Quantcast

ಕರುಳುಬ್ಬರದ ಹೊಂಬೆಳಕು..

h-r-sujatha2-300x290ಹೆಚ್ ಆರ್ ಸುಜಾತಾ

ಮಾರಮ್ಮನ ಸಣ್ಣ ಗುಡಿ. ಮುಂದೆ ದಪ್ಪನೆ ಸೌದೆ ಕೊರಡಿನ ಬೆಂಕಿ ಸಣ್ಣಗೆ ಮಂಗಳಾರತಿಯಂಗೆ ಉರಿಯುತ್ತಾ, ಸೌದೆ ತುದೀಲಿ ಹೊಗೆ ಆಡೋ ಹೊಗೆ ಅನ್ನದು ವಣಗಿದ ಹೊಟ್ಟೆಲಿ ಇಷ್ಟು ದಿನ ಮುಚ್ಚಿಟ್ಟಿದ್ದ ಮರದ ಸುವಾಸನೆ ಜತಿಗೆ ಧೂಪಾರತಿಯಂಗೆ ಮೇಲೇಳ್ತಾ ಇತ್ತು. ಗುಡಿ ಮುಂದಿನ ಸಂಪಿಗೆ ಮರ, ಜತೆಲಿದ್ದ ಗೋಣಿಮರ ಎರಡೂವೆ ಹೊದ್ದಿದ್ದ ಮಂಜಿನ ಮುಸುಕ ಚೂರುಚೂರೆ ವಕ್ಕಡಿಂದ ಅರುಗ ಮಾಡತಾ ಮಾಡತಾ ತನ್ನ ಹೊದಿಕೆ ವಳಿಕೆ ಸಣ್ಣಗೆ.

ಬಿಸ್ಲುಕೋಲ ಬೀಳಸ್ಕಂತಾ ಮೈ ಕಾಯಸ್ತಾ ಇತ್ತು. ರಾತ್ರಿ ನಿದ್ದಗಣ್ಣಲ್ಲೂ ಕನವರುಸ್ತಲೇ, ಅವರಪ್ಪದೀರು ಆಲೂರ ಪ್ಯಾಟಿಂದ ಕೈಲಿ ಹಿಡಕಬಂದು ಕೊಟ್ಟ ಪಟಾಕಿಯ ಜೇಬಲ್ಲಿ ತುಂಬಕಂದು ತಂದಿರೊ ಊರ ಸಣ್ಣ ಮಕ್ಕಳು ಆ ಎಳೆ ಬಿಸ್ಲಲ್ಲಿ ಅಲ್ಲಿ ಬಂದು ನಿಂತಿದ್ವು. ಸ್ನಾನ ಮಡಿ ಹಂಗಿರಲಿ. ಎದ್ದು ಒಂದಕ್ಕೆ ಹೋಗದನ್ನೂ ಮರ್ತು, ಊರ ಮುಂದಿನ ಬೆಂಕಿ ಸುತ್ತ ಅವು ಸೇರಿದ್ವು. ಇದು ಊರಿನ ಕಟ್ಟುಕಟ್ಲೆನೂ ಆಗಿತ್ತು ಅನ್ನಿ. ಊರ ತುಂಬ ಹುಲ್ಲ ಮನೆ, ಮನೆಮನೆ ಹಿತ್ಲಲ್ಲೂ ಹುಲ್ಲಕೊಣಬೆ, ಸೌದೆ ಗುಡ್ಲು, ಅದರ designವತ್ತಿಗೆ ಇಟ್ಟು ಬೆಂಕಿ ಉರಿಯೋಂಗೆ ಮಾಡೊ ಅಂಥ ಬೆರಣಿ ವಟ್ಲು, ಗದ್ದೆ ಉಳೋ ಮರದ ನೇಗ್ಲು, ನೊಗ ಮಿಣಿ, ದನದ ನಾರಿನ ಹಗ್ಗ, ಇಂಗೆ ಊರಿನ ಬಾಳಾಟೆಲ್ಲಾ ಇಂಥ ಬೆಂಕಿನ ಕರೆಯೊ ಕರುಣೆಯಾ… ಒಡ್ಲಲ್ಲಿ ಹೊತ್ತ್ಕಂಡಿರೊ ಅಂಥವೇ ಆಗಿದ್ವು. ಅದಕ್ಕೆ ಈ ಊರು ಅನ್ನದು ಏನ್ ಮಾಡದು? ಊರೊಟ್ಟಿನ ಬೆಂಕಿ ಹೊತ್ಸಿ ಊರವ್ವನ ಗುಡಿ ಮುಂದೆ ಮಕ್ಕಳ ಆಡಕಳಕೆ ಬುಡದು. ಊರನ್ನೂ ಬೆಂಕಿ ಒಡ್ಲಿಂದ ದೂರ ಇಡದು.

ಮಕ್ಕಳು ಕಣ್ಣುಜ್ಜಕಂದು ಎದ್ದಿದ್ದೆ ಅವ್ರವ್ವದೀರು ಅಕ್ಕದೀರು ನೀರು ಉಯ್ಕಳಕೆ ಕರಿತಿರೋದು ರಾಗವಾಗಿ ಕಿವಿಗೆ ಬಿದ್ರೂ ಬೀಳದಿರಂಗೆ ಜಾಣಗಿವುಡ ಮಾಡಕಂದು, ಅವವೆಯ ಕಚ್ಚಾಡತಾ, ಬಳ್ಳುಳ್ಳಿ ಪಟಾಕಿ, ತಲೆ ಹೇನ ಕುಕ್ಕೋವಾಗ ಚಟಗುಡೋ ಹಂಗೆ ಚಟಗುಡೋ ಮದ್ದಿನ ಪಟ್ನ, ಅದನ್ನ ನೆಲಕ್ಕೆ ಕುಟ್ಟೋ ಕಲ್ಲು, ಚಿನುಕುರಳಿ ಪಟಾಕಿ, ಮೂರು ಮೂಲೆ ಪಟಾಕಿ ಒಂದಾ? ಎರಡಾ?  ಹಿಂಗೆ ಕಚ್ಚಾಡಕಂಡು ಹೊಡದಾಡ್ಕಂಡು ಪಟಾಕಿ ಹಚ್ಚತಿರವು. ಸಾಲದು ಅಂತ ಅವು ಸಣ್ಣಮಕ್ಕಳ ಕೈಲಿರೋ ಪಟಾಕಿಯ ಕದ್ದು ಎಗ್ಗರಿಸಿದ ತಕ್ಷಣಲೆ, ಚಡ್ಡಿನೂ ಹಾಕ್ಕಳದೆ ಅವರ ಅಣ್ಣದೀರ ಜತಿಲಿ ಬಂದಂಥ ಸಣ್ಣ ಹುಡ್ಲು ಜೋರಾಗಿ ವಾಲಗ ಊದಕಂಡು ಮನೆ ಕಡೆಗೆ ಅವ್ರವ್ವದೀರ್ಗೆ ದೂರ ಹೇಳಕ್ಕೆ ನೆಲಕ್ಕೆ  ಕೈ ಕಾಲ ವದರತಾ, ಬಯಲಾಟದ ಒಂದು ಕುಣಿತವ ಕುಣಕಂದು ಹೋಗವು.

