Quantcast

ಇವರ ಕ್ಯಾಮೆರಾದಲ್ಲಿ ಕನ್ನಡದ ಜೀವಗಳಿವೆ..

ಇಂದು ಕನ್ನಡ ರಾಜ್ಯೋತ್ಸವ.

ಕನ್ನಡವನ್ನು, ಕನ್ನಡ ನೋಟವನ್ನು ಕಟ್ಟಿಕೊಟ್ಟವರನ್ನು ಮುಂದಿನ ಪೀಳಿಗೆಗೆ ಉಳಿಯುವಂತೆ ಮಾಡಿದವರು- ಎಎನ್ ಮುಕುಂದ್. ತಮ್ಮ ಕ್ಯಾಮೆರಾ ಕಣ್ಣಿನ ಮೂಲಕ ಇವರು ಸೆರೆ ಹಿಡಿದ ಕನ್ನಡದ ಗಣ್ಯರು ಇಂದು ಕನ್ನಡದ ಮಹತ್ವದ ದಾಖಲೆಯಾಗಿ ಉಳಿದಿದೆ. 

ಮುಕುಂದ್ ಅವರ ಆಯ್ದ ಛಾಯಾಚಿತ್ರಗಳ ಕೃತಿ ‘ಮುಖಮುದ್ರೆ’ಯನ್ನು ಮಣಿಪಾಲ್ ಯುನಿವರ್ಸಿಟಿ ಪ್ರೆಸ್ ಹೊರತರುತ್ತಿದೆ. 

ಸದಾ ಪ್ರಚಾರದಿಂದ ಮಾರು ದೂರ ಉಳಿಯುವ ಮುಕುಂದ್ ಅವರು  ತಮ್ಮ ಕೃತಿಗೆ ತಾವು ನಡೆದುಬಂದ ಕ್ಯಾಮೆರಾ ದಾರಿಯನ್ನು ಕೃತಿಯ ಪ್ರಸ್ತಾವನೆಯಲ್ಲಿ ಬರೆದಿದ್ದಾರೆ.

ಓದಿ. ಅಷ್ಟೇ ಅಲ್ಲ, ಇದೇ 12 ರಂದು ಶನಿವಾರ ಬೆಳಗ್ಗೆ 10 ಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ವಾಡಿಯಾ ಸಭಾಂಗಣದಲ್ಲಿ  ನಡೆಯಲಿರುವ ಕೃತಿ ಬಿಡುಗಡೆ ಸಮಾರಂಭಕ್ಕೂ ಬನ್ನಿ

a-n-mukund

ಎ ಎನ್ ಮುಕುಂದ

ಮುಖಪುಟ ಚಿತ್ರ: ಪ್ರತೀಕ್ ಮುಕುಂದ್

13-s-r-ekkundi

1972. ನನಗಾಗ ವಯಸ್ಸು 17. ಎಂಜಿನೀಯರಿಂಗ್  ಮೂರನೇ ಸೆಮಿಸ್ಟರ್ ನಲ್ಲಿದ್ದೆ. ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ವ್ಯಾಸಂಗ. ಅದೇನೋ ಒಮ್ಮೆ ಇದ್ದಕ್ಕಿದ್ದಂತೆ ಸಂಗೀತ ಕಲಿಯಬೇಕು ಎಂಬ ಆಸೆಯುಂಟಾಗಿ ಸುಪ್ರಸಿದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರಾಗಿದ್ದ ವಿದ್ವಾನ್ ಎ ಸುಬ್ಬರಾವ್ ಅವರ ಶಿಷ್ಯನಾದೆ.

ಸುಬ್ಬರಾವ್ ಅವರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಅಪ್ಪಟ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರಾಗಿದ್ದರೂ ಇನ್ನಿತರ ಸಂಗೀತ ಪ್ರಭೇದಗಳಾದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಜಾನಪದ ಸಂಗೀತ, ಗಜಲ್, ಭಾವಗೀತೆ, ಚಲನಚಿತ್ರ ಗೀತೆ ಇತ್ಯಾದಿ ಎಲ್ಲದರ ಬಗ್ಗೆಯೂ ಅವರಿಗೆ ಅಪಾರ ಆಸಕ್ತಿ ಮತ್ತ ಗೌರವ. ಸಂಗೀತವಷ್ಟೇ ಅಲ್ಲದೆ ಸಾಹಿತ್ಯ, ಶಿಲ್ಪಕಲೆ, ಸಿನಿಮಾ, ಕ್ರಿಕೆಟ್, ಉಡುಗೆ ತೊಡುಗೆ, ಊಟ ತಿಂಡಿ, ಹೀಗೆ ಬದುಕಿನ ಎಲ್ಲ ಸಂಗತಿಗಳ ಕುರಿತೂ ತುಂಬಾ ಎತ್ತರದ ಸದಭಿರುಚಿ ಹೊಂದಿದ್ದು, ಒಂದು ರೀತಿಯಲ್ಲಿ ಪರಿಪೂರ್ಣ ವ್ಯಕ್ತಿಯಾಗಿ ನನಗೆ ಕಂಡಿದ್ದರು. ಹಾಡುಗಾರಿಕೆ ಕಲಿಯಲೆಂದು ಅವರ ಬಳಿ ಹೋಗಿದ್ದರೂ ಕೆಲವೇ ತಿಂಗಳುಗಳಲ್ಲಿ ಅದು ಹಿಂದೆ ಸರಿದು ಸಂಗೀತ ರಸಗ್ರಹಣದ ಬಗ್ಗೆ ಪಾಠ, ಪ್ರಾತ್ಯಕ್ಷಿಕೆ ಕಡೆ ಹೊರಳಿತು. ಅವರೊಂದಿಗೆ ನಡೆದ ಮಾತುಕತೆ, ಹರಟೆ ಇನ್ನಿತರ ಆಸಕ್ತ ಸಂಗತಿಗಳತ್ತಲೂ ಹರಡಿ, ಒಟ್ಟಾರೆ ಬದುಕಿನ ಬಗ್ಗೆಯೇ ನನ್ನಲ್ಲಿ ಸದಭಿರುಚಿಯನ್ನು ರೂಪಿಸಿತು.

ಹೀಗೇ ಒಂದು ದಿನ ಹರಟೆಯಲ್ಲಿ ತೊಡಗಿದ್ದಾಗ ಅವರು ನನಗೊಂದು ಪುಟ್ಟ ಪುಸ್ತಕವನ್ನು ಕೊಟ್ಟರು. 4.5 x 4.5 ಇಂಚಿನ, ನೂರೈವತ್ತು ಪುಟಗಳ ಆ ಪಾಕೆಟ್ ಪುಸ್ತಕದ ಹೆಸರು ‘ಬೆಟರ್ ಫೋಟೊಗ್ರಾಫ್ಸ್’. ಫ್ಲಾಶ್ ಬುಕ್ಸ್ ಪ್ರಕಾಶನ ಪ್ರಕಟಿಸಿದ ಆ ಪುಸ್ತಕದ ಬಗ್ಗೆ ಅವರು ಸುಮಾರು ಮುಕ್ಕಾಲು ಗಂಟೆ ಮಾತನಾಡಿದರು. ಮನೆಗೆ ತಲುಪಿದ ಮೇಲೆ ಒಂದು ಗಂಟೆಯೊಳಗೆ ಆ ಪುಸ್ತಕವನ್ನು ಓದಿ ಮುಗಿಸಿದೆ. ಅತ್ಯಂತ ಸರಳ ಭಾಷೆಯಲ್ಲಿ, ಪ್ರಾತ್ಯಕ್ಷಿಕೆಗಳ ಮೂಲಕ ಛಾಯಾಗ್ರಹಣದ ಪ್ರಾಥಮಿಕ ಸಂಗತಿಗಳನ್ನು ತುಂಬಾ ಪರಿಣಾಮಕಾರಿಯಾಗಿ ನಿರೂಪಿಸುವ ಪುಸ್ತಕ ಅದಾಗಿತ್ತು. ಛಾಯಾಗ್ರಹಣದ ಬಗ್ಗೆ ಗುರುಗಳಾದ ಸುಬ್ಬರಾವ್ ಅವರ ಉತ್ಕಟತೆ ತುಂಬಿದ ಮಾತು ಮತ್ತು ಆ ಪುಸ್ತಕದ ಓದು ಎರಡೂ ಸಂಭವಿಸಿದ ಆ ದಿನವೇ ಛಾಯಾಗ್ರಹಣದೊಂದಿಗೆ ನನ್ನ ಸಂಬಂಧ ಶುರುವಾದ ದಿನ ಎಂದು ನಾನು ನಂಬಿದ್ದೇನೆ.

ಛಾಯಾಗ್ರಹಣದ ಬಗ್ಗೆ ನನ್ನ ಆಸಕ್ತಿ ತೀವ್ರವಾಗುತ್ತಿದ್ದಂತೆ ಬೆಂಗಳೂರಿನ ಸುಪ್ರಸಿದ್ಧ ಛಾಯಾಗ್ರಾಹಕರಾಗಿದ್ದ ಜಿ ಥಾಮಸ್, ಸಿ ರಾಜಗೋಪಾಲ್, ಬಿಎಸ್ ಸುಂದರಂ ಅವರ ಕೃತಿಗಳನ್ನು ನೋಡಿದೆ. ಅವರೆಲ್ಲ ಬೆಂಗಳೂರಿನಲ್ಲಿಯೇ ಇದ್ದುದರಿಂದ ಪ್ರತ್ಯೇಕವಾಗಿ ಒಬ್ಬೊಬ್ಬರನ್ನೂ ಭೇಟಿ ಮಾಡಿ ಅವರ ಆಲೋಚನೆ, ಶೈಲಿಗಳ ಪರಿಚಯ ಮಾಡಿಕೊಂಡೆ. ಇವರೆಲ್ಲರೂ ಬಹುಪಾಲು ಪಿಕ್ಟೊರಿಯಲ್ ಪ್ರಭೇದದಲ್ಲಿ ಆಸಕ್ತಿ ಹೊಂದಿದ್ದರು. ಇವರಷ್ಟೇ ಅಲ್ಲದೇ ಇ ಹನುಮಂತರಾವ್, ಟಿ ಎನ್ ಎ ಪೆರುಮಾಳ್ (ವನ್ಯಜೀವಿ ಛಾಯಾಗ್ರಾಹಕ) ಹಾಗೂ ಬೆಂಗಳೂರಿನ ಇನ್ನೂ ಅನೇಕ ಸಲಾನ್ ವಲಯದ ಛಾಯಾಗ್ರಾಹಕರ ಚಿತ್ರಗಳನ್ನು ಉತ್ಸಾಹ ಹಾಗು ಬೆರಗಿನಿಂದ ನೋಡಿದೆನಾದರೂ ಆ ಬಗೆಯ ಛಾಯಾಗ್ರಹಣ ನನಗೆ ಅಸಾಧ್ಯವೆನ್ನಿಸಿತು.

