Quantcast

‘ಚುಕುಬುಕು ರೈಲು ನಿಲ್ಲೋದಿಲ್ಲ ಎಲ್ಲೂ ಯಾಕಿಂಗೆ ಓಡತೈತೋ..’

ಈ ಸಲದ ‘ಉದಯವಾಣಿ’ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾಗಿರುವ ನನ್ನ ಲಹರಿ.

ನನ್ನೊಳಗೆ ಅನುದಿನವಿದ್ದ ಈ ರೈಲಿನ ನಾದವನ್ನು ಹೊರಹಾಕಲು ಕಾರಣವಾದದ್ದು ಪೃಥ್ವಿರಾಜ ಕವತ್ತಾರ್.

ಯಕ್ಷಗಾನಕ್ಕೆ ಹೊಸ ವ್ಯಾಕರಣ ನೀಡುತ್ತಿರುವ ಬೆರಳೆಣಿಕೆಯ ಯುವಕರಲ್ಲಿ ಪೃಥ್ವಿ ಒಬ್ಬರು.

ಅವರಿಗೆ ಥ್ಯಾಂಕ್ಸ್ ಹೇಳುತ್ತಾ..

ನನ್ನ ಲಹರಿ ಇಲ್ಲಿದೆ ನಿಮ್ಮ ಓದಿಗೆ 

ವಿಂಡೋ ಸೈಡ್ 

20160901_081605

ಜಿ ಎನ್ ಮೋಹನ್

‘ಚಾಯಾ..’ ಎಂಬ ರಾಗ ಕೇಳಿದ ತಕ್ಷಣ ನಾನು ನಾನಾಗಿರುವುದಿಲ್ಲ.ಅದು ನನಗೆ ಸುಬ್ಬುಲಕ್ಷ್ಮಿಯ, ಬಾಲಮುರಳಿ ಕೃಷ್ಣ, ಭೀಮಸೇನ್ ಜೋಶಿಯವರ ರಾಗಕ್ಕಿಂತ ಹತ್ತು ಪಟ್ಟು ಹೆಚ್ಚು.

ಒಮ್ಮೆ ಈ ರಾಗ ಕಿವಿಗೆ ಬಿದ್ದರೆ ಸಾಕು ಕಾಲಕೋಶದಲ್ಲಿ ಕೂರಿಸಿ ಒಮ್ಮೆ ಹಿಂದೆ ದೂಕಿದಂತೆ ನೂರೆಂಟು ನೆನಪುಗಳ ಕೋಣೆಯನ್ನು ಹೊಕ್ಕುಬಿಟ್ಟಿರುತ್ತೇನೆ.

whatsapp-image-2016-10-18-at-08-32-21-5

ಆ ಒಂದು ರಾಗಕ್ಕೆ ಮಾತ್ರ ನಾನು ಬಾಲ್ಯದಲ್ಲಿ, ಬೆಳ್ಳಂಬೆಳಗ್ಗೆ ವರ್ಷಾನುಗಟ್ಟಲೆ ಕೇಳಿದ ವೆಂಕಟೇಶ್ವರ ಸುಪ್ರಭಾತವನ್ನೂ ಹಿಂದಿಕ್ಕುವ ಶಕ್ತಿ ಇದೆ. ಈ ರಾಗಕ್ಕೆ ಇಂತಹದೇ ಹೊತ್ತು ಗೊತ್ತು ಅನ್ನುವುದೇನೂ ಇಲ್ಲ. ಯಾವಾಗ ಬೇಕಾದರೂ ಹಾಡಬಹುದಾದ, ಯಾವ ರೀತಿಯಲ್ಲೂ ಹಾಡಬಹುದಾದ ರಾಗ ಇದೊಂದೇ ಎನ್ನುವುದು ನನ್ನ ಖಡಕ್ ನಂಬಿಕೆ. ಇನ್ನುಳಿದ ಎಲ್ಲಕ್ಕೂ ಬೆಳಗಿನ, ಸಂಜೆಯ, ರಾತ್ರಿಯ ಎನ್ನುವ ಗಡಿಗಳಿವೆ.ಈ ರಾಗವೋ ಯಾವುದೇ ಹಂಗಿಲ್ಲದ ‘ಹಗಲಿರುಳೆನ್ನದೆ ಜಡಿಯುವ ಸುರಿಮಳೆ.. ಸಿಡಿ ಕೋಲ್ಮಿಂಚಿನ ರಾಗಗಳು..’

ಆದರೆ ಈ ರಾಗಕ್ಕೂ ಒಂದು ಹಿಮ್ಮೇಳ ಮುಮ್ಮೇಳವಿದೆ.’ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ ವಿಠ್ಠಲ ನಾಮ ತುಪ್ಪವ ಸೇರಿಸಿ ಬಾಯಿ ಚಪ್ಪರಿಸಿರೋ..’ ಎನ್ನುವಂತೆ ಈ ಚಾಯಾ ರಾಗಕ್ಕೆ ‘ಚುಕ್ ಬುಕ್.. ಚುಕ್ ಬುಕ್..’ ಸದ್ದು ಬೆರೆತಿರಲೇಬೇಕು, ಈ ಎರಡೇ ಇದ್ದರೂ ಸಾಕು. ಆದರೆ ಪಾಯಸಕ್ಕೆ ತುಪ್ಪವೂ ಸೇರಿದರೆ ಆಹಾ! ಎನ್ನುವಂತಿರುತ್ತದೆ ಎನ್ನುವುದಾದರೆ ಜೊತೆಗೆ ಒಂದು ಮಸಾಲೆ ವಡೆ ಇರಬೇಕು.

