Quantcast

ಎಚ್ ಎಸ್ ವಿ ಕಾಲಂ: ಅತಿ ಓದಿನ ಉಮೇದು..

ತಾವರೆಯ ಬಾಗಿಲು-೭
ಎಚ್.ಎಸ್.ವೆಂಕಟೇಶ ಮೂರ್ತಿ

ಕಿವಿಗೊಟ್ಟು ಕೇಳಿ, ಕಣ್ಣಿಟ್ಟು ಓದಿ ಎಂದರೆ ವಿಪರೀತ ಕಿವಿ, ವಿಪರೀತ ಕಣ್ಣುಗಳನ್ನು ಕಾವ್ಯಾಧ್ಯಯನದಲ್ಲಿ ಬಳಸಿ ಕೆಲವೊಮ್ಮೆ ಅಪಥ್ಯಗಳೂ ಉಂಟಾಗಬಹುದು; ಕೆಲವೊಮ್ಮೆ ಅರ್ಥೋತ್ಕರ್ಷವೂ ಉಂಟಾಗಬಹುದು! ಇದನ್ನು ಓವರ್ ರೀಡಿಂಗ್ (ಅತಿ ಓದು) ಫಲ ಎಂದು ಹೇಳಬಹುದು.

ಇದು ತಪ್ಪೋದಿಗಿಂತ ಭಿನ್ನ. ಕಾವ್ಯವನ್ನು ತಪ್ಪಾಗಿ ಗ್ರಹಿಸುವುದರಿಂದ ಉಂಟಾಗುವ ಓದು ತಪ್ಪೋದು (ಮಿಸ್ರೀಡಿಂಗ್). ಉದಾಹರಣೆಗೆ “ಹಕ್ಕಿಹಾರುತಿದೆ ನೋಡಿದಿರಾ” ಕವಿತೆಯಲ್ಲಿ ಬರುವ ಕಾಲಪಕ್ಷಿಗೆ ಒಂದು ಕಣ್ಣು ಸೂರ್ಯ, ಒಂದು ಕಣ್ಣು ಚಂದ್ರ ಎಂದು ಬೇಂದ್ರೆ ಬರೆದರೆ, ಓದುಗರೊಬ್ಬರು ಚಂದ್ರನಿಗೆ ಸ್ವಯಂ ಪ್ರಕಾಶ ಇಲ್ಲದಿರುವುದರಿಂದ ಕಾಲಪಕ್ಷಿಯ ಒಂದು ಕಣ್ಣು ಕುರುಡು ಎಂದು ಗ್ರಹಿಸಬಹುದಲ್ಲವೆ? ಎಂದು ತಪ್ಪೋದುತ್ತಾರೆ.

hsvತಪ್ಪೋದು ಕೆಲವೊಮ್ಮೆ ತಪ್ಪು ಗ್ರಹಿಕೆಯಿಂದ ಆಗಬಹುದು. ಕೆಲವೊಮ್ಮೆ ಜಾಣ ಓದುಗನು ಉದ್ದೇಶಪೂರ್ವಕವಾಗಿಯೇ ಕವಿತೆಯನ್ನು ಇಳಿಕೆಗೈಯಲು ತಪ್ಪೋದಿಗೆ ತೊಡಗಬಹುದು. ಮತ್ತೆ ಕೆಲವು ಬಾರಿ ಅತಿ ತಾರ್ಕಿಕತೆಯು ತಪ್ಪೋದಿನ ಕಾರಣವಾಗಬಹುದು. ಪೂರ್ವಾಗ್ರಹವಿಲ್ಲದೆಯೂ ಇಂಥ ತಪ್ಪೋದುಗಳು ಸಾಕಷ್ಟು ಕಡೆ ಆಗಿದೆ. ಕೆಲವೊಮ್ಮೆ ತಪ್ಪೋದು ಇನ್ನೊಬ್ಬ ಸೃಷ್ಟಿಶೀಲ ಲೇಖಕನಿಗೆ ಪ್ರತಿಭಾಸ್ಫುರಣಕ್ಕೆ ಸಹಾಯಕವೂ ಆಗಬಹುದು. (ಅನಂತಮೂರ್ತಿಯವರ ಮಾತು).

