Quantcast

ಬಿ ವಿ ಭಾರತಿ c/o ಕೊಳ್ಳೇಗಾಲ

b v bharati

ಬಿ ವಿ ಭಾರತಿ 

ಜಯನಗರದಿಂದ ಕ್ಯಾಬ್ ಹಿಡಿದವಳು ಬಿನ್ನಿ ಮಿಲ್ ಬರುವವರೆಗೂ ಸದ್ದಿಲ್ಲದೇ ಕೂತಿದ್ದೆ, ಆಗೀಗ ಲೆಫ್ಟ್, ರೈಟ್, ಸ್ಟ್ರೈಟ್ ಅನ್ನೋ ಮಾತುಳಿದು …

ಬಿನ್ನಿ ಮಿಲ್ ದಾಟಿ ಸುಜಾತಾ ಕಡೆ ಹೊರಳುವಾಗ ಇದ್ದಕ್ಕಿದ್ದಂತೆ ಏನೋ ಹೇಳಿದ ಹಾಗಾಯಿತು.‌ ಕಿಟಕಿಯಿಂದಾಚೆ ನೋಡ್ತಿದ್ದವಳಿಗೆ ಅದು ಕೇಳಿಸದೇ ‘ಆಆ??’ ಎಂದೆ. ಅವನು ‘ಹೊಟ್ಟೆ ಹಸಿವು’ ಅಂದ. ನಕ್ಷತ್ರ, ಗಾಳಿ, ಅನ್ಯಮನಸ್ಕತೆ ಎಲ್ಲ ಮಾಯವಾಗಿ ‘ಯಾಕೆ ಊಟ ಮಾಡಿಲ್ವಾ?’ ಎಂದೆ. ‘ಇಲ್ಲ ಟೈಮೇ ಆಗಿಲ್ಲ ಕಟ್ಟಿಸಿಕೊಳ್ಳಕ್ಕೆ’ ಎಂದ. ಹಾಗೆ ಶುರುವಾಯ್ತು ಮಾತು…

cab-taxiಅಲ್ಲಿಂದ ಅವನ ಬೋನಸ್, ಟ್ರಿಪ್ ಲೆಕ್ಕ, ಬೆಂಗಳೂರಿನ ಟ್ರಾಫಿಕ್, ರಜೆ ಬಂದಾಗ ಇಳಿಮುಖವಾದ ಬಿಸಿನೆಸ್, ಹಿಂದಿನೆರಡು ದಿನ ಚಿಕ್ಕಮಗಳೂರಿಗೆ ಹೊಡೆದ ಟ್ರಿಪ್ … ಹೀಗೇ ಮಾತು ಮುಂದುವರೆಯಿತು.

ಕಾರ್ಡ್ ರೋಡ್ ಸಿಗ್ನಲ್ಲಿನಲ್ಲಿ ಇದ್ದಕ್ಕಿದ್ದ ಹಾಗೆ ‘ನಿಮ್ದು ಯಾವೂರು’ ಅಂದ. ‘ಕೊಳ್ಳೆಗಾಲ’ ಅಂದೆ. ‘ಅಯ್ಯಪ್ಪಾ ನಿಮ್ಮನ್ನ ರೇಗಿಸಬಾರ್ದು’ ಅಂತ ಜೋರಾಗಿ ನಕ್ಕ. ನಾನೂ ನಗುತ್ತಾ ‘ಮಾಟ ಮಾಡಿಸ್ತೀನಿ ಅಂತ ಗಾಭರೀನಾ?’ ಅಂದೆ. ಹೆದರಿದವನಂತೆ ನಟಿಸುವ ದನಿಯಲ್ಲಿ ‘ಮತ್ತೆ ಕೊಳ್ಳೆಗಾಲ ಅಂದ್ರೆ ಸುಮ್ನೇನಾ!’ ಅಂದ. ‘ಮಾಟ ಮಂತ್ರ ಎಲ್ಲ ಕಷ್ಟ ಅಲ್ವಾ’ ಅಂದ. ‘ನನಗಂತೂ ಅದ್ಯಾವುದರ ಬಗ್ಗೇನೂ ನಂಬಿಕೆ ಇಲ್ಲಪ್ಪಾ. ಅದು ಹೇಗೆ ಎಲ್ಲೋ ಕೂತು ಮಾಟ ಮಾಡಿದ್ರೆ ಇನ್ನೆಲ್ಲೋ ಇರೋರಿಗೆ ತಗಲತ್ತೆ ಹೇಳು’ ಅಂದೆ.

