Quantcast

ಬಲಿಯನ್ನು ವಿಲನ್ ಮಾಡುತ್ತಿದ್ದಾರೆ..!

ಭೂಮಂಡಲದೊಡೆಯನಿಗೋ, ಅಣ್ಣ ಬಲೀಂದ್ರ ರಾಯನಿಗೋ..

ರೈತರ ಹಿತ ಕಾಯ್ದ ಬಲಿ ಚಕ್ರವರ್ತಿ ಪಾತಾಳ ಸೇರಬೇಕಾಯ್ತು.

ಬಲೀಂದ್ರನನ್ನು ಒಂದೇ ದಿನ ಉಳಿಸಿಕೊಳ್ಳುವ ರೈತರು

 

ಮೊನ್ನೆ ಕೇರಳದಲ್ಲಿ ನಡೆದ ಓಣಂ ಹಬ್ಬದ ಸಂದರ್ಭದಲ್ಲಿ ಕೇರಳದ ಆರೆಸ್ಸಸ್ ಕಛೇರಿ ಓಣಂ ಹಬ್ಬವನ್ನು  ವಾಮನ ದಿನಾಚರಣೆಯನ್ನಾಗಿ  ಪರಿವರ್ತಿಸಲು ಮಾಡಿದ ಪ್ರಯತ್ನವನ್ನು ಓದಿ ತಿಳಿದಿದ್ದೇವೆ.

ಬಲಿಚಕ್ರವರ್ತಿಯನ್ನು ರಾಕ್ಷಸನೆಂದೂ, ವಾಮನ ದುಷ್ಟ ಶಕ್ತಿಯ ನಿಗ್ರಹಕ್ಕಾಗಿ ಅವತರಿಸಿದ  ಮಹಾ ದೂತನೆಂದೂ ಪ್ರಚುರ ಪಡಿಸಲು ಹರ ಸಾಹಸ ಪಟ್ಟಿದ್ದನ್ನು ಗಮನಿಸಿದ್ದೇವೆ. ತನ್ನ ಶುಭಾಶಯವನ್ನು ಆರ್ ಎಸ್ ಎಸ್ ವಾಮನನಿಗಾಗಿ ಮೀಸಲಿಟ್ಟಿತು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರವರು ವಾಮನ ಹಬ್ಬದ ಶುಭಾಯವನ್ನೇ ಕೇರಳದ ಜನರಿಗೆ ನೀಡಿದರು. ಅಪ್ಪಿ ತಪ್ಪಿಯೂ ಬಲಿ ಚಕ್ರವರ್ತಿ ಇವರ ಶುಭಾಶಯಗಳಲ್ಲಿ  ಸುಳಿಯಲಿಲ್ಲ.

ಆದರೆ ಇಡೀ ಕೇರಳ ಓಣಂ ಹಬ್ಬವನ್ನು ತಿರುಚುವ ಪ್ರಯತ್ನಕ್ಕೆ ತನ್ನ ಸಂಪೂರ್ಣ ವಿರೋಧವನ್ನು ದಾಖಲಿಸಿತು.

ಇದೀಗ ನಮ್ಮ ಮಲೆನಾಡಿಗೆ ಬಲಿ ಬರುತ್ತಿದ್ದಾನೆ. ಬಲಿ ಬರುವಾಗ ಇರಬೇಕಾದ ಉತ್ಸಾಹ ವರುಷಗಳುರುಳಿದಂತೆ ಮಂಕಾದಂತೆ ಕಾಣುತ್ತಿದೆ.ತನ್ನ ಧೀರೋದಾತ್ತ ನಿಲುವಿನಲ್ಲಿ ಮನೆಮನೆಗೂ ಬಲೀಂದ್ರ ಬರುತ್ತಿದ್ದ.  ಮೂರು ದಿನಗಳ ಕಾಲ ರೈತರ ಮನೆಯಲ್ಲಿ ಕುಳಿತುಕೊಂಡು ಅನ್ನಾಹಾರಗಳ ಜೊತೆ ಭಕ್ಷ್ಯ ಭೋಜನಗಳ ಸವಿಯಲ್ಲಿ ಮುಳುಗೇಳುತ್ತಿದ್ದನು. ಆದರೀಗ ಬಹು ಬೇಗನೆ ಹೊರಹೋಗುತ್ತಿರುವುದು ದುಖದ ಸಂಗತಿ. ಈ ಬಗ್ಗೆ ಒಂಚೂರು ಮಾತಾಡೋಣ.