ಆ ಚುಕು ಬುಕು ಸದ್ದಿನ ನಡುವೆ ‘ಚಾಯಾ’ ಎಂಬ ನಾದ ಕೇಳಿ ನಾನು ಎದ್ದು ಕುಳಿತದ್ದು ಎಷ್ಟನೇ ಸಲವೋ.. ಆ ಚುಕು ಬುಕು ಸದ್ದಿಗೂ ಆ ‘ಚಾಯಾ..’ ರಾಗಕ್ಕೂ ಇರುವ ಶಕ್ತಿಯೇ ಅದು .

A stranded Indian train passenger rests inside a railway coach as he waits for the train service to resume following a power outage in Kolkata, India, Tuesday, July 31, 2012. India's energy crisis cascaded over half the country Tuesday when three of its regional grids collapsed, leaving 620 million people without government-supplied electricity for several hours in, by far, the world's biggest-ever blackout. (AP Photo/Bikas Das)

ಅದು ನನಗೆ ಗೊತ್ತಿರಲಿಲ್ಲ. ರೈಲು ಎಂದರೆ ಸಾಕು ಮಾರುದೂರ ನಿಲ್ಲುತ್ತಿದ್ದೆ. ಆ ಉದ್ದೋಉದ್ದ ಹಳಿಗಳೂ, ಗಿಜಿಗುಡುವ ನಿಲ್ದಾಣಗಳೂ, ನೋಟೀಸ್ ಬೋರ್ಡ್ ನಲ್ಲಿ ನೇತು ಹಾಕಿರುತ್ತಿದ್ದ ಸೂಟ್ ಕೇಸ್ ಕಳ್ಳರ ಫೋಟೋಗಳೂ, ಯಾವುದೋ ನಿಗೂಢ ಲೋಕವೊಂದರಿಂದ ಬಂದವರಂತೆ ಯಾರನ್ನು ಬೇಕಾದರೂ ಕೆಕ್ಕರಿಸಿ ನೋಡುತ್ತಿದ್ದವರೂ.. ಸೇರಿ ನನಗೆ ರೈಲು ಎನ್ನುವುದೇ ನನ್ನದಲ್ಲದ ಲೋಕವಾಗಿ ಹೋಗಿತ್ತು.

ಇನ್ನೂ ಕಾರಣ ಇತ್ತೇನೋ.. ಎಲ್ಲೂ ಎಂದೂ ಸೇರದ, ಎಷ್ಟು ದೂರ ಬೇಕಾದರೂ ಹಾಗೆ ತಾಗದೆ ಸಾಗುವ ಹಳಿಗಳು ನನ್ನೊಳಗೆ ಒಂದು ವಿಷಾದ ರಾಗವನ್ನು ಹುಟ್ಟು ಹಾಕುತ್ತಲೇ ಬಂದಿತ್ತು. ‘ಪ್ರೇಮದ ಕಾಣಿಕೆ’ಯಲ್ಲಿ ಡಾ ರಾಜ್ ಕೈನಲ್ಲಿದ್ದ ಪಿಸ್ತೂಲು ಡಂ ಎಂದದ್ದೂ ರೈಲಿನ ಬಗ್ಗೆ ಒಂದು ಗೊತ್ತಿಲ್ಲದ ಭಯ ಬೆಸುಗೆ ಹಾಕಿ ಹೋಗಿತ್ತು.

ಇನ್ನೂ ತಿಂಗಳುಗಳ ಹಸುಗೂಸನ್ನು ಕಟ್ಟಿಕೊಂಡು ನೂರೆಂಟು ಮಂದಿ ‘ರೈಲು ಇದೆ ಆರಾಮವಾಗಿ ಹೋಗಿ’ ಎಂದರೂ ಕೇಳದೆ ಬಸ್ಸು ಹತ್ತಿಯೇ ಊರೂರು ಸುತ್ತಿದ್ದೆ. ಮೂರು ರಾಜ್ಯಗಳನ್ನು ದಾಟಿ ಹೋಗಬೇಕಾಗಿ ಬಂದರೂ ರೈಲು ಮಾತ್ರ ಬೇಡ ಎನ್ನುವ ಜೀವ ನನ್ನದು.

ಆದರೆ ಒಂದು ದಿನ ಕಮಾಲ್ ಆಗಿಹೋಯಿತು.

ಧಾರವಾಡ ವಿಶ್ವವಿದ್ಯಾಲಯದ ಬೆನ್ನಿಗೆ ನಿಂತಿದ್ದೆ. ಅಲ್ಲಿಂದ ಎಷ್ಟು ಕಣ್ಣು ಹಾಯಿಸಿದರೂ ಬಟಾ ಬಯಲು. ಗೆಳೆಯ ಸಂಜೀವ ಕುಲಕರ್ಣಿ ಅಲ್ಲಿ ಒಂದು ಕನಸು ಮೊಳಕೆಯೊಡೆಸಲು ಸಜ್ಜಾಗಿದ್ದರು ಹಾಗಾಗಿ ಅವರ ಜೊತೆ ಆ ಕಾಳು ಊರಾಬೇಕಾದ ಜಾಗ ಯಾವುದು ಎಂದು ನೋಡಲು ಹೋಗಿದ್ದೆ. ಆಗ ಕಂಡಿತು. ಅಷ್ಟು ದೂರದಲ್ಲಿ.. ಒಂದು ಮಿಲಿಪೀಡ್. ಸಹಸ್ರಾರು ಹೆಜ್ಜೆ ಹಾಕುತ್ತ ತೆವಳುತ್ತ ಬಾಗುತ್ತಾ ಬಳಕುತ್ತಾ ನನ್ನ ಕಣ್ಣ ಮುಂದೆ ಎಲ್ಲೋ ಅಲ್ಲಿಂದ ಸಾಗಿ ಕಮಾನಿನಂತೆ ಬಾಗಿ ನಂತರ ನನ್ನ ಮುಂದೆಯೇ ನನಗೆ ಕಣ್ಣು ಮಿಟುಕಿಸುತ್ತಾ ಹಾದು ಹೋಗಿಯೇ ಬಿಟ್ಟಿತು. ನನ್ನ ಎದೆಯಲ್ಲಿ ಒಂದು ರಾಗ ಹರಿದು ಹೋದಂತಾಯಿತು. ರೈಲು ನನ್ನೊಳಗೆ ಒಂದು ರಾಗವಾಗಿದ್ದು ಹೀಗೆ.

