Quantcast

ಆಲೂರು ಪಾತ್ರೆ ಬೆಳಗಿದರು..

ಪಾತ್ರೆ ಬೆಳಗುವ ಪುರಾಣ

chandrashekhara-aluru

ಚಂದ್ರಶೇಖರ ಆಲೂರು 

ಎಫ್ ಬಿ ಯಲ್ಲಿ ನಾನು ಹಾಕಿದ ನೀರೊಲೆಗೆ ಸೌದೆ ಹಾಕುತ್ತಿರುವ ಫೋಟೋ, ಹಾಲು ಉಕ್ಕಿಸುತ್ತಿರುವ ಫೋಟೋಗಳನ್ನು ಕಂಡವರು ನಾನು ಪಾಕ ಶಾಸ್ತ್ರ ಪ್ರವೀಣನೆಂದೋ ಅಥವಾ ಅಡುಗೆಯಲ್ಲಿ ಹೆಂಡತಿಗೆ  ಭಾರಿ ಸಹಾಯ ಮಾಡುತ್ತೇನೆ ಎಂದೋ ಭಾವಿಸಿರಬಹುದು. ಕೆಲವು ಹೆಣ್ಣು ಮಕ್ಕಳು ತಮ್ಮ ಪತಿಗೆ ನನ್ನ ಅಡುಗೆಮನೆ ಕೈಂಕರ್ಯದ ಬಗ್ಗೆ ಹೇಳಿ ಮೂತಿ ತಿವಿದಿರಬಹುದು.

ನಿಜ ಹೇಳಬೇಕೆಂದರೆ ಪಾಕ ಶಾಸ್ತ್ರದಲ್ಲಿ ನಾನು ಫೇಲ್ ಆದ ವಿದ್ಯಾರ್ಥಿ. ಇಂದಿಗೂ ಕಾಫಿ ಟೀ ಮಾಡಿಕೊಳ್ಳುವುದನ್ನ ಹೊರತು ಪಡಿಸಿದರೆ, ಅದೂ 2 ಗ್ಲಾಸ್ ಗಿಂತ ಹೆಚ್ಚಾದರೆ ಸಕ್ಕರೆ ಜಾಸ್ತಿಯೋ ಮತ್ತೇನೋ ಸಮಸ್ಯೆ ಆಗಿರುತ್ತೆ. ಅಕ್ಕಿಯ ಡಬ್ಬದಲ್ಲಿ ಅದೇ ಚಿಕ್ಕ ಲೋಟ ಮತ್ತು ವಾಶ್ ಬೇಸಿನ್ ಬಳಿ ಅದೇ ನೀರಿನ ಲೋಟ ಇದ್ದರೆ ಅನ್ನ ಕೂಡ ಮಾಡ ಬಲ್ಲೆ!! ಇದರೊಂದಿಗೆ ಕಲಿತ ಮತ್ತೊಂದು ವಿದ್ಯೆ ದೋಸೆ ಹಾಕಿ ಕೊಳ್ಳುವುದು. ಅದೂ ಕೂಡ ಕಲಿತಿದ್ದು ಕಾರ್ ಡ್ರೈವಿಂಗ್ ಕಲಿತ ಮೇಲೆ!

ನನಗೆ ಡ್ರೈವಿಂಗ್ ಕಲಿಸುತ್ತಿದ್ದ ಹುಡುಗ reverse ತೆಗೆದು ಕೊಳ್ಳುವಾಗ ಸ್ಟಿಯರಿಂಗ್ ವೀಲ್ ಅನ್ನ ಕಾವಲಿ ಮೇಲೆ ದೋಸೆ ಸಂಪ್ಲ ಹಾಕಿ ಸೌಟಿನಲ್ಲಿ ಎಳೀತೀವಲ್ಲ ಆ ಥರ ತೆಗೊಳ್ಳಿ ಎಂದು ಆಕ್ಷನ್ ಮಾಡಿ ತೋರಿಸುತ್ತಿದ್ದ. ಮರು ದಿನ ಮನೆಯಲ್ಲಿ ಅದನ್ನು ಪ್ರಯೋಗ ಮಾಡಿ ಕಲಿತೆ.

ಆದರೆ ಅಡುಗೆ ಮನೆಯಲ್ಲಿ ನನಗೆ ಪ್ರಿಯವಾದ ಕೆಲಸ ಮತ್ತೊಂದಿದೆ. ಅದು ಪಾತ್ರೆ ತೊಳೆಯುವುದು. ಇದು MA ಓದುವಾಗ ಕಲಿತಿದ್ದು. ಆಗ ಬ್ಯಾಟರಾಯನಪುರದಲ್ಲಿ ಒಂದು ವಠಾರದಲ್ಲಿ ನಾನು, ಸೋಮು, ರಾಜು ಮತ್ತು ಕಾಮು ಇದ್ದೆವು. ಬಂಡಾಯ aluruಸಾಹಿತ್ಯ ಸಂಘಟನೆಯ ಹಲವಾರು ಅನಧಿಕೃತ ಸಭೆಗಳು ಆ ಪುಟ್ಟ ಮನೆಯಲ್ಲಿ ನಡೆದಿವೆ. ಗುರುಗಳಾದ ಬರಗೂರು, ಡಿ ಆರ್, ಸಿದ್ದಲಿಂಗಯ್ಯರವರು ಚಾಪೆಯ ಮೇಲೆ ಕುಳಿತು ನಾವು ಕೊಟ್ಟ ಕಾಫಿ ಕುಡಿದು ಗಂಟೆಗಟ್ಟಲೆ ಚರ್ಚೆ ನಡೆಸಿದ್ದಿದೆ. ಅದರ ವಿವರಗಳು ಇಲ್ಲಿ ಬೇಡ.

