Quantcast

ಬರದ ನಾಡಲ್ಲಿ ಪಯಣ..

ಬಿಸಿಲಿನ ಝಳ ಹೆಚ್ಚುತ್ತಿದೆ. ಮತ್ತೊಮ್ಮೆ ಬರಗಾಲ ಬದುಕನ್ನು ದುಸ್ತರಗೊಳಿಸಿದೆ. ಸಾವಿರಾರು ಕೋಟಿ ಮೌಲ್ಯದ ಬೆಳೆನಷ್ಟವಾಗಿದೆ. ಕುಡಿವ ನೀರಿಗು ಪರದಾಟ ಪಡುವ ಸ್ಥಿತಿ ನಿರ್ಮಾಣವಾಗಿದೆ. ಎರಡು ಜಿಲ್ಲೆಗಳನ್ನು ಹೊರತುಪಡಿಸಿದ್ರೆ ಮತ್ತೆಲ್ಲ ಜಿಲ್ಲೆಗಳು ಬರಪೀಡಿತ.

ಬಿಸಿಲ ಝಳ ಮೈಸವರಿ ಬರಗಾಲದ ಜಿಲ್ಲೆಗಳ ಪಯಣದ ನೆನಪಾಯಿತು.

Jyothi column low resಬರಗಾಲದಲ್ಲಿ ಉತ್ತರ ಕರ್ನಾಟಕದ  ಮಂದಿ ತುಂಬಾನೇ  ಸಮಸ್ಯೆ ಎದುರಿಸ್ತಾರೆ. ಬರದ ಸಂದರ್ಭದಲ್ಲಿ  ಎರಡು ಗಂಟೆ ಪ್ರೋಗ್ರಾಮ್  ಮಾಡಲು ಉತ್ತರಕರ್ನಾಟಕಕ್ಕೆ ಹೋಗಿದ್ದೆ  ನಮ್ಮ ತಂಡದೊಂದಿಗೆ.

ಯಾದಗಿರಿಯ ಪುಟ್ಟ  ಹಳ್ಳಿಯದು. ಮಣ್ಣಗೋಡೆಯ ಮನೆ. ಬದುಕ ಜೊತೆ ಪ್ರತಿ ದಿನ ಸಂಘರ್ಷಕ್ಜಿಳಿದ ಜೀವಗಳು ಅಲ್ಲಿದ್ದವು.
ರಾತ್ರಿಯಾಗಿತ್ತು. ಕತ್ತಲ ಮಧ್ಯೆ ಉರಿಯುತ್ತಿದ್ದ ದೀಪ. ಅಜ್ಜಿ ನಮ್ಮೆದುರುಗಡೆ ಮಾಡಿದ ಟೊಮಾಟೊ ಸಾರು, ಅನ್ನ , ಖಾರದ ಚಟ್ನಿ ತಿಂದು, ಬಹಳ ಹೊತ್ತು ಅಲ್ಲಿನ ತಾಯಂದಿರ  ಜೊತೆ ಮಾತಾಡಿದೆ. ಶೀಟ್  ಮನೆಗಳು , ಮಳೆ ಬಂದ್ರೆ ಜೀವ ಮುದುಡಿಕೊಂಡು ಹೆದರಿ ರಾತ್ರಿ ಕಳೆಯಬೇಕು. ಕಂದಮ್ಮಗಳನ್ನು ಜೋಪಾನವಾಗಿ ಅಪ್ಪಿಕೊಂಡು ಸ್ವಲ್ಪ ಬಿಸಿ ಜಾಗಕ್ಕಾಗಿ ಹುಡುಕಬೇಕು. ಇನ್ನೂ ಜೋರು ಗಾಳಿ ಬಂದ್ರೆ ಶೀಟುಗಳು ಹಾರಿ ಹೋಗಿ ಯಾರದೋ ಮೇಲೆ ಬಿದ್ದು ರಕ್ತ ಒಸರಿದ್ದು ಇದೆ.
ಇವರು ಮಲಗೋದು ಹೊರಗಡೆನೇ. ಒಳಗೆ ಸಾಕಷ್ಟು ಜಾಗ ಇಲ್ಲ.

ಅವರ ಜೊತೆ  ಹಾಗೆ ಒರಗಿಕೊಂಡೇ ಮಾತು ಮುಂದುವರಿಸಿದ್ದೆ. ಹಾವು ಬರಲ್ವ ಅಂದೆ. ಬರುತ್ತೆ ಹಾಗಂತ ಏನು ಮಾಡೋಣ , ದೇವರ  ಮೇಲೆ ಭಾರ ಹಾಕ್ತೀವಿ ಅಂದ್ರು. ಕತ್ತಲು ಸರಿದಿತ್ತು.. ಸೂರ್ಯ ಮುಖ ತೋರಿಸಿದ್ದ. ಸೂರ್ಯೋದಯ ಹೊಸ ಭರವಸೆ ಹೊತ್ತು ತರುತ್ತೆ ಅಂತೀವಿ. ಆದ್ರೆ ಇವರ ಪಾಲಿಗೆ  ಅದರ ಲಕ್ಷಣ ಗೋಚರಿಸಲಿಲ್ಲ..