ಜೊತಕ, ಬಾಯಿ ಕುಕ್ಕೆ, ಮಿಣಿ, ಮರದ ನೇಗಿಲು, ಕಬ್ಬಿಣದ ನೇಗಿಲು, ಒಕ್ಕಲಾಟದ ಕಲ್ಲು, ಬೆರಕೋಲು, ಬಾರುಕೋಲು, ಗೊಬ್ಬರ ಕೊಕ್ಕೆ, ನೊಗ, ಕೊಳಗ, ಸಿದ್ದೆ, ಪಾವು, ಗೆರಸಿ, ಸಣ್ಣೆ, ಮೊರ, ರಾಟಿ, ಹಗ್ಗ, ಕೊರಡು, ನೊಳ್ಳಿ, ಕೇವಿ ಕಟ್ಟೋ ಹಗ್ಗ, ಕತ್ತಿ, ಹಲ್ಲುಗತ್ತಿ, ಸೊಪ್ಪುಗತ್ತಿ, ಹುಲ್ಲುಗತ್ತಿ, ಗರಗಸ, ಕುಂಟಾಣಿ, ಹಾರೆ, ಸಬ್ಬಲ್ಲು, ಪಿಕಾಸಿ, ಪುಂಡಿ ನಾರು, ಮೆಟ್ಟುಗತ್ತಿ, ಕೊಡಲಿ, ಕೈಗೊಡಲಿ, ಮರುಚೆಟ್ಟಿ, ಬೀಸುವ ಕಲ್ಲು, ಅಡಿಕೆ ತೋಡುವ ಸಿಬ್ಬಲದ ಪಾತ್ರೆ, ಚೊಗರು ಕೆರಸುವ ಹಾಳೆ, ಬಂದೂಕು, ಕದ್ದಿನಿ, ಬಿತ್ತುವ ಕುಕ್ಕೆ, ಕೊನೆ ಗೋಣಿ..ಹೀಗೆ ಹತ್ತು ಹಲವು ರೈತಾಪಿ ಪರಿಕರಗಳನ್ನು ದೀಪಾವಳಿಯಂದು ಜೋಡಿಸಲು ಹೆಣವೇ ಬಿದ್ದು ಹೋಗುತ್ತಿತ್ತು. ಇದನ್ನೇ ಬಲೀಂದ್ರನನ್ನು ಹೂಡುವುದು ಎನ್ನುವುದು.