ಹೀಗೆ ನಾವು ಗೆಳೆಯರು ಇದ್ದೆವಲ್ಲ, ಆಗ ಯಾರ್ಯಾರು ಏನೇನು ಕೆಲಸ ಮಾಡಬೇಕೆಂದು ಆರಂಭದಲ್ಲಿಯೇ ನಿರ್ಧರಿಸಿದೆವು. ನಂಗಂತೂ ಅಡುಗೆ ಮಾಡೋಕ್ಕೆ ಬರಲ್ಲಪ್ಪ ಎಂದು ಮೊದಲೇ ಹೇಳಿ ಬಿಟ್ಟೆ. “ಹಂಗಾದರೆ ಮನೆ ಕಸ ಗುಡಿಸೋದು, ಪಾತ್ರೆ ತೊಳೆಯೋ ಕೆಲಸ ನಿಂದು ಕಣೊ ಲೋ” ಎಂದ ಕಾಮು. ನಾನು ಖುಷಿಯಿಂದ ಆಗಬಹುದು ಎಂದೆ. {ನಮ್ಮಮ್ಮ ನನ್ನ ಮಾತು ಕೇಳಿ ಕಣ್ಣೀರು ಹಾಕಿದ್ದು ಇನ್ನೊಂದು ಕಥೆ !}

ಅಂದಿನಿಂದ ನಾನು ಪರಿಶುದ್ಧ ಮನಸ್ಸಿನಿಂದ ತೀವ್ರ ಏಕಾಗ್ರತೆಯಿಂದ ಪಾತ್ರೆ ತೊಳೆಯುವ ಕೆಲಸ ಶುರು ಮಾಡಿದೆ..
ಆಗ ಈಗಿನಂತೆ ವಾಶ್ ಬೇಸಿನ್ ಆಗಲಿ ಮೇಲಿನಿಂದ ನೀರು ಸುರಿಸುವ ನಲ್ಲಿಯಾಗಲಿ ಇರಲಿಲ್ಲ. ಹಾಲ್ ನಲ್ಲಿಯೇ ಒಂದು ಸಣ್ಣ ತೊಟ್ಟಿಯಿತ್ತು. ಅಲ್ಲಿ ಕುಕ್ಕರಗಾಲಲ್ಲಿ ಕುಳಿತು ಪಾತ್ರೆ ತೊಳೆಯಬೇಕಿತ್ತು. ಅದನ್ನ ನಾನು ತುಂಬಾ ಎಂಜಾಯ್ ಮಾಡುತ್ತಿದ್ದೆ.

ಮದುವೆಯಾದ ಮೇಲು ನನ್ನ ಪತ್ನಿಗೆ “ನನಗೆ ಗೊತ್ತಿರುವ ಉದ್ಯೋಗ ಇದೊಂದೇ” ಎಂದು ಹೇಳಿದೆ. ಪಾಪ ಅವಳೂ ಓಕೆ ಎಂದಳು. ಈಗಲೂ ನಮ್ಮ ಮನೆಗೆ ಕೆಲಸದವರು ಬಂದರೂ ಅವರಿಗೆ ಪಾತ್ರೆ ತೊಳೆವ ಭಾಗ್ಯವಿಲ್ಲ. ನಮ್ಮ ಮನೆಯಲ್ಲಿ ವಾಶ್ ಬೇಸಿನ್ ನಲ್ಲಿ 5 ನಿಮಿಷಕ್ಕೂ ಹೆಚ್ಚು ಕಾಲ ಒಂದು ಪಾತ್ರೆಯು ಇರುವುದಿಲ್ಲ. {ನನ್ನವಳಿಗೂ ವಾಶ್ ಬೇಸಿನ್ ನಲ್ಲಿ ಪಾತ್ರೆ ಕಂಡರಾಗದು} ಈವನ್ ಒಂದು ಸ್ಪೂನ್ ಕೂಡ.

ಈಗ ಪಾತ್ರೆ ತೊಳೆವ ಕೆಲಸ ತುಂಬಾ ಸುಲಭ.. ಮೇಲಿನಿಂದ ನೀರು ಬೀಳುತ್ತಿರುತ್ತದೆ.. ಬಗೆ ಬಗೆಯ ಬ್ರಷ್ ಗಳು ಬಂದಿವೆ. ಆದರೆ ಈಗಲೂ ನಾನು ಬ್ಯಾಟರಾಯನಪುರದಲ್ಲಿ ಬೆಳಗುತ್ತಿದ್ದ ಏಕಾಗ್ರತೆಯಿಂದಲೇ ಪಾತ್ರೆ ಬೆಳಗುತ್ತೇನೆ and i enjoy it!

Add Comment

Leave a Reply