ಕೈ ತುಂಬ ಕೆಲ್ಸ ಹಿಡದಿರ ಅವ್ರ ಅವ್ವದೀರು ಈಗ ಕಿವುಡ್ರಂಗೆ ಇರರು. ಮನೇಲಿರೊ ಅಜ್ಜಮ್ಮದೀರು ಇವ್ರ ಪರ ಕಟ್ಟ್ಕಂದು ಊರ ಮುಂದಕ್ಕೆ ಬಂದು ದೊಡ್ಡ ಹುಡ್ಲ ಗದ್ರುಸಿ, ಸಣ್ಣ ಮಕ್ಕಳ ಅಳ ನಿಲ್ಲುಸಿ, ” ಬಾರವ್ವಾ, ನೀನು ಈ ಪಾಪ್ರ ನನ ಮಕ್ಕಳು ಕುಟೆ ಆಡ್ಬೇಡ. ನೀರು ಹುಯ್ಕಳವಂತೆ” ಅಂದು ಎಳೆ ಕರಗಳ ಕಂಕಳಿಗೆ ಏರುಸಿ, ಗೊಣ್ಣೆ ತೆಗುದು ಬೇಲಿ ಮ್ಯಾಕೆ ಎಸುದು, ಸೆರಗಲ್ಲಿ ಕಣ್ಣೊರಸಿ, ಬಾಯಿಗೆ ಮುತ್ತ ಕೊಟ್ಕಂಡು, ಹೋಗರು. ಅಂಗೆ ತೊಡೆ ಸಂದಿಯ ಬುಲ್ಲಮರಿನೂ ಹಿಡಕಂದು ಮುತ್ತ ಕೊಟ್ರೆ ಮಗ ಅಂಗೆ ಹೊತ್ನಂತೆ ಗುಡ್ಡದ ಮರೇಲಿ ಹುಟ್ಟೋ ಸೂರ್ಯಂಗಿಂತ ಹೆಚ್ಚಾಗಿ ನಾಚ್ಕಂತ ಅಜ್ಜಿ ಸೆರಗಿನ ಮರೆಲಿ ನಗಾಡದು.

ದೀವಳಿಗೆ ಹಬ್ಬದ ದಿನ ಊರಿನ ಇಂಥ ಸಣ್ಣ ಸಣ್ಣ ಸುಖ ಕಂಡ ಮಾರವ್ವಾ ಕಲ್ಲಂಗೆ ಕುಂತಿದ್ರೂವೆ, ಊರ ಮುಂದೆ ಮಕ್ಕಳಿಗೆ ಬೆಂಕಿ ಹಚ್ಚಿಕೊಟ್ಟು, ಊರ ಗುಡಿ ಮುಂದಿರೊ ಒಂದು ಕಣಗಲ ಹೂವ ತನ್ನ ತಲೆ ಮೇಲೆ ಮೇಲಿಟ್ಟು, ಹೆಳವ ಅನ್ನೋ ಊರ ಕುಳವಾಡಿಯ ಕೈಲಿ ಹೊತ್ತಿಸಿದ್ದ ದೀಪದ ಅಂಗೈಯೊಳಗೆ ಎಣ್ಣೇಲಿ ತೇಲಾಡತಾ ಈಜಾಡತಾ ಬತ್ತಿ ತುದಿಲಿ ತನ್ನ ನಗೆಯ ಹರಿ ಬಿಡೋಳು. ಅತ್ತಲಾಗೆ ಇತ್ತಲಾಗೆ ಒಡ್ಡಾಡೋ ದೊಡ್ಡೊರು ಚಿಕ್ಕೋರೆಲ್ಲಾ ದೀಪ ನೋಡಿ ಊರವ್ವನ ಕಣ್ಣಲ್ಲಿ ಕಣ್ಣಿಟ್ಟು ಸಮಾಧಾನ ಆಗರು.

ಅಲ್ಲಿಗೆ ನೀರು ಹುಯ್ಕಂದು ಹೊಸ ಬಟ್ಟೆ ಇಕ್ಕಂದು ಬಂದ ಪಡ್ಡೆ ಹುಡ್ಲು, ಗರ್ನಾಲು, ಲಕ್ಷಮಿ ಪಟಾಕಿ, ಸರಪಟಾಕಿ, ಮದ್ದು ಕಲಸ್ಕಂದು ತಾವೆ ಮಾಡಕಂದಿರೊ ಬಿದ್ರು ಕೊಳವೆಲಿ ಹೊಡ್ಯೋ ತುಪಾಕಿ, ಇಂಗೆ ‘ಭಡ್ ಭಡ್ನೆ’ ಹೊಡಿತಿದ್ರೆ ಎಲ್ರೂ ದೂರ ದೂರ ಹೋಗಿ ಕಿವಿಯ ಮುಚ್ಕಳ್ಳರು. ಇದು ಪಟೇಲ್ರು ಮನೆ ಕಿಟ್ಟಂದು, ಇದು ಕಳಾಜಿ ಹುಡಗಂದು, ಇದು ಹೊಲಗೇರಿ ಹಲಗನ ಹುಡಗಂದು ಅಂಥ ಅವು ಮಾಡೋ ಸದ್ದಲ್ಲೇ, ಗುರುತು ಹಿಡದು ಒಳಗಿಂದ ಹೆಂಗಸ್ರೂವೆ ಒಂದು ಗಳಿಗೆ ಬಂದು ಮೆಟ್ಲ ಮೇಲೆ ನಿಂತು ನೋಡಿ ಹೋಗರು.

