Quantcast

ಸೌಮ್ಯ ಎಂಬ ಈ ಹುಡುಗಿ..

ಕೆ ಆರ್ ಸೌಮ್ಯ ಅವರ ಮೊದಲ ಕವನ ಸಂಕಲನ ಸದ್ಯದಲ್ಲೇ ಬೆಳಕು ಕಾಣಲಿದೆ.

ಈ ಸಂಕಲನಕ್ಕೆ ಬರೆದ ಮುನ್ನುಡಿ ಇಲ್ಲಿದೆ 


ಕಾವ್ಯಾಸಕ್ತೆಯ ಭಾವಲಹರಿಗಳು

m s ashadevi

ಎಂ.ಎಸ್.ಆಶಾದೇವಿ

“ನಾನು ಹುಟ್ಟು ಕವಯಿತ್ರಿಯಲ್ಲ, ಕಾವ್ಯಾಸಕ್ತೆ ಅಷ್ಟೇ.. ಆದರೂ ಹೆಣ್ಣು ಹಾಗೂ ಆಕೆಯ ಮನಸ್ಸಿನ ಭಾವಗಳಿಗೆ ಕಾವ್ಯದ ಸ್ಪರ್ಷ ನೀಡುವ ಕೆಲಸ ಮಾಡಲು ಯತ್ನಿಸಿದ್ದೇನೆ” ಎನ್ನುವ ಸೌಮ್ಯಾ ಅವರ ಮಾತುಗಳು ಅವರ ಕಾವ್ಯ ಪ್ರೀತಿಯನ್ನೂ , ಪ್ರಾಮಾಣಿಕತೆಯನ್ನೂ ಹೇಳುತ್ತವೆ.

ಇಷ್ಟಕ್ಕೂ ಕವಿಯಾಗುವ ಆಸೆ ಯಾರಿಗಿಲ್ಲ? ಹದಿಹರೆಯದಲ್ಲಿ ತಾನು ಕವಿ-ಕಲಾವಿದ/ದೆ ಎನ್ನುವ ಮೋಹಪಾಶಕ್ಕೆ ಒಳಗಾಗದ ಪಾಪಿಗಳಾದರೂ ಎಲ್ಲಿ ಸಿಕ್ಕಾರು? ನಿಜವೆಂದರೆ ಹೀಗೆ ಕಲೆಯ ಸೆಳೆತಕ್ಕೆ ಒಳಗಾಗುವುದೇ ನಮ್ಮನ್ನು ನಾವು ಅರಿಯುವ, ನಮ್ಮ ದಾರಿಯನ್ನು ಹುಡುಕಿಕೊಳ್ಳುವ ಆರ್ತ ಪ್ರಯತ್ನವೂ ಆಗಿರುತ್ತದೆ.

whatsapp-image-2016-10-27-at-13-09-51ಸೌಮ್ಯಾ ಅವರ ಕವನ ಸಂಕಲನದ ಶೀರ್ಷಿಕೆಯೇ ಅವರ ಕಾವ್ಯದ ಕೇಂದ್ರಬಿಂದು ಯಾವುದು ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತದೆ. ಬೆಂಕಿಯಲ್ಲೂ ಬಾಡದ ಹೆಣ್ಣಿನ ಚೈತನ್ಯವೇ ಸೌಮ್ಯ ಅವರನ್ನು ಕಾವ್ಯರಚನೆಗೆ ಪ್ರಚೋದಿಸಿದೆ. ಅವರೇ ಹೇಳಿಕೊಳ್ಳುವಂತೆ ಒಂದೆಡೆ ಎಡಪಂಥೀಯ ವಿಚಾರಧಾರೆ ಮತ್ತೊಂದೆಡೆ ಕಾವ್ಯದ ಸೆಳೆತ ಈ ಎರಡೂ ಅವರ ಲೋಕ ದೃಷ್ಟಿಯನ್ನು ರೂಪಿಸಿವೆ.