ಇದರಲ್ಲಿ ಕೆಲವು ಸಲಕರಣೆಗಳು ಜೀವಂತವಾಗಿವೆ. ಇನ್ನು ಕೆಲವು ವಸ್ತುಗಳು ಕಾಣೆಯಾಗಿರುವುದು ಮಾತ್ರವಲ್ಲ ಹೆಸರುಗಳೇ ಕಣ್ಮರೆಯಾಗಿವೆ. ಉಪಯೋಗಿಸದೆ ಗೆದ್ದಲು ಪಾಲಾಗಿವೆ. ತುಕ್ಕು ಹಿಡಿದು ಮಣ್ಣಾಗಿವೆ. ಪ್ರತಿ ದೀಪಾವಳಿಯಂದು ಮೂರು ದಿನಗಳ ಕಾಲ ಈ ಪರಿಕರಗಳನ್ನು ಇಟ್ಟು ಪೂಜೆ ಮಾಡಲಾಗುವುದು. ರೈತ ತನ್ನ ದೈನಂದಿನ ಬದುಕಿನಲ್ಲಿ ಉಪಯೋಗಿಸುವ ನೂರಾರು ವಸ್ತುಗಳು ಎಲ್ಲೇ ಇರಲಿ ಅವುಗಳನ್ನೆಲ್ಲ ಹುಡುಕಿ ತಂದು ತೊಳೆದು ಅವುಗಳಿಗೆ ಕೆಮ್ಮಣ್ಣು ಹಾಗೂ ಜೇಡಿ ಮಣ್ಣಿನ ಪಟ್ಟೆ ಬಳಿದು ಒಪ್ಪವಾಗಿ ಜೋಡಿಸುತ್ತಾನೆ.. ಮನೆಯ ಜಗುಲಿಯಲ್ಲಿ ಚಿಕ್ಕದಾದ ತಳಿರು ತೋರಣದ ಚಪ್ಪರವನ್ನು ಮಾಡಿ ಪರಿಕರಗಳ ಮೇಲ್ಬಾಗದಲ್ಲಿ ಸಿಂಗರಿಸಲಾಗುತ್ತದೆ. ಒಟ್ಟು ಮೂರು ದಿನಗಳ ಕಾಲ ನಿರಂತರವಾಗಿ ಪೂಜೆ ನಡೆಯುತ್ತದೆ. ಹತ್ತಾರು ಬಗೆಯ ತಿಂಡಿ ತೀರ್ಥಗಳು ಹಂಚಿಕೆಯಾಗುತ್ತವೆ. ಚಪ್ಪೆ ರೊಟ್ಟಿ, ಮೂರಿಂಚು ಅಗಲದ ಉದ್ದ ದೋಸೆಯಲ್ಲಿ ಇಡುವ ಎಡೆ ವರ್ಣಮಯ ಸಂಗತಿ.

ವರ್ಷತೊಡಕಿನ ರಾತ್ರಿ ಅಂದರೆ ಮೂರನೆಯ ದಿನ ರಾತ್ರಿ ಎಲ್ಲರದೂ ಗಡದ್ದಾದ ಊಟವಾದಮೇಲೆ ಬಲಿ ಚಕ್ರವರ್ತಿಯ ಬೊಜ್ಜವನ್ನೂ ಮಾಡಲಾಗುತ್ತದೆ. ಚಿಕ್ಕವನಾಗಿರುವಾಗ ಇದೊಂದು ಆಚರಣೆಯಾಗಿಯಷ್ಟೆ ತಲೆ ಹೊಕ್ಕುತ್ತಿತ್ತು. ತೋರುತ್ತಿತ್ತು. ಆದರೆ ಬರು ಬರುತ್ತಾ ಬಲಿ ಚಕ್ರವರ್ತಿಯ ಔದಾರ್ಯವೇ ಶತೃಗಳ ಪಾಲಿಗೆ ಬಂದೂಕಾಗಿ ಪರಿವರ್ತನೆಯಾಗಿದ್ದನ್ನು ನೆನೆಸಿಕೊಂಡರೆ ಕರುಳು ಚುರುಕ್ ಎನ್ನುತ್ತದೆ.

ಬಲಿ ಚಕ್ರವರ್ತಿ ತನ್ನ ಧೀರತನ, ಶೂರತನ, ಹೃದಯ ವೈಶಾಲ್ಯತೆಗಾಗಿ ತನ್ನ ರಾಜ್ಯವನ್ನು ಮಾತ್ರ ನೀಡಲಿಲ್ಲ. ಹೃದಯವನ್ನೇ ತೋರಿಸಿದಾಗಲೂ ಕರುಣೆ ತೋರದ ಮೂರಡಿಯ ವಾಮನ ನಿಷ್ಕರುಣೆಯಿಂದ ಪಾತಾಳ ಸೇರಿಸಿದ.