ಅಲ್ಲೆ ಓಡಾಡೊ ಹೆಳವನ ಮನೆ ಗಂಡುಹುಡ್ಲು ಉರಿಕೊಂಟ ಮುಂದಕ್ಕೆ ನೂಕುತಾ ಇರರು. ಅವರಪ್ಪ ಬಿಡುವಿಲ್ಲದ ಹಂಗೆ ತರೊ ಉತ್ರಾಣಿಕಡ್ಡಿ, ಉಗನಿ ಅಂಬು, ಅಂಕಾಲೆ ಸೊಪ್ಪು, ಹಲಸಿನ ಸೊಪ್ಪು, ಮಾವಿನ ಸೊಪ್ಪು, ಅಣ್ಣೆಹೂವಿನ ಗೊಂಡೆ, ಹಿಂಗೆ ಐದಾರು ಥರದ ಸೊಪ್ಪಿನ ಕಟ್ಟನ್ನು ಗಂಟುಕಟ್ಟಿ ಕೊಟ್ಟಿದ್ದ ಎಲ್ರ ಮನೆತಕೆ ಹೋಗಿ ಮನೆ ಮನೆ ಸೂರಿನ ನಿಲುವಿಗೆ ಸಿಕ್ಸಿ ಬರವ್ರು. ಮೂರುದಿನ ಆದ ಮ್ಯಾಕೆ ಅದ ತಗಹೋಗಿ ತಿಪ್ಪಿಗೆ ಎಸದುಬರಬೇಕು. ಇದು ಊರಿಗೆ ತಿಪ್ಪಮ್ಮನ ಹಬ್ಬ.

ಹಿಂದಲ ದಿಸಲೆ ಕೋಳಿ ಕೆರ್ದೂ ಕೆರ್ದೂ ಯಾವಾಗಲೂ ಹಲ್ಲ ಗಿರಚ್ಕಂದಿರೋ ತಿಪ್ಪೆಯ ಗುದ್ಲಿಲಿ ಎಳುದು ದುಂಡೂರಕ್ಕೆ ಮುಚ್ಚಿ, ದಪ್ಪಗೆ ಸಗಣಿಲಿ ಸಾರಿಸಿರರು. ಸಂಜೆ ಮುಂದೆ ಮನೆ ಪೂಜೆ ಮಾಡಿ ಮುಗದ ಮೇಲೆ ಇಲ್ಲಿ ಬಂದು ಕುಂತ್ಕಳ ತಿಪ್ಪಮ್ಮ ಅಲ್ಲೆ ಕುಂತು ಅವಳೆಡೆಯ ಉಂಡು ‘ನನ್ನ ಮೈ ಕರಗಿ ನಿಮ್ಮ ಮಳೆಬೆಳೆ ಸಮ್ರುದ್ಧಿಯಾಗಲಿ ನನ ಮಕ್ಕಳೆ. ನನ್ನಕರುಳುಬ್ಬರದಲ್ಲಿ ನಿಮ್ಮ ಬೆಳೆ ಹೆಚ್ಚಿ ನಿಮ್ಮನೆ ಹೊಂಬೆಳಕಾಗಲಿ, ಸಂದೂಬೈಗೂ ಗೇದು ಉಣ್ಣೋ ನನ್ ಮಕ್ಳೆ’  ಅಂತವ ಆ ಗಳಿಗೇಲೆ ವರ ಕೊಟ್ಟು, ಆ ತಿಪ್ಪೆ ಅನ್ನೋ ಕಸದ ರಾಶೀಲಿ ಕರಗೋಗಳು. ಎರೆಹುಳಿನಂಗೆ ಹೊಸಮಣ್ಣಿನ ಪದರವ ತನ್ನ ಮೈ ಬೆವರಲ್ಲಿ ಆಚಿಗೆ ಹಾಕೋಳು. ಇನ್ನು ಬೆಳಿಗ್ಗೇಲೆ ದನಗಳ ಅಟ್ಕಹೋಗಿದ್ದೆ ಕೆರೆ ನೀರಿನ ತುಂಬಲೂ ತುಂಬಹೋಗಿರೊ ದನಗಳ ಕುಟೆ ಈಜಕ್ಕೆ ಬುಟ್ಟು ಬುಡರು.

 

ನೀರಲೆ ಮ್ಯಾಕೆ ಕತ್ತನ್ನ ವದೆ ಕೊಟ್ಟುಕೊಂಡು, ಮುಸುಡಿ ಮ್ಯಾಗ್ಮುಂದಾಗಿ ಎತ್ತಕೋಂಡು, ಈಜು ಬೀಳೋ ದನಗಳ ನೀರಲ್ಲಿ ನೋಡಬೇಕು ನೀವು, ಏನು?… ಅದರ ಚೆಂದವಾ? ಕೆರೆನೆ ಅಲ್ಲಡಿಸಿ ಅದುಕ್ಕೇ… ಭಯ ಬೀಳಂಗೆ ಮಾಡತಿರ್ತಾವೆ. ಅವ ಹಿಡಿಯಾಕಾಗದೆ ಅದರ ಬಾಲ ಹಿಡದು ತಿರುಚಿ, ಪಶುಗಳಿಗೆ ಪರಮ ಶಿಕ್ಷೆಕೊಟ್ಟು ಮಕ್ಕಳಿಗೆ ಹಿವಚೆಲಿ ನೀರ ಹೂದಂಗೆ, ದನಗಳ ಮೈ ತೊಳ್ಕಬರಬೇಕು. ರೋಸು ರೊಂಡೆ ಎಲ್ಲನೂ  ಕೆರೆ ನೀರಲ್ಲಿ ಹರಿಬುಟ್ಟಿದ್ದೆ

ತಗ, ಎಳೆಬಿಸಲಲ್ಲಿ ಕೆರೆದಾರಿಲಿ ಹೊಸ ಮದ್ಲಿಗಿತ್ತಿ ಮದವಣ್ಣ ದಿಬ್ಬಣದಲ್ಲಿ ಲಕಲಕಾಂತ ಬಂದಂಗೆ ಬಂದು ದನ ಕರ ಕುರಿಮರಿ ಸೈತಾ ಮನೆ ಕೊಟ್ಟಿಗೆಲಿ ನಿಂತ್ಕಳವು. ಎರಡೂ ರುಂಡಿಮೇಲೆ ಕೆಮ್ಮಣ್ಣು ಸುಣ್ಣದ ಕರೆಯ ಬಟ್ಟಲ ಕಂಠದಲ್ಲಿ ಠಸ್ಸೆ ಒತ್ತುಸ್ಕಳವು.ಚಂಡಿ ಬೀಳತಲೇ ಕೋಡಿಗೆ ಬಣ್ಣ ಹಚ್ಚುಸ್ಕಂದು ಹಾಕಿದ ಹಸ್ರು ಹುಲ್ಲ ಮೇಯ್ತ ನಿಲ್ಲವು. ಎತ್ತುಗಳು ಹಸಿರು ಬಳ್ಳಿ ಸುತ್ತ ಕಣಗಲು ಹೂವಿನ ಹಾರವ ಕತ್ತಿಗೆ ಸುತ್ತಕಂದು, ದೇವ್ರ ಮುಂದಿನ ಬಸವಣ್ಣನಂಗೆ, ಕಣ್ಣಿಗೆ ಒತ್ತಿಕೊಳ್ಳೋ ಹಂಗೆ ಕಾಣತಿರವು.  ಹಿಂಗೆ ಎಲ್ಲವು ಸಂಜೆಮುಂದೆ ಬೆಂಕಿ ಹಾಯಕ್ಕೆ ತಯ್ಯಾರಾಗಿ ನಿಂತ್ಕತಿರವು. ಈ ಸಡಗರ ಮುಗದ ಮೇಲೆ ಮನೆರು, ಆಳು ಕಾಳು ಬಚ್ಚಲಿಗೆ ನೀರು ಹುಯ್ಕಳಕೆ ಹೋಗೋರು.

