Quantcast

ಕಣ್ಣಿಗೆ ಮಣ್ಣೆರಚುವ ಸಂಪಾದಕರು ಬೇಕಾಗಿದ್ದಾರೆ..

t k tyagarajಟಿ.ಕೆ.ತ್ಯಾಗರಾಜ್

ಕನ್ನಡ ಸುದ್ದಿ ವಾಹಿನಿಯೊಂದಕ್ಕೆ

ಪ್ರಧಾನ ಸಂಪಾದಕರು ಬೇಕಾಗಿದ್ದಾರೆ

ಮಾರ್ಕೆಟಿಂಗ್ ನಲ್ಲಿ ಅನುಭವ ಇರುವವರಿಗೆ ಆದ್ಯತೆ. ಕನ್ನಡ,ಇಂಗ್ಲಿಷ್ ಭಾಷೆ ಅರ್ಧಂಬರ್ಧ ಅಂದರೆ ಕಂಗ್ಲಿಷ್ ಬಂದರೆ ಸಾಕು. ಪತ್ರಿಕೋದ್ಯಮ ಅನುಭವ ಇರುವವರು ಅರ್ಜಿ ಸಲ್ಲಿಸುವಂತಿಲ್ಲ. ವೃತ್ತಿ ನಿಷ್ಠೆ, ಆದರ್ಶ, ಪುರೋಗಾಮಿ ಚಿಂತನೆ, ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ದಲಿತ ಪ್ರಜ್ಞೆ, ಶೂದ್ರ ಪ್ರಜ್ಞೆ, ಪ್ರಗತಿಪರ ಆಲೋಚನೆ, ರೈತ ಪರ, ಮಹಿಳಾ ಪರ, ಹೋರಾಟ ಹಿನ್ನೆಲೆ ಇರುವವರನ್ನು ಖಂಡಿತ ಪರಿಗಣಿಸಲಾಗುವುದಿಲ್ಲ. ಸಂಸ್ಥೆಯ ನಿಲುವು ಅರ್ಥ ಮಾಡಿಕೊಂಡು ಸಂದರ್ಶನ, ಚರ್ಚೆ ಮೊದಲಾದ ಕಾರ್ಯಕ್ರಮಗಳಲ್ಲಿ ಸಂಬಂಧಪಟ್ಟ ವಿಷಯ ಕುರಿತು ಹೇಳಬೇಕಾದ್ದನ್ನೆಲ್ಲ ನೀವೇ ಹೇಳಿ, ಅತಿಥಿಗಳು,”ಹೌದು ಅಥವಾ ಇಲ್ಲ” ಎಂದು ಹೇಳಿಸುವಲ್ಲಿ ಯಶಸ್ವಿಯಾಗುವವರಿಗೆ ಪ್ರಾಧಾನ್ಯ ನೀಡಲಾಗುವುದು.

breaking-newsವಾಹಿನಿಯ ಯಾವುದೇ ಕಾರ್ಯಕ್ರಮದಲ್ಲಿ ಭಗವಾನ್ ಬುದ್ಧ, ಜೀಸಸ್, ಮೊಹ್ಮದ್ ಪೈಗಂಬರ್, ಮಹಾತ್ಮಾ ಗಾಂಧಿ, ಅಂಬೇಡ್ಕರ, ಪೆರಿಯಾರ್ ರಾಮಸ್ವಾಮಿ ನಾಯ್ಕರ್, ನಾರಾಯಣಗುರು, ಸ್ವಾಮಿ ಧರ್ಮತೀರ್ಥ, ಬಸವಣ್ಣ, ಲೋಹಿಯಾ ಸೇರಿದಂತೆ ಮಹಾನ್ ಮಾನವತಾವಾದಿಗಳು, ಜನಪರ ಚಿಂತಕರು, ಸುಧಾರಣಾವಾದಿಗಳ ನಲ್ನುಡಿಗಳನ್ನು ಬಳಸುವಂತಿಲ್ಲ.

ಅಕಸ್ಮಾತ್ ಅತಿಥಿಗಳು ಇಂಥವರ ಹೆಸರು ಅಥವಾ ನಲ್ನುಡಿಗಳನ್ನು ಬಳಸಿದರೆ ಜಾಣತನದಿಂದ ವಿಷಯ ಡೈವರ್ಟ್ ಮಾಡುವ ಕಲೆ ಅರಿತಿರಬೇಕು.