ಇನ್ನು ಬಡವರಿಗಾಗಿ ಯೋಜನೆಗಳು ಇದೆಯಲ್ಲ ಅಂತ ಯುವಕನೊಬ್ಬನನ್ನು ಕೇಳಿದೆ. ನರೇಗದಂತ ಯೋಜನೆಗಳ ಲಾಭ ಫಲಾನುಭವಿಗಳನ್ನು ತಲುಪುತ್ತ ಇಲ್ಲ,  ತಲುಪಿಸಬೇಕಾದವರೇ ಸಿಗ್ನೇಚರ್ ಹಾಕಿ ಹಣ ತಗೋತಾರೆ ಅಂದ. ಅಲ್ಲಿಂದ ಆ ಗ್ರಾಮದವರು ನೀರು ತರೋ ಕೆರೆ ಹತ್ರ ಹೋದೆವು. ಮೂರು ಕಿಲೋಮೀಟರ್ ನಡೆದು ತಲುಪಿದ ಮೇಲೆ ನೀರು ನೋಡಿದ್ರೆ ದಂಗಾದೆ. ಕೆಸರುನೀರು, ಕುಡಿಯೋ ಸ್ಥಿತಿಯಲ್ಲಿ ಇರಲಿಲ್ಲ.

ಅಲ್ಲಿನ ಸ್ಥಳೀಯ ಪ್ರತಿನಿಧಿಗಳನ್ನು ಕೇಳಿದ್ರೆ ನೇರ ಉತ್ತರ ಇರಲಿಲ್ಲ. ಎಂಬತ್ತು ವರ್ಷದ ಬಡಕಲು ದೇಹವೊಂದು  ನೀರು ತುಂಬಿದ ದೊಡ್ಡ ಬಿಂದಿಗೆ ಹೆಗಲಿಗೇರಿಸಿ ಮೆಲ್ಲನೆ ಚಿಕ್ಕ ಆಕಾರವಾಗಿ ಮರೆಯಾಗುವುದನ್ನೇ ನೋಡುತ್ತಾ ನಿಂತೆ. ನನ್ನೆದುರಿದ್ದ ಸಮಸ್ಯೆಗಳು ಮಾತ್ರ ದೊಡ್ಡದಾಗಿಯೆ  ಉಳಿದವು..

ಮತ್ತೆ ಮರುದಿನ ಆ ಹಳ್ಳಿಗಳಲ್ಲಿ ಪಯಣ ಮುಂದುವರೆಯಿತು. ಆ ಹೆಣ್ಣುಮಕ್ಕಳು ಶೌಚಾಲಯ ಇಲ್ಲದೆ ಕೆಲವು ಕಿಲೋಮೀಟರ್ ನಡೆಯಬೇಕು. ಮಾತಾಡಲು ನಾಚಿಕೊಳ್ಳುವ ಹೆಣ್ಣುಮಕ್ಕಳ ನಿಜವಾದ ಸಮಸ್ಯೆ ಇನ್ನು ಪರಿಹರಿಸಲು ಸಾಧ್ಯವಾಗದ ನಾಚಿಕೆಪಡುವ ಸ್ಥಿತಿಯಲ್ಲಿ ನಾವಿದ್ದೇವೆ.

ಅಷ್ಟರಲ್ಲಿ ಹೆಣವೊಂದನ್ನು ಹೊತ್ತು ಸಾಗಿಸುತ್ತಿದ್ದ ಗುಂಪು ಮುಖಾಮುಖಿಯಾಯಿತು. ಮೈಸುಡುವ ಬಿಸಿಲಲ್ಲಿ ಎಲ್ಲಿ ಹೋಗುತ್ತಿರುವಿರಿ ಅಂದೆ. ತುಂಬಾ ದೂರ ಹೋಗಬೇಕಿದೆ ಹತ್ತಿರದಲ್ಲಿ ಸ್ಮಶಾನವಿಲ್ಲ ಎಂದ ಹುಡುಗರು ಮುಂದೆ ಸಾಗಿದರು. ಬದುಕಿದಷ್ಟು ಜನ ಬಡತನ ನೋವು ಪರದಾಟದ ನಂತರವು ಅಂತಿಮಸಂಸ್ಕಾರ ಮಾಡಲು ಒದ್ದಾಡಬೇಕಲ್ಲ ಎಂದು ಮನಸ್ಸು ಮರುಗಿತು.

ಮತ್ತೆ ಕತ್ತಲಿಗೆ ಮುಖಾಮುಖಿಯಾದೆ. ಮತ್ತೊಂದು ಕತ್ತಲ ಬದುಕಿಗೆ ಎದುರಾಗಿತ್ತು ನಮ್ಮ ತಂಡ.

ಗುಳೆ ಹೊರಟವರ ಬದುಕು ಅದರ ನೇರ ಪರಿಣಾಮ ಏನೆಂಬುದು ಅರಿವಾಗಿತ್ತು.