1972 ರಲ್ಲಿ, ನನ್ನ ಮಟ್ಟಿಗೆ ಒಂದು ಮಹತ್ವದ ಘಟನೆ ಬೆಂಗಳೂರಿನಲ್ಲಿ ಜರುಗಿತು. ಅದೆಂದರೆ ಮ್ಯಾಕ್ಸ್ಮುಲ್ಲರ್ ಭವನದಲ್ಲಿ’ಫೇಸಸ್’ಎಂಬ ಶೀರ್ಷಿಕೆಯಡಿ ಶ್ರೀ ಕೆ ಜಿ ಸೋಮಶೇಖರ್ ಅವರು ತೆಗೆದ ಕರ್ನಾಟಕದ ಪ್ರಸಿದ್ಧ ಸಾಹಿತಿ, ಕಲಾವಿದರ ಸುಮಾರು ಐವತ್ತು ಭಾವಚಿತ್ರಗಳ ಪ್ರದರ್ಶನ. ಈ ಪ್ರದರ್ಶನದಲ್ಲಿ ಕಪ್ಪು ಬಿಳುಪಿನ 16 x 20 ಇಂಚು ಅಳತೆಯ ಭಾವಚಿತ್ರಗಳಿದ್ದವು. ಈ ಚಿತ್ರಗಳು ನನ್ನ ಮೇಲೆ ಅದೆಷ್ಟು ಪರಿಣಾಮ ಬೀರಿದವೆಂದರೆ ಆ ಕೂಡಲೇ ನಾನೂ ಭಾವಚಿತ್ರ ಪ್ರಭೇದದಲ್ಲಿಯ ನನ್ನ ಆಸಕ್ತಿಯನ್ನು ಮುಂದುವರಿಸಲು ನಿರ್ಧರಿಸಿಬಿಟ್ಟೆ. ಆ ಪ್ರದರ್ಶನವನ್ನು ನೋಡಿದ ದಿನ ನನ್ನ ಛಾಯಾಗ್ರಹಣ ಬದುಕಿನ ಎರಡನೇ ಮಹತ್ವದ ದಿನ ಎಂದು ನಿಸ್ಸಂದೇಹವಾಗಿ ಒಪ್ಪಿಕೊಳ್ಳುತ್ತೇನೆ. ಚಿತ್ರಗಳನ್ನು ನೋಡಿದ ಬಳಿಕ ಅಲ್ಲೇ ಇದ್ದ ಶ್ರೀ ಸೋಮಶೇಖರ್ ಅವರಿಗೆ ನನ್ನ ಮೆಚ್ಚುಗೆ ತಿಳಿಸಿ, ಅವರು ಬಳಸುವ ಕ್ಯಾಮೆರಾ ಲೆನ್ಸ್, ಫಿಲ್ಮ್, ಡೆವಲೆಪರ್ ಇತ್ಯಾದಿಗಳ ಬಗ್ಗೆ ಮಾತನಾಡಿ, ತುಂಬು ಗೌರವದಿಂದ ವಂದಿಸಿ ಹೊರಬಂದೆ. ಅದಾದ ನಂತರ ಸುಮಾರು ಮೂವತ್ತೈದು ವರ್ಷಗಳ ಕಾಲ ಅವರನ್ನು ಮತ್ತೆ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಆದರೂ ಸೋಮಶೇಖರ್ ಅವರೇ ನನ್ನ ಪರೋಕ್ಷ ಗುರುಗಳು ಹಾಗೂ ಅವರ ಕೃತಿಗಳೇ ನನ್ನ ಪಠ್ಯಗಳು ಎಂದು ಯಾವುದೇ ಹಿಂಜರಿಕೆ ಇಲ್ಲದೇ ಹೇಳಲು ಇಚ್ಛಿಸುತ್ತೇನೆ.

ಮುಂದಿನ ಎರಡು ಮೂರು ವರ್ಷಗಳಲ್ಲಿ, ಅಂದರೆ 1975ರ ವರೆಗೆ ಇತರ ಹಲವು ಭಾರತೀಯ ಹಾಗೂ ಅನ್ಯದೇಶೀಯ ಖ್ಯಾತ ಛಾಯಾಗ್ರಾಹಕರ (ವಿಶೇಷವಾಗಿ ರಘುರಾ0್, ಮಹೇಶ್ವರಿ, ಟಿ ಎಸ್ ಸತ್ಯನ್, ಓ ಪಿ ಶರ್ಮ, ರಘುರಾಯ್, ರವೀಶ್ ಕಾಸರವಳ್ಳಿ, ಯೂಸುಫ್ ಕಾರ್ಶ್, ಹೆನ್ರಿ ಕಾರ್ಟಿಯರ್ ಬ್ರೆಸ್ಸೋ ಮುಂತಾದವರು) ಕೃತಿಗಳನ್ನು ಪರಿಚಯ ಮಾಡಿಕೊಳ್ಳುವುದರಲ್ಲಿ ನಿರತನಾದೆ.

ಮೊಟ್ಟ ಮೊದಲ ಬಾರಿಗೆ ನಾನು ಫೋಟೊ ತೆಗೆದಿದ್ದು 1973ರಲ್ಲಿ. ನನ್ನ ಅತ್ತಿಗೆಯವರ ಅಕ್ಕ, ಭಾವನ ಬಳಿ 35 ಎಂಎಂ ಅಶಾಹಿ ಪೆಂಟಾಕ್ಸ್ ಕ್ಯಾಮೆರಾ ಇತ್ತು. ಅತ್ಯಂತ ಉದಾರ ಮನಸ್ಸಿನ ಆ ದಂಪತಿಗಳಿಂದ ಕ್ಯಾಮೆರಾವನ್ನು ಕೆಲವು ದಿನಗಳ ಕಾಲ ಉಪಯೋಗಿಸುವ ಅವಕಾಶ ದೊರೆಯಿತು. ಆ ಕ್ಯಾಮೆರಾ ನನ್ನ ಕೈಲಿದ್ದ ಎರಡು ವಾರಗಳಲ್ಲಿ ಎರಡು ಮೂರು ರೋಲ್, ಆರ್ಓ, 400 ಎಎಸ್ಎ, ರೀಫಿಲ್ಡ್ ಫಿಲ್ಮಿನಲ್ಲಿ ನನ್ನ ಕುಟುಂಬ ಸದಸ್ಯರ ಹಾಗೂ ಎ ಸುಬ್ಬರಾವ್ ಅವರ ಚಿತ್ರಗಳನ್ನು ತೆಗೆದೆ. ಅವುಗಳಲ್ಲಿ ಎರಡು ಮೂರು ಚಿತ್ರಗಳನ್ನು ಬ್ಲೋ ಅಪ್ (12 x 15) ಮಾಡಿಸಿ ನೋಡಿದಾಗ ಪರವಾಗಿಲ್ಲ ಅನ್ನಿಸಿ ಕೊಂಚ ಧೈರ್ಯ ಬಂತು.

ಟಿ ಕೆ ಲಕ್ಷ್ಮಣರಾವ್ ನನ್ನ ಚಿಕ್ಕಪ್ಪ. ಜಯನಗರ 7ನೇ ಬ್ಲಾಕಿನಲ್ಲಿದ್ದ ಅವರು ಕೆ ಇ ಬಿ ಯಲ್ಲಿ ಕೆಲಸ ಮಾಡುತ್ತಿದ್ದರು. ಅದಾಗಲೇ ಹಲವು ವರ್ಷಗಳಿಂದ ವೃತ್ತಿಪರ ಛಾಯಾಗ್ರಾಹಕರೂ (ಮದುವೆ, ಮುಂಜಿಗಳಂಥ ಸಮಾರಂಭಗಳು) ಆಗಿ ಕೆಲಸ ಮಾಡುತ್ತಿದ್ದರು. ತಮ್ಮ ಛಾಯಾಗ್ರಹಣಕ್ಕೆ ಅವಶ್ಯವಾಗಿದ್ದ ಎಲ್ಲ ಪರಿಕರಗಳನ್ನು (ಕ್ಯಾಮೆರಾಗಳು, ಫ್ಲಾಶ್ ಗಳು) ಹೊಂದಿದ್ದರು. ಅಲ್ಲದೆ ಮನೆಯಲ್ಲಿ ತಮ್ಮದೇ ಡಾರ್ಕ್ ರೂಂ ಕೂಡ ಮಾಡಿಕೊಂಡಿದ್ದರು. ಇವರ ಸಲಹೆ, ಸಹಾಯದಿಂದ ಮೊಟ್ಟ ಮೊದಲ ಬಾರಿಗೆ ನನ್ನ ಜೀವನದ ಮೊದಲ ಸ್ವಂತ ಕ್ಯಾಮೆರಾವನ್ನು ಸ್ಪರ್ಷಿಸಿದೆ. ವರ್ಷಕ್ಕೊಮ್ಮೆ ಪಾವತಿಯಾಗುತ್ತಿದ್ದ ನನ್ನ ಸ್ಕಾಲರ್ಶಿಪ್ ಹಣಕ್ಕೆ ಮತ್ತಷ್ಟು ಸೇರಿಸಿ, ಬ್ರಿಗೇಡ್ ರಸ್ತೆಯ ‘ಫೋಟೊಸ್ಪೀಡ್’ ಅಂಗಡಿ0ುಲ್ಲಿ ಸಾವಿರದ ಮುನ್ನೂರು ರೂಪಾಯಿ ಕೊಟ್ಟು ಸೆಕೆಂಡ್ ಹ್ಯಾಂಡ್ ಕ್ಯಾಮೆರಾ ಖರೀದಿಸಿದೆ. ಆ ದಿನ ನನ್ನ ಬದುಕಿನ ಪರಮಾನಂದದ ದಿನಗಳಲ್ಲೊಂದು. 35 ಎಂಎಂ, ಮಾಮಿ0ಾ ಸಿಕಾರ್, ಎಸ್ಎಲ್ಆರ್, ಬಾಡಿ ಜೊತೆಗೆ 50 ಎಂಎಂ ನಾರ್ಮಲ್ ಲೆನ್ಸ್ ನ ಕ್ಯಾಮೆರಾ ಅದು.

1973 ಜೂನ್ ತಿಂಗಳಲ್ಲಿ ನಾನು ಕೊಂಡ ಈ ಕ್ಯಾಮೆರಾ ಮುಂದಿನ ಐದು ವರ್ಷಗಳ ಕಾಲ ಅಂದರೆ 1978ರ ವರೆಗೂ ನನ್ನ ಪರಮಾಪ್ತ ಸಂಗಾತಿಯಾಗಿತ್ತು.