ಅತಿ ಓದಾದರೋ ಓದುಗನ ಕಾವ್ಯಪ್ರೀತಿ ಮತ್ತು ಕಾವ್ಯೋತ್ಸಾಹದ ಫಲವಾಗಿಯೇ ಅನೇಕ ಸಲ ಉಂಟಾಗುತ್ತದೆ. ಕವಿತೆಯ ಓದು ಕೆಲವೊಮ್ಮೆ ಓವರ್ ರೀಡಿಂಗ್ ಆದರೆ ಅದಕ್ಕೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ನಮ್ಮ ಕಾಲದ ಅತ್ತ್ಯುತ್ತಮ ಕಾವ್ಯ ಓದುಗರೊಬ್ಬರೇ ಒಮ್ಮೆ ಹೇಳಿದ್ದು ನೆನಪಾಗುತ್ತಿದೆ (ಕಿರಂ ನಾಗರಾಜರ ಮಾತು). ನನಗನಿಸುವುದು ಅತಿಯೋದು ಕಾವ್ಯಗ್ರಹಿಕೆಯ ಅತ್ಯುತ್ಸಾಹದ ಫಲ. ಯುಕ್ತವಾದಲ್ಲಿ ಮಾತ್ರ ಯುಕ್ತ.

ವಿಶ್ವಮಾತೆಯ ಗರ್ಭಕಮಲಜಾತ ಪರಾಗ
ಪರಮಾಣು ಕೀರ್ತಿ ನಾನು|
ಭೂಮಿ ತಾಯಿಯ ಮೈಯ ಹಿಡಿಮಣ್ಣ ಗುಡಿಗಟ್ಟಿ
ನಿಂತಂಥ ಮೂರ್ತಿ ನಾನು||

ಬೇಂದ್ರೆಯವರ ‘ನಾನು’ ಕವಿತೆಯ ಈ ನುಡಿಯನ್ನು ಓದುವಾಗ ‘ಗುಡಿಗಟ್ಟಿ’ ಎಂಬುದನ್ನು ಕಣ್ಣಿಟ್ಟು ಓದುವ ಓದುಗ ಗುಡಿ ಮತ್ತು ಗಟ್ಟಿ ಎಂಬ ಎರಡು ಪದಗಳನ್ನು ಪ್ರತ್ಯೇಕವಾಗಿ ಗ್ರಹಿಸಿ, ಅಂಥ ಗ್ರಹಿಕೆಯಿಂದ ಕವಿತೆಗೆ ವಿಶೇಷವಾದ ಅರ್ಥಲಾಭವೇನಾದರೂ ಆಗಬಹುದೇ ಎಂದು ಯೋಚಿಸಬಹುದು.  ಗುಡಿ ಕಟ್ಟಿ ಅನ್ನುವುದು ಗುಡಿಗಟ್ಟಿ ಎಂಬ ಸಂಧಿಯಾಗಿದೆ ಎನ್ನುವುದು ಸ್ವೀಕೃತ ವಿಚಾರ. ಗುಡಿಯು ಗಟ್ಟಿಯಾಗಿ ನಿಂತಂಥ ಎಂದು ಅತ್ಯುತ್ಸಾಹಿ ಗ್ರಹಿಸಿಕೊಂಡರೆ? ಅದು ಮೂಲಾರ್ಥಕ್ಕೆ ಹೊಸ ಬೆಳಕು ದೊರಕಿಸುವುದಾದರೆ ಹಾಗೆ ಓದುವುದರಲ್ಲಿ ತಪ್ಪಿಲ್ಲ.

