Quantcast

ಅಲ್ಲಿ ಹೆಕ್ಕಿದ ಮಾವಿನ ಹಣ್ಣು..

ಉಕ್ಕಿನ ಮಹಿಳೆಯ ಮನೆಯಲ್ಲಿ
ಹೆಕ್ಕಿದ ಸಿಹಿ ಮಾವಿನ ಹಣ್ಣು..!!
giridhara-karkala          ಗಿರಿಧರ ಕಾರ್ಕಳ

ಭಾರತದ ರಾಜಕೀಯ ಪರ್ವದಲ್ಲಿ  ದಿ.ಇಂದಿರಾ ಗಾಂಧಿ ಯವರದೇ ಒಂದು ವಿಶಿಷ್ಟ ಅಧ್ಯಾಯ. ಸುದೀರ್ಘ ಕಾಲ ಈ ದೇಶದ ಪ್ರಧಾನಿಯಾಗಿ ಅನೇಕ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದವರು. ಜೊತೆಗೇ ಅಭಿವ್ಯಕ್ತಿ ಸ್ವಾತಂತ್ರ್ಯ ದಮನಿಸುವ ತುರ್ತು ಸ್ಥಿತಿಗೂ ಕಾರಣರಾದವರು.

indira-mango-giridhara-karkalaನಾನೇನೂ ಇಂದಿರಾ ಭಕ್ತನಲ್ಲ. ತುರ್ತು ಸ್ಥಿತಿ ವಿರೋಧೀ ಹೋರಾಟದಲ್ಲಿ ಕಾಲೇಜು ಹುಡುಗರ ಜತೆ ಸಕ್ರಿಯವಾಗಿ ಪಾಲ್ಗೊಂಡವನೇ. ತುರ್ತು ಸ್ಥಿತಿಯ ನಂತರ ಮಂಗಳೂರಿಗೆ ಬಂದ ಇಂದಿರಾ ನಮ್ಮ ಕಾಲೇಜಿನ ಮುಂದೆ ಮೆರವಣಿಗೆಯಲ್ಲಿ  ಸಾಗುತ್ತಿದ್ದಾಗ ಒಬ್ಬನೇ ಕಾಂಪೌಂಡ್ ಗೋಡೆ ಹತ್ತಿ ” ಇಂದಿರಾ ಗೋ ಬ್ಯಾಕ್ ” ಅಂತ ಜೋರಾಗಿ ಕಿರುಚಿ ಪೋಲೀಸರು ಅಟ್ಟಿಸಿಕೊಂಡು ಬರುವಷ್ಟರಲ್ಲಿ ಕಾಂಪೌಂಡ್ ಜಿಗಿದು ಓಡಿ ತಪ್ಪಿಸಿಕೊಂಡ ಸಾಹಸಿ ನಾನು..!!

ಕಳೆದ ತಿಂಗಳು ದೆಹಲಿಯ ಇಂದಿರಾ ಗಾಂಧಿಯವರ  ಮನೆಯೊಳಗೆ  ಸುತ್ತಾಡುತ್ತಿದ್ದಾಗ – ಆಕೆಯ ಬದುಕಿನ ವಿವಿಧ ಮಜಲಿನ ನೆನಪುಗಳನ್ನು ಕಂಡಾಗ, ತುರ್ತು ಸ್ಥಿತಿಯ ಹೊರತಾಗಿಯೂ ಆಕೆಯ ಬಗ್ಗೆ ಅತೀವ ಗೌರವ ಮೂಡಿದ್ದು ಸುಳ್ಳಲ್ಲ…!!

ಅದರಲ್ಲೂ – ಕಾವಲು ಭಟರ  ಗುಂಡೇಟಿಗೆ ಬಲಿಯಾಗಿ ಕುಸಿದು ಬಿದ್ದ ಜಾಗದಲ್ಲಿ  ನಿಂತಾಗ ನನಗರಿವಿಲ್ಲದಂತೆ ಕಣ್ಣೀರು ಜಿನುಗಿತು.

ನಾನಲ್ಲಿ ನಿಂತಾಗಲೇ ಅಲ್ಲೇ ಇಂದಿರಾ ರಕ್ತ ಚಿಮ್ಮಿದ ಜಾಗದಲ್ಲಿದ್ದ ಮಾವಿನ ಮರದಿಂದ ಹಣ್ಣೊಂದು ಉದುರಿತು. ತಕ್ಷಣವೇ ನನ್ನಾಕೆ ಓಡಿ ಆ ಹಣ್ಣನ್ನು ಹೆಕ್ಕಿ ಜೋಪಾನವಾಗಿ ಚೀಲದಲ್ಲಿಟ್ಟು ಮನೆಗೂ ತಂದಳು. ತಂದ ಮರುದಿನವೇ ಅದನ್ನು ಕೊಯ್ದು ರುಚಿ ಸವಿದೆವು. ನಿಜಕ್ಕೂ ಅದು ತುಂಬ ಸಿಹಿಯಾಗಿತ್ತು. ವಿಶಿಷ್ಟ ಒಗರಿನ ಸ್ವಾದದಿಂದ ತುಂಬಿತ್ತು.

ಆ ಹಣ್ಣಿನ ಬೀಜವನ್ನು ಮನೆಯ ಹೂಕುಂಡದಲ್ಲಿ ಹಾಕಿಟ್ಟಿದ್ದೇವೆ.ಮನೆಯ ಆವರಣದಲ್ಲೇ ಅದು ಗಿಡವಾಗಿ ಮರವಾಗಿ ಬೆಳೆಯುವುದನ್ನು ನೋಡುವ ಕನಸು ನಮ್ಮದು…!!!

 

Add Comment

Leave a Reply

%d bloggers like this: