Quantcast

‘ಹುರಿಗೆಜ್ಜಿ’ ಬಿಡುಗಡೆಗೆ ಕಾಯುತ್ತಿದೆ..

ರಾಜಕುಮಾರ ಮಡಿವಾಳರ ಅವರ ಕವಿತಾ ಸಂಕಲನ ಹುರಿಗೆಜ್ಜಿ ಬಿಡುಗಡೆಗೆ ಕಾಯುತ್ತಿದೆ.

ಈ ಕೃತಿಗೆ ಗೋಪಾಲ ವಾಜಪೇಯಿ ಅವರು ಬರೆದ ಕಾವ್ಯಾತ್ಮಕ ಬೆನ್ನುಡಿ ಇಲ್ಲಿದೆ.

ರಾಜಕುಮಾರ ಮಡಿವಾಳರ ಬರೆದ ಮಾತಿನ ಆಯ್ದ ಭಾಗವೂ..

hurigejji

 

ಈತ ಗಂಗಪ್ಪ ವಾಲಿ

ಅವರ ಕವಿತೆಯ ಸಾಲಿನ ವ್ಯಕ್ತಿರೂಪ ಕಣ್ತೆರೆದರೆ ‘ಕನ್ನಡ…’, ಕಿವಿದೆರೆದರೆ ‘ಕನ್ನಡ…’, ಶ್ವಾಸದಲೂ ‘ಕನ್ನಡ…’, ನಿಃಶ್ವಾಸದಲೂ ‘ಕನ್ನಡ…’, ವಿಶ್ವಾಸದಲ್ಲೂ ‘ಕನ್ನಡ..’ ಕನ್ನಡವೇ ಪ್ರಾಣ; ಕನ್ನಡವೇ ತ್ರಾಣ; ಈ ಕನ್ನಡ ಜಾಣನಿಗೆ ಕನ್ನಡವೇ ಮಾನ. ಕವಿತೆ ಕೇಳಿ ಕರಗುತ್ತಾನೆ; ಕವಿಗಳನ್ನು ಕಂಡರೆ ಕಾಲಿಗೆರಗುತ್ತಾನೆ; ಕತೆ ಓದಿದರಂತೂ ಬೆರಗಾಗುತ್ತಾನೆ. ಕಲ್ಲಿನ ಸೊಲ್ಲು ಕೇಳುತ್ತಾ ಅದರೊಂದಿಗೆ ಮಾತನಾಡುತ್ತಾನೆ; ಕಟ್ಟಿಗೆಯನ್ನು ತಟ್ಟಿ ಚಿಗುರಿಸಿ ನಗಿಸುತ್ತಾನೆ. ‘ಎನಗಿಂತ ಕಿರಿಯರಿಲ್ಲ; ಅಕ್ಷರಋಷಿಗಳಿಗಿಂತ ಹಿರಿಯರಿಲ್ಲ’ ಎಂಬುದೀತನ ನಂಬಿಕೆ.

ಆಚಾರ-ಲೆಕ್ಕಾಚಾರ ಗೊತ್ತಿಲ್ಲದ ಈತನ ಪಾಲಿಗೆ ‘ಅನುಭವಿಗಳೇ ದೇವರು; ಅವರೇ ಬೆಳಕನೀವರು…’ ಹಾರಿಕೆ, ತೋರಿಕೆ, ಹೇರಿಕೆಗಳನರಿಯದ ಮುಗ್ಧ; ಗುಂಪಿನಿಂದ ದೂರ, ಗುಂಪುಗಾರಿಕೆಯಿಂದಲೂ…