ಆ ಮನೆಯಂಗಳ ಪ್ರವೇಶ ಮಾಡುತ್ತಿದ್ದಂತೆ ಸಾಬವ್ವ ಓಡಿ ಬಂದು ಬಿಕ್ಕಳಿಸಲಾರಂಬಿಸಿದ್ರು. ಗುಳೆ ಹೋದ ಮಗ ಬೆಂಗಳೂರಿನಲ್ಲಿ ಸಾವನ್ಬಪ್ಪಿದ್ದ.ಆತನ ದೇಹ ತರಲು ಹೋದವರು ವಾಪಾಸಾಗುವಾಗ ಅಘಘಾತವಾಗಿ ಸಾವನ್ನಪ್ಪಿದ್ರು. ಎಂಟು ಮಂದಿ jyothiಅಂಗಳದಲ್ಲಿ ಖಾಲಿತನ ಮೂಡಿಸಿ ಬರಗಾಲಕ್ಕೆ ಶಾಶ್ವತ ವಿದಾಯ ಹೇಳಿದ್ರು. ಆ ಸಾವಿನ ಹಸಿಗಾಯ ಇನ್ನೂ ಮಾಸಿರಲು ಸದ್ಯ ಸಾಧ್ಯವಾಗುವ ಸಾಧ್ಯತೆಯಿರಲಿಲ್ಲ. ಮಾತು ಬಾರದೆ ಎಲ್ಲಾ ಕೇಳಿಸಿಕೊಳ್ಳುತ್ತಿದ್ದೆ. ಅವ್ವ ಏನು ಮಾಡಲಿ ತಿಳಿಯದು. ಉಣ್ಣು ಅಂತಾರೆ ಆಗದು ಹೀಗೆ ಸಾಬವ್ವ ಕೈಹಿಡಿದು ಅಳುತ್ತಿದ್ರೆ ಕರುಳು ಕಿತ್ತು ಬಂದ ಹಾಗಾಯಿತು.

ಬನ್ನಿ ಊಟ ಮಾಡೋಣ ಎಂದು ಒಟ್ಟಿಗೆ ಕೂತಾಗ ಸಾಬವ್ವ ಎರಡು ತುತ್ತು ತಿಂದಾಗ ಏನೋ ನೆಮ್ಮದಿ ಅನಿಸಿತು. ಸಾಬವ್ವನ ಮುಖದೊಳಗೆ ಅಮ್ಮ ಮೂಡಿ ಮಾಯವಾದರು. ನಮ್ಮ ಮಧ್ಯೆ ಇಂತಹ ಅದೆಷ್ಟೋ ಅಮ್ಮಂದಿರ ನೋವನ್ನು ಸ್ವಲ್ಪ ಮಟ್ಟಿಗೆ ಅರ್ಥಮಾಡಿಕೊಳ್ಳಬಲ್ಲವಳಾಗಿದ್ದೆ.

ಹಾಗೆ ಆಕೆ ಜೊತೆ ನಿದ್ದೆಗೆ ಜಾರಿದೆ.

ಮತ್ತೊಂದು ಬೆಳಗು. ಬರೆದಷ್ಟು, ಹೇಳಿದಷ್ಟು ಮುಗಿಯದ ಬರದ ಗಾಯದ ನೈಜ ಕಥೆಗಳು ಇನ್ನು ಜೀವಂತವಾಗಿವೆ.
ಸಾಬವ್ವನಿಗೆ ಸಿಗಬೇಕಾದ ಪರಿಹಾರ ಕೊಡಿಸುವಲ್ಲಿ ಸ್ವಲ್ಪ ಮಟ್ಟಿಗೆ  ನಾವು ಮಾಡಿದ ಕಾರ್ಯಕ್ರಮ ಸಹಾಯಕಾರಿಯಾಯಿತು. ಆದರೆ ಕಳಕೊಂಡ ತಮ್ಮವರ ಅಗಲುವಿಕೆ ನೋವನ್ನು ಮರೆಸಲು ನಮಗ್ಯಾರಿಗು ಸಾಧ್ಯವಾಗಿಲ್ಲ ಒಂದು ಅಪ್ಪುಗೆ, ಜೊತೆಗೆ ಮಾಡಿದ ಊಟ, ನೋವ ಕೇಳಿಸಿಕೊಂಡ ಮಾತುಗಳು ಮಾತ್ರ ಮತ್ತೆ ಹಾಗೆ ಕಣ್ಣ ಮುಂದೆ ಸುಳಿಯುತ್ತಲೇ ಇರುತ್ತದೆ.
.
ಈ ವಾರ ನೆನಪಾಗಿದ್ದಿಷ್ಟು..ಮತ್ತೊಂದು ಕವರೇಜ್ ನೆನಪಿನೊಂದಿಗೆ ಬರ್ತೀನಿ
ಅಲ್ಲಿವರೆಗು ಟೇಕ್ ಕೇರ್ ..
ಜ್ಯೋತಿ

One Response

  1. ಬಸವರಾಜ ಹೊಸಮನಿ
    November 17, 2016

Add Comment

Leave a Reply