1976 ರ ಜೂನ್ ತಿಂಗಳಲ್ಲಿ ಇಂಜಿನೀಯರಿಂಗ್ ಪದವಿ ಶಿಕ್ಷಣ ಮುಗಿಸುವ ವೇಳೆಗೆ ಛಾಯಾಗ್ರಹಣವನ್ನು ಕೇವಲ ಹವ್ಯಾಸವನ್ನಾಗಿ ಮುಂದುವರಿಸಬೇಕು ಎಂದು ನಿರ್ಧರಿಸಿಬಿಟ್ಟಿದ್ದೆ. ಹಣ ಸಂಪಾದನೆಗೋಸ್ಕರ ಮದುವೆ ಸಮಾರಂಭಗಳಲ್ಲಿ ಮಾಡುವ ಫ್ಲಾಶ್ ಫೊಟೊಗ್ರಫಿ ನನಗೆ ಒಗ್ಗುವುದಿಲ್ಲ ಎನ್ನುವುದು ನನಗಾಗಲೇ ಮನವರಿಕೆಯಾಗಿತ್ತು.

ಭಾವಚಿತ್ರ ಛಾಯಾಗ್ರಹಣಕ್ಕೆ ಫ್ಲಾಶ್ ಅನ್ನು ಸೃಜನಶೀಲವಾಗಿ ಬಳಸಲು ಸಾಧ್ಯವೇ ಎಂದು ಅರಿಯಲು ಕೆಲವು ತಿಂಗಳುಗಳ ಕಾಲ ಪ್ರಯತ್ನಿಸಿ ಸಂಪೂರ್ಣವಾಗಿ ಸೋತೆ. ಕೊನೆಗೆ ಫ್ಲಾಶ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿ ಸಹಜ, ಲಭ್ಯ ಸಹಜ ಬೆಳಕಿನಲ್ಲೇ ಭಾವಚಿತ್ರ ತೆಗೆಯುವ ಶೈಲಿಗೆ ಒಗ್ಗಿಕೊಂಡೆ. ಕುಟುಂಬ ಸದಸ್ಯರ, ಸಂಬಂಧಿಗಳ, ಸ್ನೇಹಿತರ ಹಾಗೂ ನೆರೆಹೊರೆಯ ವ್ಯಕ್ತಿಗಳ, ಅದರಲ್ಲಿಯೂ ವಿಶೇಷವಾಗಿ ವಯಸ್ಸಾದ ಹೆಂಗಸರು, ಗಂಡಸರು ಹಾಗೂ ಮಕ್ಕಳ ಭಾವಚಿತ್ರ ತೆಗೆಯುವುದು ನನಗೆ ತುಂಬ ಇಷ್ಟವಾದ ಕೆಲಸವಾಗಿತ್ತು.

12-m-k-indira

ಖರ್ಚಾಗುವ ಹಣ ವಾಪಾಸು ಬಾರದ ಈ ಬಗೆಯ  ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರಿಂದ ಅನಿವಾರ್ಯವಾಗಿ ಛಾಯಾಗ್ರಹಣಕ್ಕೆ ತಗುಲುವ ಖರ್ಚಿನ ಕುರಿತು ಹತೋಟಿ ಇಟ್ಟುಕೊಳ್ಳಬೇಕಾಗಿತ್ತು. ಹಾಗಾಗಿ ಆಗ ನಾನು ಬಳಸುತ್ತಿದ್ದುದು ಬಹುತೇಕ 200/400 ಎಸ್ಎ ವೇಗದ, ರೀಫಿಲ್ ಮಾಡಿದ ಆರ್ಓ ಫಿಲ್ಮ್ಗಳನ್ನು. 15/20 ರೂಪಾಯಿಗಳಿಗೆ ಸಿಗುತ್ತಿದ್ದ ಈ ಫಿಲ್ಮ್ ಸಾಮಾನ್ಯವಾಗಿ ಎಲ್ಲ ಪ್ರಮುಖ ಸ್ಟುಡಿಯೋಗಳಲ್ಲಿ ಸಿಕ್ಕುತ್ತಿತ್ತು. ಕಂಪೆನಿ ಪ್ಯಾಕ್ನೊಂದಿಗೆ ಲಭ್ಯವಿದ್ದ ಆರ್ಓ, ಆಗ್ಫಾ, ಕೊಡಾಕ್ ಫಿಲ್ಮ್ ರೋಲ್ಗಳ ಬೆಲೆ ರೀಫಿಲ್ ರೋಲ್ಗಿಂತ ದುಪ್ಪಟ್ಟು ಅಥವಾ ಮೂರರಷ್ಟು ಇರುತ್ತಿತ್ತು.

ಫಿಲ್ಮ್ ಸಂಸ್ಕರಣೆ ಬಗ್ಗೆ ನನ್ನ ಚಿಕ್ಕಪ್ಪನವರ ಮನೆಯ ಡಾರ್ಕ್ ರೂಂನಲ್ಲಿ ಪಡೆದ ಪ್ರಾಥಮಿಕ ತರಬೇತಿಯಿಂದಾಗಿ, ಸಾಕಷ್ಟು ಬೇಗನೆ ನನ್ನ ಮನೆಯಲ್ಲಿಯೇ ಫಿಲ್ಮ್ ಸಂಸ್ಕರಣೆಯನ್ನು ಆರಂಭಿಸಿದೆ. ರಾತ್ರಿ ಮಾಡುತ್ತಿದ್ದ ಈ ಕೆಲಸಕ್ಕೆ ಬಚ್ಚಲ ಮನೆಯನ್ನೇ ತಾತ್ಕಾಲಿಕ ಡಾರ್ಕ್ ರೂಂ ಮಾಡಿಕೊಳ್ಳುತ್ತಿದ್ದೆ. ಇದು ನನ್ನಂಥ ಬಹುಪಾಲು ಹವ್ಯಾಸಿ ಛಾಯಾಗ್ರಾಹಕರೆಲ್ಲ ಅನುಸರಿಸುತ್ತಿದ್ದ ಮಾರ್ಗವೂ ಆಗಿತ್ತು. ಅದಾಗಲೇ ಟ್ರೇ ಸಂಸ್ಕರಣೆಗೆ ಬದಲಾಗಿ ಟ್ಯಾಂಕ್ ಸಂಸ್ಕರಣೆ ಚಾಲ್ತಿಗೆ ಬಂದಿದ್ದರಿಂದ, ಈ ಕಾರ್ಯ ಅತ್ಯಂತ ಸುಲಭವೂ ಸರಳವೂ ಆಗಿತ್ತು. ಹಾಗಾಗಿ ನಾನು ನೇರವಾಗಿ ಟ್ಯಾಂಕ್ ಸಂಸ್ಕರಣೆಯನ್ನೇ ರೂಢಿಸಿಕೊಂಡೆ.

ಫಿಲ್ಮ್ ಡೆವಲೆಪ್ಮೆಂಟ್ ಬಗ್ಗೆ ಸುದೀರ್ಘ ಸಮಾಲೋಚನೆ, ಪ್ರಯೋಗಗಳ ನಂತರ ಅಂತಿಮವಾಗಿ ಆಯ್ಕೆ ಮಾಡಿಕೊಂಡಿದ್ದು ಮೇ ಆಂಡ್ ಬೇಕರ್ ಕಂಪೆನಿಯ ಪ್ರೋಮೈಕ್ರಾಲ್ ರೆಡಿಮೇಡ್ ಡೆವಲೆಪರ್ ಅನ್ನು (ಸಂಸ್ಕರಣೆ ಅವಧಿ ಸುಮಾರು 40 ನಿಮಿಷ). ಅಪರೂಪಕ್ಕೊಮ್ಮೆ ಕೊಡಾಕ್ ಮೈಕ್ರೋಡಾಲ್ ಎಕ್ಸ್ ಕೂಡ ಬಳಸಿದ್ದುಂಟು.

ಫೋಟೊ ಪ್ರಿಂಟಿಂಗ್ ಬಗ್ಗೆ, ಅದರಲ್ಲಿಯೂ ವಿಶೇಷವಾಗಿ ಬ್ಲೋ ಅಪ್ ಸಂಸ್ಕರಣೆ ಬಗ್ಗೆ ತಿಳಿವಳಿಕೆ ಪಡೆದುಕೊಂಡಿದ್ದು ವಾಲಿ ಸ್ಟುಡಿಯೋ ಹಾಗೂ ಎಂಪೈರ್ ಸ್ಟುಡಿಯೋಗಳಲ್ಲಿ. ಈ ಸ್ಟುಡಿಯೋಗಳಲ್ಲಿ ನಾನು ನೂರಾರು ಗಂಟೆಗಳನ್ನು ಕಳೆದಿದ್ದೇನೆ. ಅಂತಿಮವಾಗಿ 1983ರಲ್ಲಿ ನನ್ನ ಮನೆಯಲ್ಲಿಯೇ ಡಾರ್ಕ್ ರೂಂ ಮಾಡಿಕೊಂಡೆ. ಬಾಡಿಗೆ ಮನೆ ಬದಲಾಯಿಸಿದಾಗಲೆಲ್ಲ ಅದೂ ಬದಲಾಗುತ್ತಿತ್ತು.