whatsapp-image-2016-10-18-at-08-32-21-6ನೀವು ನಂಬಬೇಕು- ನನಗೆ ಬೇಂದ್ರೆಯನ್ನೂ, ಕುವೆಂಪು ಅವರನ್ನೂ, ಲಂಕೇಶ್, ಎಕ್ಕುಂಡಿ, ಕಂಬಾರರನ್ನೂ.. ಒಳಕ್ಕೆ ನನ್ನೊಳಕ್ಕೆ ಎಳೆದುಕೊಳ್ಳಲು ಸಾಧ್ಯವಾಗಿದ್ದು ಈ ಮಿಲಿಪೀಡ್ ಎಂಬ ರೈಲಿನ ಕಾರಣಕ್ಕಾಗಿಯೇ.

ರೈಲು ಹತ್ತಿದೊಡನೆ ಹಾರಿ ಕಿಟಕಿ ಸೀಟು ಹಿಡಿಯುತ್ತಿದ್ದ, ರಿಸರ್ವೇಶನ್ ಮಾಡಿಸುವಾಗಲೆಲ್ಲಾ ಕಿಟಕಿಯೇ ಸಿಗುವಂತೆ ಲೋಯರ್ ಬರ್ತ್ ಹುಡುಕುತ್ತಿದ್ದ ನನಗೆ ಎಷ್ಟೋ ರಾತ್ರಿಗಳನ್ನು ಸದ್ದಿಲ್ಲದಂತೆ ಕಳೆಯಲು ಈ ಚುಕ್ ಬುಕ್ ರಾಗವೇ ಬೇಕಾಗಿತ್ತು. ಮನಸ್ಸಿನೊಳಗೆ ಅಲೆಗಳಂತೆ ಏಳುತ್ತಿದ್ದ, ಮೊರೆಯುತ್ತಿದ್ದ, ಕಾಡುತ್ತಿದ್ದ, ಸದ್ದುಗಳ ಹುಟ್ಟಡಗಿಸಲು ಈ ಚುಕ್ ಬುಕ್ ಸದ್ದಿಗೆ ಸಾಧ್ಯವಾಗಿದೆ. ಅದರ ‘ಧಡಲ್ ಧಿಡೀಲ್’ ಗಳಂತೂ ನನಗೆ ಬೇಂದ್ರೆಯ ಹಾಡಿನಂತೆಯೇ ಒಳಗೆ ಹೊಕ್ಕಿದೆ.

‘ಏನ್ ಮುಂಗಾರಿ ಮಳೆ ಹಾಂಗಾ ಸಿಡಿಲ್.. ಬಿದ್ದಿತು ಖಡಿಲ್.. ಎದಿ ಆಗಿ ನಿಂತು ಮೂಕಾ.. ಎನ್ನುವುದು ನನಗೆ ಅದರ ಮಾತ್ರೆ, ಗಣ ಸಮೇತ ಅರ್ಥವಾಗಿದ್ದರೆ ಈ ರೈಲೆಂಬ ರೈಲಿನ ಚಕ್ರಗಳಿಂದಾಗಿ. ಕಿಟಕಿಯ ಸರಳುಗಳಿಗೆ ಕೆನ್ನೆ ಒತ್ತಿ ಕುಳಿತರೆ ಆ ಕಿಟಕಿ ತೆರೆಯುತ್ತಿದ್ದ ಲೋಕವೇ ಬೇರೆ.

ಕವಿ ಎಕ್ಕುಂಡಿಯವರಂತೂ ನನಗೆ ಇನ್ನಿಲ್ಲದಂತೆ ನೆನಪಾಗುವುದೇ ಇಲ್ಲಿ. ಅವರು ಹೇಳುತ್ತಿದ್ದರು- ‘ಅಮ್ಮ ಹಾಡಿದ ಒಂದು ಹಾಡಿನಿಂದ ನಾನು ಈ ಜಗತ್ತನ್ನು ನೋಡುವ ಕಿಟಕಿಯನ್ನು ರೂಪಿಸಿಕೊಂಡೆ’ ಅಂತ. ಹೌದಲ್ಲಾ.. ಬದುಕಿಗೆ ಕಿಟಕಿ ರೂಪಿಸಿಕೊಳ್ಳಲು ಯಾವುದಾದರೂ ಸಾಕು. ಹಾಗೆ ಅವರಿಗೆ ಅಮ್ಮನ ಹಾಡಾದರೆ, ನನಗೆ ರೈಲಿನ ಹಾಡು. ಆ ಕಿಟಕಿಯ ಮೂಲಕವೇ ನನಗೆ ರಾಗಗಳು ಸಿಕ್ಕಿವೆ, ಬದುಕು ಸಿಕ್ಕಿದೆ, ನೋಟವೂ ಸಿಕ್ಕಿದೆ. ಒಂದು ಇಡೀ ಜಗತ್ತು ಸಿಕ್ಕಿದೆ.