ವಿಶ್ವದಲ್ಲೇ ರೈತರ ಪರವಾಗಿ ಇದ್ದ ಸಾಮ್ರಾಜ್ಯ ಪಾತಾಳ ಸೇರಿದ್ದು ಮಾತ್ರವಲ್ಲ. ಅಂದಿನಿಂದನಿಂದ ರೈತ ಈ ದೇಶದ ಎರಡನೇ ದರ್ಜೆಯ ಪ್ರಜೆಯಾದ. ಬಲಿಯೊಂದಿಗೆ ರೈತರ ಸ್ವಾಭಿಮಾನದ ಶ್ರೀಮಂತ ಬದುಕೂ ಪಾತಾಳ ಸೇರಿತು. ಅಂದಿನಿಂದ ಇಂದಿನವರೆಗೂ ರೈತನ ಬದುಕಲ್ಲಿ ಇದೇ ವಾಮನನ ತಂತ್ರಗಳೇ ಮೆರೆದಾಡುತ್ತಿವೆ. ಆದರೆ ಇದೀಗ ಬಲೀಂದ್ರನನ್ನು ಹೂಡುವುದು ನೆಪ ಮಾತ್ರಕ್ಕೆ ಎಂಬಂತಾಗಿದೆ. ಪರಿಕರಗಳು ನೀರು ಕಾಣದೆ ಬಿದ್ದಲ್ಲೇ ಇವೆ.

ಹೊಸದಾಗಿ ಕೆಲವೊಂದು ಆಚರಣೆಗಳು ಹಳ್ಳಿಗಳನ್ನು ಪ್ರವೇಶ ಮಾಡಿದ್ದು ಇವುಗಳು ವಿಜೃಂಭಣೆಯಿಂದ ಆಚರಿಸಲ್ಪಡುತ್ತಿವೆ. ನಾಗರ ಪೂಜೆ, ಸತ್ಯನಾರಾಯಣ ವ್ರತ, ವಾಸ್ತು, ಆ ಹೋಮ ಈ ಹೋಮ, ಪುನರ್ ಪ್ರತಿಷ್ಟಾಪನೆಗಳು ಹಳ್ಳಿಗಳಲ್ಲಿ ನಿರಂತರವಾಗಿ ನಡೆಯುತ್ತಲೇ ಇವೆ. ಆದರೆ ತಮ್ಮ ಬದುಕು, ವೃತ್ತಿಗೆ ಸಂಬಂಧಿಸಿದ ಆಚರಣೆಗಳು ಮಂಗಮಾಯವಾಗುತ್ತಿವೆ. ಮೂರು ದಿನಗಳ ಕಾಲ ರಾರಾಜಿಸಬೇಕಿದ್ದ ಬಲೀಂದ್ರ ಪೂಜೆ ಒಂದು ದಿನಕ್ಕೆ ಇಳಿದಿದೆ. ನಾವು ಚಿಕ್ಕವರಿದ್ದಾಗ ನೂರಾರು ಪರಿಕರಗಳನ್ನು ಇಡುತ್ತಿದ್ದ ಜಾಗದಲ್ಲಿ ಕೇವಲ ಐದಾರು ಸಲಕರಣೆಗಳನ್ನು ಇಟ್ಟು ಕೈ ತೊಳೆದುಕೊಳ್ಳುತ್ತೇವೆ. ತಾತ ಮತ್ತಾತರ ಕಾಲದಿಂದ ನಡೆದುಕೊಂಡು ಬಂದಂತಹ ಕೊಡಾಮಾಸೆ, ಭೂಮಿ ಹುಣ್ಣಿಮೆಯಂತಹ ಹಬ್ಬಗಳ ಮಹತ್ವ ಪೂರ್ಣತೆ ಕಮ್ಮಿಯಾಗಿದೆ. ರೈತರ ಶ್ರಮಿಕರ ಪರವಾಗಿದ್ದು ಪಾತಾಳ ಸೇರಿದ ಬಲಿಂದ್ರನ ಬಗ್ಗೆ ಈ ನಿಟ್ಟಲ್ಲಿ ಒಂಚೂರು ವಿಚಾರ ಮಾಡೋಣ.