ಸೆರೆಹಿಡಿದ ಚಿತ್ರಗಳು ಫಿಲ್ಮುಗಳ ಮೇಲೆ ಮೂಡುತ್ತಿದ್ದುದು, ಅದರಲ್ಲಿಯೂ ವಿಶೇಷವಾಗಿ ಬಿಳಿ ಪೇಪರಿನ ಮೇಲೆ ನೋಡನೋಡುತ್ತಿದ್ದಂತೆ ನಿಧಾನವಾಗಿ, ಚಮತ್ಕಾರದಂತೆ ಡೆವಲಪರ್ ಟ್ರೇನಲ್ಲಿ ಮೈದುಂಬಿಕೊಳ್ಳುತ್ತಿದ್ದ ಚಿತ್ರಗಳನ್ನು ನೋಡುವಾಗ ಆಗುತ್ತಿದ್ದ ರೋಮಾಂಚನ, ಸಂತೋಷ, ಬೇಸರ, ನೋವು ಅವೆಲ್ಲ ಮಾತುಗಳಲ್ಲಿ ವಿವರಿಸಲಿಕ್ಕಾಗದ ಅಮೂಲ್ಯ ಕ್ಷಣಗಳು, ಅವಿಸ್ಮರಣೀಯ ಅನುಭವಗಳು. ಇಲ್ಲಿ ಫಿಲ್ಮ್ ಛಾಯಾಗ್ರಹಣದ ವಿಶೇಷತೆ ಬಗ್ಗೆ ಒಂದು ಮಾತು ಹೇಳಲೇ ಬೇಕು. ಫೋಟೊ ಕ್ಲಿಕ್ ಮಾಡಿದ ಮೇಲೆ, ಅದರ ಪ್ರಿಂಟ್ ನೋಡಲು ಕಾಯಬೇಕಿತ್ತು. ಆತಂಕ, ಭರವಸೆ ಹಾಗು ಅನಿರೀಕ್ಷಿತತೆಗಳಿಂದ ಕೂಡಿದ ಈ ಕಾಯುವ ಅವಧಿ ಕಳೆದ ನಂತರವೇ ನನ್ನ ಸೋಲು, ಗೆಲುವುಗಳು ಗೋಚರವಾಗುತ್ತಿತ್ತು. ಹಾಗಾಗಿ ಪ್ರಿಂಟ್ ನೋಡಿದಾಕ್ಷಣ ಆಗುತ್ತಿದ್ದ ಬೆರಗಿನ ಅನುಭವವೂ ಅಷ್ಟೇ ವಿಶಿಷ್ಟ ಮತ್ತು ಅನನ್ಯವಾದದ್ದು. ಇಂದಿನ ಡಿಜಿಟಲ್ ಯುಗದ ಅಪಾರ ಅನುಕೂಲತೆಗಳಿದ್ದಾಗ್ಯೂ ಫಿಲ್ಮ್ ಯುಗದ ಆ ವಿಶಿಷ್ಟ ಅನುಭವದಿಂದ ನಾನು ವಂಚಿತನಾಗಿರುವುದಂತೂ ಸತ್ಯ. ಇದು ನನ್ನಂತಹ ಫಿಲ್ಮ್ ಯುಗದ ಬಹುಪಾಲು ಛಾಯಾಗ್ರಾಹಕರ ಅಭಿಪ್ರಾಯವೆಂದೂ ಭಾವಿಸುತ್ತೇನೆ.

1984ರಲ್ಲಿ ಕ್ಯೂ ಎಸ್ಎಸ್ ಕಲರ್ ಲ್ಯಾಬ್ ಗಳು ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ನೆಲೆಯೂರಿದವು. ವಿಶೇಷವಾಗಿ ಫೋಟೊ ಫ್ಲಾಶ್, ಆಡ್ ಲ್ಯಾಬ್. ಕಂಪ್ಯೂಟರೀಕರಣಗೊಂಡ ಈ ಲ್ಯಾಬುಗಳು ಅತ್ಯಂತ ತ್ವರಿತವಾಗಿ, ಸ್ಥಿರ ಗುಣಮಟ್ಟದ ಸಂಸ್ಕರಣೆಯನ್ನು ಮಾಡುತ್ತಿದ್ದವು. ಅಲ್ಲದೇ ಕಲರ್ ಫಿಲ್ಮ್ ಬೆಲೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಯಿತು. ಈ ಲ್ಯಾಬ್ ಗಳು ನಿಗದಿಪಡಿಸಿದ್ದ ಫಿಲ್ಮ್ ಹಾಗೂ ಪ್ರಿಂಟಿಂಗ್ ಚಾರ್ಜ್ ಗಳೂ ಕಡಿಮೆಯೇ ಆಗಿತ್ತು. ಹಾಗಾಗಿ ನಾನೂ ಖರ್ಚು, ಶ್ರಮ ಮತ್ತು ಸಮಯ ಉಳಿತಾಯವಾಗುವ ಕಲರ್ ಮಾಧ್ಯಮಕ್ಕೆ ಅನಿವಾರ್ಯವಾಗಿ ಹೊರಳಿದೆ. ಮೂಲಭೂತವಾಗಿ ಕಪ್ಪು ಬಿಳುಪು ಮಾಧ್ಯಮವನ್ನು ಇಷ್ಟಪಟ್ಟು, ಅದಕ್ಕನುಗುಣವಾದ ಸಂವೇದನೆಯನ್ನು ರೂಢಿಸಿಕೊಂಡಿದ್ದ ನನಗೆ ಈ ಬದಲಾವಣೆಯಿಂದಾಗಿ ನನ್ನ ಕಾರ್ಯ ಶೈಲಿ0ುಲ್ಲಿ ಕೆಲವು ಹೊಂದಾಣಿಕೆ0ುನ್ನು ಮಾಡಿಕೊಳ್ಳಬೇಕಾ0ು್ತು. ಈ ಮಾರ್ಪಾಡು ಪ್ರಧಾನವಾಗಿ ಕಲರ್ ಮಾಧ್ಯಮದ ‘ಸರ್ಫೆಸ್ ಪ್ರೆಟಿನೆಸ್’ ಅನ್ನು ಕುಗ್ಗಿಸುವುದಕ್ಕೆ ಸಂಬಂಧಿಸಿದ್ದಾಗಿತ್ತು. ಕಲರ್ ಸಂಸ್ಕರಣೆಯ ಡಾರ್ಕ್ ರೂಮನ್ನು ಮನೆಯಲ್ಲಿಯೇ ಅಳವಡಿಸಿಕೊಳ್ಳುವುದು ಅತ್ಯಂತ ದುಬಾರಿ ಸಂಗತಿಯಾಗಿದ್ದರಿಂದ ಅಂತಹ ಆಲೋಚನೆಯಿಂದ ದೂರವೇ ಉಳಿದೆ.

1984 ರಿಂದ ಕೋನಿಕಾ 100 ಎಎಸ್ಎ ಫಿಲ್ಮ್ ಬಳಕೆ ಮಾಡುತ್ತಿದ್ದೆ. ಫೋಟೊ ಫ್ಲಾಶ್ ಲ್ಯಾಬಿನಲ್ಲಿ ಫಿಲ್ಮ್ ಸಂಸ್ಕರಣೆಮಾಡಿ ಫೋಸ್ಟ್ ಕಾರ್ಡ್ ಪ್ರಿಂಟ್ ಪಡೆಯುತ್ತಿದ್ದೆ. ಮೆಜೆಸ್ಟಿಕ್ ನಲ್ಲಿದ್ದ ಎಂಪೈರ್ ಸ್ಟುಡಿಯೋದಲ್ಲಿ ಮ್ಯಾನ್ಯುಯಲ್ ಕಲರ್ ಬ್ಲೋಅಪ್ ಮಾಡಿಸುತ್ತಿದ್ದೆ. ಬ್ಲೋಅಪ್ ಮಾಡಿಸುವಾಗ ಕಲರ್ ಸಾಚುರೇಶನ್ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು, ಸ್ಕಿನ್ ಟೋನ್ ಇಮೇಜ್ ಬರುವಂತೆ ನಿಗಾ ವಹಿಸುತ್ತಿದ್ದೆ. ಹೀಗೆ ಸಾಗಿತ್ತು ನನ್ನ ಕಲರ್ ಫೋಟೊಗ್ರಫಿ. ಆದರೆ ಕಲರ್ ಫೋಟೊಗಳಲ್ಲಿ ಬಣ್ಣಗಳೇ ಮುನ್ನೆಲೆಗೆ ಬಂದು ತಕ್ಷಣದ ಆಕರ್ಷಣೆಯೇ ಮುಖ್ಯವಾಗಿ, ವ್ಯಕ್ತಿತ್ವವನ್ನು ಸೆರೆಹಿಡಿಯುವ ಮುಖ್ಯ ಕಾಳಜಿ ಹಿನ್ನೆಲೆಗೆ ಸರಿಯುವ ಅಪಾಯವನ್ನು ಮನಗಂಡೆ. ಹಾಗಾಗಿ ಚಿತ್ರಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಣ್ಣ ಇರುವಂತೆ ಎಚ್ಚರ ವಹಿಸುತ್ತಿದ್ದೆ. ಆದ್ದರಿಂದಲೇ ಪ್ರಸ್ತುತ ಪುಸ್ತಕದಲ್ಲಿರುವ ಬಹುಪಾಲು ಚಿತ್ರಗಳು ಮೂಲದಲ್ಲಿ ಕಲರ್ ನಲ್ಲಿದ್ದರೂ ಅವುಗಳನ್ನು ಕಪ್ಪು-ಬಿಳುಪು ಟೋನಿಗೆ ಬದಲಾಯಿಸಿದಾಗ ಗುಣಮಟ್ಟದಲ್ಲಿ ಹೆಚ್ಚೇನೂ ನಷ್ಟವಾಗಿದೆಯೆಂದು ನನಗನ್ನಿಸುತ್ತಿಲ್ಲ. ಕೆಲವು ವಿಶೇಷ ಸಂದರ್ಭಕ್ಕಾಗಿ ಮಾತ್ರ ಕಪ್ಪು-ಬಿಳುಪು ಫೋಟೋಗ್ರಫಿಯನ್ನೇ ಈಗಲೂ ಉಳಿಸಿಕೊಂಡಿದ್ದೇನೆ.

ಫೋಟೋಗ್ರಫಿ ಅಲ್ಲದೆ ಸಾಹಿತ್ಯ, ಸಂಗೀತ, ನಾಟಕ, ಮತ್ತು ಸಿನಿಮಾ ಇವುಗಳ ಬಗ್ಗೆಯೂ ನನ್ನ ಆಸಕ್ತಿ ಹೆಚ್ಚಾಯಿತು. ಹಾಗಾಗಿ ಎಂಬತ್ತರ ದಶಕದಲ್ಲಿ ಕನ್ನಡ ಸಾಹಿತ್ಯದ, ಅದರಲ್ಲೂ ಪ್ರಮುಖವಾಗಿ ನವ್ಯ ಹಾಗೂ ನವೋದಯ ಸಾಹಿತ್ಯದ ಅತ್ಯುತ್ತಮ ಕೃತಿಗಳ ಮತ್ತು ಸಾಹಿತಿಗಳ ಪರಿಚಯವಾಯಿತು. ಇವೆಲ್ಲ ಸಾಧ್ಯವಾಗಿದ್ದು ನಿರಂತರ ಓದು, ಹಾಗೂ ಸಾಹಿತ್ಯ ವಿಚಾರ ಸಂಕಿರಣಗಳು, ಗೋಷ್ಠಿಗಳು ಮತ್ತು ಸಂವಾದದಲ್ಲಿ ಪಾಲ್ಗೊಂಡಿದ್ದರಿಂದ. ಅದೇ ಸಮಯದಲ್ಲಿ ನಾಟಕ ಕ್ಷೇತ್ರದಲ್ಲೂ ಮಹತ್ವದ ಪ್ರಯೋಗಗಳು (ವಿಶೇಷವಾಗಿ ಬಿ.ವಿ. ಕಾರಂತರ ‘ಬೆನಕ’ ತಂಡ ಇತ್ಯಾದಿ) ಬೆಂಗಳೂರಿನಲ್ಲಿ ನಡೆಯುತ್ತಿದ್ದವು. ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಂಬತ್ತರ ದಶಕ ಕನ್ನಡ ಸಿನಿಮಾ ಮಟ್ಟಿಗೆ ಸುವರ್ಣ ಯುಗವೆಂದು ಪರಿಗಣಿಸಲಾಗಿದೆ. ಪಟ್ಟಾಭಿರಾಮ ರೆಡ್ಡಿ, ಗಿರೀಶ ಕಾರ್ನಾಡ್, ಬಿ ವಿ ಕಾರಂತ, ಗಿರೀಶ್ ಕಾಸರವಳ್ಳಿ ಮುಂತಾದವರ ಹೊಸ ಅಲೆ ಸಿನಿಮಾಗಳು ನನ್ನ ಮೇಲೆ ಪ್ರಭಾವ ಬೀರಿದ್ದವು. ಅಲ್ಲದೆ ಆಗ ಪ್ರಖರಾವಸ್ಥೆಯಲ್ಲಿದ್ದ ಫಿಲ್ಮ್ ಸೊಸೈಟಿ ಚಳವಳಿಯಲ್ಲಿ (ವೀಕ್ಷಕ ಫಿಲ್ಮ್ ಸೊಸೈಟಿ, ಮಂಥನ ಫಿಲ್ಮ್ ಫೋರಮ್ ಸ್ಥಾಪನೆ ಇತ್ಯಾದಿ) ಸಕ್ರಿಯವಾಗಿ ತೊಡಗಿಕೊಂಡಿದ್ದೆ. ಪರಿಣಾಮವಾಗಿ ಅನೇಕ ರಾಷ್ಟ್ರಮಟ್ಟದ ಮತ್ತು ಜಾಗತಿಕ ಶ್ರೇಷ್ಠ ಸಿನಿಮಾಗಳ ಪರಿಚಯ ವೂ ಆಯಿತು.