ಪ್ರೇಮಿಸಿ ಮದುವೆಯಾಗಿ ತೊಂದರೆಗೆ ಸಿಕ್ಕಿಕೊಂಡ ಯುವ ಜೋಡಿಯನ್ನು “ಓಡಿ ಹೋದವರು” ಅಥವಾ “ಓಡಿ ಬಂದವರು” ಎಂದು ಚಿತ್ರಿಸಿ ಅವರು ಬಸ್, ಕಾರ್ ಅಥವಾ ಯಾವುದೇ ವಾಹನದಲ್ಲಿ ಬಂದಿದ್ದರೂ ಅದನ್ನು ಮರೆಮಾಚಿ ವೀಕ್ಷಕರಿಗೆ ಪ್ರಚೋದನೆ ನೀಡುವಂತೆ ದಿನವಿಡೀ ಕಾರ್ಯಕ್ರಮ ಪ್ರಸಾರ ಮಾಡುವ ತಾಖತ್ತು ಇರಬೇಕು. ಹಾಗೊಂದು ವೇಳೆ ವೀಕ್ಷಕರಿಗೆ ವಾಕರಿಕೆ ಬಂದು ವಾಂತಿ ಮಾಡಿಕೊಂಡರೂ ತಲೆ ಕೆಡಿಸಿಕೊಳ್ಳುವ ಮನೋಸ್ಥಿತಿಯಿಂದ ದೂರ ಇರಬೇಕು.

ಗಂಡ ಹೆಂಡಿರ ಜಗಳವನ್ನೂ ಜಗಜ್ಜಾಹೀರು ಮಾಡಿ ಇದೊಂದು ಸಾಮಾಜಿಕ ಪಿಡುಗೆಂಬಂತೆ ಬಿಂಬಿಸಿ ಕಾರ್ಯಕ್ರಮ ನೋಡಿದ ಯುವಜನತೆ ಮದುವೆಯಾಗುವ ಬದಲು ಇಡೀ ದಿನ ನಮ್ಮ ವಾಹಿನಿಯನ್ನೇ ನೋಡುವಂತೆ ಮಾಡಬೇಕು.

ಪ್ರಧಾನ ಸಂಪಾದಕ ಹುದ್ದೆಗೆ ಅರ್ಜಿ ಹಾಕುವವರು ಸ್ವತಃ ಜ್ಯೋತಿಷಿಯಾಗಿದ್ದರಂತೂ ಪ್ಲಸ್ ಪಾಯಿಂಟ್. ದಿನಾ ಬೆಳಗೆದ್ದು ಜ್ಯೋತಿಷ್ಯ ನೋಡಿ ತಮ್ಮ ಭವಿಷ್ಯದ ಬಗ್ಗೆ ಗಾಬರಿ, ಆತಂಕ ಎದುರಿಸುವ ಜನರನ್ನು ಭಾರತದ ಯಾವ್ಯಾವುದೋ ಮೂಲೆಯಲ್ಲಿರುವ ದೇವಾಲಯಗಳು, ಗಡ್ಡ ಬಿಟ್ಟಿರುವುದರಿಂದಲೇ ಸಂತರಾಗಿರುವವರನ್ನು ಸಾಲ ಮಾಡಿಯಾದರೂ ಹುಡುಕಿಕೊಂಡು ಹೋಗುವಂತೆ ಮಾಡಬೇಕು. ಆ ಮೂಲಕ ದೇವಾಲಯಗಳ, ಪುರೋಹಿತರ ಆದಾಯ ಹೆಚ್ಚಿಸುವ ರೀತಿಯಲ್ಲಿ ಪ್ರೇರೇಪಿಸಬೇಕು.

ಮಾರಮ್ಮ ದೇವಾಲಯಗಳು, ಮುನೇಶ್ವರ ದೇವಾಲಯಗಳು ಇದೆ ಎಂಬುದನ್ನೂ ಮರೆಯುವಂತೆ ನಿರಂತರವಾಗಿ ಮಂತ್ರಾಲಯ, ತಿರುಪತಿ ಇವೇ ಮೊದಲಾದ ದೇವಾಲಯಗಳ ಕಡೆಗೇ ಜನರ ಮನಸ್ಸು ವಾಲುವಂತೆ ಮಾಡುವಲ್ಲಿ ನಿಷ್ಣಾತರಾಗಿರಬೇಕು.ಇಂಥ ದೇವಾಲಯಗಳಲ್ಲಿ ಯಾರಿಗೂ ಅರ್ಥವಾಗದ ಸಂಸ್ಕೃತ ಶ್ಲೋಕಗಳ ದಾಳಿ ನಡೆಸುತ್ತಿದ್ದರೂ ಅದರ ಬಗ್ಗೆ ಚಕಾರ ಎತ್ತದೇ ಚರ್ಚ್ ಗಳಲ್ಲಿ ಕನ್ನಡ ಪ್ರಾರ್ಥನೆಗಾಗಿ ಒತ್ತಾಯಿಸುವಂತೆ ಇನ್ನೊಂದು ಧರ್ಮದ ಜನರನ್ನು ಭಾಷೆಯ ಆಧಾರದ ಮೇಲೆ ಒಡೆಯಬೇಕು.