ಈತ ಥಳುಕು ಬಳುಕನ್ನರಿಯದ ತುಳುಕದ ಕೊಡ. ಹುಳುಕುತನದವರನ್ನು ನಿಲ್ಲಿಸಿ ನೀರಿಳಿಸದೇ ಬಿಡ. ಖರೀದಿಗೆ ಹೊರಟರೆ ಈತ ಸುತ್ತುವುದು ಬಟ್ಟೆ-ಬರೆ ಅಂಗಡಿಗಳನ್ನಲ್ಲ; ಪುಸ್ತಕ ಮಳಿಗೆಗಳನ್ನ. ಗ್ರಂಥಗಳನ್ನೇ ‘ಜೀವ’ವಾಗಿಸಿ ಕೊಂಡ ಈತನ ಮನದ ತುಂಬ ಮನೆಯ ತುಂಬ ಸಾಹಿತ್ಯ ರಾಶಿ!

ಬೇಂದ್ರೆ ಎಂದರೆ ಮೈಯೆಲ್ಲ ಕಿವಿಯಾಗಿ ಕೂಡುವ ಈತನಿಗೆ ವರಕವಿಯ ಕವಿತೆಗಳೆಲ್ಲ ಕಂಠಸ್ಥ. ಅವನ್ನು ಹಾಡಿಕೊಳ್ಳುತ್ತಾ ಮನದಲ್ಲೇ ಗೆಜ್ಜೆ ನುಡಿಸುತ್ತಾನೆ. ಹೆಜ್ಜೆ ಹಾಕುತ್ತಾನೆ. ಕಿಂದರಿ ಜೋಗಿಯ ಹಾಗೆ ಸಾಗಿ ಹೋಗುತ್ತಾನೆ ಸಾಧನಕೇರಿಗೆ… ನಾಕುತಂತಿಯ ಸಾಧುವಿನೊಂದಿಗೆ.

‘ನನ್ನೊಂದಿಗೆ ನೀವೂ ಗೆಜ್ಜೆ ನುಡಿಸಲು ಬನ್ನಿ’ ಎನ್ನುತ್ತಿದ್ದಾನೆ ಈ ಕನ್ನಡದ ಸಮರ್ಥ ಕುವರ. ಹುರಿಗೆಜ್ಜೆಗಳಿವು… ಊರು ಕೇರಿಯಲೆಲ್ಲ ಇವುಗಳದೇ ಉಲಿತ, ಕೇಳಿದ ನದಿಗೆಲ್ಲ ಅಕ್ಷೊಹಿಣಿ ಕಾಲು. ಗೆಜ್ಜೆಗಳ ಜತೆ ಬಗೆಬಗೆಯ ಕೊಳಲು.ಬನ್ನಿ, ಕಾಲು ತೊಳೆದುಕೊಳ್ಳಿ ಗೆಜ್ಜೆ ಕಟ್ಟಿಕೊಳ್ಳಿ…

– ಗೋಪಾಲ ವಾಜಪೇಯಿ

 

ಮುಗಿಯಬೇಕೆಂದಿರುವೆ..

‘ಅಪ್ಪ’ ನನ್ನೊಳಗಿನ ಶಕ್ತಿ, ಜೊತೆಗಿರುವ ಪ್ರೀತಿ, ಮುಂದಿರುವ ಮುಕ್ತಿ! ಏನನ್ನೂ ಕಲಿಸಲಿಲ್ಲ! ಎಲ್ಲವನ್ನೂ ರೂಢಿ ಮಾಡಿಸಿದ. ಯಾವುದನ್ನೂ ಹೇಳಲಿಲ್ಲ, ಎಲ್ಲ ಮಾಡಿ ತೋರಿಸಿದ. ಹೀಗಿರು ಅನ್ನಲಿಲ್ಲ, ಖುದ್ದು ಹೀಗಿರಬೇಕೆನುವಂತೆ ಬದುಕಿ ತೋರಿಸಿದ. ಹೃದಯಕ್ಕೆದಿಕೊಟ್ಟು ಕೇಳು ಅಂತಾರೆ ನನ್ನ ಬೇಂದ್ರೆ, ಅವನು ಅಪ್ಪ, ನನ್ನ ಹೃದಯದಲ್ಲಿ ತನ್ನೆದೆಯನ್ನೇ ಇಟ್ಟಿದ್ದ,
ಈಗ ಅವನ ಹೃದಯಕ್ಕೆ ಕಿವಿಗೊಟ್ಟ ನನ್ನ ಎದೆಯ ಕವಿತೆ ಇವು.