ಇಡೀ ಭೂಮಂಡಲವನ್ನು ರೈತನೊಬ್ಬಾನಾಳಿದ ಕತೆ ಇದ್ದರೆ ಅದು ಬಲೀಂದ್ರನದು ಮಾತ್ರ ಆಗಿತ್ತು. ಆಡಳಿತ ನಡೆಸಿದವರಲ್ಲಿ ಸಂಪೂರ್ಣ ರೈತನ ಪರವಾಗಿ ಯಾವುದಾದರೂ ಒಂದು ಪ್ರಭುತ್ವ ಬಂದಿದ್ದರೆ ಅದು ಬಲಿ ಚಕ್ರವರ್ತಿಯದು ಮಾತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಈತನ ಜನಪ್ರಿಯತೆ ಎಷ್ಟು ಮೇಲ್ಮಟ್ಟಕ್ಕೆ ಹೋಯಿತೆಂದರೆ ಸ್ವತಃ ದೇವೇಂದ್ರ ಕಂಗಾಲಾದ. ವಿಷ್ಣು ಜನರ ನೆನಪಿಂದ ದೂರ ಹೋದ. ಎಲ್ಲಿ ನೋಡಿದರಲ್ಲಿ ಬಲಿ ಚಕ್ರವರ್ತಿಯ ಗುಣ ಗಾನ. ರೈತರ ಮತ್ತು ಶ್ರಮಿಕರ ರಣೋತ್ಸಾಹ ಮೇರೆ ಮೀರಿತ್ತು. ಎಲ್ಲ ಕಡೆ ಇವರುಗಳ ಸುಖ ಸಮೃದ್ದಿ ಮನೆ ಮಾಡಿತ್ತು.

ಶ್ರಮ ಪಡದೆ ಕೇವಲ ಬುದ್ದಿ ಉಪಯೋಗಿಸಿ ಬದುಕು ಸವೆಸುತ್ತಾ ಸಕಲ ಗೌರವಾದರಗಳಿಗೆ ಪಾತ್ರರಾಗಿ ಇಡೀ ಸಂಪತ್ತನ್ನು ಕಬಳಿಸುತ್ತಿದ್ದ ವರ್ಗಗಳಿಗೆ ಕಡಿವಾಣ ಹಾಕಲಾಯಿತು. ರಾಜ್ಯಾದಾಯ ಶ್ರಮಿಕರ ಸಕಲ ಭಾಗವಹಿಸುವಿಕೆಯಿಂದ ಏರತೊಡಗಿತು. ಈತನ ಹೆಸರಲ್ಲಿ ದಿನವೂ ದೀಪಾವಳಿ. ಇಂತಹ ಬಲಿ ಚಕ್ರವರ್ತಿಯ ಆಳ್ವಿಕೆ ಮಾದರಿಯಾಗಬೇಕಿತ್ತು. ಆದರೆ ಈತನನ್ನು ಅರ್ಧಂಬರ್ಧ ಮಾತ್ರವಾಗಿ ಚಿತ್ರಿಸಲಾಯಿತು. ರಾಕ್ಷಸನ ಪಟ್ಟ ನೀಡಲಾಯಿತು. ಏಕೆಂದರೆ ಈತನಿಂದ ಉಪಯೋಗ ಪಡೆಯುತ್ತಿದ್ದ ರೈತ ವರ್ಗ ಅಕ್ಷರ ವಲಯದಿಂದ ಬಹುದೂರವಿತ್ತು. ಆ ಕಾರಣದಿಂದ ಬಲಿಚಕ್ರವರ್ತಿಯ ವ್ಯಕ್ತಿತ್ವ ತಿರುಚಲ್ಪಟ್ಟಿತು.,