lamp-makingಆವತ್ತು… ಬೆಳಗಿನ ರೊಟ್ಟಿಗೆ ರಜ. ಬೆಳಿಗ್ಗೆ ತಿನ್ನ ಅಂಥ ಎಣ್ಣೆತಿಂಡಿ ಅವ್ವ ರಾತ್ರೆಲ್ಲಾ ನಿದ್ದೆಗೆಟ್ಕಂಡು ಅಕ್ಕದೀರ ಕಟ್ಕಂದು ಮಾಡಿರದು. ಚಕ್ಕಲಿ ಕೋಡುಬಳೆ ಕರ್ಜಿಕಾಯ ದಿಸಾಲೂ ಈ ಬೇಸಾಯದ ಮನೇರು ಹಾಸನದ ಕ್ವಾಟೆ ಬ್ರಾಮರಂಗೆ ಬೇಸಾಕಾತೀತಾ?  ಹಬ್ಬಹಬ್ಬದಲ್ಲಿ ಮಾತ್ರ ಹೊಟ್ಟೆ ಬಿರ್ಯ ಮಾಡರು. ಅದ್ನೇ ಬೆಳಿಗ್ಗೆ ಎದ್ದು ತಿಂದು ಮನೆಮಂದೆಲ್ಲಾ ಅರಗ್ಸೋರು. ಹಬ್ಬದೂಟ ತಡ ಅಗೋಗದು. ಅವ್ವ ನೀರು ಉಯ್ಕಂದು ಬಂದು ಒಲೆ ಮುಂದೆ ಬೆಳುಗ್ಗೆ ನಿಂತ್ಕಂದ್ರೆ ಸಾಯಂಕಾಲದ ಮಟ ಬೆವರು ಬಿದ್ದೋಗವರ್ಗೂ ಬೇಯಸ್ತಲೇ ಇರದು. ದ್ವಾಸೆ ಸೀ ಗುಂಬಳದ ಪಲ್ಯ ಎರಡೂ ತಿಪ್ಪಮ್ಮನ ಎಡೇಲಿ ಇರ್ಲೇಬೇಕು. ಕುಂಬಳ ತಿಪ್ಪೆ ಮೇಲೆ ಬೆಳೆಯೋದಲ್ವಾ? ಅದುಕ್ಕೆ ಅವ್ಳಿಗೆ ಅದ ಕಂಡ್ರೆ ಬಲೇ ಆಸೆ.  ಇನ್ನ ಎಡೆಗೆ ಇಡ್ಲಿ, ಕಳ್ಳೆಕಾಳು ಬದನೆಕಾಯ ಹುಳ್ಗೊಜ್ಜು, ಅಕ್ಕಿ ಪಾಯಸ, ಹುಳಿಯನ್ನ, ಅನ್ನ ಸಾರು, ಒಂದಲ್ಲಾ… ಎಲ್ಲಾ ತಯ್ಯಾರಾಗಿ ಮುಗ್ಯೋ ಹೊತ್ಗೆ ಮಧ್ಯಾನದ ಸೂರ್ಯಪ್ಪ ಮನೆ ಮುಂದಿಂದ ಹಿಂದಿನ ಹಿತ್ತಲಿಗೆ ಬಂದಿರೋದ  ದಿನಾಲೂ ನೋಡ ಹಂಗೆ, ನೋಡಕ್ಕೂ ಆವತ್ತು ಅವ್ವಂಗೆ ಅಯ್ತಿರ್ಲಿಲ್ಲ ಕನಪ್ಪಾದೇವರೆ. ಅಷ್ಟು……. ಕೆಲಸ.

ಹಿಂಗೆ ಅಡಿಗೆ ಆಗ ಹೊತ್ತಿಗೆ ಮನೆ ಹೆಣ್ಣಮಕ್ಕಳು ಮನೆ ಸೀಟಿ, ರಂಗೋಲಿ ಬುಟ್ಟು, ಬಾಗಲಿಗೆ ಮಾವಿನ ಎಲೆ ತೋರಣ ಕಟ್ಟಿ, ಮನೆಮಂದಿಗೆಲ್ಲಾ ಎಣ್ಣೆ ಮೈಯ್ಯ ತಿಕ್ಕಿ, ಬೆನ್ನತಿಕ್ಕಿ, ನೀರ ಹುಯ್ದು, ಪ್ರತಿ ಒಂದನ್ನೂ ಮಡಿಮಾಡಿ ಹಿತ್ಲು ಪತ್ರೆ ಹೂವು ಅನ್ನವ ತಂದು ದೇವ್ರಮನೇಲಿ ಹೂವು ಹಾಸಿ ದೀಪ ಹಚ್ಚಿ ಲಕಲಕ ಅನ್ಸೋರು. ಆ ದೇವರೂವೆ ಈ ಹೆಣ್ಣುಹುಡ್ಲು ಕಾಲಗೆಜ್ಜೆಯ ಸಂಭ್ರಮ ಕಂಡು ದೀಪದ ಕಣ್ಣಲ್ಲಿ ನೋಡತಾ ಹಾಸಿರೊ ಬಾಳೆಲೆ ಮೇಲೆ ಇಕ್ಕೊ ಎಡೆಯ ಕಾಯ್ತಾ ಕೂರದು. ಅಷ್ತ್ರಲ್ಲಿ ಅಜ್ಜಮ್ಮಾರು ಬೆಳಿಗ್ಗೆ ಇಂ…ದ ಮಾಡಿರೊ ಮೊಣಕಾಲುದ್ದದ ಐದು ಸೆಗಣಿ ತಿಪ್ಪಮ್ಮಂಗೆ ಚೆಂಡು ಹೂವ ತಂದು ಅದನ್ನೇ ಸಗಣಿ ಮೇಲೆ ಊರಿ ಊರಿ ಸಗಣಿ ಅಲ್ಲ ಅದು, ಅವು ಹೂವಿನ ದೇವರು ಅನ್ನಂಗೆ  ಅವನ್ನ ಸಿಂಗಾರ ಮಾಡಿರದು. ಇದಕ್ಕೆ ಅಂತಲೆ ಹಬ್ಬಕ್ಕೆ ಮೂರು ತಿಂಗಳು ಮಂದಲೆ ಒಳ್ಳೆ ಅನುವಾದ ಚೆಂಡು ಹೂವನ್ನ ವಣಗ್ಸಿ ಮಾಡಿ ಇಟ್ಕಂದಿರೊ ಬೀಜವ ಹಿತ್ಲ ಬೇಲಿ ಅಂಚಿಗೆ ಚೆಲ್ಲಿರದಾ? ಸೋರೆ ಬಳ್ಳಿ ತಿಪ್ಪೆ ಅಂಚಿಗೆ ಹಾಕಿರದಾ? ಹೊಲದ ತುಂಬ ಹುಚ್ಚೆಳ್ಳು ತೊನಿತಿರದಾ?