ಕುವೆಂಪು ಅವರ ‘ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣಾ’ ಎಂಬ ಸಾಲನ್ನು ಓದುವಾಗ ಸೂರ್ಯೋ+ದಯ, ಚಂದ್ರೋ+ದಯ ಎಂದು ಒಂದು ಕ್ಷಣ ಬಿಡಿಸಿಕೊಂಡು ಸೂರ್ಯೋದಯದಲ್ಲೇ ದಯ ಎಂಬ ಪದ ಇದೆಯಲ್ಲ! ಎಂದು ಉತ್ಸಾಹಿ ಓದುಗ ಸಂತೋಷಪಡಬಹುದು. ಅದರಿಂದ ಪದ್ಯಕ್ಕೆ ಅಪಚಾರವೇನೂ ಆಗದು.

ಅಡಿಗರ ‘ಕೂಪ ಮಂಡೂಕ’ ಪದ್ಯವನ್ನು ಓದುವಾಗ ನನ್ನ ಗೆಳೆಯರೊಬ್ಬರು ಈ ನುಡಿಯನ್ನು ಹೀಗೆ ಓದುತ್ತಾ ಇದ್ದರು.

ಹೋಗುತ್ತೇನೆ ಮತ್ತೆ ಹಿಂದಕ್ಕೆ; ಬಯಸುತ್ತೇನೆ
ಮಂತ್ರಗಂಬಳಿ ನಿನ್ನ ಸುತ್ತ ಸುತ್ತಿ
ಹೊದೆದಪ್ಪಿ ಸತ್ತು ಜಾರುತ್ತೇನೆ ತಪ್ಪಲ ಕೆಳಗೆ
ಬುಗ್ಗೆ ಬಿದ್ದೋಡುವೆನು ಕಡಲ ಕರೆಗೆ

designಕರೆ ಎಂಬ ಶಬ್ದಕ್ಕೆ ಇಲ್ಲಿ ಎರಡು ಅರ್ಥಸಾಧ್ಯತೆಗಳು ಹೊಳೆದರೆ ಆ ಬಗ್ಗೆ ನಾವು ಯಾಕೆ ಯೋಚಿಸಬಾರದು? ಕರೆ ಎಂದರೆ ಕಡಲ ತೀರ. ಕರೆಗೆ ಎಂದಾಗ ತೀರಕ್ಕೆ ಎಂಬ ಅರ್ಥ ಸ್ಫುರಣವಾಯಿತು. ಕರೆ ಎಂಬ ಮಾತಿಗೆ ಆಹ್ವಾನ ಎಂಬ ಅರ್ಥವೂ ಇದೆಯಲ್ಲ! ಕಡಲ ಆಹ್ವಾನಕ್ಕೆ ನಾನು ಬುಗ್ಗೆಬಿದ್ದೋಡಿದೆ ಎಂಬ ಅರ್ಥವೂ ಈ ಸಂದರ್ಭದಲ್ಲಿ ಸಾಧುವೇ ಆಗುತ್ತದೆ. ಹೀಗೆ ಹಲವು ಅರ್ಥಸ್ಫುರಣ ಸಹಜ ಕವಿಗೆ ದಕ್ಕುವಂಥದ್ದು. ಇಂಥ ಬೇಕಾದಷ್ಟು ಉದಾಹರಣೆಗಳನ್ನುಕೊಡುವುದು ಸಾಧ್ಯ.

ಪುತಿನ ಅವರ ಪ್ರಸಿದ್ಧ ಕವಿತೆಯೊಂದರ ಮೊದಲ ನುಡಿಯನ್ನು ಗಮನಿಸಿ:

ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓಡುತಿಹುದು
ಅದಕೊ ಅದರಿಚ್ಚೆ ಹಾದಿ
ಇದಕೊ ಹರಿದತ್ತ ಬೀದಿ.