ಹೆಣ್ಣು ಈ ಸಂಕಲನದ ಕೇಂದ್ರ ಆಗಿರುವಾಗಲೂ ಕವಯಿತ್ರಿಯನ್ನು ಕಾಡಿರುವ ಅಷ್ಟೇ ಮಹತ್ವದ ಇನ್ನಿತರ ಸಂಗತಿಗಳೆಂದರೆ ಪ್ರೀತಿ ಮತ್ತು ದಾಂಪತ್ಯ. ಬದಲಾಗುತ್ತಿರುವ ಸನ್ನಿವೇಶದಲ್ಲಿ ಹೆಣ್ಣು ಎದುರಿಸುತ್ತಿರುವ ಅನೇಕ ಸವಾಲುಗಳಿವೆ. ಸದಾ ತನ್ನ ಚೈತನ್ಯವನ್ನು ಉಡುಗಿಸಲು ಪ್ರಯತ್ನಿಸುವ ವ್ಯವಸ್ಥೆಯ ದಮನಕಾರಿ ನಿಲುವು ಒಂದೆಡೆ, ತನ್ನ ಜಾಗೃತ ಪ್ರಜ್ಞೆ ಮತ್ತು ಅನಾವರಣಗೊಂಡ ಆತ್ಮವಿಶ್ವಾಸದಲ್ಲಿ ಬದುಕು ಮತ್ತು ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವ ಪ್ರಯತ್ನ ಇನ್ನೊಂದು ಕಡೆ. ಈ ಎರಡರ ನಡುವೆ ಹೆಣ್ಣಿನ ವ್ಯಕ್ತಿತ್ವದ ಮೂಲಧಾತುಗಳನ್ನು ಮುಖಾಮುಖಿಯಾಗುತ್ತಿರುವ ಸಂದಿಗ್ಧವೂ ಇದೆ. ಈ ಸಂಕಲನದಲ್ಲಿ ಈ ಎಲ್ಲದರ ನಡುವಿನ ತಾಕಲಾಟವೇ ಎದ್ದು ಕಾಣುತ್ತದೆ.
ಈ ಮೂರನ್ನೂ ನಿಭಾಯಿಸುವಲ್ಲಿ ಹೆಣ್ಣು ಎದುರಿಸುವ ಆಯ್ಕೆಯ ದ್ವಂದ್ವಗಳೂ ಕವಯಿತ್ರಿಯನ್ನು ಕಾಡಿವೆ. ಹೆಣ್ಣು’ಧರಣಿಯಲಿ ದೊಡ್ಡವಳು’ ಎನ್ನುವುದರ ಬಗೆಗೆ ಕವಯಿತ್ರಿಗೆ ಯಾವುದೇ ಅನುಮಾನವಿಲ್ಲ.

ಸ್ತ್ರೀ ಅಂದರೆ ಅಷ್ಟೇ ಸಾಕು
ಹೊನ್ನಶೂಲ ಬೇಕಿಲ್ಲ
ಸಾಧನೆ ಹಾದಿಯಲಿ ಸಾಕ್ಷಿಯಾದವಳೀಗ
ಸಾದಿಸುವ ಛಲದಿಂದ ಪುಟಿದೆದ್ದು ನಿಂತಿಹಳು
ಇವಳು ಧರಣಿಯಲಿ ದೊಡ್ಡವಳು

ಧರಣಿಯಲಿ ದೊಡ್ಡವಳಾದರೂ ಅದನ್ನು ಒಪ್ಪದ ಮೌಲ್ಯವ್ಯವಸ್ಥೆಯ ವಿರುದ್ಧ ನಡೆಸಿದ ಹೋರಾಟವೇ ಹೆಣ್ಣಿನ ಪರಂಪರೆ. ಈ ಹೋರಾಟ ತಾರ್ಕಿಕ ಅಂತ್ಯವನ್ನು ಕಂಡಿಲ್ಲ ಎನ್ನುವುದರ ಅರಿವೇ ಹೆಣ್ಣಿನ ಬದುಕನ್ನು ಸಂಕೀರ್ಣವಾಗಿಸುತ್ತಾ ಹೋಗುತ್ತದೆ. ಒಂದು ಹೆಣ್ಣ ದನಿಯ ಹಿಂದೆ ನಿಶಬ್ದವಾಗಿಸಲ್ಪಟ್ಟ ನೂರು ಹೆಣ್ಣಿನ ಧ್ವನಿಗಳು ನಮ್ಮನ್ನು ಎದುರಾಗುತ್ತವೆ.