ಅವು ಹಬ್ಬಕ್ಕೆ ಥರಂಥರದ ಹೂವು ಬಿಟ್ಟಿರವಾ? ದಪ್ಪ ಹೂವು, ಸೀರಕುಟ್ಕ, ಎರಡುಸುತ್ತಿಂದು, ಮೂರುಸುತ್ತಿಂದು, ಒಂದೆಳೆದು ಹಿಂಗೆ ಚೆಂಡು ಹೂವಲ್ಲೇ ಏಸು ಬಣ್ಣ? ಅರಿಶಿಣದ ಹೂವಿನ ತೇರಂಗಿರೊ ಆ ಗಿಡದ ಹತ್ರಲೇ ಅಜ್ಜಮ್ಮ  ದಿನಾಲೂ ಪಾರಾ ಕಾಯ್ತಿರದಾ? ಊರಿನ ಹೆಣ್ಣುಡ್ಲು ಗಿಡದ ಹತ್ರಕ್ಕೆ ಹೋದ್ರೆ ಸಾಕು. ಇದು ಓಡಿ ಹೋಗಿ ಒಂದು ಹೂವ ಕಿತ್ತು ದಾನ ಮಾಡಬುಡದು. ಹೂವ ತರುದ್ಬುಡತಾರೆ ಅಂತವ.

ಹಿಂಗೆ ಕಾಪಾಡಕಂಡು ಬಂದ ಹಳದಿಯ ನಾಕಾರು ಬಣ್ಣನೇ ಸಿಬ್ಬಲಲ್ಲಿ ತಂದು ತಿಪ್ಪಮ್ಮನ್ನ ಮಾಡಿ ಒಂದು ಹಲಗೆ ಮೇಲೆ ಇಟ್ಟಿರದಾ… ಒಂದು ನಡುಮಧ್ಯಕ್ಕೆ ದೊಡ್ಡದು, ಏರಡು ಅತ್ಲಾಗೆ ಇತ್ಲಾಗೆ ಸಣ್ಣವು, ಕೊನೇಲಿ ಎರಡು… ಮಕ್ಳು ಮರಿ ಇರಬೇಕು, ತೀರಾ ಚಿಕ್ಕವು. ಇನ್ನ ಅವಕ್ಕೆ ಹಂಚಿ ಕಡ್ಡಿಲಿ ಫೋಣಸಿರೊ ಹೂವಿನ ಕೋಡುಗಳು ತಲೆ ಮೇಲೆ ಬಂದು ಕೂತರೆ, ಕುಂಬಳ ಹುಚ್ಚಳ್ಳು ಹೂವು ಎದಿಗೆ ಬಂದು ಕೂರವು. ಆ ಐದು ಸಗಣಿ ಗುಡ್ಡೆ ಈಗ ಹೂವಿನ ಗುಡ್ಡೆಯಂಗೆ ಕಾಣತಲೆ ಕೈಯಿ ತಲೆಯ ಅಜ್ಜಮ್ಮನ ಕೈಯಿಂದ ಬೇಡಿ, ವರ ಪಡಕಂತಲೇ ಆದೇವರು ಅನ್ನೋ ದೇವರೂವೆ, ಶ್ರಿ ಕ್ರಿಷ್ಣನ ಮುಂದೆ ಕೈ ಮುಗುದು ನಿಂತ ಪಂಚ ಪಾಂಡವರಂಗೆ ತೆಪ್ಪಗೆ ಅಜ್ಜಿ ಹೇಳದಂಗೆ ಕೇಳವು.

ಬಲಿ ಪಾಡ್ಯಮಿ ದಿಸ  ಮನೆಮನಿಗೆ ಬಂದ ಬಲಿ ಚಕ್ರವರ್ತಿ ಈ ದೀವಳಿಗೆ ಹಬ್ಬ ಮಾಡೋ ಈ ಊರಿನ ಪ್ರಜೆಗಳ ಕಂಡು ತಾನೂ ಊಟದ ಮನೆ ಮೆಟ್ಲ ಮೇಲೆ ಕಾಲು ನೀಡಕಂಡು ಕೂರನು. ಅಲ್ಲಿಂದ ದೇವರ ಮನೆ, ಕೊಟ್ಟಿಗೆ, ಅಡುಗೆಮನೆ ತಯ್ಯಾರಿಯ ಕಾಣತಾ… ಹಾಕೋ ಎಡೆ ರುಚಿ ನೋಡಿ ಹೋಗದು ಅಲ್ಲದೆ ವಾಮನನ ಪ್ರವೇಶವೇ ಇಲ್ಲದಿರ ಈ ಊರಿನ ಜನರ ಮುಗ್ಧತೆಗೆ ಬೆರಗಾಗಿ ಬೆರಳ ಮೂಗಿನ ಮೇಲೆ ಇಟ್ಕಂಡು ನೋಡತಾ ಕೂರೋನು.

ಆವತ್ತು ಕೊಟ್ಟಿಗೆ ಅಂಗಳನೆಲ್ಲಾ ಈ ಪೂಜೆಗೆ ಸಾರಸಿ ರಂಗೋಲಿ ಬಿಟ್ಟು ಸಗಣಿ ಅನ್ನೋ ದನಗಳ ಕಸನ ಪಾವನ ಮಾಡಿರರು. ಎಲ್ಲಾ ಆದ ಮೇಲೆ ನೀರ ಮನಿಗೆ ಹೋಗಿ ರವಿಕೆ ತೆಗೆತಾ ಇರೊ ಅಜ್ಜಮ್ಮಂಗೆ ಈಗ ನೆಪ್ಪಾಗ್ಬುಡದು. ಅಯ್ಯೋ, ಕೋಳಿ ಬಂದು ಕೆದ್ರುಬುಟ್ರೆ, ಮೊದ್ಲೇ ತಿಪ್ಪಮ್ಮಂಗೂ ಕೋಳಿ ಸಂಸಾರಕ್ಕೂ ಭಳೇ ನಂಟು ತಡೆಯಪ್ಪಾ, ಎಂಗಾರ ಆಗ್ಲಿ… ಅಂದು ಸೆರಗ ಹೊದ್ದು ಬಂದು ಸಾರ್ಸಿಟ್ಟಿರೋ ದೊಡ್ಡ ಕೋಳಿ ಪಂಜರ ತಂದು ಹೂವಲ್ಲೇ ಕುಂತಿರೋ ದೇವರ ಮೇಖೆ ದಬಾಕಬುಡದು. ಹತ್ತುರಕ್ಕೆ ಬಂದಿದ್ದ ಕೋಳಿ ಇದ ಕಂಡು ‘ಹಗಲ ಹೊತ್ನಲ್ಲಿ ದೇವರನೇ ಈ ವಮ್ಮ ಕೂಡ ಹಾಕತಾಳಲ್ಲಾ? ನಮ್ಮ ರಾತ್ರಿ ಹೊತ್ತು ಕೂಡ ಹಾಕದಂಗೇಯಾ…. ಆಂ….’ ಅಂತ ಮರಿ ಕರಕಂದು ಲೊಚಲೊಚನೆ ಆಚಿಗೆ ಹೋಗವು.