ಇದಕೊ ಹರಿದತ್ತ ಬೀದಿ. ಹರಿದತ್ತ ಎಂದರೆ ಥಟ್ಟನೆ ಹೊಳೆಯುವ ಅರ್ಥ- ಹರಿದ ಕಡೆಗೆ ಹಾದಿ ಎಂದು. ಸ್ವಲ್ಪ ಶಬ್ದದಲ್ಲಿ ಕಣ್ಣೂರಿ ಯೋಚಿಸಿದರೆ ಹರಿ ದತ್ತ ಎಂದರೆ ಹರಿಯು ನೀಡಿದ ಬೀದಿ ಎಂಬ ಅರ್ಥವೂ ಸ್ಫುರಣ ಗೊಳ್ಳುವುದು! ಈ ಎರಡೂ ಅರ್ಥಗಳು ಮೂಲ ಪದ್ಯಕ್ಕೆ ಹೊಂದಿಕೊಳ್ಳುತ್ತ ಪದ್ಯದ ಅರ್ಥಗಾಂಭೀರ್ಯವನ್ನು ಹೆಚ್ಚಿಸುವುದು.

ಕೆಲವು ಸಲ ಅತ್ಯುತ್ಸಾಹದಿಂದ ಅರ್ಥಕ್ಕೆ ಅಪ್ರಸನ್ನತೆ ಉಂಟಾಗಲೂಬಹುದು. ಉದಾಹರಣೆಗೆ ಕೆ ಎಸ್ ನರಸಿಂಹ ಸ್ವಾಮಿಯವರ ಪ್ರಸಿದ್ಧ ಕವನವೊಂದನ್ನು ನೋಡಿ:

ಪೂರ್ಣ ಪಠ್ಯ:

ಪ್ರಶ್ನೆಗೆ ಉತ್ತರ

ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು
ಚೆಂದ ನಿನಗಾವುದೆಂದು
ನಮ್ಮೂರು ಹೊನ್ನೂರೊ, ನಿಮ್ಮೂರು ನವಿಲೂರೊ
ಚೆಂದ ನಿನಗಾವುದೆಂದು.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ?
ನಮ್ಮೂರ ಮಂಚದಲಿ ನಿಮ್ಮೂರ ಕನಸಿದನು
ವಿಸ್ತರಿಸಿ ಕೇಳಬೇಕೆ?

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ? ಎನ್ನರಸ
ಸುಮ್ಮನಿರಿ ಎಂದಳಾಕೆ.

ತೌರೂರ ದಾರಿಯಲಿ ತೆಂಗುಗಳು ತಲೆದೂಗಿ
ಬಾಳೆಗಳು ತೋಳ ಬೀಸಿ;
ಮಲ್ಲಿಗೆಯ ಮೊಗ್ಗುಗಳು ಮುಳ್ಳು ಬೇಲಿಯ ವರಿಸಿ
ಬಳುಕುತಿರೆ ಕಂಪ ಸೂಸಿ;

ನಗುನಗುತ ನಮ್ಮೂರ ಹೆಣ್ಣುಗಳು ಬರುತಿರಲು
ನಿಮ್ಮೂರ ಸಂತೆಗಾಗಿ,
ನವಿಲೂರಿಗಿಂತಲೂ ಹೊನ್ನೂರೆ ಸುಖವೆಂದು
ನಿಲ್ಲಿಸಿತು ಪ್ರೇಮ ಕೂಗಿ.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ? ಎನ್ನರಸ
ಸುಮ್ಮನಿರಿ ಎಂದಳಾಕೆ.

ನಿಮ್ಮೂರ ಬಂಡಿಯಲಿ ನಮ್ಮೂರ ಬಿಟ್ಟಾಗ
ಓಡಿದುದು ದಾರಿ ಬೇಗ;
ಪುಟ್ಟ ಕಂದನ ಕೇಕೆ ತೊಟ್ಟಿಲನು ತುಂಬಿತ್ತು
ನಿಮ್ಮೂರ ಸೇರಿದಾಗ.