whatsapp-image-2016-10-18-at-08-34-51-1‘ಬನ ಬನಾ ನೋಡು ಈಗ ಹ್ಯಾಂಗ ಮದುವಿ ಮಗನಾಂಗ ತಲೆಗೆ ಬಾಸಿಂಗ’ ಎನ್ನುವ ಸಾಲುಗಳು ಅರ್ಥ ಒದಗಿಸಿಕೊಂಡಿದ್ದು ರೈಲಿನ ಕಿಟಕಿಯ ಮೂಲಕವೇ.. ಎಲ್ಲವನ್ನೂ ಹಿಂದಿಕ್ಕುತ್ತ ಎಲ್ಲವನ್ನೂ ಮಣಿಸುತ್ತಾ ನಾಗಾಲೋಟದಲ್ಲಿ ರೈಲು ಹೋಗುವಾಗಲೂ ನನಗೆ ಹಸಿರು ಮುಕ್ಕಳಿಸುವ ಬೆಟ್ಟ ಗುಡ್ಡಗಳು ಕಂಡಿವೆ, ಕಾಡುಗಳನ್ನು ಸೀಳಿ ನಡೆವಾಗ ಬನ ಬನದ ತುಂಬೆಲ್ಲಾ ನನಗೆ ಬೇಂದ್ರೆಯ ಶಬ್ದಗಳು ಸಿಕ್ಕಿವೆ.

ಅದು ತಂಬೂರಿಯ ಹಾಗೆ. ಅಲ್ಲಿ ಸಿಕ್ಕದ್ದು ಸದ್ದು ಮಾಡದ ತಂಬೂರಿ. ಅದಕ್ಕೆ ನಾದ ಹಚ್ಚುವುದನ್ನು ಅರ್ಥ ಹಚ್ಚುವುದನ್ನು ನನಗೆ ಹೇಳಿಕೊಟ್ಟದ್ದು ಈ ರೈಲೇ. ‘ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ ಶ್ರಾವಣಾ..’ ಎನ್ನುವ ಸಾಲುಗಳು ರೈಲಿನೊಳಗೆ ಹಾಗೆ ಕೆನ್ನೆ ಒತ್ತಿ ಸಾಗುತ್ತಿರುವಾಗ ನನಗೆ ಕೇವಲ ಸಾಲುಗಳಾಗಿರಲಿಲಲ್ಲ. ಕಣ್ಣ ಮುಂದೆ ಬಿಚ್ಚಿಕೊಳ್ಳುತ್ತಿದ್ದ ದೃಶ್ಯಾವಳಿಗಳಾಗಿದ್ದವು.

ಈ ರೈಲು ಎನ್ನುವ ರಾಗ ನನ್ನೊಳಗೆ ಹೊಕ್ಕಿದ್ದು ಬೇಂದ್ರೆ ಅಜ್ಜನ ಸಾಧನಕೇರಿಗೆ ಒಂದಷ್ಟು ಹೆಜ್ಜೆ ಆಚೆ ಮಾತ್ರ. ಹಾಗಾಗಿಯೇ ಇರಬೇಕು ನನಗೆ ರೈಲು ಎನ್ನುವುದು ಸದಾ ರಾಗಗಳನ್ನೇ ಮೊಳಗಿಸುತ್ತ ಹೋದವು. ‘ಕೂಗೇ ಕೂಗುತದ ಕೂಗೇ ಕೂಗುತದ ಗಿರಣಿ ಕರೆಯೋ ಹಾಂಗಾ..’ ಎಂದು’ ಜೋಗಿ’ ಕವಿತೆ ನನ್ನೊಳಗೆ ಒಂದು ಕವಿತೆ ಹುಟ್ಟುಹಾಕುತ್ತಿದ್ದರೆ ಈ ರೈಲು ನನ್ನನ್ನು ಕೂರಿಸಿಕೊಂಡು ಯಾವುದೋ ಬಯಲ ಮಧ್ಯೆ ಎಲ್ಲೋ ದೂರದಲ್ಲಿ ಹರಡಿಕೊಂಡಿದ್ದ ಮರವನ್ನು ಸುತ್ತುತ್ತಾ ಕಣ್ಣಿನ ಮುಂದೆ ರಾಗದ ರಂಗೋಲಿ ಬಿಡಿಸುತ್ತಿತ್ತು.