ಅಜ್ಜಮ್ಮ ಮೊಮ್ಮಗಳ ಬಚ್ಚಲು ಮನಿಗೆ ಕರಕಂದು ಹೋಗದು. ಬಸವನ ಹಿಂದೆ ಬಾಲದಂಗೆ….ಈಗ ಬೆನ್ನು ತಿಕ್ಕಸ್ಕಬೇಕಲ್ಲ! ರಾತ್ರಿ ಮಲಿಕ್ಕಂಡಾಗಲೂ ಅಷ್ಟೆ. ಅಜ್ಜಿ ಮೈಯ್ಯ ತನ್ನ ಹೂವಿನಂಗಿರೋ ಪಾದದಲ್ಲಿ ಹಿತವಾಗಿ ತುಳುದು, ಮೈ ನೋವ ಇಳಸಾದು ಈ ಕನ್ನ ಹುಡುಗಿಯೆ. ಇಬ್ರೂ ಕಣಿಗುಟ್ಕಂಡು ಎಂಗೆ ಮಾತಾಡ್ಕತಾರೆ ಅಂತೀರಾ? ಗಂಡು ಹುಡ್ಲು ಅಂಗಲ್ಲ! ಅಂಗೆ ಊರೋಳಿಗೇ ತಲೆಲೆ ಮೆರಿತವೆ.  ಮನೆ ಅಂತ ಸೇರಕುಲ್ಲ.  ಅಜ್ಜಮ್ಮ ನೀರ ಮಿಂದು ಮಡಿಶಾಲೆ ಉಟ್ಟು, ತಲೆಕೂದಲ ನೀರ ಇಳಿ ಬಿಡ್ತಾನೆ  ಮೊಮ್ಮಗಳ ಕಟ್ಕಂದು ಎಲ್ಲ್ರೂ ಮನಿಗೆ ಒಂದು ಸರಕೀಟ ಹೋಗಬಂದು, ಯಾರ್ಯಾರ ಮನೆ ಕಲೆ ಎಂಗೀತೆ? ಅಂತ  ನೋಡಿಬರದು.

ಆಮೇಲೆ ಕಣಿ ಶುರು ಮಾಡದು. ತಗ… ‘ಅದೇನು ಮಾಡತೀರವ್ವಾ? ಬೆಳಿಗ್ಗಿಂದ ಬೈಗೊರ್ಗೂ ಕಾಣೆ ಕಣೆ ನಮ್ಮವ್ವದೀರಾ? ಇಳೆ ಹೊತ್ನಲ್ಲಿ ಎಡೆ ಹಾಕತೀರಾ?’ ಒಲೆ ಉರಿ ಮುಂದೆ ಒಂದೇ ಉಸುರಿಗೆ ಬೇಯತಿರ ಅವ್ವಂಗೆ, ಇದ ಕೇಳಿ ಅಜ್ಜಿ ತಲೆ ಮೇಲೆ ಕುಕ್ಕ ಬೇಕು ಅನ್ಸದು. ಕೇಮೆ ನಡುವೆ ಅದಕ್ಕೂ  ತ್ರಾಣ ಪುರೊಸೊತ್ತು ಇಲ್ಲದೆ ಅತ್ಲಾಗೆ ಈ ಮಾತ ಅಂಡ ಕೆಳ್ಗೆ ಹಾಕಂದು, ಪಾತ್ರೆ ತಕಬಂದು ದೊಡ್ಡಕ್ಕಂಗೆ ಎಡೆಗೆ ತುಂಬಿ ಕೊಡದು. ಅಕ್ಕ ಎಡೇ ಇಡದು. ದೊಡ್ಡೆತ್ತಿಗೊಂದು, ಉಳೊ ಎತ್ತಿಗೊಂದು, ಕರ್ಯೋ ದನಿಗೊಂದು, ತಿಪ್ಪಮ್ಮಂಗೊಂದು, ಮನೆ ದೇವರ ಮುಂದೊಂದು ಹಿಂಗೆ, ಹಾಕಿದ ಎಡೆ ಮುಂದೆ ಮೊಳಗೋ ಶಂಖು ಜಾಗಟೇ ಸದ್ದಿಗೆ ಮನೇರ ಜತಿಲೇಯ ಬಲಿ ಚಕ್ರವರ್ತಿನೂ ಎದ್ ನಿಂತು ಭಕ್ತಿಯಿಂದ ಕೈ ಮುಗಿಯನು.

design plateಆಮೇಲೆ ಅಜ್ಜಮ್ಮ ಬಾಳೆಲೆ ಮುಂದೆ ಕುಂತು ತನ್ನ ಸೊರಗೋಗಿರೊ ನಾಲಿಗೆ ಹರಿಬುಟ್ಟು ‘ನಿಮ್ಮವ್ವ ಖಾರ ಯಾಕೀಟು ಹಾಕತಾಳೊ ಕಾಣಪ್ಪಾ’ ಅಂತ ಸಿಡುಕಾಡಿದ್ರೂವೆ, ಪಾಯಸವ ಎಲೆ ಮೇಲಿಂದ ಸೊರ್ರನೆ ನೆಕ್ಕದ ಕಂಡು ಅವ್ವ ಅಲ್ಲೇ ಹುಸಿನಗೆಯ ತೇಲಿ ಬಿಡೋದು. ಅಣ್ಣ ‘ಅಮ್ಮಾ ಇದು ಖಾರ ಆಗಿಲ್ವಾ?’ ಅಣಕುಸುದೇಟ್ಗೆ ಊಟಕ್ಕೆ ಕುಂತ ಅಪ್ಪ ಅಣ್ಣನ್ನ ಗದ್ರದು. ಅಜ್ಜಮ್ಮ ಮಗ ತನ್ನ ಪರ ಮಾಡಿದ ಸದ್ದು ಕೇಳಿದ್ದೆ ಸಮಾಧಾನಾಗಿ ಸಡಗರ ಮಾಡದು. ಇನ್ನ ದನ ಬೆಂಕಿ ಹಾದು ಮನಿಗೆ ಬತ್ತವೆ. ಆ ಹೊತ್ತಿಗೆ ತಿಪ್ಪೆ ಪೂಜೆ ಮಾಡಕಬರನ ಅನಕಂದು ಚೊಂಬಲ್ಲಿ ನೀರು, ಮುತ್ತುಗದ ಎಲೆ ಮೇಲೆ ದೋಸೆ, ಕುಂಬಳದ ಪಲ್ಯ ಹಿಡಕಂದು ಹಾಲು ತುಪ್ಪ ಎಡೆ ಮಾಡಕ್ಕೆ ಮಕ್ಕಳ ಕಟ್ಕಂದು ಹೊರಡದು.

