Quantcast

ದೀಪಾವಳಿ ಎಂಬುದು..

g n nagaraj

ಜಿ ಎನ್ ನಾಗರಾಜ್ 

ದೀಪಾವಳಿ- ದೀಪಗಳ, ಪಟಾಕಿಯ, ಲಕ್ಷ್ಮಿ ಪೂಜೆಯ, ನರಕಾಸುರ ವಧೆಯ, ಬಲಿ ಚಕ್ರವರ್ತಿಯ, ಗೋಪೂಜೆಯ ಹಬ್ಬ ಆದದ್ದು ಹೇಗೆ?

ದೇಶದ ಹಲವು ಭಾಗಗಳ ಆಚರಣೆಗಳ ಮೊತ್ತ -ಅನೇಕ ರೀತಿಯಲ್ಲಿ ವಿಶಿಷ್ಠ ಹಬ್ಬ. ಒಂದು ಸಂಕೀರ್ಣ – ಕಾಂಪ್ಲೆಕ್ಸ್ ಆದ ಹಬ್ಬ.

ವಿವಿಧ ಪ್ರದೇಶದ ಹಲವು ಹಬ್ಬಗಳು, ಆಚರಣೆಗಳು ಕೂಡಿ ಹೆಣೆದುಕೊಂಡ ಬೆಳೆದ, ಬೆಳೆಯುತ್ತಿರುವ ಹಬ್ಬ.

green-fieldಇದರಲ್ಲಿ ಸೇರಿದ ವಿವಿಧ ಎಳೆಗಳನ್ನು ಸಾವಧಾನವಾಗಿ ಬಿಡಿಸಿ ನೋಡಿದರೆ ಮಾತ್ರ ಈ ಹಬ್ಬದ ಆಚರಣೆಗಳನ್ನು ಅರ್ಥ ಮಾಡಿಕೊಳ್ಳವುದು ಸಾಧ್ಯ. ಇದಲ್ಲದೆ ಒಂದು ಆಚರಣೆ ಆರಂಭವಾದ ಕಾರಣವೇ ಬೇರೆಯಾಗಿ, ಸಾವಿರಾರು ವರ್ಷಗಳು ಕಳೆದ ನಂತರ ಆ ಕಾರಣವೇ ಮರೆತೇ ಹೋಗುತ್ತದೆ. ಬೇರೆಯೇ ಆದ ಅರ್ಥ ಪಡೆದುಕೊಳ್ಳುತ್ತದೆ .

ದೀಪಾವಳಿ ನಮಗೆಲ್ಲಾ ಗೊತ್ತಿರುವಂತೆ ಉತ್ತರ ಭಾರತದ – ಗಂಗಾ ನದೀ ಬಯಲಿನ ಹಬ್ಬ. ಅಲ್ಲಿ ಅದು ಮುಖ್ಯವಾಗಿ ಗೋಪಾಲಕರ ಹಬ್ಬವಾಗಿತ್ತು. ಅಲ್ಲಿ ಮಳೆ ಬಂದು ಹುಲ್ಲು ಯಥೇಚ್ಛವಾಗಿ ಬೆಳೆದು, ಹಸುಗಳು ಗಬ್ಬವಾಗಿ ಹೊಸ ಕರುಗಳಿಗೆ ಜನ್ಮವಿತ್ತು ಹಾಲಿನ ಹೊಳೆ ಹರಿಯುವಾಗ ಮಾಡುತ್ತಿದ್ದ ಹಬ್ಬ.

ಹಾಗಾಗಿ ಭಾರತದ ಹಲವೆಡೆಗಳಲ್ಲಿ, ಕರ್ನಾಟಕದಲ್ಲಿಯೂ ಹಟ್ಟಿ ಹಬ್ಬವಾಗಿ ದನಗಳನ್ನು, ಕರುಗಳನ್ನು ಮೆರೆಸುವ ಹಬ್ಬ. ಆದ್ದರಿಂದ ಉತ್ತರ ಭಾರತದವರಿಗೆ ಹೊಸ ವರ್ಷದ ಹಬ್ಬ. ಹಾಲಿನ ಕಡಲನ್ನು ಕಡೆಯುವಾಗ ಲಕ್ಷ್ಮಿ ಹುಟ್ಟಿದ ಹಬ್ಬ.. ಹಾಲನ್ನು, ಬೆಣ್ಣೆ, ತುಪ್ಪವನ್ನು ಮಾರಿ ಹಣ ಕಾಣುವ ಹಬ್ಬ. ‘ಮಜ್ಜಿಗೆಯೊಳಗಿನ ಬೆಣ್ಣೆಯು ಬರುವಂತೆ’ ಭಾಗ್ಯದಾ ಲಕ್ಷ್ಮಿ ಬರುವುದು ಹಾಗೆಯೇ. ಹಾಲಿನಿಂದ ಮಾಡಿದ ಸಿಹಿತಿಂಡಿಗಳ ಸಂಭ್ರಮ ಉತ್ತರ ಭಾರತಕ್ಕೆ ಹೋದಾಗ ನೀವು ನೋಡಬೇಕು. ಹೊಸ ವರ್ಷದ ಹಾಗೂ ಲಕ್ಷ್ಮಿಯ ಪೂಜೆಯ ದಿನ ಇದು ಗೋವಳರ ಹಬ್ಬವಾಗಿರುವುದರಿಂದಲೇ ಹುಲ್ಲುಗಾವಲನ್ನು ಉತ್ತು ಕೃಷಿಗೆ ಪರಿವರ್ತಿಸುವುದಕ್ಕೆ ಬದ್ಧ ವಿರೋಧ.