ಅದಿರಲಿ.. ಮೊನ್ನೆ ‘ರಂಗಶಂಕರ’ದಲ್ಲಿ ಬಿಂದುಮಾಲಿನಿ ‘ನೀ ಬೈರಾಗಿ ಇರಬಹುದು ಬಾಕಿ.. ನಿನ್ನ ಮಠದಾಗ ನಾನೂ ಇರಾಕಿ’ ಎಂದು ಹಾಡುವಾಗ ಮತ್ತೆ ನನ್ನ ಮನದ ಹಳಿಗಳ ಮೇಲೆ ರೈಲು ತೆವಳಲು ಶುರುವಾಯಿತು. ಸಿಮೆಂಟಿನ ನಾಡಿನಲ್ಲೂ ಇದ್ದವನು ನಾನು. ಸದಾ ಸಿಮೆಂಟಿನ ಹೊಗೆಯನ್ನೇ ಉಗುಳುವ, ಸಾಯಿಸಿಯೇ ಸಿದ್ಧ ಎನ್ನುವಂತೆ ಸುಡುವ ಸೂರ್ಯನ ಮಧ್ಯೆ ಕೈನಲ್ಲಿ ಹಿಡಿದ ಚಿಲುಮೆಯಲ್ಲಿ ಎಲ್ಲವನ್ನೂ ಮರೆತಂತೆ ತಮ್ಮದೇ ಲೋಕದಲ್ಲಿ ತೂರುತ್ತಿದ್ದರಲ್ಲಾ ಅವರು ನೆನಪಾದದ್ದು ಹೇಗೆ? ಹಾಗೆಯೇ ‘ಮಾಯಾಕಿನ್ನರಿ’ ಕೂಡಾ.. ಮರಳುಸಿದ್ಧನ ನಾರಿ ಮರಳು ಮಾಡಲು ಹಾಕಿದ ಹೆಜ್ಜೆಯ ವಯ್ಯಾರ, ಕಣ್ಣನ್ನೇ ಬಿಲ್ಲಾಗಿಸಿಕೊಂಡಿದ್ದು, ಅವಳ ಬಳಕುವಿಕೆ, ಕಾಮನೆಗಳ ತಾಂಡವ ಎಲ್ಲವೂ ನನಗೆ ಈ ರೈಲಿನ ಸದ್ದಿನ ನಡುವೆಯೇ ಅದು ತಿರುವುನಲ್ಲಿ ತಿರುಗಿದ ರೀತಿಗೇ ಅರ್ಥವಾಗಿ ಹೋಗಿತ್ತು. ಕೊನೆಗೆ ಸುರಂಗವನ್ನು ಹೊಕ್ಕಾಗ ‘ಮರುಳು ಮಾಡಾಕ ಹೋಗಿ ಮರುಳ ಸಿದ್ಧನ ನಾರಿ ಮರುಳಾಗ್ಯಾಳ ಜಂಗಮಯ್ಯಾಗ..’ ಎನ್ನುವ ಸಾಲಿಗೆ ಅರ್ಥ ಹೊಳೆಸಿಬಿಟ್ಟಿತ್ತು.

ಇರಲಿ ಬಿಡಿ ನಾನು ಬದುಕು ಕಟ್ಟಿಕೊಳ್ಳುತ್ತಾ, ಅಥವಾ ಬದುಕು ನನ್ನನ್ನು ಇಲ್ಲಿರು ಎಂದು ಕರೆದಾಗೆಲ್ಲಾ ಅದಕ್ಕೆ ಮಣಿಯುತ್ತಾ ಊರೂರು ತಿರುಗಿದಾಗೆಲ್ಲಾ ಮತ್ತೆ ಈ ರೈಲೇ ನನ್ನ ಎದೆಗೆ ಕವಿತೆಗಳನ್ನು ತಂದು ಸುರಿದಿದೆ.

A man from India's northeastern state tries to board an overcrowded train through the window before it leaves for the Assam state at the railway station in Kolkata August 18, 2012. REUTERS/Rupak De Chowdhuri

‘ಹೋಗುವೆನು ನಾ, ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ..’ ಎನ್ನುವುದಕ್ಕೆ ಅರ್ಥ ಬರಬೇಕಾದರೆ, ಅಥವಾ ಅದರ ಅರ್ಥ ತನ್ನ ಅಷ್ಟೂ ಗಾಢತೆಯಲ್ಲಿ ನಿಮ್ಮ ಕೈಗೆ ಸಿಗಬೇಕಿದ್ದರೆ ಎಷ್ಟೋ ದಿನಗಳ ನಂತರ ನೀವು ನಿಮ್ಮ ಮನೆ ತಲುಪಿಕೊಳ್ಳಲು ರೈಲು ಹತ್ತಬೇಕು. ಅದೇ ಕಿಟಕಿಯ ಸರಳುಗಳಿಗೆ ಹತ್ತಿಕೊಂಡ ನನ್ನ ಕೆನ್ನೆಯ ಮೇಲೆ ಅದೆಷ್ಟು ಬಾರಿ ಕಣ್ಣೀರು ಜಾರಿದೆಯೋ. ‘ನಾನು ಬಿದ್ದು ಎದ್ದ ಮನೆ.. ಮೊದಲು ಬೆಳಕು ಕಂಡ ಮನೆ ತಿಪ್ಪ ತಿಪ್ಪ ಹೆಜ್ಜೆಯಿಟ್ಟು ಬಿಸಿಲ ಕೋಲ ಹಿಡಿದುಬಿಟ್ಟು ತಂಗಿ ತಮ್ಮರೊಡನೆ ಹಿಟ್ಟು ತಿಂದು ಬೆಳೆದ ನನ್ನ ಮನೆ ಮನೆ ಮನೆ ಮುದ್ದುಮನೆ..’ ಎನ್ನುವ ಕವಿತೆಯಂತೂ ನನ್ನನ್ನು ಅಕ್ಷರಶಃ ಅರಬೀ ಸಮುದ್ರದ ಕಡಲಲ್ಲಿ ಸುಳಿಗೆ ಸಿಕ್ಕ ಪುಟ್ಟ ದೋಣಿಯ ಏಕೈಕ ಪಯಣಿಗನಂತೆ ಮಾಡಿದೆ.