ಆಗಾಗ ಕುಕ್ಕರ್ ಶಬ್ದದಂತೆ
ಹೆಣ್ದನಿಗಳು ವಟಗುಡುತ್ತವೆ
ತನ್ನೆಲ್ಲಾ ನೋವುಗಳನ್ನು ಅಡುಗೆ ಮನೆಯ
ಸಾಸಿವೆ ಡಬ್ಬಗಳಲ್ಲಿ ಬಿಗಿದಿಟ್ಟು
ಆಗಾಗ ಮಾತ್ರ ಸಿಟ್ಟು ಸಿಡಿಯುತ್ತದೆ ಒಗ್ಗರಣೆಯಂತೆ

ಬದಲಾಗಬೇಕಾದ್ದು ಇನ್ನೂ ಎಷ್ಟೋ ಬಾಕಿಯಿದೆ. ಆದರೆ ಹೆಣ್ಣು ಎಂದೂ ದ್ವೇಷ ಸಾಧಿಸಲಾರಳು. ಅದು ಅವಳ ಗುರಿಯೂ ಅಲ್ಲ. ತನ್ನ ಹೋರಾಟದಲ್ಲಿ ಮಗ್ನಳಾಗಿರುವಾಗಲೂ ಅವಳು ಕುಟುಂಬ ವತ್ಸಲೆಯೂ ಆಗಿರುತ್ತಾಳೆ. ಇದನ್ನೇ ವ್ಯವಸ್ಥೆ ತನ್ನ ದಾಳವಾಗಿಸಿಕೊಳ್ಳುತ್ತಾ ಹೋಗುತ್ತದೆ. ಇದೇ ವರ್ತಮಾನದ ಹೆಣ್ಣಿನ ಎದುರಿಗಿರುವ ಬಹುದೊಡ್ಡ ಸವಾಲು.ಯಾವ ಕುಟುಂಬ ಮತ್ತು ದಾಂಪತ್ಯವನ್ನು ಹೆಣ್ಣಿನ ಬಗೆಗಿನ ಕರಾರೆಂದು, ದೌರ್ಬಲ್ಯವೆಂದು ತಿಳಿಯಲಾಗಿದೆಯೋ. ಹೇರಲಾಗಿದೆಯೋ ಅವುಗಳನ್ನೇ ತನ್ನ ಶಕ್ತಿಯಾಗಿ ಮಾರ್ಪಡಿಸಿ ಸಾಬೀತು ಪಡಿಸಬೇಕಾಗಿರುವ ಸವಾಲು. ಇದನ್ನು ಅವಳು ಸಾಬೀತು ಪಡಿಸಬೇಕಾಗಿರುವುದು ಮೌಲ್ಯವ್ಯವಸ್ಥೆಗಲ್ಲವೇ ಅಲ್ಲ. ಈ ಪರಮ ಸತ್ಯವನ್ನು ಅವಳು ತನಗೆ ತಾನು ಸಾಬೀತು ಪಡಿಸಿಕೊಂಡರೆ ಸಾಕು, ಅವಳು ಹೋರಾಟದಲ್ಲಿ ಜಯಗಳಿಸಿದಂತೆಯೇ. ಈ ನಿಲುವನ್ನು ಪಡೆಯಲು ಇಲ್ಲಿನ ಕವಿತೆಗಳು ಪ್ರಯತ್ನಿಸುತ್ತಿವೆ.