ಮನೇಲಿ ಪೂಜೆ ಮಾಡಿಸಿಕಂದು ಇಷ್ಟೋತ್ತು ನಿರಾಳಾಗಿ ಕುಂತಿದ್ದ, ಚೆಂಡು ಹೂವಿನ ಪರಿಮಳಕ್ಕೆ ಬೀಗಿಬಿದ್ದೋಗಿದ್ದ ಆ ದೇವತೇರು ಐದು ಮಂದಿ ಅಜ್ಜಿ ಕೈ ಮೇಲೆ ಹತ್ತಿ, ಅಲ್ಲಿಂದ ಬೆತ್ತದ ಚಿಬ್ಬಲ ಹತ್ತಿ, ಅಕ್ಕನ ತಲೆ ಮೇಲೆ ಕುಂತ್ಕಂದು, ತಿಪ್ಪೆ ಕಡಿಗೆ ಸಾಗಿ ಹೋಗೋರು. ಅಲ್ಲಿ ಇಳುದು ಸಾರಿಸಿದ ತಿಪ್ಪೆ ಮೇಲೆ ಚಂದಕ್ಕೆ ಕೂತು, ಇವ್ರಿಬ್ಬರು ಹಾಕಿದ ಎಡೆಯ ತಿಂದು ಹಚ್ಚಿಟ್ಟ ಹರಳೆಣ್ಣೆ ದೀಪದ ಮಂದ ಬೆಳಕಲ್ಲಿ ಮಾತಿಗೆ ಕೂರರು. ದಿನಾಲೂ ಕತ್ಲಲ್ಲಿ ಅತ್ತಲಾಗೆ ಮೈ ವದರಿಕೊಂದು ಗೊರಕೆ ಹೊಡಿತಿದ್ದ ಅವರು ಈವತ್ತು, ಎಲ್ರ ಮನೆ ತಿಪ್ಪವ್ವದೇರು ಊರು ಸಡಗರ ಮುಗುದು ದೀಪ ಆರೋವರೆಗೂ ಎಚ್ಚರಾಗೇ ಕುಂತಿರರು.

ಇವರು ತಿರುಗಿ ಮನಿಗೆ ಬರೊ ಹೊತ್ತಿಗೆ ಆಗ್ಲೆ,  ಅವ್ವ ವಸಿ ಅಂಡೂರಿ ಕುಂತು ಉಂಡು, ತಂಬಾಳೆ ಬೋಸಿಗಳಿಗೆ ಮಾಡುದ ಅಡಿಗೆಯ ತುಂಬಸಿ, ಕುಕ್ಕೆ ತಂದಿರೊ ಊರ ಹೊಲಗೇರಿಯ ಹತ್ತಾರು ಸಂಸಾರಕ್ಕೆ ಹೆಣ್ಣುಮಕ್ಕಳ ಮಡಿಲ ತುಂಬಸತಿರದು. ಮಾಡಿದ್ದ ಒಂಚೂರನು ಮರೆಮಾಚದಂಗೆ ಚಕ್ಕುಲಿ ಕೋಡುಬಳೆ ಸೈತಾ ಅವರ ಕುಕ್ಕಿಗೆ ಇಕ್ಕೊಟ್ಟು ಕಳಸೋ ಹೊತ್ಗೆ…..ಮನೆ ವಳಿಕ್ಕೆ ಬತ್ತಿರೋ ಕತ್ಲನ್ನ ಬಾಗಲಲ್ಲೇ ತಡದ ಅಕ್ಕ, ಚೆಂಡು ಹೂವಿನ ಸಿಂಗಾರ ಮಾಡಿದ ಸಗಣಿ ಮೇಲೆ ದೀಪಮ್ಮನ್ನ ಇಟ್ಟು ಕಣ್ಣಿಗೆ ಬೆಳಕಿನ ರೇಖೆಯ ಹೊಂಬೆಳಕಲ್ಲಿ ಬರಿತಿರೋಳು. ಅವು ಮುಂದ್ಲ ಬಾಗಲು, ಹಿಂದ್ಲ ಬಾಗಲು, ತಲೆವಾಗಲು, ಕೊಟ್ಟಿಗೆ ಬಾಗ್ಲುಗಳ ಅಕ್ಕಪಕ್ಕಕ್ಕೆ ಬಂದು ಕುಂತು, ರೈತರ ಗೂಡು ಅನ್ನದ ಸಣ್ಣಗೆ ಬೆಳಗವು. ಮೈಮುರ್ದು ದುಡಿದ ಊರೋರ ಕಣ್ಣ ಕರೆದು ಅರೆ ನಿದ್ರೆ ಮಂಪರಿಗೆ ಕರಕ ಹೋಗ ಹುನ್ನಾರದಲ್ಲಿರವು.

ಮಬ್ಬೆಳಕಲ್ಲಿ ಆಗತಾನೆ ಉಂಡು ಬಂದ ಸುಳ್ಳಕ್ಕಿ ಅನ್ನೋ ಕಲೆಗಾರನ ಕೋಲಾಟದ ಗುಂಪು, ಮಟ್ಟಿನ ಹಾಡ ಹಾಡಕಂದು, ಕೋಲಗಳ ಒಂದೇ ತಾಳದಲ್ಲಿ ಹೊಡಕಂದು, ಹಾ, ಹೋ ಅಂತ ಶಬುದದೊಂದಿಗೆ ಊರ ಹೆಣ್ಣುಮಕ್ಕಳ ಆಚಿಗೆ ಕರೀತಾ ಬರೋದು. ಕುಣಿಯುವ ಕಾಲಿನ ಕಸುವು, ಬಾಗುವ ಮೈಯ್ಯ ಬಳುಕು, ಸೋಲಿಲ್ಲದೇ ಸುರಿವ ಹೊಂಬೆಳಕಲ್ಲಿ ಆ ರಾಗ… ಆ ಲಯ….. ಗಾಳೀಲಿ ತೇಲತಾ ಮನಮನೆಗಳ ದಾಟತಾ ಊರಿನ ಎಲ್ಲರ ಕಣ್ಣಲ್ಲಿ ಬೆಳಕ ಹೊತ್ತಿಸದು.