television in streetಸನಾತನ ಧರ್ಮದ ಜತೆ ಜಾತಿ ಶ್ರೇಷ್ಠತೆ ಎಂಬ ಭ್ರಮೆ ಬಿತ್ತುವ ಕೆಲಸವನ್ನು ಸದ್ದಿಲ್ಲದೇ ನಿರ್ವಹಿಸಬೇಕು. ಒಂದೇ ರೀತಿಯ ತಪ್ಪೆಸಗುವ ವ್ಯಕ್ತಿಗಳಲ್ಲಿ ಯಾರನ್ನು ನಿರ್ಲಕ್ಷಿಸಬೇಕು, ಯಾರ ವಿರುದ್ಧ ಸೆಲೆಕ್ಟೀವ್ ಅಟ್ಟ್ಯಾಕ್ ಮಾಡಬೇಕು ಎಂಬ ತಾರತಮ್ಯ ಪ್ರಜ್ಞೆ ಸದಾ ಜಾಗೃತವಾಗಿರಬೇಕು.

ತಪ್ಪಿತಸ್ಥರು ಪ್ರಬಲರಾಗಿದ್ದರೆ ಅವರನ್ನು ಮನ್ನಿಸುವ ವಿಶಾಲ ಹೃದಯ ನಿಮ್ಮಲ್ಲಿರಬೇಕು. ಹುಟ್ಟಿನಿಂದಲೇ ಜಾತಿ ಶ್ರೇಷ್ಠತೆ ಪಡೆದ ವ್ಯಕ್ತಿ ಯಾವುದೇ ಪಕ್ಷದಲ್ಲಿದ್ದರೂ ಅವನೊಬ್ಬ ರಾಷ್ಟ್ರೀಯ ನಾಯಕನೆಂದೂ, ಉಳಿದ ವ್ಯಕ್ತಿಗಳು ಅದೆಷ್ಟೇ ಕ್ರಿಯಾಶೀಲರಾಗಿದ್ದರೂ, ಪ್ರಾಮಾಣಿಕರಾಗಿದ್ದರೂ, ದಕ್ಷರಾಗಿದ್ದರೂ, ದಿಟ್ಟರಾಗಿದ್ದರೂ ಅವರನ್ನು ಒಂದು ಜಾತಿಗೆ ಸೇರಿದ ನಾಯಕನೆಂದು ವೀಕ್ಷಕರಿಗೆ ಮನವರಿಕೆ ಮಾಡಿಕೊಡಬೇಕು. ಅಲ್ಪಸಂಖ್ಯಾತರಾಗಿದ್ದರಂತೂ ಅವರು ಯಾವುದೇ ರೀತಿಯಲ್ಲಿ ಉನ್ನತ ಸ್ಥಾನ ಪಡೆಯದಂತೆ ಸಂಚು ರೂಪಿಸುವ ಸಾಮರ್ಥ್ಯ ನಿಮಗಿರಬೇಕು.

ಸನಾತರು ನಡೆಸುವ ಭಯೋತ್ಪಾದನೆಯನ್ನು ಅದೊಂದು ಪವಿತ್ರ ಧರ್ಮೋತ್ಥಾನ ಪ್ರಕ್ರಿಯೆ ಎಂದು ಭಾರತೀಯರನ್ನು ನಂಬಿಸುವ ಚಾಕಚಕ್ಯತೆ ನಿಮ್ಮಲ್ಲಿರಬೇಕು.

ಯಾವುದೇ ಕಾರಣಕ್ಕೂ ಸ್ವಲ್ಪವಾದರೂ ಜನಪರವಾಗಿರುವ, ಘನತೆ ಕಾಪಾಡಿಕೊಂಡಿರುವ ರಾಷ್ಟ್ರೀಯ ಇಂಗ್ಲಿಷ್ ವಾಹಿನಿಗಳನ್ನು ನೋಡುವುದಾಗಲೀ, ಅನುಸರಿಸುವುದಾಗಲೀ ಮಾಡುವಂತಿಲ್ಲ. ಈ ಎಲ್ಲ ಅರ್ಹತೆ, ಪ್ರತಿಭೆ ನಿಮ್ಮಲ್ಲಿದ್ದರೆ ಕೂಡಲೇ ಅರ್ಜಿ ಹಾಕಿಕೊಳ್ಳಬಹುದು. ಹಾಗೆಂದು ಈ ಸಂಸ್ಥೆ ಯಾವುದೇ ಕಾರಣಕ್ಕೂ ಜಾತಿ, ಧರ್ಮ ತಾರತಮ್ಯ ಮಾಡುವುದಿಲ್ಲ. ಹುಟ್ಟಿನಿಂದ ದಲಿತ, ಶೂದ್ರ, ಮುಸ್ಲಿಂ, ಕ್ರೈಸ್ತ ಯಾವುದೇ ಸಮುದಾಯಕ್ಕೆ ಸೇರಿದ್ದರೂ ಈ ಎಲ್ಲ ಅರ್ಹತೆಗಳಿರುವ ಯಾರು ಬೇಕಾದರೂ ಅರ್ಜಿ ಸಲ್ಲಿಸುವ ಅವಕಾಶ ಇದೆ.

Add Comment

Leave a Reply