ಊರ ಬೇಲಿಗೆ ಬಂದು ನೀವು ನಮ್ಮನು ಕಂಡು
ಕುಶಲವನು ಕೇಳಿದಾಗ,
ತುಟಿಯಲೇನೋ ನಿಂದು, ಕಣ್ಣಲೇನೋ ಬಂದು
ಕೆನ್ನೆ ಕೆಂಪಾದುದಾಗ.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ? ಎನ್ನರಸ,
ಸುಮ್ಮನಿರಿ ಎಂದಳಾಕೆ.

ಮೈಸೂರ ಮಲ್ಲಿಗೆಯಲ್ಲಿರುವ ಅತ್ಯಂತ ರಮ್ಯವಾದ ಪದ್ಯಗಳಲ್ಲಿ ಇದೂ ಒಂದು. ಗಂಡನ ಊರು ಹೊನ್ನೂರು; ಹೆಂಡತಿಯ ಊರು ನವಿಲೂರು. ಪದ್ಯವೋ ಒಂದು ರಾತ್ರಿ ಗಂಡ ಕಂಡ ಕನಸು. ಕನಸಿನಲ್ಲೇ ಹೆಂಡತಿ ಉತ್ತರ ಕೊಡುತ್ತಾಳೆ.  ಕನಸು ಕಂಡದ್ದು ಹೆಂಡತಿಯ ತವರಿನವರು ಕೊಟ್ಟ ಮಂಚದಲ್ಲಿ ಗಂಡ ಮಲಗಿದ್ದಾಗ. ಕನಸಲ್ಲಿಯೇ ಹೆಂಡತಿಯ ತವರೂರ ದಾರಿಯ ವರ್ಣನೆಯೂ ಬರುತ್ತದೆ. ದಾರಿಯಲ್ಲಿ ಮುಳ್ಳುಬೇಲಿ ಇದ್ದೂ, ತೆಂಗು, ಬಾಳೆ, ಮಲ್ಲಿಗೆಗಳಿಂದ ಸಮೃದ್ಧವಾದ ದಾರಿಯದು.  ಹೆಂಡತಿಯ ತವರೂರಿನ ಹೆಣ್ಣುಮಕ್ಕಳು ಅವಳ ಗಂಡನ ಹೊನ್ನೂರ ಸಂತೆಗಾಗಿ ಬರುತ್ತಾ ಇದ್ದಾರೆ. ನವಿಲೂರಿಗಿಂತ ಹೊನ್ನೂರೇ ಸುಖವೆಂದು ಪ್ರೇಮ ಕೂಗಿ ಹೇಳುತ್ತದೆ.
ತವರೂರಿನ ಬಂಡಿಯಲ್ಲಿ ತೊಟ್ಟಿಲು ಮತ್ತು ಮಗುವಿನ ಸಮೇತ ಕೂತು, ಗಂಡನ ಹೊನ್ನೂರಿಗೆ ಪಯಣ ಬೆಳೆಸಿದಾಗ ದಾರಿ ಬೇಗ ಸವೆಯಿತಂತೆ!  ಗಂಡನ ಊರಿಗೆ ಬಂದಾಗ ಪುಟ್ಟ ಕಂದನ ಕೇಕೆ ತೊಟ್ಟಿಲನ್ನು ತುಂಬಿತ್ತಂತೆ! ಹೆಂಡತಿಯನ್ನು ಸ್ವಾಗತಿಸಲು ಗಂಡ ಊರಬೇಲಿಗೇ ಬಂದಿದ್ದಾನೆ! ಕುಶಲವನ್ನು ಕೇಳುತ್ತಾನೆ. ಹೆಂಡತಿ ಉತ್ತರಿಸುವುದಿಲ್ಲ. ತುಟಿಯಲೇನೋ ನಿಂದು, ಕಣ್ಣಲೇನೋ ಬಂದು (ಹೆಂಡತಿಯ) ಕೆನ್ನೆ ಕೆಂಪಾದುದಾಗ. ಇದೆಲ್ಲಾ ಗಂಡ ಕನಸಲ್ಲಿ ಕಂಡುದ್ದು. ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ ಎಂದೆನ್ನ ಕೇಳಲೇಕೆ? ಎನ್ನರಸ ಸುಮ್ಮನಿರಿ ಎಂದಳಾಕೆ! ಎಂದರೆ ಗಂಡನ ಆ ಪ್ರಶ್ನೆಯೇ ಅಪ್ರಸ್ತುತ ಎಂಬುದು ಕನಸಿನಲ್ಲೇ ತೀರ್ಮಾನವಾಗಿಹೋಯಿತು!