she2ಈ ಅಂಶವನ್ನೇ ಮುಂದುವರಿಸುವುದಾದರೆ,ದಾಂಪತ್ಯವನ್ನು ಹೆಣ್ಣು ಮುಖಾಮುಖಿಯಾಗುತ್ತಿರುವುದೂ ಇದೇ ಹಿನ್ನೆಲೆಯಲ್ಲಿ. ಆದರೆ ’ಒಡೆಯ ನೀನು’ ರೀತಿಯ ಕವಿತೆಗಳು ಹೆಣ್ಣು ತನಗೆ ತಾನೇ ಬಂಧಿಯಾಗುವ, ಆ ಮೂಲಕ ವ್ಯವಸ್ಥೆಯನ್ನೇ ಬಲಪಡಿಸಿಬಿಡುವ ವಿಪರ್ಯಾಸದ ವಾಸ್ತವವನ್ನೂ ಬಿಚ್ಚಿಡುತ್ತವೆ. ಪ್ರೀತಿಯೊಂದೇ ಎಲ್ಲ ಸಮಸ್ಯೆಗೂ ಪರಿಹಾರ ನಿಜವೇ. ಆದರೆ, ಹೆಣ್ಣು ತಾನಾಗಿ ತಾನು ಗಂಡನ್ನು ‘ಒಡೆಯ’ ಎಂದು ಘೋಷಿಸುವುದರ ಪರಿಣಾಮವೇನಾದೀತು?

ನಾನೆನ್ನೆ ನೀನೆನ್ನೆ ಎನ್ನುವ ಅಹಂಕಾರವನ್ನು ಕಳೆದುಕೊಳ್ಳುವ ಅಪೂರ್ವ ಕ್ರಿಯೆಯಾಗುವ ಬದಲು ಪ್ರೀತಿಯೆನ್ನುವುದು ಗಂಡನ್ನು ಒಡೆಯನನ್ನಾಗಿ ಹೇಳುತ್ತಲೇ ತನ್ನನ್ನು ದಾಸಿಯಾಗಿಸಿಕೊಳ್ಳುವ ಪಿತೃ ಸಂಸ್ಕೃತಿಗೆ ನೀಡುವ ಅನುಮೋದನೆಯಾಗಿಬಿಡುವುದಿಲ್ಲವೆ? ಈ ಧಾಟಿಯ ಹಲವು ಕವಿತೆಗಳು ಈ ಸಂಕಲನದಲ್ಲಿವೆ. ತಾನು ಶಬರಿಯಂತೆ ಕಾಯುತ್ತಾ ತನ್ನನ್ನು ಉದ್ಧರಿಸಲು ಬರಬೇಕಾದ ಪುಣ್ಯ ಪುರುಷನಿಗಾಗಿ ಕಾಯುತ್ತಾ ಇರುವುದು, ಪರಸ್ಪರ ಗೌರವ ಇರುವ ಸನ್ನಿವೇಶದಲ್ಲಿ ಕಾಣಿಸುವ ಬಗೆಗೂ , ಹೆಣ್ಣು ಗಂಡಿನ ನಡುವೆ ಅಧಿಕಾರದ, ಶ್ರೇಣೀಕರಣದ ಸನ್ನಿವೇಶದಲ್ಲಿ ಕಾಣಿಸುವ ಬಗೆಗೂ ಭೂಮಿ ಆಕಾಶಗಳ ವ್ಯತ್ಯಾಸವಿರುತ್ತದೆ. ಇದನ್ನೇ ನಾನು ಮತ್ತೆ ಮತ್ತೆ ಹೆಣ್ಣು ವಿಧಿಸಿಕೊಳ್ಳುವ ’ಸ್ವಬಂಧನ’ವೆಂದು ಗುರುತಿಸುವುದು.