ಭಾರತದಲ್ಲಿ ಈ ಸಂಘರ್ಷ ಬಹಳ ಹಳೆಯದು ಮತ್ತು ದೀರ್ಘಕಾಲ ಹಲವು ರೂಪದಲ್ಲಿ ನಡೆದಿರುವ ಸಂಘರ್ಷ. ಇದೇ ಭೂದೇವಿಯ ಹಾಗೂ ವಿಷ್ಣುವಿನ ವರಾಹಾವತಾರದ ಮಗನಾದ ನರಕನ ಹತ್ಯೆ ನಡೆದ ದಿನ, ನರಕ ಪೂರ್ವ ಭಾರತದ ಬುಡಕಟ್ಟುಗಳಿಗೆ ಸೇರಿದವನು. ಕೃಷಿಯ ವಿಸ್ತರಣೆಯಾಗುತ್ತಾ ಗಂಗಾ ನದೀ ಬಯಲಿನ ಹುಲ್ಲುಗಾವಲುಗಳಿಗೆ ಹಬ್ಬಿದಾಗ ಈ ಸಂಘರ್ಷ ತೀವ್ರವಾಯಿತು. ಸತ್ಯಭಾಮೆ ಭೂದೇವಿಯ ಅವತಾರವಂತೆ. ಕೃಷ್ಣ ಇಬ್ಬರೂ ಸೇರಿ ನರಕನನ್ನು ಕೊಂದದ್ದಂತೆ . ಹೀಗೆ ತಾಯಿ, ತಂದೆ ಇಬ್ಬರೂ ಸೇರಿ ಅವನನ್ನು ಕೊಂದರು ಎಂಬ ಕಥೆಯೂ ಇದೆ.

ದೀಪಾವಳಿ ದಕ್ಷಿಣ ಭಾರತಕ್ಕೆ ಬಂದಾಗ ಇಲ್ಲಿ ಆಗಲೇ ಪ್ರಚಲಿತವಾಗಿದ್ದ ಬಲಿ ಚಕ್ರವರ್ತಿಯ ಹತ್ಯೆಯ ಕಥೆಯ ಜೊತೆ ಮಿಳಿತವಾಗಿದೆ. ಆದರೆ ಓಣಂನಷ್ಟು ಸರಾಗವಾಗಿ ಕೂಡಿಕೊಂಡಿಲ್ಲ. ವಾಮನ ಏಕೆ ಕುಳ್ಳು ಗೊತ್ತೆ? ಭೂಮಿಯ ಕೆಳಗೆ ಅತಳ, ವಿತಳ, ಸುತಳ, ತಳಾತಳಾ ಪಾತಾಳದಲ್ಲಿ ಭೂಮಿಯ ಭಾರ ಹೊತ್ತುಕೊಂಡು ಬದುಕಬೇಕಾಗಿರುವಾಗ ಮನುಷ್ಯ ತಾನಾಗಿಯೇ ಕುಬ್ಜನಾಗಿ ಬಿಡುತ್ತಾನೆ ಎಂಬ ಕಲ್ಪನೆ. ಅಂತಹವನು ಮೇಲಕ್ಕೆ ಬಂದರೆ ಭಾರ ತೊಲಗಿ ಎತ್ತರಕ್ಕೆ ಬೆಳೆದು ಬಿಡುತ್ತಾನೆ. ಈಗಲೂ ವಾಮನ ಪಾತಾಳದಲ್ಲಿ ಬಲಿಯ ದ್ವಾರಪಾಲಕನಂತೆ. ಅಲ್ಲಿ ಯಾರು ಹೋದರೂ ಕುಳ್ಳಾಗಲೇಬೇಕು.