ಒಂದು ದಿನ ಹೀಗೆ ಸಾಗುತ್ತಿದ್ದಾಗ ರೈಲು ಭತ್ತದ ಗದ್ದೆಗಳ ಮಧ್ಯೆ ಶಿಳ್ಳೆ ಹಾಕುತ್ತಾ ಸಾಗುತ್ತಿತ್ತು. ಕಣಿವೆಯಲ್ಲಿ ಜೋಪಾನ ಮಾಡುವ ತಾಯಿಯಂತೆ ತೆವಳುವ, ಸುರಂಗದೊಳಗೆ ಪಾತಕಿಯಂತೆ ಕಣ್ಣು ಬೀರುವ, ಬೆಟ್ಟ ಗುಡ್ಡಗಳ ಮಧ್ಯೆ ಮಾರುದ್ಧ ಸೇತುವೆ ದಾಟುವಾಗ ಸಾಹಸಿಯಂತೆ ಮೀಸೆ ಮೇಲೇರಿಸುವ ಈ ರೈಲೆಂಬ ಪ್ರಾಣಿ ಹಸಿರು ಗದ್ದೆಯ ನಡುವೆ ಸಾಗುವಾಗ ತಾನೂ ಮೃದುವಾಗಿಬಿಡುತ್ತದೆ.

ಒಮ್ಮೆ ಕೃಷ್ಣ ಆಲನಹಳ್ಳಿ ‘ಏನು ಗೊತ್ತಾ ಕಣ್ಣಿಗೆ ಕಾಣುವಷ್ಟೂ ಹಸಿರು ಮುಕ್ಕಳಿಸುವ ಗದ್ದೆ ಇರುತ್ತದಲ್ಲ ಅದಕ್ಕೆ ನಿಜಕ್ಕೂ ಹಸಿರು ಬರುವುದು ಯಾವಾಗ ಗೊತ್ತಾ’ ಎಂದು ಕೇಳಿದ್ದ. ನಾನು ಸಿಟಿಯಲ್ಲಿ ಬೆಳೆದಿದ್ದವ. ಕಾಂಕ್ರೀಟ್ ಕಟ್ಟಡಗಳ, ಉಸಿರು ಸಿಕ್ಕಿಕೊಳ್ಳುವ ಹೊಗೆ ಕೊಳವೆಗಳ ಮಧ್ಯೆ ಇದ್ದವ. ನಾನು ‘ಬೆಬ್ಬೆಬ್ಬೆ..’ ಎಂದಿದ್ದೆ. ಆಗ ಕೃಷ್ಣ ‘ಆ ಹಸಿರಿನ ನಡುವೆ ನನ್ನ ಫಲ ಹೊತ್ತ ಹೆಂಡತಿ ನಡೆದು ಬರುತ್ತಾಳಲ್ಲಾ ಆಗ..’ ಎಂದ. ಈಗ ನೋಡಿದರೆ ಇದೇ ರೈಲು, ಪಾತಕಿಯಂತೆ ಸಾಕಷ್ಟು ಬಾರಿ ಕಂಗೆಡಿಸಿದ್ದ ರೈಲು, ಥೇಟ್ ಗಬ್ಬ ಹೊತ್ತ ಹೆಂಗಸಿನಂತೆ ಆ ಹಸಿರು ಗದ್ದೆಯ ಮಧ್ಯೆ ಹೆಜ್ಜೆ ಹಾಕುತ್ತಿದೆ. ಆ ಗದ್ದೆಯೋ ಈ ರೈಲು ನನ್ನನ್ನು ಸೀಳಿದರೆ ಮಾತ್ರ ಫಲ ಕೊಡುತ್ತೇನೆ ಎನ್ನುವಂತೆ ನಿಂತಿದೆ.

ಇರಲಿ ಬಿಡಿ, ಅದು ಆ ರೈಲು ಮತ್ತು ಆ ಗದ್ದೆಯ ವ್ಯವಹಾರ. ಮೈದಾನ ಹಾಗೂ ಕುದುರೆ ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ ನನಗೆ ಫಕ್ಕನೆ ಆ ಹಸಿರು ಗದ್ದೆಯ ಮಧ್ಯೆ ಹಾರುತ್ತಿದ್ದ ಬೆಳ್ಳಕ್ಕಿ ಕಂಡುಬಿಡಬೇಕೇ..! ಹಾಗೆ ಅದು ಹಸಿರು ಗದ್ದೆಯ ಮಧ್ಯೆ ಫಟ ಫಟ ರೆಕ್ಕೆ ಬಡಿಯುತ್ತಾ ಎದ್ದಾಗ ನನ್ನ ಪುಟ್ಟ ಕೂಸಿಗೆ ನಾಟಕದ ತರುಣ ಶ್ರೀಪಾದ್ ಭಟ್ ಕೇಳಿದ್ದು ನೆನಪಾಯಿತು. ‘ಇದು ಎಷ್ಟೊಂದು ಬೆಳ್ಳಗಿದೆಯಲ್ಲಾ ಅದು ಹ್ಯಾಗೆ’ ಅಂತ. ನನ್ನ ಪುಟ್ಟ ಕೂಸು, ಆಗ ತಾನೇ ಶಾಲೆಯ ಮೆಟ್ಟಿಲು ಹತ್ತಲು ಸಜ್ಜಾಗುತ್ತಿದ್ದ ಕೂಸು ‘ಯಾಕೆ ಅಂದ್ರೆ ಅದು ಬಿಳಿ ಸೋಪು ಹಾಕಿಕೊಂಡು ಸ್ನಾನ ಮಾಡುತ್ತೆ’ ಎಂದಿತ್ತು. ಮಕ್ಕಳು ಬೆಳೆದಂತೆಲ್ಲಾ, ಅದರಲ್ಲೂ ಹೆಣ್ಣು ಮಕ್ಕಳು ಇನ್ನಿಲ್ಲದ ವೇಗದಲ್ಲಿ ಪ್ರೌಢರಾಗಿಬಿಟ್ಟಾಗ ಈ ನೆನಪುಗಳಲ್ಲದೆ ಮನದೊಳಗೆ ಇನ್ನೇನು ಉಳಿಯಲು ಸಾಧ್ಯ. ಈ ರೈಲಿಗೆ ಸಾಧ್ಯ, ಮತ್ತೆ ಮತ್ತೆ ಆ ನೆನಪುಗಳನ್ನು ಮನಸಿನೊಳಗೆ ದೋಸೆಯಂತೆ ಮಗುಚಿಹಾಕಲು.