ಬಲಿಯ ಬೆಳವಣಿಗೆಯಿಂದ ವಿಷ್ಣು ಮುಂತಾದವರಿಗೆ ತಲೆ ಸಂಪೂರ್ಣ ಬಿಸಿ ಮಾಡಿಕೊಳ್ಳುವ ವಾತಾವರಣ ನಿರ್ಮಿಸಲ್ಪಟ್ಟಿತು.. ಬಲಿ ಚಕ್ರವರ್ತಿಯ ಕಾಲದಲ್ಲಿ ದಿನವೂ ದೀಪಾವಳಿ ಹಬ್ಬ. ಬಲೀಂದ್ರ ಕೊಟ್ಟ ಸುಖ ಸಂಪತ್ತಿಗಾಗಿ, ಗೌರವ ಆದರಗಳಿಗಾಗಿ, ಸಾಮಾಜಿಕ ಮಾನ್ಯತೆಗಳಿಗಾಗಿ ರೈತರು ಬಲೀಂದ್ರನ ಹೆಸರು ಹೇಳದೆ ಊಟ ಮಾಡುತ್ತಿರಲಿಲ್ಲ. ಅವನ ಪೂಜೆ ಮಾಡುವುದು ನಿತ್ಯದ ಕೆಲಸವಾಯಿತು, ವಿಷ್ಣು ಮುಂತಾದ ದೇವತೆಗಳು ಬದಿಗೆ ಸರಿಯಬೇಕಾಯಿತು..

ಆರತಿ ತಟ್ಟೆ, ಮಂತ್ರ, ತಂತ್ರ, ವೇದಾಂತ ಹಿಡಿದುಕೊಂಡು ಬಂದವರಿಗೆ ಲಾಗಾಯ್ತಿನಿಂದ ಸಲ್ಲುತ್ತಿದ್ದ ಗೌರವ ಇಲ್ಲವಾಯಿತು. ಬೆವರಿಗೆ ಬೆಲೆ ಬರತೊಡಗಿತು. ಈ ಬೆಳವಣಿಗೆಯಿಂದ ಸ್ವತಃ ವಿಷ್ಣುವೇ ಚಕಿತನಾದ. ಈತ ಬೆಳೆಯದಂತೆ ಮಾಡುವ ಉಪಾಯಗಳು ಬಲಿಯತೊಡಗಿದವು. ಬಲೀಂದ್ರ ಬರುವುದಕ್ಕಿಂತ ಹಿಂದೆ ಇದ್ದ ರಾಜ ಮಹಾರಾಜರುಗಳ ಸಹಕಾರದಿಂದ ಕೊಬ್ಬಿದ್ದ ವರ್ಗ ಎಚ್ಚೆತ್ತುಕೊಂಡಿತು.. ಕೇಳಿದ್ದನ್ನೆಲ್ಲ ಕೊಡುವ ಧಾರಾಳತನದ ಬಲೀಂದ್ರನನ್ನು ಕೊನೆಗಾಣಿಸಲು ಇದೊಂದೆ ಗುಣ ಸಾಕಾಯಿತು.

ಕೇವಲ ಮೂರು ಮೆಟ್ಟು ಜಾಗವನ್ನು ಕೇಳಿ ಉಪಾಯವಾಗಿ ಸಂಹರಿಸಲಾಯಿತು. ಅಮಾನವೀಯವಾಗಿ ಕೊಂದ ರೀತಿಯಿಂದ ಇಡೀ ಭೂಮಂಡಲ ನಲುಗಿಹೋಯಿತು. ಲಾಗಾಯ್ತಿನಿಂದ ಪೂಜೆಗೊಳಗಾಗುತ್ತಿದ್ದ ದೇವಾನು ದೇವತೆಗಳು ಉಪವಾಸ ಬೀಳುವಂತಾಯಿತು. ಸ್ವತಃ ವಿಷ್ಣುವೇ ತನ್ನ ಜೀವಿತಾವಧಿಯಲ್ಲಿ ಈ ಪ್ರಮಾಣದ ಅಗೌರವಕ್ಕೆ ಪಾತ್ರನಾಗಿರಲಿಲ್ಲ. ಯುದ್ದದ ಎಲ್ಲ ನೀತಿ ನಿಯಮಾವಳಿಗಳ ಉಲ್ಲಂಘನೆಯ ದ್ಯೋತಕವಾಗಿ ನಿಲ್ಲುವ ಬಲಿಯ ಕೊಲೆಗೆ ಯಾವುದೇ ಸಮರ್ಥನೆಗಳು ದೊರೆಯಲು ಸಾಧ್ಯವಿರಲಿಲ್ಲ. ಆದರೆ ಹೇಗಾದರೂ ಮಾಡಿ ತನ್ನ ಮಾನ ಉಳಿಸಿಕೊಳ್ಳಲು ಜನ ಸಾಮಾನ್ಯರೊಡನೆ ರಾಜಿಯಾಗಬೇಕಾದ ಅನಿವಾರ್ಯತೆ ವಿಷ್ಣುವಿಗೆ ಉಂಟಾಯಿತು. ಬಲೀಂದ್ರನ ಮರಣದಿಂದ ಭೂಮಿ ಉತ್ತಿ ಬೆಳೆವ ರೈತ ತನ್ನ ಎಲ್ಲ ಕೆಲಸಗಳಿಗೆ ಇತಿಶ್ರೀ ಹಾಡಿ ಶೋಕ ಸಾಗರದಲ್ಲಿ ಮುಳುಗಿದ್ದರಿಂದ ಉತ್ಪಾದನೆ ಕುಂಠಿತವಾಗಿ ಸಮೃದ್ದಿ ಎಂಬುದು ಮರೀಚಿಕೆಯಾಯಿತು.

ಬಲಿ ಚಕ್ರವರ್ತಿಯ ಹತ್ಯೆಗೆ ಕಾರಣವಾದ ವರ್ಗ ನೇಗಿಲು ಎಂದರೆ ಏನು ಎಂಬುದು ತಿಳಿಯದ ವರ್ಗವಾಗಿತ್ತು. ಶೋಕ ಸಾಗರದ ಮಧ್ಯೆ ಇದ್ದ ವ್ಯವಸಾಯಗಾರರ ಮನ ಒಲಿಕೆ ಅನಿವಾರ್ಯವಾದುದರಿಂದ ವಿಷ್ಣು ಬಲಿಯ ನೆನಪು ಮಾಸದಂತಹ ಕೆಲವು ರಿಯಾಯಿತಿಗಳನ್ನು ನೀಡಿದನು. ಪ್ರತಿ ದೀಪಾವಳಿಯಲ್ಲಿ ಮೂರು ದಿನಗಳ ಕಾಲ ಪೂಜೆ ಸಲ್ಲಿಸುವ ಅವಕಾಶ ಅದರಲ್ಲೊಂದು.(ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸರ್ಕಾರ ಕೊಡುವ ಎರಡೋ ಮೂರೋ ಲಕ್ಷ ರೂಪಾಯಿಗಳ ಪರಿಹಾರವನ್ನು ಇದು ನೆನಪಿಸುತ್ತದೆ.) ಒಲ್ಲದ ಮನಸ್ಸಿನಿಂದ ಜನ ಒಪ್ಪಿದರು ಅಥವಾ ಒಪ್ಪಿಸಲಾಯಿತು. ಬಲಿ ಚಕ್ರವರ್ತಿಯ ಕಾಲದಲ್ಲಿ ಸುಖ ಸಮೃದ್ದ ಸ್ಥಿತಿಯಲ್ಲಿದ್ದ ರೈತ ವರ್ಗ ಆ ನಂತರ ಸತತ ಅರೆ ಹೊಟ್ಟೆಯ, ಬಾಗಿದ ಬೆನ್ನಿನ, ಅರ್ದಾಯುಷ್ಯದ, ದಟ್ಟ ದಾರಿದ್ರ್ಯದ ವರ್ಗವಾಗಿ ಹೊರ ಹೊಮ್ಮಿದ್ದು ಇಂದಿನವರೆಗೂ ಏಳಲೇ ಇಲ್ಲ. ಅಲ್ಲಿಂದ ಪಾರ್ಶ್ವವಾಯು ಪೀಡಿತ ಅಭಿವೃದ್ದಿಯೇ ಅಭಿವೃದ್ದಿ ಎಂದು ಬಿಂಬಿಸುವ ಕೆಲಸ ನಿರಂತರವಾಗಿ ನಡೆಯಿತು.ಇಂದೂ ಅದೇ ನಡೆಯುತ್ತಿದೆ.