ಕೊಟ್ಟ ಹಳೆ ಕೋಟು, ಪಂಚೆ,ಸೀರೆ ಎಲ್ಲನ್ನೂ ಹೆಗಲ ಮೇಲೆ ಹೊದ್ದುಕೊಳ್ಳುತ್ತಾ ಬರೋ ಚಳಿಗಾಲಕ್ಕೇ ಸೆಡ್ಡು ಹೊಡಿತಾ ಇರೋ ಶಿಶುಮಕ್ಕಳು, ಆ ಕತ್ತಲಲ್ಲಿ ಹೊಲಗೇರಿ ದಾರಿಯಲ್ಲಿ ಕರಗಿ ಹೋದರೂ ಮೆಟ್ಟಲ ಮೇಲೆ ಗುಂಪುಕಟ್ಟಿ ಕೂತ ಹೆಂಗೆಳೆಯರ ಮಾತಲ್ಲಿ, ಅವರ ಕೋಲಾಟದ ಕಲೆ ಅನ್ನೋದು, ಕೂದಲಲ್ಲಿ ಮುಡಿದ ಹೂವಿನ ಪರಿಮಳದಂಗೆ, ಅಂಗಳದಲ್ಲೇ ಉಳಿದು ಹೋಗೋದು. ಆಗ, ಅಲ್ಲಿ ಕುಂತಿದ್ದ ಕುಶಾಲುಗಾತಿ ದ್ಯಾಮವ್ವನೆಂಬ ಚಿಗವ್ವ ಹಾರಿಸೋ ಚಿನುಕುರುಳಿ ಪಟಾಕಿ ಮಾತಿಗೆ ನಗೆ ತಡಿಲಾರದೆ ನಗೆಯ ಅಬ್ಬರಕ್ಕೆ ಕರುಳಿಂದ ಉಬ್ಬುಬ್ಬರಿಸಿ ಬಂದ ಹೊಂಬೆಳಕಿನ ಕಿಡಿಗಳು ಒಂದೋಂದೆ… ಚಿಕ್ಕಿಯಾಗಿ…. ಹಕ್ಕಿಯಂಗೆ….. ನೀಲಿ ಬಾನಿಗೆ ಹಾರತಾ ಇದ್ದರೂ, ಇತ್ಲಾಗೆ ಕಿವಿಕೊಟ್ಟು ಕೇಳತಾ, ಆ ಪಟಾಕಿ ಮಾತ ಮುಕ್ಕಳಿಸತಾ, ಇವರ ಕಣ್ಣಲ್ಲಿ ಬೆಳಕು ಚೂರಾದಂಗೆ ನಗಾಡತಿರವು.

ಚಕ್ಕುಳಗುಳ್ಳಿ ಆಡಿಸೋ ಈ ನಗೆ ಮಾತ  ಕೇಳತಲೇ, ‘ನನಗೆ ಮೋಸ ಮಾಡಿದ ಆ ನನ್ಮಗ ವಾಮನ ಅನ್ನನು ಇವರ ತಕೆ ಏನಾರ ಬಂದಿದ್ರೆ… ನಗೇಲೆ ಅವನ ಛತ್ರಿಯ ಹಾರಸಿ ನೀರುನೆಳ್ಳು ಇಲ್ಲದಿರ ಜಾಗದಲ್ಲಿ ಅವನ ಹೂತು ಹಾಕರು ನಮ್ಮ ಹೆಣ್ಮಕ್ಳು’. ಅಂತವ ನಗ್ತಾಲೇ, ಹೆಂಗಸರ  ನಡುವಿಂದಾಸಿ, ಗದ್ದೆಹೊಲದಲ್ಲಿ ಕೈಗೆ ಬಂದಿರೊ ಹೊಸ ಭತ್ತ ನೋಡಿ, ಅತ್ಲಾಗೆ  ಕತ್ತಲ ಹಾದಿ ಹಿಡದು, ಊರಿನ ಕಣ್ಣಿಗೆ ಕಾಣದಿರ ಅವನ ನೆಲೆಗೆ, ಬಲಿ ಚಕ್ರವರ್ತಿ ಹೊರುಡೋನು. ಗುಡಿ ಗೂಟದಲ್ಲಿ ನೇತು ಹಾಕಿರೋ ಎಣ್ಣೆ ಮಿಳ್ಳಿಯಿಂದ ಮರದ ಸೊಟಕದಲ್ಲಿ ದೀಪದ ಒಡಲ ತುಂಬ ಎಣ್ಣೆ ಮೀಸಿ  “ನಿನ್ನುಸ್ರಲ್ಲಿ ನಮ್ಮ ಹಿಂಗೆ ಕಾಪಾಡಕಳವ್ವಾ ತಾಯೇ…”.  ಅಂತ ಪಾಡ್ಯದ ಬಾಗಲ ಮುಂದಕ್ಕೆ ಬುಟ್ಟು, ಹೊರಟ ಊರ ಕುಳವಾಡಿ ಹೆಳವಯ್ಯ ಮನಿ ಕಡಿಗೆ ಹೆಜ್ಜೆ ಹಾಕತಿದ್ದ. “ಯಾರೋ ಹೋದಂಗಾತಲ್ಲಾ ” ಅಂತ ತಿರುಗಿ ನೋಡುದ್ರೆ, ಬಲಿ ಚಕ್ರವರ್ತಿಯ ನೆರಳು ಅನ್ನದು ಇವನ ನೆರಳಲ್ಲೇ ಒಂದಾಗಿ  ಒಂದು ಚಣದಲ್ಲಿಇನ್ನೊಂದು ದಿಕ್ಕಲ್ಲಿ ದೂರಾತು.

10 Comments

 1. Anonymous
  October 31, 2016
  • H.R.Sujatha
   October 31, 2016
 2. S.p.vijaya Lakshmi
  October 31, 2016
  • H.r. Sujatha
   October 31, 2016
   • H.r. Sujatha
    October 31, 2016
 3. K.puttaswamy
  October 30, 2016
  • H.r. Sujatha
   October 31, 2016
   • H.r. Sujatha
    October 31, 2016
  • H.R.Sujatha
   October 31, 2016
 4. Anonymous
  October 30, 2016

Add Comment

Leave a Reply