whatsapp-image-2016-10-18-at-08-33-37ಹಾಗೆ ಅಂದುಕೊಳ್ಳುತ್ತಿರುವಾಗಲೇ ಹಾಗೆ ಹಾರಿದ ಆ ಬೆಳ್ಳಕ್ಕಿ ನನಗೆ ಎಕ್ಕುಂಡಿಯವರನ್ನೂ ನೆನಪಿಸಿಬಿಟ್ಟಿತು. ಉತ್ತರ ಕರ್ನಾಟಕದ ಎಕ್ಕುಂಡಿ ಉತ್ತರ ಕನ್ನಡ ಸೇರಿಕೊಂಡಿದ್ದು ಬದುಕು ಕಟ್ಟಿಕೊಳ್ಳಲಿಕ್ಕಾಗಿ. ಗಂಜಿಯ ಸಮಸ್ಯೆಗೆ ಉತ್ತರ ಹುಡುಕಿಕೊಳ್ಳುವ ಸಲುವಾಗಿ. ಎಕ್ಕುಂಡಿ ಬರೆದಿದ್ದರು. ಇವತ್ತು ಬೆಳ್ಳಕ್ಕಿಯನ್ನು ನೋಡುವ ಮನಸ್ಸನ್ನು ಗಂಜಿಯ ಕೂಗು ಕಿತ್ತುಕೊಳ್ಳುತ್ತಿದೆ. ಗಂಜಿ ಮತ್ತು ಬೆಳ್ಳಕ್ಕಿ ಎರಡೂ ಇರುವ ಒಂದು ಸುಂದರ ಜಗತ್ತನ್ನು ನಿರ್ಮಾಣ ಮಾಡಬೇಕು ಅಂತ. ಹೌದಲ್ಲ, ಎಂತ ಮನವ ಕಾಡುವ ಮಾತು. ಅದು ಸರಿ ರೈಲಿನ ಕಿಟಕಿಯೊಳಗಿನಿಂದಲೇ ಇದು ಕಾಣಬೇಕಾಗಿ ಬಂದದ್ದು ಹೇಗೆ.

ರೈಲು ದಟ್ಟ ಕಾನನದ ನಡುವೆ ಹೋಗುವಾಗ ಒಂದು ಅರ್ಥವನ್ನು ಹೊಳೆಸಿದರೆ, ಸಮುದ್ರದ ಬದಿಯಲ್ಲಿ ಶಿಳ್ಳೆ ಹಾಕುವಾಗಲೇ ಇನ್ನೊಂದು ರೀತಿ, ಭತ್ತದ ಗದ್ದೆಗಳ ಮಧ್ಯೆ ತೋಡುಗಳ ನೀರಿನ ಸನಿಹದಲ್ಲಿ ಸಾಗುವಾಗ ಒಂದು ರೀತಿಯಾದರೆ, ಕಪ್ಪು ಮಣ್ಣಿನ ನಡುವೆ ಜಾಲಿ ಮುಳ್ಳಿನ ಗಿಡಗಳ ಪಕ್ಕ ಹಾದು ಹೋಗುವಾಗಲೇ ಇನ್ನೊಂದು ರೀತಿ. ‘ನನ್ನವ್ವ ಕಪ್ಪಾದ ಫಲವತ್ತಾದ ನೆಲ..’ ಎನ್ನುವುದಕ್ಕೆ ಒಂದು ಮಾಗುವಿಕೆಯ ಅರ್ಥ ಕೊಡಲು ನನಗೆ ಈ ರೈಲೇ ಆಗಿಬರಬೇಕೇ..

ಹೀಗೇ ಸಾಗುತ್ತಿದ್ದೆ. ಕಪ್ಪು ಮಣ್ಣಿನ ನಾಡಿನಲ್ಲಿ ದೂರ, ಬಹು ದೂರದಲ್ಲಿ ಆ ಕಪ್ಪು ಮಣ್ಣಿನ ಮಧ್ಯೆ, ಏಕಾಂಗಿ ಗುಡ್ಡದ ಮೇಲೆ, ಒಂದು ಪುಟ್ಟ ಸುಣ್ಣ ಬಳಿದುಕೊಂಡ ಗುಡಿ… ನನ್ನೊಳಗೆ ಒಂದು ತುಡಿತ, ಒಂದು ಕುಣಿತ, ಒಂದು ಅನುರಾಗ, ಒಂದು ಬಿಸಿ.. ‘ಸೋಮಲಿಂಗನ ಗುಡಿ ಮ್ಯಾಲ ಬಂಗಾರ ಚಡಿ ನೋಡಿ ಬರೋಣು ನಡಿಯ..’ ಎನ್ನುವ ಸಂಗ್ಯಾ ಬಾಳ್ಯದ ಹಾಡು ಮೊರೆಯತೊಡಗಿತು. ನನಗೋ ಇನ್ನಿಲ್ಲದ ನವರಂಗಿ ಭಾವ, ನಾನೂ ಪೆನ್ನು ಕೈಗೆತ್ತಿಕೊಂಡೆ. ‘ಸಂಗ್ಯಾನಿಗೆ..’ ಅನ್ನುವ ಕವನ ಓದಲು ತಂದಿದ್ದ ಪುಸ್ತಕದ ಅಂಚಿನಲ್ಲಿದ್ದ ಇಷ್ಟಿಷ್ಟು ಜಾಗದಲ್ಲೇ ಹೆಜ್ಜೆ ಊರುತ್ತಾ ಬಂದುಬಿಟ್ಟಿತು.