1980 ರಲ್ಲಿ ಪುಣೆಯ ಎಫ್ ಟಿ ಐ ಐ ನಲ್ಲಿ ನಡೆದ ಒಂದು ತಿಂಗಳ ಸಿನಿಮಾ ರಸಗ್ರಹಣ ಶಿಬಿರದಲ್ಲಿ ಭಾಗವಹಿಸಿದೆ. ನಂತರ ಹೆಗ್ಗೋಡಿನ ನೀನಾಸಮ್ ಆರಂಭಿಸಿದ್ದ ಹತ್ತು ದಿನಗಳ ವಾರ್ಷಿಕ ಚಲನಚಿತ್ರ ರಸಗ್ರಹಣ ಶಿಬಿರದಲ್ಲಿ ಸುಮಾರು ಹತ್ತು ವರ್ಷಗಳ ಕಾಲ ನಿರಂತರವಾಗಿ ಸಂಪನ್ಮೂಲ ವ್ಯಕ್ತಿಯಾಗಿ, ಉಪನ್ಯಾಸಕನಾಗಿ ಪಾಲ್ಗೊಂಡೆ. ಅಲ್ಲದೆ ನೀನಾಸಮ್ ಕರ್ನಾಟಕದ ಬೇರೆ ಬೇರೆ ಊರುಗಳಲ್ಲಿ ಆಯೋಜಿಸುತ್ತಿದ್ದ ಅನೇಕ ಅಲ್ಪಾವಧಿ ಚಲನಚಿತ್ರ ರಸಗ್ರಹಣ ಶಿಬಿರಗಳಲ್ಲೂ ಭಾಗವಹಿಸಿದೆ. ಇದೇ ಸಮಯದಲ್ಲಿ ನೀನಾಸಮ್ ಬೇರೆ ಬೇರೆ ಊರುಗಳಲ್ಲಿ ಶ್ರೀ ಕೆ ವಿ ಸುಬ್ಬಣ್ಣ ಮತ್ತು ಶ್ರೀ ಟಿ ಪಿ ಅಶೋಕ ಅವರ ನೇತೃತ್ವದಲ್ಲಿ ನಡೆಸುತ್ತಿದ್ದ ಅನೇಕ ಸಾಹಿತ್ಯ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳುವ ಅವಕಾಶವೂ ಒದಗಿಬಂತು. 80 ಹಾಗೂ 90 ರ ದಶಕಗಳಲ್ಲಿ ನಡೆದ ಈ ಎಲ್ಲ ವಿದ್ಯಮಾನಗಳೂ ನನ್ನ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿ ನನ್ನ ಒಟ್ಟೂ ಸಂವೇದನೆಯನ್ನು ಸೂಕ್ಷ್ಮಗೊಳಿಸಿದವು. ಇದರ ಪರಿಣಾಮ ನಿಸ್ಸಂದೇಹವಾಗಿ ನನ್ನ ಫೋಟೋಗ್ರಫಿಯ ಮೇಲೂ ಆಯಿತು.

44-d-r-nagaraj

1983 ರಲ್ಲಿ ನಾನು ಕ್ಯಾಮೆರಾ ಬದಲಾಯಿಸಿದೆ. 50 ಎಂಎಂ ನಾರ್ಮಲ್ ಲೆನ್ಸ್ ಮತ್ತು 70-200 ಎಂಎಂ ಜೂಮ್ ಲೆನ್ಸ್ ನೊಂದಿಗೆ ಹೊಸ ಅಸಾಹಿ ಪೆಂಟೆಕ್ಸ್ ಖರೀದಿಸಿದೆ. ಸಾಮಾನ್ಯವಾಗಿ 110-130 ಎಂಎಂ ಫೋಕಲ್ ಲೆಂಗ್ತ್ ನಲ್ಲಿ ಭಾವಚಿತ್ರ ತೆಗೆಯುವುದನ್ನು ರೂಢಿಸಿಕೊಂಡೆ. ಹೀಗೆ ಮುಂದಿನ ಎಂಟು-ಹತ್ತು ವರ್ಷಗಳಲ್ಲಿ ಅನೇಕ ಸಾಹಿತಿಗಳ, ಕಲಾವಿದರ ಭಾವಚಿತ್ರಗಳನ್ನು ತೆಗೆದೆ. ಒಳ್ಳೆಯ ಸಾಹಿತ್ಯ ಕೃತಿಯೊಂದನ್ನು ಓದಿದಾಗ, ಒಳ್ಳೆಯ ಸಂಗೀತವನ್ನು ಕೇಳಿದಾಗ ಹಾಗೆಯೇ ಒಳ್ಳೆಯ ಸಿನಿಮಾ ನೋಡಿದಾಗ ನನಗಾಗುತ್ತಿದ್ದ ಸಂತೋಷ, ಮೆಚ್ಚುಗೆ ಆಯಾ ಸಾಹಿತಿಗಳ, ಕಲಾವಿದರ ಭಾವಚಿತ್ರಗಳನ್ನು ತೆಗೆಯಲು ನನ್ನನ್ನು ಪ್ರೇರೇಪಿಸುತ್ತಿತ್ತು. ಕೇವಲ ಸಾಹಿತಿ, ಕಲಾವಿದರಷ್ಟೇ ಅಲ್ಲದೆ, ಇತರ ನೂರಾರು ಬಗೆಯ ವ್ಯಕ್ತಿಗಳು ತಂತಮ್ಮ ಬದುಕಿಗೆ ಅವರದೇ ಆದ ರೀತಿಯಲ್ಲಿ ಅತ್ಯಂತ ತೀವ್ರವಾಗಿ, ಪ್ರಾಮಾಣಿಕವಾಗಿ ಸ್ಪಂದಿಸುವುದನ್ನ ಕಂಡಿದ್ದೇನೆ ಮತ್ತು ಅಂತಹ ಅನೇಕರ ಭಾವಚಿತ್ರಗಳನ್ನು ತೆಗೆದಿದ್ದೇನೆ. ಇದು ಒಂದು ರೀತಿ,ನಾನು ಅವರಿಗೆ ನನ್ನ ಪ್ರತಿಸ್ಪಂದನೆಯನ್ನೂ, ಗೌರವವನ್ನೂ ನನಗೆ ಗೊತ್ತಿದ್ದ ಮಾಧ್ಯಮದ ಮೂಲಕ ವ್ಯಕ್ತಪಡಿಸುವ ಮಾರ್ಗವೆಂದು ಭಾವಿಸುತ್ತಿದ್ದೆ.

ಭಾವಚಿತ್ರ ತೆಗೆಯುವ ಸಮಯದಲ್ಲಿ ನನ್ನ ಮನಸ್ಸಿನಲ್ಲಿದ್ದ ಆಲೋಚನೆಗಳನ್ನು ಹೀಗೆ ಸಂಗ್ರಹಿಸಬಹುದೇನೋ,

1. ವ್ಯಕ್ತಿ0ು ಮುಖಭಾವ ಅದರಲ್ಲೂ ವಿಶೇಷವಾಗಿ ಕಣ್ಣುಗಳು ಆ ವ್ಯಕ್ತಿಯ ಅಂತರಂಗದ, ವ್ಯಕ್ತಿತ್ವದ ಕನ್ನಡಿಯಾಗಬಲ್ಲದೆಂಬ ದೃಢವಾದ ನಂಬಿಕೆ.
2. ಕಲರ್ ಫೋಟೊಗ್ರಫಿಯ ಬಹುಮುಖ್ಯ ದೌರ್ಬಲ್ಯವಾದ ‘ಮೇಲ್ಪದರದ ಆಕರ್ಷಣೆ'(ಸರ್ಫೆಸ್ ಪ್ರೆಟಿನೆಸ್) ಅನ್ನು ಕುಗ್ಗಿಸುವುದು.
3. ಕೇವಲ ಆರ್ಥಿಕ ಹಾಗೂ ಕಡಿಮೆ ಶ್ರಮ ಕಾರಣಗಳಿಗಾಗಿ ಕಲರ್ ಮಾಧ್ಯಮವನ್ನು ಆರಿಸಿಕೊಂಡರೂ ಮೂಲತಃ ನನ್ನ ಮನೋಧರ್ಮ ಕಪ್ಪು-ಬಿಳುಪು ಮಾಧ್ಯಮದ ಸಂವೇದನೆಯೇ ಆಗಿದ್ದು, ಅದರಲ್ಲೂ ನಿರಾಡಂಬರದ ಅತ್ಯಲ್ಪ ಪರಿಕರಗಳ (ಮಿನಿಮಲಿಸ್ಟ) ಶೈಲಿ0ುನ್ನೇ ಅನುಸರಿಸುವುದು.
4. ಕೇಂದ್ರ ವಸ್ತುವಿನ ವೀಕ್ಷಣೆಗೆ ಭಂಗವಾಗದಂಥ, ಸರಳ ಕಪ್ಪು ಅಥವಾ ಬಿಳುಪು ಹಿನ್ನೆಲೆ ಆಯ್ದುಕೊಳ್ಳುವುದು.
5.ಯಾವುದೇ ರೀತಿಯ ಕೃತಕ ಬೆಳಕನ್ನು ಬಳಸದೇ, ಸಹಜ, ಲಭ್ಯ ಬೆಳಕನ್ನೇ ಬಳಸುವುದು.
6. ಭಾವಚಿತ್ರ ಎನ್ನುವುದು ಕೇವಲ ಛಾಯಾಗ್ರಾಹಕನ ಸೃಷ್ಟಿ ಅಲ್ಲ. ಅದು ಫೋಟೊ ತೆಗೆಯುವ ಮತ್ತು ತೆಗೆಸಿಕೊಳ್ಳುವ ಇಬ್ಬರ ಸಂಪೂರ್ಣ ತೊಡಗಿಸಿಕೊಳ್ಳುವಿಕೆಯ ಫಲ. ಇದನ್ನು ಸೂಚಿಸುವುದಕ್ಕಾಗಿಯೇ ನಾನು ತೆಗೆದ ಭಾವಚಿತ್ರಗಳಲ್ಲಿ ನನ್ನ ಸಹಿಯೊಟ್ಟಿಗೆ ಫೋಟೊ ತೆಗೆಸಿಕೊಂಡವರ ಸಹಿಯೂ ಇರುವಂತೆ ನೋಡಿಕೊಳ್ಳುವುದು.