ಅವನು ತಣ್ಣನೆ ದನಿಯಲ್ಲಿ ‘ಹಾಗಂದ್ರೆ ಹೇಗೆ! ಎಲ್ಲೋ ಇರೋ ಆಕಾಶದಿಂದ ಮಳೆ ಆಗಿ ಭೂಮಿಗೆ ಬೀಳಲ್ವಾ’ ಅಂತ ನಕ್ಕ. ‘ಅದು ಪ್ರಕೃತಿ … ಅದರಲ್ಲಿ ಆಶ್ಚರ್ಯ ಏನಿದೆ’ ಅಂದೆ. ‘ಸರಿ, ಇಲ್ಲಿ ಕೂತು ಎಲ್ಲೋ ಇರೋರಿಗೆ ನಿಮ್ಮ ದನಿ ಕೇಳತ್ತಲ್ಲ ಫೋನಲ್ಲಿ ಅದು ?’ ಅಂದ. ‘ಅದು ವಿಜ್ಞಾನ’ ಅಂದೆ. ‘ಹಾಗೇ ಇದೂ ಸತ್ಯ ಯಾಕಾಗಬಾರದು!’ ಅಂದ. ‘ಅದೇಗೆ ಆಗತ್ತೆ? ಇದು ಮೂಢನಂಬಿಕೆ’ ಅಂದೆ. ‘ನಮಗೆ ಗೊತ್ತಿಲ್ಲ ಅಂದ ಮಾತ್ರಕ್ಕೆ ಮೂಢನಂಬಿಕೆ ಅನ್ನಕ್ಕಾಗತ್ತಾ?’ ಅಂತ ಸವಾಲೆಸೆದ. ನಾನು ವಿವರಣೆ ಕೊಡಲು ಹೋಗದೆ ಯಾಕೋ ಸುಮ್ಮನಾದೆ.

ಒಳದಾರಿಗಳಲ್ಲಿ ರಸ್ತೆ ಹೇಳುತ್ತಾ ಬಸವೇಶ್ವರನಗರ ತಲುಪಿದಾಗ ‘ಇಲ್ಲಿಂದ ಆಚೆ ಹೆಂಗೆ ಹೋಗದು! ನೀವೇ ದಾರಿ ಹೇಳ್ಬೇಕು’ ಅಂತ ರೇಗಿಸಿದ. ಇಲ್ಲಿ ತಿರುಗಿದರೆ ಪವಿತ್ರ, ಅಲ್ಲಿ ಶಂಕರಮಠ ಅಂತ ಹೇಳಿದೆ. ಅಷ್ಟರಲ್ಲಿ ಅವನು ಹಸಿವು ಅಂದಿದ್ದು ನೆನಪಾಗಿ ‘ಗಾಡಿ ನಿಲ್ಲಿಸಿ ಬೇಕಿದ್ರೆ ಊಟ ಕಟ್ಟಿಸ್ಕೋ, ನಾನು ಕಾಯ್ತೀನಿ. ಆಮೇಲೆ ಎಲ್ಲ ಹೋಟೆಲ್ ಮುಚ್ಚಿಬಿಟ್ರೆ?’ ಅಂದೆ. ಅವನು ಒಪ್ಪಲಿಲ್ಲ. ಯಾವುದೋ ಒಂದು ಹೋಟೆಲ್ ತನಗಾಗಿ ತೆರೆದೇ ಇರತ್ತೆ ಅನ್ನುವ ಭರವಸೆ ಅವನದ್ದು.

8th ಮೇನ್ ತಿರುಗಿದಾಗ ಇದ್ದಕ್ಕಿದ್ದಂತೆ ‘ನಮ್ ರುದ್ರಪ್ಪ ಅವ್ನೆ’ ಅಂತ ಉದ್ಗಾರವೆಳೆದ. ನಾನು ಆಶ್ಚರ್ಯದಿಂದ ‘ಯಾವ ರುದ್ರಪ್ಪ!’ ಅಂದೆ. ‘ಅದೇ ಊಟದ ಹೋಟೆಲ್ಲು’ ಅಂತ ಕಿಸಿಕಿಸಿ ನಕ್ಕ. ನನಗೆ ಇಂಥ ಮನುಷ್ಯರು ಯಾಕೋ ತುಂಬ ಪ್ರಿಯವಾಗ್ತಾರೆ … ಮುಖವಾಡವಿಲ್ಲದೇ … ಸಹಜ, ಸರಳ! ‘ವೆಜ್ಜಾ ನಾನ ವೆಜ್ಜಾ’ ಅಂದೆ. ‘ಅದೆಲ್ಲ ಮಕಮೂತಿ ನೋಡಲ್ಲ. ಹಸಿದಾಗ ತಿನ್ನೋದಷ್ಟೇ’ ಅಂತ ಜೀವನದ ಸತ್ಯವನ್ನೇ ಬಿಚ್ಚಿಟ್ಟ!

