅಳುವ ಈ ಅಮರ ಪ್ರೇಮಿಗೆ ಮದುವೆ ಮಾಡಿಸುವಂತಹ ಸಾಹಸಕ್ಕೆ ಕೈಹಾಕಲು ಮನಸ್ಸಿಲ್ಲದೇ ಕುಳಿತಿದ್ದೆ. ತನ್ನ ತಂದೆ ತಾಯಿಯ ಯೋಗ ಕ್ಷೇಮದ ಜೊತೆ, ಎಂದೋ ಸತ್ತು ಹೋಗಿದ್ದ ಹೆಂಡತಿಯ ತಂದೆ ತಾಯಿಯ ಯೋಗಕ್ಷೇಮವನ್ನು ಪ್ರತೀವಾರ ತಪ್ಪದೇ ವಿಚಾರಿಸಿಕೊಳ್ಳುತ್ತಿದ್ದ. ಕೊನೆಗೂ ಅದ್ಭುತ ಜೀವಿಯೊಬ್ಬನ ಜೀವನದ ರಹಸ್ಯ ಈ ರೀತಿ ತೆರೆದುಕೊಂಡಿತ್ತು.

12 Comments

 1. Anonymous
  October 29, 2016
  • Prasanna Santhekadur
   October 30, 2016
 2. Sharadamurthy
  October 28, 2016
  • Prasanna Santhekadur
   October 29, 2016
 3. Sarojini Padasalagi
  October 28, 2016
  • Prasanna Santhekadur
   October 29, 2016
 4. premalatha B
  October 28, 2016
  • Prasanna Santhekadur
   October 29, 2016
 5. Meena
  October 28, 2016
  • Prasanna Santhekadur
   October 29, 2016
 6. Anonymous
  October 28, 2016
  • Prasanna Santhekadur
   October 29, 2016

Add Comment

Leave a Reply