ಸ್ಥೂಲವಾಗಿ ಹೀಗೆ ರೂಪುಗೊಂಡ ಮನಸ್ಥಿತಿಯಲ್ಲಿ ಸುಮಾರು 8-10 ವರ್ಷಗಳ ಕಾಲ ಅನೇಕ ಸಾಹಿತಿಗಳ, ಕಲಾವಿದರ ಭಾವಚಿತ್ರಗಳನ್ನು ತೆಗೆದೆ. ಇವುಗಳ ಪೈಕಿ ಕೆಲವು 12-15 ಸೈಜಿನ ಚಿತ್ರಗಳನ್ನು 1992ರಲ್ಲಿ ನೀನಾಸಮ್ ಸಂಸ್ಥೆ ನಡೆಸುತ್ತಿದ್ದ ಚಲನಚಿತ್ರ ರಸಗ್ರಹಣ ಶಿಬಿರಕ್ಕೆ ತೆಗೆದುಕೊಂಡು ಹೋಗಿದ್ದೆ. ಶಿಬಿರದ ಕೊನೆ0ು ದಿನ ರಾತ್ರಿ ಊರಿಗೆ ವಾಪಸ್ ಹೊರಡುವ ಮುನ್ನ ನೀನಾಸಮ್ ಕಚೇರಿ0ು ಮುಂದೆ ಶ್ರೀ ಕೆ ವಿ ಸುಬ್ಬಣ್ಣ ಮತ್ತು ಇನ್ನಿತರ ಗೆಳೆ0ುರೊಂದಿಗೆ ಅನೌಪಚಾರಿಕ ಮಾತುಕತೆ0ುಲ್ಲಿ ತೊಡಗಿದ್ದೆ. ಯಾವುದೇ ಪೂರ್ವಾಲೋಚನೆಯಿಲ್ಲದೆ, ಇದ್ದಕ್ಕಿದ್ದಂತೆ ಸುಬ್ಬಣ್ಣನವರಿಗೆ ನಾನು ಪ್ಯಾಕ್ ಮಾಡಲು ರೆಡಿ ಮಾಡಿಕೊಂಡಿದ್ದ ಸಾಹಿತಿಗಳ ಭಾವಚಿತ್ರಗಳನ್ನು ತೋರಿಸಿದೆ. ಸುಬ್ಬಣ್ಣ ತುಂಬ ವ್ಯವಧಾನದಿಂದ ಅವಲೋಕಿಸಿ ಅತ್ಯಂತ ಮುಕ್ತವಾಗಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಹಾಗೆಯೇ ಆ ಕಾರ್ಯವನ್ನು ಮುಂದುವರಿಸಲೂ ಸೂಚಿಸಿದರು. ಅಲ್ಲದೆ ಅದಕ್ಕಾಗಿ ನೀನಾಸಮ್ ಸಂಸ್ಥೆಯ ಸಾಂಕೇತಿಕ ಧನಸಹಾಯವೆಂದು ಐದು ಸಾವಿರ ರೂಪಾಯಿಗಳನ್ನು ಆ ಕೂಡಲೇ ತರಿಸಿಕೊಟ್ಟರು. ಸುಬ್ಬಣ್ಣನವರ ಅಂದಿನ ಆ ಪ್ರೋತ್ಸಾಹ ಸೂಚಕ ನಡೆ ನನಗೆ ಬಹು ದೊಡ್ಡ ಸ್ಫೂರ್ತಿಯಾಗಿತ್ತು.

ಮುಂದಿನ 3-4 ವರ್ಷಗಳಲ್ಲಿ ನನಗೆ ಸಾಧ್ಯವಾದ ಅನೇಕ ಸಾಹಿತಿಗಳನ್ನು ಸಂಪರ್ಕಿಸಿ, ಅವರಿದ್ದಲ್ಲಿಗೇ ಹೋಗಿ ಭಾವಚಿತ್ರ ತೆಗೆದೆ. ಈ ಚಿತ್ರಗಳೆಲ್ಲ ನೀನಾಸಮ್ ಸಂಸ್ಕೃತಿ ಶಿಬಿರದಲ್ಲಿ ಅನೇಕ ಬಾರಿ ಪ್ರದರ್ಶನಗೊಂಡಿತು. ಅಲ್ಲದೇ ಬೆಂಗಳೂರು ಹಾಗೂ ರಾಜ್ಯದ ಇತರ ಅನೇಕ ಊರುಗಳಲ್ಲಿ, ಹಂಪಿ ವಿಶ್ವವಿದ್ಯಾನಿಲ0ುದಲ್ಲಿ, ಸಾಹಿತ್ಯ ಸಮ್ಮೇಳನಗಳಲ್ಲಿ, ಕಾರ್ಪೊರೇಟ್ ಸಂಸ್ಥೆಗಳಲ್ಲಿ ಪ್ರದರ್ಶನಗೊಂಡಿವೆ. ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ಅನೇಕ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಅಲ್ಲದೆ ಹೊಸ ಮತ್ತು ಮರುಮುದ್ರಣಗೊಂಡ ಅನೇಕ ಸಾಹಿತ್ಯ ಕೃತಿಗಳ ಹೊದಿಕೆಗಳಲ್ಲಿಯೂ ಕಳೆದ ಮೂರು ದಶಕಗಳಿಂದ ನಿರಂತರವಾಗಿ ಬಳಕೆಯಾಗುತ್ತಿವೆ.

ಪೋಟ್ರೇಟ್ ಫೋಟೋಗ್ರಫಿ ಬಗ್ಗೆ ನನಗಿರುವ ಕೆಲವು ಸಂದೇಹ ಮತ್ತು ಪ್ರಶ್ನೆಗಳನ್ನೂ ಇಲ್ಲಿ ಹಂಚಿಕೊಳ್ಳುವುದು ಅವಶ್ಯ ಎಂದೇ ನನಗನಿಸುತ್ತದೆ. ಕಳೆದ ನಾಲ್ಕೂವರೆ ದಶಕಗಳಿಂದ ಪೋಟ್ರೇಟ್ ಫೋಟೋಗ್ರಫಿ ಮಾಡುತ್ತಿದ್ದರೂ ಹಾಗೆಂದರೇನು ಎಂಬ ಪ್ರಶ್ನೆಗೆ ಪರಿಪೂರ್ಣವಾದ ಉತ್ತರ ಸಿಕ್ಕಿಲ್ಲ. ಈ ಜಿಜ್ಞಾಸೆ ಈಗಲೂ ನನ್ನಲ್ಲಿ ಉಳಿದುಕೊಂಡಿದೆ. ಪೋಟ್ರೇಟ್ ಅನ್ನುವುದಕ್ಕೆ ಕನ್ನಡದಲ್ಲಿ ಪರ್ಯಾಯವಾಗಿ ಭಾವಚಿತ್ರ ಎಂದು ಬಳಸುತ್ತಿದ್ದೇವೆ. ಇಲ್ಲಿಯೂ ಲೇಖನದುದ್ದಕ್ಕೂ ಅದನ್ನೇ ಬಳಸಿದ್ದೇನೆ. ಆದರೆ ಆ ಶಬ್ದ ಅಷ್ಟು ಸಮಂಜಸ ಅಲ್ಲ ಎಂದು ನನಗನಿಸಿದೆ. ಪೋಟ್ರೇಟ್ ಎಂದರೆ ಕೇವಲ ಭಾವಚಿತ್ರ ಅಲ್ಲ. ಅದನ್ನು ವಿಶಿಷ್ಟ ಭಾವಚಿತ್ರ ಅಥವ ವ್ಯಕ್ತಿತ್ವಚಿತ್ರ ಎನ್ನಬಹುದೇನೋ. ಯಾಕೆಂದರೆ ಪ್ರತಿಯೊಬ್ಬ ಮನುಷ್ಯನಿಗೂ ಎಲ್ಲ ಭಾವಗಳನ್ನೂ ವ್ಯಕ್ತಪಡಿಸುವ ಶಕ್ತಿ ಇರುತ್ತದೆ. ಹಾಗಾದರೆ ವ್ಯಕ್ತಿತ್ವ ಬಿಂಬಿಸುವ ಭಾವ ಯಾವುದು?

