Quantcast

ಗೆಳೆಯ ಇಂದೂಧರ ಹೊನ್ನಾಪುರ..

k-puttaswamy

ಕೆ ಪುಟ್ಟಸ್ವಾಮಿ 

ಗೆಳೆಯ ಇಂದೂಧರ ಹೊನ್ನಾಪುರ ಅವರಿಗೆ ರಾಜ್ಯೋತ್ಸವ ಪುರಸ್ಕಾರ ತಡವಾಗಿಯಾದರೂ ದೊರೆತಿದೆ.

ಪ್ರತಿಭೆ, ವಿವೇಚನೆ, ದೈರ್ಯ, ಜನಪರ ಕಾಳಜಿಗಳಲ್ಲಿ ಕೊರತೆಯಿಲ್ಲದ, ಜನಹಿತ ಪತ್ರಿಕೋದ್ಯಮಕ್ಕೆ ಬದ್ಧವಾದ, ನಿಷ್ಠುರ ಮನಸ್ಸಿನ, ಇಂಧೂಧರ ಅವರಿಗಿಂತಲೂ ಕಿರಿಯರಾದ ಅನೇಕರಿಗೆ ಎಷ್ಟೋ ವರ್ಷಗಳ ಹಿಂದೆಯೇ ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಸೇವೆಗಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಬೆಟರ್ ಲೇಟ್ ದ್ಯಾನ್ ನೆವರ್ ಎಂದು ಸಮಾಧಾನಪಟ್ಟುಕೊಳ್ಳುತ್ತಾ ಮತ್ತೊಮ್ಮೆ ಅಭಿನಂದಿಸುವೆ.

NEWSನಾನು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾಗ (1979) ದಲಿತ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ಪ್ರತಿಭಟಿಸಿ ಸಂಘಟಿಸಿದ್ದ ಜಾತಿ ವಿನಾಶ ವಿಚಾರ ಸಂಕಿರಣಕ್ಕೆ ನಾವು ಕರೆತಂದ ಭಾಷಣಕಾರರಲ್ಲಿ ಪ್ರಜಾವಾಣಿಯಲ್ಲಿ ವರದಿಗಾರ/ಉಪಸಂಪಾದಕರಾಗಿದ್ದ ಇಂಧೂಧರ ಸಹ ಒಬ್ಬರು .

ಉಳಿದವರೆಂದರೆ, ಡಿ. ಆರ್. ನಾಗರಾಜ್, ಪ್ರಸನ್ನ, ಓ ಶ್ರೀಧರನ್ ಇತರರು.. ಕಾಳೇಗೌಡ ನಾಗವಾರ ಅವರ ಸಲಹೆಯಂತೆ ಇಂಧೂಧರ ಅವರನ್ನುಆಹ್ವಾನಿಸಲು ಹ. ಸೋಮಶೇಖರ್ ಮತ್ತು ನಾನು ಹೋದೆವು.

ಉಪಸಂಪಾದಕರೆಂದರೆ ವಯಸ್ಸಾಗಿರಬಹುದೆಂದು ಭಾವಿಸಿದ್ದ ನಮಗೆ ಎಳೆ ವಯಸ್ಸಿನ ಹುಡುಗನಂತಿರುವ ಇಂಧೂಧರನನ್ನು ನೋಡಿ ಅಚ್ಚರಿಯಾಯಿತು. (ನೆಹರು ನಿವೃತ್ತರಾಗುವುದಿಲ್ಲ. ಇಂಧೂಧರನಿಗೆ ವಯಸ್ಸಾಗುವುದಿಲ್ಲ) ಬಹಳ ಖಚಿತತೆಯಿಂದ ಇಂಡಿಯಾದ ಜಾತಿ ವ್ಯವಸ್ಥೆ ಬಗ್ಗೆ ಮೊನಚಾದ ಮಾತುಗಳಿಂದ, ವ್ಯಗ್ರವಾಗಿ ಮಾಡಿದ ಭಾಷಣಕ್ಕೆ ಸಭಿಕರು ತಲೆದೂಗಿದ್ದರು.