ಇನ್ನು ಮುಖ್ಯವಾದ ದೀಪ ಮತ್ತು ಪಟಾಕಿಗಳ ಬಗ್ಗೆ

ಇಲ್ಲಿ ಮಳೆ ಬಂದು ಬೆಳೆ ಬೆಳೆಯುತ್ತಿರುವಾಗ ದಸರಾಕ್ಕೆ ಮೊದಲು ಪಿತೃಪಕ್ಷ ಬರುವಂತೆ, ಹಿರೇರ ಹಬ್ಬ ಬರುವಂತೆ ಈ ಸಮೃದ್ಧಿಯ ದಿನ ಉತ್ತರ ಭಾರತದ ಜನರ ಪಿತೃಗಳಿಗೆ ಸಂತೋಷದ ದಿನವೂ ಹೌದು. ಬಲಿ ತನ್ನ ಜನಗಳನ್ನು ನೋಡಲು ಬರುವಂತೆ ಪಿತೃಗಳೂ ಬರುತ್ತಾರೆ. ಅವರಿಗೆ ಹಾಲಿನಿಂದ ಸಿಹಿ ತಿಂಡಿಗಳನ್ನು ಮಾಡಬೇಕು. ಅವರು ಬರಲಿ . ತಮ್ಮ ಸಂತೊಷವನ್ನು ನೋಡಿ ತಾವು ಸಂತೋಷ ಪಡಲಿ.

ಆದರೆ ತಮ್ಮ ಮಕ್ಕಳು , ಮೊಮ್ಮಕ್ಕಳನ್ನು ನೋಡಿ , ಅವರ ಕರುಳು ಸೆಳೆದು ಇಲ್ಲಿಯೇ ಉಳಿದು ಬಿಟ್ಟರೆ. ಜೊತೆಗೆ ದೇಹವನ್ನು deepamಬಿಟ್ಟಿರುವ ಇವರು ಮನೆಯೊಳಕ್ಕೆ ಬಂದರೆ ಅಶುಭ ಎಂಬ ಭಾವನೆ. ಆದ್ದರಿಂದ ಅವರು ಮನೆಯೊಳಗೆ ಬರದೆ ಮನೆಯವರನ್ನೆಲ್ಲ ಹೊರಗೇ ನೋಡಿ ಹೋಗಿ ಬಿಡಲಿ ಅದಕ್ಕಾಗಿ ದೀಪ ಮಾಲೆ ಮತ್ತು ಬಹಳ ಸಾಮಾನ್ಯವಾಗಿರುವಂತೆ ಯಾರೆ ಸತ್ತರೂ ಅವರು ಕೂಡಲೇ ದೀಪವಾಗುತ್ತಾರೆ. ಅಂತ್ಯ ಸಂಸ್ಕಾರ ಆದ ಮೇಲೆ ದೀಪವನ್ನು ನೋಡಿಯೇ ಹೋಗಬೇಕು. ಹಾಗೆ ಈ ದೀಪಗಳು ಅನೇಕ ತಲೆಮಾರಿನ ಪಿತೃಗಳ ಸಂಕೇತವೂ ಹೌದು.

ಪಟಾಕಿಗಳು ಏಕೆಂದರೆ ಈ ಪಿತೃಗಳು ಇಲ್ಲಿಯೇ ಉಳಿಯಬಾರದು . ಹೋಗಿಬಿಡಬೇಕು ಎಂದು ಆ ಪ್ರೇತರೂಪಗಳನ್ನು ಗದ್ದಲ ಮಾಡಿ ಓಡಿಸುವುದಕ್ಕೆ. ಅವರವರ ಊರ ಬಯಲಲ್ಲಿ ಮೊದಲು ಗಂಧಕಗಳನ್ನು ಉಪಯೋಗಿಸಿ ನಡೆಯುತ್ತಿತ್ತು ಎಂದು ಕಾಣಿಸುತ್ತದೆ. ಈಗ ಆಧುನಿಕ ಕಾಲದ ಮದ್ದುಗಳನ್ನು, ಕಾಗದವನ್ನು ಬಳಸಿ ಪಟಾಕಿಗಳು ತಯಾರಾಗುತ್ತಿವೆ. ಮೊದಲಿನ ಅರ್ಥಗಳನ್ನು ಕಳೆದುಕೊಂಡು ಬೆಳಕು, ಸಂತೋಷ ಎಂಬ ಅರ್ಥಗಳನ್ನು ಪಡೆದುಕೊಂಡಿದೆ.

Add Comment

Leave a Reply