ಪೋಟ್ರೇಟ್ ಫೋಟೊಗ್ರಫಿ ಮಾಡುವಾಗ ಫೋಟೊ ತೆಗೆಸಿಕೊಳ್ಳುವವರು ಮತ್ತು ತೆಗೆಯುವವರ ನಡುವೆ ಒಂದು ರೀತಿಯ ಸಂಘರ್ಷ ನಡೆಯುತ್ತಿರುತ್ತದೆ ಎನ್ನುವುದೂ ನನ್ನ ಅನುಭವಕ್ಕೆ ಬಂದಿದೆ. ಛಾಯಾಗ್ರಾಹಕ ತಾನು ಫೋಟೊ ತೆಗೆಯುತ್ತಿರುವ ವ್ಯಕ್ತಿಯ ನೈಜ ವ್ಯಕ್ತಿತ್ವವನ್ನು ಸೆರೆಹಿಡಿ0ುಲು ಕಸರತ್ತು ನಡೆಸುತ್ತಿದ್ದರೆ ಫೋಟೊ ತೆಗೆಸಿಕೊಳ್ಳುವವರು ಅದನ್ನು ಸಾಧ್ಯವಾದಷ್ಟೂ ಮರೆಮಾಚಲು ಯತ್ನಿಸುತ್ತಿರುತ್ತಾರೆ. ಈ ಘರ್ಷಣೆಯ ನಡುವೆಯೇ ಆ ವ್ಯಕ್ತಿಯ ವಿಶಿಷ್ಟ ಭಾವವನ್ನು ಕಾಣಿಸುವ ಕ್ಷಣ (ಮ್ಯಾಜಿಕ್ ಮೊಮೆಂಟ್) ಸೆರೆಹಿಡಿ0ುುವುದೇ ಭಾವಚಿತ್ರಕಾರನಿಗಿರುವ ಛಾಲೆಂಜ್ ಎಂದು ನಾನು ಭಾವಿಸುತ್ತೇನೆ. ವ್ಯಕ್ತಿಯೊಬ್ಬನ ವ್ಯಕ್ತಿತ್ವ ಜೀವಮಾನವಿಡೀ ಒಂದೇ ರೀತಿಯಲ್ಲಿರುತ್ತದೆಯೇ? ಕಾಲದಿಂದ ಕಾಲಕ್ಕೆ, ಜೀವನಾನುಭವ ಪಡೆದಂತೆ ವ್ಯಕ್ತಿತ್ವವೂ ಬದಲಾಗಬಹುದಲ್ಲವೆ ಎಂಬ ಪ್ರಶ್ನೆಯನ್ನ ಮೈ ಮೇಲೆ ಹಾಕಿಕೊಂಡರೆ ವಿಷಯ ಮತ್ತಷ್ಟೂ ಜಟಿಲವಾಗುತ್ತದೆ. ಹಾಗಾಗಿ ನಾನು ತೆಗೆದ ಭಾವಚಿತ್ರ ಒಂದು ಕಾಲಘಟ್ಟದ ಆ ವ್ಯಕ್ತಿಯ ವ್ಯಕ್ತಿ ವಿಶಿಷ್ಟತೆ ಹೇಳುವಂಥ ಚಿತ್ರವಷ್ಟೇ ಆಗಿರುತ್ತದೆ ಎಂದು ಭಾವಿಸಬೇಕಾಗುತ್ತದೆ.

ಸಾಹಿತ್ಯದ ಪರಿಭಾಷೆಯಲ್ಲಿ ಸ್ಥಾಯಿ ಭಾವ ಮತ್ತು ಸಂಚಾರಿ ಭಾವ ಎಂಬ ಪರಿಕಲ್ಪನೆ ಇದೆ. ಹಾಗೆಯೇ ಮನುಷ್ಯನಿಗೂ ಸ್ಥಾಯಿ ಗುಣ ಮತ್ತು ಸಂಚಾರಿ ಗುಣಗಳು ಇರುತ್ತವೆ ಎಂಬುದು ನನ್ನ ನಂಬಿಕೆ. ಸಂಚಾರಿ ಗುಣಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತ ಹೋಗಬಹುದು.ಆದರೆ ಸ್ಥಾಯಿ ಗುಣ ಎನ್ನುವುದು ಮನುಷ್ಯನಲ್ಲಿ ನಿರಂತರವಾಗಿ ಇರುತ್ತದೆ. ಇದನ್ನೇ ಬಹುಶಃ ನಮ್ಮಲ್ಲಿ ಹುಟ್ಟುಗುಣ ಅಂತಲೂ ಕರೆದಿರಬಹುದು. ಆ ಸ್ಥಾಯಿ ಗುಣವನ್ನು ಕಾಣಿಸುವಂಥ ವಿಶಿಷ್ಟಭಾವವನ್ನು ಸೆರೆಹಿಡಿ0ುಲು ಸಾಧ್ಯವಾದರೆ ಅದೇ ನನ್ನ ಪ್ರಕಾರ ನಿಜವಾದ ಪೋಟ್ರೇಟ್.

ಒಬ್ಬ ವ್ಯಕ್ತಿ ಸೂಚಿಸುವ ಎಲ್ಲ ಭಾವಗಳನ್ನು ವ್ಯಕ್ತಪಡಿಸುವ ಚಿತ್ರಗಳೂ ನನ್ನ ಬಳಿ ಇವೆ. ಆದರೆ ಅಂತಿಮವಾಗಿ ಯಾವ ಚಿತ್ರ ಅವರ ಸ್ಥಾಯಿಗುಣವನ್ನು ಸೂಚಿಸುತ್ತಿದೆ ಎಂದು ನನಗನಿಸುತ್ತದೆಯೋ ಅದೇ ಚಿತ್ರವನ್ನು ಆಯ್ದುಕೊಳ್ಳುತ್ತೇನೆ. ಹಾಗೆ ಆಯ್ದುಕೊಂಡ ಚಿತ್ರ ವೀಕ್ಷಕರಿಗೆ ಅಥವಾ ಚಿತ್ರ ತೆಗೆಸಿಕೊಂಡವರಿಗೆ ಇಷ್ಟವಾಗುತ್ತದೆಯೋ ಇಲ್ಲವೋ ಎನ್ನುವುದೂ ನನಗೆ ಅಷ್ಟು ಮುಖ್ಯವಲ್ಲ. ಅದು ನಾನು ಅವರನ್ನು ಪರಿಭಾವಿಸಿದ ರೀತಿಯಷ್ಟೇ ಆಗಿರುತ್ತದೆ.

ಇನ್ನು ಈ ಪುಸ್ತಕದ ಮಿತಿಯ ಬಗ್ಗೆ ಕೆಲವು ಸಂಗತಿಗಳನ್ನು ಹೇಳಬೇಕು. ಸಹಜವಾಗಿ ಇವು ನನ್ನ ಮಿತಿಯೂ ಆಗಿದೆಯೆಂದು ತಿಳಿಸಲು ಇಚ್ಛಿಸುತ್ತೇನೆ.

ಈ ಪುಸ್ತಕ ಕನ್ನಡದ ಎಲ್ಲ ಪ್ರಮುಖ ಸಾಹಿತಿಗಳ ಭಾವಚಿತ್ರಗಳನ್ನು ಒಳಗೊಂಡಿದೆ ಎಂದು ದಯಮಾಡಿ ಯಾರೂ ಭಾವಿಸಬಾರದು. ಯಾಕೆಂದರೆ ಸಮಗ್ರವಾಗಿ ಕನ್ನಡ ಸಾಹಿತ್ಯವನ್ನು ಪ್ರತಿನಿಧಿಸುವಂಥ ಎಲ್ಲ ಪ್ರಮುಖ ಸಾಹಿತಿಗಳ ಭಾವಚಿತ್ರಗಳನ್ನು ತೆಗೆಯುವುದು ಯಾವೊಬ್ಬ ಛಾ0ಾಗ್ರಾಹಕನಿಗೂ ಅಸಾಧ್ಯ. ಇದಕ್ಕೆ ಕಾರಣಗಳು ಬಲು ಸ್ಪಷ್ಟ. ಮೊದಲನೆಯದಾಗಿ ನಾನು ಈ ಕೆಲಸ ಪ್ರಾರಂಭಿಸುವುದಕ್ಕೆ ಮುಂಚೆಯೇ ಅನೇಕ ಪ್ರಮುಖ ಸಾಹಿತಿಗಳು ಗತಿಸಿದ್ದರು. ಇನ್ನು ಕೆಲವರು ತೀವ್ರ ಅನಾರೋಗ್ಯ ಸ್ಥಿತಿ0ುಲ್ಲಿದ್ದರು. ಹಾಗಾಗಿ ಅಂಥವರ ಚಿತ್ರ ತೆಗೆಯುವುದು ಸಾಧ್ಯವಾಗಲಿಲ್ಲ. ನಾನು ಬೆಂಗಳೂರಿನಲ್ಲಿ ಇಂಜಿನಿಯರ್ ವೃತ್ತಿಯಲ್ಲಿದ್ದು, ಛಾಯಾಗ್ರಹಣ ನನ್ನ ಪ್ರವೃತ್ತಿ ಮಾತ್ರ ಆಗಿದ್ದುದರಿಂದ ಆರ್ಥಿಕ ಹಾಗೂ ಸಮಯದ ಅಭಾವದಿಂದಾಗಿಯೂ ಅನೇಕ ಸಾಹಿತಿಗಳನ್ನು ಸಂಪರ್ಕಿಸಲಾಗಲಿಲ್ಲ. ಇನ್ನು ಕೆಲವರು ತಮ್ಮ ಅಸಮ್ಮತಿ/ ಅಸಹಕಾರ ವ್ಯಕ್ತಪಡಿಸಿದ್ದರಿಂದ ಅಂತಹವರ ಚಿತ್ರಗಳನ್ನೂ ತೆಗೆಯಲು ಸಾಧ್ಯವಾಗಲಿಲ್ಲ. ಪ್ರಸ್ತುತ ಫೋಟೊ ಪುಸ್ತಕದ ಪುಟಗಳ ಮಿತಿಯಿಂದಾಗಿಯೂ ನಾನು ತೆಗೆದ ಹಲವಾರು ಸಾಹಿತಿಗಳ ಭಾವಚಿತ್ರಗಳನ್ನು ಬಿಡಬೇಕಾಯಿತು. ಅಂತಿಮವಾಗಿ ಚಿತ್ರಗಳ ಗುಣಮಟ್ಟವನ್ನೇ ಏಕೈಕ ಮಾನದಂಡವಾಗಿಟ್ಟುಕೊಂಡು ಐವತ್ತುಭಾವಚಿತ್ರಗಳನ್ನು ಮಾತ್ರ ಇಟ್ಟುಕೊಂಡಿದ್ದೇನೆ. ಹಾಗಾಗಿ ಈ ಫೋಟೊ ಪುಸ್ತಕ ಮೇಲಿನ ಎಲ್ಲಾ ಮಿತಿಗಳೊಂದಿಗೆ ರೂಪುಗೊಂಡ, ಏಕವ್ಯಕ್ತಿಯ ಒಂದು ಸಣ್ಣ ಪ್ರಯತ್ನವೆಂದು ಭಾವಿಸಲು ವಿನಂತಿಸುತ್ತೇನೆ.