ಅನಂತರ ನಾನು ಪ್ರಜಾವಾಣಿಗೆ ಸೇರಿದ ಮೊದಲ ಮೂರು ದಿನಗಳಲ್ಲಿ ಅವರು ಸಿಗಲಿಲ್ಲ. ರಜೆಯ ಮೇಲಿದ್ದರು. ಆದರೆ ಅವರು ಬೆಂಗಳೂರಿನ ಸ್ಲಂ ಬದುಕಿನ ಬಗ್ಗೆ ಏಕಾಂಗಿಯಾಗಿ ಬರೆದ ಬರಹಗಳು ವಿಶೇಷ ಪುರವಣಿಯಾಗಿ ಪ್ರಜಾವಾಣಿ ಪ್ರಕಟಿಸಿತ್ತು. ಪತ್ರಿಕೋದ್ಯಮದಲ್ಲಿ ಅಂತದೊಂದು ಸಾಹಸ ಆ ಕಾಲಕ್ಕೆ ನವೀನ ಪ್ರಯೋಗ ಮತ್ತು ಜನಪರ ಪತ್ರಿಕೋದ್ಯಮವನ್ನು ಮರು ವ್ಯಾಖ್ಯಾನಿಸಿದ ಸಫಲ ಪ್ರಯತ್ನವಾಗಿತ್ತು.

samvada-indhudharaಪ್ರಕಟವಾದ ದಿನ ಇಂಧೂಧರ ಕಚೇರಿಗೆ ಬಂದರು. ಅಲ್ಲಿಂದ ಅವರೊಡನೆ ಒಡನಾಟ ಆರಂಭವಾಯಿತು. ನಾನು ಹಾಗೂ ಎನ್ ಎಸ್ ಶಂಕರ್ ಅವರಿಗೆ ಹತ್ತಿರವಾದೆವು. ಅದಾಗಲೇ ಶೇಷಗಿರಿಯಪ್ಪನವರ ಕೊಲೆ ಪ್ರಕರಣ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ವರದಿ ಮಾಡಲು ಹೋಗಿದ್ದಾಗ, ಸತ್ಯಾಗ್ರಹಿಗಳ ಮೇಲೆ ಪೊಲೀಸರು ಬಲಪ್ರಯೋಗ ಮಾಡಿದಾಗ, ಪತ್ರಕರ್ತನಿಗಿರಬೇಕಾದ ನಿರ್ಲಿಪ್ತತೆಯನ್ನು ಬದಿಗೊತ್ತಿ ಪೊಲೀಸರನ್ನು ಪ್ರಶ್ನಿಸಿ ಹೊಡೆತ ತಿಂದ ಇಂಧೂಧರ ನಮಗೆಲ್ಲ ಹೀರೋ ಆಗಿದ್ದರು.