ಒಂದೆಡೆ ಹೆಣ್ಣನ್ನು ಶೋಷಿಸುವ ನೂರು ದಾರಿಗಳನ್ನು ವಿರೋಧಿಸುತ್ತಾ ಮತ್ತೊಂದೆಡೆ ನಾವೇ ಅದಕ್ಕೆ ಅವಕಾಶ ಮಾಡಿಕೊಡುವುದು. ಮತ್ತು ಅನೇಕ ಸಂದರ್ಭಗಳಲ್ಲಿ ಇದನ್ನು ಅರಿಯದೇ ಹೋಗುವುದೇ ಸಮಸ್ಯೆ ಎಂದೂ ಅನಿಸುತ್ತದೆ. ಪ್ರೀತಿ ಎನ್ನುವುದು ಎಲ್ಲದಕ್ಕೂ ಅತೀತವಾದುದು ನಿಜ. ಆದರೆ, ಅಲ್ಲೂ ಗಂಡು ’ಆಹಾ ಪುರುಷಾಕಾರಂ’ ಎಂದು ಬೀಗುತ್ತಾ ಹೆಣ್ಣನ್ನು ಮಾತ್ರ ’ಸ್ತ್ರೀ ರೂಪಮೆ ರೂಪಂ’ ಎಂದು ದೇಹಕ್ಕೆ ಮಾತ್ರ ಕುಬ್ಜಗೊಳಿಸುವುದನ್ನು ಎದುರಿಸುವುದು ಹೇಗೆ? ಈ ಹಿನ್ನೆಲೆಯಲ್ಲಿ ’ಒಡೆಯ ನೀನು ’ ಎಂದಾಕ್ಷಣ ಅಲ್ಲಿ ಅವಳ ಪ್ರೀತಿಯ ಅದಮ್ಯತೆಯನ್ನಲ್ಲ ಗಂಡು ಅರಿಯುವುದು, ಬದಲಿಗೆ ಅವಳ ‘ಶರಣಾಗತಿ’ಯ ಮನಸ್ಥಿತಿಯೆಂದೇ ಅದನ್ನು ಅರ್ಥೈಸುತ್ತಾನೆ. ಈ ಸೂಕ್ಷ್ಮ ಸಂಗತಿಗಳನ್ನು ಅರಿಯದೇ ಹೆಣ್ಣು ಅಡಿ ಮುಂದೆ ಇಡುವುದು ಕಷ್ಟ. ’ಬಾಳ ಚೈತನ್ಯ’ದಂಥ ಕವಿತೆಗಳಲ್ಲಿ ಇದು ತುಸು ಬದಲಾಗುವುದು ಓದುಗರಿಗೂ ತುಸು ಸಮಾಧಾನ ನೀಡುತ್ತದೆ’. ದರ್ಪಕ್ಕೆ ಇತಿಶ್ರೀ ಹಾಡು ಕವಿತೆ ಕೂಡ ಹೆಣ್ಣು ತಾನು ಬದಲಾಗಬೇಕಾದ ಅನಿವಾರ್ಯತೆಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವಾಗಿದೆ.

ಕವಯಿತ್ರಿಯಾಗುವ ದಾರಿಯಲ್ಲಿ ಸೌಮ್ಯ ಅವರು ಸಾಗಬೇಕಾದ ದಾರಿ ಉದ್ದಾನುದ್ದದ್ದು. ಭಾಷೆ, ಅಭಿವ್ಯಕ್ತಿ ಈ ಎಲ್ಲದರಲ್ಲೂ ಸೌಮ್ಯ ಇನ್ನೂ ಪರಿಣಿತಿಯನ್ನು ಪಡೆಯಬೇಕಾಗಿದೆ. ಪ್ರಾಮಾಣಿಕತೆ ಮತ್ತು ಅದಮ್ಯ ಆಸೆ ಮಾತ್ರ ಒಬ್ಬ ಒಳ್ಳೆಯ ಕವಯಿತ್ರಿಯನ್ನು ರೂಪಿಸಲಾರವು. ಅದಕ್ಕೆ ತಪಸ್ಸಿನಂಥ ಧ್ಯಾನ, ಕಾವ್ಯ ಪರಂಪರೆಯ ಅರಿವು ಮತ್ತು ಅದರೊಂದಿಗಿನ ಒಡನಾಟ , ತಾಳ್ಮೆ ಎಲ್ಲವೂ ಒಂದಕ್ಕೊಂದು ಪೂರಕವಾಗುತ್ತಾ ಹೋಗಬೇಕು. ’ಆಳದನುಭವವನ್ನು ಮಾತು ಕೈ ಹಿಡಿದಾಗ’ ಮಾತ್ರ ಅಪ್ಪಟ ಕಾವ್ಯ ಹುಟ್ಟೀತು. ಅಪಾರ ಉತ್ಸಾಹದಿಂದ ಕನ್ನಡ ಕಾವ್ಯ ಲೋಕವನ್ನು ಪ್ರವೇಶಿಸಿರುವ ಸೌಮ್ಯಾ ಅವರಿಗೆ ಈ ಎಲ್ಲವೂ ಸಿದ್ಧಿಸಲಿ ಎಂದು ಹಾರೈಸುತ್ತೇನೆ.

Add Comment

Leave a Reply