ಕೊನೆಯದಾಗಿ, ಈ ಪುಸ್ತಕದ ಒಟ್ಟಾರೆ ವಿನ್ಯಾಸದ ಬಗ್ಗೆ ಒಂದು ಮಾತು. ಇದು ಮೂಲತಃ ಕನ್ನಡ ಲೇಖಕರ ಫೋಟೊ ಪುಸ್ತಕ ಆಗಿದ್ದು, ಸಹಜವಾಗಿ ಇಲ್ಲಿ ಲೇಖಕರ ಭಾವಚಿತ್ರಗಳಿಗೆ ಹೆಚ್ಚಿನ ಪ್ರಾಧಾನ್ಯ ನೀಡಲಾಗಿದೆ. ಕನ್ನಡ ಸಾಹಿತ್ಯದ ಬಗ್ಗೆ ಹೆಚ್ಚು ಪರಿಚಯವಿರದ ಮುಖ್ಯವಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಯುವ ಜನರು, ಹಾಗು ಕನ್ನಡ ಸಾಹಿತ್ಯಲೋಕದ ಬಗ್ಗೆ ಸಾಮಾನ್ಯ ಅಸಕ್ತಿಯಿರುವ ಸಹೃದಯರನ್ನು ಗಮನದಲ್ಲಿಟ್ಟುಕೊಂಡು, ಈ ಪುಸ್ತಕದಲ್ಲಿ ಲೇಖಕರ ಭಾವಚಿತ್ರಗಳೊಂದಿಗೆ, ಆಯಾ ಲೇಖಕರ ಕೃತಿ ಸಾಧನೆಗಳ ಬಗೆಗಿನ ಪ್ರಾಥಮಿಕ ಸ್ವರೂಪದ ಮಾಹಿತಿಯನ್ನೂ ಅಳವಡಿಸಲಾಗಿದೆ. ಆಯಾ ಲೇಖಕರ ಫೋಟೋ ತೆಗೆಯುವ ಸಂದರ್ಭದಲ್ಲಿ ನನಗಾದ ಅನುಭವಗಳು ಮತ್ತು ನನ್ನಲ್ಲಿ ಜಾಗೃತವಾದ ಸ್ಮೃತಿಗಳನ್ನು ಒಗ್ಗೂಡಿಸಿ ಅವುಗಳನ್ನು ಪುಟ್ಟ ಟಿಪ್ಪಣಿಗಳ ರೂಪದಲ್ಲಿ ದಾಖಲಿಸಿದ್ದೇನೆ.

ಪ್ರಸ್ತುತ ಪುಸ್ತಕ ರೂಪುಗೊಳ್ಳಲು ನೆರವಾದ ಗೆಳೆಯರನ್ನು, ಬಂಧುಗಳನ್ನು ನೆನೆಯುವುದು ನನಗೆ ಸಂತೋಷದ ಸಂಗತಿ.

ಈ ಪುಸ್ತಕದಲ್ಲಿ ಕಾಣಿಸಿಕೊಂಡಿರುವ ಅನೇಕ ಹಿರಿಯರು ನಾನು ಅವರ ಫೋಟೋ ತೆಗೆಯುವ ವೇಳೆಗೆ ತೀವ್ರ ಅನಾರೋಗ್ಯ ಇಲ್ಲವೇ ವಯೋಸಹಜ ನಿತ್ರಾಣ ಸ್ಥಿತಿಯಲ್ಲಿದ್ದರು. ಹಾಗಿದ್ದಾಗಿಯೂ ನನ್ನೊಂದಿಗೆ ಕಳಕಳಿಯಿಂದ ಸಹಕರಿಸಿ ಉಪಕಾರ ಮಾಡಿದ್ದಾರೆ. ಅವರೆಲ್ಲರಿಗೂ ಮತ್ತು ಅವರ ಕುಟುಂಬದ ಸದಸ್ಯರುಗಳಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

ಉಮಾ ನನ್ನ ಬಾಳಸಂಗಾತಿ. ಕಳೆದ ಮೂವತ್ತೊಂದು ವರ್ಷಗಳಿಂದ ನಿರಂತರವಾಗಿ ನನ್ನ ಫೋಟೋಗ್ರಫಿಯಲ್ಲಿ ಅತ್ಯಂತ ಕಾಳಜಿಯಿಂದ, ಇದು ತನ್ನದೂ ಕೆಲಸವೆಂಬಂತೆ ಸಂಪೂರ್ಣವಾಗಿ ಮತ್ತು ಕ್ರಿಯಾತ್ಮಕವಾಗಿ ತೊಡಗಿಸಿಕೊಂಡಿದ್ದಾಳೆ. ಹಾಗೆಯೇ ನನ್ನ ಮಗ ಪ್ರತೀಕ ಕೂಡ. ಇವರಿಬ್ಬರ ಸಲಹೆ ಸಹಕಾರಗಳು ಈ ಪುಸ್ತಕಕ್ಕೆ ಸಂಬಂಧಿಸಿದ ಕಾರ್ಯಗಳಿಗೂ ವಿಸ್ತರಿಸಿವೆ. ಇವರಿಗೆ ನನ್ನ ಪ್ರೀತಿ.

ಹಿರಿಯ ಲೇಖಕಿ ವೈದೇಹಿಯವರು ಅನೇಕ ಸಾಹಿತಿಗಳ ಮನೆಗೆ ನನ್ನನ್ನು ಕರೆದುಕೊಂಡು ಹೋಗಿ ಉಪಕರಿಸಿದ್ದಾರೆ. ಈ ಪುಸ್ತಕ ಪ್ರಕಟಣೆಯ ಬಗ್ಗೆ ಉತ್ಸುಕತೆ ತೋರಿದ್ದಾರೆ. ಅವರಿಗೆ ನನ್ನ ಹಾರ್ಧಿಕ ಅಭಿವಂದನೆಗಳು.

ಇಂತಹ ಪುಸ್ತಕವೊಂದು ಆಗಬಹುದೆಂಬ ಐಡಿಯಾ ಸೂಚಿಸಿದವರು ನನ್ನ ದೀರ್ಘ ಕಾಲದ ಗೆಳೆಯರಾದ ಖ್ಯಾತ ವಿಮರ್ಶಕ ಶ್ರೀ ಟಿ ಪಿ ಅಶೋಕ್. ಇವರು ನನ್ನ ಹಾಗೂ ಪ್ರಕಾಶಕರ ಮಧ್ಯೆ ಕೊಂಡಿಯಾಗಿ ಕಾರ್ಯ ನಿರ್ವಹಿಸಿರುವುದಲ್ಲದೆ ಪುಸ್ತಕಕ್ಕೆ ಅಗತ್ಯವಿದ್ದ ಪೂರಕ ಟಿಪ್ಪಣಿಗಳನ್ನು ಸಿದ್ಧಪಡಿಸಲು ಸಂಪೂರ್ಣವಾಗಿ ತೊಡಗಿಸಿಕೊಂಡು ಬಹು ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅಶೋಕ ಅವರ ಪ್ರೀತಿಯ ಒತ್ತಾಸೆಯಿಲ್ಲದೆ ಈ ಪುಸ್ತಕ ಹೊರಬರಲು ಸಾಧ್ಯವೇ ಇರಲಿಲ್ಲ. ಇವರಿಗೆ ಪ್ರೀತಿಪೂರ್ವಕ ಕೃತಜ್ಞತೆಗಳು.

ಖ್ಯಾತ ಲೇಖಕ ಶ್ರೀ ಎಸ್ ದಿವಾಕರ್ ಪ್ರೀತಿ ಅಭಿಮಾನಗಳಿಂದ ಸೊಗಸಾದ ಮುನ್ನುಡಿ ಬರೆದಿದ್ದಾರೆ. ಹಾಗೆಯೇ ಅಂತರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ನಿರ್ದೇಶಕರಾದ ಶ್ರೀ ಗಿರೀಶ್ ಕಾಸರವಳ್ಳಿಯವರು ಬೆಲೆಯುಳ್ಳ ಹಿನ್ನುಡಿ ಬರೆದಿದ್ದಾರೆ. ಹಿರಿಯ ಮಿತ್ರರಾದ ಇವರೀರ್ವರಿಗೆ ನನ್ನ ಗೌರವಪೂರ್ವಕ ನಮನಗಳು.

ಗೆಳೆಯರಾದ ಹಿರಿಯ ವಿಮರ್ಶಕ ಶ್ರೀ ಎಚ್.ಎಸ್. ರಾಘವೇಂದ್ರರಾವ್ ಅವರ ಮಾರ್ಗದರ್ಶನ ನನಗೆಯಾವತ್ತೂ ಸಿಕ್ಕಿದೆ. ಕಿರಿಯ ಮಿತ್ರರಾದ ಪದ್ಮನಾಭ ಭಟ್ ಶೇವ್ಕಾರ್, ಗಣೇಶ್ ವೈದ್ಯ ಹಾಗು ಮಾಧವ ಚಿಪ್ಪಳಿ ಅವರು ಅನೇಕ ಟಿಪ್ಪಣಿಗಳನ್ನು ಸಿದ್ಧಪಡಿಸಲು ನೆರವಾಗಿದ್ದಾರೆ. ಇವರೆಲ್ಲರಿಗೆ ಕೃತಜ್ಞತೆಗಳು.

ಮಣಿಪಾಲ್ ಯೂನಿವರ್ಸಿಟಿ ಪ್ರೆಸ್ ನ ಪ್ರಧಾನ ಸಂಪಾದಕರಾದ ಡಾ ನೀತಾ ಇನಾಂದಾರ್ ಅವರ ಆಸಕ್ತಿ ಮತ್ತು ಸಹಕಾರಗಳಿಲ್ಲದೆ ಈ ಪುಸ್ತಕ ಹೊರಬರುತ್ತಿರಲಿಲ್ಲ. ಅವರಿಗೆ ನನ್ನ ಕೃತಜ್ಞತಾಪೂರ್ವ ವಂದನೆಗಳು.

ಎಂ ಯು ಪಿ ಬಳಗ ಅತ್ಯಂತ ಪ್ರೀತಿ ಹಾಗು ಕಾಳಜಿಯಿಂದ ಕಾರ್ಯನಿರ್ವಹಿಸಿ ಪುಸ್ತಕ ಇಷ್ಟು ಚೆಂದವಾಗಿ ರೂಪುಗೊಳ್ಳಲು ಕಾರಣರಾಗಿದ್ದಾರೆ. ಅವರಿಗೆ ಹಾಗೂ ಸಂಪಾದಕ ಮಂಡಳಿಯ ಎಲ್ಲರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

ಎತ್ತರದ ಸದಭಿರುಚಿ ಹೊಂದಿದ್ದು, ಕೇವಲ ಸರಳವಾಗಿ ಸುಂದರವಾಗಿ ಬದುಕುವ ಮೂಲಕವೇ ತುಂಬ ಪ್ರಭಾವಿಸಿ ಗತಿಸಿದ ಅಣ್ಣ ಅಮ್ಮನಿಗೆ ಈ ಪುಸ್ತಕವನ್ನು ಪ್ರೀತಿಯಿಂದ ಅರ್ಪಿಸುತ್ತಿದ್ದೇನೆ

3 Comments

  1. Shyamala Madhav
    November 7, 2016
  2. ವಸುಧೇಂದ್ರ
    November 1, 2016
  3. Anonymous
    November 1, 2016

Add Comment

Leave a Reply