ಅದೇ ರೀತಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ರೈತನಾಯಕರನ್ನು ಎದ್ದು ಪ್ರಶ್ನಿಸಿದ ರೀತಿ ನಮಗೆಲ್ಲ ದಂಗು ಬಡಿಸಿತ್ತು. ಪ್ರಜಾವಾಣಿಗೆ ಸೇರಿದ ನನ್ನನ್ನು ಆತ್ಮೀಯತೆಯಿಂದ ಕರೆದು ಮಾತನಾಡಿಸುತ್ತಾ, ಛೇಡಿಸುತ್ತಾ, ಆರೋಗ್ಯಕರ ಹಾಸ್ಯವನ್ನು ಹಂಚಿಕೊಳ್ಳುತ್ತಾ ಬೆಳೆದದ್ದು, ಒಮ್ಮೆ ಅಪೆಕ್ಸ್ ಬ್ಯಾಂಕ್ ನ ವಾರ್ಷಿಕ ಪ್ರಗತಿಯನ್ನು ವಿವರಿಸುವ ಪ್ರೆಸ್ ಕಾನ‍್ಫರೆನ್ಸಿನಲ್ಲಿ ಬ್ಯಾಂಕಿನವರು ಕೊಟ್ಟ ಗಿಫ್ಟನ್ನು ಕಚೇರಿಗೆ ತಂದಾಗ ಪತ್ರಕರ್ತನಾದವನು ಇಂತಹುಗಳನ್ನೆಲ್ಲ ತೆಗೆದುಕೊಳ್ಳಬಾರದು ಎಂದು ಕೋಪದಿಂದ ಬೈದು ಅದನ್ನು ತೆರೆಯಲು ಬಿಡದೆ, ಅಲ್ಲಿಯೇ ಕೆಲಸ ಮಾಡುತ್ತಿದ್ದ (ಅಟೆಂಡರ್- ಸಹಾಯಕ) ಕೃಷ್ಣಾಜಿಗೆ ಕೊಡಿಸಿದ್ದು ಇನ್ನೂ ಹಸಿರಾಗಿರುವ ಕೆಲವು ನೆನಪುಗಳು.

ಮುಂದೆ ನಾನು ಚಿಕ್ಕಮಗಳೂರಿಗೆ ಮತ್ತು ಇಂಧೂಧರ ಹಾಸನಕ್ಕೆ ವರ್ಗವಾದಾಗ ನಮ್ಮಿಬ್ಬರ ಒಡನಾಟ ಹೆಚ್ಚಿತು. ಪ್ರತಿಮಾ, ಪಲ್ಲವಿ ಇನ್ನೂ ಚಿಕ್ಕ ಮಕ್ಕಳು. ಚೈತ್ರ ಹಸುಗೂಸು. ಆಗಾಗ್ಗೆ ಇಂಧೂಧರನ ಮನೆಯಲ್ಲಿ ರೈತ, ದಲಿತ ಚಳವಳಿಕಾರರ ಜೊತೆಯಲ್ಲಿ ಸುಸಂಜೆಗಳು. ರಾಣಿಯವರ ಆತಿಥ್ಯದಲ್ಲಿ ಜಗತ್ತನ್ನೇ ಬದಲಿಸುವ ಬಗ್ಗೆ ಸ್ಕೆಚ್ ಹಾಕುತ್ತಾ ಕುಳಿತ ದಿನಗಳು. ನಂತರ ಅವರ ಜೊತೆಯಲ್ಲಿ ಮುಂಗಾರಿಗೆ ಪಯಣ.

ರಾಜಿಯಾಗದ ಮನೋಭಾವದ ಇಂಧೂಧರ ಮುಂಗಾರನ್ನು ತ್ಯಜಿಸಿದರು. ಸುದ್ದಿ ಸಂಗಾತಿಯಲ್ಲೂ ಜೊತೆಗಿದ್ದೆ. ಈಗ ಸಂವಾದದಲ್ಲು ನಂಟು ಮುಂದುವರೆದಿದೆ. ಆದರೆ ಇಂಧೂಧರನ ಬಗ್ಗೆ ಬರೆಯುವುದು ಬೇಕಾದಷ್ಟಿದೆ. ಅಂವ ಹೇಗೆ ಇತರ ಪತ್ರಿಕೋದ್ಯಮಿಗಿಂತ ಭಿನ್ನವಾಗಿದ್ದ ಎಂಬುವುದಕ್ಕೆ ಹಲವು ನಿದರ್ಶನಗಳಿವೆ. ಯಾವಾಗಲಾದರೂ ದಾಖಲಿಸೋಣ. ಮತ್ತೊಮ್ಮೆ ಅಭಿನಂದಗಳು.

3 Comments

  1. Natarajappa
    November 3, 2016
  2. ಕೆ.ಈ.ಸಿದ್ದಯ್ಯ ತುಮಕೂರು.
    November 3, 2016
  3. Anonymous
    November 3, 2016

Add Comment

Leave a Reply