‘ನಾ ಕುಣೀಬೇಕಾ ಮೈ ಮಣೀಬೇಕಾ ಕಾಲು ದಣೀಬೇಕಾ ತಾಯಿ ನವಿಲಿನಾಂಗ ಎಳೆ ಮಣಕಿನಾಂಗ ತಿರತಿರಗಿದಾಂಗ ಬುಗುರಿ’ ಎನ್ನುವುದಂತೂ ನನಗೆ ರೈಲು ಒಂದೊಂದು ತಿರುವಿನಲ್ಲಿ ಹೊರಳಿದಾಗೆಲ್ಲಾ ನೆನಪಾಗುತ್ತದೆ.. ಸುಂದರ ಸುರತ ಸುಖದ ಹಾಗೆ.

whatsapp-image-2016-10-18-at-08-33-37-2ಅದಿರಲಿ ಅಣ್ಣ ಹೇಳುತ್ತಿದ್ದರು ಕೆ ಎಸ್ ನ ಕವಿತೆ ಓದಿದ್ದೀಯಾ ಅಂತ.. ‘ಎಲ್ಲಿದ್ದೀಯೆ ಮೀನಾ, ಇಲ್ಲೇ ಇದ್ದೀನಮ್ಮ..’ ಕವಿತೆಯ ಸಾಲು ಮನದಿಂದ ಮರೆಯಾಗುವುದಾದರೂ ಹೇಗೆ?. ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದಾಗಲೇ ಈ ಮಾತು ಬಂತು. ‘ನವಿಲೂರ ಮನೆಗೆ ಚಕ್ಕಡಿಯಲಿ ಸಾಗಿ ಪದುಮಳನ್ನು ನೋಡುತ್ತಿದ್ದ ಕೆ ಎಸ್ ನ ಆಧುನಿಕತೆಯ ಈ ರೈಲನ್ನು ತಡೆದುಕೊಳ್ಳಲು ಸಾಧ್ಯವೇ ಆಗಲಿಲ್ಲವೇನೋ..’ ಎಂದರು.

‘ಮಾಯಾದಮನದ ಭಾರ, ತೆಗೆದಾಂಗ ಎಲ್ಲಾ ದ್ವಾರಾ.. ಏನಾ ಏನಿದೋ ಎಂತಾ.. ಬೆರಗಾ..’ ಎಂದು ನಾನು ಉದ್ಘಾರ ತೆಗೆದು ಎಲ್ಲವನ್ನೂ ನಿಮ್ಮ ಮುಂದೆ ಬಿಚ್ಚಿ ಕುಳಿತಿರುವಾಗಲೇ ನನಗೆ ಒಂದು ಘಟನೆ ನೆನಪಿಗೆ ಬರುತ್ತಿದೆ..

ಗೆಳೆಯ ಸೂರಿ ಫೋನ್ ಮಾಡಿದ್ದರು. ‘ಚುಕುಬುಕು ರೈಲು ನಿಲ್ಲೋದಿಲ್ಲ ಎಲ್ಲೂ ಯಾಕಿಂಗೆ ಓಡತೈತೋ..’ ಅನ್ನುವ ರಿಂಗ್ ಟೋನ್ ಅವರಿಗೆ ಕೇಳಿಸಿದೆ. ತಕ್ಷಣ ಸೂರಿ ‘ರೀ.. ಇದೇನ್ರಿ ಇಂತಾ ರಿಂಗ್ ಟೋನ್’ ಅಂದರು. ರೇಗುತ್ತಿದ್ದರೇನೋ ಗೊತ್ತಿಲ್ಲ.. ಆದರೆ ಆ ವೇಳೆಗಾಗಲೇ ನನ್ನ ಮನಸ್ಸು ಚುಕು ಬುಕು ರೈಲು ಏರಿ ದೂರ.. ಬಹು ದೂರ.. ಹೋಗಿಯಾಗಿತ್ತು.

13rail10

whatsapp-image-2016-10-18-at-08-32-54-5

traincompart

whatsapp-image-2016-10-18-at-08-33-37-3

whatsapp-image-2016-10-18-at-08-33-37-9

06rail15

 

An Indian commuter pours water over his head to cool off as young children watch from a window at a railway station in Allahabad, India, Monday, May 20, 2013. Most of north India has been reeling under heat wave conditions with temperature soaring to over 46 degree Celsius (115 degrees Fahrenheit). (AP Photo/Rajesh Kumar Singh)

whatsapp-image-2016-10-18-at-08-34-51-8

whatsapp-image-2016-10-18-at-08-32-21-1

whatsapp-image-2016-10-18-at-08-34-51-7

8 Comments

 1. Anonymous
  November 2, 2016
 2. Anonymous
  November 2, 2016
 3. nutana M doshetty
  November 2, 2016
 4. Renuka ramanand
  November 2, 2016
 5. S.p.vijaya Lakshmi
  November 2, 2016
 6. smitha shenoy
  November 2, 2016
 7. nudi
  November 2, 2016
 8. Anonymous
  November 2, 2016

Add Comment

Leave a Reply