rajakumar-madivalaraನ್ನು ತುಂಬಾ ಇರಬೇಕಿತ್ತು ಅನ್ನುವಾಗಲೆ, ಏನೆಲ್ಲ ಆಗಿದ್ದವನು, ಊರಿಲ್ಲದವನು, ಜೀತಕಿದ್ದವನು, ನನ್ನ ಪಾಲಿನ ಮಳೆಯಂತವನು, ಏನೊಂದೂ ಹೇಳದೆ ಶುದ್ಧ ಶ್ರಾವಣದ ಒಂದು ದಿನ ಹೊರಟು ಹೋದ. ಅದು ನಾನು ಹತ್ತಿರದಿಂದ ಕಂಡ ಮೊದಲ ಸಾವು, ನಾನು ಅನುಭವಿಸಿದ ಸಾವು, ಇನ್ನೂ ಜೀವಂತವಾಗಿರುವ ಸಾವು, ಎಂದೂ ಸಾಯದ ಸಾವು, ಬದುಕು ಕಲಿಸಿದ ಸಾವು. ಅವನಿಲ್ಲದ ಆ ಶೂನ್ಯವನ್ನ ಅವನಿರುವಂತೆ ಕಾಪಾಡುತ್ತಿರುವುದು ಕವಿತೆಗಳು. ನಾನು ಓದುಗ, ನನಗೆ ಓದು ಇಷ್ಟ ಓದೋದುತ್ತಲೇ ಹೊಳೆದ ಸಾಲುಗಳ ಘಣನವೆ ಈ ‘ಹುರಿಗೆಜ್ಜಿ’ ಇದವನ ಋಣ ಸಂದಾಯದ ಬರವಣಿಗೆ.

ಮೊದಲೇ ಹೇಳಿದಂತೆ ಅಪ್ಪನಿಗೆ ಇಲ್ಲದ ಊರು ನನಗಾದರೂ ಎಲ್ಲಿ? ಇದ್ದ ಊರೆ ನನ್ನದು, ಗೆಳೆಯರು ಮತ್ತು ಈ ನನ್ನ ಹಿರಿಯರು, ಸಂಬಂಧಿ, ಬಂಧು, ಬಾಂಧವ, ಬಳಗ. ಇದು ಬೆಳೆಯುತ್ತಲೇ ಇದೆ, ಅವರಿಂದ ಕಲಿತದ್ದೂ ಇಲ್ಲಿದೆ.

ಸಾವಿರದಾರುನೂರಾ ಒಂದು ಜನರ ಅವಿಭಕ್ತ ಕುಟುಂಬ ನನ್ನದು, ಇವರೆಲ್ಲರ ಕವಿತೆ ಓದಿ ಮತ್ತೊಂದು ಕವಿತೆ ನೋಡುವ ನಡುವಿನಂತರದಲ್ಲಿ ಹುಟ್ಟಿದ ಕವಿತೆಗಳಿವು. ಅವರಿಗೆ ಒಪ್ಪಿಸಿದ, ನನ್ನ ಬದುಕಿಸುತ್ತಿರುವ ನೆನಪುಗಳ ಝಣ್ ಝಣನ ಈ ‘ಹುರಿಗೆಜ್ಜಿ’.

ರಾಜಕುಮಾರ (ಕುಮಾರಾ)

One Response

  1. ಲಕ್ಷ್ಮೀಕಾಂತ ಇಟ್ನಾಳ
    November 3, 2016

Add Comment

Leave a Reply