ಅಷ್ಟರಲ್ಲಿ ಮನೆ ಹತ್ತಿರ ಬಂದಿದ್ದೆವು. ಮತ್ತೆ ಪಾಪ ಎಡಕ್ಕೆ ತಿರುಗಿ, ರಿವರ್ಸ್ ತೆಗೆದುಕೊಂಡು ಹೋಗೋದ್ರಲ್ಲಿ ಹೋಟೆಲ್ ಮುಚ್ಚಿಬಿಟ್ಟಿದ್ದರೆ ಅಂತ ಮೇನ್ ರೋಡಲ್ಲೇ ನಿಲ್ಲಿಸು ಅಂದೆ. ಅವನು ಗಕ್ಕನೆ ಗಾಡಿ ನಿಲ್ಸಿ ‘ಇಲ್ಲೆಲ್ಲಿ ಮನೆ! ಮೇನ್ ರೋಡಲ್ಲಿ’ ಅಂತ ನಕ್ಕ. ಅಲ್ಲೇ ನಿಲ್ಲಿಸಿದ ಕಾರಣ ಹೇಳಿದೆ.

occultಖುಷಿಯಿಂದ ‘ಓಓಓ ಥ್ಯಾಂಕ್ಸ್’ ಅಂದು ಟ್ರಿಪ್ ಕ್ಲೋಸ್ ಅಂತ ಕೊಟ್ಟ. ನೆಟ್ ಸ್ಲೋ ಇದ್ದಿದ್ದಕ್ಕೆ ಸ್ಕ್ರೀನ್ ತುಂಬ ರೌಂಡ್ ರೌಂಡಾಗಿ ಸುತ್ತಲು ಶುರು ಮಾಡಿದ್ದು ಎಷ್ಟು ಹೊತ್ತಾದರೂ ಅಮೌಂಟ್ ಬರಲೇ ಇಲ್ಲ. ಕಾದು ಕಾದು ಸುಸ್ತಾಗಿ ‘ಇದೇನು ಕಥೆ’ ಅಂದೆ. ‘ನೀವು ಕೊಳ್ಳೆಗಾಲದೋರೇ ಹೇಳ್ಬೇಕು’ ಅಂತ ಜೋರಾಗಿ ನಕ್ಕ. ‘ಓಹೋ ಮಾಟ!’ ಅಂತ ನಾನೂ ನಕ್ಕೆ.

ಇನ್ನು ಮೂರು ನಿಮಿಷ ಕಳೆದರೂ ಅದೇ ಕಥೆ ಆದಾಗ ‘ಏಮ್ರಾ? ಏಮ್ ಚೇಸ್ತಾ ಉನ್ನಾವು’ ಅಂತ ಮೀಟರನ್ನು ಕೇಳಿದ! ನನಗೆ ಈ ಮನುಷ್ಯನ ಜೀವಂತಿಕೆ ಬೆರಗು ಹುಟ್ಟಿಸಿತು. ಅಷ್ಟರಲ್ಲಿ ಹಣ ಎಷ್ಟೆಂದು ಬಿಲ್ ಬಂತು. ಅಷ್ಟರಲ್ಲಾಗಲೇ estimate ಪ್ರಕಾರ ದುಡ್ಡು ಕೊಟ್ಟಾಗಿದ್ದರಿಂದ ‘ಸರಿ ಇದ್ಯಾ? ನಾನು ಹೋಗ್ಲಾ?’ ಅಂದೆ. ಅವನು ಪಕಪಕ ನಗುತ್ತಾ ‘ಇದು ಪಕ್ಕಾ ಕೊಳ್ಳೇಗಾಲ ಕೇಸೇ…! ನೋಡಿ ಸ್ಕ್ರೀನ್’ ಅಂದ. ಯಾವಾಗಲೂ ಹಸಿರು ಬಣ್ಣಕ್ಕಿರುವ ಸ್ಕ್ರೀನ್ black and white ಆಗಿತ್ತು!

ನಗುತ್ತಾ ಬೈ ಹೇಳಿ ಕಾರಿನಿಂದ ಇಳಿದೆ …

ಡ್ರೈವಿಂಗ್ ಬಾರದ್ದು ಎಷ್ಟು ಒಳ್ಳೆಯದಾಯ್ತು ಅಂದುಕೊಳ್ಳುತ್ತಾ .

Add Comment

Leave a Reply