ವಾತಾವರಣ ಶುದ್ಧಾಂಗ ಗ್ರಾಮೀಣವಾದುದು. ತೆಂಗು, ಬಾಳೆ, ಮಲ್ಲಿಗೆ, ಊರ ಬೇಲಿ, ಎತ್ತಿನ ಬಂಡಿ, ತೊಟ್ಟಿಲ ಮಗು, ಕಂದನ ಕೇಕೆ, ಕೆನ್ನೆಯ ಕೆಂಪು….ಬಹು ಸುಂದರವಾದ ಈ ಕನಸಿನ ದೃಶ್ಯವನ್ನು ಕಟ್ಟಿಕೊಟ್ಟಿವೆ. ತವರಿಗಿಂತ ಗಂಡನ ಊರೇ ಸುಖವೆಂದು ಪ್ರೇಮ ಕೂಗಿ ಹೇಳಿ ಥಟ್ಟನೆ ಮೌನಧರಿಸುತ್ತದೆ. ಹಾಗಾದರೆ ಆ ಮಾತು ಹೇಳಿದ್ದು ಹೆಂಡತಿಯಲ್ಲ? ಅಥವಾ ಹೆಂಡತಿಯನ್ನೇ ಪ್ರೇಮ ಎಂದು ಅಮೂರ್ತನೆಲೆಗೆ ಒಯ್ಯಲಾಗಿದೆಯೋ? ಕೆಲವು ಮಾತನ್ನು ಬಾಯಿಬಿಟ್ಟು ಆಡಬಾರದು. ಅದಕ್ಕೇ ಇಂಥ ಮರ್ಮತಾಗುವ ಪ್ರಶ್ನೆಯನ್ನು ಕೇಳದಿರಿ ಎಂದು  ಆ ಬಾಣಂತಿ ಪತಿಯಲ್ಲಿ ವಿನಂತಿಸಿದ್ದು. ಸುಮ್ಮನಿರಿ ಎನ್ನುವಲ್ಲಿ ಗಂಡ ಹೆಂಡಿರ ನಡುವಿನ ಸಲುಗೆ ಮತ್ತು ಹೆಂಡತಿಯ ನವುರು ಧಾರ್ಷ್ಠ್ಯವೂ ಸೂಚಿತವಾಗಿದೆ.

ಈ ಪದ್ಯವನ್ನು ಓದುವಾಗ ಗೆಳೆಯರೊಬ್ಬರು ನಮ್ಮೂರು ನಿಮ್ಮೂರು ಎನ್ನುವಲ್ಲಿ ಊರು ಎಂಬುದು ಗಂಡನ ತೊಡೆ ಮತ್ತು ಹೆಂಡತಿಯ ತೊಡೆಯನ್ನು ಸೂಚಿಸಿರಬಹುದಲ್ಲವೇ ಎಂದು ದರಹಸಿತ ಲೋಚನರಾಗಿ ಹೇಳಿದರು. (ಊರು ಎಂಬ ಶಬ್ದಕ್ಕೆ ಹಳಗನ್ನಡದಲ್ಲಿ ತೊಡೆ ಎಂಬ ಅರ್ಥವಿದೆ!). ಇದು ಅತಿ ಓದಿನ ದುರ್ದಮ್ಯ ಉಮೇದಿನ ಫಲ ಎಂದಷ್ಟೇ ನಾವು ಹೇಳಬಹುದು!

One Response

  1. S.p.vijaya Lakshmi
    November 3, 2016

Add Comment

Leave a Reply