ಬಲಿ ಚಕ್ರವರ್ತಿಯ ಅವಗಣನೆಗೆ ಆಳುವ ವರ್ಗ ಮಾತ್ರ ಕಾರಣವಲ್ಲ. ಸತತ ಮೂರುದಿನಗಳ ಕಾಲ ಪರಿಕರಗಳ ರೂಪಕಗಳೊಂದಿಗೆ ಪೂಜೆಗೊಳಗಾಗುತ್ತಿದ್ದವ ಒಂದು ದಿನಕ್ಕೆ ಇಳಿದಿದ್ದಾನೆ. ರೈತ ತನ್ನ ಬೇಕು ಬೇಡಗಳಿಗೆ ತನ್ನ ಪೂರ್ವಜರ ಆಚರಣೆಗಳಲ್ಲಿ ಪರಿಹಾರ ಹುಡುಕಿಕೊಳ್ಳುತ್ತಿಲ್ಲ. ಪಂಚಾಂಗದ ಮೊರೆ ಹೋಗುತ್ತಿದ್ದಾನೆ. ಮನೆಯಲ್ಲಿ ಬಿದ್ದ ಹೆಣ ತೆಗೆಯಲೂ ಮುಹೂರ್ತ ಹುಡುಕಿ ಕೊಡಿ ಎಂದು ಪುರೋಹಿತರ ಮನೆಯ ಬಾಗಿಲಲ್ಲಿ ಜೋತುಕೊಂಡಿರುವ ದೃಷ್ಯ ಎಲ್ಲ ಕಡೆ ಇದೆ. ಹೊಸ ಹೊಸ ದೇವರುಗಳು ಹುಟ್ಟಿಕೊಂಡಿವೆ. ಮಂಗಳವಾದ್ಯಗಳೊಂದಿಗೆ ಗರಿ ಗರಿ ಬಿಳಿ ಬಟ್ಟೆಯವರು ಉದ್ದುದ್ದ ಆರತಿ ತಟ್ಟೆಗಳ ಜ್ವಾಜಲ್ಯಮಾನವಾದ ಜ್ಯೋತಿಗೆ ಮರುಳಾಗುವ ಕಾಲ  ಇದು. ಇಂದು ಬಲಿ ಚಕ್ರವರ್ತಿ ಯಾರ ಕಾರಣ್ಕಾಗಿ ಗದ್ದುಗೆ ಕಳೆದುಕೊಂಡು ಪಾತಾಳ ಸೇರಿದನೆಂಬ ವಿಷಯದ ನೆನಪು ಮರೆಯಾಗುವ ಕಾಲಘಟ್ಟ..

ಆದರೆ ಕೇರಳದ ಜನ ತಮ್ಮ ಹಬ್ಬದಲ್ಲಿ ಬಲಿಯನ್ನು ‘ವಿಲನ್’ ಮಾಡುವ ಹುನ್ನಾರಗಳಿಗೆ ಲಾಗಾಯ್ತಿನಿಂದಲೂ ಪ್ರತಿರೋಧ ಒಡ್ಡುತ್ತಲೇ ಬರುತ್ತಿದ್ದಾರೆ.

One Response

  1. Anonymous
    October 29, 2016

Add Comment

Leave a Reply